ಲೇಖಕ: ಕುಮಾರ ರೈತ

ದಸರಾ, ಬೇಸಿಗೆ ರಜೆ ಬಂದರೆ ಮೂರು ಕಾರಣಕ್ಕೆ ಖುಷಿಯಾಗುತ್ತಿತ್ತು. ಒಂದು ಹಳ್ಳಿಗೆ ಹೋಗುವುದು, ತಾತನ ಜೊತೆ ಇಡೀ ಹಗಲು ಹೊಲಗದ್ದೆ – ತೋಟದಲ್ಲಿ ಇರುವುದು. ಇವರು ರಂಗಭೂಮಿ ನಟ.‌ಕಂದಪದ್ಯಗಳನ್ನು ಸೊಗಸಾಗಿ ಹಾಡುತ್ತಿದ್ದರು. ನಮ್ಮಣ್ಣನ್ನೂ (ಅಪ್ಪ) ರಂಗಭೂಮಿ ನಟ. ಇವರೂ ಕಂದಪದ್ಯಗಳನ್ನು  ಚೆನ್ನಾಗಿ ಹಾಡ್ತಾ ಇದ್ದರು. ಇವರಿಬ್ಬರ ಮೆಚ್ಚಿನ ನಟ ರಾಜ್ ಕುಮಾರ್. ಆಗಾಗ ರಾಜ್ ಶರೀರ, ಶಾರೀರ, ಅಭಿನಯವನ್ನು ಹೊಗಳ್ತಾ ಇದ್ದರು. ಹೆಂಗೆ ಮೈ ಮಡಿಕೊಂಡವ್ರೆ ನೋಡ್ಲಾ ಮೊಗ ಅಂತ ತಾತ ಮೆಚ್ಚುಗೆ ಸೂಚಿಸ್ತಿದ್ರು.

ಇವರಿಬ್ಬರಷ್ಟೇ ಅಲ್ಲ, ಅಜ್ಜಿ, ಅಕ್ಕ (ತಾಯಿ) ನಾನು, ನನ್ನ ತಮ್ಮ ಅಣ್ಣಾವ್ರ ಪರಮ ಅಭಿಮಾನಿಗಳು. ಸಿಟಿಯಲ್ಲಿ ಹೊಸ ಸಿನೆಮಾ, ಹಳ್ಳಿಗೋದಾಗ ಅಲ್ಲಿನ ಟೆಂಟ್‍ನಲ್ಲಿ ಹಳೆಯ ಸಿನೆಮಾಗಳು. ರಾಜ್ಕುಮಾರ್ ಫಿಲ್ಮ್ ಬಂದ್ರೆ ಅನ್ನುವುದಕ್ಕಿಂತ ಅಲ್ಲಿ ಪ್ರದರ್ಶನವಾಗ್ತಿದ್ದೇ ರಾಜ್ ಸಿನೆಮಾಗಳು. ಅಪರೂಪಕ್ಕೆ ಬೇರೆಯವ್ರ ಸಿನೆಮಾಗಳು ಬರ್ತಿದ್ವು.   ಅಲ್ಲಿ ಫಸ್ಟ್ ಶೋ ಸಂಜೆ 7 ಗಂಟೆಗೆ, ಸೆಕೆಂಡ್ ಶೋ ರಾತ್ರಿ 10.30ಕ್ಕೆ. ಮಾರ್ನಿಂಗ್ ಶೋ, ಮ್ಯಾಟ್ನಿ ಎಲ್ಲ ಇರಲಿಲ್ಲ.

ಸಂಜೆ 6.30ಕ್ಕೆ ಟೆಂಟ್ ಲೌಡ್ ಸ್ಪೀಕರ್ ಯಿಂದ ಶಿವಪ್ಪ ಕಾಯೋ ತಂದೆ ಹಾಡು ಮೊಳಗ್ತಿತ್ತು. ಅಷ್ಟೊತ್ತಿಗೆ ನಮ್ಮ ಹಟ್ಟಿಯಲ್ಲಿ ಎಲ್ರೂ ಊಟಕ್ಕೆ ಕುಳ್ತಿರ್ತಿದ್ದೋ. ಮಳೆ ಇಲ್ಲ ಅಂದ್ರೆ ಮನೆ ಮುಂದಿನ ವಿಶಾಲ ಬಯಲಿನಲ್ಲಿ ಚಾಪೆ ಹಾಸಿ ಊಟ ! ಸಿನೆಮಾ ನೋಡೋ ಕಾರ್ಯಕ್ರಮ ಇದ್ರೆ ಬೇಗ ಊಟ ಮುಗಿಯೋದು !

ರಾಜ್ಕುಮಾರ್ ಸಿನೆಮಾ ಬಂದ ಮೊದಲದಿನವೇ ತಾತನ ಜೊತೆ ಬಾಲಗೊಂಚಿಯಂತೆ ಹೋಗ್ತಿದ್ದೆ. ಮರುದಿನ ಅಜ್ಜಿ, ಚಿಕ್ಕಂವ್ವದಿರು. ಕರ್ಕೊಂಡು‌ ಹೋಗ್ತಿದ್ರು. ಅದಾದ ಮರುದಿನ ಸೋದರ ಮಾವ. ಜೊತೆಯೂ   ಹೋಗ್ತಿದ್ದೆ. ನನ್ನಗಿಂತ ಬಹಳ ಹಿರಿಯರಾದ್ರೂ ಫ್ರೆಂಡ್ಸ್ ಥರ ಇದ್ವಿ.. ಇವರ ಜೊತೆ ನೋಡಿದ ಮೇಲೆ ನಾನೊಬ್ನೆ ಹೋಗಿ‌ನೋಡ್ತಿದ್ದೆ. ಹೀಗಾಗಿ ಒಂದೊಂದು ಸಿನೆಮಾವನ್ನು  ಕನಿಷ್ಟ ಐದು ಬಾರಿ ನೋಡ್ತಿದ್ದೆ.

ಮನೆಗೆ ತನ್ನ ಸ್ನೇಹಿತರು ಬಂದಾಗ ತಾತ “ಮೊಗ, ರಾಜ್ಕುಮಾರ್ ಸಿನೆಮಾ ಡೈಲಾಗ್ ಹೇಳ್ಲಾ” ಅನ್ನೋರು. ಅವರು ಕೇಳಿದ್ದೆ ತಡ ಡೈಲಾಗ್ ಜೊತೆ ಆಕ್ಟಿಂಗ್ ಶುರು ಮಾಡ್ತಿದ್ದೆ. ಅಣ್ಣಾವ್ರ ಥರ ಕಣ್ಣು, ಕೈ ತಿರುಗಿಸೋದನ್ನೆಲ್ಲ ಯಥಾವತ್ ಮಾಡ್ತಿದ್ದೆಬಂದವರು “ನಿನ್ ಮೊಮ್ಮಗ ಬೋ ಪಸಂದಾಗಿ ಡೈಲಾಗ್ ಹೇಳ್ತಾನೆ ಬುಡಪ್ಪಾ” ಅನ್ನೋರು. ಈ ಮಾತು ಕೇಳಿ ತಾತ, ಅಜ್ಜಿ ಮುಖ ಮೊರದಗಲ ಅರಳೋದು.

ಶಾಲೆಗಳ ಸಾಂಸ್ಮೃತಿಕ ಚಟುವಟಿಕೆಗಳಲ್ಲಿ ಕಡ್ಡಾಯವಾಗಿ ನಾಟಕ ಇರ್ತಾ ಇತ್ತು. ಮೇಷ್ಟ್ರು ನನ್ನನ್ನೇ ಪ್ರಮುಖ ಪಾತ್ರಧಾರಿಯಾಗಿ ಆಯ್ಕೆ ಮಾಡ್ತಾ ಇದ್ರು.  ಯಾವಾಗಲೂ ನಾಟಕ ಕೊನೇ ಷೋ… ಅದ್ಕೆ ಮೊದ್ಲು ಹಾಡು, ಏಕಪಾತ್ರಭಿನಯ ಇರ್ತಿತ್ತು. ಅಣ್ಣಾವ್ರ ಯಾವುದಾದರು ಸಿನೆಮಾದ ಆಯ್ದ ದೃಶ್ಯಗಳನ್ನಾರಿಸಿ ಏಕಪಾತ್ರಾಭಿನಯ ಮಾಡೋದನ್ನು ತಪ್ಪಿಸ್ತಿರಲಿಲ್ಲ. ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಗಣ ರಾಜ್ಯೋತ್ಸವಗಳಲ್ಲಿ ಅಣ್ಣಾವ್ರ ಸಿನೆಮಾಗಳ ನನ್ನ ಏಕಪಾತ್ರಾಭಿನಯ ಇದ್ದೇ ಇರ್ತೀತು.

ಇದು ಎಷ್ಟರ ಮಟ್ಟಿಗೆ ಆಯಿತೆಂದರೆ ಸಂಬಂಧಿಕರ ಶುಭ ಸಮಾರಂಭಗಳಲ್ಲಿ ನನ್ನ  ಏಕಪಾತ್ರಭಿನಯಕ್ಕೆ ಡಿಮ್ಯಾಂಡೋ ಡಿಮ್ಯಾಂಡು ! ಬಂಧುಗಳಲ್ಲಿ ಯಾರಾದರೂ ಮೃತರಾದ ನಂತರ ಆಚರಿಸುವ ತಿಥಿಯ ರಾತ್ರಿ ಹರಿಕಥೆ ಆಯೋಜಿಸ್ತಿದ್ರು. ಇದಕ್ಕೂ ಮೊದಲು ಏಕಪಾತ್ರಾಭಿನಯ ಮಾಡುವಂತೆ ಬೇಡಿಕೆ ಬರೋದು. ತುದಿಗಾಲಲ್ಲಿ ನಿಂತಿರ್ತಿದ್ದ ನಾನು ಅವಕಾಶ ಬಿಡ್ತೇನೆಯೇ ?

ಹೀಗೆ ರಾಜ್ ಸಾಂಸ್ಕೃತಿಕವಾಗಿ ಆವರಿಸತೊಡಗಿದರು. ಅಣ್ಣ ಸರ್ಕಾರಿ ಅಧಿಕಾರಿಯಾದ್ದರಿಂದ ಸಮಾರಂಭಗಳು, ರಸಮಂಜರಿ ಕಾರ್ಯಕ್ರಮಗಳಲ್ಲಿ ಅವರನ್ನು ಬಹು ಹತ್ತಿರದಿಂದ ಕಾಣುವ ಅವಕಾಶ ದೊರೆಯುತ್ತಿತ್ತು. ನಾನೆಂದೂ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಲಿಲ್ಲ. ಕಪಟವಿಲ್ಲದ ನಗು, ನಿಷ್ಕಳಂಕ ಶಾಂತ ಮುಖಭಾವ ನೋಡುವುದೇ ಹೆಚ್ಚು ಖುಷಿಯೆನ್ನಿಸುತ್ತಿತ್ತು.

ವೀರಪ್ಪನ್ ಅಪಹರಣ ಮಾಡಿದಾಗಲೂ ನಕ್ಕಿರನ್ ಗೋಪಾಲ್ ತರುತ್ತಿದ್ದ ವಿಡಿಯೋಗಳಲ್ಲಿಯೂ ರಾಜ್ ಅಳುಮುಖ ಮಾಡಿಕೊಂಡಿದ್ದನ್ನು ನೋಡಲಿಲ್ಲ. ಧೀಮಂತ ಮುಖಮುದ್ರೆ, ಬಹುಶಾಂತವಾಗಿ ಆಡುವ ಮಾತು.

ಕೀರ್ತಿಯ ಉತ್ತುಂಗಕ್ಕೇರಿದ ಓರ್ವ ವ್ಯಕ್ತಿ ಆ ಪರಿಯ ಸ್ಥಿತಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು ಸಾಧಾರಣ ಸಂಗತಿಯಲ್ಲ. ರಾಜ್ ಕುಮಾರ್ ಎಂದೂ ಯಾವ ವ್ಯಕ್ತಿ, ವಿಷಯದ ಬಗ್ಗೆ ಹಗುರವಾಗಿ ಮಾತನಾಡಿದ್ದನ್ನು ಕೇಳಿಲ್ಲ. ಹೀಗಾಗಿ ಅವರೋರ್ವ ಶ್ರೇಷ್ಠ ಕಲಾವಿದ ಮಾತ್ರವಲ್ಲ, ಶ್ರೇಷ್ಠ ಮಾನವ.

ಇಂಥ ರಾಜ್ಕುಮಾರ ಮೃತರಾದಾಗ ಸುದ್ದಿ ಕೇಳಿ ಆಘಾತ. ಸಾವು ಅನಿವಾರ್ಯ ನಿಜ. ಆದರೆ ಆರೋಗ್ಯವಂತರಾಗಿದ್ದ ಶತಾಯುಷಿಗಳಾಗಿ ಬದುಕುತ್ತಾರೆಂದು ಭಾವಿಸಿದ್ದವರ ಭೌತಿಕ ಅಗಲಿಕೆ ಅರಗಿಸಿಕೊಳ್ಳಲಾಗದ್ದು. ಆದರೆ ನನ್ನ ಮನಸಿನಲ್ಲಿ ಉಳಿದ ರಾಜ್ ನೆನಪಿಗೆ ಸಾವಿರುವುದಿಲ್ಲ ಅಲ್ಲವೇ. ಈ ಭಾವದಿಂದಲೇ ಅವರ ಅಂತಿಮ ದರ್ಶನಕ್ಕೆ ತೆರಳಲಿಲ್ಲ. ನನ್ನ ಮನದಲ್ಲಿ ನೆಲೆಯಾಗಿ ನಿಂತ ಮುಗುಳ್ನಗೆಯ, ಮಿಂಚು ಕಂಗಳ ರಾಜ್ ಚಿತ್ರವೇ ಉಳಿಯಬೇಕು ಎಂಬುದೇ ಇದರ ಹಿಂದಿನ ಕಾರಣ…

ಏಪ್ರಿಲ್ 24 ರಾಜ್ ಜನ್ಮದಿನ. ಅವರ ಅಳಿಯದ ಚೇತನಕ್ಕೆ ಜನ್ಮದಿನದ ಶುಭಾಶಯಗಳು

Similar Posts

Leave a Reply

Your email address will not be published. Required fields are marked *