ಮಂಗಳವಾರ, ಜನೆವರಿ 28, 2025 ಆಗಷ್ಟೇ ಮನೆಗೆ ಬಂದಿದ್ದೆ. ಅಕ್ಕ (ತಾಯಿ) ಪೋನ್ ಮಾಡಿ ” ಎದೆ ತುಂಬ ನೋಯ್ತಿದೆ ಮೊಗಾ” ಅಂದರು ! ತಕ್ಷಣವೇ ಬೆಂಗಳೂರಿನಿಂದ ಹೊರಟೆ. ಮಂಡ್ಯ ತಲುಪಿದಾಗ ರಾತ್ರಿ ಹತ್ತು ಗಂಟೆ ! ಖಾಸಗಿ ನರ್ಸಿಂಗ್ ಹೋಮ್ ಗಳಲ್ಲಿ ಇಸಿಜಿ ನಿರ್ವಹಣೆ ಮಾಡುವವರು ಇರಲಿಲ್ಲ. ಎರಡು ಕಡೆ ಇಸಿಜಿ ಮಾಡಿಸಲು ಸಂಜೆ 7ರ ಒಳಗೆ ಬರಬೇಕು ಎಂದರು! 7 ಗಂಟೆ ನಂತರ ಎದೆನೋವು ಬಂದರೆ ? ಪ್ರಶ್ನೆ ಕೇಳಲು ಹೋಗಲಿಲ್ಲ ! ಇನ್ನೊಂದು ಕಡೆ “ಇಸಿಜಿ ಮಾಡ್ತಿವಿ. ಅದನ್ನು ನೋಡಿ ಸಜೆಶನ್ ಮಾಡಲು ಡಾಕ್ಟರಿಲ್ಲ ! ಬೆಳಗ್ಗೆಯೇ ಬರಬೇಕು ಎಂದರು ! ಅಲ್ಲಿಯ ತನಕ ತೀವ್ರ ಎದೆನೋವು ಬಂದವರ ಸ್ಥಿತಿ ಏನಾಗಬಹುದು ? ಪ್ರಶ್ನೆ ಮಾಡಲು ಹೋಗಲಿಲ್ಲ !
ಜಿಲ್ಲಾ ಸರ್ಕಾರಿ ಆಸ್ಪತ್ರೆ ಎಮರ್ಜೇನ್ಸಿ ವಾರ್ಡಿಗೆ ಹೋದೆ. “ಎಂಟ್ರಿ ಮಾಡಿಸಿ ಚೀಟಿ ತನ್ನಿ” ಎಂದರು. ಕೌಂಟರ್ ಮುಂದೆ ರಶ್ ಇತ್ತು. ಕ್ಯೂ ನಿಂತು ಚೀಟಿ ತರುವುದರೊಳಗೆ 15 ನಿಮಿಷ ! ಇಸಿಜಿ ಮಾಡಿದರು. “ಎದೆ ಬಡಿತ ಲಯದಲ್ಲಿ ವ್ಯತ್ಯಾಸವಿದೆ ! ರಕ್ತಪರೀಕ್ಷೆ ಮಾಡಿಸಬೇಕು. ಹಣ ಕಟ್ಟಿ ರಶೀದಿ ತನ್ನಿ” ಎಂದರು. ಇದನ್ನು ತಂದು ಕೊಡಲು 20 ನಿಮಿಷ ಆಯಿತು ! ಮೂರು ಸಣ್ಣ ಟ್ಯೂಬ್ ಗಳಲಿ ಪ್ರತ್ಯೇಕವಾಗಿ ರಕ್ತದ ಸ್ಯಾಂಪಲ್ ತೆಗೆದುಕೊಟ್ಟರು. ಲ್ಯಾಬಿಗೆ ತೆಗೆದುಕೊಂಡು ಹೋದೆ. “ರಾತ್ರಿ (ಬೆಳಗ್ಗಿನ ಜಾವ) 2.30AM ಗೆ ಬಂದು ರಿಸಲ್ಟ್ ತೆಗೆದುಕೊಂಡು ಹೋಗಿ” ಎಂದರು. ಅಂದರೆ ಸುಮಾರು ಎರಡೂವರೆ ತಾಸು ! ಡಾಕ್ಟರಿಗೆ ಹೋಗಿ ಹೇಳಿದೆ. ಅವರು ಚೀಟಿಯಲ್ಲಿ ಅರ್ಜೆಂಟ್ ಎಂದು ಹೇಳಿದರು. ಆದರೂ ರಿಸಲ್ಟ್ ಕೊಡಲು ಒಂದೂವರೆ ತಾಸು ಆಯಿತು.
ರಿಸಲ್ಟ್ ನೋಡಿದ ಡಾಕ್ಟರ್ ” ಮೈಲ್ಡ್ ಹಾರ್ಟ್ ಅಟ್ಯಾಕ್ ಆದ ಹಾಗೆ ಕಾಣುತ್ತದೆ. ಮೈಸೂರಿನಲ್ಲಿರುವ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ” ಎಂದರು. ಮತ್ತೆ ಕೌಂಟರ್ ಬಳಿ ಬಂದೆ. ಅಂಬುಲೆನ್ಸ್ ಗೆ ಹಣ ಕಟ್ಟಿ, ಅವರು ಹೇಳಿದ ನಂಬರ್ ತೆಗೆದುಕೊಳ್ಳುವಷ್ಟರಲ್ಲಿ 15 ನಿಮಿಷ! ಡ್ರೈವರಿಗೆ ಕಾಲ್ ಮಾಡಿದ ಕೂಡಲೇ ಬಂದರು!
ಜಯದೇವ ತಲುಪುವುದೂ ತಡವಾಗಲಿಲ್ಲ. ಅಲ್ಲಿಯ ರಾತ್ರಿ ಪಾಳಿಯ ಡಾಕ್ಟರಿಗೆ ಮಂಡ್ಯದ ಡಾಕ್ಟರ್ ಬರೆದುಕೊಟ್ಟ ಚೀಟಿ ನೀಡಿದೆ. ಇಸಿಜಿ ಎಲ್ಲಿ ಎಂದರು ! “ಕೇಳಿದೆ ಡಾಕ್ಟರ್, ಅವರು ಅದು ನಮ್ಮ ಫೈಲಿನಲ್ಲಿಯೇ ಇರಬೇಕು ಎಂದು ಹೇಳಿ ಕೊಡಲಿಲ್ಲ” ಎಂದೆ. “ಅದನ್ನಿಟ್ಟುಕೊಂಡು ಏನು ಮಾಡ್ತಾರಂತೆ, ರೋಗಿ ಜೊತೆ ಕಳಿಸಬೇಕಲ್ವ” ಎಂದೇಳಿ ಮತ್ತೆ ಇಸಿಜಿಗೆ ಚೀಟಿ ಬರೆದುಕೊಟ್ಟರು ! ಕೌಂಟರಿನಲ್ಲಿ ಹಣ ಕಟ್ಟಿದೆ. ರಿಸಲ್ಟ್ ನೋಡಿ ಮತ್ತೆ ರಕ್ತಪರೀಕ್ಷೆಗೆ ಬರೆದುಕೊಟ್ಟರು. ಕೌಂಟರಿನಲ್ಲಿ ಹಣ ಕಟ್ಟಿದೆ. ರಕ್ತಪರೀಕ್ಷೆ ರಿಸಲ್ಟ್ ಬೇಗನೆ ದೊರೆಯಿತು. ಅದನ್ನು ನೋಡಿದ ಡಾಕ್ಟರ್ “ಆಂಜಿಯೋಗ್ರಾಮ್ ಮಾಡಿಸಬೇಕು. ಈಗ ಅಡ್ಮಿಟ್ ಮಾಡಿಸಿ” ಎಂದು ಹೇಳಿದರು. ಐಸಿಯು ಘಟಕಕ್ಕೆ ಶಿಫ್ಟ್ ಮಾಡಲು ಸೆಕ್ಯುರಿಟಿಗೆ ಹೇಳಿದರು. ಆತನಿಗೆ ಓರ್ವ ಹೃದ್ರೋಗಿಯ ಕುಳಿತ ವ್ಹೀಲ್ ಚೇರ್ ಹೇಗೆ ತಳ್ಳಿಕೊಂಡು ಹೋಗಬೇಕು ಎಂದು ಗೊತ್ತಿಲ್ಲ!
ತುರ್ತು ನಿಗಾ ಘಟಕ (ICU) ತುರ್ತು ಚಿಕಿತ್ಸೆ ನೀಡಿ ಮರುದಿನ ವಾರ್ಡಿಗೆ ಶಿಫ್ಟ್ ಮಾಡಿದರು. ರಾತ್ರಿ ನರ್ಸಿಂಗ್ ಆಫೀಸರ್ ಬಂದು “ಬೆಳಗ್ಗೆ 7 ಗಂಟೆ ಒಳಗೆ ಎರಡು ಇಡ್ಲಿ ತಿನಿಸಿ, ಆಂಜಿಯೋಗ್ರಾಮ್ ಮಾಡಿಸಲು ಶಿಫ್ಟ್ ಮಾಡುತ್ತೇವೆ” ಎಂದರು. ಹಾಗೆ ಮಾಡಿದ್ದಾಯ್ತು. ಬೆಳಗ್ಗೆ ಬಂದು ಬಿಲ್ ಕೌಂಟರಿನಲ್ಲಿ ಆಂಜಿಯೋಗ್ರಾಮ್ ಮಾಡಲು ಹಣ ಕಟ್ಟಿ ಎಂದರು. ಹೋದೆ. ಹಣ ಕಟ್ಟಿಸಿಕೊಳ್ಳುವವರು ಇರಲಿಲ್ಲ. “ಇನ್ನು ಸ್ವಲ್ಪ ಹೊತ್ತಿಗೆ ಬರುತ್ತಾರೆ” ಎಂದರು. 11 ಗಂಟೆ ಕಳೆದರೂ ಬರಲಿಲ್ಲ. ನರ್ಸಿಂಗ್ ಆಫೀಸರ್ಗೆ ಬಂದು ಹೇಳಿದೆ. ಸಿಬ್ಬಂದಿಗೆ ನನ್ನ ತಾಯಿಯ ವೈದ್ಯಕೀಯ ರಿಪೋರ್ಟ್ ಇದ್ದ ಫೈಲ್ ನೋಡಿ ಮತ್ತೊಂದು ಫ್ಲೋರಿನಲ್ಲಿರುವ ಕೌಂಟರಿಗೆ ಕಳಿಸಿದರು. ಅಲ್ಲಿ ಹೋದರೆ “ಇಲ್ಯಾಕೆ ಬಂದ್ರಿ, ರೋಗಿ ಇರುವ ವಾರ್ಡಿನ ಕೌಂಟರಿನಲ್ಲೇ ಹಣ ಕಟ್ಟಿ” ಎಂದು ತಕರಾರು. ರಿಕ್ವೆಸ್ಟ್ ಮಾಡಿಕೊಂಡೆ. ಹಣ ಪಡೆದು ಬಿಲ್ ಮಾಡಿ ಕೊಟ್ಟರು.
ಮತ್ತೆ ವಾರ್ಡಿಗೆ ಬಂದಿದ್ದಾಯ್ತು. “ಮಧ್ಯಾಹ್ನ 2.30ಕ್ಕೆ ಕ್ಯಾಥ್ ಲ್ಯಾಬಿಗೆ ಕಳಿಸ್ತೀವಿ” ಎಂದರು. ಆ ಸಮಯ ಕಳೆಯಿತು. ಕಳಿಸಲಿಲ್ಲ. ನರ್ಸಿಂಗ್ ಆಫೀಸರಿಗೆ ಹೋಗಿ ಕೇಳಿದೆ. “ಕ್ಯಾಥ್ ಲ್ಯಾಬಿನಿಂದ ಕರೆ ಬರಬೇಕು ಇರಿ” ಎಂದರು. ಸಂಜೆ 5 ಗಂಟೆ ಸಮೀಪಿಸಿತು. “ವೀಲ್ಹ್ ಚೇರ್ ನಲ್ಲಿ ಕರೆದುಕೊಂಡು ಹೋಗಿ” ಎಂದು ಸಿಬ್ಬಂದಿಗೆ ಹೇಳಿದರು !
ಕ್ಯಾಥ್ ಲ್ಯಾಬಿನಲ್ಲಿ ನನ್ನ ತಾಯಿಯ ಕೈ ಮೂಲಕ ಆಂಜಿಯೋಗ್ರಾಮ್ ಮಾಡಲು ಆಗದೇ ಬಲತೊಡೆ ಮೂಲಕ ಮಾಡಿದ್ದರು. ಹೀಗೆ ಮಾಡಿದಾಗ ನಡೆಯಲು, ಕುಳಿತುಕೊಳ್ಳಲು ಆಗುವುದಿಲ್ಲ. ಟ್ರಾಲಿ ಸ್ಟ್ರೆಚ್ಚರಿನಲ್ಲಿ ಐಸಿಯು ಘಟಕಕ್ಕೆ ಶಿಫ್ಟ್ ಮಾಡಲು ಸೆಕ್ಯುರಿಟಿ ಗಾರ್ಡಿಗೆ ಹೇಳಿದರು. ಆತ ಅದನ್ನು ಎಳೆದುಕೊಂಡು ಹೋಗುವ ಪರಿ ಕಂಡೇ ದಿಗಿಲಾಯ್ತು. ಎರಡು ಬಾರಿ ಬಾಗಿಲಿಗೆ ರಪ್ಪರಪ್ಪನೇ ತಾಗಿಸಿದ. ನಂತರ ನಾನೇ ಕೈ ಹಾಕಿ ಟ್ರಾಲಿ ನಿರ್ವಹಣೆ ಮಾಡಿದೆ.
ಮರುದಿನ ವಾರ್ಡಿಗೆ ಶಿಫ್ಟ್ ಮಾಡಿದರು. ಅದರ ಮರುದಿನ ಬಂದ ಡಾಕ್ಟರ್ ಸ್ಕ್ಯಾನಿಂಗ್ ಮಾಡಿಸಲು ಹೇಳಿದರು. ಕೌಂಟರಿಗೆ ಹೋಗಿ ಇದರ ಬಾಬ್ತು ಹಣ ಕಟ್ಟಿ ಬಂದೆ. ತಳಮಹಡಿಯಲ್ಲಿರುವ ಸ್ಕ್ಯಾನಿಂಗ್ ಸೆಂಟರಿಗೆ ವ್ಹೀಲ್ ಚೇರಿನಲ್ಲಿ ಕರೆದುಕೊಂಡು ಹೋದರು. ಈ ಘಟಕದ ಒಳಗೆ ಬರೀಗಾಲಿನಲ್ಲಿ ಹೋಗಬೇಕು. ಒಳಗೆ ಕಾಲಿಡುತ್ತಿದ್ದಂತೆ ವಿಪರೀತ ಥಂಡಿ. ಕೆಲವೇ ಕ್ಷಣಗಳಲ್ಲಿ ನನ್ನ ಪಾದಗಳೂ ಮರಗಟ್ಟುತ್ತಿವೆಯೇನೋ ಅನಿಸಿತು. ಆಗಲೇ ಅಲ್ಲಿದ್ದ ವೃದ್ದ ಮಹಿಳೆಯರು ಥಂಡಿಯಿಂದ ಥರಗಟ್ಟುತ್ತಿದ್ದರು. ಓರ್ವ ಮಹಿಳೆ ತಡೆಯಲಾರದೇ ಹೊರಗೆ ಹೋದರು. ನನ್ನ ತಾಯಿಗೂ ತೀವ್ರ ಥಂಡಿ ತಡೆಯಲು ಆಗಲಿಲ್ಲ ! “ರೋಗಿಯ ಸರದಿ ಬಂದಾಗ ಕರೆಯಲು ಏನು ತೊಂದರೆ. ಇಷ್ಟೊಂದು ಕೋಲ್ಡ್ ಟೆಂಪರೇಚರ್ ಇರುವ ಕಡೆ ಅವರನ್ನು ತುಂಬ ಹೊತ್ತು ಕಾಯಿಸಿ ಏಕೆ ತೊಂದರೆ ಕೊಡುತ್ತೀರಿ” ಎಂದೆ. ಉತ್ತರವಿಲ್ಲ ! ಮಧ್ಯಾಹ್ನ 2.30ಕ್ಕೆ ಬಂದು ರಿಪೋರ್ಟ್ ತೆಗೆದುಕೊಳ್ಳಿ ಎಂದರು. ಅಂದರೆ ಸುದೀರ್ಘ ಮೂರು ತಾಸು!!
ನನ್ನ ತಾಯಿಯನ್ನು ವಾರ್ಡಿಗೆ ಶಿಫ್ಟ್ ಮಾಡಿಸಿದೆ. ಅವರು ಹೇಳಿದ ಸಮಯಕ್ಕೆ ಹೋಗಿ ರಿಸಲ್ಟ್ ತಂದು ಡ್ಯೂಟಿ ಡಾಕ್ಟರಿಗೆ ನೀಡಿದೆ. ಅವರು ನರ್ಸಿಂಗ್ ಆಫೀಸರಿಗೆ ” ಪೇಶೆಂಟ್ ಫೈಲ್ ಎಲ್ಲಿ” ಎಂದರು. ಅದು ಬಿಲ್ಲಿಂಗ್ ಸೆಂಟರಿಗೆ ಹೋಗಿತ್ತು. ಅಲ್ಲಿಯೇ ಚೆಕ್ ಮಾಡುತ್ತೇನೆ ಎಂದವರು 45 ನಿಮಿಷ ಕಳೆದರೂ ಬರಲಿಲ್ಲ. ನಾನು ಎರಡು ಸಲ ಕೇಳಿದ ನಂತರ ನರ್ಸಿಂಗ್ ಆಫೀಸರ್ ಹೋಗಿ ಫೈಲ್ ತಂದರು. ಮಧ್ಯಾಹ್ನ 4 ಗಂಟೆಗೆ ಕೌಂಟರ್ ಮುಚ್ಚುತ್ತೆ. ಬೇಗ ಹೋಗಿ ಹಣ ಕಟ್ಟಿ ಎಂದರು! 4ಕ್ಕೆ 8 ನಿಮಿಷ ಬಾಕಿಯಿತು. ಕೌಂಟರಿನಲ್ಲಿದ್ದವರು ಟೈಮ್ ಆಯ್ತು ಎಂದರು. ಇನ್ನೂ ಆರು ನಿಮಿಷ ಬಾಕಿಯಿದೆ ಎಂದು ಹೇಳಿದ ಮೇಲೆ ಗೊಣಗುತ್ತಾ ಬಿಲ್ ಮಾಡಿ ಕೊಟ್ಟ ! ಕ್ಯಾಷ್ ಎಣಿಸುತ್ತಿದ್ದರೆ ಬೇಗ ಕೊಡ್ರಿ ಎಂದು ಧಾವಂತ ಮಾಡತೊಡಗಿದರು ! ಹಣ ಕಟ್ಟಿದೆ.
ಇದೇ ಸಮಯಕ್ಕೆ ಇನ್ನೊಬ್ಬ ವ್ಯಕ್ತಿಯು ತಮ್ಮ ಬಂಧುವಿನ ಚಿಕಿತ್ಸಾ ವೆಚ್ಚ ಕಟ್ಟಲು ಬಂದರು. ಹಣ ಕಟ್ಟಿಸಿಕೊಳ್ಳಲಿಲ್ಲ. ಅವರು ನರ್ಸಿಂಗ್ ಆಫೀಸರ್ ಬಳಿ ಬಂದು ” ಡಿಸ್ಚಾರ್ಜ್ ಮಾಡುತ್ತೇವೆಂದು ಬೆಳಗ್ಗೆಯೇ ಹೇಳಿದ್ದೀರಿ. ಪೇಶೆಂಟ್ ಜೊತೆಯಲ್ಲಿದ್ದವರು ಇದನ್ನು ಊರಿನಲ್ಲಿದ್ದ ನನಗೆ ಪೋನ್ ಮಾಡಿ ಹೇಳಿದರು. ಹಣ ತೆಗೆದುಕೊಂಡು ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದೇನೆ. ಈಗ ಡಿಸ್ಚಾರ್ಜ್ ಮಾಡದೇ ಇದ್ದರೆ ವ್ಯರ್ಥವಾಗಿ ಕಾರಿಗೆ ಹಣ ಕಟ್ಟಬೇಕಾಗುತ್ತದೆ” ಎಂದು ಗೋಗರೆದರು. ನರ್ಸಿಂಗ್ ಆಫೀಸರ್ ಎಮರ್ಜೆನ್ಸಿ ವಾರ್ಡಿನಲ್ಲಿರುವ ಕ್ಯಾಷ್ ಕಟ್ಟಿಸಿಕೊಳ್ಳುವ ಕೌಂಟರ್ ಸಿಬ್ಬಂದಿಗೆ ಪೋನ್ ಮಾಡಿ ಹೇಳಿದರು. ಆತ ಹೋಗಿ ಸರ್ರನೇ ಬಂದರು ! ಟೈಮ್ ಆಯ್ತು ಅಂತ ಹಣ ಕಟ್ಟಿಸಿಕೊಳ್ಳುತ್ತಿಲ್ಲ ಎಂದು ಹೇಳಿದರು. ದುಃಖದಿಂದ ಅವರ ಕಣ್ಣಾಲಿಗಳು ನೀರಿನಿಂದ ತುಂಬಿದವು. ಈಗ ನನ್ನ ಪ್ರಶ್ನೆಗಳು
1.ಪ್ರತಿ ಸಲವೂ ವೈದ್ಯಕೀಯ ಪರೀಕ್ಷೆಗೆ ಕಳಿಸುವ ಮುನ್ನ ಹಣ ಕಟ್ಟಿ ಬನ್ನಿ ಎಂದು ಹೇಳುವುದೇಕೆ ? ಮೊದಲೇ ಇಂತಿಷ್ಟು ಹಣ ಕಟ್ಟಿ ಎಂದು ಹೇಳಿ ! ಅದರಲ್ಲಿ ಉಳಿದರೆ ವಾಪಸ್ ಮಾಡಿ. ಜಾಸ್ತಿಯಾಗಿದ್ದರೆ ಕಟ್ಟಿಸಿಕೊಳ್ಳಿ !
2.ಜಿಲ್ಲಾ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿಗೆ ಅಪಘಾತದಲ್ಲಿ ಗಾಯಗೊಂಡವರು, ಹೊಡೆದಾಟದಲ್ಲಿ ಗಾಯಗೊಂಡವರು, ಹೃದ್ರೋಗ ಸಮಸ್ಯೆಗೆ ತುರ್ತು ಚಿಕಿತ್ಸೆ ಬೇಕಾದವರು ಬರುತ್ತಾರೆ. ಎಲ್ಲರನ್ನೂ ಕಿಷ್ಕಿಂದೆಯಂಥಾ ಜಾಗದಲ್ಲಿ ಒಟ್ಟಿಗೆ ಗುಡ್ಡೆ ಹಾಕಿಕೊಂಡು ಚಿಕಿತ್ಸೆ ನೀಡುವುದೇಕೆ ? ಹೃದ್ರೋಗಕ್ಕೆ ತುರ್ತು ಚಿಕಿತ್ಸೆ ಬೇಕಾದವರಿಗೆ ಪ್ರತ್ಯೇಕ ಘಟಕ ಏಕೆ ಮಾಡಬಾರದು ?
3.ಜಿಲ್ಲಾ ಆಸ್ಪತ್ರೆಯಲ್ಲಿ, ಜಯದೇವ ಆಸ್ಪತ್ರೆಯಲ್ಲಿ ಹಣವನ್ನು ಕ್ಯಾಶ್ ಅಂದರೆ ನಗದು ಮಾತ್ರ ತೆಗೆದುಕೊಳ್ಳುತ್ತೇವೆ ಎಂದು ಹೇಳುವುದೇಕೆ ? ಆನ್ ಲೈನ್ ನಲ್ಲಿ ಗೂಗಲ್ ಪೇ, ಪೋನ್ ಪೇ, ನೆಫ್ಟ್ ಅಥವಾ ಆರ್.ಟಿ.ಜಿ.ಎಸ್. ಮೂಲಕ ಕಟ್ಟಿಸಿಕೊಳ್ಳಲು ಏನು ತೊಂದರೆ ?
4.ರೋಗಿ ಕಡೆಯವರು ತಂದ ನಗದು ಹಣ ಕಳೆದು ಹೋದರೆ ನೀವು ಜವಾಬ್ದಾರರಾಗುತ್ತೀರಾ ?
5.ಜಿಲ್ಲಾ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಪರೀಕ್ಷೆಗಳನ್ನು ಆನ್ ಲೈನ್ ಮೂಲಕವೂ ಶಿಫಾರಸು ಮಾಡಿದ ಆಸ್ಪತ್ರೆಗೆ ಕಳಿಸಲು ಸಮಸ್ಯೆಯೇನು ?
6.ಕಿಂಚಿತ್ತೂ ವೈದ್ಯಕೀಯ ತರಬೇತಿ ಇಲ್ಲದ ಸದಾ ಸಿಡುಕುಮೋರೆ ಹೊತ್ತ ಸೆಕ್ಯುರಿಟಿ ಗಾರ್ಡ್ ಗಳಿಗೆ ರೋಗಿಗಳನ್ನು ಶಿಫ್ಟ್ ಮಾಡಿಸುವ ಹೊಣೆಗಾರಿಕೆ ಏಕೆ ಕೊಡುತ್ತೀರಿ ?
7.ದಿನದ ಇಪ್ಪತ್ನಾಲು ತಾಸು ಸೇವೆ ಎಂದು ಹೇಳುತ್ತೀರಿ ! ಸಂಜೆ 4ರ ನಂತರ ಡಿಸ್ಚಾರ್ಜ್ ಪೇಶೆಂಟ್ ಗಳಿಂದ ಹಣ ಕಟ್ಟಿಸಿಕೊಳ್ಳಲು ತೊಂದರೆ ಏನು ?
8.ಜಯದೇವದಂಥ ದೊಡ್ಡ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದ ರೋಗಿಗಳ ಕಡೆಯವರು ತಂದ ಹಣವನ್ನು ಕಟ್ಟಿಸಿಕೊಂಡು ರಶೀದಿ ಕೊಡಿ, ಇದರಿಂದ ಆಕಸ್ಮಾತ್ ಆಗಿ ಹಣ ಕಳೆದು ಹೋಗುವುದು, ಕಳುವು ಆಗುವುದನ್ನು ತಪ್ಪಿಸಬಹುದು.
ಇಂಥ ಅನುಭವಗಳು ನನಗೂ ಆಗಿದೆ ಸರ್,
ಒಟ್ಟಿನಲ್ಲಿ ಮನಸ್ಥಿತಿಗಳು ಸರಿಯಾಗಿಲ್ಲ,,
ದುಷ್ಟ ಜನ, ಕ್ರೂರಿಗಳು, ಕರುಣೆ ಇಲ್ಲದವರು ಏನ್ ಮಾಡೋದು ಆ ದೇವರು ಅವರಿಗೆ ಯಾವಾಗ ಒಳ್ಳೆಯ ಮನಸ್ಥಿತಿ ಕೊಡುತ್ತಾನೋ ಕಾಣೆ,, ಒಟ್ಟಿನಲ್ಲಿ ಅವರಿಗೆ ಪಾಪಪ್ರಜ್ಞೆ ಇಲ್ಲ ರೋಗಿಗಳ ಬಗ್ಗೆ ಅನುಕಂಪ, ಸಹಾನುಭೂತಿಯೂ ಇಲ್ಲ
This is reality, peoples facing every day. This is the mentality of the servants working in the govt. .
ವಾಸ್ತವ ಚಿತ್ರಣ. ಪರಿಹಾರ ಶೂನ್ಯ.
ನಿಜ