ಕವಿ ಕಮಲಾಕರ ಕಡವೆ ಅವರ “ವಲಸೆ ಹಕ್ಕಿಗಳ ಹುಯಿಲು” ಓದಿದೆ. ಇಲ್ಲಿನ ಕಾವ್ಯ ಕನ್ನಡಿ ವರ್ತಮಾನದ ತಲ್ಲಣಗಳಿಗೆ ಮುಖಮುಖಿಯಾಗುತ್ತಾ ಸಮಾಜದ ಮುಖಗಳೂ ಕಾಣಿಸಿ ಬೆಚ್ಚಿ ಬೀಳಿಸುತ್ತವೆ. ನಿಂತಲ್ಲೇ ನಿಂತು ಕೊಳೆತು ನಾರುವ ಮಾದರಿ ಇರದೇ ಚಲನೆಯೇ ಸ್ಥಾಯಿಭಾವವಾಗಿರುವ ರಚನೆಗಳು ಓದುಗರನ್ನೂ ಹಲವು ಆಯಾಮಗಳಲ್ಲಿ ಅರಳಿಸುತ್ತಾ ಸಾಗುತ್ತವೆ.
ಸಂಕಲನದ ಶೀರ್ಷಿಕೆಯೂ ಆಗಿರುವ “ವಲಸೆ ಹಕ್ಕಿಗಳ ಹುಯಿಲು” ಸಂಕಲನದ ಮೊದಲ ಕವಿತೆಯೂ ಆಗಿರುವುದು ಗಮನಾರ್ಹ ! ಸಾಮಾನ್ಯವಾಗಿ ಕಥೆ ಅಥವಾ ಕಾವ್ಯ ಸಂಕಲನಗಳಲ್ಲಿ ಮೊದಲನೇಯದೇ ಶೀರ್ಷಿಕೆ ಆಗಿರುವುದು ಅಪರೂಪ ! ಇದು ಕಟ್ಟಿಕೊಡುವ ರೂಪಕಗಳನ್ನು ಗಮನಿಸಿ
ಆಶೀರ್ವಾದದಂತೆ ಹಗುರ ತಾಗುವ ಮಂಜು
ಮಳೆನೀರಲ್ಲಿ ನೆಂದು ನಿಂತಿರುವ ಮಾವು
ಗುಡುಗಿನ ಸದ್ದಿಗಾಗಿ ತುರ್ತು ಕಾದಿರುವ ಮುದುಕ
ಅದೇನು ಮಹಾ ತೂಫಾನು ಬಂದೀತು ಈವರೆಗೆ ಕಾಣದ್ದು
ವಲಸೆ ಹಕ್ಕಿಗಳು ಎಬ್ಬಿಸಿರುವ ಹುಯಿಲಿನ ನಡುವೆ
ನಗ್ನ ಬಾಗಿಲಿನೆದುರು
ನೆರಳುಗಳ ರಂಗೋಲಿ
ಇಲ್ಲಿ ವಲಸೆ ಹಕ್ಕಿಗಳು, ಹಕ್ಕಿಗಳಷ್ಟೇ ಅಲ್ಲ; ನಗ್ನ ಬಾಗಿಲಿನೆದುರು ನೆರಳುಗಳ ರಂಗೋಲಿ, ವಲಸೆ ಹೋಗಿ ಮರಳಿ ಬಂದವರ ಸ್ಥಿತಿಗತಿಯನ್ನೂ ಕವನ ಹಿಡಿದುಕೊಟ್ಟಿದೆ. ಹೀಗೆ ಇಲ್ಲಿನ ಸಂಕಲನದ ಹಲವು ಕವನಗಳು ರೂಪಕಗಳನ್ನು ಇನ್ನಿಲ್ಲದಂತೆ ದುಡಿಸಿಕೊಳ್ಳುತ್ತಾ ಅದು ಕಂಡ, ಕಾಣಿಸುವ ಸತ್ಯದ ಅನಾವರಣಗಳೆದುರು ಕಾವ್ಯದ ಕನ್ನಡಿಯನ್ನು ನಮ್ಮ ಮುಖಕ್ಕೆ ರಾಚುವಂತೆ ಹಿಡಿಯುತ್ತದೆ.
ಸಂಕಲನದಲ್ಲಿರುವ ಎಲ್ಲ ಕವನಗಳ ವಿಶ್ಲೇಷಣೆಗೆ ನಾನು ಹೋಗುವುದಿಲ್ಲ. ಇಲ್ಲಿರುವ 66 ರಚನೆಗಳಲ್ಲಿ ಎಲ್ಲವೂ ನನ್ನನ್ನು ಗಾಢವಾಗಿ ತಟ್ಟಿವೆ. ಅವುಗಳಲ್ಲಿ ಕೆಲವನ್ನಷ್ಟೇ ಇಲ್ಲಿ ಉದಾಹರಣೆಯಾಗಿ ನೀಡುತ್ತೇನೆ.
ಎಲ್ಲ ದೋಣಿಗಳು ಸಾಗಿ ಹೋದ ಬಳಿಕ ರಚನೆಯಲ್ಲಿ ಎಲ್ಲ ದೋಣಿಗಳು ಸಾಗಿ ಹೋದ ಬಳಿಕ ಏನು ಹೇಳುವುದೆಂದು ಎಲ್ಲರಿಗೂ ಹೊಳೆಯುವುದಿಲ್ಲ” ಎನ್ನುವುದು ನದಿಯಲ್ಲಿ ಸಾಗುವಾಗ ಮಿಂಚೊಂದು ಸುಳಿದು ಥಟ್ಟನೆ ಮಾಯವಾದಂತೆ ಅನಿಸುತ್ತದೆ.
ವಲಸೆ ಎಂದರೆ ಇದ್ದು ಇಲ್ಲದರ ಹೊಯ್ದಾಟ
ನಾಳೆಗೆ ಬೇಡದ ನಿನ್ನೆ ಇಂದು ನಡೆಸುವ ಸೆಣಸಾಟ
ಮರಳಲಾಗದ ಸ್ವಪ್ನವೊಂದರ ಸೆಳೆತ
ಪಾತಾಳದಾಳ ಬೀಳುವ ಬಿಸಿಲುಕೋಲು
ಇವು ಮರಳಲಾದ ಸ್ವಪ್ನ ರಚನೆ ಸಾಲುಗಳು. ಇವು ವಲಸೆ ಹಕ್ಕಿಗಳ ಹುಯಿಲು ಕನನದ ಮುಂದುವರಿಕೆಯಾಗಿ ಕಾಣುತ್ತದೆ. ಹಾಗೆಯೇ ಇವೆರಡರ ಮುಂದುವರಿಕೆಯಾಗಿ “ನನ್ನ ಉಸಿರಿನೊಳಗಿನ ನೆಲ” ರಚನೆಯೂ ಕಾಣುತ್ತದೆ. ಇಲ್ಲಿನ ಸಾಲುಗಳನ್ನು ಗಮನಿಸಿ
ನೆನಪುಗಳ ಆಟ ಇದು ಗಾಳಿಯಲ್ಲಿ ನೆಟ್ಟಂತೆ ಮಾವು
ಬೇರುಗಳಿಗಿಲ್ಲ ಮಣ್ಣ ಹಿಡಿತ
ಆದರೂ, ಅದೆಷ್ಟು ಸಿಹಿ ಅದರ ಹಣ್ಣುಗಳು
ರುಚಿ ನೋಡ ಹೋದರೆ ಕರಗುತ್ತಿದೆ ನಾಲಿಗೆಯಲ್ಲಿ
ಇಲ್ಲಿನ ಕವನಗಳು ರಮ್ಯತಗೆ ಜೋತು ಬೀಳದೇ ಹಠಾತ್ತನೇ ಭೀಕರ ವಾಸ್ತವತೆ ಎದುರು ಕಾವ್ಯದೋದುಗರನ್ನು ನಿಲ್ಲಿಸುತ್ತವೆ. “ನಿಧಾನ ಸುಡುವ ಕನಸುಗಳು” ರಚನೆಯಲ್ಲಿ
ಊರ ತೊರೆದು ನಿಂತಿರುವ ಹಠಮಾರಿ ಗಂಡಿಗಾಗಿ
ಹೆಂಗಸು ಲಾರಿಯೊಂದರ ಇಂಜಿನ್ನಿನ ಜೊತೆ ವಾದಕ್ಕೆ ಇಳಿದಿದ್ದಾಳೆ
ಅವಳ ಕಣ್ಣೀರು ಸೋಕಿದ ಜಾಗಗಳೆಲ್ಲ ಇನ್ನು ಬರಡು
ಹಾಗೆಯೇ “ಏರಿಳಿವ ಗಾಳಿಪಠ” ರಚನೆ ಗಮನಿಸಿ;
ಚಿಲ್ಲರೆಗೆ ಕೈಯೊಡ್ಡಿ ಹಲ್ಲುಗಿಂಜುತ್ತ ನಿಂತ ಕುಡುಕನ
ಪುಟ್ಟ ಮಗಳ ಕಣ್ಣಲ್ಲಿ ಉರಿವ ಅವಮಾನದ ಬೆಂಕಿ
ಬಾಲ್ಯವನ್ನೇ ದಹಿಸಿತ್ತು
ಕವಿ ಕಮಲಾಕರ ಕಡವೆಯ ಕಾವ್ಯಶಕ್ತಿಗೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿರಲಾರದು. “ವಲಸೆ ಹಕ್ಕಿಗಳ ಹುಯಿಲು” ಸಂಕಲನದ ಹಲವು ರಚನೆಗಳಲ್ಲಿ ವಲಸೆಯೇ ಸ್ಥಾಯಿಭಾವವಾಗಿದೆ. ಇದು ಹಲವೆಡೆ ನೋಡುತ್ತಾ, ನಡೆಯುತ್ತಾ ತಾನು ಕಂಡ ದರ್ಶನವನ್ನು ಓದುಗರಿಗೂ ದಾಟಿಸುತ್ತದೆ. ಅದರ ಮೂಲಕ ಅರಳಿಸುತ್ತದೆ.
ಬೆಂಗಳೂರಿನ “ಸಮಾಜಮುಖಿ ಪ್ರಕಾಶನ ”ವಲಸೆ ಹಕ್ಕಿಗಳ ಹುಯಿಲು” ಸಂಕಲನವನ್ನು ಸುಂದರವಾಗಿ ಪ್ರಕಟಿಸಿದೆ. ಇಲ್ಲಿ ಸುಂದರತೆ ಕ್ಲೀಷೆಯಾಗಿ ಬಳಕೆಯಾಗಿಲ್ಲ. ಗುಣಮಟ್ಟದ ಕಾಗದ – ಮುದ್ರಣ (ನ್ಯೂ ಲೈನ್ ಅಡ್ವರ್ಟೈಸಿಂಗ್ & ಮಾರ್ಕೇಟಿಂಗ್) ಫಾಂಟ್ – ವಿನ್ಯಾಸ (ಆನಂದರಾಜೇ ಅರಸ್) ಕವನಗಳ ಆಂತರ್ಯ ಬಿಂಬಿಸುವ ಮುಖಪುಟ ಮತ್ತು ಒಳಗಿನ ರೇಖಾಚಿತ್ರಗಳು (ಕೆ.ಎಸ್. ಪ್ರಸಾದ್) ಇವೆಲ್ಲದರ ಜೊತೆಗೆ ನಮ್ಮ ನಡುವಿನ ಮಹತ್ವದ ಕವಿಗಳಾದ ಎಸ್. ಸಿರಾಜ್ ಅಹಮದ್ ಅವರ ಮುನ್ನುಡಿ, ಆರಿಫ್ ರಾಜಾ ಅವರ ಬೆನ್ನುಡಿ ಇದೆ. ಒಟ್ಟು 96 ಪುಟಗಳ ಕೃತಿಯನ್ನು ಅಂಚೆ ಮೂಲಕವೂ ತರಿಸಿಕೊಳ್ಳಬಹುದು. ವಿವರಗಳಿಗೆ ಪ್ರಕಾಶನದ ಸಂಪರ್ಕ ಸಂಖ್ಯೆ: 99000 49892
ಸೊಗಸಾದ ಪುಸ್ತಕ ಪರಿಚಯ ಕುಮಾರ್. ಕೃತಿಯನ್ನು ಓದಲು ಪ್ರೇರೇಪಿಸುತ್ತದೆ