ಪೊಲೀಸ್ ದೌರ್ಜನ್ಯ, ಜಾತಿ ತಾರತಮ್ಯ, ಸ್ತ್ರೀದ್ವೇಷ ಮತ್ತು ಸಾಂಸ್ಥಿಕ ಇಸ್ಲಾಮೋಫೋಬಿಯಾ ಸೇರಿದಂತೆ ಸೂಕ್ಷ್ಮ ಸಾಮಾಜಿಕ ಸಮಸ್ಯೆಗಳನ್ನು ಚಿತ್ರಿಸಿರುವುದರಿಂದ ಭಾರತೀಯ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಭಾರತದಲ್ಲಿ “ಸಂತೋಷ್” ಸಿನಿಮಾದ ಥಿಯೇಟರ್ ಬಿಡುಗಡೆಯನ್ನು ನಿರ್ಬಂಧಿಸಿದೆ. ಇದು ಪ್ರಭುತ್ವಕ್ಕೆ ಒಪ್ಪಿಗೆಯಾಗುವ ಮಾದರಿಯಲ್ಲಿಯೇ ಸಿನಿಮಾ ನಿರ್ಮಿಸಬೇಕೇ ಎಂಬ ಪ್ರಶ್ನೆಯನ್ನು ಮೂಡಿಸಿದೆ !
“ಸಂತೋಷ್” ಸಿನಿಮಾವನ್ನು ಬ್ರಿಟಿಷ್ – ಭಾರತೀಯ ಸಿನಿಮಾ ತಂತ್ರಜ್ಞೆ ಸಂಧ್ಯಾ ಸೂರಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಗ್ರಾಮೀಣ ಉತ್ತರ ಭಾರತದಲ್ಲಿ ಪೊಲೀಸ್ ಪಡೆಗೆ ಸೇರುವ ಯುವ ವಿಧವೆಯ ಕಥೆಯನ್ನು ಸಿನಿಮಾ ಹೊಂದಿದೆ. ದಲಿತ ಸಮುದಾಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಯನ್ನು ತನಿಖೆ ಮಾಡುವ ಕಥಾ ಹಂದರವಿದೆ.
ಸಂತೋಷ್ ಸಿನಿಮಾ 2024 ರಲ್ಲಿ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡಿದೆ. ಅಂತರರಾಷ್ಟ್ರೀಯ ವೈಶಿಷ್ಟ್ಯ ವಿಭಾಗದಲ್ಲಿ 2025 ರ ಆಸ್ಕರ್ ಸ್ವರ್ಧೆಗೆ ಯುನೈಟೆಡ್ ಕಿಂಗ್ ಡಮ್ ಮೂಲಕ ಅಧಿಕೃತ ಪ್ರವೇಶವಾಗಿದೆ. ಈ ಚಿತ್ರಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಸಂತೋಷ್ ಸಿನಿಮಾವನ್ನು ಭಾರತದಲ್ಲಿ ಥಿಯೇಟರ್ ಮತ್ತು ಒಟಿಟಿ ಫ್ಲಾಟ್ ಫಾರಂನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಇದಕ್ಕೂ ಮೊದಲು ಭಾರತೀಯ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಪ್ರಮಾಣೀಕರಣ ಪಡೆಯುವುದು ಅವಶ್ಯಕವಾಗಿತ್ತು. ಸಿನೆಮಾ ವೀಕ್ಷಣೆ ಬಳಿಕ ಮಂಡಳಿ ಪೊಲೀಸರ ನಕಾರಾತ್ಮಕ ಚಿತ್ರಣ, ಸಾಮಾಜಿಕ ವಿಷಯಗಳ ಪ್ರಸ್ತಾಪಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. ಹಲವು ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಕಟ್ ಮಾಡಲು ಸೂಚಿಸಿದೆ !
ಸೆನ್ಸಾರ್ ಮಂಡಳಿ ಸೂಚನೆಗೆ ಸಂಧ್ಯಾ ಸೂರಿ ಆಘಾತಗೊಂಡಿದ್ದಾರೆ. ಮಾರ್ಚ್ 26, 2025 ರಂದು ದಿ ಗಾರ್ಡಿಯನ್ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಸೆನ್ಸಾರ್ ಮಂಡಳಿ ಸೂಚಿಸಿರುವ ಕಟ್ ಗಳನ್ನು ಮಾಡಿದರೆ ಸಂತೋಷ್ ಸಿನಿಮಾದ ಒಟ್ಟಾರೆ ಕಥೆ, ನಿರೂಪಣೆ ಮತ್ತು ಅದರ ಓಘಕ್ಕೆ ಧಕ್ಕೆಯಾಗುತ್ತದೆ. ಕಲಾತ್ಮಕ ದೃಷ್ಟಿಕೋನವೂ ಹಾಳಾಗುತ್ತದೆ” ಎಂದು ಹೇಳಿದ್ದಾರೆ.
“ಪೊಲೀಸ್ ಹಿಂಸೆ, ಜಾತಿ ಸಮಸ್ಯೆಗಳು ಮತ್ತು ಸ್ತ್ರೀದ್ವೇಷ ವಿಷಯಗಳು ಭಾರತೀಯ ಚಿತ್ರರಂಗಕ್ಕೆ ಹೊಸದಲ್ಲ. ತೀವ್ರ ಸೆನ್ಸಾರ್ ಶಿಪ್ ಇಲ್ಲದೇಯೂ ಅಂಥ ಕಥಾ ಹಂದರ ಹೊಂದಿದ ಸಿನೆಮಾಗಳು ಬಿಡುಗಡೆಯಾಗಿವೆ. ಆದರೂ ಸಂತೋಷ್ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ತೀವ್ರ ಆಕ್ಷೇಪ ಎತ್ತಿರುವುದು ಆಶ್ಚರ್ಯಕರ” ಎಂದು ಅವರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
ಸಂತೋಷ್ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ನಟಿ ಶಹಾನಾ ಗೋಸ್ವಾಮಿ ಅವರು ಭಾರತೀಯ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯ ಆಕ್ಷೇಪ ಮತ್ತು ಸೂಚನೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಸೆನ್ಸಾರ್ ಹೇಳಿರುವುದನ್ನು ಜಾರಿ ಮಾಡಿದರೆ ಚಿತ್ರದ ಕಥಾ ಹಂದರವೇ ಬದಲಾಗುತ್ತದೆ. ಭಾರತದಲ್ಲಿ ಸಂತೋಷ್ ಸಿನಿಮಾದ ಚಿತ್ರೀಕರಣ ಆರಂಭಿಸುವ ಮುನ್ನವೇ ನೀಡಲಾಗಿದ್ದ ಚಿತ್ರಕಥೆಗೆ ಸೆನ್ಸಾರ್ ಮಂಡಳಿ ಅನುಮೋದನೆ ನೀಡಿತ್ತು. ಸಿನಿಮಾ ನಿರ್ಮಾಣಗೊಂಡ ನಂತರ ಆಕ್ಷೇಪಣೆಗಳನ್ನು ಎತ್ತಿದೆ” ಎಂದಿದ್ದಾರೆ.
ಭಾರತೀಯ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಆಕ್ಷೇಪಣೆಗಳಿಗೆ ಸಿನಿಮಾ ವಿಮರ್ಶಕರು, ಚಿತ್ರಪ್ರೇಮಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಅನಿಮಲ್ (2023) ಮತ್ತು ಮಾರ್ಕೊ (2024) ಸಿನಿಮಾಗಳು ಗ್ರಾಫಿಕ್ ಹಿಂಸೆಯನ್ನು ಒಳಗೊಂಡಿದ್ದೂ ಪ್ರಮಾಣೀಕರಣವನ್ನು ಪಡೆದಿವೆ. ಹೀಗಿರುವಾಗ ವಾಸ್ತವಿಕ ಸಮಸ್ಯೆಗಳ ಚಿತ್ರಣವನ್ನು ಹೊಂದಿರುವ ಸಂತೋಷ್ ಸಿನಿಮಾಕ್ಕೆ ಏಕೆ ನಿರ್ಬಂಧ” ಎಂದು ಪ್ರಶ್ನಿಸಿದ್ದಾರೆ.
ಭಾರತದ ಹಲವೆಡೆ ನಡೆಯುತ್ತಿರುವ ವಿದ್ಯಮಾನಗಳು ಕಳವಳ ಮೂಡಿಸುತ್ತಿವೆ. ಇಂಥ ಸಂದರ್ಭದಲ್ಲಿ ಸಮಾಜದಲ್ಲಿ ಚರ್ಚೆಗಳನ್ನು ಮೂಡಿಸಲು ಮತ್ತು ಸರ್ಕಾರಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಾಸ್ತವಿಕ ಚಿತ್ರಣದೊಂದಿಗೆ ಕಲಾತ್ಮಕತೆ ಹೊಂದಿರುವ ಸಿನಿಮಾಗಳ ಅಗತ್ಯವಿದೆ. ಇಂಥ ಚಿತ್ರಕಥೆ ಹೊಂದಿದ್ದೂ ಈಗಾಗಲೇ ವಿದೇಶಗಳಲ್ಲಿ ಪ್ರಶಂಸೆಯನ್ನು ಪಡೆದಿರುವ “ಸಂತೋಷ್” ಸಿನಿಮಾಕ್ಕೆ ತೀವ್ರ ಆಕ್ಷೇಪಣೆ ಸೂಕ್ತವೇ ಎಂಬ ಪ್ರಶ್ನೆಯೂ ಎದುರಾಗಿದೆ.
ಭಾರತೀಯ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಆಕ್ಷೇಪಣೆ ಮತ್ತು ಸೂಚನೆ ವಿರುದ್ಧ ಮರು ಮನವಿ, ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಮಾಪಕಿ-ನಿರ್ದೇಶಕಿ ಸಂಧ್ಯಾ ಸೂರಿ ನ್ಯಾಯಾಲಯದ ಮೊರೆ ಹೋಗುತ್ತಾರೆಯೇ ?