ಕೆಲವೊಮ್ಮೆ ಅಪೂರ್ವ, ಅನನ್ಯ ಕ್ಲೀಷೆ ಎನಿಸುವುದುಂಟು ! ಆದರೆ ಕೆಲವಾರು ಸಾಧಕರ ಕುರಿತು ಮಾತನಾಡುವಾಗ ಆ ಪದಗಳ ಅರ್ಥವ್ಯಾಪ್ತಿಯೂ ಕಿರಿದಾಯಿತೇನೊ ಎನಿಸದಿರದು. ನಟ- ಚಿತ್ರಕಥೆಗಾರ – ನಿರ್ದೇಶಕ ಗುರುದತ್ ಈ ಸಾಲಿಗೆ ಸೇರಿದವರು. ಇವರು ನಿರ್ದೇಶಿಸಿದ ಸಿನೆಮಾಗಳು ಭಾರತೀಯ ಚಿತ್ರರಂಗದ ಚಿರಂತನ ಚಿತ್ರಕಾವ್ಯಗಳು. ಸಿನೆಮಾ ಸಹ ಕಾವ್ಯವೇ ಎಂದು ನಿರೂಪಿಸಿದವರ ಜೊತೆಜೊತೆ ನಿಲ್ಲುವ ಗುರುದತ್ ಪ್ರೇಕ್ಷಕರಲ್ಲಿ ಸಂತಸವನ್ನೂ, ದುಗುಡವನ್ನೂ ಒಟ್ಟೊಟ್ಟಿಗೆ ತುಂಬಿದರು. ಇವರ ಕೆಲವು ಸಿನೆಮಾ ನೋಡಿದ ನಂತರ ಬಹಳ ಹೊತ್ತು ಮನಸು ಭಾರವಾಗುತ್ತದೆ
ವಸಂತ್ ಕುಮಾರ್ ಶಿವಶಂಕರ್ ಪಡುಕೋಣೆ ಇದು ಕನ್ನಡಿಗ ಗುರುದತ್ ಅವರ ಪೂರ್ವ, ಪೂರ್ಣ ನಾಮಧೇಯ. ನಂತರ ಗುರುದತ್ ಪಡುಕೋಣೆ ಎಂದು ಹೆಸರು ಬದಲಾಯಿಸಿದರು. ಇವರ ತಂದೆ – ತಾಯಿ ಮೂಲತಃ ಪಡುಕೋಣೆಯವರು. ನಂತರ ಬೆಂಗಳೂರು, ಕೊಲ್ಕೊತ್ತಾಕ್ಕೆ ಸ್ಥಳಾಂತರಗೊಂಡರು. ಕೊಲ್ಕೊತ್ತಾದಲ್ಲಿ ಶಿಕ್ಷಣ, ಅಲ್ಮೋರಾದಲ್ಲಿ ನೃತ್ಯ ಶಿಕ್ಷಣ. ನೃತ್ಯ ಸಂಯೋಕರಾಗಿಯೂ ಗುರುತು. ಪುನಾ ನಗರದ ಪ್ರಭಾತ್ ಸ್ಟುಡಿಯೋ ಸೇರಿದರು. ಅಲ್ಲಿ ನಟ ಹಾಗೂ ನೃತ್ಯ ಸಂಯೋಜಕ.
ಖ್ಯಾತ ನಟ ದೇವಾನಂದ್ ಅವರ ನವಕೇತನ್ ಇಂಟರ್ನ್ಯಾಷನಲ್ ಫಿಲ್ಮ್ಸ್ ಬ್ಯಾನರ್ ಗುರುದತ್ ಅವರ ಪ್ರತಿಭೆ ಗುರುತಿಸಿತು. 1951ರಲ್ಲಿ ತೆರೆಕಂಡ ಬಾಜಿ ನಿರ್ದೇಶಿಸಲು ಅವಕಾಶ ನೀಡಿತು. ಇದೇನೂ ಕಮರ್ಶಿಯಲ್ ಆಗಿ ಭಾರಿ ಯಶಸ್ವಿಯಾಗದಿದ್ದರೂ ಹಿಂದಿ ಸಿನೆಮಾ ರಂಗ ಗುರುತಿಸುವಂತೆ ಮಾಡಿತು. ನಿರ್ದೇಶಿಸಿದ ಎರಡನೇ ಚಿತ್ರ ಜಾಲ್ ಕಮರ್ಶಿಯಲ್ ಆಗಿಯೂ ಭಾರಿ ಯಶಸ್ಸು ಕಂಡಿತು.
ಗುರುದತ್ ಅವರು ಮಹತ್ವಾಕಾಂಕ್ಷಿ. ಸಿನೆಮಾ ರಂಗದಲ್ಲಿ ಸಾಧನೆ ಮಾಡಬೇಕೆಂಬ ತುಡಿತ. ಸಿನೆಮಾಗಳು ತಾನು ಅಂದುಕೊಂಡಂತೆ ಪೂರ್ಣವಾಗಲು ಸ್ವಂತ ನಿರ್ಮಾಣ ಸಂಸ್ಥೆ ಬೇಕೆಂಬ ಆಲೋಚನೆ. ಇದರಿಂದಲೇ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಮೂಲಕ 1953ರಲ್ಲಿ ಬಾಜ್ ತೆರೆಕಂಡಿತು.
ಗುರುದತ್ ನಿರ್ದೇಶಿಸಿದ ಸಿನೆಮಾಗಳೆಲ್ಲವೂ ಗಮನಾರ್ಹವಾಗಿವೆ. ಇವುಗಳಲ್ಲಿ ಪ್ಯಾಸಾ, ಕಾಗಜ್ ಕೆ ಪೂಲ್ ಅತ್ಯಂತ ಜನಪ್ರಿಯ ಜೊತೆಗ ಅಂತರಾಷ್ಟ್ರೀಯ ಮನ್ನಣೆಯನ್ನೂ ತಂದುಕೊಟ್ಟಿವೆ. ಇವರು ನಿರ್ಮಾಪಕ ಜೊತೆಗೆ ನಟರು ಆಗಿದ್ದ ಸಾಹಿಬ್ ಬಿಬಿ ಔರ್ ಗುಲಾಮ್ ಸಿನೆಮಾವನ್ನು ಇವರ ಆಪ್ತ ಶಿಷ್ಯ ಅಬ್ರಾರ್ ಅಲ್ವಿ ನಿರ್ದೇಶಿಸಿದರು.
ಇವರು ಅಭಿನಯಿಸಿದ ಚಿತ್ರಗಳಲ್ಲಿ ನನ್ನ ಅಭಿಪ್ರಾಯದ ಪ್ರಕಾರ ಪ್ಯಾಸಾ, ಕಾಗಜ್ ಕೆ ಪೂಲ್ ಮತ್ತು ಸಾಹಿಬ್ ಬಿಬಿ ಔರ್ ಗುಲಾಮ್ ಬಹು ಗಮನಾರ್ಹ ಸಿನೆಮಾಗಳು. ಬಿಗಿಯಾದ ಚಿತ್ರಕಥೆ, ತಾವು ಅಭಿನಯಿಸಿದ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿರುವ ಕಲಾವಿದರು, ಮನೋಜ್ಞ ಛಾಯಾಗ್ರಹಣ ಇವುಗಳ ವಿಶೇಷತೆ. ಈ ಕಾರಣದಿಂದಲೇ ಈ ಮೂರು ಸಿನೆಮಾಗಳನ್ನು ಪದೇಪದೇ ನೋಡುತ್ತಿರುತ್ತೇನೆ. ಅಂತರರಾಷ್ಟ್ರ್ರೀಯ ನಿಯತಕಾಲಿಕ ಟೈಮ್ ಗುರುತಿಸಿರುವ ಜಗತ್ತಿನ ನೂರು ಶ್ರೇಷ್ಠ ಸಿನೆಮಾಗಳಲ್ಲಿ ಪ್ಯಾಸಾ, ಕಾಗಜ್ ಕೆ ಪೂಲ್ ಸ್ಥಾನ ಪಡೆದಿರುವುದು ಗಮನಾರ್ಹ !
ಗುರುದತ್ ಸಿನೆಮಾಗಳಲ್ಲಿ ಹಾಡುಗಳು ಚಿತ್ರಕಥೆಗೆ ಅನುಗುಣವಾಗಿಯೇ ಬರುವುದು ವಿಶೇಷ. ಹಾಡುಗಳಿರಲಿ ಎಂಬ ಕಾರಣಕ್ಕಾಗಿ ಸೇರ್ಪಡೆ ಮಾಡುವುದು ಅವರ ಇರಾದೆಯಾಗಿರಲಿಲ್ಲ. ಛಾಯಾಗ್ರಹಣ ಇವರ ಸಿನೆಮಾಗಳ ಮತ್ತೊಂದು ವಿಶೇಷ. ಇವರ ಸಿನೆಮಾಗಳ ಮೂಲಕವೇ ಕನ್ನಡಿಗ ವಿ.ಕೆ. ಮೂರ್ತಿ ಹೆಸರಾಂತ ಛಾಯಾಗ್ರಹಕರಾಗಿ ಬೆಳಕಿಗೆ ಬಂದರು. ಕನ್ನಡಿಗ ಜಾನಿ ವಾಕರ್, ವಹಿದಾ ರೆಹಮಾನ, ನಿರ್ದೇಶಕ ಅಬ್ರಾರ್ ಅಲ್ವಿ ಇವರೆಲ್ಲ ಗುರುದತ್ ಗುರುತಿಸಿದ ಪ್ರತಿಭೆಗಳು
ಗುರುದತ್ ಅವರ ಕೊನೆಯ ಸಿನೆಮಾ ಅಂದಿನ ಖ್ಯಾತ ಕಲಾವಿದೆ ಮೀನಾ ಕುಮಾರಿ ಅವರು ಅಭಿನಯಿಸಿದ್ದ ಸಂಜ್ ಔರ್ ಸವೇರಾ. ಇದನ್ನು ಖ್ಯಾತ ನಿರ್ದೇಶಕ ಹೃಷಿಕೇಶ್ ಮುಖರ್ಜಿ ನಿರ್ದೇಶಿಸಿದ್ದರು. ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಲು ಒಪ್ಪಿದ್ದರು. ಆದರೆ ಇವುಗಳನ್ನು ಪೂರ್ಣಗೊಳಿಸದೇ 39ನೇ ವಯಸ್ಸಿಗೆ ಚಿರನಿದ್ರೆಗೆ ಜಾರಿದರು. (ಜುಲೈ 9, 1925 –ಅಕ್ಟೋಬರ್ 10, 1964) ಭೌತಿಕವಾಗಿ ಇಲ್ಲವಾದರು.
ಇದ್ದ ಅಲ್ಪ ಅವಧಿಯಲ್ಲಿಯೇ ಭಾರತೀಯ ಸಿನೆಮಾ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಗುರುದತ್ ತಮ್ಮ ಸಿನೆಮಾಗಳ ಮೂಲಕ ಚಿರಂತನವಾಗಿರುತ್ತಾರೆ. ಇದೇ 2025ಕ್ಕೆ ಅವರು ಬದುಕಿದ್ದರೆ ನೂರು ವರ್ಷವಾಗುತ್ತಿತ್ತು.