
ಕರ್ನಾಟಕದಲ್ಲಿ ಪ್ರತಿ ಒಂದು ಲೀಟರ್ ಡೀಸೆಲ್ ಬೆಲೆ 2 ರೂಪಾಯಿ ಹೆಚ್ಚಾಗಿದೆ. ಏಪ್ರಿಲ್ 1ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪರಿಷ್ಕೃತವಾಗಿದೆ. ರಾಜ್ಯ ಸರ್ಕಾರ, ಪ್ರತಿ ಒಂದು ಲೀಟರ್ ಮೇಲೆ ವಿಧಿಸುವ ಮಾರಾಟ ತೆರಿಗೆಯನ್ನು ಶೇಕಡ 18.44 ರಿಂದ ಶೇಕಡ 21.17ಕ್ಕೆ ಏರಿಕೆ ಮಾಡಿದೆ. ಇದರ ಪರಿಣಾಮವೇ ಅವೈಜ್ಞಾನಿಕವಾಗಿ ಇಂಧನದ ಬೆಲೆ ಹೆಚ್ಚಾಗಿದೆ.
ಮುಖ್ಯವಾಗಿ ಡೀಸೆಲ್ ಬೆಲೆ ಏರಿಕೆ ಆಗುವುದರಿಂದ ಜೀವನಾವಶ್ಯಕವಾದ ದೈನಂದಿನ ದಿನಸಿ ಸಾಮಗ್ರಿಗಳು, ಹಣ್ಣು-ತರಕಾರಿಗಳ ಬೆಲೆ, ಸಾರಿಗೆ ದರ, ಹೋಟೆಲ್ ತಿನಿಸುಗಳ ದರ, ಕಟ್ಟಡ ನಿರ್ಮಾಣ ಸಾಮಗ್ರಿಗಳ ದರ, ವಿದ್ಯಾರ್ಥಿಗಳು ಬಳಸುವ ಲೇಖನ ಸಾಮಗ್ರಿಗಳ ದರ ಸ್ವಯಂಚಾಲಿತವಾಗಿಯೇ ಹೆಚ್ಚಾಗುತ್ತದೆ. ಕೆಲವೇ ದಿನಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ, ಹಾಲು, ಮೊಸರು ಮತ್ತು ವಿದ್ಯುತ್ ಬೆಲೆಯನ್ನು ಏರಿಸಿದೆ. ಜನ ಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿ ಪರಿಣಮಿಸಿದೆ.
ದರ ಹೆಚ್ಚಳ ಅಸಾಮಾನ್ಯ ಸಂಗತಿ ಅಲ್ಲ. ಆದರೆ ಅದಕ್ಕೊಂದು ತರ್ಕವಿರಬೇಕು. ಜನ ಸಾಮಾನ್ಯರಿಗೆ ಹೊರೆಯಾಗಬಾರದು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 2023ರ ನಂತರ ಇಂದಿನವರೆಗೆ ಆಗುತ್ತಿರುವ ಬೆಲೆ ಏರಿಕೆ ಗಮನಿಸಿದರೆ ದಿಗ್ಬ್ರಮೆಯಾಗುತ್ತದೆ. ಜನ ಸಾಮಾನ್ಯರ ಆದಾಯ ಹೆಚ್ಚಳವಾಗುತ್ತಿದೆಯೇ ಎಂಬುದನ್ನು ಗಮನಿಸದೇ ಜೀವನಾವಶ್ಯಕ ಆಗಿರುವುದರ ಬೆಲೆಗಳು ಏರಿಕೆಯಾಗುತ್ತಲೇ ಇವೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿಯೇ ಕರ್ನಾಟಕ ದುಬಾರಿ ರಾಜ್ಯವೇ ಎಂಬ ಪ್ರಶ್ನೆ ಎದುರಾಗುತ್ತದೆ. 2023ರಿಂದ ಏಪ್ರಿಲ್ 2025ರವರೆಗೆ ಲಭ್ಯವಿರುವ ಅಂಕಿಅಂಶ ಗಮನಿಸಿದರೆ ಯಾವ ರೀತಿಯ ದುಬಾರಿ ರಾಜ್ಯವಾಗಿದೆ ಎಂಬುದು ಮನದಟ್ಟಾಗುತ್ತದೆ. ಇದು ರಾಜ್ಯದಲ್ಲಿ ಪ್ರಾದೇಶಿಕವಾರು ಬದಲಾವಣೆ ಹೊಂದಿದೆ. ಬೆಂಗಳೂರು ನಗರದಲ್ಲಿ ಜೀವನ ಮಾಡುವುದು ಅತೀ ದುಬಾರಿಯಾಗಿದೆ. ಇದಕ್ಕೆ ಹೋಲಿಸಿದರೆ ಇತರ ಜಿಲ್ಲೆಗಳು ಅತೀಯಾಗಿ ಅಲ್ಲದಿದ್ದರೂ ದುಬಾರಿ ಆಗಿದೆ. ಮೈಸೂರು, ಮಂಗಳೂರು, ಬೆಳಗಾವಿ ಜಿಲ್ಲೆಗಳು ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದುಬಾರಿ !
ಬೆಂಗಳೂರು ನಗರ ಜಿಲ್ಲೆಯನ್ನು ಗಮನಿಸೋಣ. ಇದು ಕರ್ನಾಟಕದಲ್ಲಿಯೇ ಅತೀ ದುಬಾರಿ. ಪ್ರಮುಖ ವೆಚ್ಚ ಎಂದರೆ ಮನೆ ಬಾಡಿಗೆ. ಆಯಾ ಬಡಾವಣೆಗೆ ತಕ್ಕಂತೆ ಒಂದು ಸಿಂಗಲ್ ಬೆಡ್ ರೂಮಿನ ತಿಂಗಳ ಮನೆ ಬಾಡಿಗೆ 7,000 ದಿಂದ 15 ಸಾವಿರ ರೂಪಾಯಿ ತನಕ ಇದೆ. ತೀರಾ ಪುಟ್ಟದಾದ ಒಂದು ಎರಡು ಕೋಣೆ, ಸಣ್ಣ ಹಾಲ್, ಸಣ್ಣ ಕಿಚನ್, ಸಣ್ಣ ಬಾತ್ ರೂಮ್ ಇರುವ (ಡಬ್ಬಲ್ ಬೆಡ್ ರೂಮ್) ಮನೆ ಬಾಡಿಗೆ ತಿಂಗಳಿಗೆ 15, 000 ರೂಪಾಯಿಯಿಂದ 30, 000 ರೂಪಾಯಿ ತನಕ ಇದೆ.
ಆಹಾರ ಮತ್ತು ದಿನಸಿ ವೆಚ್ಚ 5, 000 ರೂಪಾಯಿಯಿಂದ 20 ಸಾವಿರ ತನಕ ಇದೆ. ವಿದ್ಯುತ್ (ಮನೆ ಬಳಕೆ ವಿದ್ಯುತ್ 200 ಯೂನಿಟ್ ತನಕ ಉಚಿತವಾಗಿದ್ದರೂ ಪ್ರತಿ ಮನೆಗೂ ಹಿಂದಿನ ಬಳಕೆ ಆಧಾರದ ಮೇಲೆ ನಿಗದಿಪಡಿಸಿದ ಸರಾಸರಿ ಯೂನಿಟ್ ಗಿಂತ ಹೆಚ್ಚು ಬಳಸಿದರೆ ಶುಲ್ಕ ಕಟ್ಟಬೇಕು. ಇತ್ತೀಚೆಗೆ ವಿದ್ಯುತ್ ಶುಲ್ಕ ಹೆಚ್ಚಳವಾಗಿದೆ), ಇಂಟರ್ ನೆಟ್, ನೀರು, ಇವುಗಳ ವೆಚ್ಚವೂ ತಿಂಗಳಿಗೆ 3, 500 ರೂಪಾಯಿಗಳಿಂದ 5,000 ರೂಪಾಯಿ ತನಕ ಇದೆ.
ದೆಹಲಿ, ಚೆನ್ನೈ ಮತ್ತಿತರ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ಮೆಟ್ರೋ ಪ್ರಯಾಣ ದರ ದುಬಾರಿ. ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಬಸ್ಸುಗಳ ಪ್ರಯಾಣ ದರವೂ ಗಣನೀಯವಾಗಿ ಏರಿಕೆಯಾಗಿದೆ. ಹಾಗಾಗಿ ದುಡಿಯುವ ವ್ಯಕ್ತಿ, ವಿದ್ಯಾರ್ಥಿಗಳ ಸಾರಿಗೆ ವೆಚ್ಚಕ್ಕಾಗಿಯೇ ದುಡಿಮೆಯ ಗಣನೀಯ ಮೊತ್ತ ತೆಗೆದಿಡಬೇಕಾಗಿದೆ. ಈ ಅಂಕಿಅಂಶ ಸಿಂಗಲ್ ಬೆಡ್ ರೂಮಿನ ಮನೆಯಲ್ಲಿ ವಾಸಿಸುವ ಸರಾಸರಿ ನಾಲ್ಕು ಮಂದಿಗೆ ಅನ್ವಯವಾಗುತ್ತದೆ. ಸಂದರ್ಭನುಸಾರ ಇದರ ವೆಚ್ಚ ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ.
ಬೆಂಗಳೂರು ನಗರ ಜಿಲ್ಲೆಯಲ್ಲಿ ತಲಾ ಆದಾಯ 2022-23 ರಲ್ಲಿ 621,131 ರೂಪಾಯಿ. ಈಗಲೂ ಸರಾಸರಿ ಗಮನಿಸಿದರೆ ಗಮನಾರ್ಹ ಹೆಚ್ಚಳ ಆಗಿಲ್ಲ. ಈ ಆದಾಯ ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ ಹೆಚ್ಚು ! ಅನೇಕರಿಗೆ (ಉದಾಹರಣೆಗೆ ಸಾಫ್ಟ್ವೇರ್ ಉದ್ಯೋಗಿಗಳಿಗೆ) ಸರಾಸರಿ ಮಾಸಿಕ ವೇತನವು ಸುಮಾರು ಸರಾಸರಿ 20,000–30,000 ರೂಪಾಯಿ ಮಾಸಿಕ ಮೂಲ ವೇತನವಿದೆ. ಆದರೆ ಇದು ಸಹ ಘಟಕದಿಂದ ಘಟಕಕ್ಕೆ ವ್ಯತ್ಯಾಸವಾಗುತ್ತದೆ. ಆದರೆ ಈ ಮೊತ್ತ ಹೆಚ್ಚಿನ ಜೀವನ ವೆಚ್ಚಗಳಿಗೆ ಸಾಕಾಗುವುದಿಲ್ಲ.
ಪ್ರಯಾಣ ದರ ಹೆಚ್ಚಳ (ಉದಾಹರಣೆಗೆ ಶೇಕಡ 75ರಷ್ಟು ಮೆಟ್ರೋ ದರ ಹೆಚ್ಚಳ,ಶೇಕಡ 15 ರಷ್ಟು KSRTC ಬಸ್ ದರ ಹೆಚ್ಚಳ) ಮತ್ತು ಹಾಲು ಮತ್ತು ಆಸ್ತಿ ತೆರಿಗೆಯಂತಹ ಅಗತ್ಯಗಳ ವೆಚ್ಚ ಹೆಚ್ಚುತ್ತಲೇ ಇದ್ದು ಸಾಮಾನ್ಯ ಆದಾಯ ವರ್ಗಗಳಂತೆ ಹೆಚ್ಚಿನ ಆದಾಯವುಳ್ಳ ವರ್ಗಗಳು ಹತಾಶಗೊಂಡಿವೆ.
ಈಗ ಇತರ ನಗರ ಕೇಂದ್ರಗಳನ್ನು ವಿವರವಾಗಿ ಗಮನಿಸೋಣ (ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ): ಈ ನಗರಗಳು ಬೆಂಗಳೂರಿಗಿಂತ ಕಡಿಮೆ ದುಬಾರಿ. ಆದರೆ ರಾಜ್ಯದ ಸರಾಸರಿಗಿಂತ ಹೆಚ್ಚು ! ಉದಾಹರಣೆಗೆ ಮೈಸೂರು ಮತ್ತು ಮಂಗಳೂರು ಜೀವನ ವೆಚ್ಚವು ಬೆಂಗಳೂರಿಗಿಂತ 20–30% ಕಡಿಮೆಯಾಗಿದೆ. ಬಾಡಿಗೆಗಳು ಮಾಸಿಕ ಸರಾಸರಿ 4,000–15,000 ರೂಪಾಯಿ ಮತ್ತು ಆಹಾರ/ದಿನಸಿ ವೆಚ್ಚಗಳು 4,000–10,000 ರೂಪಾಯಿ.
ದಕ್ಷಿಣ ಕನ್ನಡ (ಮಂಗಳೂರು) ಮತ್ತು ಉಡುಪಿಯಂತಹ ಜಿಲ್ಲೆಗಳಲ್ಲಿ ತಲಾ ಆದಾಯ ಹೆಚ್ಚಾಗಿದೆ. ಆದರೆ ಉದ್ಯೋಗಾವಕಾಶಗಳು ಬೆಂಗಳೂರಿಗಿಂತ ಕಡಿಮೆಯಿರುವುದರಿಂದ ಆದಾಯ ಅಸಮಾನತೆ ಉಂಟಾಗುತ್ತದೆ. ಇಲ್ಲಿನ ಸಾರಿಗೆ ಮತ್ತು ಉಪಯುಕ್ತತಾ ವೆಚ್ಚಗಳು ಹೆಚ್ಚುತ್ತಿವೆ. ಮೂಲಸೌಕರ್ಯ ಅಭಿವೃದ್ಧಿ ವಿಳಂಬವಾಗಿದೆ. ಇದು ಜನ ಸಾಮಾನ್ಯರ ಜೀವನಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ.
ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ (ಉದಾಹರಣೆಗೆ ಕಲಬುರಗಿ, ರಾಯಚೂರು, ವಿಜಯಪುರ) ಜೀವನ ವೆಚ್ಚ ಗಮನಾರ್ಹವಾಗಿ ಕಡಿಮೆ, ಮಾಸಿಕ ವೆಚ್ಚಗಳು (ಬಾಡಿಗೆ ಸೇರಿದಂತೆ) ಸಾಮಾನ್ಯವಾಗಿ ಒಂದು ಕುಟುಂಬಕ್ಕೆ 10,000 ರೂಪಾಯಿಗಿಂತ ಕಡಿಮೆ. ಆಹಾರ ಮತ್ತು ಉಪಯುಕ್ತತೆಗಳ ವೆಚ್ಚ ಕಡಿಮೆ.
ಪ್ರಮುಖವಾಗಿ ಗಮನಿಸಬೇಕಾಗಿರುವುದು ಇಲ್ಲಿನ ತಲಾ ಆದಾಯವು ತುಂಬ ಕಡಿಮೆ (ಉದಾಹರಣೆಗೆ ಕಲಬುರಗಿ 2022-23 ರಲ್ಲಿ ವಾರ್ಷಿಕವಾಗಿ 124,998 ರೂಪಾಯಿ. ಇದು ಕರ್ನಾಟಕದಲ್ಲಿ ಅತ್ಯಂತ ಕಡಿಮೆ) ಕೃಷಿಯು ಪ್ರಾಥಮಿಕ ಜೀವನೋಪಾಯವಾಗಿದೆ. ಆದಾಯವು ಸರಾಸರಿ ಮಾಸಿಕ 15,000 ರೂಪಾಯಿಗಿಂತ ಕಡಿಮೆ ಇರುತ್ತದೆ. ಇಲ್ಲಿ ಮೂಲಸೌಕರ್ಯಗಳ ಕೊರತೆಯಿದೆ. ಸೀಮಿತ ಉದ್ಯೋಗಾವಕಾಶಗಳಿವೆ. ಗ್ರಾಮೀಣ ಪ್ರದೇಶಗಳು ಆರೋಗ್ಯ,ಉತ್ತಮ ಶಿಕ್ಷಣದ ಸಮಸ್ಯೆಗಳನ್ನು ಎದುರಿಸುತ್ತವೆ.
ಮುಖ್ಯವಾಗಿ ಮಹಾರಾಷ್ಟ್ರದ ರಾಜಧಾನಿ ಮುಂಬೈಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿನ ಜೀವನ ವೆಚ್ಚ ತುಸು ಕಡಿಮೆ. ಆದರೆ ದಕ್ಷಿಣ ಭಾರತದ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದ ಜೀವನ ವೆಚ್ಚ ಹೆಚ್ಚು. ಕರ್ನಾಟಕದ ಉಳಿದ ಭಾಗಗಳು ಮತ್ತು ದಕ್ಷಿಣದ ರಾಜ್ಯಗಳ (ರಾಜಧಾನಿಗಳನ್ನು ಹೊರತುಪಡಿಸಿ) ಜೀವನ ವೆಚ್ಚ ಹೋಲಿಸಿದರೆ ಕರ್ನಾಟಕ ರಾಜ್ಯ ದುಬಾರಿ.
ವರ್ಷದಿಂದ ವರ್ಷಕ್ಕಷ್ಟೆ ಅಲ್ಲ, ತಿಂಗಳಿನಿಂದ ತಿಂಗಳಿಗೆ ಪ್ರಮುಖವಾಗಿ ಬೆಂಗಳೂರು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿನ ಜೀವನ ವೆಚ್ಚ ಏರಿಕೆಯಾಗುತ್ತಲೇ ಇದೆ. ಗ್ಯಾರಂಟಿ ಯೋಜನೆಗಳಿಗಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ವಾರ್ಷಿಕ ಸರಾಸರಿ 56 ಕೋಟಿ ವೆಚ್ಚ ಮಾಡುತ್ತಿದೆ. ಈ ಅಗಾಧ ವೆಚ್ಚ ಸರಿದೂಗಿಸಲು ಎಲ್ಲ ಕ್ಷೇತ್ರಗಳ ತೆರಿಗೆ ಹೆಚ್ಚಿಸುತ್ತಿದೆ. ಇದರ ಹೊರತಾಗಿ ಹೊಸ ಹೊಸ ಉದ್ಯೋಗಳ ಸೃಷ್ಟಿ, ಜೀವನಮಟ್ಟ ಸುಧಾರಣೆ, ಮೂಲಭೂತ ಸೌಕರ್ಯಗಳ ಸುಧಾರಣೆ ಮಾಡುತ್ತಿಲ್ಲ. ಮಾನವ ಅಭಿವೃದ್ದಿ ಎನ್ನುವುದು ಮರೀಚಿಕೆಯಾಗಿದೆ. ಇಷ್ಟೆಲ್ಲ ಇರುವಾಗ ಏಪ್ರಿಲ್ 1, 2025 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಮಾಡಿರುವ ಡೀಸೆಲ್ ಬೆಲೆ ಏರಿಕೆಯು ಕರ್ನಾಟಕದ ಜನರ ಜೀವನವನ್ನು ಮತ್ತಷ್ಟೂ ದುಬಾರಿಯಾಗಿಸುತ್ತದೆ.
ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ, ಸಾರ್ವಜನಿಕ ಜೀವನ ದುಬಾರಿ ಮತ್ತು ದುರ್ಭರ ಆಗಲು ಕಾರಣರಾದವರಿಗೆ ಇದು ಅರ್ಥ ಆದರೆ.. ಈ ಲೇಖನ ಸಾರ್ಥಕ…!!