Site icon ಕುಮಾರರೈತ

ಅನ್ನ ಅನ್ನ ಅನ್ನ !

ಏನಪ್ಪಾ ಇವ್ನು ಅನ್ನ ಅನ್ನ ಅನ್ನ ಅಂತಾವ್ನೆ ಅಂತ ಆಶ್ಚರ್ಯವಾಗಿರಬಹುದಲ್ವ ? ಇದಕ್ಕೆ ಕಾರಣವೂ ಇದೆ. ಕಾರ್ಯಕ್ರಮವೊಂದಕ್ಕೆ ಹೊಗಿದ್ದೆ. ಅದು ಮುಗಿದ ನಂತರ ಭೋಜನ ವ್ಯವಸ್ಥೆ. ಬಫೆ ಸಿಸ್ಟಂ.

ಕಾಯಿ ಹೋಳಿಗೆ, ತುಪ್ಪ, ಅಕ್ಕಿರೊಟ್ಟಿ, ಚಪಾತಿ, ವೆಜ್ ಪಲಾವ್, ಅನ್ನ, ಸಾರು, ಚಟ್ನಿ, ಪಲ್ಯ, ಮೊಸರು, ಮಜ್ಜಿಗೆ, ಐಸ್ ಕ್ರೀಮ್, ತಾಂಬೂಲ, ರಸಬಾಳೆ ಇತ್ತು. ನಾನು ಯಥಾ ಪ್ರಕಾರ ಒಂದು ಅಕ್ಕಿರೊಟ್ಟಿ, ಒಂದು ಸಣ್ಣ ಕಪ್ ನಷ್ಟು ವೆಜ್ ಪಲಾವ್, ಪಲ್ಯ, ಚಟ್ನಿ ತೆಗೆದುಕೊಂಡೆ.

ಮೇಲೆದ್ದಾಗ ಆಯೋಜಕರು ಅನ್ನ, ಸಾರು, ಹುಳಿ, ಮೊಸರು, ಮಜ್ಜಿಗೆ ಇದೆ. ಇಷ್ಟೇ ತಿಂದು ಎದ್ದರೆ ಹೇಗೆ ಎಂದರು. ನನ್ನ ಇನ್ ಟೇಕ್ ಇಷ್ಟೆ ಎಂದು ಅವರಿಗೆ ಧನ್ಯವಾದ ತಿಳಿಸಿದೆ. ನಿರ್ದಿಷ್ಟ ಸ್ಥಳದಲ್ಲಿ ಪ್ಲೇಟ್ ಇಟ್ಟು ಆಚೆ ಬಂದೆ.

ಈ ಕಾರ್ಯಕ್ರಮ ಅಂತಲ್ಲ ; ಬೇರೆ ಯಾವುದೇ ಕಾರ್ಯಕ್ರಮಕ್ಕೆ ಹೋಗಿ ಅಕ್ಕಿಯ ಬೇರೆಬೇರೆ ರೂಪಗಳಿರುತ್ತವೆ. ಇಡ್ಲಿ, ದೋಸೆ, ಅಕ್ಕಿರೊಟ್ಟಿ, ಪಲಾವ್, ಬಿಳಿ ಅನ್ನ, ದೋಸೆಯೋ, ರೊಟ್ಟಿಯೋ ತಿಂದ ನಂತರ ಹಲವರು ಪಲಾವ್, ನಂತರ ಅನ್ನ ಸಾರು, ನಂತರ ಅನ್ನ ಹುಳಿ, ನಂತರ ಅನ್ನ ಮೊಸರು, ನಂತರ ಅನ್ನ ಮಜ್ಜಿಗೆ ಎಂದೆಲ್ಲ ಸೇವಿಸುತ್ತಾರೆ. ಇದರ ಮೇಲೆ ಏನಾದರೊಂದು ಅಥವಾ ಮೂರ್ನಾಲ್ಕು ಸಿಹಿತಿಂಡಿ !

ಇಷ್ಟೆಲ್ಲ ಕಾರ್ಬೋಹೈಡ್ರೇಟ್ಸ್ ಸೇವನೆ ನಂತರ ಜೀರ್ಣ ಪರಿಸ್ಥಿತಿ ಏನಾಗಬಹುದು ಎಂದು ಎಷ್ಟು ಜನ ಯೋಚಿಸಬಹುದು ? ಜೀರ್ಣಿಸಿಕೊಳ್ಳುವ ಶಕ್ತಿ ಇದ್ದರೂ ಈ ಥರದ ಆಹಾರ ಸೇವನೆಯ ಜೀವನಶೈಲಿ ಸಮಂಜಸವೇ ?

ವಿಶ್ವದಲ್ಲಿಯೇ ಅತಿ ಹೆಚ್ಚು ಮಧುಮೇಹಿಗಳು ಭಾರತದಲ್ಲಿಯೇ ಇದ್ದಾರೆ ಎಂದು ಹೇಳಲಾಗುತ್ತದೆ. ವಿಶ್ವಕ್ಕೆ ಭಾರತ,  ಮಧುಮೇಹಿಗಳ ರಾಜಧಾನಿಯಂತಾಗಿದೆ ಎನ್ನುತ್ತಾರೆ. ಹೃದ್ರೋಗ ಸಂಬಂಧಿ ತೊಂದರೆಗಳ ವಿಷಯದಲ್ಲಿಯೂ ಈ ಮಾತನ್ನು ನಿಜ ಮಾಡಲು ಭಾರತ ಮುನ್ನುಗುತ್ತಿರುವಂತೆ ಕಾಣುತ್ತಿದೆ.

ಮುವ್ವತ್ತು ವರ್ಷಗಳ ಹಿಂದೆ ಸಾಮಾನ್ಯವಾಗಿ ನಲ್ವತ್ತು ದಾಟಿದವರಿಗೆ ಮಧುಮೇಹ ಕಾಣಿಸಿಕೊಳ್ಳುತ್ತಿತ್ತು. ಈಗ ಹುಟ್ಟುವ ಕೆಲವು ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಬಾಲ್ಯ, ಯೌವ್ವನದಲ್ಲಿಯೂ ಮಧುಮೇಹ ಉಂಟಾಗುತ್ತಿದೆ. ರಕ್ತದೊತ್ತಡ, ಹೃದಯಾಘಾತ ಮುವ್ವತ್ತು, ನಲ್ವತ್ತನೇ ವರ್ಷಕ್ಕೆ ಸಾಮಾನ್ಯ ಎನ್ನುವಂತಾಗಿದೆ.

ಮಧುಮೇಹ ಇಲ್ಲದ ವಯಸ್ಕರ ದೇಹದಲ್ಲಿರುವ ಐದು ಲೀಟರ್ ರಕ್ತಕ್ಕೆ ದಿನವೊಂದಕ್ಕೆ ಐದೇ ಗ್ರಾಮ್ ಸಕ್ಕರೆ ಸಾಕು ಎಂದು ಹೇಳಲಾಗುತ್ತದೆ. ಆದರೆ ನಮ್ಮ ಜೀವನಶೈಲಿ ಸಕ್ಕರೆ ಭರಿತ ಕಾಫಿ ಚಹಾ,  ನಿತ್ಯ ಏನಾದರೊಂದು ಸಿಹಿಗೆ ಶರಣಾಗಿದೆ. ಮಕ್ಕಳಂತೂ ಸಕ್ಕರೆ ಪಾಕದಂತಿರುವ ಚಾಕೋಲೇಟ್ ಮೆಲ್ಲುವುದಕ್ಕೆ ಅಧೀನರಾಗಿದ್ದಾರೆ. ಈಗಂತೂ ಮಕ್ಕಳನ್ನು ಮುದ್ದು ಮುದ್ದು ಮಾಡುವುದೆಂದರೆ ದೊಡ್ಡದೊಡ್ಡ ಚಾಕೋಲೇಟ್ ತಂದುಕೊಡುವುದು, ಸಮಾರಂಭಗಳಲ್ಲಿ ಲಘು ಪಾನೀಯಗಳು (ಸಾಫ್ಟ್ ಡ್ರಿಂಕ್ಸ್) ತುಂಬಿದ ಬಾಟಲುಗಳನ್ನೇ ತಂದು ಜೋಡಿಸುವುದು ಎಂಬಂತಾಗಿದೆ.

ಹಿಂದೆಯೆಲ್ಲ ಹಬ್ಬಹರಿದಿನಗಳಲ್ಲಿ ಮಾತ್ರ ಏನಾದರೊಂದು ಸಿಹಿತಿಂಡಿ ಮಾಡುತ್ತಿದ್ದರು. ಆದರೀಗ ಏನಾದರೊಂದು ಕಾರಣಕ್ಕೆ ದಿನನಿತ್ಯವೂ ಸಿಹಿ ಸೇವನೆ ಅಭ್ಯಾಸವಾಗಿದೆ.

ಈ ಎಲ್ಲ ಕಾರಣಗಳ ಜೊತೆಜೊತೆಗೆ ಅತೀ ಒತ್ತಡದ ಜೀವನಶೈಲಿಯೂ ಸಹ ಮಧುಮೇಹ, ರಕ್ತದೊತ್ತಡ, ಬೊಜ್ಜಿಗೆ ಕಾರಣ. ಆದರೆ ಆಹಾರವಲ್ಲದ ಆಹಾರ (ಸಿಹಿ, ಅತಿಯಾದ ಕಾರ್ಬೊಹೈಡ್ರೆಟ್ಸ್ ಸೇವನೆ)ವೂ ಇದಕ್ಕೆ ಕಾರಣ ಎಂಬ ಅಂಶ ಅಲ್ಲಗಳೆಯಲಾಗದು.

ಮಧುಮೇಹ, ಅತಿ ರಕ್ತದೊತ್ತಡ ಇರುವವರು ಸಹ ಅಕ್ಕಿಯಿಂದ ಬೇರೆಬೇರೆ ಸ್ವರೂಪದ ಆಹಾರವನ್ನಲ್ಲದೇ ಸಿಹಿ ತಿನಿಸುಗಳನ್ನೂ  ತುಸುತುಸುವಾದರೂ ಸೇವಿಸಿ ” ಅಯ್ಯೋ ಟೈಮ್ ಟೈಮ್ಗೆ ಸರಿಯಾಗಿ ಇನ್ಸುಲಿನ್, ಮಾತ್ರೆ ತೆಗೆದುಕೊಂಡರೂ ಬಿಪಿ, ಶುಗರ್ ಕಂಟ್ರೋಲಿಗೆ ಬರುತ್ತಿಲ್ಲ” ಎಂದು ಗೋಳಾಡುತ್ತಾರೆ.

ಮಧುಮೇಹ ಇರುವ ಇನ್ನು ಕೆಲವರಂತೂ ಅನ್ನ ಬೇಡ, ಚಪಾತಿ ತಿನ್ನೋಣ ಎಂದುಕೊಂಡು ಸೇವಿಸುತ್ತಾರೆ. ಅದರಲ್ಲಿಯೂ ಅತಿಯಾದ ಕಾರ್ಬೋಹೈಡ್ರೆಟ್ಸ್ ಇದೆ ಎಂಬ ಅಂಶ ಮರೆಯುತ್ತಾರೆ. ಮಿತ ಆಹಾರವೇ ಹಿತ ಎಂಬುದನ್ನು ಮರೆತು ಪೇಚಾಡುತ್ತಾರೆ.

ಇನ್ನು ಕೆಲವರು ಇರುವುದೊಂದು ಜೀವನ, ಇದ್ದಾಗ ಚೆನ್ನಾಗಿ ತಿನ್ನೋಣ ಎನ್ನುತ್ತಾರೆ. ಹೀಗೆ ಹೇಳುವವರು ಅನಾರೋಗ್ಯ ಉಂಟಾದಾಗ ಬಹಳ ಸಂಕಟ, ವೇದನೆ ಪಡುವುದನ್ನು ಕಂಡಿದ್ದೇನೆ. ಇಷ್ಟೆಲ್ಲ ತೊಂದರೆ ಕೊಡುವ ಆಹಾರ, ಸಿಹಿ ಸೇವಿಸುವ ಜೀವನ ಶೈಲಿ ಸರಿಯೇ‌ ? ನಿಮ್ಮ ಅಭಿಪ್ರಾಯವೇನು ?

Exit mobile version