ರಂಗದಲ್ಲಿ ಕಲಾವಿದರ ಅಭಿನಯ ಅಷ್ಟೇ ನೋಡಿ ಅಭ್ಯಾಸವಾಗಿದ್ದ ಕಾಲ ! ಮೊದಲ ಮೂಕಿಚಿತ್ರ ತೆರೆ ಕಂಡಾಗ ಪರದೆ ಮೇಲೆ ಮೂಡಿದ ಕಲಾವಿದರನ್ನು ನೋಡಿ ವೀಕ್ಷಕರು ಮೂಕ ವಿಸ್ಮಿತರಾಗಿದ್ದರು. ಕೆಲವರು ಕುತೂಹಲಿಗಳು ಪರದೆಯ ಹಿಂದೆ ಹೋಗಿ ಕಲಾವಿದರು ಇದ್ದಿರಬಹುದೇ ಎಂದು ನೋಡಿದ್ದರು. ಹೀಗಿರುವಾಗ ಮೊದಲ ಕನ್ನಡ ವಾಕ್ಚಿತ್ರ ತೆರೆ ಕಂಡಾಗ ವೀಕ್ಷಕರು ಯಾವ ಪರಿಯ ರೋಮಾಂಚನ ಅನುಭವಿಸಿರಬಹುದು ? ಮೊದಲಿಗೆ ಕಾಣಿಸಿದ, ಕೇಳಿದ ದೃಶ್ಯ, ಮಾತು ಯಾವುದಿರಬಹುದು ?

ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲ ! ಏಕೆಂದರೆ ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಸಿನೆಮಾದ ಕಾಪಿ ಲಭ್ಯವಿಲ್ಲ. ಸುದೈವವಶಾತ್ ಆ ಸಿನಮಾ ಚಿತ್ರೀಕರಣ ಸಂದರ್ಭದ ಕೆಲವು ಪೋಟೋಗಳಷ್ಟೇ ಇವೆ. ಚಿತ್ರಕಥೆಯೂ ಲಭ್ಯವಿರದ ಸಿನೆಮಾ ಮತ್ತೆ ಅವತರಿಸಲಿದೆ ಎಂದರೆ ಕುತೂಹಲವಾಗುತ್ತದೆ.

ಪಿ. ಶೇಷಾದ್ರಿ. ಕನ್ನಡಕ್ಕೆ ಬಹುಮುಖ್ಯ ಸಿನೆಮಾಗಳನ್ನು ನೀಡಿರುವ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು ! ಇವರು ದೂರವಾಣಿಯಲ್ಲಿ ಇದರ ವಿವರಗಳನ್ನು ಹಂಚಿಕೊಂಡಾಗ “ಸತಿ ಸುಲೋಚನ” ಮರು ಅವತರಿಸಲಿದೆ ಎಂಬುದನ್ನು ಕೇಳಿಯೇ ವಿಸ್ಮಿತನಾಗಿದ್ದೆ. ಸಿನೆಮಾಸಕ್ತನಾಗಿ ಅದನ್ನು ಮತ್ತೆ ಕಟ್ಟಿ ಪ್ರೇಕ್ಷಕರ ಮುಂದೆ ಇಡುವುದು ಸುಲಭದ ಸಂಗತಿಯಲ್ಲ ಎಂಬ ಅರಿವು ವಿಸ್ಮಿತನಾಗಿ ಮಾಡಿತು.

ಹೀಗೆ ಸುಲಭದಲ್ಲದ್ದನ್ನು ಸಾಧಿಸುವ ಹಠವನ್ನು ಹಿರಿತೆರೆ ಕಿರುತೆರೆಯ ಖ್ಯಾತ ಕಲಾವಿದ ಸೃಜನ್ ಲೋಕೇಶ್, ನಿರ್ದೇಶಕ ಪಿ. ಶೇಷಾದ್ರಿ ತೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾರ್ಚ್ 3, 2025ರಂದು ಅವರಿಬ್ಬರ ಮಾತುಗಳನ್ನು ಕೇಳಿದೆ. ಅವರಿಗೆ ತಾವು ಮಾಡಲು ಹೊರಟಿರುವ ಕಾರ್ಯದ ಸಂಕೀರ್ಣತೆ, ಕ್ಲಿಷ್ಟತೆ, ತೊಡಕುಗಳ ಬಗ್ಗೆ ಸ್ಪಷ್ಟವಾದ ಅರಿವಿದೆ. ಮುಖ್ಯವಾಗಿ ಇಂಥ ಯೋಜನೆಗಳ ರೂಪುರೇಷೆ ರಚಿಸುವ ಭಾರ ನಿರ್ದೇಶಕರ ಮೇಲಿರುತ್ತದೆ. ತಮ್ಮ ಮೇಲಿರುವ ಜವಾಬ್ದಾರಿ, ಸವಾಲುಗಳನ್ನು ನಿಭಾಯಿಸುವ ಆತ್ಮವಿಶ್ವಾಸ ಶೇಷಾದ್ರಿ ಅವರ ಮಾತುಗಳ ಮೂಲಕ ಗೋಚರಿಸುತ್ತಿತ್ತು !

ಇಲ್ಲಿ ಆಸಕ್ತಿಕರವಾದ ಸಂಗತಿಯೂ ಒಂದಿದೆ. ಅದು ತಾತ ನಾಯಕ ನಟನಾಗಿದ್ದ ಸಿನೆಮಾವನ್ನು ಮೊಮ್ಮಗ ಮತ್ತೆ ಕಟ್ಟಲು ಹೊರಟಿರುವುದು. ಸುಬ್ಬಯ್ಯ ನಾಯ್ದು, ಕನ್ನಡದ ಧೀಮಂತಿಕೆಯನ್ನು ತಮ್ಮ ನಾಟಕಗಳು, ಸಿನೆಮಾಗಳ ಮೂಲಕ ತೋರಿಸಿದವರು. “ಅಭಿನಯಿಸುತ್ತಿದ್ದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುವ ಸಿದ್ದಿ ಪಡೆದಿದ್ದರು” ಇದು ಇವರ ಅಭಿನಯವನ್ನು ಕಂಡವರು ಹೇಳಿರುವ ಮಾತು ! ಇಂಥ ಕಲಾವಿದರ ಮಗ ಖ್ಯಾತ ನಟ ಲೋಕೇಶ್ ! ಇವರ ಮಗ ಸೃಜನ್ ಲೋಕೇಶ್.

ಇಲ್ಲಿ ಆಸಕ್ತಿಕರವಾದ, ಕುತೂಹಲಕಾರಿಯೂ ಆದ ಸಂಗತಿಗಳಿವೆ. ಸುಬ್ಬಯ್ಯ ನಾಯ್ದು ತಾವೇ ನಿರ್ಮಿಸಿ, ನಿರ್ದೇಶಿಸಿ ನಟಿಸಿದ ಸಿನೆಮಾದಲ್ಲಿ ಅವರ ಮಗ ಲೋಕೇಶ್ ಬಾಲನಟರಾಗಿ ಅಭಿನಯಿಸಿದ್ದರು. ಲೋಕೇಶ್ ಅವರೇ ನಿರ್ಮಿಸಿ, ನಿರ್ದೇಶಿಸಿ, ನಟನೆಯನ್ನೂ ಮಾಡಿದ್ದ “ಭುಜಂಗಯ್ಯನ ದಶವತಾರ” ಸಿನೆಮಾದಲ್ಲಿ ಸೃಜನ್ ಲೋಕೇಶ್ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್ ನಿರ್ಮಿಸಿ, ನಿರ್ದೇಶಿಸಿರುವ “ಜಿಎಸ್ಟಿ” (ಇನ್ನೂ ತೆರೆ ಕಂಡಿಲ್ಲ) ಇವರ ಪುತ್ರ ಬಾಲ ಕಲಾವಿದರಾಗಿ ನಟಿಸಿದ್ದಾರೆ. ಈ ಥರದ ಪರಂಪರೆ ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರ ಕಾಣಲು ಸಾಧ್ಯ

ಈ ಹಿನ್ನೆಲೆಯಲ್ಲಿಯೇ ತಾತ ಸುಬ್ಬಯ್ಯ ನಾಯ್ದು ಅಭಿನಯದ ಚಿತ್ರ ಮಿಗಿಲಾಗಿ ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಎಂಬ ಅಭಿಮಾನದ ನೆಲೆಯಲ್ಲಿ ಸೃಜನ್ ಲೋಕೇಶ್ ನಿರ್ಮಾಪಕರಾಗಿದ್ದಾರೆ. ಇಂದು ಸಿನೆಮಾ ಮಾಡುವುದೇ ಸಾಹಸದ ಕೆಲಸ. ಹೀಗಿರುವಾಗ 91 ವರ್ಷದ ಹಿಂದೆ ತೆರೆಕಂಡ ಸಿನೆಮಾವನ್ನು ಮರು ನಿರ್ಮಿಸಲು ಹೊರಡುವುದು ಹಣಕಾಸು ದೃಷ್ಟಿಯಿಂದಲೂ ಭಾರಿ ಸಾಹಸ ! ಇಂಥ ಯೋಜನೆಯನ್ನು ಕೈಗೆತ್ತಿಕೊಂಡ ಕಾರಣಕ್ಕೂ ಸೃಜನ್, ಶೇಷಾದ್ರಿ ಅಭಿನಂದನೀಯರು. ಏಕೆಂದರೆ ಇವರು ಅಂದು ಕನ್ನಡದ ಅಭಿಮಾನದಿಂದಲೇ ತೆರೆಕಂಡ “ಸತಿ ಸುಲೋಚನ”ವನ್ನು ಮರುಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ !

ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನ ನಾಯಕ ನಟ ಸುಬ್ಬಯ್ಯ ನಾಯ್ಡು

ಮಾರ್ಚ್ 3, 1934 (3-3-1934) ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ “ಸತಿ ಸುಲೋಚನ” ಬೆಂಗಳೂರಿನ “ಪ್ಯಾರಮೌಂಟ್” ಮಂದಿರದಲ್ಲಿ ತೆರೆ ಕಂಡಿತು ! ಜೊತೆಜೊತೆಗೆ ಕನ್ನಡ ಸಿನೆಮಾ ಪರಂಪರೆಗೆ ನಾಂದಿ ಹಾಡಿತು ! ಕನ್ನಡದ ಮೊದಲ ನಾಯಕ ನಟರಾಗಿ ಸುಬ್ಬಯ್ಯ ನಾಯ್ದು ಹೊರ ಹೊಮ್ಮಿದರು. “ಸತಿ ಸುಲೋಚನ” ತೆರೆಕಂಡ ದಿನವನ್ನು ಕರ್ನಾಟಕ ಸರ್ಕಾರ “ವಿಶ್ವ ಕನ್ನಡ ಸಿನೆಮಾ ದಿನ” ಎಂದು ಅಧಿಕೃತವಾಗಿ ಘೋಷಿಸಿದೆ.

ಚಮನ್ ಲಾಲ್ ಡೊಂಗಾಜಿ ಮೂಲತಃ ರಾಜಾಸ್ಥಾನದವರು. ಬೆಂಗಳೂರು ಚಿಕ್ಕಪೇಟೆಯಲ್ಲಿ ದಶಕಗಳಿಂದ ಪಾತ್ರೆ ವ್ಯಾಪಾರಿಯಾಗಿದ್ದರು. ಇವರು ಸಿನೆಮಾ ನಿರ್ಮಿಸಬೇಕು ಎಂಬ ಆಕ್ಷಾಂಕ್ಷೆ ವ್ಯಕ್ತಪಡಿಸಿದಾಗ ಕನ್ನಡ ಚಿತ್ರರಂಗ ಕಟ್ಟಿದ ಮಹನೀಯರಲ್ಲಿ ಒಬ್ಬರಾದ ಆರ್. ನಾಗೇಂದ್ರ ರಾಯರು ಕನ್ನಡದಲ್ಲಿಯೇ ಮೊದಲ ವಾಕ್ಚಿತ್ರ ಮಾಡೋಣ ಎಂದರಂತೆ. ಇವರು ಸಿನೆಮಾದ ನಾಯಕ ನಟರಾಗಿ ಆಯ್ಕೆ ಮಾಡಿದ್ದು ಆ ವೇಳೆಗಾಗಲೇ ಕನ್ನಡ ರಂಗಭೂಮಿಯಲ್ಲಿ ಹೆಸರು ಮಾಡಿದ್ದ, ಕನ್ನಡಿಗರ ಮನೆಮನೆಗಳಲ್ಲಿಯೂ ಗುರುತಾಗಿದ್ದ ಸುಬ್ಬಯ್ಯ ನಾಯ್ಡು ಅವರನ್ನು. ನಿರ್ದೇಶನದ ಜವಾಬ್ದಾರಿಯನ್ನು ವೈ.ವಿ.ರಾವ್ (ಖ್ಯಾತ ನಟಿ ಜ್ಯೂಲಿ ಲಕ್ಷ್ಮಿ ಅವರ ತಂದೆ) ಅವರಿಗೆ ವಹಿಸಿದರು. ಇಷ್ಟರಲ್ಲಾಗಲೇ ರಾವ್ ಅವರು “ಹರಿಮಾಯ” ಸೇರಿದಂತೆ ಕೆಲವು ಮೂಕಿ ಚಿತ್ರಗಳನ್ನು ನಿರ್ದೇಶಿಸಿದ್ದರು.

“ಸತಿ ಸುಲೋಚನ” ನಿರ್ಮಾಣ ಕಾರ್ಯಗಳಲ್ಲಿ ಬಳಸಿದ ತಂತ್ರಜ್ಞಾನಗಳೇ ಇಂದಿನ ಕಾಲಘಟ್ಟದಲ್ಲಿ ಅಚ್ಚರಿ ಮೂಡಿಸುತ್ತವೆ. ಇದನ್ನು ತೆರೆಗೆ ತರುವ ನಿಟ್ಟಿನಲ್ಲಿ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಸಾಹಸವನ್ನೇ ಪಟ್ಟಿದ್ದಾರೆ. ಈ ಸಿನೆಮಾ ನಿರ್ಮಾಣಕ್ಕೆ ಚಮನ್ ಲಾಲ್ ಡೊಂಗಾಜಿ ಅವರು ಹೂಡಿದ್ದ ಹಣ 40 ಸಾವಿರ ರೂಗಳಿಗೂ ಹೆಚ್ಚು ! ಇಂದಿನ ಮೌಲ್ಯದಲ್ಲಿ ಸುಮಾರು 20 ಕೋಟಿಗೂ ಹೆಚ್ಚು ಇರಬಹುದು !

ಮಹಾರಾಷ್ಟ್ರದ ಛತ್ರಪತಿ ಸಿನಿಟೋನ್ ಸ್ಟುಡಿಯೋದಲ್ಲಿ “ಸತಿ ಸುಲೋಚನಾ” ನಿರ್ಮಾಣವಾಗಿದೆ. ವಿಶೇಷವಾಗಿ ಯುದ್ದದ ಸನ್ನಿವೇಶಗಳನ್ನು ಚಿತ್ರೀಕರಿಸುವ ಸಲುವಾಗಿಯೇ ಈ ಸ್ಟುಡಿಯೋ ಆಯ್ಕೆ ಮಾಡಲಾಗಿತ್ತು ! ಯುದ್ದದ ಸನ್ನಿವೇಶಗಳಲ್ಲಿ 2000 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸೇರಿಸಿದ್ದರು! ಈ ಸಿನೆಮಾದಲ್ಲಿ ಟ್ರಿಕ್ ಶಾಟ್ ಗಳು ಸಹ ಇದ್ದವು.

“ಸತಿ ಸುಲೋಚನ” ಕಥೆಯೇ ಅಪರೂಪದ್ದು. ಇದು “ ಆನಂದ ರಾಮಾಯಣ”ದಲ್ಲಿ ಬರುವ ಕಥೆ ! ರಾವಣನ ಮಗ ಇಂದ್ರಜಿತ್ ಪತ್ನಿ ಸುಲೋಚನ! ರಾಮ – ರಾವಣರ ಕಾಳಗದಲ್ಲಿ ತನ್ನ ಪತಿ ಇಂದ್ರಜಿತ್ ಯಶಸ್ಸಿಗಾಗಿ ಸುಲೋಚನ ವಿಷ್ಣು ಆರಾಧನೆಯಲ್ಲಿ ತೊಡಗಿರುತ್ತಾರೆ. ರಾಮ, ವಿಷ್ಣುವಿನ ಅಂಶವಾದ ಕಾರಣ ಇಂದ್ರಜಿತ್ ಜೊತೆ ಕಾಳಗ ಮಾಡುವುದಿಲ್ಲ. ಲಕ್ಷ್ಮಣ ಮತ್ತು ಇಂದ್ರಜೀತ್ ನಡುವೆ ನೇರ ಕಾಳಗ ನಡೆಯುತ್ತದೆ.

ಇಂಥದ್ದೊಂದು ಅಪರೂಪದ ಕಥೆ ಆಧರಿಸಿದ ಸಿನೆಮಾದಲ್ಲಿ ಸುಬ್ಬಯ್ಯ ನಾಯ್ದು ಅವರು ಇಂದ್ರಜಿತ್ ಆಗಿ ಅಭಿನಯಿಸಿದ್ದಾರೆ. ಅನೇಕ ವಿಶೇಷ ಅಂಶಗಳನ್ನು ಹೊಂದಿರುವ ಈ ಸಿನೆಮಾ 91 ವರ್ಷದ ನಂತರ ಮರುಸೃಷ್ಟಿಗೆ ಸಿದ್ದವಾಗುತ್ತಿದೆ. ಇಡೀ ಸಿನೆಮಾವನ್ನು ಅದೇ ಮಾದರಿ ಚಿತ್ರಕಥೆ ಇಟ್ಟುಕೊಂಡು ನಿರ್ಮಿಸಲಾಗುತ್ತದೆಯೇ ? ಎಐ ತಂತ್ರಜ್ಞಾನ ಬಳಸಲಾಗುತ್ತದೆಯೇ ? ಇದರ ಮೂಲಕ ಸುಬ್ಬಯ್ಯ ನಾಯ್ಡು ಅವರನ್ನು ಮತ್ತೆ ತೆರೆ ಮೇಲೆ ಕಾಣಬಹುದೇ ? ಹೀಗೆ ಪ್ರಶ್ನೆಗಳ ಸರಮಾಲೆಯೇ ಎದುರಾಗುತ್ತದೆ. ಮುಂದೆ ಇದರ ಬಗ್ಗೆ ಬರೆಯುತ್ತೇನೆ. ಈ ಸಿನೆಮಾದಲ್ಲಿ ಅಂದು ಸುಬ್ಬಯ್ಯನಾಯ್ಡು ಆಗಿ ಮತ್ತು ಅವರು ಅಭಿನಯಿಸಿದ್ದ ಪಾತ್ರದಲ್ಲಿ ಸೃಜನ್ ಲೋಕೇಶ್ ಕಾಣಿಸಿಕೊಳ್ಳುತ್ತಾರೆ. ದೊಡ್ಡದೊಡ್ಡ ಸವಾಲುಗಳಿರುವ “ಸತಿ ಸುಲೋಚನ”ವನ್ನು ನಿರ್ದೇಶಕ ಪಿ. ಶೇಷಾದ್ರಿ ಹೇಗೆ ಕಟ್ಟಿಕೊಡಬಹುದು.  ಕುತೂಹಲ ಇದೆ.

Similar Posts

Leave a Reply

Your email address will not be published. Required fields are marked *