ಅಭಿವೃದ್ಧಿ ಎಂಬ ಮರೀಚಿಕೆಯ ಬೆನ್ನು ಬಿದ್ದಿದ್ದೇವೆ. ರಾಮ, ಮಾಯಾಜಿಂಕೆಯ ಬೆನ್ನುಹತ್ತಿದ ಹಾಗೆ. ಅದು ಸಿಕ್ಕೇಬಿಟ್ಟಿತು ಎನಿಸುತ್ತದೆ. ಆದರೆ ಸಿಗುವುದಿಲ್ಲ. ಈಗ ಜಗತ್ತಿನ ಮುಂದಿರುವ ಅಭಿವೃದ್ಧಿಯೂ ಇದೇ ಮಾದರಿಯದು. ಲಕ್ಷಾಂತರ ಕೋಟಿ ರೂಪಾಯಿಗಳ ವೆಚ್ಚದ ದೊಡ್ಡದೊಡ್ಡ ಯೋಜನೆಗಳನ್ನು ರೂಪಿಸಲಾಗುತ್ತದೆ. ಅವುಗಳನ್ನು ಜಾರಿಗೊಳಿಸಲು ಅಧಿಕಾರ ಹಿಡಿದವರು, ಅಧಿಕಾರಿಗಳಿಗೆ ಎಲ್ಲಿಲ್ಲದ ಉತ್ಸಾಹ. ಆದರೆ ಕೊನೆಗೆ ಯಾರ ಅಭಿವೃದ್ಧಿ ಆಯಿತು ಎಂಬುದೇ ಪ್ರಶ್ನೆ. ಇದಕ್ಕೆ ಉತ್ತರ ನಮ್ಮೆಲ್ಲರಿಗೂ ಗೊತ್ತಿದೆ.
ಈ ಮಾದರಿಯ ಯೋಜನೆಗಳು ಮತ್ತು ಅಭಿವೃದ್ಧಿಯ ವಾಖ್ಯಾನಗಳಿಗೆ ಗಾಂಧಿ ಅವರಲ್ಲಿ ಹೇವರಿಕೆಯಿತ್ತು. ಇಂಥವೆಲ್ಲ ಜನಸಾಮಾನ್ಯರ ಅಭಿವೃದ್ಧಿಯನ್ನು ಮಾಡುವುದಿಲ್ಲ ಎಂಬ ಬಗ್ಗೆ ಅವರಿಗೆ ಖಾತರಿಯೂ ಇತ್ತು. ಇವೆಲ್ಲದರ ಜೊತೆಗೆ ಅವುಗಳು ಪರಿಸರದ ಮೇಲೆ ಉಂಟು ಮಾಡುವ ಅನಾಹುತಗಳ ಬಗ್ಗೆಯೂ ಅರಿವಿತ್ತು. ಕಾರಣ ಏನೆಂದರೆ ಯುರೋಪ್ ಮತ್ತು ಅಮೆರಿಕಾ ಮಾದರಿಯ ಅಭಿವೃದ್ಧಿಗಳು ಮಾಡತೊಡಗಿದ ಅಪಾಯಗಳನ್ನು ಅವರು ಗಮನಿಸುತ್ತಿದ್ದರು.
ಪ್ರಸ್ತುತ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಎನ್ನುವುದು ಹೆಚ್ಚಿನವರನ್ನು ಕಾಡುತ್ತಿರುವ ವಿಷಯ. ಜಾಗತಿಕ ತಾಪಮಾನ ಏರಿಕೆ ಉಂಟಾಗುತ್ತಿದೆ. ಅದರ ಅನಾಹುತಗಳು ಈಗಾಗಲೇ ಗೋಚರಿಸುತ್ತಿವೆ. ಅತಿವೃಷ್ಟಿ, ಅನಾವೃಷ್ಟಿ ತತ್ಪರಿಣಾಮದ ಭೀಕರ ಬರಗಳು ಉಂಟಾಗುತ್ತಿವೆ. ಜನರ ಜೊತೆಗೆ ಸರ್ಕಾರಗಳು ಕೂಡ ತತ್ತರಿಸಿವೆ.
ಇಂಥ ಸಂದರ್ಭದಲ್ಲಿ ಗಾಂಧಿ ವಿಚಾರಧಾರೆ ಬೆಳಕಾಗಿ ಕಾಣಿಸುತ್ತದೆ. ಪರಿಸರ ಸಂರಕ್ಷಣೆ ಸಾಧ್ಯ ಎಂಬ ಭರವಸೆ ಮೂಡಿಸುತ್ತದೆ. ಗಾಂಧಿ ತಮ್ಮ ಅನೇಕ ಕೃತಿಗಳಲ್ಲಿ ಅಭಿವೃದ್ಧಿ ಎಂಬ ಬಗ್ಗೆ ವಾಖ್ಯಾನಗಳನ್ನು ನಡೆಸಿದ್ದಾರೆ. ಪರಿಸರ ಸಂರಕ್ಷಣೆ ಎಂಬ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಕೊಳ್ಳುಬಾಕತನದ ಸಂಸ್ಕೃತಿ: ಗಾಂಧಿ ತಮ್ಮ ಹಿಂದ್ ಸ್ವರಾಜ್ ಕೃತಿಯಲ್ಲಿ “ಪಾಶ್ಚಿಮಾತ್ಯ ಮಾದರಿಯ ನಾಗರಿಕತೆಯನ್ನು ಭಾರತಕ್ಕೆ ಆವಾಹಿಸಿಕೊಳ್ಳುವುದೆಂದರೆ ಭಸ್ಮಾಸುರನನ್ನು ಬರಮಾಡಿಕೊಂಡಂತೆ” ಎಂದಿದ್ದಾರೆ. “ಪಾಶ್ಚಿಮಾತ್ಯ ನಾಗರಿಕತೆಯೆಂದರೆ ಕೊಳ್ಳುಬಾಕತನದ ಸಂಸ್ಕೃತಿ. ಮನುಷ್ಯರ ದುರಾಶೆಗಳನ್ನು ಈಡೇರಿಸಲು ಮಾಡುತ್ತಿರುವ ಅನೇಕ ಕಾರ್ಯಗಳು. ಇದನ್ನೇ ಅವರು ಅಭಿವೃದ್ಧಿ ಎಂದು ಭಾವಿಸಿಕೊಂಡಂತಿದೆ. ಇಂಗ್ಲೆಡ್ ಮಾದರಿಯ ಅಭಿವೃದ್ಧಿ ನಮಗೆ ಬೇಡ. ಅದು ತನ್ನ ಅಭಿವೃದ್ಧಿಗಾಗಿ ಭಾರತವೂ ಸೇರಿದಂತೆ ಬೇರೆಬೇರೆ ರಾಷ್ಟ್ರಗಳ ಸಂಪನ್ಮೂಲಗಳನ್ನು ದೋಚುತ್ತಿದೆ. ಭಾರತವೂ ಆ ಮಾದರಿಯಲ್ಲಿಯೇ ಹೋಗುವುದಾದರೆ ಅದೆಷ್ಟು ಗ್ರಹಗಳ ಸಂಪನ್ಮೂಲಗಳು ಬರಿದಾಗಬೇಕೊ” ಎಂದು ಒಂದು ಸಂದರ್ಭದಲ್ಲಿ ಹೇಳಿದ್ದಾರೆ.
“ಕೈಗಾರಿಕಾ ಸಮಾಜ ನಮ್ಮ ಮುಂದೆ ಎಂಥ ಕಲ್ಪನೆಯನ್ನು ಇರಿಸುತ್ತದೆ ಎಂದರೆ ಬರಿದಾಗದ ಸಂಪನ್ಮೂಲಗಳೇ ನಮ್ಮಲ್ಲಿ ಇವೆ ಎಂದು. ಪಶ್ಚಿಮದ ನಾಗರೀಕತೆ ತನ್ನ ದುರಾಶೆಯನ್ನು ಈಡೇರಿಸಿಕೊಳ್ಳಲು ಪ್ರಕೃತಿಯ ಮೇಲೆ ಸವಾರಿ ಹೊರಟಿದೆ” ಇದು ಪಾಶ್ಚಿಮಾತ್ಯ ಪರಿಕಲ್ಪನೆಯ ಅಭಿವೃದ್ಧಿಯ ಕುರಿತು ಗಾಂಧಿ ಕಂಡ ಗ್ರಹಿಕೆಗಳು. ಅದೀಗ ಸಂಪೂರ್ಣ ನಿಜವಾಗಿರುವುದನ್ನು ನೋಡುತ್ತಿದ್ದೇವೆ.
ಪ್ರಕೃತಿಯ ಮೇಲೆ ಸವಾರಿ: ನಮಗೆಲ್ಲ ಆಧುನಿಕ ಮಾದರಿಯ ಉಡುಗೆ-ತೊಡುಗೆ, ಯಂತ್ರೋಪಕರಣಗಳು ಬೇಕು. ಇದಕ್ಕಾಗಿ ದೊಡ್ಡದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಲಾಗಿದೆ. ಬಟ್ಟೆಗೆ ಹಾಕಲಾಗುವ ಕಲರ್ ಅಪಾಯಕಾರಿ ರಾಸಾಯನಿಕಗಳನ್ನು ಆಧರಿಸಿದ್ದು. ಬಟ್ಟೆ ಸಂಸ್ಕರಣೆ ನಂತರ ಅದರ ಕೊಳೆಯನ್ನೆಲ್ಲ ಸಮೀಪದಲ್ಲಿ ಇರುವ ಕೆರೆಗೊ, ಹೊಳೆಗೊ, ನದಿಗೊ ಬಿಡಲಾಗುತ್ತದೆ. ಬೇರೆಬೇರೆ ಮಾದರಿಯ ಕಾರ್ಖಾನೆಗಳು ಹೀಗೆ ತಮ್ಮ ಕೊಳೆಯನ್ನೆಲ್ಲ ಹೊರಬಿಡುತ್ತವೆ. ಇದರಿಂದ ಕೆರೆ, ಹೊಳೆ, ನದಿಗಳು ಕಲುಷಿತವಾಗುತ್ತವೆ.
ಉತ್ತರಪ್ರದೇಶದ ಗಂಗಾನದಿ, ಕರ್ನಾಟಕದ ತುಂಗಾಭದ್ರಾ ಹೀಗೆ ಅನೇಕ ನದಿಗಳು ಕಾರ್ಖಾನೆಗಳ ಮಲಿನವನ್ನೆಲ್ಲ ಒಡಲಿಗೆ ಸೇರಿಸಿಕೊಂಡು ಸಂಪೂರ್ಣ ಕಲುಷಿತವಾಗಿರುವುದನ್ನು ಕಾಣುತ್ತಿದ್ದೇವೆ. ಬೆಂಗಳೂರಿನ ಬೆಳ್ಳಂದೂರು ಕೆರೆಯ ನೊರೆ, ಬೆಂಕಿಯನ್ನು ಒಮ್ಮೆ ಕಣ್ಣಮುಂದೆ ತಂದುಕೊಳ್ಳಿ. ಈ ಮಹಾನಗರವೂ ಸೇರಿದಂತೆ ಯಾವ ನಗರಗಳ ಕೆರೆಗಳ ನೀರು ಇಂದು ಶುದ್ಧವಾಗಿಲ್ಲ. ನಮ್ಮೆಲ್ಲ ಮನೆಗಳ ಕೊಳಕು ನೀರು ಚರಂಡಿ ಮೂಲಕ ಅಲ್ಲಿಗೆ ಹರಿದುಹೋಗುತ್ತಿದೆ.
ಇದರಿಂದಾಗಿ ಆಗುತ್ತಿರುವ ಅನಾಹುತಗಳು ತಿರುಗುಬಾಣಗಳಂತೆ ನಮ್ಮತ್ತಲೇ ಬರುತ್ತಿವೆ. ಕೆರೆ, ಹೊಳೆ, ನದಿಗಳ ನೀರು ಅಶುದ್ಧವಾಗಿದ್ದರಿಂದ ಜಲಚರಗಳು ಸಾವನ್ನಪ್ಪುತ್ತಿವೆ. ಅಂತರ್ಜಲ ಕಲುಷಿತವಾಗಿದೆ. ಇದೇ ನೀರನ್ನು ಬಳಸಿಕೊಂಡು ಬೆಳೆ ಬೆಳೆಯುತ್ತಿರುವುದರಿಂದ ಆಹಾರಧಾನ್ಯಗಳು, ತರಕಾರಿ-ಹಣ್ಣುಗಳ ಮೇಲೆಲ್ಲ ದುಷ್ಪರಿಣಾಮಗಳು ಉಂಟಾಗಿವೆ. ಇಂಥ ತರಕಾರಿಗಳನ್ನು ಮಾನವ ಸಮುದಾಯ ಸೇವಿಸಿದಾಗ ಅದರ ಪರಿಣಾಮ ಏನಾಗಬಹುದು ಯೋಚಿಸಿ. ಸಮುದ್ರಗಳ ಬಳಿಯಿರುವ ನಗರಗಳು, ಮಹಾನಗರಗಳಿಗೂ ತಮ್ಮ ಕೊಳಕನ್ನೆಲ್ಲ ಸಲೀಸಾಗಿ ಹೊರತಳ್ಳಲು ಸಮುದ್ರವೇ ಸುಲಭೋಪಾಯವಾಗಿದೆ. ಇದರಿಂದ ಅಲ್ಲಿನ ಜಲಚರಗಳ ಮೇಲೆ ಎಂಥಾ ದುಷ್ಪರಿಣಾಮ ಉಂಟಾಗಿರಬಹುದು ?
ಹಲವೆಡೆ ಅಂತರ್ಜಲವೂ ಕಲುಷಿತವಾಗಿದೆ. ಭೂಮಿಯ ಮೇಲ್ಮೈಯಲ್ಲಿ ನಿಂತ ಕೊಳಕು, ರಾಸಾಯನಿಕ ಮಿಶ್ರಿತ ನೀರು ಹಂತಹಂತವಾಗಿ ಕೆಳಗಿಳಿದು ಅಂತರ್ಜಲವನ್ನೂ ಕಲುಷಿತಗೊಳಿಸಿವೆ/ ಹಲವೊಮ್ಮೆ ಇದೇ ನೀರನ್ನು ಮೇಲೆತ್ತಿ ಕುಡಿಯುತ್ತೇವೆ. ಕಾರ್ಖಾನೆಗಳ ಕೊಳಕು ಕೂಡ ಸಲೀಸಾಗಿ ಅಂತರ್ಜಲ ಸೇರಿದೆ; ಸೇರುತ್ತಿದೆ. ಇದರಿಂದ ಸುತ್ತಣ ವಾತಾವರಣದ ಮೇಲೆ ಅಪಾರ ದುಷ್ಪರಿಣಾಮವಾಗಿದೆ.
ಪ್ರತಿಯೊಬ್ಬರಿಗೂ ವಾಹನಗಳು ಬೇಕು. ಅನೇಕರ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಬೈಕು, ಕಾರುಗಳಿವೆ. ರಸ್ತೆಗಳಲ್ಲಿ ಕಿಂಚಿತ್ತೂ ಜಾಗವಿಲ್ಲದಂತೆ ಇವುಗಳು ಭರ್ತಿಯಾಗಿವೆ. ಇವುಗಳಿಂದ ಹೊರಹೊಮ್ಮುವ ಹೊಗೆ ವಾತಾವರಣದಲ್ಲಿ ಸೇರಿಕೊಂಡು ಸೇವಿಸುವ ಗಾಳಿಯನ್ನು ಮಲಿನ ಮಾಡಿವೆ. ಇದರಲ್ಲಿ ಕಾರ್ಖಾನೆಗಳು ಬಿಡುವ ಹೊಗೆಯ ಪಾಲೂ ಇದೆ. ಇವೆಲ್ಲದರ ಪರಿಣಾಮ ಮಹಾನಗರಗಳ ವಾಯುಮಾಲಿನ್ಯ ಜೀವಗಳ ಸೇವನೆಗೆ ಅಯೋಗ್ಯವಾಗಿದೆ. ಹೀಗೆ ಶುದ್ಧವಾಯುವನ್ನು ಅಯೋಗ್ಯ ಮಾಡಿದ್ದು ಯಾವುದು. ಅದೇ ಮನುಷ್ಯಕೇಂದ್ರಿತ ಅಭಿವೃದ್ಧಿಯೇ ಅಲ್ಲವೇ…
ಅಭಿವೃದ್ಧಿ ಅಭಿವೃದ್ಧಿ ಎಂಬ ಕೂಗು ಹೆಚ್ಚುತ್ತಲೇ ಇರುವುದರಿಂದ ಹೆಚ್ಚುತ್ತಿರುವ ವಾಹನಗಳಿಗಾಗಿ ರಸ್ತೆಗಳೂ ಹೆಚ್ಚೆಚ್ಚೂ ಅಗಲೀಕರಣಗೊಳ್ಳುತ್ತಿವೆ. ಮೇಲ್ಸೆತುವೆಗಳು ಬರುತ್ತಲೇ ಇವೆ. ಇವುಗಳಿಗಾಗಿ ಮರಗಳು ಬಲಿದಾನ ಮಾಡುತ್ತಲೇ ಇವೆ. ಕಾಡಿನ ರಸ್ತೆಗಳಿಂದಲೂ ಇದೇ ಪರಿಸ್ಥಿತಿ. ಬರೀ ರಸ್ತೆ ಅಗಲೀಕರಣದಿಂದ ಮಾತ್ರವಲ್ಲ; ಹೆಚ್ಚಿದ ವಿವಿಧೋದ್ದೇಶಗಳ ಬೇಡಿಕೆಗಳಿಂದಾಗಿ ಕಾಡುಗಳ ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರಾಣಿಗಳು ಜನವಸತಿಯತ್ತ ಬಂದು ಗುಂಡಿಗೆ ತುಂಡಿಗೆ ಬಲಿಯಾಗುತ್ತಿವೆ. ಅವುಗಳ ಚರ್ಮಗಳು ಉಳ್ಳವರ ಮೈಮೇಲೆ ಏರಿವೆ.
ಮೋಹನ ಕರಮಚಂದ ಗಾಂಧಿ ಅವರು ಮನುಷ್ಯನ ಮೂಲಭೂತ ಅವಶ್ಯಕತೆಗಳು ಪ್ರಕೃತಿಯಿಂದ ಈಡೇರಿಸಿಕೊಳ್ಳುದರ ಬಗ್ಗೆ ಅಸಹನೆ ಹೊಂದಿರಲಿಲ್ಲ. ಆದರೆ ಇದಕ್ಕೂ ಮೀರಿದ ಬೇಡಿಕೆಗಳ ಬಗ್ಗೆ ಅವರಿಗೆ ಸಿಟ್ಟಿತ್ತು. ಭೂಮಿಯ ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಳ್ಳಬೇಕು. ಅವುಗಳು ಮುಂದಿನ ಪೀಳಿಗೆಗಳವರಿಗೂ ಉಳಿಯಬೇಕು ಎಂಬುದು ಅವರ ಕಾಳಜಿಯಾಗಿತ್ತು. ಆದರೆ ಇಂಥ ಕಾಳಜಿಯನ್ನು ಯಾವ ಸರ್ಕಾರಗಳು, ಆ ಸರ್ಕಾರಗಳನ್ನು ರಚಿಸುವ ಜನತೆಯೂ ಹೊಂದಿರದ ಕಾರಣ ಮನುಷ್ಯಕೇಂದ್ರಿತ ಅಭಿವೃದ್ಧಿ ಜೀವಕೇಂದ್ರಿತ ಅಭಿವೃದ್ಧಿಯಾಗದೇ ವಿರೋಧಿಯಾಗಿದೆ. ಈ ಜೀವ ಎನ್ನುವುದರ ವ್ಯಾಪ್ತಿಯಲ್ಲಿರುವ ಮನುಷ್ಯರಿಗೂ ಅಪಾಯಕಾರಿಯಾಗಿದೆ. ತಮಾಷೆಯೆಂದರೆ ಮನುಷ್ಯರು ತಾವು ಜೀವಜಾಲದಿಂದ ಹೊರಗಿರುವವರು ಎಂದು ಭಾವಿಸಿಕೊಂಡಿರುವುದು.
ಬಳ್ಳಾರಿಯ ಗಣಿಗಾರಿಕೆಯನ್ನೇ ತೆಗೆದುಕೊಳ್ಳಿ. ಸುಮಾರು 500 ವರ್ಷಗಳ ಅವಧಿಯಲ್ಲಿ ಮಾಡಬಹುದಾಗಿದ್ದ ಅದಿರಿನ ಗಣಿಕಾರಿಕೆಯನ್ನು ಕೇವಲ ಏಳೆಂಟು ವರ್ಷದ ಅವಧಿಯಲ್ಲಿ ಮಾಡಲಾಗಿದೆ ಎಂದು ಅಭಿಪ್ರಾಯಪಡಲಾಗುತ್ತಿದೆ. ಹಾಗಿದ್ದರೆ ಪ್ರಕೃತಿಯ ಮೇಲೆ ಒಂದೇಬಾರಿಗೆ ಎಂಥ ದಾಳಿಯಾಗಿರಬಹುದು ಊಹಿಸಿಕೊಳ್ಳಿ. ಭೂಮಿಯಲ್ಲಿ ಮುಂದಿನ ತಲೆಮಾರುಗಳೂ ಇರುತ್ತವೆ ಎಂದು ಕೂಡ ಯೋಚಿಸದೇ ಮಾಡಿದ ಗಣಿಗಾರಿಕೆಯಿದು. ಎಂಥಾ ಕ್ರೌರ್ಯವಲ್ಲವೇ ಇದು… ಗಣಿಗಾರಿಕೆಯ ತ್ಯಾಜ್ಯ ಮಳೆಬಿದ್ದಾಗ ಸಲೀಸಾಗಿ ಕೊಚ್ಚಿಕೊಂಡು ಬಂದು ಕೆರೆ-ಕುಂಟೆ, ಜಲಾಶಯಗಳನ್ನು ಸೇರಿದೆ. ಇದರಿಂದ ಅವುಗಳು ಸಾಮರ್ಥ್ಯವೂ ಕುಗ್ಗಿದೆ.
ತಮ್ಮ ಅಭಿವೃದ್ಧಿ ತಮಗೆ ಮುಳುವಾಗುತ್ತಿವೆ ಎಂಬುದನ್ನು ಒಂದಷ್ಟು ಪಾಶ್ಚಿಮಾತ್ಯ ದೇಶಗಳು ಗ್ರಹಿಸಿವೆ. ಇದರಿಂದಾಗಿಯೇ ಪರಿಸರ ಸಂರಕ್ಷಣೆ ವಿಚಾರದಲ್ಲಿ ಮೋಹನ ಕರಮಚಂದ ಗಾಂಧಿ ಹೇಗೆ ಬೆಳಕಾಗಬಲ್ಲರು ಎಂಬುದರ ಬಗ್ಗೆ ಅಲ್ಲಿನ ಜನ ನಮಗಿಂತ ಮುಂಚೆಯೇ ಚಿಂತಿಸಿದ್ದಾರೆ. ಈ ದಿಕ್ಕಿನಲ್ಲಿ ಅಲ್ಲಿ ಸಾಕಷ್ಟು ಕೆಲಸಗಳು ಕೂಡ ನಡೆಯುತ್ತಿವೆ. ಜಾಗತಿಕ ಪರಿಸರ ಕ್ಷೇತ್ರದ ಮೇಲೆ ಗಾಂಧಿ ಅವರು ಗಮನಾರ್ಹ ಪ್ರಭಾವ ಬೀರಿದ್ದಾರೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮಕ್ಕೆ ಪ್ರಚಾರ ಸಾಧನದ ಘೋಷವಾಕ್ಯವನ್ನಾಗಿ ಗಾಂಧಿ ಅವರ ಈ ಮುಂದಿನ ಘೋಷಣೆಯನ್ನು ಬಳಸಿಕೊಳ್ಳಲಾಗಿದೆ.
“ಭೂಮಿ ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸಬಲ್ಲುದು. ಆದರೆ ಅವರ ದುರಾಶೆಯನ್ನಲ್ಲ” ಅಮೆರಿಕಾ ಸರ್ಕಾರದ ಅಧಿಕೃತ ರೇಡಿಯೋ ಕೇಂದ್ರವೂ ಸಹ “ತನ್ನ ಭೂಗ್ರಹ ರಕ್ಷಣೆಯ ಪಂದ್ಯ” ಕುರಿತ ಟಿವಿ ಕಾರ್ಯಕ್ರಮದಲ್ಲಿ ಇದೇ ಘೋಷವಾಕ್ಯವನ್ನು ಬಳಸಿಕೊಂಡಿದ್ದನ್ನು ಗಮನಿಸಬಹುದು.
ಅಂತರಾಷ್ಟ್ರೀಯ ಹಸಿರು ಚಳವಳಿ (ಗ್ರೀನ್ ಮೂವಮೆಂಟ್) ಕೂಡ ಗಾಂಧಿ ಚಳವಳಿ ಪ್ರಭಾವವನ್ನು ಒಪ್ಪಿಕೊಂಡಿರುವುದು ಗಮನಾರ್ಹ. ಜರ್ಮನಿಯ ಗ್ರೀನ್ ಪಕ್ಷದ ಸ್ಥಾಪಕಿ ಪೆಟ್ರಕೆಲ್ಲಿ ಈ ಬಗ್ಗೆ ಹೇಳಿದ್ದಾರೆ. “ನಮ್ಮ ರಾಜಕೀಯ ಕಾರ್ಯದ ನಿರ್ದಿಷ್ಟ ಕ್ಷೇತ್ರದಲ್ಲಿ ನಮ್ಮ ಮೇಲೆ ಗಾಂಧಿ ಅವರು ಅಪಾರ ಪ್ರಭಾವ ಉಂಟು ಮಾಡಿದ್ದಾರೆ. “ಕಚ್ಚಾ ಪದಾರ್ಥಗಳ ಅಪರಿಮಿತ ಸರಬರಾಜು ಹಾಗೂ ಬಳಕೆಯನ್ನು ಆಧರಿಸಿದ ಜೀವನಶೈಲಿ ಮತ್ತು ಉತ್ಪಾದನಾ ವಿಧಾನಗಳು. ಈ ಕಚ್ಚಾವಸ್ತುವನ್ನು ಇತರ ದೇಶಗಳಿಂದ ಹಿಂಸೆಯ ಮೂಲಕ ಕಿತ್ತುಕೊಳ್ಳುವಂಥ ಉದ್ದೇಶವನ್ನು ಉಂಟು ಮಾಡುತ್ತದೆ. ತದ್ವಿರುದ್ಧವಾಗಿ ಜೀವಪರಿಸ್ಥಿತಿ ಶಾಸ್ತ್ರಕ್ಕೆ ಅನುಗುಣವಾದ ಜೀವನಶೈಲಿ ಹಾಗೂ ಅರ್ಥವ್ಯವಸ್ಥೆ ಅಂಗವಾಗಿ ಕಚ್ಚಾವಸ್ತುಗಳನ್ನು ಜವಾಬ್ದಾರಿಯುತವಾಗಿ ಬಳಸಿದಲ್ಲಿ ನಮ್ಮ ಹೆಸರಿನಲ್ಲಿ ಹಿಂಸೆಯ ಧೋರಣೆಯನ್ನು ಅನುಸರಿಸುವ ಅಪಾಯ ಕಡಿಮೆಯಾಗುತ್ತದೆ”
ಈ ಮಾತುಗಳಲ್ಲಿರುವ ಆಂತರ್ಯವನ್ನು ನಾವು ಗಮನಿಸಬೇಕು. ಯಾವುದೇ ದೇಶದ ನಾಗರಿಕ ಸಮಾಜ ಕೊಳ್ಳುಬಾಕ ಸಂಸ್ಕೃತಿ ಬೆಳೆಸಿಕೊಂಡರೆ ಅಲ್ಲಿನ ಸರ್ಕಾರಗಳು ಅವುಗಳನ್ನು ಹೇಗಾದರೂ ಈಡೇರಿಸುವ ಒತ್ತಡಕ್ಕೆ ಸಿಲುಕುತ್ತವೆ. ಪೆಟ್ರೊಲ್, ಡೀಸೆಲ್ ಗಾಗಿ ಅಮೆರಿಕಾ, ಕೊಲ್ಲಿಯ ಕೆಲವು ರಾಷ್ಟ್ರಗಳ ಮೇಲೆ ಯುದ್ದ ಮಾಡಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಪರಿಸರ ಎಂದರೆ ದೂರದ ಅಂಟಾರ್ಟಿಕಾದಲ್ಲಿ ಬೃಹತ್ ನಿರ್ಗಲ್ಲುಗಳು ಜಾಗತಿಕ ತಾಪಮಾನದಿಂದ ಕರಗುತ್ತಿರುವುದರ ಬಗ್ಗೆ ಚಿಂತನೆ ಮಾಡಿ ನಮ್ಮ ತಲೆಯ ತಾಪಮಾನವನ್ನು ಹೆಚ್ಚಿಸಿಕೊಳ್ಳುವುದು ಮಾತ್ರ ಅಲ್ಲ. ನಮ್ಮ ಸುತ್ತಲಿನ ಪರಿಸರ ಹೇಗಿದೆ ಎಂಬುವುದು ಕೂಡ ಮುಖ್ಯ. ಇದು ಹೇಗೆಂದರೆ “ಮನೆಗೆದ್ದು ಮಾರುಗೆಲ್ಲು” ಅಂತಾರಲ್ಲ ಹಾಗೆ. ಗಾಂಧಿ ಈ ಕುರಿತು ತೀವ್ರವಾಗಿ ಚಿಂತನೆ ನಡೆಸಿದ್ದರು. ಸಮಸ್ಯೆಗಳನ್ನು ಎತ್ತಿ ಹೇಳುವುದರ ಬಗ್ಗೆಯಷ್ಟೆ ಅವರ ಗಮನ ಇರಲಿಲ್ಲ. ಅವುಗಳನ್ನು ಪರಿಹರಿಸುವ ಬಗ್ಗೆಯೂ ಅವರು ಚಿಂತನೆ ನಡೆಸುತ್ತಿದ್ದರು. ನಮ್ಮ ಸುತ್ತಲಿನ ಪರಿಸರ ಚೆನ್ನಾಗಿರಬೇಕು ಎಂಬುದು ಅವರ ಆದ್ಯತೆಯಾಗಿತ್ತು. ಭೂಮಿ, ನೀರು, ಅಗ್ನಿ,ವಾಯು, ಆಕಾಶ ಇವುಗಳನ್ನು ಗೌರವಿಸುವುದೆಂದರೆ ನಮಸ್ಕರಿಸುವುದಷ್ಟೆ ಅಲ್ಲ ಎಂದು ಅವರು ಅರಿತಿದ್ದರು. ಅವುಗಳ ಪಾವಿತ್ರ್ಯತೆ ಕಾಪಾಡಬೇಕು. ಅದು ನಮ್ಮ ಕರ್ತವ್ಯ ಎಂದವರು ನಂಬಿದ್ದರು.
ಗಾಂಧಿ ಅವರು ತಮ್ಮ ಅರ್ಥವಿಚಾರದಲ್ಲಿ ನಮ್ಮ ಸುತ್ತಲಿನ ಪರಿಸರದ ಬಗ್ಗೆಯೂ ಚಿಂತನೆ ಮಾಡಿದ್ದಾರೆ. “ಹಳ್ಳಿಯಲ್ಲಿ ಗಮನ ಕೊಡಬೇಕಾಗಿರುವುದು ಕೆರೆಗಳು ಮತ್ತು ಬಾವಿಗಳ ಶುದ್ದೀಕರಣ. ಅವುಗಳನ್ನು ಶುದ್ದವಾಗಿ ಇಟ್ಟಿರುವುದರ ಜೊತೆಗೆ ಕಸದ ರಾಶಿಗಳನ್ನು ತೆಗೆದು ಹಾಕುವದರ ಮುಖಾಂತರ ಕಾರ್ಯಕರ್ತರು ತಾವೇ ಕೂಲಿ ಪಡೆವ ಭಂಗಿಗಳಂತೆ ಭಾವಿಸಿಕೊಂಡು ದಿನದಿನವೂ ಕೆಲಸಕ್ಕೆ ತೊಡಗಬೇಕು. ಕಡೆಗೆ ಜನ ಇವೆಲ್ಲವನ್ನೂ ತಾವೇ ಮಾಡಿಕೊಂಡು ಹೋಗುವಂತೆ ಆಗಬೇಕು. ಶೀಘ್ರವಾಗಿಯೊ, ತಡವಾಗಿಯೊ ಹಳ್ಳಿಗರು ಸಹಕರಿಸಿಯೇ ಸಹಕರಿಸುತ್ತಾರೆ”
“ಓಣಿಗಳಲ್ಲೂ, ಬೀದಿಗಳಲ್ಲಿಯೂ ಇರುವ ಕಸ ಗುಡಿಸಬೇಕು. ಗೊಬ್ಬರವಾಗುವಂಥ ಕಸ ಇರುತ್ತದೆ. ಹೂತಿ ಬಿಡಬೇಕಾದ ಕಸ ಉಂಟು. ಕೂಡಲೇ ಸಂಪತ್ತಾಗಿ ಪರಿವರ್ತನೆಯಾಗಬಲ್ಲ ಕಸವೂ ಉಂಟು. ಕೈಗೆ ಸಿಗುವ ಪ್ರತಿ ಎಲುಬಿನ ತುಣುಕಿನಿಂದಲೂ ಏನಾದರೊಂದು ವಸ್ತು ಮಾಡಬಹುದು. ಪುಡಿ ಮಾಡಿದರೂ ಉತ್ತಮ ಗೊಬ್ಬರವಾಗುತ್ತದೆ ಚಿಂದಿ ಬಟ್ಟೆ, ಹರಕು ಕಾಗದಗಳಿಂದ ಉತ್ತಮ ಕಾಗದ ತಯಾರಿಸಬಹುದು. ಕ್ರಮಬದ್ಧರೀತಿಯಲ್ಲಿ ಗೊಬ್ಬರವಾಗುವಂತೆ ಮಾಡಿದ ಮಲ ಹೊಲಕ್ಕೆ ಬಂಗಾರದಂಥ ಗೊಬ್ಬರ. ದಿನವೊಂದಕ್ಕೆ ಆರುಲಕ್ಷ ರೂಪಾಯಿ ಬೆಲೆಬಾಳುವಷ್ಟು ಗೊಬ್ಬರ ಹಾಳಾಗುತ್ತಿದೆ. ಗಾಳಿ ಕೆಡಿಸುತ್ತಿದೆ. ರೋಗ ಬರಿಸುತ್ತದೆ. ಇಂಥದಕ್ಕೆಲ್ಲ ಅವಕಾಶ ಮಾಡಿಕೊಡಬಾರದು”
ಹಳ್ಳಿಗಳಲ್ಲಿ ಮಲವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರತ್ತ ಗಾಂಧಿ ವಿವೇಚಿಸಿರುವುದರಲ್ಲಿ ವೈಜ್ಞಾನಿಕ ಚಿಂತನೆಯಿದೆ. ಇದರಿಂದ ಪರಿಸರ ಮಲಿನವಾಗದೇ ಉಳಿಯುತ್ತದೆ. ಬೆಳೆಗಳಿಗೆ ಬೇಕಾದ ಗೊಬ್ಬರದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಮಲವನ್ನು ಅವರು ಹಣದ ರೂಪದಲ್ಲಿ ಲೆಕ್ಕ ಹಾಕುವುದನ್ನು ನೋಡಿದಾಗ ಅದರ ಮೌಲ್ಯ ಅರಿವಾಗುತ್ತದೆ. ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿಗಳನ್ನು ರಾಸಾಯನಿಕ ಗೊಬ್ಬರಗಳನ್ನು ಖರೀದಿಸಲು ಸುರಿಯುತ್ತಿವೆ. ಇಂಥ ಸಂದರ್ಭದಲ್ಲಿ ಗಾಂಧಿ ಚಿಂತನೆ ಅನುಷ್ಠಾನ ಎಷ್ಟೊಂದು ಪ್ರಮಾಣದ ಹಣ ಉಳಿಸಬಹುದು ಎಂಬುದರ ಅರಿವು ಮೂಡಿಸುತ್ತದೆ..
“ಹಳ್ಳಿಗಳಲ್ಲಿ ಕೆರೆಗಳನ್ನು ಸ್ನಾನಕ್ಕೆ, ಬಟ್ಟೆ ಒಗೆಯಲು, ಕುಡಿಯಲು, ಅಡುಗೆಗೆ ಎಲ್ಲಕ್ಕೂ ವಿವೇಚನೆಯಿಲ್ಲದೇ ಬಳಸುತ್ತಾರೆ. ಎಷ್ಟೋ ಹಳ್ಳಿಯ ಕೆರೆಗಳನ್ನು ದನಕರುಗಳೂ ಬಳಸುತ್ತವೆ. ಎಮ್ಮೆಗಳು ಖುಷಿಯಾಗಿ ಅಲ್ಲೇ ಬಿದ್ದಿರುತ್ತವೆ. ಹಳ್ಳಿಗಾಡಿನಲ್ಲಿ ಕೆರೆಗಳನ್ನು ಇಷ್ಟು ಪಾಪಕರವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಹಳ್ಳಿಗರು ಅನುಭವಿಸುತ್ತಿರುವ ಅನೇಕ ರೋಗರುಜಿನಗಳಿಗೆ ಶುದ್ಧನೀರಿನ ಪೂರೈಕೆ ಕುರಿತ ಅಲಕ್ಷ್ಯವೇ ಕಾರಣವೆಂದು ವೈದ್ಯರು ಹೇಳುತ್ತಾರೆ”
ರಾಸಾಯನಿಕ ಕೀಟನಾಶಕ ಮತ್ತು ಗೊಬ್ಬರ: ಇವೆರಡೂ ಪರಿಸರದ ಮೇಲೆ ಉಂಟು ಮಾಡಿರುವ ಅನಾಹುತಗಳು ಅಪಾರ. ಸೂಕ್ಷ್ಮವಾದ ಜೀವವೈವಿಧ್ಯತೆಯನ್ನು ಸಾಕಷ್ಟು ಹಾಳುಗೆಡುವುದರಲ್ಲಿ ಇವುಗಳು ಯಶಸ್ವಿಯಾಗಿವೆ. ಗಾಂಧಿ ಬದುಕಿದ್ದ ಕಾಲಘಟ್ಟದಲ್ಲಿಯೇ ಇವುಗಳ ಬಳಕೆ ಆರಂಭವಾಗಿತ್ತು. “ಒಣಬೂದಿಯೂ ಪ್ರಾಯಶಃ ರಾಸಾಯನಿಕ ಕ್ರಿಮಿನಾಶಕದಷ್ಟೆ ಪರಿಣಾಮಕಾರಿ” ಎಂಬ ಮಾತನ್ನು ಅವರು ತಮ್ಮ ಅರ್ಥವಿಚಾರ ಕೃತಿಯಲ್ಲಿ ಹೇಳಿದ್ದಾರೆ. ರಾಸಾಯನಿಕ ಕೀಟನಾಶಕದ ಅನಾಹುತಗಳ ಬಗ್ಗೆ ತಿಳಿದಿರುವ ವ್ಯಕ್ತಿ ಮಾತ್ರ ಇಂಥ ಮಾತನ್ನು ಹೇಳಬಲ್ಲವರಾಗಿದ್ದರು.
ರಾಸಾಯನಿಕ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳು ಪರಿಸರವನ್ನು ಹಾಳು ಮಾಡುತ್ತವೆ. ಭೂಮಿ ಮತ್ತು ಮನುಷ್ಯರ ಉತ್ಪಾದಕ ಶಕ್ತಿಯನ್ನು ಕುಗ್ಗಿಸುತ್ತವೆ ಎಂದು ಅವರು ಮನಗಂಡಿದ್ದರು. ಆದ್ದರಿಂದಲೇ ಬೂದಿ ಮಾಡಬಹುದಾದ ಕೆಲಸಕ್ಕೆ ರಾಸಾಯನಿಕ ಕೀಟನಾಶಕ ಬಳಸಬೇಕೆ ಎನ್ನುವಂಥ ಮಾತನ್ನು ಹೇಳಿದ್ದು. ಕೃಷಿಗೆ ಬಳಸುವ ರಾಸಾಯನಿಕಗಳು ಮಣ್ಣು, ಭೂಮಿಯ ಮೇಲ್ಮೈಯಲ್ಲಿರುವ ನೀರಿನ ಮೂಲಗಳು, ಅಂತರ್ಜಲ, ವಾಯುವನ್ನು ಕಲುಷಿತಗೊಳಿಸುತ್ತವೆ. ಇವುಗಳನ್ನು ಬಳಸುವುದು ಮನುಷ್ಯರ ಆರೋಗ್ಯಕ್ಕೂ ಹಾನಿ ಎಂಬುದನ್ನು ಗಾಂಧಿ ಮನಗಂಡಿದ್ದರು.
ಸಾವಯವ ಗೊಬ್ಬರದ ಬಗ್ಗೆ ಅವರು ಹೇಳುವ ಮಾತುಗಳು ಹೀಗಿವೆ: “ಭಾರತೀಯ ಸಮುದಾಯವು ಇಚ್ಚಾಪೂರ್ವಕವಾಗಿ ಸಹಕಾರ ನೀಡಿದರೆ ಈ ದೇಶವು ಆಹಾರದ ಕೊರತೆಯನ್ನು ದೂರ ಓಡಿಸಬಲ್ಲುದು. ಭಾರತಕ್ಕೆ ಅಗತ್ಯಕ್ಕಿಂತಲೂ ಹೆಚ್ಚಾಗಿ ಆಹಾರವನ್ನು ಒದಗಿಸಬಹುದು. ಸಾವಯವ ಗೊಬ್ಬರವು ಎಂದೆಂದೂ ಮಣ್ಣನ್ನು ಸಮೃದ್ಧಗೊಳ್ಳಿಸುತ್ತದೆಯೇ ವಿನಃ ನಿಸ್ಸಾರಗೊಳಿಸುವುದಿಲ್ಲ. ದಿನನಿತ್ಯದ ತ್ಯಾಜ್ಯವಸ್ತುಗಳನ್ನು ಮತ್ತು ಅದನ್ನು ಮಣ್ಣಿಗೆ ಪ್ರಶಸ್ತ ಗೊಬ್ಬರದ ರೂಪದಲ್ಲಿ ಹಿಂದಿರುಗಿಸಿದರೆ ಮಿಲಿಯಗಟ್ಟಲೆ ರೂಪಾಯಿಗಳನ್ನು ಉಳಿಸಬಹುದು. ಧಾನ್ಯಗಳ ಮತ್ತು ಕಾಳುಗಳ ಒಟ್ಟು ಫಸಲನ್ನು ಅನೇಕಪಟ್ಟು ಹೆಚ್ಚಿಸಬಹುದು. ವಿವೇಕಯುಕ್ತವಾಗಿ ತ್ಯಾಜ್ಯವಸ್ತುಗಳನ್ನು ಬಳಸಿಕೊಳ್ಳುವುದರಿಂದ ಸುತ್ತಮುತ್ತಲ ಆವರಣವನ್ನೂ ಚೊಕ್ಕಟವಾಗಿಡಬಹುದು. ಶುಚಿತ್ವ ಎನ್ನುವುದು ದೈವಶ್ರದ್ಧೆಯ ನಂತರ ಮಹತ್ವದ ಸ್ಥಾನವನ್ನು ಪಡೆದಿರುವುದರ ಜೊತೆಯಲ್ಲಿಯೇ ಅದು ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗಿರುತ್ತದೆ.”
ಕೈಗಾರೀಕಿಕರಣದ ಅಪಾಯಗಳ ಬಗ್ಗೆಯೂ ಗಾಂಧಿ ಅಪಾರ ಚಿಂತನೆ ನಡೆಸಿದ್ದರು. ಅಗತ್ಯವಾಗಿ ಬೇಕಾಗಿದ್ದ ಕೈಗಾರಿಕೆಗಳ ಬಗ್ಗೆ ಅವರಿಗೆ ವಿರೋಧವಿರಲಿಲ್ಲ. ಆದರೆ ಕೈಗಾರೀಕೀಕರಣ ನಮ್ಮೆಲ್ಲ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂಬುದರ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಇದರಿಂದಲೇ ನಿರುದ್ಯೋಗ ನಿವಾರಣೆಯಾಗುತ್ತದೆ ಎಂಬುದು ಬರೀ ಭ್ರಮೆ ಎಂದು ಅವರು ನಂಬಿದ್ದರು. ಇದಕ್ಕೆ ಅವರು ಇಂಗ್ಲೆಡಿನ ಉದಾಹರಣೆಯನ್ನೂ ಕೊಡುತ್ತಾರೆ.
“ಭಾರಿಪ್ರಮಾಣದ ಕೈಗಾರೀಕಿಕರಣವೂ ಖಂಡಿತವಾಗಿಯೂ ಗ್ರಾಮವಾಸಿಗಳ ಶೋಷಣೆಗೆ ಸುಲಭ. ಅದು ವ್ಯವಹಾರಕ್ಕೆ ದಾರಿ ಮಾಡಿಕೊಡುತ್ತದೆ. ಕೇವಲ ಬಳಕೆಗೆ ಆದರೆ ಗ್ರಾಮವಾಸಿಗಳು ಆಧುನಿಕ ಯಂತ್ರಸಾಧನ ಬಳಸಬಹುದು. ಶರೀರ ಶ್ರಮವನ್ನು ಕಡಿಮೆ ಮಾಡುವ ಯಂತ್ರ ಬೇಕೆಂಬ ಭ್ರಾಂತಿ ಈಗ ಬೆಳೆಯುತ್ತಿದೆ. ದುಡಿತ ಕಡಿಮೆಯಾಗಿ ಸಾವಿರಾರು ಜನ ಹಸಿವಿನಿಂದ ಸಾಲಾಗಿ ಬೀದಿಯಲ್ಲಿ ಬಿದ್ದಿದ್ದಾರೆ. ಹತ್ತುಜನಕ್ಕೆ ದುಡಿತ ಕಡಿಮೆ ಮಾಡುವ ಉದ್ದೇಶವಲ್ಲ ನನ್ನದು. ಇಡೀ ಮಾನವಕೋಟಿಗೆ ದುಡಿಮೆ ದೊರೆಯಬೇಕೆಂದು ಬಯಸುತ್ತೇನೆ”
“ಎಲ್ಲಜನರ ಕೈಯಲ್ಲಿ ಹಣ ಸೇರಲಿ ಎಂಬುದು ನನ್ನ ಬಯಕೆ. ಯಂತ್ರಗಳಿಂದ ಸಾವಿರಾರು ಜನರ ಬೆನ್ನಮೇಲೆ ಒಂದು ಹಿಡಿಜನರು ಸವಾರಿ ಮಾಡುವ ಹಾಗಾಗಿದೆ. ಇದೆಲ್ಲದರ ಹಿಂದಿನ ಉದ್ದೇಶ ದುಡಿಮೆ ಕಡಿಮೆ ಮಾಡುವ ಔದಾರ್ಯವಲ್ಲ. ಲೋಭವನ್ನು ನಿರಾಕರಿಸುವುದು. ಇದನ್ನು ನಾನು ಸಹಿಸಲಾರೆ. ನನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ಈ ಪರಿಯ ನಿರ್ಮಾಣವನ್ನು ವಿರೋಧಿಸುತ್ತೇನೆ.
ಪ್ರಶ್ನೆ: ಹಾಗಾದರೆ ಯಂತ್ರ ಬೇಡವೆಂದಲ್ಲ ನೀವು ಹೇಳುವುದು; ಈಗ ಬೆಳೆದು ಹೋಗಿರುವ ಯಂತ್ರದ ದುರುಪಯೋಗವನ್ನು ಅಲ್ಲವೆ?
ಗಾಂಧಿ ಉತ್ತರ: ನಿಸ್ಸಂದೇಹವಾಗಿ ಹೌದು ಎನ್ನಬಲ್ಲೆ. ಒಂದುಮಾತು ನೆನಪಿನಲ್ಲಿಡಬೇಕು, ವಿಜ್ಞಾನದ ಸತ್ಯಸೂತ್ರಗಳು, ಶೋಧಗಳು, ಲೋಭದ ಸಾಧನಗಳಾಗಿರಬಾರದು. ಇದು ನಿಲ್ಲಬೇಕು. ಆಗ ಕೂಲಿಕಾರರಿಗೆ ಈ ಅತಿದುಡಿತ ತಪ್ಪೀತು. ಯಂತ್ರ ಪ್ರತಿಕೂಲವಾಗುವ ಬದಲು ಅನುಕೂಲವಾದೀತು. ಯಂತ್ರವೆಂಬುದೇ ಹಾಳಾಗಲಿ ಎಂಬುದಲ್ಲ ನನ್ನಗುರಿ. ಅದಕ್ಕೊಂದು ಪರಿಮಿತಿಯಿರಲಿ ಎಂಬುದಾಗಿದೆ.
ಈ ಮಾತುಕಥೆಯಿಂದ ಗಾಂಧೀಜಿ ಅತ್ಯವಶ್ಯಕವಾದ ವೈಜ್ಞಾನಿಕ ಸಂಶೋಧನೆ, ಯಂತ್ರಗಳ ವಿರೋಧಿಯಾಗಿರಲಿಲ್ಲ ಎಂಬುದು ಮನದಟ್ಟಾಗುತ್ತದೆ. ಅಭಿವೃದ್ಧಿಯೆಂಬುದು ಇಡೀ ಜೀವಜಾಲವನ್ನು ಗಮನದಲ್ಲಿಟ್ಟುಕೊಂಡಿರಬೇಕು. ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ತರಬಾರದು. ಮನುಷ್ಯರು ತಾವೂ ಪ್ರಕೃತಿಯ ಭಾಗವಾಗಿಯೇ ಯೋಚಿಸಬೇಕು ಎಂಬುದು ಅವರ ಕಾಳಜಿಯಾಗಿತ್ತು.
ಗಾಂಧಿಜೀ ಪರಿಸರ ಚಿಂತನೆಯ ತಿರುಳೇ ಇದೆಂದೂ ಮನುಷ್ಯ ಕೇಂದ್ರಿತವಾಗಿರಬಾರದು. ಮನುಷ್ಯರು ತಾವು ಸಹ ಈ ಜೀವಜಾಲದ ಒಂದು ಭಾಗ, ಕೊಂಡಿ ಎಂದು ಭಾವಿಸಬೇಕು ಎಂಬುದು ಅವರ ಇರಾದೆಯಾಗಿತ್ತು. ಈ ಪರಿಯಾಗಿ ಮನುಷ್ಯ ಮತ್ತು ಪರಿಸರದ ಅವಿನಾಭಾವ ಸಂಬಂಧಗಳ ಬಗ್ಗೆ ಚಿಂತನೆ ಮಾಡಿದವರು ವಿರಳ. ಇಂದು ಇಂಥ ಚಿಂತನೆಗಳನ್ನು ನಿರಾಕರಿಸಿದ ಪರಿಣಾಮ ಏನಾಗಿದೆ ? ಮನುಷ್ಯಕೇಂದ್ರಿತ ಅಭಿವೃದ್ಧಿ ಮನುಷ್ಯರಿಗೆ ಮುಳುವಾಗಿದೆ. ಇಂಥವುಗಳನ್ನು ಮುಂಚಿತವಾಗಿಯೇ ಗಾಂಧಿ ಗ್ರಹಿಸಿದ್ದರು. ಈ ಎಲ್ಲ ಕಾರಣಕ್ಕಾಗಿಯೂ ಅವರು ಅಂದಿಗೂ- ಇಂದಿಗೂ-ಮುಂದಿಗೂ ಪ್ರಸ್ತುತ.
*ಗಾಂಧಿ ಚಿಂತನೆ ಅರಿಯುವ ಬಗೆಗಳು’ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧ
*ಕೋಟ್ಸ್ ನಲ್ಲಿ ಇರುವ ಗಾಂಧಿ ಅವರ ಕೆಲವು ಮಾತುಗಳನ್ನು ಅನುವಾದಿತ ಪುಸ್ತಕಗಳಿಂದ ತೆಗೆದುಕೊಳ್ಳಲಾಗಿದೆ. ಈ ಅನುವಾದಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ.