ವಿಮ್ ವೆಂಡರ್ಸ್ ನಿರ್ದೇಶನದ ಪರ್ಫೆಕ್ಟ್ ಡೇಸ್ ಬಹು ಸರಳವಾಗಿ ನಿರೂಪಿತಗೊಂಡಿದ್ದರೂ ಅಮೂಲ್ಯವಾದ ಜೀವನ ದರ್ಶನವನ್ನು ಹೊಂದಿದೆ. ಇಲ್ಲಿ ಸಂಭಾಷಣೆಗಳು ಹೇಳುವುದಕ್ಕಿಂತ ಕ್ಯಾಮೆರಾ ಕಣ್ಣು ಎಲ್ಲವನ್ನೂ ಹೇಳುತ್ತಾ ಹೋಗುತ್ತದೆ. ಅನೇಕ ಸಂದರ್ಭಗಳಲ್ಲಿ ಭಾಷೆಯೂ ಎಷ್ಟೊಂದು ಅಪ್ರಸ್ತುತ ಎನ್ನುವುದನ್ನು ಕೂಡ ನಿರೂಪಿಸುತ್ತದೆ ! ಜೊತೆಗೆ ಚಿಕ್ಕಚಿಕ್ಕ ಸಂಗತಿಗಳಲ್ಲಿಯೇ ಜೀವನ ದರ್ಶನ ಮಾಡಿಸುತ್ತಾ ಹೋಗುತ್ತದೆ.
ಜಪಾನಿನ ಟೋಕಿಯೋ ಮಹಾನಗರದ ಶಿಬುಯಾ ವಿಭಾಗದ ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಚಗೊಳಿಸುವ ವ್ಯಕ್ತಿಯ ದಿನಚರಿ, ಆತ ಕಂಡುಕೊಂಡ ಜೀವನದರ್ಶನವನ್ನು ಪ್ರೇಕ್ಷಕರಿಗೂ ದಾಟಿಸುತ್ತದೆ. ಇಲ್ಲಿ ಯಾರೂ ಹಿರೋ, ಹಿರೋಯಿನ್ ಗಳಿಲ್ಲ. ಚಿತ್ರಕಥೆಯೇ ಇಲ್ಲಿ ನಾಯಕ ಮತ್ತು ನಾಯಕಿ. ಕ್ಯಾಮೆರಾ ಸೂತ್ರಧಾರಿ !
ಪುಟ್ಟ ಕೋಣೆ, ಸ್ವಚ್ಚವಾಗಿದೆ. ಕಿಟಕಿ ಮಗ್ಗುಲಲ್ಲಿ ಸಸ್ಯಗಳ ಕುಂಡಗಳಿವೆ. ಎದ್ದ ಕೂಡಲೇ ಅವುಗಳಿಗೆ ನೀರು ಚಿಮುಕಿಸುವುದರಿಂದ ಮಧ್ಯ ವಯಸ್ಕ ಹಿರಾಯಮ ದಿನಚರಿ ಆರಂಭವಾಗುತ್ತದೆ. ಆತ ಹಲ್ಲುಜ್ಜಿ, ಮುಖಕ್ಷೌರ ಮಾಡಿಕೊಳ್ಳುತ್ತಾನೆ. ಟೋಕಿಯೊ ಟಾಯ್ಲೆಟ್ಸ್ ಎಂಬ ದೊಡ್ಡ ಗಾತ್ರದ ಹಿಂಬರಹ ಇರುವ ಜಂಪ್ ಸೂಟ್ ಧರಿಸಿ ಕೆಳಗಿಳಿದು ಬಂದು ಪುಟ್ಟ ಬಟ್ಟಲಿನಲ್ಲಿ ಇಟ್ಟ ಕಾಯಿನ್ ಗಳನ್ನು ತೆಗೆದುಕೊಳ್ಳುತ್ತಾನೆ. ಹೊರಗಿರುವ ಮೆಷಿನ್ ಬಾಕ್ಸಿಗೆ ಕಾಯಿನ್ ಹಾಕಿ ತನ್ನಿಷ್ಟದ ಜ್ಯೂಸ್ ಕ್ಯಾನ್ ಖರೀದಿಸುತ್ತಾನೆ. ಶೌಚಾಲಯ ಸ್ವಚ್ಚಗೊಳಿಸುವ ಸಾಧನಗಳಿರುವ ತನ್ನ ಕಾರಿನಲ್ಲಿ ಕುಳಿತು ಜ್ಯೂಸ್ ಗುಟುಕರಿಸಿ ರೀಲ್ ಕ್ಯಾಸೆಟ್ ಪ್ಲೇಯರ್ ನಲ್ಲಿ ತನ್ನಿಷ್ಟದ ಹಾಡು ಹಾಕುತ್ತಾನೆ.
ಶೌಚಾಲಯದತ್ತ ಬಂದ ಕೂಡಲೇ “ಸ್ವಚ್ಚತೆ ಕೆಲಸ ಸಾಗುತ್ತಿದೆ” ಎಂಬ ಫಲಕ ಅಡ್ಡ ಇಟ್ಟು ತನ್ನ ಕೆಲಸ ಶುರು ಮಾಡುತ್ತಾನೆ. ಅದು ಆತನ ಪಾಲಿಗೆ ಧ್ಯಾನ ! ಆತನ ಶ್ರದ್ಧೆಯನ್ನು ನೋಡಿಯೇ ನಿಬ್ಬೆರಗಾಗುತ್ತದೆ. ಈ ಕೆಲಸ ಸಾಗಿರುವ ನಡುವೆಯೇ ಯಾರೋ ಅವಸರಿಸಿಕೊಂಡು ಶೌಚಾಲಯದೊಳಗೆ ನುಗ್ಗುತ್ತಾರೆ. ಹಿರಾಯಮ ಬೇಸರಗೊಳ್ಳುವುದಿಲ್ಲ, ರೇಗುವುದಿಲ್ಲ. ಮುಗುಳ್ನಗುತ್ತಾ ನಿಲ್ಲುತ್ತಾನೆ. ಅವರು ಹೊರ ಬಂದ ಕೂಡಲೇ ಮತ್ತೆ ತನ್ನ ಕೆಲಸ ಮುಂದುವರಿಸುತ್ತಾನೆ. ಒಂದೆಡೆ ಸ್ವಚ್ಚತೆ ಮಾಡಿದ ಮೇಲೆ ಮತ್ತೊಂದೆಡೆಗೆ !
ಕೆಲಸದ ನಡುವಿನ ಬಿಡುವಿನಲ್ಲಿ ಮರಗಿಡಗಳ ಎಡೆಯಲ್ಲಿರುವ ಪುಟ್ಟ ಬೆಂಚಿನ ಮೇಲೆ ಕುಳಿತು ಬೆಳಗ್ಗಿನ ಉಪಹಾರ ಸೇವಿಸುತ್ತಾನೆ. ಅಪರಿಚಿತ ಯುವತಿ ಮತ್ತೊಂದು ಬೆಂಚಿನ ಮೇಲೆ ಕುಳಿತು ಉಪಹಾರ ಸೇವಿಸುತ್ತಿರುತ್ತಾಳೆ. ಮುಖದಲ್ಲಿ ದುಃಖ ಮಡುಗಟ್ಟಿದೆ. ಆಕೆಯೋ ಮತ್ಯಾರೋ ಶೌಚಾಲಯದಲ್ಲಿ ಇಟ್ಟ ಟಿಕ್-ಟ್ಯಾಕ್-ಟೋ ಆಟದ ಚಿತ್ರವನ್ನು ಈತ ಮುಂದುವರಿಸುತ್ತಾನೆ. ರಾತ್ರಿ ಪುಟ್ಟ ಕೋಣೆಗೆ ಬಂದ ನಂತರ ಪುಸ್ತಕ ಓದುತ್ತಾನೆ. ಮಲಗುತ್ತಾನೆ.
ಮರುದಿನ ಮತ್ತದೇ ದಿನಚರಿ. ಇವೆಲ್ಲದರ ನಡುವೆ ಈತನ ಸಹೋದ್ಯೋಗಿ ತಕಾಶಿಯ ಪ್ರೇಮಗಾಥೆ ತೆರೆದುಕೊಳ್ಳುತ್ತದೆ. ಅನಿರೀಕ್ಷಿತವಾಗಿ ಹಿರಾಯಮ ಕಿರಿಯ ಸಹೋದರಿಯ ಪುಟ್ಟ ಮಗಳು ನಿಕೊ ಪ್ರವೇಶವಾಗುತ್ತದೆ. ಪ್ರಬುದ್ಧ ಚಿಂತನೆಗಳ ಬಾಲಕಿ. ಇವರಿಬ್ಬರ ಸಂಭಾಷಣೆಗಳು ಮಹತ್ತರ ವಿಷಯಗಳನ್ನು ದಾಟಿಸುತ್ತವೆ. ಮಗಳನ್ನು ಕರೆದುಕೊಂಡು ಹೋಗಲು ಶ್ರೀಮಂತ ಸಹೋದರಿ ಬಂದ ನಂತರವೇ ಹಿರಾಯಮ ಜೀವನದ ಶ್ರೀಮಂತ ಹಿನ್ನೆಲೆ ತೆರೆದುಕೊಳ್ಳುತ್ತದೆ.
ಕಥೆ ಅಲ್ಲಿಗೆ ಮುಗಿಯಿತು ಎಂದುಕೊಳ್ಳುವಾಗಲೇ ಹಿರಾಯಮನ ಪ್ರೇಮದ ಕಥೆ ತೆರೆದುಕೊಳ್ಳುತ್ತದೆ. ಈತನ ಪ್ರೇಮಿಯ ಮಾಜಿ ಗಂಡನ ಜೊತೆಗಿನ ಈತನ ಮಾತು, ವರ್ತನೆ ಜೊತೆಗೆ ನೆರಳಿನಾಟದ ಪ್ರಜ್ಞೆ ನಿಬ್ಬೆರಗುಗೊಳಿಸುತ್ತದೆ.
ನಮ್ಮ ಬದುಕಿನೊಂದಿಗೆ ಯಾವುದೋ ಅದೃಶ್ಯ ಶಕ್ತಿ ಆಟವಾಡುತ್ತಿರಬಹುದು ಎಂಬುದರ ಸಂಕೇತವಾಗಿಯೂ ನಿರ್ದೇಶಕ ವಿಮ್ ವೆಂಡರ್ಸ್ ಟಿಕ್-ಟ್ಯಾಕ್-ಟೋ, ನೆರಳಿನಾಟಗಳನ್ನು ಚಿತ್ರದಲ್ಲಿ ತಂದಿರಬಹುದು. ಓರ್ವ ವ್ಯಕ್ತಿಯ ನೋವು – ನಲಿವುಗಳನ್ನು ಹೇಳುತ್ತಲೇ ಅದೃಶ್ಯ ಶಕ್ತಿಯ ಬಗ್ಗೆಯೂ ಹೇಳುವುದು ಆತನ ಉದ್ದೇಶವಾಗಿರಬಹುದೇ ? ಲೌ ರೀಡ್, ಪ್ಯಾಟಿ ಸ್ಮಿತ್ ಮತ್ತು ನೀನಾ ಸಿಮೋನ್ ಅಂಥ ಮಹತ್ವದ ಗಾಯಕರ ಕ್ಯಾಸೆಟುಗಳನ್ನು ಹಿರಾಯಮ ಪ್ಲೇಯರಿನಲ್ಲಿ ಹಾಕಿ ತಾನೂ ಕೇಳುತ್ತಾ ಪ್ರೇಕ್ಷಕರಿಗೂ ಕೇಳಿಸುವುದು ಸಿನೆಮಾಕ್ಕೆ ಬಹು ಭಾವನಾತ್ಮಕ ನೋಟ ನೀಡುತ್ತದೆ. ಸಿನೆಮಾ ಶೀರ್ಷಿಕೆಯೂ ಲೌ ರೀಡ್ ಅವರ “ಪರ್ಫೆಕ್ಟ್ ಡೇ” ಹಾಡಿನಿಂದ ಪ್ರೇರಿತವಾಗಿರುವುದು ಗಮನಾರ್ಹ ! ಚಿತ್ರದ ಅಂತಿಮ ದೃಶ್ಯಗಳಲ್ಲಿ ಕೇಳಿಸುವ “ಫೀಲಿಂಗ್ ಗುಡ್” ಚಿತ್ರದ ತಿರುಳನ್ನು ಹೇಳುತ್ತದೆ !
ಛಾಯಾಗ್ರಾಹಕ ಫ್ರಾಂಜ್ ಲುಸ್ಟಿಗ್ ಕಾರ್ಯ ಅದ್ಬುತ. ಇವರ ಕ್ಯಾಮೆರಾ ಕೆಲಸ ಪರ್ಫೆಕ್ಟ್ ಡೇಸ್ ಸಿನೆಮಾವನ್ನು ಸಿನೆಕಾವ್ಯದ ಮಟ್ಟಕ್ಕೇರಿಸಿದೆ. ಟೋನಿ ಫ್ರೊಶ್‌ಹ್ಯಾಮರ್ ಅವರು ಮಾಡಿರುವ ಸಂಕಲನ ಕಾರ್ಯ ಅನನ್ಯ. ನಿರ್ದೇಶಕ ವಿಮ್ ವೆಂಡರ್ಸ್, ಚಿತ್ರಕಥೆಗಾರ ತಕುಮಾ ತಕಸಾಕಿ ಅವರು ಸೇರಿ ರಚಿಸಿರುವ ಚಿತ್ರಕಥೆ ಕುಸುರಿ ಕಲೆಗಾರಿಕೆಯಿಂದ ಕೂಡಿದೆ.
ಹಿರಾಯಮ ಪಾತ್ರದಲ್ಲಿ ಕೋಜಿ ಯಾಕುಶೊ, ಆತನ ಸೋದರ ಸೊಸೆ ನಿಕೋ ಪಾತ್ರಧಾರಿ ಅರಿಸಾ ನಕೊನೊ ನಟಿಸಿದ್ದಾರೆ ಎಂಬುದಕ್ಕಿಂತ ಜೀವಿಸಿದ್ದಾರೆ ಎನ್ನಬಹುದು. ತಕಾಶಿ ಪಾತ್ರಧಾರಿ ಟೊಕಿಯೊ ಎಮೊಟೊ ಅಭಿನಯ ಶ್ಲಾಘನೀಯ !
ಪರ್ಫೆಕ್ಟ್ ಡೇಸ್ ಸಿನೆಮಾವನ್ನು ಮಾಡುವುದು ವಿಮ್ ವೆಂಡರ್ಸ್ ಮೂಲ ಯೋಜನೆಯಾಗಿರಲಿಲ್ಲ. ಟೋಕಿಯೋದ ಟಾಯ್ಲೆಟ್ ಗಳ ಸ್ವಚ್ಚತೆ ನಿರ್ವಹಣಾ ಕ್ರಮದ ಬಗ್ಗೆ ಡಾಕ್ಯುಮೆಂಟರಿ ಮಾಡುವುದು ಅವರ ಉದ್ದೇಶವಾಗಿತ್ತು. ನಂತರ ಸಿನೆಮಾ ಕೂಡ ಆಗಿ ತನ್ನ ಮೂಲ ಉದ್ದೇಶವನ್ನೂ ಈಡೇರಿಸಿಕೊಂಡಿರುವುದು ಗಮನಾರ್ಹ. ಮತ್ತೊಂದು ಸಂಗತಿ ಏನೆಂದರೆ ನಿರ್ದೇಶಕ, ಶ್ರೀಮಂತಿಕೆಯಲ್ಲಿ ಸುಖವಿಲ್ಲ ಎಂದು ಹೇಳುತ್ತಾ, ಬಡತನವನ್ನು ವೈಭವೀಕರಿಸಿ;ಬಡವರ ಅತೃಪ್ತಿಗಳನ್ನು ಶಮನ ಮಾಡಲು ಪ್ರಯತ್ನಿಸಿದ್ದಾರೆಯೇ ಎನಿಸುತ್ತದೆ. ಇವೆಲ್ಲ ಸಂದೇಹಗಳ ನಡುವೆ “ಪರ್ಫೆಕ್ಟ್ ಡೇಸ್” ಸಿನಿ ಕಾವ್ಯಾನುಸಂಧಾನ ಎನ್ನುವುದು ಮಾತ್ರ ಸುಳ್ಳಲ್ಲ !
ಮೂಲತಃ ಜಪಾನೀಸ್ ಭಾಷೆಯ “ಪರ್ಫೆಕ್ಟ್ ಡೇಸ್” ಇಂಗ್ಲಿಷ್ ಸಬ್ ಟೈಟಲ್ ಹೊಂದಿದೆ. ಸಿನೆಮಾ ಎಷ್ಟರ ಮಟ್ಟಿಗೆ ಗ್ರಹಿತವಾಗುತ್ತದೆ ಎಂದರೆ ಭಾಷೆಯ ಹಂಗೇ ಇಲ್ಲದಂತೆ ನೋಡಿಸಿಕೊಂಡು, ಅರ್ಥೈಸಿಕೊಂಡು ಹೋಗುತ್ತದೆ. ಒಟಿಟಿ ಫ್ಲಾಟ್ ಫಾರಂ ಮುಬಿಯಲ್ಲಿದೆ. ಆಸಕ್ತರು ನೋಡಬಹುದು.
Good review. I will watch this movie on MUBI