ಮಾತೃ ದೇವೋಭವ, ಪಿತೃ ದೇವೋಭವ ಎಂದು ಕರೆದ ನೆಲದಲ್ಲಿ ಇಂಥದೊಂದು ಪ್ರಶ್ನೆ ಕೇಳುವ ಕಾಲವೂ ಬರಬಹುದು ಎಂದು ಹಿಂದಿನ ಹಿರಿಯರು (Elder Persons) ಯೋಚಿಸಿರಲೂ ಸಾಧ್ಯವಿಲ್ಲ. ದುರ್ದೈವವಶಾತ್ ಅಂಥ ಪ್ರಶ್ನೆಯನ್ನು ಪದೇಪದೇ ಕೇಳುವ ಪರಿಸ್ಥಿತಿ ಒದಗಿದೆ. ಇದಕ್ಕೆ ಪರಿಹಾರವನ್ನು ಒದಗಿಸಬೇಕಾಗಿರುವುದು ಕೂಡ ತುರ್ತಿನ ಅವಶ್ಯಕತೆಯಾಗಿದೆ.
ಹೆತ್ತವರನ್ನೇ ಕೊಲ್ಲುವ ಮಕ್ಕಳು
ಇಂದಿನ (ಜೂನ್ 14, 2023) ಪತ್ರಿಕೆಗಳಲ್ಲಿ ಮಗಳೇ ತನ್ನ ಹೆತ್ತ ತಾಯಿಯನ್ನು ಕೊಂದು (Murder) ಶವವನ್ನು ಪೊಲೀಸ್ ಠಾಣೆಗೆ ತಂದ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಶ್ಚಿಮ ಬಂಗಾಳದ 71 ವರ್ಷದ ವೃದ್ಧೆ, ವಿಧವೆ ಬೀವಾ ಪಾಲ್ ಕೊಲೆಯಾದವರು. ಕೊಲೆ ಮಾಡಿದ ಆರೋಪದಡಿ ಅವರ ಮಗಳು ಸೋನಾಲಿ ಸೇನ್ ಅನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಇದು ಆಘಾತಕಾರಿ ಘಟನೆ. ಆದರೆ ಇಂಥ ಘಟನೆ ಇದೇ ಮೊದಲೇನಲ್ಲ. ಹಣಕ್ಕಾಗಿ ತನ್ನ ಪ್ರಿಯಕರನ ಸಹಕಾರದಲ್ಲಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಕೊಂದಿದ್ದ ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಗಂಡು ಮಕ್ಕಳು ತಮ್ಮ ವೃದ್ಧ ತಂದೆತಾಯಿಯನ್ನು ಬರ್ಬರವಾಗಿ ಕೊಂದಿರುವ ದುರ್ಘಟನೆಗಳು ರಾಜ್ಯದ, ರಾಷ್ಟ್ರದ ಇತರೆಡೆಗಳಲ್ಲಿಯೂ ನಡೆದಿದೆ.
ಏಕೆ ಹೀಗೆ ಹೆತ್ತವರನ್ನೇ ಕೊಲ್ಲುವ ಪ್ರಕರಣಗಳು ನಡೆಯುತ್ತಿವೆ ಎಂಬುದರ ಬಗ್ಗೆ ಭಾರತೀಯ ಸಮಾಜದಲ್ಲಿ (Indian Society ) ಆಳವಾದ ಚರ್ಚೆಗಳು ನಡೆಯಬೇಕಿತ್ತು. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆಗಳಲ್ಲಿ ಇದರ ಬಗ್ಗೆ ಗಹನವಾದ ವಿಚಾರ ಮಂಥನ-ಪರಿಹಾರ ಕ್ರಮಗಳ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಯಬೇಕಿತ್ತು. ಅಲ್ಲೊಬ್ಬರು ಇಲ್ಲೊಬ್ಬರು ಶಾಸಕರು (MLAs/MLCs/ MPs) ಸರ್ಕಾರವೇ (Government)ನೇರ ಜವಾಬ್ದಾರಿ ಹೊತ್ತ ವಯೋವೃದ್ಧ ವಸತಿ ನಿಲಯಗಳ ಬಗ್ಗೆ ಸದನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಯಾವ ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ವೃದ್ಧರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದ ಪ್ರಕರಣಗಳು
ಅಧ್ಯಯನಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ವೃದ್ಧರ ಮೇಲಿನ ದೌರ್ಜನ್ಯ (Atrocity)ದ ಪ್ರಕರಣಗಳು ಹೆಚ್ಚಾಗುತ್ತಿವೆ. ದೌರ್ಜನ್ಯ ಎಂದರೆ ದೈಹಿಕವಾಗಿ ಹಲ್ಲೆ ನಡೆಸುವುದಷ್ಟೇ ಅಲ್ಲ ; ಮಾನಸಿಕವಾಗಿ ಹಿಂಸೆ ನೀಡುವುದು ಕೂಡ ಸೇರುತ್ತದೆ. ಮಗ, ಮಗಳು, ಸೊಸೆ, ಮೊಮ್ಮಕ್ಕಳು “ನೀನು ಮುದುಕ, ಮುದುಕಿ, ನೀವು ಇರುವುದಕ್ಕಿಂತಲೂ ಸಾಯುವುದೇ ಮೇಲು” ಎಂದು ಹೇಳುವುದು ಕೂಡ ಭೀಕರ ದೌರ್ಜನ್ಯ. ಈ ಕಾರಣದಿಂದಲೇ ಮನೆ ಬಿಟ್ಟು ಹೋದ, ಸಾವನ್ನಪ್ಪಿದ ಪ್ರಕರಣಗಳು ಸಾಕಷ್ಟಿವೆ. ಕೆಲವರು ತಮ್ಮ ವೃದ್ಧ ತಂದೆತಾಯಿಯನ್ನು ದೂರದ ಊರುಗಳಿಗೆ, ದೇವಸ್ಥಾನಗಳ ಬಳಿ ಕರೆದೊಯ್ದು ಅಲ್ಲಿಯೇ ಬಿಟ್ಟು ಬಂದ ಉದಾಹರಣೆಗಳೂ ಇವೆ.
ದಾಖಲಾಗುವ ದೂರುಗಳು ಕಡಿಮೆ
ಭಾರತದಲ್ಲಿ ಎಷ್ಟೇ ದೈಹಿಕ ಮಾನಸಿಕ ದೌರ್ಜನ್ಯಗಳೇ ಆಗಲಿ ಅದನ್ನು ಅವುಡುಗಚ್ಚಿ ಸಹಿಸಿಕೊಳ್ಳುವ ವೃದ್ದರ ಸಂಖ್ಯೆ ಹೆಚ್ಚು. ಮನೆಯ ಮಾನ ಬೀದಿಯಲ್ಲಿ ಹರಾಜಾಗುತ್ತದೆ ; ತಾವೇ ಹೆತ್ತ ಮಕ್ಕಳು ಪೊಲೀಸ್ ಠಾಣೆ ಕಾಣುವ, ಜೈಲು ಪಾಲಾಗುವ ಸಾಧ್ಯತೆ ಇರುತ್ತವೆ. ಹೀಗಾಗಿ ದೂರು ಕೊಡುವ ಉಸಾಬರಿಯೇ ಬೇಡ ಎಂದು ಸುಮ್ಮನಾಗುವವರೇ ಅಧಿಕ.. ಹೆಚ್ಚೆಂದರೆ ನೆರೆಹೊರೆಯಲ್ಲಿ, ತಮ್ಮ ಆಪ್ತ ಬಂಧುಗಳ ಬಳಿ ಕಷ್ಟ ಹೇಳಿಕೊಳ್ಳಬಹುದಷ್ಟೆ. ಹೀಗೆ ಕಷ್ಟ ಹೇಳಿಕೊಳ್ಳುತ್ತಾರೆ ಎಂದು ಹೇಳಿ ಹೆತ್ತವರನ್ನೇ ಕೋಣೆಗಳಲ್ಲಿ ಬಂಧಿಸುವ ವಯಸ್ಕ ಮಕ್ಕಳೂ ಇದ್ದಾರೆ.
ಏಕೆ ವೃದ್ದರನ್ನು ಕಡೆಗಾಣಿಸಲಾಗುತ್ತದೆ ?
ಇದಕ್ಕೆ ದೈಹಿಕ ಆರೋಗ್ಯ, ಮಾನಸಿಕ, ಸಾಮಾಜಿಕ, ಆರ್ಥಿಕ ಕಾರಣಗಳ ಆಯಾಮವೂ ಇದೆ. ಬಾಲ್ಯದಲ್ಲಿ ತನ್ನನ್ನು, ತಮ್ಮನ್ನು ಸರಿಯಾಗಿ ಪಾಲನೆ ಮಾಡಲಿಲ್ಲ ಎಂಬುದು ಸೇರಿದೆಯಾದರೂ ಇಂಥ ಪ್ರಕರಣಗಳ ಸಂಖ್ಯೆ ವಿರಳ. ಮಗ ಅಥವಾ ಮಗಳು ಮದುವೆಯಾದ ನಂತರ ವೃದ್ದ ದಂಪತಿ (Old age couple) ಒಂಟಿಯಾಗುವುದು, ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ತಾಯಿಯನ್ನು ನಾನು ಸಾಕುತ್ತೇನೆ, ತಂದೆಯನ್ನು ನೀನು ಸಾಕು ಎನ್ನುವುದು. ವೃದ್ದರು ತಮ್ಮ ಇಳಿಗಾಲದಲ್ಲಿ ಪರಸ್ಪರ ಜೊತೆಯಾಗಿ ಬಾಳಬೇಕಾದ ದಿನಗಳಲ್ಲಿ ಅವರನ್ನು ದೂರ ಮಾಡುವುದು, ಸರಿಯಾಗಿ ಉಪಚರಿಸದಿರುವುದು, ವೃದ್ದರ ಆರೋಗ್ಯ ಸರಿಯಿಲ್ಲದಿರುವುದು, ಎಲ್ಲ ಸರಿಯಿದ್ದೂ ಹೊಂದಾಣಿಕೆ ಸಮಸ್ಯೆ ಉಂಟಾಗುವುದು, ಮನೆಯ ವೃದ್ದರು ಕಿರಿಕಿರಿ ಎಂದು ಭಾವಿಸಿ ಮತ್ತಷ್ಟೂ ಕಿರಿಕಿರಿ ಉಂಟು ಮಾಡುವುದು ಇತ್ಯಾದಿ
ವೃದ್ದರ ನಿರ್ವಹಣೆ ಬಗ್ಗೆ ತರಬೇತಿ ಇಲ್ಲ
ಯಾವುದೇ ಸಾಮಾಜಿಕ ಆಯಾಮಗಳಿಗೂ ತರಬೇತಿಯೇ ಬೇಡ ಎಂಬ ಪೂರ್ವಾಗ್ರಹ ಭಾರತೀಯ ಸಮಾಜದಲ್ಲಿದೆ. ಇದರಿಂದಲೂ ಸಹ ಸಮಸ್ಯೆಗಳಾಗುತ್ತಿವೆ. ನಮ್ಮಲ್ಲಿ ಮಕ್ಕಳನ್ನು ಸಲುಹುವುದು ಹೇಗೆ ಎಂಬ ತರಬೇತಿ ಇಲ್ಲ. ವೃದ್ದ ತಂದೆತಾಯಿಯ ನಿರ್ವಹಣೆ ಹೇಗೆ ಎಂಬ ತರಬೇತಿ ವಯಸ್ಕ ಮಕ್ಕಳಿಗೂ ಸಿಗುವುದಿಲ್ಲ. ಇದರಿಂದಾಗಿ ವೃದ್ದಾಪ್ಯದಲ್ಲಿ ಉಂಟಾಗುವ ವಯೋ ಸಹಜ ಕಾಯಿಲೆಗಳು, ಮರೆವು, ಸಿಡುಕು ಇವುಗಳೇ ದೊಡ್ಡ ಸಮಸ್ಯೆಗಳಾಗಿ ಮಾರ್ಪಾಡಾಗುತ್ತವೆ. ಇದು ದುರಂತವಾಗಿ ಅಂತ್ಯ ಕಾಣುತ್ತವೆ.
ಮರ್ಯಾದೆಯ ಪ್ರಶ್ನೆ
ಇಂದಿಗೂ ಶೇಕಡ 80ಕ್ಕೂ ಹೆಚ್ಚು ಮಂದಿ ಭಾರತೀಯ ವೃದ್ದರು ವೃದ್ದಾಶ್ರಮಗಳಲ್ಲಿ ಇರುವುದು ಅವಮಾನಕರ ಎಂದು ಭಾವಿಸುತ್ತಾರೆ. ಇದೇ ಅತ್ಯಂತ ಸೂಕ್ತವಾದ ಕ್ರಮ, ಬಹುತೇಕ ವಯಸ್ಕ ಮಕ್ಕಳು ತಮ್ಮ ವೃದ್ದ ತಂದೆತಾಯಿಯ ಹೊಣೆ ಹೊರಲು ಬೇರೆಬೇರೆ ಕಾರಣಗಳಿಂದ ಸಿದ್ಧರಿರುವುದಿಲ್ಲ ಎಂದು ಮನವರಿಕೆ ಮಾಡಿಕೊಡುವ ಕಾರ್ಯವೂ ಆಗಬೇಕಾಗುತ್ತದೆ.
ಮುಂದಿನ ಜೀವನದ ಪ್ಲಾನ್
ವೃದ್ದಾಪ್ಯದ ದಿನಗಳ ಬಗ್ಗೆ ಪ್ಲಾನ್ (future life) ಮಾಡುವ ಭಾರತೀಯರೂ ಇದ್ದಾರೆ. ಇವರು ತಮ್ಮ ಯೌವನ, ಮಧ್ಯ ವಯಸಿನ ಅವಧಿಯಲ್ಲಿಯೇ ಹೆಚ್ಚಿನ ಸೌಲಭ್ಯವಿರುವ ವೃದ್ದರಿಗೆ ಆಸರೆ ನೀಡುವ ತಾಣಗಳಲ್ಲಿ ಇರಲು ಒಂದಷ್ಟು ಉಳಿತಾಯ ಮಾಡುತ್ತಾರೆ. (Old age homes) ಹೆಚ್ಚಿನಾಂಶ ಭಾರತೀಯರು ತಮ್ಮ ವೃದ್ದಾಪ್ಯದ ದಿನಗಳ ಪ್ಲಾನ್ ಮಾಡುವುದಿಲ್ಲ. ತಮ್ಮ ನೆರೆಹೊರೆಯಲ್ಲಿಯೇ ಹೆತ್ತವರನ್ನೇ ನಿಲರ್ಕ್ಷಿಸಿರುವ ಪ್ರಕರಣಗಳಿದ್ದರೂ ತಮ್ಮ ಮನೆ ಅದಕ್ಕೆ ಹೊರತು, ತಮಗೆ ವಯಸ್ಸಾದ ಮೇಲೆ ತಮ್ಮ ಮಕ್ಕಳು ಹಾಗೆ ಮಾಡುವುದಿಲ್ಲ ಎಂದು ಮುಂದೆ ಸಾಗುವವರೇ ಹೆಚ್ಚು. ಆದರೆ ಭವಿಷ್ಯದ ದಿನಗಳನ್ನು ಕಂಡವರು ಯಾರು ?
ವೃದ್ದರ ವಿವಿಧ ರೀತಿಯ ಆಸರೆಗಳು
ವ್ಯಕ್ತಿಗಳೇ ದುಡಿದು , ಬ್ಯಾಂಕಿನಲ್ಲಿಟ್ಟು ಅವರಿಗೆ ಬರುವ ಬಡ್ಡಿ ಹಣದಲ್ಲಿ ನಿಗದಿತ ಶುಲ್ಕ ಪಡೆದು ಆಸರೆ ನೀಡುವ ವೃದ್ದಾಶ್ರಮಗಳಿವೆ. ವೃದ್ದರ ಮಕ್ಕಳಿಂದ ಪ್ರತಿ ಮಾಸಿಕ/ ವಾರ್ಷಿಕ ಇಂತಿಷ್ಟು ಹಣ ಪಡೆದು ಆಸರೆ ನೀಡುವ ಸಂಸ್ಥೆಗಳಿವೆ. ಆಸರೆ ಪಡೆದ ವೃದ್ದರಿಂದ ಕಿಂಚಿತ್ತೂ ಹಣ ಪಡೆಯದೇ ದಾನಿಗಳಿಂದಲೇ ನಡೆಸಲ್ಪಡುವ ಆಸರೆಗಳೂ ಇವೆ. ಈ ರೀತಿಯ ಎಲ್ಲ ವೃದ್ದಾಶ್ರಮಗಳ ಸೌಲಭ್ಯಗಳು ಮಾತ್ರ ಭಿನ್ನವಾಗಿರುತ್ತವೆ.
ಹಣವೇ ಇಲ್ಲದವರಿಗೆ ಯಾರು ಆಸರೆ ?
ತಮ್ಮ ಜೀವಮಾನದ ಗಳಿಕೆಯನ್ನೆಲ್ಲ ತಮ್ಮ ಮಕ್ಕಳ ಶ್ರೇಯೋಭಿವೃದ್ದಿಗಾಗಿ ಖರ್ಚು ಮಾಡಿದವರು, ಇಳಿಗಾಲದ ಜೀವನದ ಯೋಜನೆ ಮಾಡದವರು, ದುಡಿದಿದ್ದನ್ನೆಲ್ಲ ಬೇರೆಬೇರೆ ಕಾರಣಗಳಿಗಾಗಿ ಖರ್ಚು ಮಾಡಿದವರು, ಅಂದಂದಿನ ದುಡಿಮೆಯಲ್ಲೇ ಜೀವನ ನಿರ್ವಹಣೆ ಮಾಡಬೇಕಾದವರು ಇದ್ದಾರೆ. ಇಂಥವರಿಗೆ ವಯಸ್ಸಾದ ಮೇಲೆ ನೋಡಿಕೊಳ್ಳಬೇಕಾದವರು ಯಾರು ?
ಸಮಾಜ / ಸರ್ಕಾರದ ಮೇಲೆ ಜವಾಬ್ದಾರಿಯಿದೆ
ವೃದ್ದರೊಬ್ಬರು ಬೀದಿಯಲ್ಲಿದ್ದಾರೆ, ಅನಾರೋಗ್ಯ ಕಾರಣಗಳಿಂದ ಯಾರೋ ಬೀದಿ ಪಾಲಾಗಿದ್ದಾರೆ ಎಂದರೆ ಸಮಾಜ, ಸರ್ಕಾರ ಹಾಗೆ ಸುಮ್ಮನೆ ನೋಡಿ ನಡೆದುಕೊಂಡು ಹೋಗಲು ಆಗುವುದಿಲ್ಲ. ಅಂಥವರ ಹೊಣೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಕರ್ನಾಟಕದ ಕಾಂಗ್ರೆಸ್ ( Karnataka Congress) ಸರ್ಕಾರ ಐದು ಉತ್ತಮ ಯೋಜನೆಗಳನ್ನು (five guarantees) ಜಾರಿಗೊಳಿಸಿದೆ. ಆರನೇಯದಾಗಿ “ವೃದ್ದರಿಗೆ ಆಸರೆ” ಎಂಬ ಗ್ಯಾರಂಟಿ (guarantee)ಯನ್ನು ನೀಡಿದರೆ ಎಷ್ಟೋ ವೃದ್ದಜೀವಗಳು ನೆಮ್ಮದಿ ಯಾಗಿರಲು ಸಹಾಯವಾಗುತ್ತದೆ. ಈ ಗ್ಯಾರಂಟಿಗೆ ಉಳಿದ ಗ್ಯಾರಂಟಿಗಳಂತೆ ಹೆಚ್ಚಿನ ಖರ್ಚೂ ಆಗುವುದಿಲ್ಲ. ಅಗತ್ಯವಿದ್ದರೆ ದಾನಿಗಳ ಸಹಾಯವನ್ನೂ ಪಡೆಯಬಹುದು. ಹೀಗೆ ಸಹಾಯ ಪಡೆಯದೇ ಸ್ವತಃ ಸರ್ಕಾರವೇ ಈ ಕೆಲಸ ಮಾಡಿದರೆ ಉತ್ತಮ ಅಲ್ಲವೇ ?
– ಕುಮಾರ ರೈತ