ಮನೆಗೆ ಮಗು ಆಗಮನವಾದಾಗ ಎಷ್ಟೊಂದು ಸಂಭ್ರಮ ಇರುತ್ತದೆ ಅಲ್ಲವೇ ? ಅದನ್ನು ಯಾರಾದರೊಬ್ಬರು ನಿರಂತರವಾಗಿ ಗಮನಿಸುತ್ತಿರುತ್ತಾರೆ. ಸುರಕ್ಷಿತವಾಗಿ ನೋಡಿಕೊಳ್ಳುತ್ತಾರೆ. ರೈತರು ಸಾಕಣೆ ಮಾಡಿದ ಹಸು, ಎಮ್ಮೆ, ಹೆಣ್ಣುಕರು ಈಯ್ದರೆ ಅಷ್ಟೇ ಸಂಭ್ರಮಪಡುತ್ತಾರೆ. ಜತನದಿಂದ ನೋಡಿಕೊಳ್ಳುತ್ತಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ ತನ್ನ ನಾಲ್ಕು ಮರಿಗಳೊಂದಿಗೆ ಸಂಚರಿಸುತ್ತಿದೆ ಎಂದು ತಿಳಿದಾಗ ಕರ್ನಾಟಕದ ಅರಣ್ಯ ಇಲಾಖೆ ಇದೇ ರೀತಿಯ ಸಂಭ್ರಮವನ್ನು ಪಡಬೇಕಿತ್ತು. ಧಾಮದ ಎಲ್ಲ ರೇಂಜ್ ಗಳ ಗಾರ್ಡ್ ಗಳಿಂದ ಆರಂಭಿಸಿ ಡಿ.ಆರ್.ಎಫ್.ಒ., ಆರ್.ಎಫ್.ಒ. ಎ.ಸಿ.ಎಫ್. ಮತ್ತು ಡಿ.ಸಿ.ಎಫ್. ಸಿ.ಸಿ.ಎಫ್. ಗಳು ನಿರಂತರವಾಗಿ ಅವುಗಳ ಮೇಲೆ ನಿಗಾ ಇಡಬೇಕಿತ್ತು. ಏಕೆಂದರೆ ಈ ವನ್ಯಧಾಮವನ್ನು ಹುಲಿ ಸಂರಕ್ಷಿತಾರಣ್ಯ ಮಾಡಬೇಕೆಂಬ ಪ್ರಸ್ತಾಪವಾಗಿತ್ತು. ಇದೇನೂ ಜೀವ ಕಳೆದುಕೊಂಡಿಲ್ಲ. ಹೀಗಿದ್ದರೂ ವನ್ಯಜೀವಿಧಾಮದ ಅರಣ್ಯ ಉಪ ಸಂರಕ್ಷಣಾಧಿಕಾರಿ ಅರ್ಥಾತ್ ಡಿ.ಸಿ.ಎಫ್. ಆಗಿದ್ದ ಚಕ್ರಪಾಣಿ ಮೈ ಮರೆತರು. ಧಾಮದ ಮುಖ್ಯಸ್ಥನೇ ನಿದ್ರೆಗೆ ಜಾರಿದರೆ ಉಳಿದ ಸಿಬ್ಬಂದಿ ಏನು ಮಾಡುತ್ತಾರೆ ? ಅವರೂ ನಿದ್ದೆಗೆ ಜಾರುತ್ತಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಹೂಗ್ಯಂ ರೇಂಜಿಗೆ ಒಂದು ತಾಯಿ ಹುಲಿ ತನ್ನ ಐದು ಮರಿಗಳೊಂದಿಗೆ ಬಂದಿರುವುದು ಎಂ.ಎಂ.ಹಿಲ್ಸ್ ಅಭಯಾರಣ್ಯದ ಗಾರ್ಡ್ ಗಳಿಂದ ಹಿಡಿದು ಡಿ.ಸಿ.ಎಫ್. ತನಕ ಗೊತ್ತಾದರೂ ನಿಗಾ ವಹಿಸದೇ ಉಡಾಫೆ ಮಾಡಿದರು.
ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ 906 ಚದರ ಕಿಲೋಮೀಟರ್ ವ್ಯಾಪಿಸಿರುವ ಎಂಎಂ ಹಿಲ್ಸ್ ವನ್ಯಜೀವಿ ಅಭಯಾರಣ್ಯವು ಬಿಲಿಗಿರಿ ರಂಗಸ್ವಾಮಿ ಟೆಂಪಲ್ (ಬಿಆರ್ಟಿ) ಮತ್ತು ಸತ್ಯಮಂಗಲಂ ಹುಲಿ ಸಂರಕ್ಷಿತ ಧಾಮಗಳಿಗೆ ಸಂಪರ್ಕ ಕಲ್ಪಿಸುವ ನಿರ್ಣಾಯಕ ಹುಲಿ ಕಾರಿಡಾರ್ ಆಗಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮೂರು ಉಪ ವಿಭಾಗಗಳಿವೆ. ಇವುಗಳ ಕೆಳಗೆ ಬೇರೆಬೇರೆ ರೇಂಜ್ ಅಂದರೆ ಅರಣ್ಯ ವಲಯಗಳು ಬರುತ್ತವೆ. ಅವುಗಳನ್ನು ಮುಂದೆ ವಿವರಿಸಿದ್ದೀನಿ.
೧. ಹನೂರು – ಸಬ್ ಡಿವಿಷನ್
ಹನೂರು ರೇಂಜ್
ಹೂಗ್ಯಂ ರೇಂಜ್
ಪಾಲಾರ್ ರೇಂಜ್
ಮಲೆ ಮಹದೇಶ್ವರ ರೇಂಜ್
೨.ಕೊಳ್ಳೆಗಾಲ – ಸಬ್ ಡಿವಿಷನ್
ಕೊಳ್ಳೇಗಾಲ ಬಫರ್
ಪಿ.ಜಿ.ಪಾಳ್ಯ ರೇಂಜ್
೩.ಮಲೆ ಮಹದೇಶ್ವರ ಹಿಲ್ಸ್ – ಸಬ್ ಡಿವಿಷನ್
ಮಲೆ ಮಹದೇಶ್ವರ ಹಿಲ್ಸ್ ರೇಂಜ್
ಒಟ್ಟು ವನ್ಯಜೀವಿಧಾಮಕ್ಕೆ ಡಿ.ಸಿ.ಎಫ್. ಹಂತದ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಪ್ರತಿಯೊಂದು ಸಬ್ ಡಿವಿಷನಿಗೂ ಒಬ್ಬರು ಎ.ಸಿ.ಎಫ್. ಹಂತದ ಅಧಿಕಾರಿ ಮುಖ್ಯಸ್ಥರಾಗಿರುತ್ತಾರೆ. ಪ್ರತಿಯೊಂದು ರೇಂಜಿಗೂ ಒಬ್ಬ ರೇಂಜರ್ ಅಧಿಕಾರಿ, ಒಬ್ಬರು ಅಥವಾ ಇಬ್ಬರು ಡಿ.ಆರ್.ಎಫ್.ಒ.ಗಳು (ರೇಂಜಿನ ವಿಸ್ತೀರ್ಣಕ್ಕನುಸಾರವಾಗಿ) ಇವರ ಕೆಳಗೆ ಗಾರ್ಡ್ ಗಳು ಇರುತ್ತಾರೆ. ಇದಲ್ಲದೇ ಕಳ್ಳಬೇಟೆ ತಡೆ ಶಿಬಿರಗಳಲ್ಲಿ ಗಾರ್ಡ್ ಗಳಿರುತ್ತಾರೆ. ಪ್ರತಿ ಗಾರ್ಡ್ ಉಸ್ತುವಾರಿಯಲ್ಲಿ ಮೂವರು ವಾಚರ್ಸ್ ಇರುತ್ತಾರೆ.
ಮೀಣ್ಯಂ ಸಬ್ ರೇಂಜಿನಲ್ಲಿ ಮಾರಳ್ಳಿ ಕ್ಯಾಂಪ್ ಬರುತ್ತದೆ. (ಈ ಕ್ಯಾಂಪಿನ ವ್ಯಾಪ್ತಿಯಲ್ಲಿಯೇ ಹುಲಿಗಳ ಕಗ್ಗೊಲೆಗಳು ಆಗಿದೆ) ಈ ಕ್ಯಾಂಪಿನ ಗಾರ್ಡ್ ತನ್ನ ಉಸ್ತುವಾರಿಯಲ್ಲಿರುವ ಮೂವರು ವಾಚರ್ಸ್ ಜೊತೆ ಹಗಲು ಕಾಲ್ನಡಿಗೆಯಲ್ಲಿ ಗಸ್ತು ತಿರುಗಬೇಕು. ಈ ಸಂದರ್ಭದಲ್ಲಿ ವಾಚರ್ಸ್ ಲಭ್ಯತೆ ಇಲ್ಲದಿದ್ದರೆ ರೇಂಜ್ ಆಫೀಸರ್ ಬೇರೆ ಒಂದಿಬ್ಬರು ಗಾರ್ಡುಗಳನ್ನು ಜೊತೆ ಮಾಡಿ ಗಸ್ತಿಗೆ ಕಳಿಸಬೇಕಿತ್ತು. ಒಂದು ವೇಳೆ ಹೂಗ್ಯಂ ರೇಂಜಿನಲ್ಲಿ ಗಾರ್ಡ್ ಕೊರತೆಯಿದ್ದರೆ ಹನೂರು ಸಬ್ ಡಿವಿಷನ್ ಎ.ಸಿ.ಎಫ್. ಬೇರೆ ರೇಂಜ್ ಗಳಿಂದ ಗಾರ್ಡ್ ಗಳನ್ನು ಮಾರಳ್ಳಿ ರೇಂಜಿಗೆ ಕಳಿಸಬೇಕಿತ್ತು. ಹೀಗೆ ವ್ಯವಸ್ಥೆ ಮಾಡಿದ್ದಾರೋ ಇಲ್ಲವೋ ಎಂದು ಡಿ.ಸಿ.ಎಫ್. ಆಗಿದ್ದ ಚಕ್ರಪಾಣಿ ಗಮನಿಸಬೇಕಿತ್ತು.
ಇದ್ಯಾವ ವ್ಯವಸ್ಥೆಯೂ ಆಗಿಲ್ಲ. ಮಾರಳ್ಳಿ ರೇಂಜಿನ ಗಾರ್ಡ್ ಯಿಂದ ಹೂಗ್ಯಂ ರೇಂಜ್ ಆರ್.ಎಫ್.ಒ., ಹನೂರು ಸಬ್ ಡಿವಿಷನ್ ಎ.ಸಿ.ಎಫ್. ತನಕ ಎಲ್ಲರೂ ಅದಕ್ಷತೆ ಮತ್ತು ಬೇಜವಾಬ್ದಾರಿತನ ತೋರಿಸಿದ್ದಾರೆ. ಇದರ ಪರಿಣಾಮವಾಗಿಯೇ ಐದು ಹುಲಿಗಳು ದಾರುಣವಾಗಿ ಕಗ್ಗೊಲೆಯಾಗಿವೆ.
ತನ್ನ ಮರಿಗಳೊಂದಿಗೆ ಹೆಣ್ಣು ಹುಲಿ ಸಂಚರಿಸುತ್ತಿದೆ ಎಂದು ತಿಳಿದ ಕೂಡಲೇ ಅರಣ್ಯ ಇಲಾಖೆ ಅವುಗಳು ಎತ್ತ ಸಾಗುತ್ತಿವೆ, ತಾಯಿ ಹುಲಿ ಏನನ್ನು ಬೇಟೆಯಾಡಿದೆ, ಯಾವ ಕೆರೆಯಲ್ಲಿ ನೀರು ಕುಡಿಯುತ್ತಿದೆ. ಈ ಅಂಶಗಳನ್ನೆಲ್ಲ ದಾಖಲು ಮಾಡಬೇಕಿತ್ತು.
ಇದ್ಯಾವ ಕೆಲಸವೂ ಆಗಿಲ್ಲ. ಇದರ ಬದಲು ವಾಚರ್ಸ್ ಗಳು ಮೂರ್ನಾಲ್ಕು ತಿಂಗಳ ಸಂಬಳ ಸಿಗದೇ ಪ್ರತಿಭಟನೆ ಮಾಡುತ್ತಿದ್ದರು. ಆಗ ದುಷ್ಕರ್ಮಿಗಳು ಹಸುವಿನ ದೇಹಕ್ಕೆ ವಿಷ ಸಿಂಪಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ವಾಸ್ತವವಾಗಿ ಕೊಳ್ಳೇಗಾಲ ಡಿ.ಸಿ.ಎಫ್. ಕಚೇರಿ ಮುಂದೆ ವಾಚರ್ಸ್ ಪ್ರತಿಭಟಿಸಿದ ಒಂದು ವಾರದ ನಂತರ ಹಸುವಿಗೆ ವಿಷ ಹಾಕಿದ ದುರ್ಘಟನೆ ನಡೆದಿದೆ. ಅಂದರೆ ಏಳೆಂಟು ದಿನ ಮಾರಳ್ಳಿ ಕ್ಯಾಂಪ್ ವ್ಯಾಪ್ತಿಯಲ್ಲಿ ಗಸ್ತು ನಡೆದಿಲ್ಲ ಎಂಬುದು ಅರ್ಥವಾಗುತ್ತದೆಯಲ್ಲವೇ ?
ಒಂದು ವೇಳೆ ವಾಚರ್ಸ್ ಗಳ ಲಭ್ಯತೆ ಇಲ್ಲದಿದ್ದರೆ ಮೇಲೆ ವಿವರಿಸಿರುವ ಹಾಗೆ ಬೇರೆಬೇರೆ ಕ್ಯಾಂಪುಗಳ ಇಲ್ಲವೇ ಬೇರೆಬೇರೆ ರೇಂಜ್ ಗಳ ಇಬ್ಬರು ಗಾರ್ಡ್ ಗಳನ್ನು ಮಾರಳ್ಳಿ ಕ್ಯಾಂಪಿನ ಗಾರ್ಡಿನ ಜೊತೆ ಮಾಡಿ ಹುಲಿ ಮತ್ತದರ ನಾಲ್ಕು ಮರಿಗಳ ಮೇಲೆ ನಿಗಾ ಇಡಬಹುದಿತ್ತಲ್ಲವೇ ? ಇಂಥ ಮಹತ್ವದ ಕೆಲಸವನ್ನು ಮಾಡಿಲ್ಲ ಎಂದಾದ ಮೇಲೆ ಇಂಥ ಅಧಿಕಾರಿಗಳ ಅವಶ್ಯಕತೆಯಾದರೂ ಏನು ? ಇವರನ್ನು ಕಡ್ಡಾಯ ರಜೆ ಮೇಲೆ ಕಳಿಸುವ ಅಥವಾ ಸಸ್ಪೆಂಡ್ ಮಾಡುವ ಬದಲು ಸೂಕ್ತ ವಿಚಾರಣೆ ನಡೆಸಿ ಕೆಲಸದಿಂದಲೇ ವಜಾಗೊಳಿಸುವುದು ಸೂಕ್ತವಲ್ಲವೇ ?
ಬಾತ್ಮೀದಾರರ ಜೊತೆಗೆ ಸೌಹಾರ್ದ ಸಂಬಂಧವಿಲ್ಲ
ಮೀಣ್ಯಂ, ಮಾರಳ್ಳಿ ಕ್ಯಾಂಪುಗಳ ಗಾರ್ಡುಗಳು ಸನಿಹದ ಕೊಪ್ಪ ಸೇರಿದಂತೆ ಇತರ ಗ್ರಾಮಗಳ ನಿವಾಸಿಗಳೊಂದಿಗೆ ಸೌಹಾರ್ದಯುತ ಸಂಬಂಧವಿರಿಸಿಕೊಂಡಿದ್ದರೂ ಹುಲಿಯು ಹಸುವನ್ನು ಹಿಡಿದಿದ್ದು, ಹಸು ಸಾಕಣೆ ಮಾಡಿದಾತ ವಿಷ ಹಾಕಲು ಸಂಚು ನಡೆಸುತ್ತಿರುವ ವಿಷಯ ತಿಳಿಯುತ್ತಿತ್ತು. ಕನಿಷ್ಟ ಹಸುವನ್ನು ಬೇಟೆಯಾಡಿರುವ ವಿಷಯ ತಿಳಿದಿದ್ದರೂ ದುರ್ಘಟನೆ ತಪ್ಪಿಸಲು ಸಾಧ್ಯವಿತ್ತು. ಆದರೆ ಇವರು ಅಧಿಕಾರ ಮದದಿಂದ ವರ್ತಿಸುತ್ತಿರುವ ಕಾರಣ ಗ್ರಾಮಸ್ಥರೊಡನೆ ಸಂಬಂಧ ಚೆನ್ನಾಗಿಲ್ಲ.
ಆಗಿರುವ ನಷ್ಟ ಅಗಾಧ
ಹುಲಿಯಿದ್ದರೆ ಕಾಡು, ಕಾಡಿದ್ದರೆ ಮಳೆ, ಮಳೆ ಇದ್ದರೆ ಜನ ನೆಮ್ಮದಿಯಾಗಿರುತ್ತಾರೆ. ಹುಲಿಯ ಸುತ್ತ ಜೀವಜಾಲ ಹಬ್ಬಿದೆ. ಹೀಗಿರುವಾಗ ಇನ್ನೂ ಕೆಲವಾರು ಬಾರಿ ಮರಿಗಳಿಗೆ ಜನ್ಮ ನೀಡುವ ಸಾಮರ್ಥ್ಯವಿದ್ದ ತುಂಬು ಪ್ರಾಯದ ಹೆಣ್ಣು ಹುಲಿ, ಅದರ ಮೂರು ಹೆಣ್ಣು ಮರಿ ಹುಲಿಗಳು, ಒಂದು ಗಂಡು ಹುಲಿ ಕಗ್ಗೊಲೆಯಾಗಿ ಪ್ರಕೃತಿಗೆ ನಷ್ಟ ಉಂಟಾಗಿದೆ ಎಂಬುದನ್ನು ನೆನೆದರೂ ಆಕ್ರೋಶ ಉಂಟಾಗುತ್ತದೆ.