ಲೇಖಕ: ಕುಮಾರ ರೈತ

ಬಂಡೀಪುರ ಕಾಡುರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಇದನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಚಾಮರಾಜ ನಗರ ಜಿಲ್ಲೆ, ಮೈಸೂರು ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಏಪ್ರಿಲ್ 6, 2025ರಂದು ಬಂಡೀಪುರ ರಸ್ತೆಯಲ್ಲಿ ಪಾದಯಾತ್ರೆ ಪ್ರತಿಭಟನೆ ಆಯೋಜಿತವಾಗಿದೆ.

ಈ ಪರಿಯ ಪ್ರತಿಭಟನೆ ಎದುರಾಗುತ್ತಿದೆ. ಆದರೂ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅವುಗಳಿಗೆ ಸ್ಪಂದಿಸದೇ ದಿವ್ಯಮೌನ ವಹಿಸಿದೆ. ಇದರಿಂದ ಬಂಡೀಪುರ ಕಾಡುರಸ್ತೆಯಲ್ಲಿ ರಾತ್ರಿ ವೇಳೆಯೂ ವಾಹನಗಳ ಸಂಚಾರಕ್ಕೆ ಅನುಮತಿ ಕೊಡಲು ನಿರ್ಧರಿಸಿರಬಹುದು ಎಂಬ ಅನುಮಾನ ಬರುತ್ತದೆ ಅಲ್ಲವೇ ? ಇದಕ್ಕೆ ಇಂಬು ಕೊಡುವ ರೀತಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ದೆಹಲಿಯಲ್ಲಿ ಮಾರ್ಚ್, 2025ರಂದು ನೀಡಿರುವ ಹೇಳಿಕೆಯೂ ಇದೆ.

“ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ವಿಷಯ ಅತ್ಯಂತ ಸೂಕ್ಷ್ಮ.  ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು. ಈ ಪ್ರಕರಣ ಸರ್ವೋನ್ನತ ನ್ಯಾಯಾಲಯದಲ್ಲಿದೆ. ಪ್ರಸ್ತುತ ರಾತ್ರಿ 9ರಿಂದ ಬೆಳಗ್ಗೆ 6ಗಂಟೆಯವರೆಗೆ ನಿರ್ಬಂಧ ಜಾರಿಯಲ್ಲಿದೆ. ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು, ಎಲ್ಲರೊಂದಿಗೆ ಚರ್ಚಿಸಿ ಸೂಕ್ತವಾದ ತೀರ್ಮಾನ ಮಾಡಲು ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಪರಿಸರ, ವನ್ಯಪ್ರಾಣಿಗಳ ಕ್ಷೇಮ ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಒತ್ತಡ, ತದನಂತರ ನ್ಯಾಯಾಲಯಗಳ ಸೂಚನೆಯಂತೆ ಬಂಡೀಪುರ ಅರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಲಾಗಿದೆ. ರಾತ್ರಿ 9 ರಿಂದ ಬೆಳಗ್ಗೆ 6ರ ತನಕ ವಾಹನಗಳಿಗೆ ನಿಷೇಧ ಜಾರಿಯಲ್ಲಿರುತ್ತದೆ. ತುರ್ತುಸ್ಥಿತಿಯಲ್ಲಿ ಇರುವವರನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳುವ ವಾಹನ, ಆಂಬುಲೆನ್ಸ್ ಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಈ ಬಳಿಕ ವಯನಾಡು ಜಿಲ್ಲೆಯ ನಿವಾಸಿಗಳು ನ್ಯಾಯಾಲಯಗಳ ಮೆಟ್ಟಿಲು ಹತ್ತಿದ್ದಾರೆ. ರಾತ್ರಿ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯಗಳು ಅದನ್ನು ಪರಿಗಣಿಸಿಲ್ಲ. ಬಳಿಕ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಬಂಡೀಪುರ ರಸ್ತೆಯಲ್ಲಿ ಲಾರಿ ಡಿಕ್ಕಿ ಹೊಡೆದು ಕಾಡಾನೆ ಮರಿ ಸತ್ತಿದೆ

ಇಂಥ ಸಂದರ್ಭದಲ್ಲಿ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಹೇಳಿರುವ ಮಾತು ಮಹತ್ವ ವಹಿಸುತ್ತದೆ. “ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯಪಡೆದು ಸರ್ವಸಮ್ಮತ ತೀರ್ಮಾನ ತೆಗೆದುಕೊಳ್ಳಲಾಗುವುದು. ಎರಡೂ ರಾಜ್ಯಗಳ ಬಾಂಧವ್ಯ ಗಮನದಲ್ಲಿ ಇಟ್ಟುಕೊಳ್ಳಲಾಗುವುದು” ಎಂದಿದ್ದಾರೆ. ಒಂದು ಸೂಕ್ಷ್ಮ ವಿಷಯದ ಬಗ್ಗೆ ಮರು ಸಮಾಲೋಚನೆ ಅಗತ್ಯವಾದರೂ ಏನು ?

ಬಂಡೀಪುರ ಆಗಲೀ ಅಥವಾ ಮತ್ಯಾವುದೇ ಕಾಡು ಪ್ರದೇಶವಾಗಲಿ, ಪರಿಸರ ದೃಷ್ಟಿಯಿಂದ ಸೂಕ್ಷ್ಮವಾಗಿರುತ್ತವೆ. ಅಲ್ಲಿರುವ ವನ್ಯಪ್ರಾಣಿಗಳು  ಕನಿಷ್ಟ ರಾತ್ರಿ ವೇಳೆಯಲ್ಲಿಯಾದರೂ ವಾಹನಗಳ ಭಯವಿಲ್ಲದೇ ಮುಕ್ತವಾಗಿ ಸಂಚರಿಸುವ ವಾತಾವರಣ ನಿರ್ಮಿಸಬೇಕು. 2009ರಲ್ಲಿ ಬಂಡೀಪುರದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರ ತನಕ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಮೊದಲಿಗೆ ಚಾಮರಾಜ ನಗರ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದರು. ತದ ನಂತರ ರಾಜ್ಯ ಸರ್ಕಾರ ಅದನ್ನು ಅನುಮೋದಿಸಿತು.

ಈ ಬಳಿಕ ವಯನಾಡು ಜಿಲ್ಲೆಯ ಶಾಸಕರು, ಸಂಸದರು, ಕೇರಳ ಸರ್ಕಾರದವರು ಪದೇಪದೇ ರಾತ್ರಿ ವೇಳೆಯೂ ಮುಕ್ತ ಸಂಚಾರಕ್ಕೆ ಅವಕಾಶ ನೀಡಲು ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಆದರೆ ಯಾವ ಸರ್ಕಾರವೂ ಅವರ ಮನವಿ ಪರಿಗಣಿಸಿಲ್ಲ.

ಈಗ ವಯನಾಡು ಜಿಲ್ಲೆಗೆ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಸತ್ ಸದಸ್ಯರಾಗಿದ್ದಾರೆ. (Member of Parliament) ಇವರಿಗೂ ಮೊದಲು ರಾಹುಲ್ ಗಾಂಧಿ ವಯನಾಡು ಸಂಸದ. (Member of Parliament) ರಾಗಿದ್ದರು. ಆಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿತ್ತು. ಆಗಲೂ ಕೇರಳದಿಂದ ಒತ್ತಡವಿತ್ತು. ಆದರೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮಣಿದಿರಲಿಲ್ಲ. ಈಗ ಕಾಂಗ್ರೆಸ್ ಪಾರ್ಟಿ ನೇತೃತ್ವದ ಸರ್ಕಾರವಿದೆ. ಪಾರ್ಟಿ ಹೈ ಕಮಾಂಡ್ ಒಲೈಸುವುದಕ್ಕಾಗಿ, ಅವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗುವ ಸಲುವಾಗಿ ಕಾಂಗ್ರೆಸ್ ಸರ್ಕಾರದ ಧುರೀಣರು ಬಂಡೀಪುರದಲ್ಲಿ ರಾತ್ರಿ ವೇಳೆಯೂ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ನಿರ್ಧಾರಕ್ಕೆ ಬಂದಿರಬಹುದೇ ?

ಪ್ರಜಾ ಪ್ರಭುತ್ವದಲ್ಲಿ ಯಾವುದೇ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರತಿಭಟನೆ ಎದುರಾದಾಗ ಸರ್ಕಾರದ ನೇತೃತ್ವ ವಹಿಸಿದವರು ಸಮಜಾಯಿಷಿ ನೀಡುತ್ತಾರೆ. ಬಂಡೀಪುರದಲ್ಲಿ ರಾತ್ರಿ ವೇಳೆ ನಿರ್ಬಂಧ ತೆರವು ಮಾಡಬೇಡಿ ಎಂಬ ಪ್ರತಿಭಟನೆ ನಿರಂತರವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರದಿಂದ ಯಾರೊಬ್ಬರೂ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ. ಇದು ಗಮನಾರ್ಹ ವಿಷಯ !

“ದೆಹಲಿಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿದ ಹೇಳಿಕೆ ಗಮನಿಸಿದರೂ ಸಾಕು ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಲು ನಿರ್ಧರಿಸಿದ್ದಾರೆ ಎಂಬುದು ತಿಳಿಯುತ್ತದೆ. ಬಹುಶಃ ಕರ್ನಾಟಕದಲ್ಲಿ ಬೃಹತ್ ಪ್ರತಿಭಟನೆ ಎದುರಾಗಬಹುದು ಎಂದು ಕರ್ನಾಟಕ ಸರ್ಕಾರದವರು ಯೋಚಿಸಿದ್ದಂತೆ ಕಾಣುವುದಿಲ್ಲ. ಈಗ ಪರಿಸರ ಸಂಘಟನೆಗಳ ಜೊತೆಗೆ ಇತರ ಸಂಘಟನೆಗಳೂ ಕೈ ಜೋಡಿಸಿವೆ. ಯಾವುದೇ ಕಾರಣಕ್ಕೂ ಕಾಡಿನ ರಸ್ತೆಯಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಾರದೆಂದು ನಿರ್ಧಾರ ಮಾಡಲಾಗಿದೆ” ಎಂದು ಪರಿಸರವಾದಿ ಜೋಸೆಫ್ ಹೂವರ್ ಹೇಳಿದರು.

“ಏಪ್ರಿಲ್ 6, 2025ರಂದು ಪಾದಯಾತ್ರೆ ನಂತರ ಸಂಘಟನೆಗಳಿಂದ ರಾಜ್ಯ ಸರ್ಕಾರಕ್ಕೆ ಹಿರಿಯ ಅರಣ್ಯಾಧಿಕಾರಿ ಮೂಲಕ ಮನವಿ ಪತ್ರ ನೀಡುತ್ತೇವೆ. ಬಳಿಕ ಸುಪ್ರೀಮ್ ಕೋರ್ಟಿನಲ್ಲಿ ಪೆಟಿಷನ್ ಫೈಲ್ ಮಾಡುತ್ತೇವೆ. ಕೇರಳದಿಂದ ಈಗಾಗಲೇ ಅಲ್ಲಿನ ನಿವಾಸಿಯೊಬ್ಬರು ಸುಪ್ರೀಮ್ ಕೋರ್ಟಿನಲ್ಲಿ ನೈಟ್ ಬ್ಯಾನ್ ತೆರವು ಸಂಬಂಧ ಅರ್ಜಿ ಸಲ್ಲಿಸಿದ್ದಾರೆ. ಕೂಡಲೇ ಸುಪ್ರೀಂ ಕೋರ್ಟಿಗೆ ಕರ್ನಾಟಕ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಪ್ರಭಾಕರ್ ಅವರು ಬಂಡೀಪುರ ಕಾಡು ಪ್ರದೇಶ ತುಂಬ ಸೂಕ್ಷ್ಮವಾಗಿರುವುದರಿಂದ ದಿನದ 24 ಗಂಟೆಯೂ ವಾಹನಗಳ ಸಂಚಾರ ನಿರ್ಬಂಧಿಸುವುದು ಸೂಕ್ತ ಎಂದು ಅರ್ಜಿ ಸಲ್ಲಿಸುತ್ತಾರೆ. ಇದರ ಕುರಿತು ಸಮಾಲೋಚಿಸುವ ಸಲುವಾಗಿ ಕರೆದ ಸಭೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ನೀವು ಸರ್ಕಾರದ ಅನುಮತಿ ಇಲ್ಲದೇ ಹೇಗೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೀರಿ ಎಂದು ರೇಗಿದ್ದಾರೆ. ಬಳಿಕ ಅಧಿಕಾರಿಗಳ ಮೂಲಕ ಸುಪ್ರೀಮ್ ಕೋರ್ಟಿಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆಯುವಂತೆ ಮಾಡಿದ್ದಾರೆ ಎಂಬ ಮಾಹಿತಿ ಇದೆ” ಎಂದು ಹೂವರ್ ವಿವರಿಸಿದರು.

“ಯಾವಾಗ ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ಸುಪ್ರೀಂ ಕೋರ್ಟಿಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಥ್ ಡ್ರಾ ಆಯಿತೋ ಆಗಲೇ ರಾಜ್ಯದ ಕಾಂಗ್ರೆಸ್ ಸರ್ಕಾರದವರು ಏನೋ ನಾಟಕ ಆಡುತ್ತಿದ್ದಾರೆ ಎಂಬ ಮನವರಿಕೆ ಆಯಿತು. ನಂತರ ದೆಹಲಿಯಲ್ಲಿ ಈಶ್ವರ್ ಕಂಡ್ರೆ ಹೇಳಿಕೆ ಬಂತು. ಅಲ್ಲಿಗೆ ಇವರ ತೀರ್ಮಾನ ಏನಿರಬಹುದು ಎಂಬುದು ಮನವರಿಕೆ ಆಯಿತು” ಎಂದು ಜೋಸೆಫ್ ಹೂವರ್ ಹೇಳಿದರು.

ತೀರ್ಮಾನ ಹೊರಬಿದ್ದರೆ ಏನಾಗಬಹುದು

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಇನ್ನೂ ಬಂಡೀಪುರ ಕಾಡುರಸ್ತೆಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಇರುವ ನಿರ್ಬಂಧ ತೆರವು ಮಾಡುವ ಆದೇಶ ಇನ್ನೂ ಹೊರಟಿಲ್ಲ. ಒಂದು ವೇಳೆ ಆದೇಶ ಹೊರಬಿದ್ದರೆ ಪರಿಸರವಾದಿಗಳು ಸೇರಿದಂತೆ ಇತರ ಸಂಘಟನೆಗಳ ಪ್ರತಿಭಟನೆ ತೀವ್ರವಾಗುತ್ತದೆ. ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇದಲ್ಲದೇ ಇನ್ನೂ ಕೆಲವು ಪರಿಣಾಮಗಳಾಗುತ್ತವೆ.

2000ನೇ ಇಸವಿಯಿಂದೀಚೆಗೆ ಕರ್ನಾಟಕದ ಪರಿಸರವಾದಿಗಳು ಬಹು ಸಂಘಟಿತರಾಗಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿರುವ ಇವರು ತಮ್ಮ ಆಸಕ್ತಿ ವಿಷಯದ ಮತ ಬ್ಯಾಂಕ್ (Vote Bank) ಆಗಿದ್ದಾರೆ. ಜೊತೆಗೆ ಇತರ ಮತದಾರರ ಮೇಲೂ ಪ್ರಭಾವ ಬೀರುವ ಶಕ್ತಿಯನ್ನೂ ಹೊಂದಿದ್ದಾರೆ. ಇದರಿಂದ ಕಾಂಗ್ರೆಸ್ ಪಾರ್ಟಿ ಮುಂದೆ ಬರುವ ಯಾವುದೇ ಚುನಾವಣೆಗಳಲ್ಲಿ ಗಣನೀಯ ಪ್ರಮಾಣದ ಮತಗಳನ್ನು ಖಂಡಿತ ಕಳೆದುಕೊಳ್ಳುತ್ತದೆ. ಇದರ ಜೊತೆಗೆ ಅವರೆಲ್ಲರ ವಿಶ್ವಾಸವನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತದೆ.

ಇದುವರೆಗೂ ಪರಿಸರಸ್ನೇಹಿ ತೀರ್ಮಾನಗಳಿಂದಾಗಿ ಅರಣ್ಯ ಸಚಿವ ಖಂಡ್ರೆ ಅವರಿಗೆ ದೊಡ್ಡ ಅಭಿಮಾನಿಗಳಿದ್ದಾರೆ. ನೈಟ್ ಬ್ಯಾನ್ ತೆರವು ಆದರೆ ಆ ಅಭಿಮಾನಿಗಳನ್ನು ಕಳೆದುಕೊಳ್ಳಲಿದ್ದಾರೆ. ಇಷ್ಟೆಲ್ಲ ಪರಿಣಾಮಗಳು ಇರುವಾಗ ಕರ್ನಾಟಕ ಸರ್ಕಾರದಿಂದ ಯಾವ ರೀತಿಯ ತೀರ್ಮಾನ ಹೊರ ಬೀಳಬಹುದು ?

Similar Posts

1 Comment

  1. ಬಂಡೀಪುರ ನಿಬಂಧ ಸ್ವಾಗತ ರಾತ್ರ ಸಂಚಾರ ಪ್ರಾಣಿ ಮುಖ್ಯ ಅರಣ್ಯ ಮುಖ್ಯ ಇಲಾಖೆಯಲ್ಲಿ ಇಷ್ಟವಿಲ್ಲ ಆದರೆ ನನಗೆ ಅರಣ್ಯ ಪ್ರಾಣಿ ತುಂಬಾ ಇಷ್ಟ ನನಗೆ ಎಲ್ಲಾ ಹಳ್ಳಿ ಮತ್ತು ಅರಣ್ಯ ಪ್ರಾಣಿ ಸುಂದರ ಸ್ಥಳ ಇಷ್ಟ.

Leave a Reply

Your email address will not be published. Required fields are marked *