ಲೇಖಕ: ಕುಮಾರ ರೈತ

ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಅವುಗಳದ್ದೇ ಆದ ಹಕ್ಕುಬಾಧ್ಯತೆಗಳಿವೆ. ಕೇಂದ್ರದ ಪಟ್ಟಿಯಲ್ಲಿರುವ ಕರ್ತವ್ಯಗಳು, ರಾಜ್ಯದ ಪಟ್ಟಿಯಲ್ಲಿರುವ ಕರ್ತವ್ಯಗಳ ಬಗ್ಗೆ ಉಲ್ಲೇಖಗಳಿವೆ.  ಒಕ್ಕೂಟದ ಪರಿಧಿಯೊಳಗೆ ರಾಜ್ಯಕ್ಕೆ ಸ್ವಾಯತ್ತತೆ ಇದೆ. ಇಲ್ಲಿ ಕೇಂದ್ರ ಸರ್ಕಾರ ಪರಮೋಚ್ಚ ಅಲ್ಲ. ಆದರೂ ಕೇಂದ್ರ ಸರ್ಕಾರದಲ್ಲಿ ಒಂದು ರಾಜಕೀಯ ಪಕ್ಷ, ರಾಜ್ಯದಲ್ಲಿ ಮತ್ತೊಂದು ರಾಜಕೀಯ ಪಕ್ಷ ಅಧಿಕಾರ ಹಿಡಿದಿರುವಾಗ ಎರಡೂ ಸರ್ಕಾರಗಳ ನಡುವೆ ಸಂಘರ್ಷ ಏರ್ಪಡುತ್ತಲೇ ಇದೆ.

ಇಂಥ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ – ರಾಜ್ಯ ಸರ್ಕಾರಗಳ ಚುಕ್ಕಾಣಿ ಹಿಡಿದಿರುವವರ ವಾಕ್ಸಮರ, ಪತ್ರ ಸಮರ, ಅಧಿಕಾರದ ಸ್ಪಷ್ಟತೆಗಾಗಿ ನ್ಯಾಯಾಲಯದ ಮೊರೆ ಹೋಗುವಿಕೆ ನಡೆಯುತ್ತಲೇ ಇದೆ. ಭವಿಷ್ಯದಲ್ಲಿ ಇಂಥ ಸಂಘರ್ಷಗಳು ಮರುಕಳಿದಂತೆ ಕೇಂದ್ರ – ರಾಜ್ಯದ ಸಂಬಂಧಗಳನ್ನು ನಿರ್ವಹಣೆ ಮಾಡುವ ದಿಶೆಯಲ್ಲಿ ವರದಿ ಪಡೆಯುವುದಕ್ಕಾಗಿ ವಿಶೇಷ ಸಮಿತಿ ರಚನೆ ಸಂಬಂಧ ಏಪ್ರಿಲ್ 15, 2025ರಂದು ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿಕೆ ನೀಡಿದ್ದಾರೆ.

ವಿಭಿನ್ನ ಪಕ್ಷಗಳು ಕೇಂದ್ರ – ರಾಜ್ಯದಲ್ಲಿ ಸರ್ಕಾರ ರಚಿಸಿದಾಗ ಸಂಘರ್ಷಗಳು ತಾರಕಕ್ಕೇರಿರುವುದು ಹೊಸದೇನಲ್ಲ. ಕೇಂದ್ರ ಸರ್ಕಾರ,  ತನಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ರಾಜ್ಯದ ಚುನಾಯಿತ ಸರ್ಕಾರವನ್ನು ವಜಾ ಮಾಡಿರುವ ಉದಾಹರಣೆಗಳು ಇವೆ. ಕೆಲವೊಮ್ಮೆ ರಾಜ್ಯಪಾಲರ ಮುಖಾಂತರ ರಾಜ್ಯ ಸರ್ಕಾರದ ಅಧಿಕಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ ಎಂಬ ಆರೋಪಗಳು ಇವೆ.

ತಮಿಳುನಾಡು ರಾಜ್ಯದಲ್ಲಿ ಹಾಲಿ ಇರುವ ರಾಜ್ಯಪಾಲ ಆರ್.ಎನ್. ರವಿ. ಮತ್ತು ರಾಜ್ಯ ಸರ್ಕಾರದ ನಡುವೆ ಪದೇಪದೇ ಸಂಘರ್ಷಗಳಾಗುತ್ತಿವೆ. ಇದನ್ನು ಪ್ರಶ್ನಿಸಿ ಅಲ್ಲಿನ ಡಿಎಂಕೆ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. ಅಲ್ಲಿ ರಾಜ್ಯಪಾಲರ ನಡೆ ಖಂಡಿಸಲ್ಪಟ್ಟಿದೆ. ರಾಜ್ಯ ಸರ್ಕಾರ ಕಳಿಸುವ ಮಸೂದೆಗಳನ್ನು ಪರಿಶೀಲಿಸಲು ಕಾಲಮಿತಿ ನಿಗದಿಯಾಗಿದೆ. ಇದೊಂದು ಬಹು ಮಹತ್ವದ ತೀರ್ಪು !

ಇಂಥ ಮಹತ್ವದ ತೀರ್ಪು ಹೊರಬಂದ ಬಳಿಕವೇ ತಮಿಳುನಾಡು ಸರ್ಕಾರವು ರಾಜ್ಯದ ಸ್ವಾಯತ್ತತೆ ಸ್ಪಷ್ಟತೆಗಾಗಿ ಸುಪ್ರೀಂ ಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಮಾಜಿ ಹಿರಿಯ ಐಎಎಸ್ ಅಧಿಕಾರಿಗಳಾದ ಅಶೋಕ್ ವರ್ಧನ್ ಶೆಟ್ಟಿ ಮತ್ತು ಮು ನಾಗರಾಜನ್ ಹಾಗೂ ಇತರ ಕಾನೂನು ಮತ್ತು ಆಡಳಿತ ತಜ್ಞರು ಸದಸ್ಯರಾಗಿರುತ್ತಾರೆ.

ಈ ಸಮಿತಿ ಜನವರಿ 2026ರ ವೇಳೆಗೆ ಮಧ್ಯಂತರ ವರದಿ, 2028ರ ವೇಳೆಗೆ ಸಂಪೂರ್ಣ ವರದಿ ನೀಡುತ್ತದೆ. “”ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಬಂಧವನ್ನು ಬಲಪಡಿಸಲು, ಈ ಸಮಿತಿಯು ಅಧ್ಯಯನ ನಡೆಸಿ ಶಿಫಾರಸುಗಳನ್ನು ನೀಡುತ್ತದೆ” ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ. ಮುಖ್ಯವಾಗಿ ಈ ಸಮಿತಿ ರಾಜ್ಯ ಪಟ್ಟಿಯಿಂದ ಸಮಕಾಲೀನ ಪಟ್ಟಿಗೆ ಸ್ಥಳಾಂತರಗೊಂಡ ವಿಷಯಗಳನ್ನು ವರ್ಗಾಯಿಸಲು  ಕಾನೂನು ಪ್ರಕಾರ ಅಧ್ಯಯನ ಮಾಡುತ್ತದೆ.

ತಮಿಳುನಾಡು ವಿಧಾನಸಭೆ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸ್ಟಾಲಿನ್ ಅವರು ಭಾರತದ ವೈದ್ಯಕೀಯ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಾವು ಹಿಂದೆ ನೀಡಿದ್ದ ಹೇಳಿಕೆಗಳನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.  “ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರವು ಹಿಂದಿ ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ.  ನೀಟ್ ಪರೀಕ್ಷೆಯಿಂದಾಗಿ ನಾವು ಅನೇಕ ವಿದ್ಯಾರ್ಥಿಗಳನ್ನು ಕಳೆದುಕೊಂಡಿದ್ದೇವೆ. ನಾವು ನೀಟ್ ಪರೀಕ್ಷೆಯನ್ನು ನಿರಂತರವಾಗಿ ವಿರೋಧಿಸುತ್ತಿದ್ದೇವೆ. ತ್ರಿವಳಿ ಭಾಷಾ ನೀತಿಯ ಹೆಸರಿನಲ್ಲಿ, ಕೇಂದ್ರ ಸರ್ಕಾರವು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ. ನಾವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್ಇಪಿ) ನಿರಾಕರಿಸಿದ್ದರಿಂದ, ರಾಜ್ಯಕ್ಕೆ 2500 ಕೋಟಿ ರೂಪಾಯಿಗಳನ್ನು  ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ” ಎಂದು ಹೇಳಿದ್ದಾರೆ.

ತಮಿಳುನಾಡು ರಾಜ್ಯ ಸರ್ಕಾರದ ಕ್ರಮ, ರಾಷ್ಟ್ರೀಯ ಮಟ್ಟದಲ್ಲಿ  ಗಮನ ಸೆಳೆದಿದೆ. ಈಗಾಗಲೇ ಇದರ ಬಗ್ಗೆ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ಸಮಿತಿ ರಚನೆ ಕ್ರಮವು ಒಕ್ಕೂಟ ವ್ಯವಸ್ಥೆ ಬಲವರ್ಧನೆ, ಕೇಂದ್ರ – ರಾಜ್ಯ ಸರ್ಕಾರಗಳ ಅಧಿಕಾರಗಳು, ಮುಖ್ಯವಾಗಿ ರಾಜ್ಯದ ಸ್ವಾಯತ್ತತೆ ಚೌಕಟ್ಟುಗಳ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ  ಚರ್ಚೆ ಆರಂಭವಾಗುವಂತೆ ಮಾಡಿದೆ.

ಕರ್ನಾಟಕದಲ್ಲಿಯೂ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿದ ನಂತರ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಮಸೂದೆ ಅಂಗೀಕಾರ ಸೇರಿದಂತೆ ಕೆಲವು ವಿಷಯಗಳಿಗೆ ಸಂಘರ್ಷಗಳು ಏರ್ಪಡುತ್ತಿವೆ. ಇದಲ್ಲದೇ ರಾಜ್ಯದ ತೆರಿಗೆ ಪಾಲಿನ  ಹಣ ಬಿಡುಗಡೆ ಸಂಬಂಧ ಪದೇಪದೇ ರಾಜ್ಯ ಸರ್ಕಾರ ಮತ್ತು  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ಪದೇಪದೇ ಸಂಘರ್ಷ ನಡೆಯುತ್ತಲೇ ಇದೆ. ತಮಿಳುನಾಡು ಸರ್ಕಾರ ರಚಿಸಿರುವ ಸಮಿತಿ ತನ್ನ ಪೂರ್ಣ ಅಧ್ಯಯನ  ವರದಿ ನೀಡಿದ ನಂತರ ಇಂಥ ಸಂಘರ್ಷಗಳಿಗೆ ತೆರೆ ಬೀಳಬಹುದೇ ?

Similar Posts

Leave a Reply

Your email address will not be published. Required fields are marked *