ನೋಂದಾಯಿತ ಸಂಸ್ಥೆಗಳಲ್ಲಿ ತುಂಬ ಅವಶ್ಯಕತೆ ಇದ್ದಾಗ ಬೈಲಾಕ್ಕೆ ತಿದ್ದುಪಡಿಯಾಗುವುದು ಸಹಜ. ಆದರೆ ಅಮೂಲಾಗ್ರ ಬದಲಾವಣೆಗಳಾಗುವುದಿಲ್ಲ. ಸಂಸ್ಥೆಯ ಪ್ರಜಾಪ್ರಭುತ್ವ ವ್ಯವಸ್ಥೆ ಮಾದರಿಗೆ ಧಕ್ಕೆ ತರುವ ತಿದ್ದುಪಡಿಗಳನ್ನು ಗಣನೀಯ ಸಂಖ್ಯೆಯ ಸದಸ್ಯರು ಒಪ್ಪುವುದಿಲ್ಲ. ಹೀಗಿರುವಾಗ “ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಪರಮಾಧಿಕಾರ” ನೀಡುವ ನಿಟ್ಟಿನಲ್ಲಿ ಬೈಲಾ ತಿದ್ದುಪಡಿ ಮಾಡಲು ಹೊರಟಿರುವುದು ಆಘಾತಕಾರಿ.
ಮೈಸೂರು ಸಂಸ್ಥಾನದಲ್ಲಿ ರಾಜಪ್ರಭುತ್ವ ಇದ್ದ ದಿನಗಳಲ್ಲಿ ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಸಾಹಿತ್ಯ ಪರಿಷತ್ ಸ್ಥಾಪನೆಯಾಯಿತು. ಮಹಾರಾಜರು ಮನಸು ಮಾಡಿದ್ದರೆ ಅಧ್ಯಕ್ಷರಾಗುವವರಿಗೆ ಪರಮಾಧಿಕಾರ ಎನ್ನುವ ಸಂಹಿತೆ ತರಬಹುದಿತ್ತು. ಆದರೆ ಅವರು ಪ್ರಜಾಪ್ರಭುತ್ವ ಮಾದರಿ ಪರಿಷತ್ ನಡೆಯಲು ಅನುವು ಮಾಡಿಕೊಟ್ಟರು.
ಈಗ ಪ್ರಜಾಪ್ರಭುತ್ವವಿದೆ. ಸರ್ಕಾರದ ಅನುದಾನ ತೆಗೆದುಕೊಳ್ಳುವ ಸಂಸ್ಥೆಗಳೆಲ್ಲವೂ ಪ್ರಜಾಪ್ರಭುತ್ವ ಮಾದರಿಯಲ್ಲಿಯೇ ಇರಬೇಕು. ಇದನ್ನು ದಿಕ್ಕರಿಸಿ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿ ತರಲು ಹೊರಟಿರುವುದು ಅಚ್ಚರಿ ಜೊತೆಗೆ ಆಕ್ರೋಶವನ್ನೂ ಉಂಟು ಮಾಡುತ್ತದೆ. ಏಕೆಂದರೆ ಕನ್ನಡ ಸಾಹಿತ್ಯ ಪರಿಷತ್, ಸಮಸ್ತ ಕನ್ನಡಿಗರ ಅಸ್ಮಿತೆ ಮತ್ತು ಆಸ್ತಿ. ಇದು ಯಾವುದೇ ಓರ್ವ ವ್ಯಕ್ತಿಯ ಖಾಸಗಿ ಆಸ್ತಿ ಮಾದರಿಯಾಗಬಾರದು.
ಕನ್ನಡ ಸಾಹಿತ್ಯ ಪರಿಷತ್ತಿನ ಸಮಸ್ತ ಅಧಿಕಾರವನ್ನು ರಾಜ್ಯ ಘಟಕದ ಅಧ್ಯಕ್ಷರಿಗೆ ನೀಡುವ ಉದ್ದೇಶದಿಂದ ಬೈಲಾ ತಿದ್ದುಪಡಿಗೆ ಮುಂದಾಗಲಾಗಿದೆ. ಅದೂ ಕೇವಲ ಮೂರು ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ತಿದ್ದುಪಡಿ ಮಾಡಲು ಹೊರಡಲಾಗಿದೆ. ತಿದ್ದುಪಡಿ ಮಾಡಲು ಹೊರಟಿರುವ ಅಂಶಗಳನ್ನು ಗಮನಿಸಿದರೆ ಇದು ಪರಿಷತ್ತಿನ ಪ್ರಜಾ ವ್ಯವಸ್ಥೀಯ ಮಾದರಿಯನ್ನೇ ಕೆಡುವುವ ಉದ್ದೇಶದ ಅಂಶಗಳು ಎಂಬುದು ಗಮನಕ್ಕೆ ಬರುತ್ತದೆ.
ಉದ್ದೇಶಿತ ತಿದ್ದುಪಡಿಗಳೇನು ?
ಪ್ರಸ್ತಾವಿತ ತಿದ್ದುಪಡಿ 20 ಅಂಶಗಳನ್ನು ಒಳಗೊಂಡಿದೆ. ಇದರ ಅನ್ವಯ ತಿದ್ದುಪಡಿಗಳು ಅಂಗೀಕಾರಗೊಂಡರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಗೆ ಈ ಮುಂದಿನ ಅಧಿಕಾರಗಳು ದಕ್ಕುತ್ತವೆ.
ಜಿಲ್ಲಾ ಘಟಕವೂ ಸೇರಿದಂತೆ ತೆರವಾದ ವಿವಿಧ ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶನ, ನಾಮ ನಿರ್ದೇಶನಗೊಂಡ ಸದಸ್ಯರನ್ನು ಕಾರಣ ನೀಡದೇ ಬದಲಾಯಿಸುವ ಅಧಿಕಾರ, ಜಿಲ್ಲೆ, ಗಡಿನಾಡು, ಗಡಿರಾಜ್ಯ ಘಟಕದ ಪ್ರತಿನಿಧಿಗಳು ಕೇಂದ್ರ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗಳಿಗೆ ರಾಜ್ಯ ಘಟಕದ ಅಧ್ಯಕ್ಷರ ಅನುಮತಿ ಪಡೆಯದೇ ಸತತ ಮೂರು ಬಾರಿ ಗೈರುಹಾಜರು ಆಗುವಂತಿಲ್ಲ. ಒಂದುವೇಳೆ ಗೈರುಹಾಜರಾದರೆ ಅಂಥವರ ಸದಸ್ಯತ್ವವು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಇದರಿಂದ ಖಾಲಿಯಾಗುವ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಅಧಿಕಾರ.
ನಿಧನ,ರಾಜಿನಾಮೆ ಹಾಗೂ ಅನರ್ಹತೆ ಸೇರಿ ವಿವಿಧ ಕಾರಣದಿಂದ ಜಿಲ್ಲಾ ಘಟಕದ ಚುನಾಯಿತ ಅಧ್ಯಕ್ಷರ ಸ್ಥಾನ ತೆರವಾದರೆ ಮುಂದಿನ ಆದೇಶ ಅಥವಾ ಚುನಾವಣೆ ತನಕ ನಾಮನಿರ್ದೇಶನ ಮಾಡುವ ಅಧಿಕಾರ.
ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಇಂಥ ಪರಿಸ್ಥಿತಿ ಉದ್ಬವಿಸಿದರೆ ಜಿಲ್ಲಾ ಘಟಕದ ಅಧ್ಯಕ್ಷರು ರಾಜ್ಯ ಘಟಕದ ಅಧ್ಯಕ್ಷರೊಂದಿಗೆ ಚರ್ಚಿಸಿ, ಅನುಮತಿ ಪಡೆದ ನಂತರವೇ ನಿಗದಿತ ಸ್ಥಾನಕ್ಕೆ ಹೆಸರು ಘೋಷಿಸಬೇಕು.
ನಾಮ ನಿರ್ದೇಶಿತ ಸದಸ್ಯರನ್ನು ಯಾವುದೇ ಕಾರಣ ನೀಡದೇ ಬದಲಾವಣೆ ಮಾಡುವ ಅಧಿಕಾರ, ನಾಮ ನಿರ್ದೇಶಿತ ಸದಸ್ಯರು ಯಾವುದಾದರು ಆರೋಪದಡಿ ರಾಜಿನಾಮೆ ನೀಡಿದರೆ ಅದನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ. ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಬದಲಾವಣೆ ಸಂದರ್ಭ ಉದ್ಬವಿಸಿದಾಗ ಹೊಸ ನಾಮ ನಿರ್ದೇಶನಕ್ಕೆ ಹೆಸರುಗಳ ಪ್ರಸ್ತಾಪವನ್ನು ಪರಿಷತ್ತಿನ ರಾಜ್ಯ ಅಧ್ಯಕ್ಷರಿಗೆ ತಿಳಿಸಿ, ಲಿಖಿತ ಅನುಮೋದನೆ ಪಡೆಯಬೇಕು
ಇವಿಷ್ಟೇ ಅಲ್ಲ, ಕನ್ನಡ ಸಾಹಿತ್ಯ ಪರಿಷತ್ ಹಾಲಿ ಅಧ್ಯಕ್ಷರು ತಮ್ಮ ಅಧಿಕಾರದ ಬತ್ತಳಿಕೆಗೆ ಸೇರಿಸಿಕೊಳ್ಳಲು ಹೊರಟಿರುವ ಬಾಣಗಳು ಇನ್ನೂ ಇವೆ. ಅವುಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲು ಕಸಾಪ ರಾಜ್ಯ ಅಧ್ಯಕ್ಷರೇ ನೇರವಾಗಿ ಅಥವಾ ಮಾರ್ಗಸೂಚಿ ಉಪಸಮಿತಿ ರಚಿಸಿ ಮಾರ್ಗಸೂಚಿಗಳನ್ನು ಹೊರಡಿಸಬಹುದು. ಈ ಮೂಲಕ ರಚನೆಯಾದ ಮಾರ್ಗಸೂಚಿಗಳನ್ನು ಸಮ್ಮೇಳನ ನಡೆಯುವ ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು.
ಇನ್ನೂ ಗಾಬರಿ ಪಡಿಸುವ ಅಂಶವಿದೆ !
ನಿಗದಿತ ಗಡುವಿನೊಳಗೆ ಸಾಹಿತ್ಯ ಸಮ್ಮೇಳನದ ನಂತರ ಬಾಕಿ ಉಳಿದ ಹಣವನ್ನು ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕಕ್ಕೆ ಜಮಾ ಮಾಡದಿದ್ದರೆ ಸಮ್ಮೇಳನ ನಡೆದ ಸಂದರ್ಭದಲ್ಲಿದ್ದ ಜಿಲ್ಲಾಧಿಕಾರಿ ಅಥವಾ ಅವರು ವರ್ಗಾವಣೆಯಾಗಿ ಹೊಸಬರು ಬಂದಿದ್ದರೆ ಆ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸುವುದು.
ಇಷ್ಟೆಲ್ಲ ತಿದ್ದುಪಡಿಗಳಾದರೆ ಕಾರ್ಯಕಾರಿ ಸಮಿತಿಯೇಕೆ ?
ಇಷ್ಟೆಲ್ಲ ಸರ್ವಾಧಿಕಾರ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಿಗೆ ದತ್ತವಾದರೆ ಆಗ ಕಾರ್ಯಕಾರಿ ಸಮಿತಿ ಕೆಲಸವಾದರೂ ಏನು ? ಜಿಲ್ಲಾ ಕಸಾಪಗಳು, ತಾಲ್ಲೂಕು ಕಸಾಪಗಳು, ಹೋಬಳಿ ಕಸಾಪಗಳಾದರೂ ಏಕಿರಬೇಕು. ಅವುಗಳನ್ನೆಲ್ಲವನ್ನೂ ವಿಸರ್ಜಿಸಿ ಏಕಮೇವ ಅಧ್ಯಕ್ಷ ಇರುವಂತೆ ಮಾಡಬಹುದಲ್ಲ ? ಹಾಲಿ ಕಸಾಪ ರಾಜ್ಯ ಘಟಕದ ಅಧ್ಯಕ್ಷರು ಹೊರಟ ದಾರಿ ನೋಡಿದರೆ ಈ ದಿನಗಳು ದೂರವಿಲ್ಲ ಎನಿಸುತ್ತದೆ.
ಜಿಲ್ಲಾಧಿಕಾರಿ ಮೇಲೆ ಕೇಸ್ ದಾಖಲಿಸುವುದಾದರೆ ರಾಜ್ಯ ಸರ್ಕಾರವಿರುವುದು ಏಕೆ
ರಾಜ್ಯ ಸರ್ಕಾರವು ಸಮ್ಮೇಳನ ನಡೆಯುವ ಜಿಲ್ಲೆಯ ಜಿಲ್ಲಾಧಿಕಾರಿಗೆ ಸೇರಿದ ಸರ್ಕಾರಿ ಅಕೌಂಟಿಗೆ ಹಣ ವರ್ಗಾವಣೆ ಮಾಡುವಂತೆ ಹಣಕಾಸು ಇಲಾಖೆಗೆ ಆದೇಶಿಸುತ್ತದೆ. ಖಜಾನೆ ಮೂಲಕ ಹಣ ವರ್ಗಾವಣೆಯಾಗುತ್ತದೆ. ಈ ಹಣವನ್ನು ಡ್ರಾ ಮಾಡುವ ಅಧಿಕಾರ ಜಿಲ್ಲಾಧಿಕಾರಿಗೆ ಮಾತ್ರ ಇರುತ್ತದೆ. ಸಮ್ಮೇಳನ ಮುಕ್ತಾಯವಾದ ನಂತರ ಅವರು ಸರ್ಕಾರಕ್ಕೆ ಖರ್ಚುವೆಚ್ಚದ ಲೆಕ್ಕ ನೀಡುತ್ತಾರೆ. ಹಣಕಾಸು ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆಗಳಿಂದ ಸೂಚನೆ ಬಂದ ನಂತರವೇ ಅವರು ಹಣವನ್ನು ಸಾಹಿತ್ಯ ಪರಿಷತ್ತಿನ ಅಕೌಂಟಿಗೆ ವರ್ಗಾಯಿಸಬಹುದು ಅಥವಾ ಸರ್ಕಾರಕ್ಕೆ ಹಿಂದಿರುಗಿಸಬಹುದು. ಹಣ ಉಳಿದಿದ್ದರೆ ಅದನ್ನು ನೀಡಿ ಎಂದು ಸರ್ಕಾರಕ್ಕೆ ಪತ್ರ ಬರೆಯಬೇಕು ಹೊರತು ಜಿಲ್ಲಾಧಿಕಾರಿ ವಿರುದ್ಧ ಮೊಕದ್ದಮೆ ಹೂಡುವುದಲ್ಲ. ಹೀಗೆ ಜಿಲ್ಲಾಧಿಕಾರಿ ಮೇಲೆ ಕೇಸ್ ದಾಖಲಿಸುವುದಾದರೆ ರಾಜ್ಯ ಸರ್ಕಾರವಿರುವುದು ಏಕೆ
ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಇರುತ್ತಾರೆ. ಇವರು, ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು, ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಜಿಲ್ಲೆಯ ಸಾಹಿತಿಗಳು, ಇತರು ಗಣ್ಯರು ಸಭೆ ಸೇರಿ ಸಮಿತಿಗಳನ್ನು ರಚಿಸುತ್ತಾರೆ. ಮಾರ್ಗಸೂಚಿಗಳನ್ನು ಸಹ ರೂಪಿಸುತ್ತಾರೆ. ಹೀಗಿರುವಾಗ ಕಸಾಪ ರಾಜ್ಯ ಘಟಕದ ಅಧ್ಯಕ್ಷರೇ ಮಾರ್ಗಸೂಚಿಗಳನ್ನು ಹೊರಡಿಸಿ ಪಾಲಿಸಿ ಎಂದರೆ ಹೇಗೆ ? ಇದನ್ನು ಪಾಲಿಸಬೇಕು ಎಂದು ಸರ್ಕಾರ ಅಂಕಿತವಂತೂ ಹಾಕುವುದಿಲ್ಲ. ಹಾಗಿರುವಾಗ ಅಧ್ಯಕ್ಷ ಹೊರಡಿಸುವ ಮಾರ್ಗಸೂಚಿಗಳಿಗೆ ಅಸ್ತಿತ್ವ ಎಲ್ಲಿರುತ್ತದೆ ?
ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೇಶ ಜೋಶಿ ಮಹತ್ವಾಕಾಂಕ್ಷೆಗಳನ್ನು ನೋಡಿದರೆ ನೂರು ವರ್ಷಕ್ಕೂ ಹೆಚ್ಚಿನ ಪರಂಪರೆ ಇರುವ ಪರಿಷತ್ತಿನ ವಿಕೇಂದ್ರೀಕರಣದ ಸ್ವರೂಪ ಕಳಚಿ ಬೀಳುತ್ತದೆ. ಬಹುಶಃ ಶೀಘ್ರದಲ್ಲಿಯೇ ಜೀವಿತಾವಧಿ ಅಧ್ಯಕ್ಷ ಮಹೇಶ ಜೋಶಿ ಎಂಬ ತಿದ್ದುಪಡಿಗೂ ಮುಂದಾದರೂ ಅಚ್ಚರಿಯಿಲ್ಲ.
ಈ ಎಲ್ಲ ಹಿನ್ನೆಲೆಯಲ್ಲಿ ಕಸಾಪ ರಾಜ್ಯ ಘಟಕದ ಅಧ್ಯಕ್ಷರಿಗೆ ಸರ್ವಾಧಿಕಾರ – ಪರಮಾಧಿಕಾರ ನೀಡುವ ತಿದ್ದುಪಡಿಗಳು ಅಂಗೀಕಾರವಾಗಬಾರದು. ಈ ದಿಶೆಯಲ್ಲಿ ರಾಜ್ಯ ಸರ್ಕಾರ, ಕಸಾಪದ ಎಲ್ಲ ಘಟಕಗಳ ಸದಸ್ಯರು, ಸಾಹಿತಿಗಳು, ಸಾರ್ವಜನಿಕರು ಚಿಂತಿಸಿ ಮುಂದಡಿ ಇಡಬೇಕು.