ಕೆಲವು ದಿನಗಳ ಹಿಂದಿನ ಸಂಗತಿ…. ಕುದುರೆಮುಖ ಬೆಟ್ಟದ ಬುಡದಲ್ಲಿದ್ದೆ. ಅಲ್ಲೊಂದು ಪುಟ್ಟ ಅಂಗಡಿ. ಮಾತನಾಡುತ್ತಾ ನಿಂತವನ ಕಾಲ ಬಳಿ ಈ ನಾಯಿ ಬಂದು ನಿಂತಿತು. ಇದು ನಮ್ಮ ಮನೆಯಲ್ಲಿದ್ದ ರವಿ (ನಾಯಿಯ ಹೆಸರು) ನೆನಪಿಸಿತು. ಅಂಗಡಿಯಿಂದ ಬಿಸ್ಕೇಟ್ ಪ್ಯಾಕ್ ತೆಗೆದುಕೊಂಡೆ. ದಿಟ್ಟಿಸಿ ನೋಡುತ್ತಿತ್ತು. ಒಂದೊಂದೆ ಬಿಸ್ಕೇಟ್ ಹಾಕತೊಡಗಿದೆ. ಸಾವಧಾನವಾಗಿ ತಿನ್ನತೊಡಗಿತು. ಕತ್ತಲು ಕವಿಯತೊಡಗಿತು. ತುಸು ದೂರದಿಂದ ಮಳೆಮೋಡಗಳು ಧಾವಿಸಿ ಬರುತ್ತಿದ್ದವು. ತಂಗಿದ್ದ ಮನೆಗೆ ಹೋದೆ. ಕಾಡು ತನ್ನ ಸದ್ದನ್ನು ನಿಧಾನವಾಗಿ ಏರಿಸತೊಡಗಿತು. ಹತ್ತಿರದಲ್ಲೇ ನರಿಗಳು ಊಳಿಡತೊಡಗಿದವು. ಕಾಡೆಮ್ಮೆಗಳು ಸಹ ಬಹುದೂರದಲ್ಲೇನೂ ಇಲ್ಲ ಎಂಬುದು ಅವುಗಳ ಗುಟುರಿನಿಂದ ಗೊತ್ತಾಗತೊಡಗಿತು. ನಿದ್ರೆ ಕವಿಯಿತು.


ಬೆಳಗ್ಗೆ ಬೇಗನೆ ಎಚ್ಚರಾಯಿತು. ಕಾಡು ನಿಶಬ್ಬವಾಗಿತ್ತು. ಎದ್ದು ಹೊರಬಂದೆ. ಕವಿದಿದ್ದ ಮಂಜನ್ನು ಸೂರ್ಯರಶ್ಮಿ ಇನ್ನೂ ಬೇಧಿಸಿರಲಿಲ್ಲ. ಶೂ ಹಾಕಿಕೊಂಡೆ. ಬೆಟ್ಟ ಏರತೊಡಗಿದೆ. ಹಿಂದೆ ಯಾರೋ ಬರುತ್ತಿದ್ದಾರೆ ಎನಿಸಿತು. ತಿರುಗಿ ನೋಡಿದರೆ ಅದೇ ನಾಯಿ. ಅಲ್ಲಿ ಇಲ್ಲಿ ಮೂಸುತ್ತಾ ನಿಧಾನವಾಗಿ ಹಿಂಬಾಲಿಸತೊಡಗಿತು. ಅಷ್ಟರಲ್ಲಿ ಸೂರ್ಯ ದರುಶನ ನೀಡಿದ. ಕಾಡು – ಬೆಟ್ಟಗಳ ನಡುವೆ ಅವನನ್ನು ನೋಡುವುದೇ ಸೊಗಸು. ಅದು ಬರೀ ಬೆಳಕಲ್ಲ ಬೆರಗು.

ಕೈಯಲ್ಲಿ ಕ್ಯಾಮೆರಾವಿತ್ತು. ಒಂದರ ಮೇಲೊಂದು ಪೋಟೋ ಕ್ಲಿಕ್ಕಿಸತೊಡಗಿದೆ. ಆದರೇನು ನಮ್ಮ ಕಣ್ಣಿನ ಕ್ಯಾಮೆರಾದಲ್ಲಿ ಸೆರೆಯಾದ ಆ ಸೊಬಗನ ಚೆಲುವು, ಕ್ಯಾಮೆರಾದಲ್ಲಿ ಸೆರೆಯಾಗಲಾರದು. ಯಾವಾಗ ಅವ ಬಂದನ್ನೊ, ಮರೆಯಲ್ಲಿದ್ದ ಪಕ್ಷಿಗಳೆಲ್ಲ ತೆರೆಗೆ ಬರತೊಡಗಿದವು. ಮುಂಜಾನೆ ಎಂದರೆ ಅವುಗಳಿಗೂ ನಿತ್ಯ ಸಂಭ್ರಮ. ಪಕ್ಷಿಗಳನ್ನು ಕ್ಲಿಕ್ಕಿಸುತ್ತಾ ಬೆಟ್ಟ ಏರತೊಡಗಿದೆ.


ಸುತ್ತಲೂ ಕಾಫಿ ಎಸ್ಟೇಟುಗಳು. ಒಬ್ಬರ ಸುಳಿವು ಇಲ್ಲ. ನಿಧಾನವಾಗಿ ಬೆಟ್ಟ ಏರುತ್ತಿದ್ದವನಿಗೆ ಮೊದಲು ಕಿವಿಗೆ ಬಿದ್ದಿದ್ದು ನಾಯಿಗಳು ಬೊಗಳುವ ಸದ್ದು. ನನ್ನ ಹೆಜ್ಜೆ ತುಸು ನಿಧಾನವಾಯಿತು. ನಾಲ್ಕು ಹೆಜ್ಜೆ ಮುಂದೆ ಹೋಗಿರಬಹುದಷ್ಟೇ. ದೈತ್ಯಾಕಾರದ ಮೂರು ನಾಯಿಗಳು ಬೆಟ್ಟದ ತಿರುವು ದಾಟಿ ಪ್ರತ್ಯಕ್ಷವಾದವು. ಒಂದಕ್ಕಿಂತ ಒಂದು ವೇಗವಾಗಿ, ಧಾವಿಸತೊಡಗಿದವು. ನನಗೂ ಅವುಗಳಿಗೂ ಹತ್ತಾರು ಅಡಿ ದೂರವಿರಬಹುದು. ಓಡಿ ತಪ್ಪಿಸಿಕೊಳ್ಳೊಣ ಎಂದರೆ ಒಂದೆಡೆ ಕಡಿದಾದ ಪ್ರಪಾತ, ಇನ್ನೊಂದೆಡೆ ಏರುಬೆಟ್ಟ. ನಾಯಿಗಳು ಹಲ್ಲುಗಳನ್ನೆಲ್ಲ ಕಿರಿಯುತ್ತಾ ಹತ್ತಿರ ಬರತೊಡಗಿದಂತೆ ಈ ಪುಟ್ಟನಾಯಿ ಮುನ್ನೆಲೆಗೆ ಬಂತು.
ರೋಷ ಎಂದರೆ ಏನೆಂಬ ಪೂರ್ಣ ಪ್ರಮಾಣದ ದರುಶನವಾಯಿತು. ಇದು ಎಷ್ಟರ ಮಟ್ಟಿಗೆ ಹಲ್ಲು ಕಿರಿಯತೊಡಗಿತು ಎಂದರೆ ಒಂದು ಹಂತದಲ್ಲಿ ತನ್ನ ಹಿಂಗಾಲುಗಳ ಮೇಲೆ ನಿಂತಿತು. ಇದರ ಭೀಕರ ರೂಪದಿಂದ ಆ ಮೂರು ನಾಯಿಗಳೂ ಶಾಕ್. ಅವುಗಳು ಹತ್ತಿರ ಬರದೇ ಥಟ್ಟನೆ ನಿಂತವು. ಇವುಗಳು ಪರಸ್ಪರ ಗುರಾಯಿಸುತ್ತಿರುವಾಗಲೇ ಆ ನಾಯಿ ಸಾಕಿದಾತ ಓಡೋಡಿ ಬಂದು ಗದರಿಸಿದ ನಂತರವೂ ಆ ಮೂರು ನಾಯಿಗಳ ಗುರುಗುಟ್ಟುವಿಕೆ ಮುಂದುವರಿದಿತ್ತು.
“ಕಾಡಿನ ಹಾದಿ, ಏಕೆ ಒಬ್ಬರೇ ಬರೋಕ್ಕೊದ್ರಿ” ಎಂದ. ಏನು ಹೇಳಬೇಕೋ ನನಗೆ ಗೊತ್ತಾಗಲಿಲ್ಲ. “ಎಲ್ಲಿಂದ ಬಂದ್ರಿ”? ಹೇಳಿದೆ. . “ಸಾಕಷ್ಟು ದೂರ ಬಂದಿದ್ದಿರಿ; ವಾಪ್ಪಸ್ಸು ಹೋಗಿ ಎಂದುತ್ತರ. ಹಿಂದಿರುಗಿದೆ. ಈ ನಾಯಿ ಇಲ್ಲದಿದ್ದರೆ ನನ್ನಗತಿ ಚಿಂದಿ ಆಗುತ್ತಿತ್ತು. ಇದು ಮತ್ತೆ ಹಿಂಬಾಲಿಸತೊಡಗಿತು. ಬೆಟ್ಟದ ತಪ್ಪಲಿಗೆ ಬರುತ್ತಿದ್ದಂತೆಯೇ ಎತ್ತಲೋ ಹೋಗಿ ಮರೆಯಾಯಿತು.


ಪಟಾಕಿ ಕಟ್ಟುವ ಮುನ್ನ; ಕಲ್ಲೊಡೆಯುವ ಮುನ್ನ ಅವುಗಳ ನಿಯತ್ತು ನೆನಪಿಸಿಕೊಳ್ಳಿ: ಕೆಲವರು ನಾಯಿಗಳ ಬಾಲಕ್ಕೆ ಪಟಾಕಿ ಕಟ್ಟುವುದು, ಕಲ್ಲು ಬೀಸುವುದು ಮಾಡುತ್ತಾರೆ. ಅವುಗಳು ತೋರುವ ಪ್ರೀತಿಗೆ ಎಣೆಯಿಲ್ಲ. ಅವುಗಳಿಗೆ ಹಿಂಸೆ ಕೊಡುವ ಕಾರ್ಯ ಮಾಡಬೇಡಿ.

Similar Posts

Leave a Reply

Your email address will not be published. Required fields are marked *