Site icon ಕುಮಾರರೈತ

ಜಿಂಕೆ ಚಿತ್ರಕ್ಕೆ ಹೆಜ್ಜೆ ಇಟ್ಟರೆ ಅಲ್ಲಿತ್ತು ಹೆಬ್ಬುಲಿ

ಬಂಡೀಪುರದಲ್ಲಿ ಬೆಳಗ್ಗೆ ಇಳಿದಾಗ ಸೂರ್ಯ, ಆಗಷ್ಟೆ ಮುಖ ತೊಳೆದು ಮುಗುಳ್ನಗೆ ಸೂಸುವ ಕಂದಮ್ಮನಂತೆ ಹೊರಬರುತ್ತಿದ್ದ. ಅವನಿಗೆ ಹಾಯೆನ್ನಿಸುವಂತೆ ತಂಗಾಳಿ ಬೀಸುತ್ತಿತ್ತು. ಜಿಂಕೆಗಳಿಗೆ ಆ ಎಳೆಯ ಸೂರ್ಯನನ್ನು ನೋಡಿ ಅದೇನು ಖುಷಿಯೋ ನಿಂತಲ್ಲಿ ನಿಲ್ಲದೇ ಚಂಗನೆ ನೆಗೆಯುತ್ತಿದ್ದೆವು. ಅವುಗಳ ಚಿನ್ನಾಟ ಸೆರೆಹಿಡಿಯಲು ಕ್ಯಾಮೆರಾ ಹೊರತೆಗೆದು ಫ್ರೇಮಿಗಾಗಿ ನಾಲ್ಕೇ ಹೆಜ್ಜೆ ಮುಂದಿಟ್ಟರೆ ಅಲ್ಲೇ ಹೆಬ್ಬುಲಿ ಕುಳಿತಿತ್ತು.

ಅಬ್ಬಾ ಹುಲಿಯೇ ಎನಿಸುವಷ್ಟು ದೊಡ್ಡಗಾತ್ರದ ಹುಲಿಯದು. ನಮ್ಮನ್ನು ಕ್ಷಣಕಾಲ ದಿಟ್ಟಿಸಿತು. ಅದು ಅಲ್ಲಿಂದೇನೂ ಕದಲಲಿಲ್ಲ. ಕದಲುವ ಲಕ್ಷಣವೂ ಕಾಣಲಿಲ್ಲ. ನಾವು ಒಂದೇಒಂದು ಇಂಚೂ ಕದಲಲಿಲ್ಲ. ಅದು ತನ್ನಪಾಡಿಗೆ ತನ್ನ ಮುಂಗಾಲುಗಳ ಮೇಲೆ ತಲೆಯಿಟ್ಟಿತು. ದೇಹ ಸ್ತಭ್ಧವಾಗಿತಷ್ಟೆ. ಕಣ್ಣುಗುಡ್ಡೆಗಳು ಮಾತ್ರ ಕಟ್ಟೆಚ್ಚರ ವಹಿಸಿದ್ದವು. ನನ್ನ ಬಲಗೈ ತೋರುಬೆರಳು ನಿರಂತರ ಕ್ಲಿಕ್ಕಿಸುತ್ತಲೇ ಇತ್ತು.

ಹೆಬ್ಬುಲಿಗೂ ಜಿಂಕೆಗಳಿದ್ದ ಜಾಗಕ್ಕೂ ಕೇವಲ 200 ರಿಂದ 250 ಅಡಿ ದೂರ. ಎರಡು ಹೆಣ್ಣು ಜಿಂಕೆಗಳು ಹಣೆಗೆ ಹಣೆಹಚ್ಚಿ ಕಾದಾಡತೊಡಗಿದವು. ರಿಂಗ್ ಸುತ್ತ ನಿಂತ ಪ್ರೇಕ್ಷಕರಂತೆ ಉಳಿದ ಜಿಂಕೆಗಳು ಆ ಕಾದಾಟ ನೋಡತೊಡಗಿದವು. ಜಿಂಕೆಗಳು ಹಿಂಗಾಲುಗಳ ಮೇಲೆ ನಿಂತವು. ಮುಂಗಾಲುಗಳನ್ನು ಪರಸ್ಪರ ಹೆಣೆದುಕೊಂಡವು. ಹಿಂದೆ ಸರಿದವು. ಮತ್ತೆ ಮುಂದೆ. ಕ್ಯಾಮೆರಾ ಹುಲಿಯತ್ತಲೇ ಪೋಕಸ್ ಆಗಿತ್ತು. ಕಣ್ಣುಗಳ ಮುಂದಿನ ದೃಶ್ಯದ ಫ್ರೇಮಿನಲ್ಲಿ ಹುಲಿ ಮತ್ತು ಜಿಂಕೆಗಳಿದ್ದವು.

ಹೆಬ್ಬುಲಿ ನಿಧಾನವಾಗಿ ತಲೆ ಎತ್ತಿ ಅಕ್ಕಪಕ್ಕ ನೋಡಿತು. ಕಿವಿಯನ್ನು ಭುಜಕ್ಕೆ ಅದುಮಿ ಸಾಧ್ಯವಾದಷ್ಟೂ ಹಿಂದೆ ನೋಡಿತು. ನಮ್ಮ ಇರುವಿಕೆಯಿಂದ ಅದೇನೂ ವಿಚಲಿತವಾಗಿರಲಿಲ್ಲ. ನಿಮಿಷ ಹತ್ತಾಯಿತು. ಇಪ್ಪತ್ತಾಯಿತು. ಮುವತ್ತಾಯಿತು. ಹುಲಿ ಮೂರ್ನಾಲ್ಕು ಸಲ ತನ್ನ ಕತ್ತು ತಿರುಗಿಸಿ; ಬಾಲ ಅಲ್ಲಾಡಿಸಿರಬಹುದು ಅಷ್ಟೆ. ಹಾಗೆ ಒಂದು ತಾಸು ಕಳೆಯಿತು. ಹೆಣ್ಣುಜಿಂಕೆಗಳೆರಡ ಹುಸಿ ಕಾದಾಟ ನಿಂತಿತ್ತು. ಅವುಗಳ ಹಿಂಡು ಮೇಯುತ್ತಾ ಹಾಗೆ ಸರಿಯತೊಡಗಿದವು.

ಹುಲಿಯ ದಿವ್ಯಮೌನದಿಂದ ಜಿಂಕೆಹಿಂಡಿಗೂ ಧೈರ್ಯ ಬಂದಿತ್ತು. ಅವುಗಳು ನಿಧಾನವಾಗಿ ಹುಲಿ ಕುಳಿತಿದ್ದ ಬಂಡೆಯತ್ತ ಜರುಗತೊಡಗಿದವು. ಹುಲಿ ತನ್ನ ಭಂಗಿ ಬದಲಿಸಲಿಲ್ಲ. ಹೂಂಕರಿಸಲೂ ಇಲ್ಲ. ಅದು ನಮ್ಮತ್ತ ದಿಟ್ಟಿಸುವುದನ್ನು ಮರೆತಿತ್ತು. ನನ್ನ ಬೆನ್ನ ಹಿಂದೆ ಅರಣ್ಯ ಇಲಾಖೆ ವಾಚರ್ಸ್, ಗಾರ್ಡ್ಸ್ ನಿಂತಿದ್ದರು. ನಮ್ಮ ಉಸಿರಾಟದ ಸದ್ದೇ ನಮಗೆ ಕೇಳಿಸುತ್ತಿತ್ತು. ನಾವ್ಯಾರೂ ಕದಲದೇ ಅರಣ್ಯ ರಂಗಭೂಮಿಯಲ್ಲಿ ಮುಂದೆ ನಡೆಯುವ ಪ್ರಕ್ರಿಯೆಗೆ ಮೌನಸಾಕ್ಷಿಯಾಗಿದ್ದೆವು.

ಕಾಡಿನ ಕೌತುಕ ನಿಬ್ಬೆರಗುಗೊಳಿಸಿತ್ತು. ಆದರೆ ಈ ಹಂತಗಳಲ್ಲಿ ಮೈಮರೆಯದೇ ನಾನು ಕ್ಲಿಕ್ಕಿಸಿದ ಒಂದೆರಡು ಚಿತ್ರಗಳನ್ನು ಇಲ್ಲಿ ಕೊಟ್ಟಿದ್ದೇನೆ. ಒಂದು ತಾಸಿಗೂ ಹೆಚ್ಚುಹೊತ್ತು ನಾವ್ಯಾರೂ ಕೆಮ್ಮುವುದಿರಲಿ, ಜೋರಾಗಿ ಉಸಿರು ಕೂಡ ಆಡಿರಲಿಲ್ಲ. ನಾವು ತುಸು  ಮಾತನಾಡಿದ್ದರೂ ನಿಸರ್ಗದ ಆ ಸಹಜ ಪ್ರಕ್ರಿಯೆಗೆ ಭಂಗವಾಗುತ್ತಿತ್ತು.

Exit mobile version