ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 2023ರಲ್ಲಿ ರಚನೆಯಾದ ನಂತರ “ಗ್ಯಾರಂಟಿ ಸ್ಕೀಮ್”ಗಳು ಜಾರಿಯಾಗಿವೆ. ಇವುಗಳನ್ನು ಉಚಿತ ಯೋಜನೆಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಉಚಿತ ಯೋಜನೆ ಎಂದು ಕರೆಯುವುದಾಗಲೀ, ಟೀಕಿಸುವುದಾಗಲಿ ಸರಿಯಲ್ಲ. ಸಾಮಾಜಿಕ – ಆರ್ಥಿಕ ದುರ್ಬಲರಿಗೆ ಸಲ್ಲಲೇಬೇಕಾದ ಯೋಜನೆಗಳಿವು. ಆದರೆ ಇವುಗಳಿಂದ  ಸಾಮಾನ್ಯ ಆದಾಯದ ವರ್ಗಗಳ ಖರೀದಿ ಶಕ್ತಿ ಹೆಚ್ಚಿದೆಯೇ ಎನ್ನುವುದೇ ಪ್ರಶ್ನೆ !

ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್ತಿನಲ್ಲಿ “ನಮ್ಮ ಗ್ಯಾರಂಟಿಗಳಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳು, ವಿಶ್ವದ ಅಧ್ಯಯನ ಸಂಸ್ಥೆಗಳು ನಮ್ಮ ಗ್ಯಾರಂಟಿಗಳನ್ನು ಶ್ಲಾಘಿಸಿರುವುದು, ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಕದ್ದಿರುವುದು ಈ ಕಾರಣಕ್ಕೇ. ನಾವು ಗ್ಯಾರಂಟಿಗಳ ಮೂಲಕ ಜನ ಸಾಮಾನ್ಯರ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸಿದ್ದೇವೆ. ಇದರಿಂದ ಆರ್ಥಿಕತೆಗೆ ಚೈತನ್ಯ ಬಂದು ರಾಜ್ಯಕ್ಕೆ ತೆರಿಗೆಯೂ ಹೆಚ್ಚುತ್ತದೆ” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅವರು ಯಾವಯಾವ ಯೋಜನೆಗಳಿಗೆ ಎಷ್ಟು ವೆಚ್ಚವಾಗುತ್ತಿದೆ ಎಂಬುದನ್ನೂ ವಿವರಿಸಿದರು. ” ರಾಜ್ಯ ಸರ್ಕಾರ ಫೆಬ್ರವರಿ ಅಂತ್ಯದಲ್ಲಿ 76509 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2024-25 ರಲ್ಲಿ 52009 ಕೋಟಿಗಳನ್ನು ಗ್ಯಾರಂಟಿಗಳಿಗೆ ಬಜೆಟ್ ನಲ್ಲಿ ಇಡಲಾಗಿದ್ದು, ಅದರಲ್ಲಿ  41560 ಕೋಟಿ ವೆಚ್ಚ ಮಾಡಲಾಗಿದೆ.  ಅದರಲ್ಲಿ  ಗೃಹ ಲಕ್ಷ್ಮಿ 28608 ಕೋಟಿ – ಖರ್ಚು 22611 ಕೋಟಿ , ಗೃಹಜ್ಯೋತಿ – 9657 ಕೋಟಿ –ಖರ್ಚು 8389 ಕೋಟಿ ,ಅನ್ನಭಾಗ್ಯ 8079 ಕೊಟಿ – ಖರ್ಚು 5590 ಕೋಟಿ  ಶಕ್ತಿ ಯೋಜನೆಗೆ  5015 ಕೋಟಿಗಳಲ್ಲಿ  -4821 ಕೋಟಿ , ಯುವನಿಧಿ 650 ಕೋಟಿ- ವೆಚ್ಚ 240 ಕೋಟಿ , ಒಟ್ಟು 52009 ರಲ್ಲಿ 41650 ಕೋಟಿ ವೆಚ್ಚ ಮಾಡಲಾಗಿದೆ. ಸರ್ಕಾರದಲ್ಲಿ  ಹಣವಿಲ್ಲದಿದ್ದರೆ  1.26 ಕೋಟಿ ಕುಟುಂಬಗಳು ಗೃಹಲಕ್ಷ್ಮಿ ಅನ್ನಭಾಗ್ಯದ ಫಲಾನುಭವಿಗಳು , 1.60 ಕೋಟಿ ಕುಟುಂಬಗಳು ಗೃಹಜ್ಯೋತಿಯಿಂದ ಲಾಭಪಡೆದಿದ್ದಾರೆ” ಎಂದರು.

ಇಲ್ಲಿ ಬಹುಮುಖ್ಯವಾಗಿ ಮೂಡುವ ಪ್ರಶ್ನೆ ಎಂದರೆ “ಗ್ಯಾರಂಟಿ ಸ್ಕೀಮುಗಳಿಂದ ಕರ್ನಾಟಕದ ಜನತೆಯ ಖರೀದಿ ಮಾಡುವ ಶಕ್ತಿ ಹೆಚ್ಚಾಗಿದೆಯೇ” ಇದಕ್ಕೆ ನಿಖರ ಉತ್ತರ ನೀಡುವ ಮುನ್ನ ಮುಖ್ಯ ಸಂಗತಿಗಳನ್ನು ಗಮನಿಸಬೇಕು. 2025ರ ಜೂನ್ ತಿಂಗಳಿಗೆ ಮೊದಲ ಗ್ಯಾರಂಟಿ ಸ್ಕೀಮು ಜಾರಿಯಾಗಿ ಎರಡು ವರ್ಷವಾಗುತ್ತದೆ. ಇದುವರೆಗಿನ ಒಂದು ವರ್ಷ 9 ತಿಂಗಳ ಅವಧಿಯಲ್ಲಿ ದೈನಂದಿನ ದಿನಸಿ ಪದಾರ್ಥಗಳು, ಹಾಲು ಸೇರಿದಂತೆ ಅದರ ಉಪ ಉತ್ಪನ್ನಗಳು, ತರಕಾರಿಗಳು, ಮೀನು, ಮೊಟ್ಟೆ, ಕುರಿಕೋಳಿ ಮಾಂಸ ಎಲ್ಲದರ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ. ಪೆಟ್ರೋಲ್ ಡಿಸೇಲ್ ಬೆಲೆ ಕೇಂದ್ರದ ಮಟ್ಟದಲ್ಲಿ ನಿರ್ಧಾರವಾದರೂ ರಾಜ್ಯ ಸರ್ಕಾರ ಕೂಡ ಅದಕ್ಕೆ ಶುಲ್ಕ ವಿಧಿಸುತ್ತದೆ. ಇದು ಸಹ ಏರಿಕೆಯಾಗಿದೆ. ಇಂಧನದಲ್ಲಿ ಆಗುವ ಏರಿಕೆ ಮತ್ತೆ ಎಲ್ಲ ರಂಗಗಳ ಮೇಲೂ ಪರಿಣಾಮ ಬೀರುತ್ತದೆ. ಬೆಲೆಗಳು ಮತ್ತಷ್ಟೂ ಏರಿಕೆಯಾಗುವಂತೆ ಮಾಡುತ್ತದೆ.

ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸೇರಿದಂತೆ ಖಾಸಗಿ ಸ್ವಾಮ್ಯದ ಸಾರಿಗೆ ಬಸ್ಸುಗಳು, ಸರಕು ಸಾಗಣಿಕೆ ವಾಹನಗಳು ವಿಧಿಸುವ ಶುಲ್ಕವೂ ಏರಿಕೆಯಾಗಿದೆ. ಬೆಂಗಳೂರು ಮಹಾನಗರದ ಪರಿಸರ ಮಾಲಿನ್ಯ ಕಡಿಮೆ ಮಾಡಲು ಗಣನೀಯ ಕೊಡುಗೆ ನೀಡುತ್ತಿದ್ದ ಮೆಟ್ರೋ ದರವೂ ಗಣನೀಯವಾಗಿ ಏರಿಕೆಯಾಗಿದೆ. ಇದರ ಬೆಲೆ ಹೆಚ್ಚಾದಾಗ ದೈನಂದಿನ ಸಂಚಾರಕ್ಕಾಗಿ ಅದನ್ನು ಅವಲಂಬಿಸಿದವರು ಅಪಾರ ವಿರೋಧ ಮಾಡಿದರು. ಆದರೆ ಅದರಿಂದೇನೂ ಗಮನಾರ್ಹ ಪ್ರಯೋಜನ ಆಗಲಿಲ್ಲ !

“ಮೆಟ್ರೋದಲ್ಲಿ ನೆಮ್ಮದಿಯಾಗಿ ಓಡಾಡ್ಕೊಂಡಿದ್ವಿ . ಈಗ ಅದರ ಮೇಲೂ ಕಣ್ಣು ಬಿದ್ದಾಯ್ತು. ಕೆಂಗೇರಿಯಿಂದ ವೈಟ್ ಫೀಲ್ಡ್ ಗೆ ಬರೀ 57 ₹ಯಲ್ಲಿ ಓಡಾಡುತ್ತಿದ್ದೆವು. ಈಗ ಏಕಾಏಕಿ 50% Hike ಮಾಡಿದ್ದಾರೆ. ಇನ್ನು ಮುಂದೆ ಅದಕ್ಕೆ 90 ₹ ಕೊಡಬೇಕಂತೆ. ಹಾಗಾಗಿ ಇನ್ನು ಮುಂದೆ ಹೋಗಿ ಬರಲು 180 ₹ ಎತ್ತಿಡಬೇಕು. ಟಿಕೆಟ್ ದರಗಳನ್ನು 50% hike ಮಾಡುವಷ್ಟು ಏನಾದರೂ ಬದಲಾಗಿದೆಯಾ? 50% hike ಮಾಡುವುದಕ್ಕೆ ವೈಜ್ಞಾನಿಕವಾಗಿ ಏನಾದರೂ ಸಮರ್ಥನೆ ಕೊಡಲು ಸಾಧ್ಯವಾ? ಮೆಟ್ರೋ ಏನು ನಷ್ಟದಲ್ಲಿ ಓಡಾಡುತ್ತಿದೆಯಾ? ಯಾವಾಗ ನೋಡಿದರೂ ನಿಲ್ಲಲು ಕಾಲಿಡದಷ್ಟು ತುಂಬಿರುತ್ತದೆ. ಬಹುತೇಕ ಮೆಟ್ರೋ ಟ್ರೈನುಗಳು ಮೊದಲ ಸ್ಟಾಪಿನಲ್ಲೇ ತುಂಬಿಹೋಗುತ್ತಿವೆ. ಆದರೂ ನಷ್ಟವಾ” ಎಂದು ಐಟಿ ಕ್ಷೇತ್ರದ ಉದ್ಯೋಗಿ ಸಂತೋಷ್ ಕುಮಾರ್ ಎಲ್.ಎಂ. ಪ್ರಶ್ನಿಸಿದ್ದರು.

ಮೆಟ್ರೋ ಸಾರಿಗೆಯನ್ನು ಸಂಘಟಿತ, ಅಸಂಘಟಿತ ವಲಯಗಳ ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಅವಲಂಬಿಸಿದ್ದಾರೆ. ಐಟಿ ಕ್ಷೇತ್ರದ ಉದ್ಯೋಗಿಗಳು ಗಣನೀಯ ಸಂಖ್ಯೆಯಲ್ಲಿ ಅವಲಂಬಿಸಿದ್ದಾರೆ. ಇವರಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚಿನವರು ಸರಾಸರಿ 30 ಸಾವಿರ ರೂಪಾಯಿ ಮಾಸಿಕ ಸಂಬಳವುಳ್ಳವರು. ಇಂಥ ಪರಿಸ್ಥಿತಿಯಲ್ಲಿ ಮೆಟ್ರೋ ದರ ಶೇಕಡ 50ರಷ್ಟು ಹೆಚ್ಚಾದರೆ ಅದನ್ನು ಅವಲಂಬಿಸುವವರ ಮಾಸಿಕ ವೆಚ್ಚದ ಯೋಜನೆ ಏರುಪೇರಾಗುವುದಿಲ್ಲವೇ ?

ಕರ್ನಾಟಕ ರಾಜ್ಯದಲ್ಲಿ ಅಸಂಘಟಿತ ವಲಯಗಳಲ್ಲಿಯೇ ಶೇಕಡ 90ಕ್ಕಿಂತ ಹೆಚ್ಚು ಮಂದಿ ಉದ್ಯೋಗಿಗಳು,ಕಾರ್ಮಿಕರು ಇದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ಇವರಲ್ಲಿ ಅನೇಕರ ಮಾಸಿಕ ಸಂಬಳ ಕಡಿತವಾಗಿದೆ. ಅದು ಇದುವರೆಗೂ ಏರಿಕೆಯಾಗಿಲ್ಲ. ಸಂಬಳದಲ್ಲಿ ಕಡಿತವಾಗದೇ ಇದ್ದವರ ಮಾಸಿಕ ಸಂಬಳವೂ ಇದುವರೆಗೂ ಏರಿಕೆಯಾಗಿಲ್ಲ. ಆದರೆ ಪ್ರತಿವರ್ಷ ಮನೆ ಬಾಡಿಗೆ ದರವೂ ಸೇರಿದಂತೆ ಇತರ ಎಲ್ಲ ವೆಚ್ಚವೂ ಏರಿಕೆಯಾಗುತ್ತಲೇ ಇದೆ. ವಿವಿಧ ಬಾಬ್ತುಗಳಿಗೆ ರಾಜ್ಯ ಸರ್ಕಾರ ವಿಧಿಸುವ ತೆರಿಗೆಯೂ ಹೆಚ್ಚಾಗುತ್ತಲೇ ಇದೆ ! ಈ  ಎಲ್ಲದರ ವೆಚ್ಚಕ್ಕೆ ಅನುಗುಣವಾಗಿ ಜನತೆಯ ಆದಾಯ ಹೆಚ್ಚಾಗುತ್ತಿದೆಯೇ ? ಖಂಡಿತ ಇಲ್ಲ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಕೊರೊನಾ ಕಾಲಘಟ್ಟದಿಂದ ಇಂದಿನ ತನಕವೂ ನಾನಾ ಕಾರಣಗಳಿಂದ ಮುಚ್ಚಿ ಹೋಗುತ್ತಿರುವ ಸಣ್ಣ, ಮಧ್ಯಮ ಗಾತ್ರದ ಉದ್ಯಮಗಳು ಸಂಖ್ಯೆ ಗಣನೀಯವಾಗಿದೆ. ನಾನು ಕೆಲಸ ಮಾಡುತ್ತಿರುವ ಪತ್ರಿಕೋದ್ಯಮ ಕ್ಷೇತ್ರದಲ್ಲಿಯೇ ಶೇಕಡ 50ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳು (ಪತ್ರಕರ್ತರು ಮತ್ತು ಇತರ ವಿಭಾಗಗಳಲ್ಲಿ ಕೆಲಸ ಮಾಡುವವರು, ತಂತ್ರಜ್ಞರು ಸೇರಿ) ಕೆಲಸ ಕಳೆದುಕೊಂಡಿದ್ದಾರೆ. ಇವರಲ್ಲಿ ಅನೇಕರು ಸುಸ್ಥಿರ ಉದ್ಯೋಗ ಲಭಿಸದ ಕಾರಣ ತೊಂದರೆಯಲ್ಲಿದ್ದಾರೆ.

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮತ್ತು ಎಲ್ಲ ಕ್ಷೇತ್ರಗಳಲ್ಲಿ ಎಪಿಎಲ್ ನಿಂದ ಬಿಪಿಎಲ್ ಕಡೆಗೆ ಜಾರುವವರ ಸಂಖ್ಯೆ ಪ್ರತಿವರ್ಷವೂ ಹೆಚ್ಚಾಗುತ್ತಿದೆ. ಜತನದಿಂದ ಕೂಡಿಟ್ಟ ಹಣವೂ ಖರ್ಚಾದ ನಂತರ ಮೈಕ್ರೋ ಫೈನಾನ್ಸ್ ಮೊರೆ ಹೋಗಿದ್ದಾರೆ. ಹೋಗುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ವಸೂಲಿಗಾರರು ನೀಡುವ ಕಿರುಕುಳಕ್ಕೆ ಅಂಜಿ ಆತ್ಮಹತ್ಯೆ ಮೊರೆ ಹೋದವರು ಇದ್ದಾರೆ. ಇಂಥದ್ದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ವಿಧೇಯಕ ಜಾರಿಗೊಳಿಸಿದೆ. ಸಾಮಾನ್ಯ ಆದಾಯ ಇರುವ ಜನತೆಗೆ ಖರೀದಿ ಮಾಡುವ ಶಕ್ತಿ ಇದ್ದರೆ ಅವರೇಕೆ ಅಧಿಕ ಬಡ್ಡಿಯ ಸಾಲದ ಕೂಪಕ್ಕೆ ಬೀಳುತ್ತಾರೆ ?

“ನನ್ನ ಸಪೋರ್ಟ್ ಅನ್ನಾಭಾಗ್ಯಕ್ಕೆ ಮಾತ್ರ. ಬಾಕಿ ಗ್ಯಾರೆಂಟಿಗಳು ಬಡಜನರ ಆರ್ಥಿಕ ಶಿಸ್ತನ್ನು ಹಾಳುಗೆಡವಿ ಮತ್ತಷ್ಟು ಸಾಲಗಾರರನ್ನಾಗಿ ಮಾಡಿದೆ. ಅವರಿಗೆ ಮುಂದೆ ತುರ್ತು ಸಮಯದಲ್ಲೂ ಎಲ್ಲಿಯೂ ಸಾಲ ಸಿಗದಂತೆ ಆಗಿದೆ. ಮೊನ್ನೆ ನಾನು ಒಬ್ಬ ಆರ್ಥಿಕ ತಜ್ಞರ ಜೊತೆ ಮಾತನಾಡುತ್ತಿರವಾಗ ಅವರು ಹೇಳಿದ ವಿಷಯ 2,000 ಗೃಹಲಕ್ಷ್ಮಿ ಯೋಜನೆ ಪ್ರತಿ ತಿಂಗಳು ತಪ್ಪದೇ ಬರುತ್ತಿದ್ದರೆ ಹೌದು ಮುಖ್ಯಮಂತ್ರಿಗಳು ಹೇಳಿದ ಹಾಗೆ ಜನ ಮಹಿಳೆಯರು ಖರೀದಿ ನಡೆಸುತ್ತಿದ್ದಾರೆ ಎನ್ನುವುದನ್ನು ಒಪ್ಪಬಹುದಿತ್ತೇನೋ, ಆದರೆ ಇದು ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಬರುವುದರಿಂದ ಪ್ರತಿ ತಿಂಗಳು ಬರುತ್ತದೆ ಎಂದು ನಂಬಿಕೊಂಡು  ಯಾವುದೇ ವಿಷಯಕ್ಕೆ ಸಾಲ ತೆಗೆದುಕೊಂಡಿರುವವರು ತಿಂಗಳ ಕಂತನ್ನು ಸರಿಯಾಗಿ ಕಟ್ಟದೇ ಇರುವಾಗ ಅವರ ಸಿಬಿಲ್ ಸ್ಕೋರ್ ಕಡಿಮೆಯಾಗಿ ಮುಂದೆಯೂ ಎಂತಹ ತುರ್ತು ಪರಿಸ್ಥಿತಿಯಲ್ಲಿಯೂ ಅವರಿಗೆ ಸಾಲ ಸಿಗದಂತೆ ಆಗುತ್ತದೆ ಎಂದು ಹೇಳಿದರು. ಇದು ಒಪ್ಪತಕ್ಕ ಮಾತು” ಎಂದು ಖ್ಯಾತ ವಕೀಲೆ ಅಂಜಲಿ ರಾಮಣ್ಣ ಹೇಳಿದರು.

ಜನತೆಯ ಬವಣೆಗಳು ಹೆಚ್ಚುತ್ತಿದೆ ಎಂಬ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಸತ್ಯಾ ಎಸ್. ಎಂಬುವರು ಪೋಸ್ಟ್ ಹಾಕಿದ್ದಾರೆ. “”ಬೆಂಗಳೂರಲ್ಲಿ ಎಲ್ಲಿಗಾದ್ರೂ ಸರಿಯಾದ ಸಮಯಕ್ಕೆ ತಲುಪಬೇಕಂದ್ರೆ ಬಸ್ಸೊಂದೇ ನೆಚ್ಚಿಕೊಳ್ಳಕ್ಕೆ ಆಗಲ್ಲ. ಕೆಲವೊಮ್ಮೆ ಆಟೋ ಹಿಡೀಬೇಕಾಗುತ್ತೆ. ಆದ್ರೆ ದುಡ್ಡು ಇರಲ್ಲ. ಆಗೆಲ್ಲ ನಾವು ಊಟ ಬಿಟ್ಟು ಅದೇ ದುಡ್ಡು, ಆಟೋಗೆ ಹಾಕ್ತೀವಿ. ಈಗ ಮೆಟ್ರೋ ರೇಟ್ ತುಂಬಾ ಜಾಸ್ತಿ ಆಗಿರೋದ್ರಿಂದ ಅದಕ್ಕೂ ಖರ್ಚು ಹುಟ್ಟಿಸಬೇಕು.”  ಸಂಘಟನೆ, ಚಳವಳಿ, ಹೋರಾಟವನ್ನೇ ಉಸಿರಾಡುತ್ತಿರುವ ಸಂಗಾತಿ ಹೇಳಿದ ಮಾತುಗಳಿವು ಎಂದಿರುವ ಅವರು “ಇಂತಹ ನೂರಾರು, ಸಾವಿರಾರು ಹೋರಾಟಗಾರರು, ಚಳವಳಿಗಾರರು ದಿನನಿತ್ಯ ಜನಸಾಮಾನ್ಯರ ಬದುಕನ್ನು ಸಹನೀಯ ಮಾಡಲು ಕಷ್ಟ ಪಡುತ್ತಿದ್ದಾರೆ. ತಮ್ಮ ಅಗತ್ಯಗಳನ್ನೂ ಬಿಟ್ಟುಕೊಟ್ಟು ವ್ಯವಸ್ಥೆಯ ಜೊತೆಗೆ ಗುದ್ದಾಡುತ್ತಾರೆ.  ಇಂತಹ ಹೋರಾಟಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಅಂದರೆ ರಾಜ್ಯದಲ್ಲಿ ಅನ್ಯಾಯ, ದೌರ್ಜನ್ಯ, ಹಿಂಸೆ, ತಾರತಮ್ಯ ಹೆಚ್ಚುತ್ತಲೇ ಇದೆ ಅಂತ ಅರ್ಥ. ಈ ಬಗ್ಗೆ ನಮ್ಮ ಕರ್ನಾಟಕ ಸರ್ಕಾರದ ಬಜೆಟ್ ನಲ್ಲಿ ಏನಾದರೂ ಪರಿಹಾರ ಇದೆಯಾ? ಜನರ ನಿತ್ಯದ ಬವಣೆಗಳನ್ನು ಕಡಿಮೆ ಮಾಡುವುದು ಬಜೆಟ್ ನ ಆಶಯ ಅಲ್ವಾ” ಎಂದು ಪ್ರಶ್ನಿಸಿದ್ದಾರೆ.

ತುರ್ತಾಗಿ ತಲುಪಬೇಕಾದ ಸ್ಥಳ ತಲುಪಲು ಆಟೋ ಅನಿವಾರ್ಯ ! ಅಪರೂಪಕ್ಕೆ ಹೀಗೆ ಸಂಚರಿಸಲು ಊಟ ಮಾಡದೇ ಹಣ ಉಳಿಸುವ ಅವಶ್ಯಕತೆ ಇದೆ ಎನ್ನುವುದು ಸಾಮಾನ್ಯ ಆದಾಯದ ಜನತೆಯಲ್ಲಿ ಖರೀದಿಯ ಶಕ್ತಿ ಇಲ್ಲವಾಗಿದೆ ಎಂಬ ಅರ್ಥ ತಾನೇ ? ಕೈಗೆಟುಕುವ ದರ ಹೊಂದಿದ್ದ ಮೆಟ್ರೋವನ್ನು ರಾಜ್ಯ ಸರ್ಕಾರಿ ಬರೀ ದುಬಾರಿಯಲ್ಲ; ಅತೀ ದುಬಾರಿ ಮಾಡಿದೆ. ಈ ಪರಿಯ ಬೆಲೆ ಏರಿಕೆಗಳು ಇದ್ದರೆ ಖರೀದಿ ಸಾಮರ್ಥ್ಯ ಬರುವುದಾದರೂ ಹೇಗೆ ?

ಬೆಳಗ್ಗೆಯಿಂದ ಸಂಜೆ ತನಕ ದುಡಿದು ದಣಿದವರಲ್ಲಿ ಹಲವರು ರಾತ್ರಿ ಒಂದೋ ಎರಡೋ ಅಥವಾ ಮೂರು ಪೆಗ್ ಆಲ್ಕೋಹಾಲ್ ಸೇವಿಸುತ್ತಾರೆ. ಇಂಥವರಲ್ಲಿ 100-150 ರೂಪಾಯಿ ಒಳಗಿನ ದರ ಇರುವ ಮದ್ಯ ಸೇವಿಸುವವರ ಸಂಖ್ಯೆಯೇ ಅತ್ಯಧಿಕ. ತಿಂಗಳಿಗೆ 3000 ರೂಪಾಯಿಂದ 4,500 ರೂಪಾಯಿ ಖರ್ಚು ಮಾಡುತ್ತಿದ್ದವರು ಈಗ 5000 ರೂಪಾಯಿಯಿಂದ 6, 500 ರೂಪಾಯಿ ಖರ್ಚು  ಮಾಡುವ ದುಸ್ಥಿತಿ ಉಂಟಾಗಿದೆ. ಇದು ಒಟ್ಟು ಕುಟುಂಬದ ಖರ್ಚುವೆಚ್ಚದ ಮೇಲೂ ಪರಿಣಾಮ ಬೀರುತ್ತಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಲಿಕ್ಕರ್ ಬಾಬತ್ತಿನಿಂದ 40,000 ಕೋಟಿ ರೂಪಾಯಿ ನಿರೀಕ್ಷೆ ಮಾಡುತ್ತಿದೆ. ಜನತೆಯ ಆದಾಯವೇ ಹೆಚ್ಚಾಗದೇ ಇರುವಾಗ ಅವೈಜ್ಞಾನಿಕ ಶುಲ್ಕ ಏರಿಕೆ ಮಾಡಿದೆ. ಅಲ್ಪಸ್ವಲ್ಪ ಇದ್ದ ಖರೀದಿ ಸಾಮರ್ಥ್ಯವೂ ಸಂಪೂರ್ಣ ಅಳಿದು ಹೋಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದ ಮಾತು ಉಲ್ಲೇಖಿಸಿದ್ದಾರೆ. “ನಾವು ವೈರುದ್ಯದ ಸಮಾಜಕ್ಕೆ ಪ್ರವೇಶಿಸುತ್ತಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಆರ್ಥಿಕ ಸಾಮಾಜಿಕ ಸಮಾನತೆ ಇಲ್ಲ. ದುರ್ಬಲವರ್ಗದವರನ್ನು ಆರ್ಥಿಕವಾಗಿ  ಸಬಲರನ್ನಾಗಿಸುವುದಿಲ್ಲವೋ , ಅಲ್ಲಿಯವರೆಗೂ ಸಮಾನತೆ ಬರಲು ಸಾಧ್ಯವಿಲ್ಲ “ (1949 ನವೆಂಬರ್ 25 ನೇ ತಾರೀಖಿನಂದು ಸಂವಿಧಾನ ಜಾರಿ ಸಭೆಯಲ್ಲಿ  ಡಾ.ಬಿ.ಆರ್ .ಅಂಬೇಡ್ಕರ್ ರವರು ಮಾಡಿದ ಭಾಷಣ)

ಖ್ಯಾತ ಅರ್ಥಶಾಸ್ತ್ರಜ್ಞರು, ಭಾರತಕ್ಕೆ ರಿಸರ್ವ್ ಬ್ಯಾಂಕ್ ಅಗತ್ಯತೆ ಪ್ರತಿಪಾದಿಸಿದ ಅಂಬೇಡ್ಕರ್ ಅವರ ಅಭಿಪ್ರಾಯ ಸೂಕ್ತವಾಗಿದೆ. ಆದರೆ ಅವರು ಸಾಮಾನ್ಯ ಜನತೆಯ ವಾರ್ಷಿಕ ಆದಾಯ ಹೆಚ್ಚಳವಾಗುವ ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸದೇ, ಉದ್ಯೋಗಗಳನ್ನು ಸೃಷ್ಟಿಸದೇ ಪ್ರತಿವರ್ಷ ಸರ್ಕಾರದ ಅಡಿ ಬರುವ ಬಾಬ್ತುಗಳ ತೆರಿಗೆಯನ್ನು ಹೆಚ್ಚಿಸುತ್ತಾ ಹೋಗಬೇಕು ಎಂದು ಹೇಳಿಲ್ಲ. ಸಿದ್ದರಾಮಯ್ಯ ಅವರು ಇದರ ಬಗ್ಗೆ ಏಕೆ ಚಿಂತನೆ ನಡೆಸುತ್ತಿಲ್ಲ.

ಕಳೆದ ಐದು ವರ್ಷಗಳಿಂದ ಸಂಘಟಿತ ಕ್ಷೇತ್ರದಲ್ಲಾಗಲೀ, ಅಸಂಘಟಿತ ಕ್ಷೇತ್ರದಲ್ಲಾಗಲಿ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಿಲ್ಲ. ಬದಲಾಗಿ ಇದ್ದ ಉದ್ಯೋಗಗಳು ಗಣನೀಯವಾಗಿ ಕಡಿಮೆಯಾಗಿವೆ. ಮೇಲ್ನೋಟಕ್ಕೆ ಸಂಘಟಿತ ಕ್ಷೇತ್ರ ಎಂದು ಕಾಣುವಲ್ಲಿನ ಉದ್ಯೋಗಿಗಳು ತಮ್ಮ ನೌಕರಿಗಳನ್ನುಕಳೆದುಕೊಳ್ಳುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ.

ಇವೆಲ್ಲದರ ಜೊತೆಗೆ ಉದ್ಯೋಗಿಗಳನ್ನು ದುಡಿಸಿಕೊಳ್ಳುವ  ಅವಧಿ ಹೆಚ್ಚಾಗಿದೆ. ಆದರೆ ಅವರುಗಳ ಆದಾಯ ಹೆಚ್ಚಳವಾಗಿಲ್ಲ. ದುಡಿಮೆ ಹೆಚ್ಚಾಗುತ್ತಿದ್ದು ಆದಾಯ ಕಡಿಮೆಯಾಗುತ್ತಿರುವಾಗ ಸಾಮಾನ್ಯ ಆದಾಯದ ಜನತೆಗೆ ಖರೀದಿ ಮಾಡುವ ಸಾಮರ್ಥ್ಯ ದೊರೆಯುವುದಿಲ್ಲ. ಅರ್ಥಾತ್ “ನಮ್ಮ ಗ್ಯಾರಂಟಿಗಳಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ” ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಲ್ಲಿ “ಅರ್ಥ”ವಿಲ್ಲ

Similar Posts

Leave a Reply

Your email address will not be published. Required fields are marked *