Site icon ಕುಮಾರರೈತ

ಲಿಫ್ಟ್ ಬಾಯ್; ಸರಳತೆಯೇ ಸೊಬಗು

ಅದ್ದೂರಿ ಸೆಟ್ ಗಳಿಲ್ಲ, ವಿದೇಶಗಳಲ್ಲಿ ಚಿತ್ರಣವಿಲ್ಲ, ಹಾಡುಗಳಿಲ್ಲ. ಹೊರಾಂಗಣದ ದೃಶ್ಯಗಳೇ ಬೆರಳೆಣಿಕೆಯಷ್ಟು. ಇನ್ನೂ ವಿಶೇಷವೆಂದರೆ ಖ್ಯಾತ ಸಿನೆತಾರೆಯರೂ ಇಲ್ಲ. ಕೈ ಸುಡುವ ವೆಚ್ಚವನ್ನೂ ಮಾಡಿಲ್ಲ. ಹೀಗಿದ್ದೂ ಕೂಡ ಒಂದು ಸಿನೆಮಾ ನೋಡುಗರ ಮೆಚ್ಚುಗೆ ಗಳಿಸುತ್ತದೆ ಎಂದರೆ ಅಲ್ಲಿ ಪೂರ್ವಯೋಜನೆ ಜೊತೆಗೆ ತಂಡದ ಒಟ್ಟು ಪರಿಶ್ರಮದ ಫಲಿತಾಂಶ ಇದೆಯೆಂದೆ ಅರ್ಥ. ಹಿಂದಿಯ ಲಿಫ್ಟ್ ಬಾಯ್ ಇಂಥದೊಂದು ಸಿನೆಮಾ.
ಅಪಾರ್ಟ್ಮೆಂಟ್ ನಲ್ಲಿ ಲಿಫ್ಟ್ ಆಪರೇಟರ್ ಆಗಿರುವ ತಂದೆ, ಮೂರ್ನಾಲ್ಕು ಮನೆಗಳಲ್ಲಿ ಕೆಲಸ ಮಾಡುವ ಮಾಡುವ ತಾಯಿ, ಮತ್ತೆಮತ್ತೆ ಅಂತಿಮ ಇಂಜಿನಿಯರಿಂಗ್ ಡ್ರಾಯಿಂಗ್ ಪರೀಕ್ಷೆಯಲ್ಲಿ ನಪಾಸಾಗುತ್ತಲೇ ಇರುವ 24ರ ಹರೆಯದ ಯುವಕ. ಮಾನವೀಯತೆಯೇ ರೂಪ ತಳೆದಂತೆ ಕಾಣುವ ಅಪಾರ್ಟ್ಮೆಂಟ್ ಒಡತಿ, ತಾಯಿಯ ಕನಸು ನನಸು ಮಾಡಲು ಒಲ್ಲದ ಹದಿನೆಂಟರ ಯುವತಿ. ವೃತ್ತಿ ಸಂತೋಷ ಇಲ್ಲವೆನ್ನುವ ಯುವ ಇಂಜಿನಿಯರ್.
ಇಷ್ಟೇ ಪಾತ್ರಗಳು. ಆದರೆ ಪ್ರಧಾನವಾಗಿ ಕಾಣಿಸಿಕೊಳ್ಳುವುದು ನಾಲ್ಕೇ ಪಾತ್ರಗಳು. ಆ ಯುವಕ, ತಂದೆಯ ಕನಸು, ಅಪಾರ್ಟ್ಮೆಂಟ್ ಒಡತಿ ನಿರೀಕ್ಷೆ, ನನಸು ಮಾಡುತ್ತಾನಾ ಎಂಬುದೇ ಕುತೂಹಲ. ಅಪ್ಪನ ಅನಾರೋಗ್ಯದ ಕಾರಣದಿಂದ ತಾನೇ ಲಿಫ್ಟ್ ಆಪರೇಟರ್ ಆಗಬೇಕಾಗಿ ಬರುವ ರಾಜು ತಾವ್ದೆ ಅಲ್ಲಿ ಬದಲಾವಣೆ ಆಗತೊಡಗುತ್ತಾನೆ. ಜೀವನ ಏನೇನುವುದು ಅರ್ಥವಾಗುತ್ತಾ ಹೋಗುತ್ತದೆ.
ಇದಿಷ್ಟು ಕಥೆಯನ್ನು ಸಣ್ಣದೊಂದು ಮನೆ ಎಂದು ಕರೆಯಿಸಿಕೊಳ್ಳುವ ಪುಟ್ಟ ಹಾಲ್, ಅಪಾರ್ಟ್ಮೆಂಟಿನ ಹೊರಭಾಗ, ಲಿಫ್ಟ್, ಅಲ್ಲಿನ ಮನೆಯೊಂದರ ಹಾಲ್ ಇಷ್ಟೆ ಇಟ್ಟುಕೊಂಡು ನಿರ್ದೇಶಕ ಜೊನಾಥನ್ ಅಗಸ್ಟಿನ್ ಕಥೆ ಹೇಳುತ್ತಾರೆ. ವಿಶೇಷ ಎಂದರೆ ಕಥೆ – ಚಿತ್ರಕಥೆಯೂ ಇವರದೇ.ಚಿತ್ರದುದ್ದಕ್ಕೂ ಒಂದೇ ಒಂದು ಅನಗತ್ಯ ಸಂಭಾಷಣೆ ( ಆಶೀಶ್ ಪಿ. ವರ್ಮ)ಯಾಗಲಿ, ದೃಶ್ಯವಾಗಲಿ ಇಲ್ಲ. ಬಿಗಿಯಾದ ಚಿತ್ರಕಥೆಯೇ ಸಿನೆಮಾದ ನಾಯಕ.


ಮುಂಬೈ ಮಹಾನಗರದಲ್ಲಿ ನಡೆಯುವ ಕಥೆಯಲ್ಲಿ ಹಿಂದಿ ಪ್ರಧಾನವಾಗಿದ್ದರೂ – ಮರಾಠಿ – ಇಂಗ್ಲಿಷ್ ಭಾಷೆಗಳೂ ಬಳಕೆಯಾಗಿವೆ. ಆದರೆ ಎಲ್ಲಿಯೂ ಇವುಗಳನ್ನು ಅನಗತ್ಯವಾಗಿ ತುರುಕಿದ್ದಾರೆ ಎನಿಸುವುದಿಲ್ಲ. ಬಹಳ ಸಹಜವಾಗಿ ಅವು ಬಂದಿವೆ. ಪಾತ್ರಗಳ ಅವಶ್ಯಕತೆಗೆ ತಕ್ಕಂತೆ ಭಾಷೆಗಳು ಬಳಕೆಯಾಗಿವೆ ಎಂದು ಪ್ರೇಕ್ಷಕರಿಗೆ ಮನವರಿಕೆಯಾಗುತ್ತದೆ.
ಸಿಮೊನ್ ಬಥೂಲ, ಅಂಕುಶ್ ಕುಲಾಲ್ ನಿರ್ವಹಿಸಿರುವ ಕ್ಯಾಮೆರಾ ಕೂಡ ನಿರ್ದಿಷ್ಟ ಫ್ರೇಮುಗಳಲ್ಲಿಯೇ ಕೆಲಸ ಮಾಡುತ್ತಾ ಹೋಗುತ್ತದೆ. ನೆರಳು – ಬೆಳಕಿನ ಸಂಯೋಜನೆ ಗಮನ ಸೆಳೆಯುತ್ತದೆ. ಅಪಾರ್ಟ್ಮೆಂಟಿನ ಎಲ್ಲೆಂದರಲ್ಲಿ ಅದು ಒಡಾಡುವುದಿಲ್ಲ. ಸಿಕ್ಕಸಿಕ್ಕ ದೃಶ್ಯಗಳನ್ನೆಲ್ಲ ತೋರಿಸುವುದಿಲ್ಲ. ಅಪಾರ್ಟ್ಮೆಂಟಿನ ಎರಡು ಫ್ಲೋರಿನ ಸೀಮಿತ ಭಾಗ, ಲಿಫ್ಟ್ ನತ್ತ ಮಾತ್ರ ಅದರ ಗಮನ. ಕೆಳಮಧ್ಯಮ ವರ್ಗದ ಗಲ್ಲಿಯೂ ಎರಡ್ಮೂರು ಬಾರಿ ಕಾಣಿಸಿಕೊಳ್ಳುತ್ತದೆ. ಆದರೆ ಗಲ್ಲಿಯ ಎಲ್ಲೆಂದರಲ್ಲಿ ಅದು ಫೋಕಸ್ ಆಗುವುದಿಲ್ಲ.
ರೆಯಾನ್ ಕ್ಲರ್ಕ್ ಅಬ್ಬರವಿಲ್ಲದ ಹಿನ್ನೆಲೆ ಸಂಗೀತ ನೀಡಿದ್ದಾರೆ. ಆದರೆ ಒಂದೆರಡು ಕಡೆ ಸಂಭಾಷಣೆಗಿಂತ ಹಿನ್ನೆಲೆ ಸಂಗೀತದ ಪಿಚ್ ಹೆಚ್ಚಾಗಿದೆ ಎನಿಸುತ್ತದೆ. ಪರೀಕ್ಷಿತ ಜಾ ಅವರ ಕತ್ತರಿಯೂ ಉತ್ತಮವಾಗಿ ಕೆಲಸ ಮಾಡಿದೆ. ಆದರೆ ಸಂಕಲವನ್ನು ಇನ್ನಷ್ಟು ಹರಿತ ಮಾಡುವ ಅವಕಾಶವಿತ್ತು ಎನಿಸುತ್ತದೆ.
ಮೊಯಿನ್ ಖಾನ್ ( ರಾಜು ತಾವ್ಡೆ ), ಸಾಗರ್ ಕಾಳೆ ( ಕೃಷ್ಣ ತಾವ್ಡೆ) ನೈಲಾ ಮಾಸೂದ್ ( ಮೌರಿನಾ ಡಿಸೋಜಾ), ಅನಿಶಾ ಶಾ ಪ್ರಿನ್ಸೆಸ್ ಕಪೂರ್ ) ಅಭಿನಯ ಮನಸೆಳೆಯುತ್ತದೆ. ಎಲ್ಲಿಯೂ ಓವರ್ ಆಕ್ಟಿಂಗ್ ಇಲ್ಲ. ವಿಶೇಷವಾಗಿ ಮೊಯಿನ್ ಖಾನ್, ನೈಲಾ ಮಸೂದ್ ಅಭಿನಯ ಗಮನಾರ್ಹ.


ಸಿನೆಮಾದ ಅಂತ್ಯ ತೀರಾ ನಾಟಕೀಯ ಎನಿಸುತ್ತದೆ. ನಿರ್ದೇಶಕ ಜೊನಾಥನ್ ಅಗಸ್ಟಿನ್ ಕ್ರಿಶ್ಚಿಯನ್ ಧರ್ಮದ ಹಿನ್ನೆಲೆಯವರಾದ ಕಾರಣ ಮೌರಿನಾ ಡಿಸೋಜಾ ಪಾತ್ರಕ್ಕೆ ಅಗತ್ಯಕ್ಕಿಂತ ಹೆಚ್ಚು ಉದಾರತೆ ಆರೋಪಿಸಿದ್ದಾರೆನೊ ಎಂಬ ಭಾವ ಬಾರದಿರದು. ಈ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಕೇಂದ್ರ, ರೂಢಿ – ವಿಧಿ – ವಿಧಾನಗಳಿಗೆ ನೀಡಿರುವ ಮನ್ನಣೆ ಪ್ರಜ್ಞಾಪೂರ್ವಕ ಇರಬಹುದೇ ಎನಿಸಿತು.
ಒಟ್ಟಂದದಲ್ಲಿ ನೋಡಿದಾಗ ಅಚ್ಚುಕಟ್ಟಾದ ಚಿತ್ರಕಥೆ ಇಟ್ಟುಕೊಂಡು, ಸಿನೆಮ್ಯಾಟಿಕ್ ಭಾಷೆಯನ್ನು ಉತ್ತಮವಾಗಿ ದುಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಒಂದೊಳ್ಳೆಯ ಸಿನೆಮಾ ಕೊಡಬಹುದು ಎನ್ನುವುದಕ್ಕೆ ಮಾದರಿಯಾಗುವ ಚಿತ್ರಗಳಲ್ಲಿ ಸಾಲಿನಲ್ಲಿ “ಲಿಫ್ಟ್ ಬಾಯ್” ಕೂಡ ನಿಲ್ಲುತ್ತದೆ. ಇದು “ನೆಟ್ ಫ್ಲಿಕ್ಸ್ ನಲ್ಲಿದೆ.

Exit mobile version