“ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ವಿಷಯ ಅತ್ಯಂತ ಸೂಕ್ಷ್ಮ.  ಮುಖ್ಯಮಂತ್ರಿಯವರೊಂದಿಗೆ ಸಮಾಲೋಚಿಸಿ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರ್ವಸಮ್ಮತ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾರ್ಚ್ 28, 2025ರಂದು ಖಂಡ್ರೆ ಅವರು ಪತ್ರಕರ್ತರಿಗೆ ಮಾತನಾಡಿದರು.” ಪ್ರಸ್ತುತ ಈ ಪ್ರಕರಣ ಸರ್ವೋನ್ನತ ನ್ಯಾಯಾಲಯದಲ್ಲಿದೆ. ಪ್ರಸ್ತುತ ರಾತ್ರಿ 9ರಿಂದ ಬೆಳಗ್ಗೆ 6ಗಂಟೆಯವರೆಗೆ ನಿರ್ಬಂಧ ಜಾರಿಯಲ್ಲಿದೆ. ಹೊಸ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ರಾಜ್ಯಗಳ ಬಾಂಧವ್ಯವನ್ನು ಗಮನದಲ್ಲಿಟ್ಟುಕೊಂಡು, ಎಲ್ಲರೊಂದಿಗೆ ಚರ್ಚಿಸಿ ಸೂಕ್ತವಾದ ತೀರ್ಮಾನ ಮಾಡಲು ಕ್ರಮ ವಹಿಸಲಾಗುವುದು ಎಂದರು.

ಪರಿಸರ, ವನ್ಯಪ್ರಾಣಿಗಳ ಕ್ಷೇಮ ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಒತ್ತಡ, ತದನಂತರ ನ್ಯಾಯಾಲಯಗಳ ಸೂಚನೆಯಂತೆ ಬಂಡೀಪುರ ಅರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರ ನಿರ್ಬಂಧಿಸಲಾಗಿದೆ. ರಾತ್ರಿ 9 ರಿಂದ ಬೆಳಗ್ಗೆ 6ರ ತನಕ ವಾಹನಗಳಿಗೆ ನಿಷೇಧ ಜಾರಿಯಲ್ಲಿರುತ್ತದೆ. ತುರ್ತುಸ್ಥಿತಿಯಲ್ಲಿ ಇರುವವರನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳುವ ವಾಹನ, ಆಂಬುಲೆನ್ಸ್ ಗೆ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಹೀಗಿದ್ದ ಮೇಲೆ ಮತ್ತೆ ಈ ಸೂಕ್ಷ್ಮ ವಿಷಯದ ಬಗ್ಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೊಂದಿಗೂ ಅರಣ್ಯ ಸಚಿವರು ಚರ್ಚಿಸುವ ಅವಶ್ಯಕತೆ ಏನು ? ಅರಣ್ಯ ಮಾರ್ಗದಲ್ಲಿ ಸಂಚಾರ ನಿರ್ಬಂಧ ಇದ್ದರೆ ಎರಡು ರಾಜ್ಯಗಳ ಬಾಂಧವ್ಯ ಹಾಳಾಗುತ್ತದೆಯೇ ? ಅಂದರೆ ಈಗ ಬಾಂಧವ್ಯ ಹಾಳಾಗಿದೆಯೇ ? ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿರುವ ಸಾಲುಗಳ ನಡುವಿನ ಅರ್ಥ ಗಮನಿಸಿದರೆ ಸದ್ಯದಲ್ಲಿಯೇ ಕರ್ನಾಟಕ ಸರ್ಕಾರವು ಕರ್ನಾಟಕ – ಕೇರಳ – ತಮಿಳುನಾಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಬಂಡೀಪುರ ಕಾಡಿನ ನಡುವಿನ ರಸ್ತೆಯಲ್ಲಿ ರಾತ್ರಿ ವೇಳೆ ಸಂಚಾರಕ್ಕೆ ಅನುಮತಿ ಕೊಡುವ ತರಾತುರಿಯಲ್ಲಿದೆ ಎಂದು ಅನಿಸುವುದಿಲ್ಲ ?

ಈ ಅರಣ್ಯ ಪ್ರದೇಶದ ರಸ್ತೆಯಲ್ಲಿ 2009ರಿಂದಲೂ ರಾತ್ರಿವೇಳೆ ಸಂಚಾರಕ್ಕೆ ನಿರ್ಬಂಧವಿದೆ. ಆಗಿನಿಂದಲೂ ಕೇರಳ ಸರ್ಕಾರ ನಿರ್ಬಂಧ ತೆರವು ಮಾಡಲು ಒತ್ತಾಯಿಸುತ್ತಲೇ ಇದೆ. ಹುಣಸೂರು ಮಾರ್ಗವಾಗಿ ಮೈಸೂರು – ಬೆಂಗಳೂರಿಗೆ ಬರಬಹುದಾದರೂ ಅದು ಅನವಶ್ಯಕವಾಗಿ ಒತ್ತಾಯ ಮಾಡುತ್ತಲೇ ಇದೆ. ತಮಿಳುನಾಡು ಸರ್ಕಾರ ಎಂದೂ ಈ ಬಗೆಯ ಒತ್ತಡ ಮಾಡಿಲ್ಲ ಎಂಬುದು ಗಮನಾರ್ಹ !

ಇತ್ತೀಚೆಗೆ ವಯನಾಡು ಜಿಲ್ಲೆಯ ನಿವಾಸಿಯೊಬ್ಬರು ರಾತ್ರಿ ವೇಳೆಯ ನಿರ್ಬಂಧ ಸಡಿಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಈ ನಂತರ ಕರ್ನಾಟಕ ಸರ್ಕಾರವು ಸಂಚಾರ ನಿಷೇಧ ಬೆಂಬಲಿಸುವ ಅಫಿಡವಿಟ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದೆ. ಇದು ಕರ್ನಾಟಕದ ಕಾಂಗ್ರೆಸ್ ರಾಜಕಾರಣಿಗಳು ವಯನಾಡು ಜಿಲ್ಲೆಯ ರಾಜಕಾರಣಿಗಳು ವಿಶೇಷವಾಗಿ ವಯನಾಡಿನ ಹಿಂದಿನ ಲೋಕಸಭಾ ಸದಸ್ಯ ರಾಹುಲ್ ಗಾಂಧಿ, ಹಾಲಿ ಲೋಕಸಭಾ ಸದಸ್ಯೆ ಪ್ರಿಯಾಂಕ ಗಾಂಧಿ ಅವರ ಒತ್ತಡಕ್ಕೆ ಮಣಿದಿರಬಹುದೇ ಎಂಬ ಅನುಮಾನ ಮೂಡಿಸುತ್ತದೆ ಅಲ್ಲವೇ ?

ಕರ್ನಾಟಕವು ಬಂಡೀಪುರ ಅರಣ್ಯ ರಸ್ತೆಯಲ್ಲಿ ರಾತ್ರಿವೇಳೆ  ವಾಹನ ಸಂಚಾರಕ್ಕೆ ಅವಕಾಶ ನೀಡಿದರೆ ಏನಾಗಬಹುದು?

ರಾಷ್ಟ್ರೀಯ ಹೆದ್ದಾರಿ 766 (NH-766) ಮತ್ತು NH-67 ರ ಭಾಗವಾಗಿರುವ ಬಂಡೀಪುರ ಅರಣ್ಯ ರಸ್ತೆಯು ನೀಲಗಿರಿ ಅರಣ್ಯ ಪ್ರದೇಶದ  ನಿರ್ಣಾಯಕ ಆವಾಸಸ್ಥಾನವಾದ ಕರ್ನಾಟಕದ ಬಂಡೀಪುರ ಹುಲಿ ಮೀಸಲು ಪ್ರದೇಶದ ಮೂಲಕ ಹಾದು ಹೋಗುತ್ತದೆ. ವಾಹನ ದಟ್ಟಣೆಯಿಂದಾಗಿ ಪ್ರಾಣಿಗಳ ಮರಣ ಪ್ರಮಾಣ ಹೆಚ್ಚುತ್ತಿದ್ದ ಕಾರಣ ಕರ್ನಾಟಕ ಹೈಕೋರ್ಟ್ ಆದೇಶವನ್ನು ಅನುಸರಿಸಿ, 2009 ರಿಂದ ಕರ್ನಾಟಕ ಸರ್ಕಾರವು  ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ವನ್ಯಜೀವಿಗಳನ್ನು ರಕ್ಷಿಸಲು ರಾತ್ರಿ ಸಂಚಾರ ನಿಷೇಧವನ್ನು ಜಾರಿಗೊಳಿಸಿದೆ.

ರಾತ್ರಿಯ ವೇಳೆ ಅಂದರೆ ಸಂಜೆ 7 ರಿಂದ ಬೆಳಗ್ಗೆ 6ರ ತನಕ  ಹುಲಿಗಳು, ಆನೆಗಳು, ಚಿರತೆಗಳು ಮತ್ತು ಸಿವೆಟ್‌ಗಳು ಮತ್ತು ಮೊಲಗಳಂತಹ ಪ್ರಾಣಿಗಳು ಹೆಚ್ಚು ಸಕ್ರಿಯವಾಗಿರುತ್ತವೆ. ರಾತ್ರಿಯಲ್ಲಿ ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುವುದರಿಂದ  ವನ್ಯಪ್ರಾಣಿಗಳ ಸಾವುಗಳು ಹೆಚ್ಚಾಗುವ ಸಾಧ್ಯತೆಯಿದೆ.

ರಾತ್ರಿ ವೇಳೆ ಸಂಚಾರವನ್ನು ನಿಷೇಧ ಮಾಡುವ ಮೊದಲಿ ಅಂಕಿಅಂಶ ಗಮನಿಸಿದರೆ (2004-2007) ಮೂರು ವರ್ಷಗಳಲ್ಲಿ 215 ಪ್ರಾಣಿಗಳು ಸಾವನ್ನಪ್ಪಿವೆ.  ವಾರ್ಷಿಕವಾಗಿ ಸರಾಸರಿ 72 ವನ್ಯಪ್ರಾಣಿಗಳು ವಾಹನಗಳ ಡಿಕ್ಕಿಯಿಂದ  ದಾರುಣವಾಗಿ ಸಾವನ್ನಪ್ಪಿವೆ. ನಿಷೇಧದ ಬಳಿಕ ಇದರ ಸಂಖ್ಯೆ  ಗಮನಾರ್ಹವಾಗಿ ಕಡಿಮೆಯಾಯಿತು.

 ನಿಷೇಧದ ನಂತರದ ಅಂಕಿಅಂಶಗಳನ್ನು ಗಮನಿಸಿದತೆ  (2010-2018) ಎಂಟು ವರ್ಷಗಳಲ್ಲಿ 34 ಸಾವುಗಳು ಅಥವಾ ವರ್ಷಕ್ಕೆ ಸುಮಾರು 4-5 ವನ್ಯಜೀವಿಗಳ ಸಾವುಗಳಾಗಿವೆ.  ನಿಷೇಧವನ್ನು ತೆಗೆದುಹಾಕುವುದರಿಂದ ಮರಣ ಪ್ರಮಾಣ 2009 ರ ಹಿಂದೆ ಇದ್ದಿದ್ದಕ್ಕಿಂತ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಈ ಮೂರು ರಾಜ್ಯಗಳ ನಡುವೆ ಸಂಚರಿಸುವ ವಾಹನಗಳ ಸಂಖ್ಯೆ ಅತೀ ಹೆಚ್ಚಾಗಿದೆ.

ಆವಾಸಸ್ಥಾನದಲ್ಲಿ ಉಂಟಾಗುವ ತೊಂದರೆಗಳು:

ವಾಹನಗಳ  ಶಬ್ದ ಮತ್ತು ಬೆಳಕಿನ ಮಾಲಿನ್ಯವು ವನ್ಯಜೀವಿಗಳ ನಡವಳಿಕೆಯನ್ನು, ವಿಶೇಷವಾಗಿ ಸಂತಾನೋತ್ಪತ್ತಿ ಮತ್ತು ಆಹಾರ ಹುಡುಕುವ ರೀತಿಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.  ಹುಲಿಗಳಂತಹ ಪ್ರಾಣಿಗಳ  ಚಲನೆಗೆ ಅಡೆತಡೆ ಉಂಟಾಗುತ್ತದೆ.  ಇದು ಅವುಗಳ ಸಂಖ್ಯೆಯನ್ನು ವಿಭಜಿಸಬಹುದು ಜೊತೆಗೆ ಆನುವಂಶಿಕ ವೈವಿಧ್ಯತೆ  ಕಡಿಮೆ ಮಾಡಬಹುದು. ಬಂಡೀಪುರ ಅರಣ್ಯದೊಳಗೆ ಹಾದು ಹೆದ್ದಾರಿ ಈಗಾಗಲೇ ಮೀಸಲು ಪ್ರದೇಶವನ್ನು ವಿಭಜಿಸಿದೆ.   ರಾತ್ರಿ ಸಂಚಾರಕ್ಕೆ ಅವಕಾಶವಾದರೆ  ಈ ತೊಂದರೆಗಳು ಮತ್ತಷ್ಟೂ ಉಲ್ಬಣವಾಗುತ್ತವೆ.

ಮಾನವ-ವನ್ಯಜೀವಿ ಸಂಘರ್ಷದಲ್ಲಿ ಏರಿಕೆ:

ರಸ್ತೆಗಳನ್ನು ತಪ್ಪಿಸುವ ವನ್ಯಪ್ರಾಣಿಗಳು  ಪ್ರಾಣಿಗಳು ಮಾನವ ವಾಸಸ್ಥಾನಗಳ ಬಳಿಗೆ ಬರಬಹುದು.  ಸಂಘರ್ಷಗಳನ್ನು ಹೆಚ್ಚಿಸಬಹುದು. ರಸ್ತೆ ಅಪಘಾತಗಳಿಂದ ಗಾಯಗೊಂಡ ಅಥವಾ ಒತ್ತಡಕ್ಕೊಳಗಾದಕಾಡು  ಪ್ರಾಣಿಗಳು ಹೆಚ್ಚು ಆಕ್ರಮಣಕಾರಿಯಾಗಬಹುದು. ವಾಹನಗಳ ಚಾಲಕರು, ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು, ಕಾಡಂಚಿನ ನಿವಾಸಿಗಳಿಗೆ  ಅಪಾಯವನ್ನು ಉಂಟುಮಾಡಬಹುದು.

ಕಾನೂನುಬಾಹಿರ ಚಟುವಟಿಕೆಗಳು:

ಬೇಟೆಯಾಡುವುದು, ಮರದ ಕಳ್ಳಸಾಗಣೆ ಮತ್ತು ವನ್ಯಜೀವಿ ಕಳ್ಳಸಾಗಣೆಗಳಿಗೆ ಅನುಕೂಲವಾಗಬಹುದು. ಇವುಗಳ ಸಾಧ್ಯತೆ ಅತೀ ಹೆಚ್ಚು. ಏಕೆಂದರೆ ರಾತ್ರಿವೇಳೆ ಅಪರಾಧಿಗಳನ್ನು ಗುರುತಿಸುವುದು, ಪತ್ತೆ ಹಚ್ಚುವುದು ಕಷ್ಟ ! ಅರಣ್ಯ ಸಿಬ್ಬಂದಿಯು ಎಲ್ಲೆಡೆ ಇರುವುದು ಅಸಾಧ್ಯವಾದ  ಸಂಗತಿ

ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಯಾವುದೇ ಕಾರಣಕ್ಕೂ ಬಂಡೀಪುರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆಯ ಸಂಚಾರಕ್ಕಿರುವ ನಿರ್ಬಂಧ ತೆರವು ಮಾಡಬಾರದು. ತೆರವು ಮಾಡದಂತೆ ಸಾರ್ವಜನಿಕರು ತೀವ್ರವಾಗಿ ಒತ್ತಾಯಿಸುವುದು ಅಗತ್ಯ !

Similar Posts

Leave a Reply

Your email address will not be published. Required fields are marked *