ಮಂಡ್ಯ ನಗರದಲ್ಲಿ ಮೇ ೨೬ರಂದು ಸಂಚಾರಿ ಪೊಲೀಸರ ದುಡುಕು, ನಿರ್ಲಕ್ಷ್ಯದ ವರ್ತನೆಯಿಂದ ಮಗು ಸಾವನ್ನಪ್ಪಿದೆ. ಪೋಷಕರ ರೋದನ ಮುಗಿಲು ಮುಟ್ಟಿದೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ನಗರದ ಜಿಲ್ಲಾಸ್ಪತ್ರೆಗೆ ಬರುತ್ತಿದ್ದ ಹೆಲ್ಮೇಟ್‌ ಧರಿಸದ ಬೈಕ್‌ ಸವಾರನ ಬೈಕ್‌ ಹ್ಯಾಂಡಲ್‌ ಅನ್ನು ಪೊಲೀಸರು ಹಿಡಿದಿದ್ದಾರೆ. ಆಗ ಆಯ ತಪ್ಪಿ ಬೈಕ್‌ ಸವಾರ, ಮಗು ಮತ್ತು ಮಗುವಿನ ತಾಯಿ ಕೆಳಗೆ ಬಿದ್ದಿದ್ದಾರೆ. ಮಗುವಿಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ. ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ.

ಸಂಚಾರಿ ಪೊಲೀಸರು ಕೊಂಚ ವಿವೇಚನೆ ಬಳಸಿದರೂ ಸಾವು ಘಟಿಸುತ್ತಿರಲಿಲ್ಲ. ನಿರ್ಲಕ್ಷ್ಯತನದ ವರ್ತನೆಗೆ ಮೂವರು ಸಹಾಯಕ ಪೊಲೀಸ್‌ ಸಬ್‌ ಇನ್ಸ್‌ ಪೆಕ್ಟರ್‌ ಗಳನ್ನು ಅಮಾನತು ಮಾಡಲಾಗಿದೆ. ಏನೇ ಕ್ರಮ ಕೈಗೊಂಡರೂ ಹೋದ ಪ್ರಾಣ ಮತ್ತೆ ಬರುವುದಿಲ್ಲ. ಅಮಾನತು ಆದವರು ಕೆಲ ತಿಂಗಳ ನಂತರ ಮತ್ತೆ ಡ್ಯೂಟಿಗೆ ಬರುತ್ತಾರೆ. ಮತ್ತೆ ಹೆದ್ದಾರಿಯಲ್ಲಿ ವಾಹನಗಳನ್ನು ತಡೆಗಟ್ಟಲು ನಿಲ್ಲುತ್ತಾರೆ.

ಹೆದ್ದಾರಿಗಳಲ್ಲಿ ಸಂಚಾರಿ ಪೊಲೀಸರ ವಿವೇಚನೆ ಇಲ್ಲದ ವರ್ತನೆ ಇದೇ ಮೊದಲಲ್ಲ. ಸರ್ಕಾರ ಸೂಕ್ತ ನಿಯಮಾವಳಿ ರೂಪಿಸುವ ತನಕ ಕೊನೆಯದೂ ಆಗಿರುವುದಿಲ್ಲ. ಇವರ ವರ್ತನೆಯಿಂದ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಎಲ್ಲ ಪ್ರಕರಣಗಳಲ್ಲಿಯೂ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದಿಲ್ಲ.

ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಗಟ್ಟುವುದು, ಕಚೇರಿ ವೇಳೆಯಲ್ಲಿಯೇ ನಿಲ್ಲಿಸುವುದು, ಇದರಿಂದ ಆಗುವ ಸಂಚಾರ ಅಡಚಣೆ ಇತ್ಯಾದಿ ಗಮನಿಸಿ ಪ್ರವೀಣ್‌ ಸೂದ್‌ ಅವರು (ಹಾಲಿ ಸಿಬಿಐ ನಿರ್ದೇಶಕರು) ರಾಜ್ಯದ ಐಜಿಪಿ ಹಾಗೂ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಸಂದರ್ಭ ಕಣ್ಣಿಗೆ ಗೋಚರವಾಗುವ ಸಂಚಾರ ನಿಯಮಾವಳಿ ಉಲ್ಲಂಘನೆ ಹೊರತುಪಡಿಸಿ ವಾಹನಗಳನ್ನು ಅಡ್ಡಗಟ್ಟಬಾರದು ಎಂಬ ಸುತ್ತೋಲೆ ಹೊರಡಿಸಿದ್ದರು. ಅಲೋಕ್‌ ಮೋಹನ್‌ ಅವರು ಪೊಲೀಸ್‌ ಮಹಾ ನಿರ್ದೇಶಕರಾಗಿದ್ದ ಅವಧಿಯಲ್ಲಿಯೂ ಇದು ಜಾರಿಯಲ್ಲಿತ್ತು.

ಹೆಲ್ಮೆಟ್ ಧರಿಸದಿರುವುದು ಸಂಚಾರಿ ನಿಯಮದ ಉಲ್ಲಂಘನೆ. 1988ರ ಮೋಟಾರು ವಾಹನ ಕಾಯ್ದೆಯಡಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಇದನ್ನು ಉಲ್ಲಂಘಿಸಿದರೆ ₹1,000 ದಂಡ ಮತ್ತು ಗಂಭೀರ ಪ್ರಕರಣಗಳಲ್ಲಿ ಮೂರು ತಿಂಗಳವರೆಗೆ ಲೈಸೆನ್ಸ್ ಅಮಾನತುಗೊಳಿಸಬಹುದು. ದುರದೃಷ್ಟವಶಾತ್, ಇಂತಹ ಜಾರಿ ಕ್ರಿಯೆಗಳ ಸಂದರ್ಭದಲ್ಲಿ ಕೆಲವು ಅಪಘಾತಗಳು ಸಂಭವಿಸಿವೆ. ಸಾವಿಗೆ ಕಾರಣವಾಗಿದೆ.

ಎಲ್ಲಿ ತಡೆಯಬೇಕು ಎಂಬುದು ಮುಖ್ಯ ಪ್ರಶ್ನೆ

ಕಣ್ಣಿಗೆ ಗೋಚರವಾಗುವ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು. ಟ್ರಾಫಿಕ್‌ ಸಿಗ್ನಲುಗಳಲ್ಲಿ ವಾಹನಗಳು ನಿಂತಾಗ ವಾಹನ ಸವಾರರಿಗೆ ದಂಡದ ರಶೀದಿ ನೀಡಬೇಕು. ಅವರ ಗುರುತು (ಡ್ರೈವಿಂಗ್‌ ಲೈಸನ್ಸ್‌, ಆಧಾರ್‌ ಕಾರ್ಡ್‌, ವೋಟರ್‌ ಐಡಿ ಇವುಗಳಲ್ಲಿ ಯಾವುದಾದರೂ ಒಂದನ್ನು ಪಡೆಯಬೇಕು) ಡ್ರೈವಿಂಗ್‌ ಲೈಸನ್ಸ್‌ ಇಲ್ಲದೇ ಇದ್ದರೆ ಸ್ಥಳದಲ್ಲಿಯೇ ವಾಹನವನ್ನು ವಶಕ್ಕೆ ತೆಗೆದುಕೊಂಡು ನಿಯಮಾವಳಿ ಪ್ರಕಾರ ಕ್ರಮ ಜರುಗಿಸಬೇಕು.

ಈ ಕ್ರಮಗಳನ್ನು ಕ್ಯಾಮೆರಾ ಕಣ್ಗಾವಲಿನಲ್ಲಿಯೇ ಮಾಡಬೇಕು. ಏಕೆಂದರೆ ಕೆಲವು ಸಂಚಾರಿ ಪೊಲೀಸರು ದಂಡ ವಿಧಿಸದೇ ಲಂಚ ಪಡೆದು ಕಳಿಸುತ್ತಾರೆ ಎಂಬ ಆರೋಪಗಳೂ ಇವೆ. ಇಂಥ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಹೆದ್ದಾರಿಗಳಲ್ಲಿ ಟೋಲ್‌ ಬೂತ್‌ ಬಳಿ ವಿಶಾಲವಾದ ಸ್ಥಳವಕಾಶ ಇರುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇಲ್ಲಿ ದಂಡ ವಿಧಿಸಬೇಕು. ಇಲ್ಲಿಯೂ ಕ್ಯಾಮೆರಾ ಕಣ್ಗಾವಲಿರಬೇಕು. ಪೊಲೀಸರು ಬಾಡಿ ಕ್ಯಾಮೆರಾ ಧರಿಸುವುದನ್ನು ಕರ್ತವ್ಯದ ವೇಳೆ ಅದು ಆನ್‌ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮೇಲಾಧಿಕಾರಿಗಳು ಪದೇಪದೇ ಅನಿರೀಕ್ಷಿತವಾಗಿ ತಪಾಸಣೆ ಮಾಡುತ್ತಿದ್ದರೆ ಕ್ಯಾಮೆರಾ ಆನ್‌ ಆಗಿಯೇ ಇರುತ್ತದೆ.

ಸೂಕ್ಷ್ಮವಾದ ಕ್ಯಾಮೆರಾಗಳ ಕಣ್ಗಾವಲು ಇದೆ

ಈಗ ನಗರ ಪ್ರದೇಶಗಳ ಸಿಗ್ನಲ್‌ ಲೈಟುಗಳು, ಹೆದ್ದಾರಿಗಳಲ್ಲಿ ಕ್ಯಾಮೆರಾ ಕಣ್ಗಾವಲಿದೆ. ಕೇರಳ ರಾಜ್ಯದಲ್ಲಿ ಪ್ರತಿಯೊಂದು ಗ್ರಾಮದ ಮುಖ್ಯ ರಸ್ತೆಗಳಲ್ಲಿ ಅಧಿಕ ಸಾಮರ್ಥ್ಯದ ಕಣ್ಗಾವಲು ಕ್ಯಾಮೆರಾಗಳಿವೆ. ಆದರೆ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಹುಡುಕಿದರೂ ಇಂಥ ಕ್ಯಾಮೆರಾಗಳು ಕಾಣ ಸಿಗುವುದಿಲ್ಲ. ಇಂಥವು ಇದ್ದಾಗ ಕೇವಲ ಸಂಚಾರಿ ನಿಯಮಾವಳಿ ಉಲ್ಲಂಘನೆ ಅಷ್ಟೆ ಅಲ್ಲ; ಹಠಾತ್‌ ಗಲಾಟೆಗಳಾದರೂ ಅದು ಕ್ಯಾಮೆರಾದಲ್ಲಿ ದಾಖಲಾಗಿರುತ್ತದೆ.

ಹೆಲ್ಮೆಟ್‌ ಧರಿಸದಿರುವುದು, ಸೀಟ್‌ ಬೆಲ್ಡ್‌ ಧರಿಸದಿರುವುದು, ಅತೀವೇಗದ ಚಾಲನೆ, ಅಡ್ಡಾದಿಡಿ ಚಾಲನೆ, ಮೊಬೈಲ್‌ ಪೋನಿನಲ್ಲಿ ಮಾತನಾಡುತ್ತಾ ಚಾಲನೆ ಇಂಥವುಗಳು ಕ್ಯಾಮೆರಾದಲ್ಲಿ ದಾಖಲಾಗುತ್ತವೆ. ಉಲ್ಲಂಘನೆ ಮಾಡಿದ ವಾಹನಗಳ ನೋಂದಣಿ ಸಂದರ್ಭದಲ್ಲಿ ಕೊಟ್ಟ ವಿಳಾಸಕ್ಕೆ ವಿವರಗಳ ಸಮೇತ ದಂಡದ ರಶೀದಿ ರವಾನೆಯಾಗುತ್ತದೆ.

ಇತರ ದೇಶಗಳಲ್ಲಿ ಸಂಚಾರಿ ಪೊಲೀಸರ ವರ್ತನೆ ಹೇಗಿದೆ ?

ಇತರ ದೇಶಗಳಲ್ಲಿ ಹೆಲ್ಮೆಟ್ ಧರಿಸದಿರುವುದು ಮುಂತಾದ ಟ್ರಾಫಿಕ್ ನಿಯಮ ಉಲ್ಲಂಘನೆಗಳ ಸಂದರ್ಭದಲ್ಲಿ ಪೊಲೀಸರು ಅಲ್ಲಿನ ಸ್ಥಳೀಯ ಕಾನೂನುಗಳು, ಜಾರಿ ತಂತ್ರಗಳು ಮತ್ತು ಸನ್ನಿವೇಶಗಳ ಆಧಾರದ ಮೇಲೆ ವಿಭಿನ್ನವಾಗಿ ವ್ಯವಹರಿಸುತ್ತಾರೆ. ಥೈಲ್ಯಾಂಡ್ ದೇಶದ ಫುಕೆಟ್‌ನಂತಹ ನಗರ ಪ್ರದೇಶಗಳಲ್ಲಿ ಚೆಕ್‌ಪಾಯಿಂಟ್‌ಗಳಲ್ಲಿ ಮಾತ್ರ ಸಂಚಾರಿ ಪೊಲೀಸರು ದಂಡ ವಿಧಿಸುತ್ತಾರೆ.

ವಿಯೆಟ್ನಾಂ ದೇಶದಲ್ಲಿ ಸಮಗ್ರ ಹೆಲ್ಮೆಟ್ ಕಾನೂನಿನಡಿ, ಎಲ್ಲ ಬೈಕ್ ಸವಾರರು ಮತ್ತು  ಹಿಂಬದಿ ಪ್ರಯಾಣಿಕರು ಹೆಲ್ಮೆಟ್ ಧರಿಸಬೇಕು. ಉಲ್ಲಂಘನೆಗೆ ದಂಡವಿದೆ. ಆದರೆ ಅಲ್ಲಿ ದಂಡ ವಿಧಿಸುವುದಕ್ಕೆ ಪ್ರಾಮುಖ್ಯತೆ ನೀಡುವುದಕ್ಕಿಂತಲೂ ಸಂಚಾರಿ ನಿಯಮ ಶಿಕ್ಷಣಕ್ಕೆ ಪೊಲೀಸರು ಒತ್ತು ಕೊಡುತ್ತಾರೆ. (ನಮ್ಮ ಕರ್ನಾಟಕದಲ್ಲಿ ಬಹಳ ಅಪರೂಪಕ್ಕೆ ಹೆಲ್ಮೆಟ್‌ ಧರಿಸದ ಸವಾರರಿಗೆ ಗುಲಾಬಿ ಹೂ ನೀಡುವ ಕೆಲಸ ಆಗುತ್ತದೆ) ಹನೋಯ್ ಮತ್ತು ಹೋ ಚಿ ಮಿನ್ಹ್ ನಗರಗಳಲ್ಲಿ ಪೊಲೀಸರು ಗಸ್ತು ತಿರುಗುವುದು ಮತ್ತು ಟ್ರಾಫಿಕ್ ಕ್ಯಾಮೆರಾಗಳನ್ನು ಬಳಸುತ್ತಾರೆ. ಅಲ್ಲಿನ ಪೊಲೀಸರ ಜನಸ್ನೇಹಿ ವರ್ತನೆಯಿಂದ ಹೆಲ್ಮೆಟ್‌ ಧರಿಸದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ.

ನೇಪಾಳದ ಟ್ರಾಫಿಕ್ ಪೊಲೀಸರು ಕಾನೂನು ಜಾರಿಯ ಜೊತೆಗೆ ಶಿಕ್ಷಣಕ್ಕೆ ಒತ್ತು ನೀಡುತ್ತಾರೆ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಸೌಮ್ಯವಾಗಿ ವಿವರಣೆ ನೀಡುವಂತೆ ತರಬೇತಿಯನ್ನು ನೀಡಲಾಗಿದೆ, ಆದರೆ ಸಂಪನ್ಮೂಲ ಕೊರತೆಯಿಂದ ಇಂಥ ಕ್ರಮಗಳು ಕೆಲವು ಸ್ಥಳಗಳಿಗೆ ಮಾತ್ರ ಸೀಮಿತವಾಗಿದೆ.

ಅಮೆರಿಕಾದಲ್ಲಿ ಹೆಲ್ಮೆಟ್‌ ಧರಿಸುವ ಬಗ್ಗೆ ಒಂದೊಂದು ರಾಜ್ಯದಲ್ಲಿ ವಿಭಿನ್ನ ನಿಯಮಾವಳಿ ಇದೆ.  ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಹೆಲ್ಮೆಟ್ ಕಡ್ಡಾಯ. ಧರಿಸದೇ ಇದ್ದರೆ ದಂಡ. ಟೆಕ್ಸಾಸ್‌ ರಾಜ್ಯದಲ್ಲಿ 21 ವರ್ಷದೊಳಗಿನವರಿಗೆ ಮಾತ್ರ ಹೆಲ್ಮೆಟ್ ಕಡ್ಡಾಯ. ಇಲ್ಲೆಲ್ಲ ಚೆಕ್‌ಪಾಯಿಂಟ್‌ಗಳಲ್ಲಿ ಅಥವಾ ಗಸ್ತಿನ ಸಂದರ್ಭದಲ್ಲಿ ಸವಾರರನ್ನು ತಡೆಯಲಾಗುತ್ತದೆ. ಪೊಲೀಸರು ಗುರುತಿನ ಚೀಟಿಯನ್ನು ಕೇಳಿ, ಸಜ್ಜನಿಕೆಯಿಂದ ದಂಡ ವಿಧಿಸುತ್ತಾರೆ

ಚೀನಾದ ಶಾಂಘೈನಂತಹ ನಗರಗಳಲ್ಲಿ ಇ-ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯವಲ್ಲ, ಆದರೆ ವೇಗದ ಉಲ್ಲಂಘನೆಯನ್ನು ಕ್ಯಾಮೆರಾಗಳ ಮೂಲಕ ಗಮನಿಸಲಾಗುತ್ತದೆ. ನಿಗದಿತ ವೇಗ ಮೀರಿದರೆ ದಂಡ ವಿಧಿಸಲಾಗುತ್ತದೆ.  ಮೋಟರ್‌ ಬೈಕ್‌ ಸವಾರರು ಹೆಲ್ಮೆಟ್‌ ಧರಿಸದೇ ಇದ್ದರೆ ಕ್ಯಾಮೆರಾದಲ್ಲಿ ದಾಖಲಾಗಿ ಸಂಬಂಧಿಸಿದವರಿಗೆ ದಂಡದ ರಶೀದಿ ರವಾನೆಯಾಗುತ್ತದೆ. ರಾಡಾರ್ ಮತ್ತು ಕ್ಯಾಮೆರಾಗಳನ್ನು ಬಳಸಿಕೊಂಡು ದಂಡ ವಿಧಿಸಲಾಗುತ್ತದೆ. ಇದರ ಹೊರತು ರಸ್ತೆಯಲ್ಲಿ ಅಡ್ಡಗಟ್ಟುವುದು ತೀರಾ ಅಪರೂಪ.

ಸಂಚಾರಿ ಪೊಲೀಸರಿಗೆ ತರಬೇತಿ ಇಲ್ಲ

ಕರ್ನಾಟಕದಲ್ಲಿ ಸಂಚಾರಿ ಪೊಲೀಸರಿಗಾಗಿಯೇ ಪ್ರತ್ಯೇಕ ತರಬೇತಿ ಇಲ್ಲ. ಈ ವಿಭಾಗಕ್ಕೆ ನೇರ ನೇಮಕಾತಿಯೂ ಇಲ್ಲ. ಅಪರಾಧ ಪತ್ತೆ, ಕಾನೂನು ಜಾರಿ ಪೊಲೀಸರನ್ನೇ ಇಲ್ಲಿಗೆ ವರ್ಗಾಯಿಸಲಾಗುತ್ತದೆ. ಬಹುತೇಕರಿಗೆ ಸಂಚಾರಿ ನಿಯಮಾವಳಿಗಳ ಸ್ಪಷ್ಟ ಪರಿಜ್ಞಾನವಿಲ್ಲ. ಇಂಥ ಕೊರತೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಬೇಕು. ಇದರ ಹೊರತು ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದನ್ನು ನಿಲ್ಲಿಸಬೇಕು. ನಿರ್ದಿಷ್ಟ ಚೆಕ್‌ ಪಾಯಿಂಟ್‌ ಗಳಲ್ಲಿ ಕ್ಯಾಮೆರಾ ಕಣ್ಗಾವಲಿನಲ್ಲಿಯೇ ತಪಾಸಣೆ ನಡೆಸುವುದನ್ನು ಕಡ್ಡಾಯ ಮಾಡಬೇಕು. ಹೀಗೆ ಮಾಡದೇ ಇದ್ದರೆ ವಾಹನಗಳಿಂದ ಬಿದ್ದು ಗಾಯಗೊಳ್ಳುವವರ, ದಾರುಣವಾಗಿ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ !

Similar Posts

Leave a Reply

Your email address will not be published. Required fields are marked *