ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಜುಲೈ 8ರಂದು ವಿಕಾಸ ಸೌಧದ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದರು. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಂಎಂಹಿಲ್ಸ್ ಹುಲಿ ಸಂರಕ್ಷಿತ ಪ್ರದೇಶ ಘೋಷಣೆಗೆ ಅಭಿಪ್ರಾಯ ಸಂಗ್ರಹಕ್ಕೆ ಸೂಚನೆ ನೀಡಿದರು. ಅರಣ್ಯ, ವನ್ಯಜೀವಿ ರಕ್ಷಣೆಗೆ ಕಮಾಂಡ್ ಸೆಂಟರ್ ಸ್ಥಾಪನೆಗೆ ಕ್ರಮ ವಹಿಸುವಂತೆ ತಿಳಿಸಿದರು. ಕಾಡಿನಂಚಿನ ಜನರೊಂದಿಗೆ ಸೌಹಾರ್ದತೆ ಬೆಳೆಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಇವುಗಳ ಜೊತೆಗೆ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪಟ್ಟಿ ಮಾಡಿ, ನೇಮಕಾತಿ ಪ್ರಕ್ರಿಯೆ ಆರಂಭಿಸಲು, ತತ್ ಕ್ಷಣ ಅಗತ್ಯವಿರುವ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಕೂಡಲೇ ನೇಮಕಾತಿ ಮಾಡಿಕೊಳ್ಳಲು ಮತ್ತು ಕಾಡು, ವನ್ಯಜೀವಿ ಸಂರಕ್ಷಣೆಗೆ ಅಗತ್ಯವಾದ ವಾಹನ, ಉಪಕರಣಗಳ ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ಸಚಿವರು ಸೂಚನೆ ನೀಡಿದರು.
ಅರಣ್ಯ ಸಚಿವರು ಹೇಳಿರುವುದೆಲ್ಲ ಮಹತ್ವದ ಅಂಶಗಳು. ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವಿರಾಮವಾಗಿ – ಆರಾಮವಾಗಿ ಸಭೆ ನಡೆಸಿ ಸಲಹೆ – ಸೂಚನೆ ಕೊಡುವಷ್ಟರಲ್ಲಿ ಬಹುಶಃ ಈಶ್ವರ ಖಂಡ್ರೆ ಅವರ ಸಚಿವ ಅವಧಿಯೂ ಮುಗಿದಿರುತ್ತದೋ ಏನೋ ? ರಾಜ್ಯ ಕಂಡ ದಕ್ಷ ಅರಣ್ಯ ಸಚಿವರೆನ್ನಿಸಿದ ಕೆ.ಎಚ್. ಪಾಟೀಲ್, ಹೆಚ್.ಕೆ. ರಂಗನಾಥ್ ನಂತರ ಈಶ್ವರ ಖಂಡ್ರೆ ಬಂದಿದ್ದಾರೆ. ಇಂಥ ಸಚಿವರು ಸಿಗುವುದೇ ಅಪರೂಪ. ಇಂಥವರು ಇದ್ದಾಗ ಇಲಾಖೆಗೆ ಯಾವಯಾವ ಜರೂರು ಅವಶ್ಯಕತೆಗಳು ಇದೆಯೋ ಅದನ್ನು ಪೂರೈಸಿಕೊಳ್ಳಲು ಉನ್ನತ ಅಧಿಕಾರಿಗಳು ಮುಂದಾಗಬೇಕು. ಆದರೆ ತ್ವರಿತವಾಗಿ ಮುಂದಾಗುವುದೇ ಅನುಮಾನ.

ಈ ಹಿನ್ನೆಲೆಯಲ್ಲಿ ಅತೀ ಜರೂರಾಗಿ ಆಗಬೇಕಾದ ಕಾರ್ಯದ ಬಗ್ಗೆ ಬರೆದಿದ್ದೇನೆ. ಅದು ಅರಣ್ಯ ಇಲಾಖೆಯ ಎಲ್ಲ ಸಿಬ್ಬಂದಿಗೂ ಎಂ- ಸ್ಟೈಪ್ಸ್ ಅಪ್ಲಿಕೇಶನ್ (M-STrIPES application) ಇರುವ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ನೀಡುವುದು. ಇದೊಂದು ಕೆಲಸ ಮಾಡುವುದರಿಂದಲೇ ಕಾಡು, ಕಾಡಿನ ವನ್ಯಪ್ರಾಣಿಗಳ ಸಂರಕ್ಷಣೆ ನಿಟ್ಟಿನಲ್ಲಿ ಮಹತ್ವದ ಪ್ರಗತಿ ಸಾಧಿಸಬಹುದು.

ಏನಿದು ಎಂ- ಸ್ಟೈಪ್ಸ್ ಅಪ್ಲಿಕೇಶನ್ (M-STrIPES application) ?

ಭಾರತದಲ್ಲಿ ವನ್ಯಜೀವಿ ನಿರ್ವಹಣೆಯನ್ನು ಆಧುನೀಕರಿಸಲು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ದ ಪ್ರಯತ್ನದಿಂದ ಎಂ- ಸ್ಟೈಪ್ಸ್ ಅಪ್ಲಿಕೇಶನ್ ಅಭಿವೃದ್ಧಿಯಾಗಿದೆ. ಇದನ್ನು ಹುಲಿ ಮೀಸಲು ಮತ್ತು ಇತರ ಸಂರಕ್ಷಿತ ಪ್ರದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದರಿಂದ ಅರಣ್ಯ ಇಲಾಖೆಗಳ ಸಾಮರ್ಥ್ಯ ವೃದ್ಧಿ ಮತ್ತು ಸಮುದಾಯ ಆಧಾರಿತ ಸಂರಕ್ಷಣೆಯಂತಹ ಕಾರ್ಯಗಳು ಸಾಧ್ಯವಾಗುತ್ತದೆ.

ಎಂ- ಸ್ಟೈಪ್ಸ್ ಅಪ್ಲಿಕೇಶನ್ (M-STrIPES application), ಹುಲಿಗಳ ಮೇಲ್ವಿಚಾರಣಾ ವ್ಯವಸ್ಥೆ – ತೀವ್ರ ರಕ್ಷಣೆ ಮತ್ತು ಪರಿಸರ ಸ್ಥಿತಿ, ಪ್ರಾಥಮಿಕವಾಗಿ ವನ್ಯಜೀವಿ ಮೇಲ್ವಿಚಾರಣೆ ಮತ್ತು ಸಂರಕ್ಷಣೆಗಾಗಿ ಬಳಸುವ ಮೊಬೈಲ್ ಅಪ್ಲಿಕೇಶನ್ ಸಹ ಆಗಿದೆ. ಹುಲಿ ಮೀಸಲುಗಳ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿಪಡಿಸಿದ್ದರೂ ಇತರ ವನ್ಯಜೀವಿಗಳಿಗೂ ಅನ್ವಯಿಸುವ ಅಭಯಾರಣ್ಯ ಪ್ರದೇಶಗಳ ಪರಿಣಾಮಕಾರಿ ಗಸ್ತು, ದತ್ತಾಂಶ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಅರಣ್ಯ ಅಧಿಕಾರಿಗಳಿಗೆ ಸಹಾಯವಾಗುವ ದಿಶೆಯಲ್ಲಿ ಎಂ- ಸ್ಟೈಪ್ಸ್ ಅಪ್ಲಿಕೇಶನ್ ಅಭಿವೃದ್ಧಿಯಾಗಿದೆ. ಇದರ ಪ್ರಮುಖ ವೈಶಿಷ್ಟ್ಯಗಳು ಮತ್ತು ಉದ್ದೇಶದ ವಿವರಣೆಯನ್ನು ಕೆಳಗೆ ನೀಡಲಾಗಿದೆ:

ಎಂ- ಸ್ಟೈಪ್ಸ್ ಅಪ್ಲಿಕೇಶನ್ (M-STrIPES application) ಪ್ರಮುಖ ವೈಶಿಷ್ಟ್ಯಗಳು:
ನೈಜ-ಸಮಯ (Real Time) ದ ದತ್ತಾಂಶ ಸಂಗ್ರಹಣೆ
ಗಸ್ತು ಸಮಯದಲ್ಲಿ ನೈಜ-ಸಮಯದ ಅಂದರೆ ಇಲಾಖೆ ಪಾಳಿ(Shift)ಗನುಗುಣವಾಗಿ ನಿಗದಿಪಡಿಸಿದ ಸಮಯದಲ್ಲಿ ವೀಕ್ಷಣೆಗಳು ಮತ್ತು ಟ್ರ್ಯಾಕ್ಗಳನ್ನು ರೆಕಾರ್ಡ್ ಮಾಡಲು, ವನ್ಯಜೀವಿಗಳ ದೃಶ್ಯಗಳು, ಕಾನೂನುಬಾಹಿರ ಚಟುವಟಿಕೆಗಳು, ಮಾನವ-ವನ್ಯಜೀವಿ ಸಂಘರ್ಷಗಳು ಮತ್ತು ಪರಿಸರ ಸ್ಥಿತಿಯ ಡೇಟಾವನ್ನು ಸೆರೆಹಿಡಿಯಲು ಎಂ- ಸ್ಟೈಪ್ಸ್ ಅಪ್ಲಿಕೇಶನ್ GPS ಅನ್ನು ಪೂರಕವಾಗಿ ಬಳಸಿಕೊಳ್ಳುತ್ತದೆ.
ಎಂ- ಸ್ಟೈಪ್ಸ್ ಅಪ್ಲಿಕೇಶನ್ ಆಫ್ಲೈನ್ನಲ್ಲಿಯೂ ಕಾರ್ಯನಿರ್ವಹಿಸುತ್ತದೆ. ಸ್ಥಳೀಯವಾಗಿ ಡೇಟಾವನ್ನು ಉಳಿಸಲು ಮತ್ತು ಸಂಪರ್ಕ ಲಭ್ಯವಿರುವಾಗ ಕೇಂದ್ರ ಸರ್ವರ್ಗೆ ಸಿಂಕ್ ಮಾಡಲು ಅನುಕೂಲಕರ. ಜಿಯೋಟ್ಯಾಗ್ ಮಾಡಲಾದ ಫೋಟೋಗಳನ್ನು ನಿಖರತೆಗಾಗಿ ಸಂಗ್ರಹಿಸಲು ಪೂರಕವಾಗಿದೆ.

ಗಸ್ತು ಮತ್ತು ಅರಣ್ಯ ಕಾನೂನು ಜಾರಿ:
ಅರಣ್ಯದಲ್ಲಿ ಗಸ್ತು ತಿರುಗುವ ಸಿಬ್ಬಂದಿಯು ಕಾನೂನುಬಾಹಿರ ಚಟುವಟಿಕೆಗಳ (ಉದಾ. ಬೇಟೆಯಾಡುವುದು, ಅತಿಕ್ರಮಣ) ಮೇಲೆ ನಿಗಾ ವಹಿಸುವುದು, ಅವುಗಳ ದುಷ್ಪರಿಣಾಮ ತಡೆಗಟ್ಟುವಿಕೆ ದಿಶೆಯಲ್ಲಿ ಮತ್ತು ಕಂಡ ವನ್ಯಜೀವಿ ಘಟನೆಗಳ ವಿವರಗಳನ್ನು ದಾಖಲಿಸಲು ಅಪ್ಲಿಕೇಶನ್ ಅನ್ನು ಬಳಸುತ್ತಾರೆ.
ಇದರಿಂದಾಗಿ ಅವರು ತಮಗೆ ವಹಿಸಿದ ಗಸ್ತು ಕಾರ್ಯವನ್ನು ಮಾಡಿದ್ದಾರೆಯೇ ಇಲ್ಲವೇ ಎಂಬುದು ತಿಳಿಯುತ್ತದೆ. ಅವರು ಅರಣ್ಯದಲ್ಲಿ ಎಲ್ಲೆಲ್ಲಿ ಸಂಚರಿಸಿದ್ದಾರೆ ಎಂಬುದು ಸಹ ಗೊತ್ತಾಗುತ್ತದೆ. ಅಂದರೆ ಒಂದು ಕಿಲೋ ಮೀಟರ್ ಗಸ್ತು ಮಾಡಿ ಹತ್ತು ಕಿಲೋ ಮೀಟರ್ ಗಸ್ತು ಮಾಡಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ.
ಪರಿಸರ ಮೇಲ್ವಿಚಾರಣೆ:
ಮಾಂಸಾಹಾರಿ ಪ್ರಾಣಿಗಳು ಮತ್ತು ಅವುಗಳ ಸಂಖ್ಯಾ ಸಮೃದ್ಧಿ, ಸಸ್ಯಹಾರಿ ಪ್ರಾಣಿಗಳು ಹಾಗೆಯೇ ಆಕ್ರಮಣಕಾರಿ ಕಳೆಗಳು ಮತ್ತು ಮಾನವ ಅಡಚಣೆಗಳು ಸೇರಿದಂತೆ ಆವಾಸಸ್ಥಾನದ ಪರಿಸ್ಥಿತಿಗಳನ್ನು ನಿರ್ಣಯಿಸಲು ಎಂ- ಸ್ಟೈಪ್ಸ್ ಅಪ್ಲಿಕೇಶನ್ ಪರಿಸರ ಘಟಕವನ್ನು ಹೊಂದಿದೆ. ದತ್ತಾಂಶವನ್ನು “ಬೀಟ್” ಮಟ್ಟದಲ್ಲಿ ಸಂಗ್ರಹಿಸಲಾಗುತ್ತದೆ (ಭಾರತೀಯ ಕಾಡುಗಳಲ್ಲಿನ ಚಿಕ್ಕ ಘಟಕದ ವ್ಯಾಪ್ತಿ ಸಾಮಾನ್ಯವಾಗಿ 15–20 ಚದರ ಕಿಮೀ). ಕಾಡಿನ ನಿರ್ವಹಣೆಗೆ ಸೂಕ್ಷ್ಮ ಒಳನೋಟಗಳನ್ನು ಒದಗಿಸುತ್ತದೆ.

ಎಂ- ಸ್ಟೈಪ್ಸ್ (M-STrIPES application) ಮೊಬೈಲ್ ಅಪ್ಲಿಕೇಶನ್ ಆಂಡ್ರಾಯ್ಡ್ ಆಧಾರಿತವಾಗಿದೆ. ಈ ಹಿನ್ನೆಲೆಯಲ್ಲಿ ಖರೀದಿಗೆ ದುಬಾರಿಯಾಗುವುದಿಲ್ಲ. ಜಿಪಿಎಸ್ ನಿರ್ದೇಶಾಂಕಗಳು, ಸಮಯದ ನಿಖರತೆ ಮತ್ತು ಫೋಟೋಗಳೊಂದಿಗೆ ಕ್ಷೇತ್ರ ದತ್ತಾಂಶವನ್ನು ದಾಖಲಿಸಲು ಗಸ್ತು ಮುಂಚೂಣಿಯ ಸಿಬ್ಬಂದಿ ಬಳಸುತ್ತಾರೆ. ಈ ಅಪ್ಲಿಕೇಶನ್ ನಲ್ಲಿ ಇನ್ನೂ ಅನೇಕ ಅನುಕೂಲತೆಗಳಿವೆ. ಅವುಗಳನ್ನು ವಿವರ ಮುಂದಿದೆ.

ಡೆಸ್ಕ್ ಟಾಪ್ ಸಾಫ್ಟ್ವೇರ್ ಮತ್ತು ವೆಬ್ ಪರಿಕರ: ಜಿಯೋಸ್ಪೇಷಿಯಲ್ ಮತ್ತು ಸಂಖ್ಯಾಶಾಸ್ತ್ರೀಯ ಪರಿಕರಗಳನ್ನು ಬಳಸಿಕೊಂಡು ಸಂಗ್ರಹಿಸಲಾದ ದತ್ತಾಂಶ (Data)ವನ್ನು ವಿಶ್ಲೇಷಿಸುತ್ತದೆ, ಹೊಂದಾಣಿಕೆಯ ನಿರ್ವಹಣೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಗಾಗಿ ಡೇಟಾಬೇಸ್ ರಚನೆಯಾಗುತ್ತದೆ.

ಗಸ್ತು ಅಪ್ಲಿಕೇಶನ್: ಗಸ್ತು ಮಾರ್ಗಗಳು, ಅಕ್ರಮ ಚಟುವಟಿಕೆಗಳು ಮತ್ತು ವನ್ಯಜೀವಿ ಮರಣವನ್ನು ದಾಖಲಿಸುತ್ತದೆ.
ಪರಿಸರ ಅಪ್ಲಿಕೇಶನ್: ಆವಾಸಸ್ಥಾನ ಸ್ಥಿತಿ, ವನ್ಯಜೀವಿ ಸಮೃದ್ಧಿ ಮತ್ತು ಮಾನವ ಪ್ರಭಾವದ ಕುರಿತು ಡೇಟಾವನ್ನು ಸಂಗ್ರಹಿಸುತ್ತದೆ.
ಪಾಲಿಗಾನ್ ಹುಡುಕಾಟ ಅಪ್ಲಿಕೇಶನ್: ಪೂರ್ವ ಹಿಮಾಲಯ ಮತ್ತು ಮ್ಯಾಂಗ್ರೋವ್ಗಳಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ಪರಿಸರ ಮೌಲ್ಯಮಾಪನಗಳಿಗಾಗಿ ಬಳಸಲಾಗುತ್ತದೆ

ಹುಲಿ ಗಣತಿಯಲ್ಲಿ ಬಳಕೆ:
ತಮಿಳುನಾಡಿನ ಸತ್ಯಮಂಗಲಂ ಹುಲಿ ಮೀಸಲು (STR) ಪ್ರದೇಶಗಳಲ್ಲಿ ಹುಲಿಗಳು, ಚಿರತೆಗಳು, ಕರಡಿಗಳು ಮತ್ತು ಜಿಂಕೆಗಳು ಸೇರಿದಂತೆ ವನ್ಯಜೀವಿ ಗಣತಿಯನ್ನು ನಡೆಸಲು ಈ ಅಪ್ಲಿಕೇಶನ್ ಅನ್ನು ಸಮರ್ಥವಾಗಿಬಳಸಲಾಗಿದೆ. ಉದಾಹರಣೆಗೆ, 2018 ರಲ್ಲಿ, STR ನಲ್ಲಿರುವ 320 ಅರಣ್ಯ ಅಧಿಕಾರಿಗಳು ಆರು ದಿನಗಳ ಹುಲಿ ಗಣತಿಗಾಗಿ M-STrIPES ಅನ್ನು ಬಳಸಿದರು. ಪ್ರತಿದಿನ ಅರಣ್ಯದಲ್ಲಿ 8 ಕಿಮೀ ನಡೆದಾಡಿದ್ದರು.
ತರಬೇತಿ: ಅರಣ್ಯ ಇಲಾಖೆ ಸಿಬ್ಬಂದಿಯು ಅಪ್ಲಿಕೇಶನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ಇದರಿಂದ ನಿಖರವಾದ ಡೇಟಾ ಸಂಗ್ರಹಣೆ ಮಾಡುವುದು ಸಾಧ್ಯವಾಗುತ್ತದೆ.
ಹೊಂದಾಣಿಕೆಯ ನಿರ್ವಹಣೆ: ಅಪ್ಲಿಕೇಶನ್ನ ಡೇಟಾವು ವನ್ಯಜೀವಿ ವ್ಯವಸ್ಥಾಪಕರು ಮತ್ತು ನೀತಿ ನಿರೂಪಕರು ಮಾನವ-ವನ್ಯಜೀವಿ ಸಂಘರ್ಷಗಳಂಥ ಗುರುತರ ಸಮಸ್ಯೆಗಳನ್ನು ಪರಿಹರಿಸುವುದು ಅಥವಾ ಆವಾಸಸ್ಥಾನ ಪುನಃಸ್ಥಾಪನೆಯಂತಹ ಮಾಹಿತಿಯುಕ್ತ ಸಂರಕ್ಷಣಾ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹ ಸಹಾಯಕವಾಗುತ್ತದೆ.
ಎಂ – ಸ್ಟ್ರೈಪ್ಸ್ ಅಪ್ಲಿಕೇಶ್ ನಿಂದ ಆಗುವ ಅನುಕೂಲವೆಂದರೆ ನಿಖರತೆ ಮತ್ತು ಪಾರದರ್ಶಕತೆ. ಇದು ವಿಶ್ವಾಸಾರ್ಹ ದಾಖಲೆಗಳಿಗಾಗಿ ವೈಜ್ಞಾನಿಕವಾಗಿ ದೃಢವಾದ, ಜಿಯೋಟ್ಯಾಗ್ ಮಾಡಲಾದ ಡೇಟಾವನ್ನು ಒದಗಿಸುತ್ತದೆ. ಜೊತೆಗೆ ಹಸ್ತಚಾಲಿತ ದಾಖಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನೈಜ-ಸಮಯದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ. ಜೀವವೈವಿಧ್ಯತೆಯನ್ನು ರಕ್ಷಿಸಲು ಮತ್ತು ಪರಿಸರ ವ್ಯವಸ್ಥೆಗಳನ್ನು ನಿರ್ವಹಿಸಲು ಪುರಾವೆ ಆಧಾರಿತ ಮಾಹಿತಿಗಳನ್ನು ನೀಡುತ್ತದೆ.

ಕರ್ನಾಟಕ ಅರಣ್ಯ ಇಲಾಖೆಯು ಎಂ- ಸ್ಟ್ರೈಪ್ ಅಪ್ಲಿಕೇಶನ್ (M-STrIPES) ಬಳಸುತ್ತಿದೆಯೇ
ಪ್ರಸ್ತುತ ಹುಲಿ ಸಂರಕ್ಷಿತಾರಣ್ಯಗಳಾದ ಬಂಡೀಪುರ, ನಾಗರಹೊಳೆ ಮತ್ತು ಬಿ.ಆರ್.ಟಿ. ಗಳಲ್ಲಿ ಎಂ- ಸ್ಟ್ರೈಪ್ ಅಪ್ಲಿಕೇಶನ್ (M-STrIPES) ಇರುವ ಆಂಡ್ರಾಯ್ಡ್ ಮೊಬೈಲುಗಳನ್ನು ಗಾರ್ಡ್, ಡೆಫ್ಯುಟಿ ರೇಂಜ್ ಫಾರೆಸ್ಟ್ ಆಫೀಸರ್, ರೇಂಜ್ ಫಾರೆಸ್ಟ್ ಆಫೀಸರ್ ಗಳಿಗೆ ನೀಡಲಾಗಿದೆ. ಆದರೆ ಉಳಿದ ಅಭಯಾರಣ್ಯಗಳ ಸಿಬ್ಬಂದಿಗೆ ನೀಡಲಾಗಿಲ್ಲ.

ಉದಾಹರಣೆಗೆ ಹೇಳುವುದಾದರೆ ಇನ್ನೂ ಹುಲಿ ಸಂರಕ್ಷಿತಾರಣ್ಯ ಎಂದು ಘೋಷಣೆಯಾಗದ, ಎಂಎಂ. ಹಿಲ್ಸ್ ವನ್ಯಜೀವಿಧಾಮದ ಹೂಗ್ಯಂ ರೇಂಜ್ ನಲ್ಲಿ ಇತ್ತೀಚೆಗೆ ಐದು ಹುಲಿಗಳ ಕಗ್ಗೊಲೆಯಾಗಿದೆ. ಒಂದು ವೇಳೆ ಅಲ್ಲಿನ ಅರಣ್ಯ ಇಲಾಖೆಯ ಖಾಯಂ ಸಿಬ್ಬಂದಿಗೂ ಎಂ- ಸ್ಟ್ರೈಪ್ ಅಪ್ಲಿಕೇಶನ್ ಇರುವ ಮೊಬೈಲುಗಳನ್ನು ನೀಡಿದ್ದರೆ ಈ ದಾರುಣ ದುರ್ಘಟನೆ ತಡೆಯಬಹುದಿತ್ತು ಎನಿಸುತ್ತದೆ.
ಈ ದಿಶೆಯಲ್ಲಿ ಅರಣ್ಯ ಇಲಾಖೆಯ ಕಾರ್ಯ ನಿರ್ವಾಹಕ ಹುದ್ದೆಗಳಲ್ಲಿರುವ ಎಲ್ಲರಿಗೂ ಎಂ- ಸ್ಟ್ರೈಪ್ ಅಪ್ಲಿಕೇಶನ್ ನೀಡಬೇಕು. ಆಗ ಅವರು ಕಾಡಿನಲ್ಲಿ ಎಷ್ಟು ಸಮಯ ಕಳೆದಿದ್ದಾರೆ, ಪರಿಣಾಮಕಾರಿಯಾಗಿ ಗಸ್ತು ಮಾಡಿದ್ದಾರೆಯೇ ಇಲ್ಲವೇ ಎಂಬುದು ತಿಳಿಯುತ್ತದೆ.

Similar Posts

Leave a Reply

Your email address will not be published. Required fields are marked *