Site icon ಕುಮಾರರೈತ

ಗೃಹಜ್ಯೋತಿ ನೋಂದಣಿ ಸರಳ ಸುಲಭ

ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ;  “ ಉಚಿತ ಬೆಳಕು, ಸುಸ್ಥಿರ ಬದುಕು” ಘೋಷಣೆಯಡಿ ಇಂಧನ ಇಲಾಖೆ ಮೂಲಕ ಗೃಹ ಜ್ಯೋತಿ ಯೋಜನೆ ಜಾರಿ ಮಾಡಿದೆ. ಇದರ ಮೂಲಕ 200 ಯೂನಿಟ್ ತನಕ ವಿದ್ಯುತ್ ಅನ್ನು ಉಚಿತವಾಗಿ ಬಳಸುವ ಸದವಾಕಾಶ ನೀಡಿದೆ. ಇಂದಿನಿಂದ ಅಂದರೆ ಜೂನ್ 18, 2023 ರಿಂದ ನೋಂದಣಿ ಆರಂಭವಾಗಿದೆ.

ಈ ಯೋಜನೆಯ ಫಲಾನುಭವಿಗಳಾಗಲು  ರಾಜ್ಯ ಸರ್ಕಾರದ್ದೇ ಆದ ಸೇವಾಸಿಂಧು ಪೋರ್ಟಲ್ ಮುಖಾಂತರ ನೋಂದಾಯಿಸಿಕೊಳ್ಳಬಹುದು. ನೋಂದಣಿ ಪ್ರಕ್ರಿಯೆಯನ್ನು ಕ್ಲಿಷ್ಟಗೊಳಿಸದೇ ಅತ್ಯಂತ ಸರಳವಾಗಿ ಮಾಡುವಂತೆ ಅವಕಾಶ ನೀಡಿರುವುದು ಸಹ ಗಮನಾರ್ಹ ಸಂಗತಿ. ಇದರಿಂದ ವಿದ್ಯುತ್ ಬಳಕೆದಾರರು ಸೇವಾಸಿಂಧು ಕೇಂದ್ರಗಳ ಮುಂದೆ ಉದ್ದನೆಯ ಸರದಿ ಸಾಲಿನಲ್ಲಿ ನಿಲ್ಲದೇ ತಮ್ಮತಮ್ಮ ಮೊಬೈಲ್ (ಸ್ಮಾರ್ಟ್ ಪೋನ್) ಬಳಸಿಯೇ ನೋಂದಣಿ ಮಾಡಬಹುದು.

ಅಗತ್ಯ ದಾಖಲೆ ಮುಂದಿರಲಿ

ನಿಮ್ಮ ಸ್ವಂತ ಮನೆ ಅಥವಾ ಬಾಡಿಗೆ ಮನೆಯ ವಿದ್ಯುತ್ ಮೀಟರ್ ಬಿಲ್, ಆಧಾರ್ ಕಾರ್ಡ್, ನೋಂದಣಿ ಮಾಡುತ್ತಿರುವ ವ್ಯಕ್ತಿಯ ಮೊಬೈಲ್ ನಂಬರ್ ಬರೆದಿರುವ ಚೀಟಿಗಳನ್ನು ಮುಂದಿಟ್ಟುಕೊಳ್ಳಿ.

https://sevasindhugs.karnataka.gov.in ಈ ಲಿಂಕ್ ಅನ್ನು ಕ್ಲಿಕ್ ಮಾಡಿ. ಸೇವಾಸಿಂಧು ಪೋರ್ಟಲ್ ತೆರೆದುಕೊಳ್ಳುತ್ತದೆ.  ನಮೂನೆ (ಫಾರಂ) ಅನ್ನು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಭರ್ತಿ ಮಾಡುವ ಅವಕಾಶ ನೀಡಲಾಗಿದೆ. ನಿಮಗೆ ಸರಳ ಸುಲಭ ಎನಿಸುವ ಭಾಷೆ ಆಯ್ಕೆ ಮಾಡಿಕೊಳ್ಳಿ.

ನಿಮಗೆ ಬಂದಿರುವ ವಿದ್ಯುತ್  ಬಿಲ್ ನಲ್ಲಿ  ನಮೂದಾಗಿರುವ ಖಾತೆ / ಸಂಪರ್ಕ ಸಂಖ್ಯೆಯನ್ನು ಓಪನ್ ಆಗಿರುವ ನಮೂನೆ (ಫಾರಂ)ಯಲ್ಲಿ ನಮೂದು ಮಾಡಿ. ವಿದ್ಯುತ್ ಬಿಲ್ ನಲ್ಲಿ ಇರುವ ಖಾತೆ ದಾರರ ಹೆಸರನ್ನು ನಮೂದಿಸಿ, ಖಾತೆ ಸಂಖ್ಯೆ ಸರಿಯಾಗಿದ್ದರೆ ತಂತಾನೆ ನಿಮ್ಮ ಹೆಸರು ಖಾತದಾರರ ಹೆಸರಿನಲ್ಲಿ ಪ್ರದರ್ಶಿತವಾಗುತ್ತದೆ.

ನಮೂನೆ (ಫಾರಂ) ನಲ್ಲಿ ನಮೂದಿಲಾಗಿರುವ ಅಂದರೆ ಭರ್ತಿ ಮಾಡಿರುವ ವಿವರಗಳು ನಿಮ್ಮ ವಿದ್ಯುತ್ ಬಿಲ್ಲಿನಲ್ಲಿ ಇರುವಂತೆಯೇ ಇದೆಯೇ ಎಂದು ಒಂದಲ್ಲ ಎರಡು ಬಾರಿ ತಾಳೆ ನೋಡಿ. ಮುಖ್ಯವಾಗಿ ನಿವಾಸಿಯ ವಿಧ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಮನೆ ಮಾಲಿಕರು, ಬಾಡಿಗೆದಾರ ಎಂದಿರುತ್ತದೆ. ನೀವು ಬಾಡಿಗೆದಾರರು ಆಗಿದ್ದಲ್ಲಿ ಬಾಡಿಗೆದಾರ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಒಂದುವೇಳೆ ನೀವೇ ಮನೆ ಮಾಲಿಕರಾಗಿದ್ದರೆ ಮನೆ ಮಾಲಿಕರು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ

ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಇದನ್ನು ಸರಿಯಾಗಿ ನಮೂದಿಸಿದ್ದರೆ ನೀವು ಆಧಾರ್ ಕಾರ್ಡ್ ಮಾಡಿಸುವಾಗ ಕೊಟ್ಟಿರುವ ವಿಳಾಸವೇ ಬರುತ್ತದೆ. ನೀವು ಹಾಲಿ ವಾಸವಿರುವ ಮನೆಯ ವಿಳಾಸವೇ ಇಲ್ಲಿ ಇರಬೇಕೆಂದೇನೂ ಇಲ್ಲ. ನೀವು ಬಾಡಿಗೆದಾರರಾಗಿದ್ದು ನೀವು ಮನೆಯ ಮಾಲಿಕರೊಂದಿಗೆ ಮಾಡಿಕೊಂಡಿರುವ ಬಾಡಿಗೆ ಕರಾರು ಪತ್ರವಿದ್ದರೆ ಸಾಕು. ಬಾಡಿಗೆ ಕರಾರು ಪತ್ರವನ್ನು ಅಪ್ ಲೋಡ್ ಮಾಡುವ ಅಗತ್ಯವೇನೂ ಇಲ್ಲ. ಒಂದುವೇಳೆ ಇಂಧನ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಬಂದರೆ ಆಗ ಹಾಜರುಪಡಿಸುವ ಅಗತ್ಯವಿರುತ್ತದೆ.

ನಿಮ್ಮ ಆಧಾರ್ ಅನ್ನು ಪರಿಶೀಲಿಸಿ ಎಂಬ ಬಟನ್ ಒತ್ತಿರಿ. ಇದು ನಿಮ್ಮನ್ನು EKYC ಎಂಬ ವೆಬ್ ಪೇಜ್ ಗೆ ಕರೆದೊಯ್ಯುತ್ತದೆ. ಅಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ನೀವು ಆಧಾರ್ ಜೊತೆಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. ಅದನ್ನು ನಮೂದಿಸಿ ಆಧಾರ್ ಮಾಹಿತಿಯನ್ನು ಹಂಚಿಕೊಳ್ಳಲು ಚೆಕ್ ಬಾಕ್ಸ್ ಟೆಕ್ ಮಾಡಿ SUBMIT ಬಟನ್ ಒತ್ತಿ.

ಈ ನಂತರ ಸೇವಾ ಸಿಂಧು ವೆಬ್ ಪುಟಕ್ಕೆ ಮರಳುತ್ತದೆ. ಅಧಾರ್ ವಿವರಗಳನ್ನು ಪಡೆಯಿರಿ ಎಂಬ ಬಟನ್ ಒತ್ತಿರಿ. ಆಧಾರ್ ನಲ್ಲಿರುವಂತೆ ನಿಮ್ಮ ಹೆಸರು ಪ್ರದರ್ಶಿತವಾಗುತ್ತದೆ. ಸಂವಹನಕ್ಕಾಗಿ ನಿಮ್ಮ ಅಥವಾ ಸುಲಭವಾಗಿ ಲಭ್ಯವಾಗುವ ನಿಮ್ಮ ಕುಟುಂಬದವರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಘೋಷಣೆಯ ಕೆಳಗಿನ | AGREE ಚೆಕ್ ಬಾಕ್ಸ್ ಅನ್ನು ಟಿಕ್ ಮಾಡುವ ಮೂಲಕ ಒಪ್ಪಿಗೆ ನೀಡಿ. ಇದರಲ್ಲಿ “ಈ ಮೇಲಿನ ಖಾತೆ ಸಂಖ್ಯೆಯನ್ನು ಗೃಹ ಬಳಕೆಗೆ ಮಾತ್ರ ಬಳಸಲಾಗುತ್ತದೆ. ಒಂದುವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಿದ್ದಲ್ಲಿ ಪ್ರಯೋಜನಗಳನ್ನು ಸ್ವಯಂ ಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನನಗೆ ತಿಳಿದಿದೆ. ಮತ್ತು ನಾನು ಈಗಾಗಲೇ ಪಡೆದಿರುವ ಪ್ರಯೋಜನಗಳನ್ನು ಬಡ್ಡಿಯೊಂದಿಗೆ ಮರು ಪಾವತಿಸಲು ಸಿದ್ಧನಿದ್ದೇನೆ. ನಾನು ಮೇಲೆ  ಒದಗಿಸಿರುವ ಎಲ್ಲ ವಿವರಗಳು ನನಗೆ ತಿಳಿದಿರುವಂತೆ  ಸರಿಯಾಗಿದೆ ಎಂದು ದೃಢೀಕರಿಸುತ್ತೇನೆ” ಎಂಬ ಘೋಷಣೆಗೆ ಒಪ್ಪಿಗೆ ಸೂಚಿಸಬೇಕಾಗುತ್ತದೆ. ಒಂದು ವೇಳೆ ವಿದ್ಯುತ್ ಅನ್ನು ಗೃಹ ಬಳಕೆಗಲ್ಲದೇ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದ್ದು ತಪ್ಪು ಮಾಹಿತಿ ನೀಡಿದ್ದರೆ ದಂಡ ಪಾವತಿಸಬೇಕಾಗುತ್ತದೆ.

ಈ ಚಿತ್ರದಲ್ಲಿ ಪ್ರಿಂಟ್ ಆಗಿರುವ ಕ್ಯೂರ್ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕವೂ ನೋಂದಣಿ ಮಾಡಬಹುದು

ಈ ಬಳಿಕ ಅದರ ಕೆಳಗೆ ನೀಡಿರುವ ಅಂಕ/ಪದಗಳನ್ನು ಟೈಪಿಸಿ SUBMIT ಬಟನ್ ಅನ್ನು ಒತ್ತಿ.  ಸೇವಾ ಸಿಂಧುವಿನಲ್ಲಿ ನೊಂದಣಿಯಾದ ನಿಮ್ಮ ಗ್ರಹಜ್ಯೋತಿ ಅರ್ಜಿ ಮೂಡುತ್ತದೆ. ಪ್ರಿಂಟ್ ಮಾಡಿಕೊಳ್ಳಿ ಅಥವಾ pdf ಅಗಿ ಉಳಿಸಿಕೊಳ್ಳಿ. ಹೆಚ್ಚಿನ ಮಾಹಿತಿ ಅಥವಾ ಸಹಾಯಕ್ಕಾಗಿ ನಿಮ್ಮ ಹತ್ತಿರದ ಎಸ್ಕಾಂ ಕಛೇರಿಗೆ ಭೇಟಿ ನೀಡಿ. 24X7 ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆಮಾಡಿ ಅಥವಾ ಇಂಧನ ಇಲಾಖೆಯ ಅಧಿಕೃತ ವೆಬ್‌ಸೈಟ್ https://energy.karnataka.gov.in  ಗೆ ಭೇಟಿ ನೀಡಿ.

ಒಂದುವೇಳೆ ಸ್ವತಃ ನಮೂನೆ ಭರ್ತಿ ಮಾಡಲು ತಿಳಿಯದಿದ್ದರೆ ಅಥವಾ ಗೊಂದಲವಾದರೆ  ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಗ್ರಾಮ ಪಂಚಾಯತ್, ನಾಡಕಚೇರಿ, ವಿದ್ಯುತ್ ಕಚೇರಿಗಳಿಗೆ ಭೇಟಿ ನೀಡಿ ನೋಂದಾಯಿಸಬಹುದು.

– ಕುಮಾರ ರೈತ

Exit mobile version