ಭಾರತದಲ್ಲಿ ಉದ್ಯಮಶೀಲತೆ ಎನ್ನುವುದು ಕೆಲವೇ ಕೆಲವು ಸಮುದಾಯಗಳ ಸ್ವತ್ತಾಗಿದೆಯೇಕೆ ? ಇಂಥದ್ದೊಂದು ಮಹತ್ತರ ಚರ್ಚೆಯ ಸರಣಿಯನ್ನು ವಿಚಾರವಾದಿ, ಭಾರತೀಯ ಕಂದಾಯ ಸೇವೆ (IRS) ಹಿರಿಯ ಅಧಿಕಾರಿ ಜಯರಾಮ್ ರಾಯಪುರ ಪ್ರಖರವಾಗಿ ಮುಂದುವರಿಸಿದ್ದಾರೆ. ಹಿಂದೆಯೂ ಇದರ ಬಗ್ಗೆ ಚರ್ಚೆಗಳಾಗಿದೆಯಾದರೂ ಆಳವಾದ ನೋಟ ಅಪರೂಪವಾಗಿತ್ತು. ಇಂಥ ಅಪರೂಪದ ವಿಚಾರವಾದತ್ವಕ್ಕೆ ಜಯರಾಮ್ ಚಿಂತನೆಯೂ ಸೇರ್ಪಡೆಯಾಗಿದೆ.
ಈ ಕುರಿತು ಜಯರಾಮ್ ರಾಯಪುರ ಅವರು ಟೆಡೆಕ್ಸ್ ಟಾಕ್ಸ್ (ಟೆಡೆಕ್ಸ್ ರಾಜಾಜಿನಗರ -TEDx Rajajinagar) ಯೂ ಟ್ಯೂಬ್ ವೇದಿಕೆಯಲ್ಲಿ ಮಾತನಾಡಿದ್ದಾರೆ. ಇಲ್ಲಿ ಅವರು ಕೇವಲ ಪ್ರಶ್ನೆಗಳನ್ನು ಎತ್ತುವುದಕ್ಕಷ್ಟೇ ಸೀಮಿತವಾಗದೇ 2047ರ ರ ಒಳಗೆ ಭಾರತೀಯ ಸಮುದಾಯಗಳಲ್ಲಿ ಉದ್ಯಮಶೀಲತೆ ಬೆಳೆಯಲು ಏನು ಮಾಡಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ತಮ್ಮ ವಿಚಾರದ ಸರಣಿಯಲ್ಲಿ ಪೂರಕವಾದ ಹರೀಶ್ ದಾಮೋದರನ್ ಅವರು ರಚಿಸಿರುವ “ಇಂಡಿಯಾಸ್ ನ್ಯೂ ಕ್ಯಾಪಿಟಲಿಸ್ಟ್” (India’s new capitalists) ಕೃತಿಯನ್ನು ಪ್ರಸ್ತಾಪಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಚೆಟ್ಟಿಯಾರ್ ಗಳು, ನಾಡಾರ್ ಗಳು, ಗೌಡ ಸಾರಸ್ವತ ಸಮಾಜ ಸೇರಿದಂತೆ ಕೆಲವೇ ಸಮುದಾಯಗಳು, ಉತ್ತರ ಭಾರತದಲ್ಲಿ ರಾಜಸ್ಥಾನದ ಮಾರ್ವಾಡಿ ಸಮುದಾಯ, ಗುಜರಾತಿನ ಕಚ್ಛ್ ಸಮುದಾಯ, ಪಂಜಾಬಿನ ಖಾತ್ರಿ ಸಮುದಾಯ,ಉತ್ತರದ ಇತರ ರಾಜ್ಯಗಳಲ್ಲಿ ಟಾಟಾ, ಮಿಸ್ತ್ರಿ ಸಮುದಾಯಗಳು ಉದ್ಯಮಶೀಲತೆ ಮೈಗೂಡಿಸಿಕೊಂಡು ಬೃಹತ್ತಾಗಿ ಬೆಳೆದಿರುವುದನ್ನು ಉಲ್ಲೇಖಿಸುತ್ತಾರೆ.
ಇದೇ ಸಂದರ್ಭದಲ್ಲಿ ಮುಂಬೈಗೆ ಕೇವಲ 200 ರೂಪಾಯಿ ಇಟ್ಟುಕೊಂಡು ಹೋಗಿ ಬೃಹತ್ ಉದ್ಯಮಿ ಎಂದು ಖ್ಯಾತರಾದ ವ್ಯಕ್ತಿಯ ಬಗ್ಗೆ ಪ್ರಸ್ತಾಪಿಸುವ ಜಯರಾಂ ಅವರು ಆ ವ್ಯಕ್ತಿಯ ಹತ್ತಿರದ ಬಂಧುಗಳು, ಮುಖ್ಯವಾಗಿ ಅವರ ಸಮುದಾಯದವರು ಅಲ್ಲಿನ ವ್ಯಾಪರೋದ್ಯಮದಲ್ಲಿ ಬೆಳೆದಿರುವುದರ ಬಗ್ಗೆ ಪ್ರಸ್ತಾಪಿಸುತ್ತಾರೆ.
ಉದ್ಯಮಶೀಲತೆ ಎನ್ನುವುದು ಸಾಧ್ಯವಿರುವ ಭಾರತೀಯ ಇತರ ಸಮುದಾಯಗಳಲ್ಲಿಯೂ ಬೆಳೆಯಬೇಕು. ಈ ರೀತಿಯ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು ಎನ್ನುವ ಜಯರಾಂ ಮಾತುಗಳು ಗಮನಾರ್ಹ.
ಜಯರಾಂ ರಾಯಪುರ ಅವರ ಮಾತುಗಳನ್ನು ಕೇಳುತ್ತಿದ್ದಾಗ ನನಗೆ ಅನಿಸಿದ್ದು ಚಮ್ಮಾರ ಸಮುದಾಯದವರು ತಮ್ಮ ವೃತ್ತಿಯನ್ನು ಬಹಳ ದೊಡ್ಡ ಉದ್ಯಮಶೀಲತೆಗೆ ಕೊಂಡೊಯ್ದು ಪ್ರತಿಷ್ಠಿತ ಉದ್ಯಮಿಗಳು ಎನ್ನಿಸಿಕೊಳ್ಳಬಹುದಾಗಿತ್ತು. ಆದರೆ ಆ ರೀತಿ ಆಗಲು ಅವಕಾಶವೇ ಒದಗಲಿಲ್ಲ. ಅಂಥ ವಾತಾವರಣವ ನಿರ್ಮಿತವಾಗಲಿಲ್ಲ. ಇಂದು ಪಾದರಕ್ಷೆಗಳ ಉದ್ಯಮ ಅಪಾರವಾಗಿ ಬೆಳೆದಿದೆ. ಅಲ್ಲಿನ ಉದ್ಯಮಿಗಳನ್ನು ನೋಡಿದರೆ ಚಮ್ಮಾರ ಸಮುದಾಯದವರು ಕಾಣುವುದೇ ಇಲ್ಲ. ಏಕೆ ?
ಪಟ್ಟಣ, ನಗರ ಮತ್ತು ಮಹಾನಗರಗಳಲ್ಲಿ ಬಟ್ಟೆಗಳನ್ನು ಸ್ವಚ್ಚ ಮಾಡಿ, ಇಸ್ತ್ರಿ ಮಾಡಿ ಕೊಡುವ ಉದ್ಯಮ ಬಹಳ ದೊಡ್ಡದಾಗಿ ಬೆಳೆದಿದೆ. ಇಲ್ಲಿನ ಉದ್ಯಮಪತಿಗಳನ್ನು ಗಮನಿಸಿದರೆ ಸಾಂಪ್ರದಾಯಿಕವಾಗಿ ಈ ವೃತ್ತಿ ಮಾಡಿಕೊಂಡು ಬಂದ ಧೋಬಿ ಸಮುದಾಯದವರು ಕಾಣುವುದೇ ಇಲ್ಲ, ಏಕೆ ?
ಈ ರೀತಿಯ ಅನೇಕ ಸಮುದಾಯಗಳನ್ನು ಉಲ್ಲೇಖಿಸುತ್ತಾ ಹೋಗಬಹುದು. ಸಾಂಪ್ರದಾಯಿಕವಾಗಿ ವೃತ್ತಿ ಮಾಡುತ್ತಿರುವ ಝಾತಿ ಸಮುದಾಯಗಳು ಬೇರೆ, ಅವರನ್ನು ಕೆಲಸಕ್ಕಿರಿಸಿಕೊಂಡು ಉದ್ಯಮಪತಿಗಳಾದವರು ಮತ್ಯಾರೋ !
ಇಂಥ ಅಸಮಾನತೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪಾತ್ರ ಏನು ? ಬ್ಯಾಂಕಿಂಗ್ ವಲಯಗಳ ಪಾತ್ರ ಏನು ? ಏನೂ ಇಲ್ಲ. ಈ ವಿಚಾರದ ಆಳಕ್ಕೆ ಹೋದಂತೆ ದಿಗ್ಬ್ರಮೆಯ ಅಂಶಗಳೇ ಗೋಚರಿಸುತ್ತವೆ. ಇಂಥ ಹೊತ್ತಿನಲ್ಲಿ ಜಯರಾಮ್ ರಾಯಪುರ ಚರ್ಚಿಸಿರುವ ವಿಚಾರಗಳು ದೊಡ್ಡ ಸಂವಾದಕ್ಕೆ ಕಾರಣವಾಗಬೇಕು. ಈ ಮುಂದಿನ ವಿಡಿಯೋದಲ್ಲಿ ಜಯರಾಮ್ ರಾಯಪುರ ಅವರ ಮಾತುಗಳನ್ನು ಕೇಳಬಹುದು.