ಪೊಲೀಸು, ಅರಣ್ಯ ಇಲಾಖೆ, ಅಬಕಾರಿ ಇಲಾಖೆ, ತೆರಿಗೆ ಇಲಾಖೆಗೆ ಅವುಗಳದೇ ಆದ ಗುಪ್ತದಳಗಳಿರುತ್ತವೆ. ಇವುಗಳು ನೀಡುವ ಮಾಹಿತಿಗಳಿಗಿಂತ ಮಾಹಿತಿದಾರರು ನೀಡುವ ಮಾಹಿತಿಗಳೇ ಅಧಿಕ ಎಂದರೆ ಉತ್ಪ್ರೇಕ್ಷೆಯಾಗುವುದಿಲ್ಲ. ಇವರು ನೀಡುವ ಮಾಹಿತಿ ಆಧಾರದ ಮೇಲೆ ದಾಳಿ ನಡೆದಿರುತ್ತದೆ. ದೊರೆತ ಮಾಹಿತಿ ನಿಖರವಾಗಿದ್ದರೆ ನೀಡಿದವರಿಗೂ ಹಣದ ರೂಪದ ಪುರಸ್ಕಾರ ದೊರೆಯುತ್ತದೆ. ಈ ಸಂದರ್ಭದಲ್ಲಿಯೂ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡುತ್ತಾರೆ. ಇಡಲೇಬೇಕು. ಇದು ನೈತಿಕತೆ.
ಈ ನೈತಿಕತೆ ಇದ್ದರೆ ಮಾತ್ರ ಮಾಹಿತಿದಾರರಿಗೆ ಅಧಿಕಾರಿಗಳ ಬಗ್ಗೆ ನಂಬಿಕೆ ಇರುತ್ತದೆ. ತೊಂದರೆಗಳನ್ನು ತೆಗೆದುಕೊಂಡು ಮಾಹಿತಿ ನೀಡಲು ಮುಂದಾಗುತ್ತಾರೆ. ಇದೇ ರೀತಿ ಓರ್ವ ಮಾಹಿತಿದಾರ ನೀಡಿದ ಮಾಹಿತಿಗಳನ್ನು ಆಧರಿಸಿ ನಡೆದ ಕಾರ್ಯಾಚರಣೆಗಳಲ್ಲಿ ಹೆಚ್ಚಿನವು ಫಲಪ್ರದಾಯವಾಗಿದ್ದರೆ ಅಂಥವರ ಬಗ್ಗೆ ಅಧಿಕಾರಿಗಳಿಗೂ ನಂಬಿಕೆ ಬಂದಿರುತ್ತದೆ. ಹಾಗಾಗಿ ಇದು ಪರಸ್ಪರ ನಂಬಿಕೆ – ವಿಶ್ವಾಸದ ಮೇಲೆ ನಡೆಯುವ ಕಾರ್ಯ.
ಪ್ರಸ್ತುತ ಮಾಹಿತಿದಾರನೋರ್ವ ಅಧಿಕಾರಿ ಮೇಲೆ ಇಟ್ಟ ನಂಬಿಕೆ ಸುಳ್ಳಾಗುವಂಥ ದುರಾದೃಷ್ಟ ಪ್ರಕರಣ ನಡೆದಿದೆ. ಇದು ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಯಿಂದ ನಡೆದಿರುವ ನಂಬಿಕೆ ದ್ರೋಹದ ಪ್ರಕರಣವಾಗಿದೆ.
“ಹತ್ತು ದಿನಗಳ ಹಿಂದೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವನ್ಯಪ್ರಾಣಿಯನ್ನು ಬೇಟೆಯಾಡಿದ ಘಟನೆ ನಡೆದಿತ್ತು. ನಾಲ್ಕು ಬೇಟೆಗಾರರ ತಂಡವು ತಪ್ಪಿಸಿಕೊಳ್ಳಲು ಅರಣ್ಯ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿತು. ಅರಣ್ಯಾಧಿಕಾರಿಗಳು ಬೆನ್ನಟ್ಟಿದಾಗ ಬೇಟೆಗಾರರು ಮೋಟಾರ್ ಸೈಕಲ್ ಬಿಟ್ಟು ಪರಾರಿಯಾಗಿದ್ದರು. ಈ ನಂತರ ಮಾಹಿತಿದಾರ ನೀಡಿದ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ಮುಂದುವರಿಸಿದಾಗ ಬೇಟೆಗಾರರಲ್ಲಿ ಇಬ್ಬರು ನಾಗರಹೊಳೆಗೆ ಹೊಂದಿಕೊಂಡಿರುವ ಬುಡಕಟ್ಟು ವಸಾಹತು ಪ್ರದೇಶದಲ್ಲಿ ಪತ್ತೆಯಾಗಿದ್ದರು. ಆದರೂ ಅವರ ಬಂಧನವಾಗಿರಲಿಲ್ಲ. ಇದರಿಂದ ಬೇಸರಗೊಂಡ ಮಾಹಿತಿದಾರ ಈ ಘಟನೆ ಸಂಬಂಧ ಅರಣ್ಯ ಸಚಿವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು” ಎಂದು ಖ್ಯಾತ ಪರಿಸರವಾದಿ ಜೋಸೆಫ್ ಹೂವರ್ ಹೇಳಿದ್ದಾರೆ.
ತರುವಾಯ, ಅರಣ್ಯ ಸಚಿವರ ಕಚೇರಿಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಅರಣ್ಯ) ಅವರಿಗೆ ಈ ವಿಷಯವನ್ನು ಪರಿಶೀಲಿಸುವಂತೆ ಸೂಚಿಸಿತು. ಇವರು ಎಸಿಎಸ್ ಮುಖ್ಯ ವನ್ಯಜೀವಿ ವಾರ್ಡನ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರ ಬರೆದರು.
ಅರಣ್ಯ ಇಲಾಖೆಯಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಹುದ್ದೆಯೂ ಬಹು ಮುಖ್ಯವಾದ ಕಾರ್ಯ ನಿರ್ವಾಹಕ ಹುದ್ದೆ. ಸಹಜವಾಗಿಯೇ ಮೇಲಾಧಿಕಾರಿಗಳು ಬರೆದ ಪತ್ರ ಇವರಿಗೂ ರವಾನೆಯಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿರುತ್ತದೆ. ಈ ಪತ್ರ ಬಂದಾಗ ನಾಗರಹೊಳೆ ಆರ್.ಎಫ್.ಒ. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಬದಲಾಗಿ ಅರಣ್ಯ ಸಚಿವರಿಗೆ ಮಾಹಿತಿದಾರ ಪತ್ರ ಬರೆದಿದ್ದ ಸಂಗತಿಯನ್ನು ಆರೋಪಿಗಳು ಇದ್ದ ಬುಡಕಟ್ಟಿನ ಮುಖ್ಯಸ್ಥರಿಗೆ ಬಹಿರಂಗಪಡಿಸಿದ್ದಾರೆ. ಪತ್ರ ಬರೆದವರು ಯಾರೆಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಅರಣ್ಯಾಧಿಕಾರಿಗೆ ಮಾಹಿತಿದಾರ ನೀಡಿರುವ ಮಾಹಿತಿ ಬಹಿರಂಗಪಡಿಸಿರುವುದು ಸೂಕ್ತವಲ್ಲ. ಹೀಗೆ ಆದರೆ ಯಾವ ಮಾಹಿತಿದಾರರು ಮಾಹಿತಿ ನೀಡಲು ಮುಂದಾಗುತ್ತಾರೆ ಎಂದು ಪ್ರಶ್ನಿಸಿರುವ ಜೋಸೆಫ್ ಹೂವರ್ ಅವರು ಈ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಅರಣ್ಯ ಇಲಾಖೆ ಮಾಹಿತಿ ನೀಡುತ್ತಿದ್ದ ಮಾಹಿತಿದಾರ ಮತ್ತು ಅಕ್ರಮ ಬೇಟೆಗಾರರ ಜೊತೆ ಇದ್ದ ವ್ಯಕ್ತಿಗಳೂ ಒಂದೇ ಅರಣ್ಯದ ಬುಡಕಟ್ಟಿನವರು. ಇಂಥ ಪರಿಸ್ಥಿತಿಯಲ್ಲಿ ವಲಯ ಅರಣ್ಯ ಅಧಿಕಾರಿ ಉದ್ದೇಶಪೂರ್ವಕವಾಗಿ ಮಾಹಿತಿದಾರ ಬರೆದ ಪತ್ರವನ್ನು ಬುಡಕಟ್ಟು ನಾಯಕರೊಂದಿಗೆ ಹಂಚಿಕೊಂಡರೇ ಆ ಮಾಹಿತಿದಾರರ ಪರಿಸ್ಥಿತಿ ಏನಾಗಬಹುದು.
ತಮ್ಮದೇ ಬುಡಕಟ್ಟಿನ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ ಎಂಬ ಕಾರಣಕ್ಕೆ ಬುಡಕಟ್ಟು ಸಮುದಾಯದ ವ್ಯಕ್ತಿಗಳು ಸಹಜವಾಗಿಯೇ ಸಿಟ್ಟಿಗೇಳುತ್ತಾರೆ. ಆತನಿಗೆ ಸಾಮಾಜಿಕ ಬಹಿಷ್ಕಾರ ಹಾಕುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ಅಥವಾ ಆತನಿಂದ ಅಂತರ ಕಾಯ್ದುಕೊಳ್ಳಬಹುದು. ಮಾಹಿತಿ ನೀಡಿದ ಎಂಬ ಕಾರಣಕ್ಕೆ ಆರೋಪಿಗಳು ಆಕ್ರೋಶಗೊಳ್ಳುತ್ತಾರೆ. ಇದು ಯಾವುದೇ ರೀತಿಯಲ್ಲಿಯೂ ಪರ್ಯವಸನಗೊಳ್ಳಬಹುದು.
ಇಷ್ಟೆಲ್ಲ ಅನಾಹುತಗಳಿಗೆ ನಾಗರಹೊಳೆ ವಲಯ ಅರಣ್ಯಧಿಕಾರಿ ನಡೆ ಅವಕಾಶ ಮಾಡಿಕೊಟ್ಟಿದೆ. ಹೀಗೆ ಆದರೆ ಮುಂದೆ ಯಾವ ಮಾಹಿತಿದಾರರು ಸಹ ಕಾಡುಗಳ್ಳರು, ವನ್ಯಜೀವಿ ಬೇಟೆಗಾರರ ಬಗ್ಗೆ ರಹಸ್ಯ ಮಾಹಿತಿ ನೀಡಲು ಮುಂದಾಗುವುದಿಲ್ಲ. ಇದರಿಂದ ಸಹಜವಾಗಿ ಅರಣ್ಯ ಮತ್ತು ವನ್ಯಪ್ರಾಣಿಗಳ ಸಂರಕ್ಷಣೆಗೆ ತೊಂದರೆಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಕರ್ತವ್ಯಲೋಪ, ವಿಶ್ವಾಸದ್ರೋಹ ಎಸಗಿದ ಅರಣ್ಯಧಿಕಾರಿ ಮೇಲೆ ಇಲಾಖೆ ಸೂಕ್ತ ಕ್ರಮ ಜರುಗಿಸುವುದು ಅಗತ್ಯ. ಇಂಥ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಿಸಬಾರದು. ಇದರ ಬಗ್ಗೆ ಅರಣ್ಯ ಸಚಿವರು ಶೀಘ್ರವಾಗಿ ಕ್ರಮ ಕೈಗೊಳ್ಳುವರೇ ?
ನಾಗರಹೊಳೆಯಲ್ಲಿ ಕೆಲವು ಮಾವುತರು ಮತ್ತು ಕವಾಡಿಗಳು ನಿಯಮಿತವಾಗಿ ಜಿಂಕೆ ಮತ್ತಿತರ ವನ್ಯಪ್ರಾಣಿಗಳನ್ನು ಬೇಟೆಯಾಡಿ ಆನೆ ಶಿಬಿರಗಳಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಇದರ ಬಗ್ಗೆಯೂ ತನಿಖೆಯಾಗಿ ಆರೋಪ ನಿಜವಾಗಿದ್ದರೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

Similar Posts

Leave a Reply

Your email address will not be published. Required fields are marked *