ಕರ್ನಾಟಕ ಬಿಜೆಪಿಯ ಬಲವರ್ಧನೆಗೆ ಯತ್ನಾಳ್ ಸಹ ಕಾರಣರು ಎಂಬುದರಲ್ಲಿ ಎರಡು ಮಾತಿಲ್ಲ. ಮಾಜಿ ಕೇಂದ್ರ ಸಚಿವರು, ಹಾಲಿ ಶಾಸಕರು ಆಗಿರುವ ಇವರನ್ನು ಮಾರ್ಚ್ 26, 2025 ರಂದು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಆರು ವರ್ಷಗಳ ಅವಧಿಗೆ ಅಮಾನತುಗೊಳಿಸಲಾಗಿದೆ. ಇದು ಬಿಜೆಪಿ ಮೇಲೆ ಹಾಗೂ ರಾಜ್ಯ ರಾಜಕಾರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ?
ಬಿಜಾಪುರ(ವಿಜಯಪುರ)ದ ಶಾಸಕ ಮತ್ತ ಉಗ್ರ ಹಿಂದುತ್ವ ಪ್ರತಿಪಾದಕರಾದ ಯತ್ನಾಳ್, ಕರ್ನಾಟಕ ರಾಜಕೀಯದಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಪ್ರಮುಖ ರಾಜಕಾರಣಿ. ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಮಗ, ರಾಜ್ಯ ಬಿಜೆಪಿಯ ಹಾಲಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧದ ನಿರಂತರ ಟೀಕೆ, ಇದರಿಂದ ಪಕ್ಷದ ಮೇಲೆ ಉಂಟಾದ, ಉಂಟಾಗುತ್ತಿದ್ದ ಪರಿಣಾಮಗಳ ಕಾರಣದಿಂದಲೇ ಉಚ್ಚಾಟನೆಯಾಗಿದೆ. ವಂಶಪಾರಂಪರ್ಯ ರಾಜಕೀಯ, ಭ್ರಷ್ಟಾಚಾರ ಮತ್ತು ಉತ್ತರ ಕರ್ನಾಟಕದಲ್ಲಿ ಸುಧಾರಣೆಗಳು ಮತ್ತು ಅಭಿವೃದ್ಧಿಯ ಅಗತ್ಯತೆಯಂತಹ ವಿಷಯಗಳ ಕುರಿತ ಟೀಕೆಗಳು ಸೇರಿವೆ.
ಉತ್ತರ ಕರ್ನಾಟಕದ ಮತಗಳ ನೆಲೆಯ ಮೇಲೆ ಪರಿಣಾಮ: ಬಿಜೆಪಿ ಹೈ ಕಮಾಂಡ್ ಉಚ್ಚಾಟನೆಯಂಥ ಕ್ರಮ ಕೈಗೊಳ್ಳುವ ಮೊದಲು ಸಾಕಷ್ಟು ಅಳೆದು ಸುರಿದಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೂ ಲಿಂಗಾಯಿತ ಸಮುದಾಯದ ಪ್ರಬಲ ಮುಖಂಡನ ವಿರುದ್ಧ ಕೈಗೊಂಡಿರುವ ಕ್ರಮ ಸಮುದಾಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ ಎನ್ನುವುದೇನೂ ನಿರಾಕರಿಸುವ ಮಾತಲ್ಲ.
ಉತ್ತರ ಕರ್ನಾಟಕದಲ್ಲಿ ಬಿಜೆಪಿ ಸಾಂಪ್ರದಾಯಿಕವಾಗಿ ಬಲಿಷ್ಠವಾಗಿದೆ. ಇಲ್ಲಿನ ಪ್ರಭಾವಿ ನಾಯಕರಲ್ಲಿ ಯತ್ನಾಳ್ ಸೇರಿದ್ದಾರೆ. ವಿಶೇಷವಾಗಿ ಇವರ ನಿರ್ಭೀಡೆಯ ಮಾತುಗಾರಿಕೆ, ರಾಜಕಾರಣದ ಕಾರಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು, ಅಭಿಮಾನಿಗಳು ಇದ್ದಾರೆ. ಇದನ್ನು ಮತ್ತಷ್ಟು ಹೆಚ್ಚಿಸಿದರೆ ರಾಜಕೀಯವಾಗಿ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಭಾವ ಕುಗ್ಗುವ ಸಾಧ್ಯತೆ ಇದೆ.
ಲಿಂಗಾಯತ ಸಮುದಾಯ: ಯತ್ನಾಳ್ ಅವರು ಲಿಂಗಾಯಿತ ಸಮುದಾಯದ ಪ್ರಭಾವಿ ನಾಯಕ. ಈ ಕಾರಣದಿಂದಲೇ ಇವರ ಉಚ್ಚಾಟನೆಯಿಂದ ಅಸಮಾಧಾನಗೊಂಡಿರುವ ಸಮುದಾಯದ ಕೆಲವು ನಾಯಕರು, ಕಾರ್ಯಕರ್ತರು ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಬಹುದು. ಒಂದು ವೇಳೆ ಈ ಅಸಮಾಧಾನದ ಪ್ರಯೋಜನವನ್ನು ಕಾಂಗ್ರೆಸ್ ಪಡೆದುಕೊಂಡರೇ ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯ ರಾಜಕೀಯ ಪ್ರಾತಿನಿಧಿಕರಣ ಕಡಿಮೆಯಾಗಬಹುದು.
ವಿಜಯೇಂದ್ರ ಬಣ: ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಚಾಟನೆಯಿಂದ ಸದ್ಯಕ್ಕೆ ವಿಜಯೇಂದ್ರ ಬಣ ಪ್ರಬಲವಾದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಇವರ ನಾಯಕತ್ವದ ವಿರುದ್ಧ ಧ್ವನಿಯೆತ್ತಿದವರು ಸದ್ಯಕ್ಕೆ ಮೌನಕ್ಕೆ ಜಾರಿದಂತೆ ಕಂಡರೂ ಮುಂದಿನ ದಿನಗಳಲ್ಲಿ ಭಿನ್ನಮತ ಸ್ಪೋಟಿಸಬಹುದು ! ಇದು ಮುಖ್ಯವಾಗಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು
ಬಿಜೆಪಿಯ ಹೈ ಕಮಾಂಡಿಗೆ ಈ ಅಂಶಗಳು ಖಂಡಿತ ಗೊತ್ತಿರುತ್ತದೆ. ಆದ್ದರಿಂದ ಯತ್ನಾಳ್ ರಾಜಕೀಯ ಪ್ರಭಾವ ಕುಗ್ಗಿಸಲು ಅವರ ವಿರುದ್ಧ ಇರುವ ತನ್ನ ಪಕ್ಷದ ಪ್ರಭಾವಿ ಮುಖಂಡರನ್ನು ರಾಜಕೀಯವಾಗಿ ಮತ್ತಷ್ಟೂ ಬೆಳೆಸಬಹುದು. ಈ ಸಾಧ್ಯತೆ ಕ್ಷೀಣವಾಗಿದ್ದರೆ ಉಚ್ಚಾಟನೆಯ ಕ್ರಮದ ಅವಧಿ ಸೀಮಿತವಾಗಿರಬಹುದು. ಏಕೆಂದರೆ ಬಿಜೆಪಿಯಿಂದ ಯತ್ನಾಳ್ ಉಚ್ಚಾಟಿತರಾಗಿ ಮತ್ತೆ ಮರು ಸೇರ್ಪಡೆಯಾಗಿರುವ ಬೆಳವಣಿಗೆಗಳು ಹಿಂದೆ ನಡೆದಿವೆ. 2028ರ ವಿಧಾನಸಭಾ ಚುನಾವಣೆಗೂ ಮುನ್ನವೇ ಅವರು ಬಿಜೆಪಿಗೆ ಮರು ಸೇರ್ಪಡೆಯಾದರೂ ಅಚ್ಚರಿಯಿಲ್ಲ !!
ಬೇರೆ ರಾಜಕೀಯ ಪಕ್ಷ ಸೇರುವ ಸಾಧ್ಯತೆ: ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದೆ ಬಿಜೆಪಿಯಿಂದ ಹೊರಗಿದ್ದಾಗ ಜೆಡಿಎಸ್ ಸೇರಿದ್ದರು. ಆದರೆ ಅಲ್ಪಕಾಲದಲ್ಲಿಯೇ ಮತ್ತೆ ತಮ್ಮ ಮಾತೃಪಕ್ಷ ಬಿಜೆಪಿಗೆ ಸೇರ್ಪಡೆಯಾದರು. ಆದರೆ ಈಗ ಮತ್ತೆ ಜೆಡಿಎಸ್ ಅಥವಾ ಕಾಂಗ್ರೆಸ್ ಸೇರುವ ಸಾಧ್ಯತೆ ಕ್ಷೀಣ !ಇದಕ್ಕೆ ಇನ್ನೊಂದು ಮುಖ್ಯ ಕಾರಣ ಯತ್ನಾಳ್ ಅವರು ಹಿಂದುತ್ವ ರಾಜಕಾರಣದ ಪ್ರಬಲ ಪ್ರತಿಪಾದಕರಾಗಿರುವುದು. ಇದು ಮುಖ್ಯವಾಗಿ ಕಾಂಗ್ರೆಸಿಗೆ ತೀರಾ ಕಿರಿಕಿರಿ ಮಾಡುವ ಅಂಶ. ಆದ್ದರಿಂದ ಕಾಂಗ್ರೆಸ್ ಸೇರುವ ಸಾಧ್ಯತೆ ಇಲ್ಲ. ಬಹುಶಃ ಈ ಅವಧಿಯಲ್ಲಿ ಸ್ವತಃ ಯತ್ನಾಳ್ ಅವರು ಮತ್ತೊಂದು ಪಕ್ಷ ಸೇರಲು ಆಸಕ್ತಿ ತೋರಲಾರರು !!
ಹೊಸ ರಾಜಕೀಯ ಪಕ್ಷ ರಚನೆ ಸಾಧ್ಯತೆ: ಯತ್ನಾಳ್ ಮತ್ತು ಅವರ ಗುಂಪಿನ ಪ್ರಭಾವಿ ಸದಸ್ಯರು ಹೊಸ ರಾಜಕೀಯ ಪಕ್ಷ ರಚಿಸುವ ಪ್ರಯತ್ನ ಪಡಬಹುದು. ಆದರೆ ಈ ಸಾಧ್ಯತೆಯೂ ಕಡಿಮೆ. ಏಕೆಂದರೆ ಕಳೆದ ಮೂರು ದಶಕಗಳಲ್ಲಿ ಕರ್ನಾಟಕದಲ್ಲಿ ಹೊಸ ರಾಜಕೀಯ ಪಕ್ಷ ರಚನೆಯ ಪ್ರಯೋಗ ಯಶಸ್ವಿಯಾಗಿಲ್ಲ.ಇದಕ್ಕೆ ಬೇಕಾದ ಹಣಬಲ ವ್ಯಯಿಸುವ ಅಥವಾ ಸಂಗ್ರಹಿಸುವ ಶಕ್ತಿಯೂ ಇವರ ಗುಂಪಿಗೆ ಇದ್ದಂತೆ ಕಾಣುವುದಿಲ್ಲ
ವಿಧಾನಸಭಾ ಚುನಾವಣೆಗೆ ಇನ್ನೂ ಮೂರು ವರ್ಷಕ್ಕಿಂತ ಹೆಚ್ಚು ಸಮಯವಿದೆ. ಯತ್ನಾಳ್ ಅವರು ಹಿಂದಿನಂತೆಯೇ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಮತ್ತವರ ಬಣದವರನ್ನು ಅಥವಾ ಬಿಜೆಪಿ ಹೈ ಕಮಾಂಡ್ ಅನ್ನು ಟೀಕಿಸುತ್ತಾ ಇರಲು ಸಾಧ್ಯವಾಗುವುದಿಲ್ಲ. ಏಕೆಂದರೆ ಈ ಪರಿಯ ರಾಜಕಾರಣವು ಉಚ್ಚಾಟನೆ ಬಳಿಕ ಪ್ರಸ್ತುತವಾಗುವುದಿಲ್ಲ. ಒಂದು ವೇಳೆ ಟೀಕೆ ಮಾಡುತ್ತಾ ಇದ್ದರೂ ಇದೇ ಅಂಶ ರಾಜಕೀಯ ಪ್ರಸ್ತುತತೆ ತರುವುದಿಲ್ಲ.
ಹಾಗಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ರಾಜಕೀಯ ಪ್ರಸ್ತುತತೆ ಉಳಿಸಿಕೊಳ್ಳಲು ಏನು ಮಾಡಬಹುದು ? ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಮತ್ತಷ್ಟೂ ಮಾತನಾಡಲು, ಹೋರಾಟ ಮಾಡಲು ಮುಂದಾಗಬಹುದು ! ಹಿಂದುತ್ವದ ರಾಜಕಾರಣತೀವ್ರಗೊಳಿಸಬಹುದು, ತಮ್ಮಂತೆಯೇ ಸಮಾನಮನಸ್ಕರನ್ನು ಒಟ್ಟುಗೂಡಿಸಬಹುದು. ಆದರೆ ಇದೇ ಹಂತದಲ್ಲಿ ಬಿಜೆಪಿಯ ಹೈ ಕಮಾಂಡ್ ಸಹ ಯತ್ನಾಳ್ ಉರುಳಿಸಲಿರುವ ರಾಜಕೀಯ ಚದುರಂಗದ ಕಾಯಿಗಳಿಗೆ ಪ್ರತಿ ಏಟು ಕೊಡಲು ಮುಂದಾಗುವುದಂತೂ ಖಂಡಿತ ! ಹಾಗಿದ್ದರೆ ಈ ಏಟು – ಎದಿರೇಟು ನಡೆಗಳು ತೀವ್ರ ಕುತೂಹಲಕಾರಿ