ಉನ್ನತ ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳಲ್ಲಿ ಮೆರಿಟ್ ಆಧಾರದಲ್ಲಿಯೇ ಪ್ರವೇಶಾತಿ ನೀಡುವ ಕುರಿತಂತೆ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರ ಅಭಿಪ್ರಾಯ ಚರ್ಚೆಗೆ ಒಳಗಾಗಿದೆ. ಅವರು ಲೋಕಸಭೆ ವಿರೋಧಪಕ್ಷದ ನಾಯಕರೂ ಆಗಿರುವ ಕಾರಣ ಅವರ ಅಭಿಪ್ರಾಯ ಸಹಜವಾಗಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಶಿಕ್ಷಣ ತಜ್ಞ ಪ್ರೊಫೆಸರ್ ಸುಖದೇವ್ ಥೋರಟ್ ಅವರೊಂದಿಗಿನ ಸಂದರ್ಶನದಲ್ಲಿ ರಾಹುಲ್ ಗಾಂಧಿ ಅಸಮಾನ ಭಾರತದ ವ್ಯವಸ್ಥೆ ಬಗ್ಗೆ ತಮ್ಮ ಒಳನೋಟ ಹಂಚಿಕೊಂಡಿದ್ದಾರೆ. “ಭಾರತದ ಅರ್ಹತೆ ವ್ಯವಸ್ಥೆ ಸಂಪೂರ್ಣವಾಗಿ ದೋಷಪೂರಿತ. ಅರ್ಹತಾ ವ್ಯವಸ್ಥೆ ಅನ್ಯಾಯ. ಇದು ಮೇಲ್ಜಾತಿ ನಿರೂಪಣೆ. ನಮ್ಮ ಶಿಕ್ಷಣ ವ್ಯವಸ್ಥೆ ಅಥವಾ ನಮ್ಮ ಅಧಿಕಾರಶಾಹಿ ಪ್ರವೇಶ ವ್ಯವಸ್ಥೆಗಳು ದಲಿತರು, ಒಬಿಸಿಗಳು (ಇತರ ಹಿಂದುಳಿದ ಜಾತಿಗಳು) ಮತ್ತು ಬುಡಕಟ್ಟು ಜನಾಂಗದವರಿಗೆ ನ್ಯಾಯಯುತವಾಗಿವೆ ಎಂದು ಯಾರಾದರೂ ಹೇಳಿದರೆ ಅದು ಸಂಪೂರ್ಣ ತಪ್ಪು.” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಮಾಡಿರುವ ಟ್ವೀಟ್ (ಎಕ್ಸ್) ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಡೆಸಿರುವ ಹೋರಾಟದ ಉಲ್ಲೇಖ ಮಾಡಿದ್ದಾರೆ. “98 ವರ್ಷಗಳ ಹಿಂದೆ ಪ್ರಾರಂಭವಾದ ಹಂಚಿಕೆಗಾಗಿ ಹೋರಾಟ ಮುಂದುವರೆದಿದೆ. ಮಾರ್ಚ್ 20, 1927 ರಂದು, ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಾದ್ ಸತ್ಯಾಗ್ರಹದ ಮೂಲಕ ಜಾತಿ ತಾರತಮ್ಯವನ್ನು ನೇರವಾಗಿ ಪ್ರಶ್ನಿಸಿದರು. ಇದು ನೀರಿನ ಹಕ್ಕಿಗಾಗಿ ಮಾತ್ರ ಹೋರಾಟವಲ್ಲ, ಸಮಾನತೆ ಮತ್ತು ಗೌರವಕ್ಕಾಗಿಯೂ ಸಹ ಹೋರಾಟ ನಡೆದಿದೆ” ಎಂದು ಹೇಳಿದ್ದಾರೆ.
ಜಾತಿ ಜನಗಣತಿಯ ಅಗತ್ಯತೆ ಬಗ್ಗೆಯೂ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ. “ಜಾತಿ ಜನಗಣತಿಯು ‘ಅಸಮಾನತೆಯನ್ನು ಬೆಳಕಿಗೆ ತರುವ ಕಡೆಗೆ ಒಂದು ನಿರ್ಣಾಯಕ ಹೆಜ್ಜೆಯಾಗಿದೆ, ಆದರೆ ಅದರ ವಿರೋಧಿಗಳು ಈ ಸತ್ಯವನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದಿದ್ದಾರೆ.
“ಜಾತಿ ತಾರತಮ್ಯದ ವಿರುದ್ಧ ಡಾ. ಅಂಬೇಡ್ಕರ್ ಅವರ ಹೋರಾಟವು ಕೇವಲ ಇತಿಹಾಸದ ಒಂದು ಭಾಗವಲ್ಲ, ಅದು ಇಂದಿಗೂ ಮುಂದುವರೆದಿರುವ ಹೋರಾಟವಾಗಿದೆ . ಬಾಬಾಸಾಹೇಬರ ಕನಸು ಇನ್ನೂ ನನಸಾಗಿಲ್ಲ. ಅವರ ಹೋರಾಟ ಕೇವಲ ಭೂತಕಾಲದ್ದಲ್ಲ, ವರ್ತಮಾನಕ್ಕೂ ಅನ್ವಯಿಸುತ್ತದೆ, ಮತ್ತು ನಾವು ಅದನ್ನು ಪೂರ್ಣ ಶಕ್ತಿಯಿಂದ ಮುಂದುವರಿಸುತ್ತೇವೆ” ಎಂದು ಹೇಳಿರುವ ರಾಹುಲ್ ಗಾಂಧಿ ಮಾತುಗಳನ್ನು ಗಂಭೀರವಾಗಿ ಮನನ ಮಾಡುವ ಅಗತ್ಯವಿದೆ.
ಪ್ರೊಫೆಸರ್ ಥೋರಟ್ ಅವರೊಂದಿಗಿನ ರಾಹುಲ್ ಗಾಂಧಿ ಅವರ ಮಾತುಗಳು ಅಸಮಾನ ಭಾರತವನ್ನು ಅವರು ಆಳವಾಗಿ ಗ್ರಹಿಸಿರುವುದರ ಪ್ರತಿಫಲನವೂ ಆಗಿದೆ. ಅದರಲ್ಲಿಯೂ ಶಿಕ್ಷಣ, ಆಡಳಿತ ಮತ್ತು ಸಂಪನ್ಮೂಲ ಹಂಚಿಕೆಯಲ್ಲಿ ಅಸಮಾನತೆ ನಿವಾರಿಸುವ ಸಾಧ್ಯತೆ ಇರುವ ಜಾತಿ ಗಣತಿ ಬಗ್ಗೆ ಪ್ರಬಲವಾಗಿ ಪ್ರತಿಪಾದಿಸಿರುವುದು ಬಹುಮುಖ್ಯ ಸಂಗತಿ.
ಐದು ಸಾವಿರ ವರ್ಷಗಳಿಂದ ನಿರಂತರವಾಗಿ ಶಿಕ್ಷಣ ಪಡೆಯುತ್ತಾ, ಉದ್ಯೋಗವಕಾಶಗಳನ್ನು ಪಡೆಯುತ್ತಾ ಬಂದಿರುವ ಮೇಲ್ಜಾತಿಗಳವರನ್ನು ಕೇವಲ 75 ವರ್ಷದಿಂದೀಚೆಗೆ (ನೂರು ವರ್ಷದ ಹಿಂದೆ ಶಿಕ್ಷಣ ಪಡೆದ ದಲಿತರ ಸಂಖ್ಯೆ ಬೆರಳೆಣಿಕೆ) ಶಿಕ್ಷಣದ ಅವಕಾಶ ಪಡೆದ ದಲಿತರು, ಅತೀ ಹಿಂದುಳಿದ ಜಾತಿಗಳನ್ನು ಶಿಕ್ಷಣಕ್ಕೆ ಮತ್ತು ಉದ್ಯೋಗಗಳಿಗೆ ಪ್ರವೇಶ ಕಲ್ಪಿಸುವಾಗ ಒಂದೇ ರೀತಿ ನೋಡುವುದು ಸರಿಯಲ್ಲ. ಆದ್ದರಿಂದಲೇ ಸಾಮಾಜಿಕ – ಆರ್ಥಿಕ ಮತ್ತು ವೈಜ್ಞಾನಿಕ ಚಿಂತನೆ ಮೂಲಕ ದಮನಿತರಿಗೆ ಮೀಸಲಾತಿ ಕಲ್ಪಿಸಲಾಗಿದೆ.
ಮೀಸಲಾತಿ ವ್ಯವಸ್ಥೆ ನಮ್ಮ ಅವಕಾಶಗಳನ್ನು ಕಿತ್ತುಕೊಂಡಿದೆ ಎಂಬ ತಪ್ಪು ಅಭಿಪ್ರಾಯ ಮೇಲ್ಜಾತಿಗಳಲ್ಲಿ ಇದೆ. ಇಂಥದ್ದೇ ಪೂರ್ವಾಗ್ರಹ ಹಿಂದುಳಿದ ಜಾತಿಗಳ ಕೆಲವರಲ್ಲಿ ಇದೆ. ಆದರೆ ವಾಸ್ತವವಾಗಿ ಮೀಸಲಾತಿ ಎನ್ನುವುದು ಸಂಪೂರ್ಣವಾಗಿ ಬಳಕೆಯಾಗಿಲ್ಲ. ದಮನಿತರಲ್ಲಿ ಗಮನಾರ್ಹ ಸಂಖ್ಯೆಯ ಮಂದಿ ಇನ್ನು ಅದರ ಸೌಲಭ್ಯಗಳನ್ನು ಪಡೆಯುವ ಸಾಮಾಜಿಕ – ಆರ್ಥಿಕ ವ್ಯವಸ್ಥೆ ರೂಪುಗೊಂಡಿಲ್ಲ. ಮೀಸಲಾತಿ ಪಡೆಯುತ್ತಿರುವವರು ಸಹಜವಾಗಿ ತಮ್ಮ ಪಾಲಿನ ಹಕ್ಕು ಪಡೆದುಕೊಳ್ಳುತ್ತಿದ್ದಾರೆ ಹೊರತು ಇನ್ಯಾರ ಅವಕಾಶಗಳನ್ನು ಕಿತ್ತುಕೊಂಡಿಲ್ಲ. ವಾಸ್ತವಾಗಿ ದಮನಿತರನ್ನು ಅವರಿಗೆ ಸಲ್ಲಬೇಕಾದ ಹಕ್ಕುಗಳಿಂದ ವಂಚಿಸಲು ವಾಮಮಾರ್ಗಗಳನ್ನು ಅನುಸರಿಸಲಾಗುತ್ತಿದೆ.
ಇಂಥ ಸಂದರ್ಭದಲ್ಲಿ ದೇಶದ ಪ್ರಮುಖ ರಾಜಕೀಯ ಪಕ್ಷದ ಮುಖಂಡ ಮತ್ತು ವಿರೋಧ ಪಕ್ಷದ ನಾಯಕನ ಮಾತುಗಳಲ್ಲಿರುವ ನೋವು ಗ್ರಹಿಸುವ ಅವಶ್ಯಕತೆ ಇದೆ. ಶಿಕ್ಷಣ, ಉದ್ಯೋಗಾವಕಾಶಗಳಲ್ಲಿ ಇನ್ನೂ ಗಮನಾರ್ಹವಾಗಿ ಉಳಿದುಕೊಂಡಿರುವ ಅಸಮಾನತೆಯನ್ನು ಅವರು ಗುರುತಿಸಿದ್ದಾರೆ.
ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಳಗಳ ಸಮುದಾಯಗಳು ಸಮಾನ ಅವಕಾಶಗಳನ್ನು ಪಡೆಯುವುದರಲ್ಲಿ ವ್ಯವಸ್ಥಿತವಾದ ಅಡೆತಡೆಗಳನ್ನು ಎದುರಿಸುತ್ತಿವೆ. ಲಭ್ಯವಿರುವ ಅಂಕಿಅಂಶಗಳು ಇದರತ್ತ ಬೊಟ್ಟು ಮಾಡಿ ತೋರಿಸುತ್ತವೆ. ಉದಾಹರಣೆಗೆ, 2011 ರ ಜನಗಣತಿಯು ಪರಿಶಿಷ್ಟ ಜಾತಿಗಳು (66.1%) ಮತ್ತು ಪರಿಶಿಷ್ಟ ಪಂಗಡಗಳು (59%) ರಾಷ್ಟ್ರೀಯ ಸರಾಸರಿ (73%) ಗಿಂತ ಹಿಂದುಳಿದಿವೆ ಎಂದು ತೋರಿಸುತ್ತದೆ.
ಇದೇ ಸಂದರ್ಭದಲ್ಲಿ ಮೇಲ್ಜಾತಿಯ ಕುಟುಂಬಗಳು ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಮತ್ತು ತರಬೇತಿಗೆ ಉತ್ತಮ ಪ್ರವೇಶವನ್ನು ಹೊಂದಿರುತ್ತವೆ. ಪರಂಪರೆಯ ಶಿಕ್ಷಣದ ಕಾರಣದಿಂದಲೂ, ಸಾಮಾಜಿಕ – ಆರ್ಥಿಕ ಕಾರಣಗಳಿಂದಲೂ ಅವರು ಪರೀಕ್ಷಾ ಅಂಕಗಳಂತಹ “ಮೆರಿಟ್” ಪಡೆದಿರುತ್ತಾರೆ. ಆದರೆ ಬುದ್ದಿವಂತಿಕೆ, ವಿಶ್ಲೇಷಣೆ, ಸಮಸ್ಯೆಗಳನ್ನು ಗ್ರಹಿಸಿ ಪರಿಹಾರ ಒದಗಿಸಲು ಅವಶ್ಯವಾದ ನೆಲೆಗಳಲ್ಲಿ ಶಿಕ್ಷಣದಲ್ಲಿ ಪಡೆದ ಅಂಕಗಳಷ್ಟೇ ಸಾಲುವುದಿಲ್ಲ.
ಹಿಂದೆಯೇ ಹೇಳಿದ ಹಾಗೆ ವಿವಿಧ ಕಾರಣಗಳಿಗಾಗಿ ಭಾರತದಲ್ಲಿ ಮೀಸಲಾತಿ ವ್ಯವಸ್ಥೆ ( ಒಬಿಸಿಗಳಿಗೆ 27%, ಸಾರ್ವಜನಿಕ ಉದ್ಯೋಗಗಳು ಮತ್ತು ಶಿಕ್ಷಣದಲ್ಲಿ ಎಸ್ಸಿಗಳಿಗೆ 15%) ಅಸ್ತಿತ್ವದಲ್ಲಿದೆ. ಏಕೆಂದರೆ ಅರ್ಹತೆ ಮಾತ್ರ ಆಟದ ಮೈದಾನವನ್ನು ಸಮತಟ್ಟು ಮಾಡುವುದಿಲ್ಲ.ರಾಹುಲ್ ಗಾಂಧಿಯವರ ಮಾತುಗಳಿರುವ ಅಂಶವು ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಯನ್ನು ಮರು ಪ್ರತಿಪಾದಿಸುತ್ತದೆ.
ಯನೈಟೆಡ್ ಸ್ಟೇಟ್ಸ್ (ಅಮೆರಿಕಾ)ದಲ್ಲಿ SAT ನಂತಹ ಪ್ರಮಾಣೀಕೃತ ಪರೀಕ್ಷೆಗಳ ವಿಮರ್ಶಕರು “ಅವು ಸಾಮಾಜಿಕ ಆರ್ಥಿಕ ಸ್ಥಿತಿಯೊಂದಿಗೆ ಪರಸ್ಪರ ಸಂಬಂಧ ಹೊಂದಿವೆ. ಬೋಧನೆ ಮತ್ತು ಸಂಪನ್ಮೂಲಗಳಿಂದಾಗಿ ಶ್ರೀಮಂತ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುತ್ತಾರೆ” ಎಂದು ಅಭಿಪ್ರಾಯಪಡುತ್ತಾರೆ. ಈ ಹಿನ್ನೆಲೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ದಲಿತರು, ಆದಿವಾಸಿಗಳ ಪ್ರವೇಶಾತಿಯು ಭಾರತದ ಐಐಟಿ ಮತ್ತು ಈ ಮಾದರಿಯ ಶಿಕ್ಷಣ ಸಂಸ್ಥೆಗಳಲ್ಲಿ ಸಾಧ್ಯವಾಗಿಲ್ಲ ಎಂಬುದನ್ನು ಗಮನಿಸಬೇಕು. ಜೊತೆಗೆ ಅಮೆರಿಕಾದ ವಿಮರ್ಶಕರ ಮಾತುಗಳಿಗೂ ರಾಹುಲ್ ಗಾಂಧಿ ಮಾತಿಗೂ ಇರುವ ಸಾಮ್ಯತೆಯನ್ನೂ ಗಮನಿಸಬೇಕು ! ಇಲ್ಲಿವ್ಯವಸ್ಥೆಯನ್ನು ಯಾರು ವಿನ್ಯಾಸಗೊಳಿಸುತ್ತಾರೆ ಮತ್ತು ಯಾರು ಯಶಸ್ವಿಯಾಗುತ್ತಾರೆ ಎಂಬುದು ಬಹುಮುಖ್ಯವಾದ ಸಂಗತಿ !!