ಯುಗಾದಿ, ಕರ್ನಾಟಕ ಮತ್ತು ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬಹುದೊಡ್ಡ ಆಚರಣೆ. ಇದನ್ನು ಹೊಸ ವರ್ಷ ಎಂದು ಭಾವಿಸಲಾಗಿದೆ. ಇದರ ಹಿಂದೆ ವೈಜ್ಞಾನಿಕ ಮನೋಭಾವವೂ ಇದೆ. ಚೈತ್ರ ಮಾಸದ ವೇಳೆಗೆ ಗಿಡಮರಗಳು ಹಸಿರೊದ್ದು ನಳನಳಿಸುತ್ತಿರುತ್ತವೆ. ಹೂಗಳು ಬಿರಿದು ದುಂಬಿ, ಜೇನುಗಳನ್ನು ಆಕರ್ಷಿಸುತ್ತಿರುತ್ತವೆ. ಇದೇ ವೇಳೆಗೆ ಪ್ರಮುಖವಾಗಿ ಮಾವು ಸೇರಿದಂತೆ ಬಗೆಬಗೆಯ ಹಣ್ಣುಗಳ ರಸಸ್ವಾದನೆಯೂ ಆಗುತ್ತದೆ. ಸಕಲ ಜೀವಿಗಳು ಹೊಸ ಬಗೆಯ ಸಂತಸದಲ್ಲಿ ಇರುತ್ತವೆ. ಇದನ್ನು ಯುಗಾದಿ ಮೂಲಕ ಸಂಭ್ರಮಿಸಲಾಗುತ್ತದೆ.
ಯುಗಾದಿ ಎಂದರೆ ವರ್ಷದ ಆದಿ ಎಂಬ ಅರ್ಥದಲ್ಲಿಯೇ ಗ್ರಹಿಸಲಾಗಿದೆ. ಆದರೆ ಇದು ಸೀಮಿತ ಅರ್ಥವಾಗಿ ಮಾತ್ರ ಉಳಿದಿಲ್ಲ. ಯುಗ ಎಂದರೆ ಅವಧಿ ಎಂಬರ್ಥವೂ ಇದೆ. ತೇತ್ರಾ ಯುಗ, ದ್ವಾಪರ ಯುಗ, ಕಲಿ ಯುಗ ಎಂದೆಲ್ಲ ಕರೆಯುವುದನ್ನು ಗಮನಿಸಬಹುದು.ಬಹುತ್ವದ ಮತ್ತು ಬಹು ತತ್ವದ ಭಾರತದಲ್ಲಿ ಒಂದೊಂದು ಯುಗವೂ ಒಂದೊಂದು ಅಪೂರ್ವ ಕಾವ್ಯಗಳನ್ನು ಸಂಕೇತಿಸುತ್ತದೆ. ಆದರೆ ಕಲಿಯುಗದ ಕಾವ್ಯವೇನು ಎಂಬುದನ್ನು ಮುಂದಿನ ಬಹು ಕಾಲದ ನಂತರದದವರು ಗ್ರಹಿಸಬಹುದು !
ಯುಗ ಎಂದರೆ ನೊಗ, ಜೋಡಿ ಎಂಬರ್ಥವೂ ಇದೆ. ಇದು ಕೂಡ ಯುಗಾದಿಗೆ ಅನ್ವರ್ಥಕವಾಗುತ್ತದೆ. ಇಲ್ಲಿನ ಆಚರಣೆಗಳು ಸಹ ಹಾಗೆಯೇ ಬೆಸೆದುಕೊಂಡಿದೆ. ಕನ್ನಡ ರಂಗಭೂಮಿ, ಸಿನಿಮಾ ಕ್ಷೇತ್ರದ ಖ್ಯಾತ ನಿರ್ದೇಶಕ ನಾಗಾಭರಣ ಅವರು ಯುಗಾದಿ ಹಬ್ಬದ ದಿನ ನನಗೆ ಮುಂದಿನ ಶುಭ ಆಶಯ ಕಳಿಸಿದರು
ಯುಗ ಅಂದರೆ ಜೋಡಿ.
ಹೆಣ್ಣು ಗಂಡು/ ಸುಖ ದುಃಖ/ ಲಾಭ ನಷ್ಟ/ ಸೋಲು ಗೆಲುವು/ ಹಗಲು ಇರುಳು/ ಹುಟ್ಟು ಸಾವು/ ಬೇವು ಬೆಲ್ಲ/
ಸಿಹಿ ಕಹಿಯ ಮೋಡಿ……
ಮತ್ತೆ ಯಾವ ಯುಗದ ಆದಿ
ಮತ್ತೆಮತ್ತೆ ವರುಷ ವರುಷ ಹೊಸ ಯುಗಾದಿ…ಭಾರತದ ಹೊಸ ವರುಷದ ಶುಭಾಷಯಗಳು
ಬಂದಿದ್ದೆಲ್ಲ ಬರಲಿ ಶಿವನ ದಯೆಯೊಂದಿರಲಿ ಎಂಬ ಸದಾಶಯದೊಂದಿಗೆ ಯುಗಾದಿ ದಿನ ಪೂಜೆ ಮಾಡಿದ ತಕ್ಷಣ ಸೇವಿಸುವುದು ಬೇವು-ಬೆಲ್ಲದ ಮಿಶ್ರಣ. ಇದು ಕಹಿ – ಸಿಹಿಯನ್ನು ಸಮಭಾವದಿಂದ ಸಮಚಿತ್ತದಿಂದ ಗ್ರಹಿಸಬೇಕು ಎಂಬುದನ್ನು ಅರ್ಥೈಸುತ್ತದೆ. ಯುಗಾದಿ ದಿನ ಒಬ್ಬಟ್ಟು / ಹೋಳಿಗೆ ಪ್ರಮುಖವಾದ ಸಿಹಿ ತಿನಿಸು. ವಿಶೇಷ ಸಸ್ಯಹಾರಗಳನ್ನು ತಯಾರಿಸಿ ಸೇವಿಸಲಾಗುತ್ತದೆ. ಇದರ ಮಾರನೇ ದಿನವೇ ಹೊಸ್ತೊಡಕು ಅಥವಾ ಹೊಸ ತೊಡಕು.
ಹೊಸ್ತೊಡಕು ಅಥವಾ ಹೊಸ ತೊಡಕು ದಿನ ಮಾಂಸಹಾರವೇ ವಿಶೇಷ ಎನ್ನುವುದಕ್ಕಿಂತಲೂ “ಗುಡ್ಡೆ ಮಾಂಸ”ವೇ ವಿಶೇಷ ಎಂದು ಹೇಳುವುದು ಸೂಕ್ತ. ಇತ್ತೀಚಿನ ದಿನಗಳಲ್ಲಿ ಮಹಾ ನಗರ ಪ್ರದೇಶಗಳಲ್ಲಿ ಗುಡ್ಡೆ ಮಾಂಸ ತರುವುದು ಕಡಿಮೆಯಾಗಿತ್ತೆ ವಿನಃ ನಿಂತಿರಲಿಲ್ಲ. ಮಹಾನಗರ ಬೆಂಗಳೂರು ಹಳ್ಳಿಗಳ ಸಮುಚ್ಚಯ. ಈಗಲೂ ಇಲ್ಲಿನ ಹಳ್ಳಿ ಚಹರೆ ಹೊದ್ದ ಪ್ರದೇಶಗಳಾದ ಶಿವನಹಳ್ಳಿ, ಹೊಸಕೆರೆಹಳ್ಳಿ ಸೇರಿದಂತೆ ಅನೇಕ ಕಡೆ ಗುಡ್ಡೆ ಮಾಂಸ ದೊರೆಯುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಯುಗಾದಿ ಹಬ್ಬದ ಮರುದಿನ ಗುಡ್ಡೆ ಮಾಂಸ ತರುವುದಕ್ಕಾಗಿಯೇ ಕೆಲವು ತಿಂಗಳುಗಳ ಮುಂಚಿತವಾಗಿಯೇ ಚೀಟಿ ದುಡ್ಡು ಹಾಕುವವರು ಇದ್ದಾರೆ. ಹೀಗೆ ಚೀಟಿ ಹಾಕದೇ ಇದ್ದವರು ಗುಡ್ಡೆ ಮಾಂಸ ಮಾರುವಲ್ಲಿ ಕೆಲವು ಸಮಯ ನಿರೀಕ್ಷಿಸಿ ಹಣ ಕೊಟ್ಟು ತೆಗೆದುಕೊಂಡು ಹೋಗುತ್ತಾರೆ.
ಮಾಂಸಹಾರ ಪ್ರಿಯರು ಯುಗಾದಿ ದಿನದಂದು ಮಾತ್ರವಲ್ಲದೇ ಇತರ ವಿಶೇಷ ದಿನಗಳಂದು ಸಹ ಗುಡ್ಡೆ ಮಾಂಸ ತರುತ್ತಾರೆ. ಆದರೆ ಯುಗಾದಿ ಮರುದಿನ ಹೊಸ್ತೊಡಕು ದಿನ ತರುವುದರಲ್ಲಿ ವಿಶೇಷತೆಯಿದೆ. ಮಾನವರು ಒಂದೆಡೆ ಗುಂಪುಗುಂಪಾಗಿ ನೆಲೆಯೂರಲು ಆರಂಭಿಸಿದ ಮೇಲೆ ಬೇಟೆಯಾಡಿ ತಂದ ಪ್ರಾಣಿಯನ್ನು ಸಮಪಾಲು ಮಾಡಿಕೊಳ್ಳುತ್ತಿದ್ದರು. ಇಲ್ಲಿ ಸಮಪಾಲು ಎಂದರೆ ಪ್ರಾಣಿಯ ಎಲ್ಲ ಅವಯವಗಳೂ ಇರುವುದರ ಸಂಗ್ರಹ. ಇದರಲ್ಲಿ “ತಲೆಕಾಲು” ಮಾತ್ರ ಸೇರಿಸದೇ ಅದನ್ನು ಸಮುದಾಯದ ಯಜಮಾನ/ಯಜಮಾನ್ತಿಗೆ ಅಥವಾ ಬೇಟೆಯಾಡಲು ವಿಶೇಷ ಕಾರಣಕರ್ತನಾದ ವ್ಯಕ್ತಿಗೆ ನೀಡುವ ಸಂಪ್ರದಾಯವಿದೆ.
ಇತ್ತೀಚಿನ ದಶಕಗಳಲ್ಲಿ ವನ್ಯಪ್ರಾಣಿಗಳನ್ನು ಬೇಟೆಯಾಡುವುದು ಕಾನೂನು ಬಾಹಿರ. ಆದರೆ ಬೇಟೆ ನಿಷೇಧವಾಗದ ದಿನಗಳಲ್ಲಿ ಸಮುದಾಯಗಳು ತಮ್ಮ ಬೆಳೆಗಳನ್ನು ಬಾಧಿಸುವ ಸಣ್ಣ ಪ್ರಾಣಿಗಳನ್ನು ವಿಶೇಷವಾಗಿ ಕಾಡು ಹಂದಿ, ಜಿಂಕೆಗಳನ್ನು ಬೇಟೆಯಾಡುತ್ತಿದ್ದರು. ಬೇಟೆ ಗುಂಪಿನಲ್ಲಿ ಎಷ್ಟು ಸಕ್ರಿಯ ಸದಸ್ಯರಿದ್ದಾರೆ ಎಂಬುದನ್ನು ಎಣಿಸಿ ಅಷ್ಟು ಗುಡ್ಡೆಗಳನ್ನು ಮಾಡುತ್ತಿದ್ದರು. ಇದರಲ್ಲಿ ಬೇಟೆಯಲ್ಲಿ ಪಾಲ್ಗೊಂಡ ನಾಯಿಗಳಿಗೂ ಪಾಲಿರುತ್ತಿತ್ತು. ಮೊದಲು ಬಾಣ ಅಥವಾ ಬಂದೂಕಿನ ಗುಂಡಿನಿಂದ ಹೊಡೆದು ಬೇಟೆಯನ್ನು ಕೆಡವಿದ, ಸಾಯಿಸಿದ ವ್ಯಕ್ತಿಗೆ ವಿಶೇಷವಾದ ಪಾಲು ಇರುತ್ತಿತ್ತು.
ಹೀಗೆ ಬೇಟೆ ಪ್ರಾಣಿಯ ಮಾಂಸವನ್ನು “ಸಮಪಾಲು” ಮಾಡುವುದು ಇಂದಿಗೂ ಗುಡ್ಡೆಮಾಂಸ ಮೂಲಕ ಉಳಿದುಕೊಂಡು ಬಂದಿದೆ. ಮಾಂಸದಂಗಡಿಗೆ ಹೋದಾಗ ಅಲ್ಲಿ ಆ ಪ್ರಾಣಿಯ ಎಲ್ಲ ಅವಯವಗಳನ್ನು ಸಂಗ್ರಹಿಸಿ ಕೊಡುವುದಿಲ್ಲ. ನಿರ್ದಿಷ್ಟವಾಗಿ ತೊಡೆ ಭಾಗದ್ದನ್ನು, ಎದೆಭಾಗದ್ದನ್ನೋ ಕತ್ತರಿಸಿ ತೂಕ ಹಾಕಿ ಕೊಡುತ್ತಾರೆ. ಗುಡ್ಡೆಮಾಂಸದಲ್ಲಿಯೂ ಕೊನೆಗೆ ತೂಕ ಹಾಕುತ್ತಾರಾದರೂ ಅದರಲ್ಲಿ ಪ್ರಾಣಿಯ ಎಲ್ಲ ಅವಯವಗಳ ತುಣಕು ಇರುತ್ತದೆ. ಇದರಿಂದಾಗಿಯೇ ಗುಡ್ಡೆಮಾಂಸದಿಂದ ತಯಾರಿಸಿದ ಖಾದ್ಯಗಳಿಗೆ ಬಹು ವಿಶೇಷ ರುಚಿ ಇರುತ್ತದೆ ಎಂದು ಹೇಳುತ್ತಾರೆ.
ಹೊಸ್ತೊಡಕು ದಿನ ಮಾಂಸಹಾರದ ಜೊತೆಗೆ ಪರಂಪರೆ ಜ್ಞಾನದಿಂದ ಸ್ಥಳೀಯವಾಗಿ ದೊರೆಯುವ ಅಕ್ಕಿ, ಹಣ್ಣುಗಳು, ಕೆಲವು ಬಗೆಯ ಹೂವುಗಳು ಉದಾಹರಣೆಗೆ ಹಿಪ್ಪೆ ಹೂವು ಬಳಸಿ ಮದ್ಯವನ್ನು ತಯಾರಿಸುತ್ತಿದ್ದರು. ಹಾಡಿ, ಕುಣಿದು ಮದ್ಯ – ಮಾಂಸ ಸೇವಿಸಿ ವಿಶ್ರಮಿಸಿ ಮರುದಿನ ಹೊಸ ಹುರುಪಿನೊಂದಿಗೆ ದೈನಂದಿನ ದುಡಿಮೆಗೆ ಸಿದ್ದವಾಗುತ್ತಿದ್ದರು.