“ಅತಿಯಾದರೆ ಅಮೃತವೂ ವಿಷ “ ಎಂದು ಹಿರಿಯರು ಪದೇಪದೇ ಹೇಳುತ್ತಿರುತ್ತಾರೆ. ಆದ್ದರಿಂದ ಯಾವುದೇ ಆಹಾರ ಸಂಬಂಧಿ ಉತ್ಪನ್ನಗಳ ಹಿತಮಿತ ಬಳಕೆ ಸೂಕ್ತ. ಇದರಿಂದ ದೇಹ ಜರ್ಜರಿತವಾಗವುದಿಲ್ಲ. ಆರೋಗ್ಯ ಎಂಬುದು ಸುಸ್ಥಿರ ಅಂದರೆ ಸದಾ ಉತ್ತಮ ಸ್ಥಿತಿಯಲ್ಲಿ ಇರುತ್ತದೆ.
ಕಳೆದ ನಾಲ್ಕು ದಶಕಗಳಿಂದ ಭಾರತೀಯರ ಅಡುಗೆ ಮನೆಗಳಲ್ಲಿ ಟೊಮ್ಯಾಟೋ ಮಹತ್ವದ ಸ್ಥಾನ ಪಡೆದಿದೆ. ಸಾಸಿವೆ ಇಲ್ಲದ ಮನೆ ಸಿಗಬಹುದು ಆದರೆ ಟೊಮ್ಯಾಟೋ ಇಲ್ಲದ ಅಡುಗೆ ಕೋಣೆ ಇರಲು ಸಾಧ್ಯವೇ ಇಲ್ಲ ! ಪಲ್ಯ, ಸಾರು, ಸಾಂಬಾರ್, ಹುಳಿ, ಕೆಚಪ್, ಸಲಾಡ್ ಇತ್ಯಾದಿ ಇತ್ಯಾದಿಗಳಿಗೆಲ್ಲ ಟೊಮ್ಯಾಟೋ ಬೇಕೇಬೇಕು. ಹೀಗೆ ಎಲ್ಲದಕ್ಕೂ ಟೊಮ್ಯಾಟೋ ಬಳಸುವುದು ಎಷ್ಟು ಸರಿ ?
ಭಾರತಕ್ಕೆ ಟೊಮ್ಯಾಟೋ ಬಂದು ಎಷ್ಟು ವರ್ಷವಾಗಿರಬಹುದು ಹೇಳಿ ? ನೂರು ವರ್ಷದಿಂದ ಇತ್ತೀಚೆಗಷ್ಟೆ ಆಗಮನ ಕಾಣುತ್ತದೆ. ಭಾರತೀಯರ ಅಡುಗೆ ಕೋಣೆಗಳಿಗೆ ಇದರ ಪ್ರವೇಶವಾಗಿ ಅಬ್ಬಬ್ಬಾ ಎಂದರೆ ನೂರು ವರ್ಷವಾಗಿರಬಹುದು. ಎಲ್ಲ ತಿನಿಸುಗಳಿಗೆ ಹೊಂದಾಣಿಕೆಯಾಗುವ ಗುಣದಿಂದಲೇ ಟೊಮ್ಯಾಟೋ ಬಹುಬೇಗ ಪ್ರಸಿದ್ದಿಯಾಯಿತು.
ಈ ಗುಣಗಳಿಂದಲೇ ಟೊಮ್ಯಾಟೋ ಬೆಲೆ ಆಗಾಗ ಉಯ್ಯಾಲೆ ಆಡುತ್ತಿರುತ್ತದೆ. ಹಲವೊಮ್ಮೆ ಇದರ ಬೆಲೆ ಪಾತಾಳಕ್ಕೆ ಕುಸಿದರೆ ಕೆಲವೊಮ್ಮೆ ಆಕಾಶದೆತ್ತರ ಏರುತ್ತದೆ. ಈ ಎರಡೂ ಒಳ್ಳೆಯದಲ್ಲ. ಬೆಳೆಗಾರರಿಗೂ ಸೂಕ್ತಬೆಲೆ ಬಳಕೆದಾರರಿಗೂ ಕೈಗೆಟುಕುವ ಬೆಲೆಯಲ್ಲಿ ದೊರೆಯಬೇಕು. ಆಗಷ್ಟೆ ಇದಕ್ಕೂ ನೆಲೆ. ಈಗಂತೂ ಒಂದು ಕೆಜಿ ಟೊಮ್ಯಾಟೋ ಬೆಲೆ ಇನ್ನೂರೈವತ್ತು ರೂ. ಆಗಿದೆ. ಇದರಿಂದ ಟೊಮ್ಯಾಟೋ ನಿತ್ಯ ಬಳಕೆದಾರರು ಕಂಗಾಲಾಗಿದ್ದಾರೆ.
ಉತ್ತಮ ಸ್ಥಿತಿಯಲ್ಲಿರುವ ಟೊಮ್ಯಾಟೋ ಹಣ್ಣನ್ನು ಚೆನ್ನಾಗಿ ತೊಳೆದು ಹಸಿಯಾಗಿ ತಿನ್ನುವುದರಿಂದ ಲಾಭಗಳಿವೆ. ಇದು ಚರ್ಮ, ವಿಶೇಷವಾಗಿ ಮುಖದ ಕಾಂತಿ ಹೆಚ್ಚಿಸಲು ಸಹಕಾರಿ. ನೂರು ಗ್ರಾಮ್ ಟೊಮ್ಯಾಟೋ ಹಣ್ಣಿನಲ್ಲಿ 0.88 ಗ್ರಾಮ್ ಪ್ರೊಟೀನ್, 3.89 ಗ್ರಾಮ್ ಶರ್ಕರಪಿಷ್ಠ, 1.2 ಗ್ರಾಮ್ ನಾರಿನಾಂಶ. 10 ಮಿಲಿಗ್ರಾಮ್ ಕ್ಯಾಲ್ಸಿಯಂ, 237 ಮಿಲಿಗ್ರಾಮ್ ಪೊಟಾಶಿಯಂ ಇದೆ.
ಟೊಮ್ಯಾಟೋ ಹಣ್ಣಿನಿಂದ ಮುಖದ ಕಾಂತಿ ಹೆಚ್ಚುತ್ತದೆ ಎಂದು ಇದನ್ನು ಮಿತಿಗಿಂತ ಹೆಚ್ಚು ತಿನ್ನಲು ಹೋಗಬೇಡಿ ಇದರಿಂದ ಹಾನಿಯೇ ಹೊರತು ಲಾಭವಿಲ್ಲ. ಆದ್ದರಿಂದಲೇ ಹಿಂದೆ ಹೇಳಿದಂತೆ ಮಿತ ಸೇವನೆ ಸದಾ ಆರೋಗ್ಯಕ್ಕೆ ಹಿತ. ಅತಿಯಾದ ಟೊಮ್ಯಾಟೋ ಬಳಕೆ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ.
ಟೊಮ್ಯಾಟೋದಲ್ಲಿ ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಇವುಗಳನ್ನು ಸುಲಭವಾಗಿ ದೇಹದಿಂದ ಹೊರತೆಗೆಯಲಾಗುವುದಿಲ್ಲ. ಇವುಗಳು ದೇಹದಲ್ಲಿ ಸಂಗ್ರಹಗೊಳ್ಳುವುದರಿAದ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಉಂಟಾಗುತ್ತದೆ. ಟೊಮ್ಯಾಟೋ ಹಣ್ಣಿನಲ್ಲಿ ಲೈಕೋಪೆನ್ ಸಹ ಹೆಚ್ಚು. ಆದ್ದರಿಂದ ಹೆಚ್ಚಾಗಿ ತಿಂದರೆ ತೊಂದರೆ ಕಟ್ಟಿಟ್ಟ ಬುತ್ತಿ” ಎಂದು ಕೃಷಿ ವಿದ್ಯಾಲಯ, ಬೆಂಗಳೂರು ಇಲ್ಲಿಮ ಕೃಷಿ ಹಾಗೂ ಆಹಾರ ವಿಜ್ಞಾನಿ ಡಾ. ಕಲ್ಪನಾ ಬಿ. ಅಭಿಪ್ರಾಯಪಡುತ್ತಾರೆ.
ಟೊಮ್ಯಾಟೋದಲ್ಲಿ ಲೈಕೋಪೆನ್ ಅಂಶ ಇದೆ. ದೇಹಕ್ಕೆ ಇದು ಹೆಚ್ಚಾಗಿ ಸೇರಿದರೆ ರಕ್ತದಲ್ಲಿನ ಬಣ್ಣವನ್ನು ಬದಲಾಯಿಸುತ್ತದೆ. ಅಲ್ಲದೇ, ಲೈಕೋಪೆನೊಡರ್ಮಿಯಾದಂತಹ ಸಮಸ್ಯೆಗಳು ಉದ್ಭವಿಸುತ್ತದೆ. ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಟೊಮ್ಯಾಟೋದಲ್ಲಿ ಕಂಡುಬಂದಿದೆ. ಇದು ದೇಹವನ್ನು ಪ್ರವೇಶಿಸಿದಾಗ, ಅತಿಸಾರ ಅಂದರೆ ಬೇಧಿಗೂ ಕಾರಣವಾಗುತ್ತದೆ. ಆದ್ದರಿಂದ ಅತಿಯಾದ ಟೊಮ್ಯಾಟೋ ಸೇವನೆ ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಅವರು ಎಚ್ಚರಿಸುತ್ತಾರೆ.