ಬಂಡೀಪುರ ಹುಲಿ ಸಂರಕ್ಷಿತ ವಿಸ್ತಾರ ಅರಣ್ಯದ ಏರುತಗ್ಗು, ಹಾವಿನಂತೆ ನುಲಿದ ರಸ್ತೆಗಳಲ್ಲಿ ಜೀಪು ನಿಧಾನವಾಗಿ ಸಾಗುತ್ತಿತ್ತು. ಬೆಳಗ್ಗೆ 8 ರಚಸುಮಾರಿಗೆ ಹೊರಟ್ಟಿದ್ದು. ಆಗಲೇ ಮಧ್ಯಾಹ್ನ 3 ಗಂಟೆ ಕಳೆದಿತ್ತು. ಜಾರುರಸ್ತೆಗಳಲ್ಲಿ ಬ್ರೇಕು ಕಿರಕಿರನೇ ಸದ್ದು ಮಾಡುತ್ತಿತ್ತು. ಏರಿನಲ್ಲಿ ಇಂಜಿನ್ ತುಸು ಏದುಸಿರು ಬಿಡುತ್ತಿತ್ತು. ಅಕ್ಕಪಕ್ಕದ ರೇಂಜ್ ಗಳ ವ್ಯಾಪ್ತಿಗೆ ಸೇರಿದ ಕಾಡುಮರಗಳು ಬೆಂಕಿಗೆ ಕರಕಲಾಗಿ ಕಂಗೆಟ್ಟು ನಿಂತಿದ್ದವು. ಅವುಗಳನ್ನು ತಬ್ಬಿದ್ದ ಲಾಂಟನಾ ಪೊದೆಗಳು ಮಾಯವಾಗಿ ಅಲ್ಲೆಲ್ಲ ಅವುಗಳ ಶವಸಂಸ್ಕಾರವೇನೋ ಎಂಬಂತೆ ಸಾಕ್ಷಿಯಾಗಿ ಬಿಳಿಬೂದಿಯ ರಾಶಿ ಬಿದ್ದಿತ್ತು. ಇಡೀ ಅರಣ್ಯವೇ ಶೋಕಛಾಯೆಯಲ್ಲಿದೆಯೇನೋ ಎನಿಸುತ್ತಿತ್ತು. ಇವೆಲ್ಲದರಿಂದ ನಾನು ಸಹ ಗರಬಡಿದಂತೆ ಆಗಿಬಿಡುತ್ತಿದ್ದನೇನೋ … ಆದರೆ ಚಾಲಕ ಗುರುಸ್ವಾಮಿ ಅವರ ಮಾತುಗಳು ಅದಕ್ಕೆ ಆಸ್ಪದ ಕೊಟ್ಟಿರಲಿಲ್ಲ.
ನೂರಾರು ಕಿಲೋಮೀಟರ್ ಉದ್ದಕ್ಕೂ ಅವರ ಮಾತುಗಳಿಗೆ ನನ್ನ ಕಿವಿಗೊಟ್ಟಿದ್ದರೂ ಕಣ್ಣು ಮಾತ್ರ ಅರಣ್ಯದತ್ತಲೇ ಇತ್ತು. ಅಲ್ಲಿಯ ಒಂದಲ್ಲ ಒಂದು ವಿಸ್ಮಯಗಳನ್ನ ಹೇಳುತ್ತಲ್ಲೇ ಇದ್ದರು. ಅಷ್ಟರಲ್ಲಿ ಕಾಡಿನಲ್ಲಿ ಪೆಟ್ರೋಲಿಂಗ್ (ಕಾಲ್ನಡಿಗೆಯಲ್ಲಿ ಕಾಡು ಸುತ್ತುತ್ತಾ ಪಹರೆ ಕಾಯುವ ಅರಣ್ಯ ಸಿಬ್ಬಂದಿ) ಸಿಕ್ಕರು. ನಾವಿನ್ನೂ ( ನಾನು, ಡ್ರೈವರ್ ಗುರುಸ್ವಾಮಿ, ವಾಚರ್ ಜವರಸಿದ್ಧ, ಗಾರ್ಡ್ ಶಿವಾನಂದ ಜಡೆನ್ನವರ್) ಊಟ ಮಾಡಿಲ್ಲವೆಂದು ತಿಳಿದು ತಮ್ಮ ಜೋಳಿಗೆಯಿಂದ ಬಿಸ್ಕತ್ ಪ್ಯಾಕೇಟುಗಳನ್ನು ತೆಗೆದು ಕೊಟ್ಟರು. ನಿಮಗೆ ಬೇಕಾಗುತ್ತದೆ ಎಂದರೂ ಕೇಳಲಿಲ್ಲ.
ಪೆಟ್ರೋಲಿಂಗ್ ನವರು ತುಸುಹೊತ್ತು ಮಾತನಾಡಿ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಏರಲು ಹೊರಟರು. ಒಂದೇ ಇಗ್ನಿಷನ್ ಗೆ ಥಾರ್ ಜೀಪು ಸ್ಟಾರ್ಟ್ ಆಗಿ ಕಾಡಿನ ಗರ್ಭದ ಮತ್ತಷ್ಟೂ ಆಳಕ್ಕೆ ಕರೆದುಕೊಂಡು ಹೋಗತೊಡಗಿತು. ಬಿಸಿಲಿನ ಝಳಕ್ಕೆ ವನ್ಯಮೃಗಗಳೆಲ್ಲ ಅದೆಲ್ಲಿ ಅವಿತುಕೊಂಡಿದ್ದವೋ ಏನೋ. ಇದಕ್ಕಿದ್ದಂತೆ ವಾತಾವರಣ ತಂಪಾಗತೊಡಗಿತು. ಸಣ್ಣದಾಗಿ ನೀರು ಹರಿಯುತ್ತಲೇ ಇದ್ದ ಹಳ್ಳವೊಂದರ ಬಳಿ ತಾವೂ ಬಸವಳಿದಿದ್ದೇವೆ ಎನ್ನುವಂತೆ ಜೀಪಿನ ಗಾಲಿಗಳು ಮತ್ತಷ್ಟೂ ನಿಧಾನವಾದವು. ಆಗ ಗುರುಸ್ವಾಮಿ “ಸರ್ ಇಲ್ನೋಡಿ ಇಲ್ನೋಡಿ” ಎಂದು ಎರಡು ಬಾರಿ ಹೇಳಿದರು. ಹುಲಿ ಇರಬಹುದೇನೋ ಎಂದುಕೊಂಡು ಕಣ್ಣುಗಳನ್ನು ಮತ್ತಷ್ಟು ಹರಿತ ಮಾಡಿಕೊಂಡು ಸುತ್ತಲೂ ನೋಡಿದೆ. ಆಗ ಮತ್ತೆ “ಇಲ್ನೋಡಿ, ಇದೇ ಡಾ. ಮೈತ್ರಿ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿ ಕರೆದುಕೊಂಡು ಹೋದ ಸ್ವಲ್ಪಹೊತ್ತಿನ ಬಳಿಕ ತಂಗಿದ್ದ ಜಾಗ” ಎಂದರು.
ಎರಡು ದಶಕದ ಹಿಂದೆ ಬಂಡೀಪುರ ಅರಣ್ಯದ ಮಗ್ಗುಲಿನಲ್ಲಿಯೇ ಇರುವ ಮೇಲುಕಮ್ಮನಹಳ್ಳಿಯಲ್ಲಿದ್ದ ಖ್ಯಾತ ವನ್ಯಜೀವಿಗಳ ಅಧ್ಯಯನಕಾ ರಾದ ಕೃಪಾಕರ –ಸೇನಾನಿ ಇಬ್ಬರನ್ನು ಕಾಡುಗಳ್ಳ ವೀರಪ್ಪನ್ ಕಿಡ್ನಾಪ್ ಮಾಡಿದ್ದ. ನಂತರ ಅವರನ್ನು ಕಾಡಿನೊಳಗೆ ಕರೆತಂದು; ಸಫಾರಿಗೆ ಬಂದಿದ್ದ ವಾಹನ ತಡೆದಿದ್ದ. ಅದರೊಳಗಿದ್ದ ಕೃಷಿವಿಜ್ಞಾನಿ ಡಾ, ಮೈತ್ರಿ ಅವರನ್ನೂ ವಿಐಪಿಯೆಂದು ಭಾವಿಸಿ ಕಿಡ್ನಾಪ್ ಮಾಡಿದ್ದ. ಈ ವಿವರವನ್ನು ಗುರುಸ್ವಾಮಿ ಹೇಳತೊಡಗಿದರು.
“ನಮ್ಮ ಸೀನಿಯರ್ ಗಳಾದ ರಾಜಣ್ಣ, ಕೃಷ್ಣಪ್ಪ ಅವರು ಎಷ್ಟೊತ್ತಾದರೂ ಬಾರದ ಸಫಾರಿ ವ್ಯಾನ್ ಹುಡುಕಿಕೊಂಡು ಹೊರಟರು. ನಾನು ಬರುತ್ತೇನೆಂದೆ. ಅವರು ಬೇಡ ಎಂದು ತಡೆದು ತಾವೇ ಹೊರಟರು. ಹೀಗೆ ಹೊರಟವರನ್ನೂ ವೀರಪ್ಪನ್ ಹಿಡಿದುಬಿಟ್ಟ” ಎಂದು ದೊಡ್ಡ ನಿಟ್ಟುಸಿರುಬಿಟ್ಟು ಕ್ಷಣ ಸುಮ್ಮನಾದರು. “ನಮ್ಮ ಸೀನಿಯರ್ ಗಳು ಬಹಳ ಒಳ್ಳೆಯವ್ರು. ಅಂಥವರು ವೀರಪ್ಪನ್ ಕೈಗೆ ಸಿಕ್ಕು ಮಾನಸಿಕವಾಗಿ ನಲುಗಿಹೋದರು” ಎಂದೇಳಿ ಅರೆಕ್ಷಣ ಆಕಾಶ ದಿಟ್ಟಿಸಿದರು. ಆಗ ವೀರಪ್ಪನ್ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಅರಣ್ಯ ಇಲಾಖೆ ಸಿಬ್ಬಂದಿಯಲ್ಲಿ ಒಬ್ಬರನ್ನು ಬಿಟ್ಟು ಉಳಿದವರು ಕಾಲವಶವಾಗಿದ್ದಾರೆ.
ಹಿಂದಿನದನ್ನು ನೆನೆದು ಗುರುಸ್ವಾಮಿ ಹನಿಗಣ್ಣಾಗಿದ್ದರು. ಜೊತೆಗಿದ್ದ ವಾಚರ್ ಜವರಸಿದ್ದ ಅವರಿಗೂ ಈ ಘಟನೆಗಳೆಲ್ಲ ಗೊತ್ತಿದ್ದವು. ಅವರೂ ಮಾತನಾಡಲಿಲ್ಲ. ಮತ್ತರೆಕ್ಷಣ ಮೌನ. ಈ ಮೌನಕ್ಕೆ ಕಾಡುಕೂಡ ಸಾಥ್ ನೀಡಿದೆಯೇನೋ ಎಂಬಂತೆ ಇಡೀ ವಾತಾವರಣವಿತ್ತು. ಆ ಕಡುಮೌನ ಸೀಳಿಕೊಂಡು ಬಂದಂತೆ “ನಾನು, ನಮ್ಮಪ್ಪ ಬಹಳ ಹಿಂದೆಯೇ ನರಹಂತಕ ವೀರಪ್ಪನ್ ಕೈಗೆ ಸಿಕ್ಕು ಅದೃಷ್ಟವಶಾತ್ ಬದುಕಿ ಬಂದೆವು” ಎಂದರು ಗುರುಸ್ವಾಮಿ.
ಅಚ್ಚರಿಯಿಂದ ನನ್ನ ಕಿರಿದು ಕಣ್ಣುಗಳು ಮತ್ತಷ್ಟೂ ಅಗಲಗೊಂಡವು. ಈ ವಿವರಗಳನ್ನು ಕೇಳಿಸಿಕೊಳ್ಳಲು ತನಗೂ ಆಸಕ್ತಿಯಿದೆ ಎನ್ನುವಂತೆ ಜೀಪು ಕಿರ್ರನೇ ಸದ್ದು ಮಾಡಿ ನಿಂತಿತು. ಸಾರಥಿ ಸ್ಥಾನದಿಂದ ಗುರುಸ್ವಾಮಿ ಕೆಳಗಿಳಿದರು. ನಾವು ಅವರನ್ನು ಹಿಂಬಾಲಿಸಿದೆವು.
ನನ್ನ ಅಗಲಗೊಂಡ ಕಣ್ಣುಗಳು, ಬಿಟ್ಟಬಾಯಿ ಮುಚ್ಚದೇ ಇರುವುದನ್ನು ಗಮನಿಸಿದ ಗುರುಸ್ವಾಮಿ “ಆ ಘಟನೆ ನಡೆದಾಗ ನಾನು ಹದಿಮೂರೋ-ಹದಿನಾಲ್ಕೋ ವರ್ಷದ ಹುಡುಗ (ಈಗ 47 ವರ್ಷ ವಯಸ್ಸು) ನನ್ನ ತಂದೆ ಸಿದ್ದಯ್ಯ ಅವರು ಕೊಳ್ಳೆಗಾಲ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆ ಗಾರ್ಡ್ ಆಗಿದ್ದರು. ಕೌದಳ್ಳಿ, ಹನೂರು, ರಾಮಾಪುರ ವಲಯಗಳ ಕಾಡಿನಲ್ಲಿ ಆಗ ಹುಲಿಗಣತಿ ನಡೆಯುತ್ತಿತ್ತು. ಕುತೂಹಲಕ್ಕೆ ಅಪ್ಪನ ಜೊತೆ ನಾನು ಹೋಗಿದ್ದೆ. ವಾಪ್ಪಸ್ ಆಗುತ್ತಿದ್ದೆವು. ಲೊಕ್ಕನಹಳ್ಳಿ ( ಕೊಳ್ಳೆಗಾಲ ತಾಲ್ಲೂಕಿನಿಂದ 23 ಕಿಲೋಮೀಟರ್, ಚಾಮರಾಜನಗರದಿಂದ 38 ಕಿಲೋಮೀಟರ್ ಇರುವ ಕಾಡಂಚಿನ ಹಳ್ಳಿ) ಬಳಿ ಕಾಡೊಳಗೆ ಹಾದು ಬರುವಾಗ ರೈಫಲ್ ಗಳನ್ನು ಹಿಡಿದಿದ್ದ ಇಬ್ಬರು ಅಡ್ಡಗಟ್ಟಿದರು. ಅವರಲ್ಲಿ ಒಬ್ಬ ನರಹಂತಕ ವೀರಪ್ಪನ್ ಬಲಗೈ ಬಂಟನಾಗಿದ್ದ ಸೇತುಕುಳಿ ಗೋವಿಂದ. ಇವನು ನಮ್ಮನ್ನು ಕರೆದುಕೊಂಡು ಹೋಗಿ ವೀರಪ್ಪನ್ ಎದುರು ನಿಲ್ಲಿಸಿದ. ಆ ಪ್ರಾಂತ್ಯದ ಎಲ್ಲ ಅರಣ್ಯ ಸಿಬ್ಬಂದಿಯನ್ನು ಅವನು ಗಮನಿಸಿದ್ದ ಎನ್ನಿಸುತ್ತೆ. ಆದ್ದರಿಂದ ನಮ್ಮಪ್ಪನನ್ನು ತಮಿಳಿನಲ್ಲಿ “ಹಿರಿಯರೆ ಎಲ್ಲಿಗೆ ಹೋಗಿ ಬರುತ್ತಿದ್ದೀರಿ” ಎಂದು ಕೇಳಿದ. ಅವರು ಹೆದರುತ್ತಲೇ ವಿಷಯ ತಿಳಿಸಿದರು.
“ಊಟ ಮಾಡಿದ್ದೀರಾ” ಎಂದು ಪ್ರಶ್ನಿಸಿದ ವೀರಪ್ಪನ್ ನಮ್ಮಿಬ್ಬರಿಗೂ ಊಟ ಕೊಡುವಂತೆ ಹೇಳಿದ. ಅಲ್ಲೇ ಕಲ್ಲೂಡಿ ಅಡುಗೆ ಮಾಡಿಕೊಂಡಿದ್ದರು. ಸಿಲ್ವರ್ (ಅಲ್ಯುಮಿನಿಯಂ ತಟ್ಟೆ) ನ ಎರಡು ತಟ್ಟೆಗಳಲ್ಲಿ ಅನ್ನ, ಬೇಳೆಸಾರು ಹಾಕಿಕೊಟ್ಟರು. ನಾವು ಊಟ ಮಾಡುವವರೆಗೂ ವೀರಪ್ಪನ್ ಏನೂ ಮಾತನಾಡಲಿಲ್ಲ. ಆದ ನಂತರ “ನಾನು ಇಲ್ಲಿರುವ ಸಂಗತಿಯನ್ನು ಪೊಲೀಸಿಗೆ, ನಿಮ್ಮ (ಅರಣ್ಯ ಇಲಾಖೆ) ಅಧಿಕಾರಿಗಳಿಗೆ ಹೇಳಬಾರದು. ಹೇಳಿದ್ದು ನನಗೆ ಗೊತ್ತಾದರೆ ಏನು ಆಗುತ್ತೆ ಗೊತ್ತಿದೆ ತಾನೇ” ಎಂದ. ನಾವು ದುಸರಾ ಮಾತನಾಡಲಿಲ್ಲ. ಉಸಿರೇ ನಿಂತಹಾಗಿತ್ತು ಎಂದಮೇಲೆ ಮಾತನಾಡುವುದಾದರೂ ಎಲ್ಲಿ ?
ಈ ನಂತರ ವೀರಪ್ಪನ್ ನನ್ನ ಪಾದಗಳನ್ನೇ ಎರಡು ಬಾರಿ ದಿಟ್ಟಿಸಿದ. ಏಕೆಂದು ನನಗೆ ಅರ್ಥವಾಗಲಿಲ್ಲ. ನಂತರ ಅವನೇ “ಹೇ ಹುಡುಗ, ನೀನು ಹಾಕಿಕೊಂಡಿರುವ ಚಪ್ಪಲಿ ಕೊಡು” ಎಂದ. ನಾನು ಆಗಲೇ ಸಾಕಷ್ಟು ಎತ್ತರವಾಗಿ ಬೆಳೆದಿದ್ದೆ. ಅದಕ್ಕೆ ತಕ್ಕಂತೆ ಪಾದಗಳೂ ಇದ್ದವು. ಹೊಸ ಪ್ಯಾರಗಾನ್ ಚಪ್ಪಲಿ ಹಾಕಿದ್ದೆ. ಮೌನವಾಗಿ ಅದನ್ನು ಕಳೆದು ವೀರಪ್ಪನ್ ಮುಂದಿಟ್ಟೆ. ಆಗ ಅವನು ಅದನ್ನು ಹಾಕಿಕೊಂಡು ಪರ್ವಾಗಿಲ್ಲ. ಸರಿಯಾಗುತ್ತೆ ಎಂದ. ಆಗಲೇ ಅವನ ಕಾಲುಗಳನ್ನು ನೋಡಿದ್ದು. ಪಾದಗಳು ಕಾಡಿನಲ್ಲಿ ನಡೆದು ನಡೆದೂ ಬಿರಿದಿದ್ದವು. ಹಾಕಿಕೊಂಡಿದ್ದ ಹವಾಯಿ ಸ್ಲಿಪರುಗಳಿಗೆ ಒಂದೆರಡು ಕಡೆ ಕಿತ್ತುಹೋಗದಂತೆ ಸೇಫ್ಟಿಪೀನ್ ಗಳನ್ನು ಹಾಕಿದ್ದ.
ನನ್ನ ಹೊಸಚಪ್ಪಲಿ ಹಾಕಿಕೊಂಡ ಮೇಲೆ ಜೇಬಿನಿಂದ ದುಡ್ಡು ತೆಗೆದು ಕೊಟ್ಟು “ಈ ವಿಷಯವನ್ನೆಲ್ಲ ಯಾರಿಗೂ ಹೇಳಬೇಡ. ಹೇಳಿದರೆ ಸುಟ್ಟುಬಿಡ್ತೀನಿ; ಇನ್ನು ಹೋಗಿ” ಎಂದು ಕಳಿಸಿದ.
“ಅಪ್ಪ, ನಾನು ಹಿಂದಿರುಗಿ ನೋಡದೇ ಮನೆ ಸೇರಿದೆವು. ಆಗ ಚೆಡ್ಡಿಜೇಬಿನಿಂದ ದುಡ್ಡು ತೆಗೆದು ನೋಡಿದರೆ 100 ರೂಪಾಯಿಗಳ ಮೂರು ನೋಟಿತ್ತು. ನನಗೆ ಅದರ ಖುಷಿಯೇನೂ ಇರಲಿಲ್ಲ. ಅಪ್ಪ ದಿಗ್ಬ್ರಮೆ ಹಿಡಿದಂತೆ ಆಗಿದ್ದರು. ನನಗೂ ತುಸು ಜ್ವರ ಬಂದಂತೆ ಆಗಿತ್ತು” ಇಷ್ಟು ಹೇಳಿ ಗುರುಸ್ವಾಮಿ ಮತ್ತೊಂದು ದೊಡ್ಡ ನಿಟ್ಟುಸಿರು ಬಿಟ್ಟರು.
ಅಷ್ಟರಲ್ಲಾಗಲೇ ಸೂರ್ಯ ಕೂಡ ದಣಿದು ಕೆಂಪಾಗಿ ಪಡುವಣದ ಕಣಿವೆಯೊಳಗೆ ಇಳಿಯಲು ಶುರುಮಾಡಿದ್ದ. ಜೀಪಿನ ಗಾಲಿಗಳು ಬಂಡೀಪುರದತ್ತ ಧಾವಿಸತೊಡಗಿದವು. ಯಾರಿಗೂ ಆಡಲು ಮಾತುಗಳಿರಲಿಲ್ಲ. ಹಾದಿಯ ಎರಡು ಬದಿಗಳಲ್ಲಿಯೂ ಬೆಂಕಿಗೆ ಕರಲಾಗಿದ್ದ ಮರಗಳ ಎಡೆಗಳಿಂದ ಬೀಸುತ್ತಿದ್ದ ಗಾಳಿ, ಅರಣ್ಯದ ರೋದನವನ್ನು ಹೊತ್ತು ತರುತ್ತಿದೆಯೇನೋ ಎನ್ನಿಸತೊಡಗಿತು.
ತುಂಬಾ ಚೆನ್ನಾಗಿದೆ ಸರ್