ಲೇಖಕ: ಕುಮಾರ ರೈತ

ರಾಷ್ಟ್ರಾದ್ಯಂತ ಕಳೆದ ಐದು ವರ್ಷಗಳಿಂದ ನಡೆಯುತ್ತಿರುವ ಸೈಬರ್ ಕ್ರೈಮ್ ಮಿತಿ ಮೀರಿದೆ. ಇದನ್ನು ತಡೆಯಲು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪೊಲೀಸರು, ರಾಜ್ಯ ಸರ್ಕಾರದ ಅಧೀನದಲ್ಲಿರುವ ಪೊಲೀಸರು ಪ್ರಯತ್ನಿಸುತ್ತಲೇ ಇದ್ದಾರೆ. ಆದರೂ ಸೈಬರ್ ಕ್ರೈಮ್ ಖದೀಮರು ಹೊಸಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಡಿಜಿಟಲ್ ಆರೆಸ್ಟ್ ಸಹ ಒಂದಾಗಿದೆ.

ಡಿಜಿಟಲ್ ಬಂಧನ ಎಂದರೇನು?

“ಡಿಜಿಟಲ್ ಬಂಧನ” ಎನ್ನುವುದು ಸಹ ಸೈಬರ್ ಹಗರಣ.  ವಂಚಕರು,  ಕಾನೂನು ಜಾರಿ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ಅಥವಾ ನ್ಯಾಯಾಂಗ ಅಧಿಕಾರಿಗಳ ಮಾದರಿಗಳನ್ನು ಅನುಕರಿಸಿ  ಹಣವನ್ನು ಸುಲಿಗೆ ಮಾಡುತ್ತಾರೆ. ಸಾಮಾನ್ಯವಾಗಿ, ಸ್ಕ್ಯಾಮರ್‌ಗಳು ಫೋನ್ ಕರೆಗಳು, ವೀಡಿಯೊ ಕರೆಗಳು (WhatsApp ಅಥವಾ Skype ನಂತಹ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿ), ಇಮೇಲ್‌ಗಳು ಅಥವಾ ಸಂದೇಶಗಳ ಮೂಲಕ ತಮ್ಮ ಗುರಿಯಾಗಿರುವ ವ್ಯಕ್ತಿಗಳನ್ನು  ಸಂಪರ್ಕಿಸುತ್ತಾರೆ.

ಹಣ ವರ್ಗಾವಣೆ, ಮಾದಕವಸ್ತು ಕಳ್ಳಸಾಗಣೆ ಅಥವಾ ತೆರಿಗೆ ವಂಚನೆಯಂತಹ ಅಪರಾಧಗಳ ಬಗ್ಗೆ ಸುಳ್ಳು ಆರೋಪಗಳನ್ನು  ಮಾಡುತ್ತಾರೆ. ಗುರಿಯಾಗಿರುವ ವ್ಯಕ್ತಿಗೆ  “ಡಿಜಿಟಲ್ ಬಂಧನ”ದಲ್ಲ್ಲಿ ಇದ್ದೀರಿ ಎಂದು ಬೆದರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಣ ವರ್ಗಾವಣೆ ಅಥವಾ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುವಂತೆ ಒತ್ತಾಯಿಸುತ್ತಾರೆ.

 ಹೆದರಿಸುವ ಮೂಲಕ ತೀವ್ರ ಆತಂಕ ಸೃಷ್ಟಿಸುವ ಸೈಬರ್ ಅಪರಾಧಿಗಳು  ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED), ಅಥವಾ ಪೊಲೀಸರಂತಹ ಏಜೆನ್ಸಿಗಳ ಅಧಿಕಾರಿಗಳಂತೆ ನಟಿಸುತ್ತಾರೆ.  ಭಯ ಹುಟ್ಟಿಸಲು ತಕ್ಷಣದ ಬಂಧನ ಅಥವಾ ಕಾನೂನು ಕ್ರಮದ ಬೆದರಿಕೆಗಳನ್ನು ಬಳಸುತ್ತಾರೆ. ಇವೆಲ್ಲದರ ಜೊತೆಗೆ ತಾವು ಪೊಲೀಸರು ಅಥವಾ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಂದು ನಂಬಿಸುವ ಸಲುವಾಗಿ ನಕಲಿ ಸೆಟಪ್ ಗಳನ್ನು ಮಾಡಿರುತ್ತಾರೆ. ಸಮವಸ್ತ್ರಗಳನ್ನು ಧರಿಸಿರುತ್ತಾರೆ.

ಕಾನೂನು ಏನು ಹೇಳುತ್ತದೆ ?

ಮುಖ್ಯವಾಗಿ, ಭಾರತದಲ್ಲಿ ಬಂಧನಗಳನ್ನು ಡಿಜಿಟಲ್ ಅಥವಾ ವೀಡಿಯೊ ಕರೆಗಳ ಮೂಲಕ ಮಾಡಲು   ಕಾನೂನು ಅನುಸಾರ  ಅವಕಾಶವಿಲ್ಲ. ಬಂಧನ ಕಾರ್ಯವಿಧಾನಗಳನ್ನು ವಿವರಿಸುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 (BNSS), ದೈಹಿಕ ಬಂಧನ ಮತ್ತು ಸೂಕ್ತ ಪ್ರಕ್ರಿಯೆಯ ಅನುಸರಣೆಯನ್ನು ಕಡ್ಡಾಯಗೊಳಿಸಿದೆ.

ಡಿಜಿಟಲ್ ಬಂಧನ ಹಗರಣಗಳ ಇತಿಹಾಸ

2020 ರ ದಶಕದ ಆರಂಭದಲ್ಲಿಯೇ  ಭಾರತದಲ್ಲಿ “ಡಿಜಿಟಲ್ ಬಂಧನ” ಹಗರಣಗಳ ಪರಿಕಲ್ಪನೆಯು ಹೊರಹೊಮ್ಮಿದೆ. ನಾನಾ ಕಾರಣಗಳಿಂದ ಜನತೆ ಆನ್ ಲೈನ್ ಬಳಕೆಯನ್ನು ಮತ್ತು ಆನ್ ಲೈನಿನಲ್ಲಿಯೇ ಹಣಕಾಸು ವ್ಯವಹಾರ ಮಾಡುವುದನ್ನು ಹೆಚ್ಚಳ ಮಾಡಿದ್ದು ಜೊತೆಗೆ ಕೊರೊನಾ ಪಿಡುಗು ಸಂದರ್ಭದಲ್ಲಿ ಹೆಚ್ಚಿದ ಆನ್ ಲೈನ್ ವ್ಯವಹಾರಗಳು ಸೈಬರ್ ಖದೀಮರಿಗೆ ಸುಗ್ಗಿಯಾಗಿ ಪರಿಣಮಿಸಿತು.

 ಮುಖ್ಯವಾಗಿ ಭಾರತದಲ್ಲಿ 2016ರ ನಂತರ  ಡಿಜಿಟಲ್ ಆರ್ಥಿಕತೆಯು ವೇಗವಾಗಿ ಬೆಳೆಯಿತು. ಇದು ಆನ್‌ಲೈನ್ ಹಣಕಾಸು ವಹಿವಾಟುಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯನ್ನು ಹೆಚ್ಚು ಮಾಡಿತು. ಇವೆಲ್ಲ  ಸ್ಕ್ಯಾಮರ್‌ಗಳು ಜಾಲ ಬೀಸಲು ಅನುಕೂಲವಾಯಿತು.

ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (VoIP) ಸೇವೆಗಳು, AI-ರಚಿತ ಧ್ವನಿಗಳು ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಪರಿಕರಗಳ ಲಭ್ಯತೆಯು ಸಹ  ಸ್ಕ್ಯಾಮರ್‌ಗಳು ಸೈಬರ್ ಕ್ರೈಮ್ ನಡೆಸಲು ಅನುಕೂಲವಾಯಿತು.

ಡಿಸೆಂಬರ್ 2023 ರಲ್ಲಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸಿಬಿಐ ಅಧಿಕಾರಿಗಳಂತೆ ನಟಿಸಿದ  ವಂಚಕರು ವ್ಯಕ್ತಿಯೊಬ್ಬರಿಗೆ  “ಡಿಜಿಟಲ್ ಗೃಹಬಂಧನ” ಬೆದರಿಕೆಯೊಡ್ಡಿದರು.  ಭಯಭೀತರಾದ ಆ ವ್ಯಕ್ತಿ  11 ಲಕ್ಷ ರೂಪಾಯಿಗೂ ಹೆಚ್ಚು ಹಣ ಕಳೆದುಕೊಂಡರು.  2024 ರ ಹೊತ್ತಿಗೆ, ಡಿಜಿಟಲ್ ಬಂಧನ ವಂಚನೆಗಳು ವ್ಯಾಪಕವಾಗಿ ಹರಡಿದವು.

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) 2024 ರಲ್ಲಿ ಸ್ವೀಕರಿಸಲಾದ  63,481 ದೂರುಗಳ ಅನ್ವಯ ಸುಮಾರು 1,616 ಕೋಟಿ ರೂಪಾಯಿ ವಂಚನೆಯಾಗಿದೆ.  ಸೆಪ್ಟೆಂಬರ್ 2024 ರಲ್ಲಿ ಸುಪ್ರೀಂ ಕೋರ್ಟ್ ಅಧಿಕಾರಿಗಳಂತೆ ನಟಿಸಿದ ವಂಚಕರು ಕೈಗಾರಿಕೋದ್ಯಮಿ ಓರ್ವರನ್ನು ಡಿಜಿಟಲ್ ಬಂಧನದಲ್ಲಿ ಇರಿಸಿದ ಆತಂಕವೊಡ್ಡಿ   6.9 ಕೋಟಿ ರೂ. ವಂಚಿಸಿದ್ದರು. ಮೀರತ್ ನ ನಿವೃತ್ತ ಬ್ಯಾಂಕರ್ ಒಬ್ಬರಿಗೆ  ಐದು ದಿನಗಳ ಕಾಲ “ಡಿಜಿಟಲ್ ಬಂಧನ”ದ ಬೆದರಿಕೆಯೊಡ್ಡಿ 1 ಕೋಟಿ ರೂಪಾಯಿ ವಂಚಿಸಿದ್ದರು.

ವಂಚನೆಗಳು ಸಾಮಾನ್ಯವಾಗಿ  ಸರಳ ಫೋನ್ ಕರೆಗಳಿಂದ ಹಿಡಿದು ನಕಲಿ ನ್ಯಾಯಾಲಯದ ವಿಚಾರಣೆಗಳು ಮತ್ತು ನಕಲಿ ದಾಖಲೆಗಳು ಸೇರಿದಂತೆ ವಿಸ್ತಾರವಾದ ಸೆಟಪ್‌ಗಳವರೆಗೆ ವಿಸ್ತರಿಸಲ್ಪಟ್ಟಿವೆ.  ಕಾರ್ಯಾಚರಣೆಗಳು ಹೆಚ್ಚಾಗಿ ಭಾರತ, ಆಗ್ನೇಯ ಏಷ್ಯಾ ಮತ್ತು ಪಾಕಿಸ್ತಾನದಲ್ಲಿನ ಕಾಲ್ ಸೆಂಟರ್‌ಗಳನ್ನು ಬಳಸಿ ನಡೆಯುತ್ತಿದೆ.

ಸಿಬಿಐ ಕಾರ್ಯಾಚರಣೆ

ಅಮಾಯಕರು ಡಿಜಿಟಲ್ ಆರೆಸ್ಟ್ ಬೆದರಿಕೆಗಳಿಂದ ಆತಂಕಿತರಾಗಿ ಹಣ ಕಳೆದುಕೊಳ್ಳುವುದು ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಸಂಘಟಿತ ಸೈಬರ್ ಅಪರಾಧ/ ಡಿಜಿಟಲ್ ಬಂಧನಗಳ ವಿರುದ್ಧ ಸಿಬಿಐ ಆಪರೇಷನ್ ಚಕ್ರ-ವಿ  ಕಾರ್ಯಾಚರಣೆ ಆರಂಭಿಸಿದೆ.

ಸಿಬಿಐ ಆಪರೇಷನ್ ಚಕ್ರ – ವಿ ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಇಂಥ ಸಂಘಟಿತ ಅಪರಾಧಗಳ ನಾಲ್ವರು ಕಿಂಗ್‌ಪಿನ್‌ಗಳನ್ನು ಬಂಧಿಸಿದೆ. ಸುಮಾರು 12 ಸ್ಥಳಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆಯ ನಂತರ ಈ ಬಂಧನಗಳು  ನಡೆದಿದೆ.  ಬಂಧಿತ ನಾಲ್ವರು ಆರೋಪಿಗಳಲ್ಲಿ ಇಬ್ಬರು  ಮುಂಬೈ ಮತ್ತು ಇಬ್ಬರು ಮೊರಾದಾಬಾದ್‌ನ ಮೂಲದವರಾಗಿದ್ದಾರೆ.

ಬಹುಮುಖಿ ವಿಧಾನ

ಡಿಜಿಟಲ್ ಬಂಧನ ಪ್ರಕರಣಗಳ ತನಿಖೆಯಲ್ಲಿ ಸಿಬಿಐ ತಂಡ,  ಬಹುಮುಖಿ ವಿಧಾನವನ್ನು ಅಳವಡಿಸಿಕೊಂಡಿದೆ.  ಅಂತಹ ಅಪರಾಧಗಳ ಹಿಂದಿನ ಮೂಲಸೌಕರ್ಯವನ್ನು ಕಿತ್ತು ಹಾಕುವುದರ ಬಗ್ಗೆ ವಿಶೇಷ ಒತ್ತು ನೀಡಿದೆ.

ರಾಜಸ್ಥಾನ ಸರ್ಕಾರದ ಕೋರಿಕೆಯ ಮೇರೆಗೆ ಸಿಬಿಐ, ಡಿಜಿಟಲ್ ಬಂಧನ ಪ್ರಕರಣಗಳ ತನಿಖೆ ಜವಾಬ್ದಾರಿ  ವಹಿಸಿಕೊಂಡಿದೆ. ಅಲ್ಲಿನ ಜುನ್ಜುನು ಸೈಬರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಬರ್ ಖದೀಮರು  ವಿವಿಧ ಕಾನೂನು ಜಾರಿ ಸಂಸ್ಥೆಗಳ ಸಿಬ್ಬಂದಿಯಂತೆ ನಟಿಸಿ ತಮ್ಮ ಗುರಿಯಾಗಿದ್ದ ವ್ಯಕ್ತಿಯನ್ನು  ಮೂರು ತಿಂಗಳಿಗೂ ಹೆಚ್ಚು ಕಾಲ ಡಿಜಿಟಲ್ ಬಂಧನದಲ್ಲಿಟ್ಟಿದ್ದರು. ಈ ಅವಧಿಯಲ್ಲಿ, ಆ ವ್ಯಕ್ತಿಯನ್ನು  42 ಬಾರಿ ಸುಲಿಗೆ ಮಾಡಲಾಗಿದ್ದು, ಒಟ್ಟು ₹7.67 ಕೋಟಿ ರೂಪಾಯಿ ಹಣ ಸುಲಿಗೆ  ಮಾಡಿದ್ದಾರೆ

ಪ್ರಕರಣವನ್ನು ವಹಿಸಿಕೊಂಡ ನಂತರ, ಸಿಬಿಐ ವ್ಯಾಪಕವಾದ ದತ್ತಾಂಶ ವಿಶ್ಲೇಷಣೆ ಮತ್ತು ಪ್ರೊಫೈಲಿಂಗ್ ಒಳಗೊಂಡ ಆಳವಾದ ತನಿಖೆಯನ್ನು ನಡೆಸಿತು. ಅಪರಾಧಿಗಳನ್ನು ಗುರುತಿಸಲು ಸುಧಾರಿತ ತನಿಖಾ ತಂತ್ರಗಳನ್ನು ಬಳಸಿತು. ತನಿಖೆಯ ಸಮಯದಲ್ಲಿ ದೊರೆತ ಸುಳಿವುಗಳ ಆಧಾರದ ಮೇಲೆ  ಉತ್ತರ ಪ್ರದೇಶದ ಮೊರಾದಾಬಾದ್ ಮತ್ತು ಸಂಭಾಲ್, ಮುಂಬೈ, ಜೈಪುರ ಮತ್ತು ಪಶ್ಚಿಮ ಬಂಗಾಳದ ಕೃಷ್ಣನಗರದ ಹನ್ನೆರಡು ಸ್ಥಳಗಳಲ್ಲಿ ವ್ಯಾಪಕ ಶೋಧ ನಡೆಸಿತು. ಇದರಿಂದಾಗಿ  ಸಂಘಟಿತ ಅಪರಾಧ ಸಿಂಡಿಕೇಟ್‌ನಲ್ಲಿ ಭಾಗಿಯಾಗಿರುವ ನಾಲ್ವರು ವ್ಯಕ್ತಿಗಳನ್ನು ಬಂಧಿಸಲು ಸಹಕಾರಿಯಾಗಿದೆ. ಈ ಕುರಿತ ಹೆಚ್ಚಿನ ತನಿಖೆಯನ್ನು ಸಿಬಿಐ ಆರಂಭಿಸಿದೆ.

ಹೆದರಬೇಡಿ

ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳು ಆನ್ ಲೈನ್ ಮುಖಾಂತರ ಅಥವಾ ನೇರವಾಗಿ ಬಂದು ನಿಮ್ಮನ್ನು ಬೆದರಿಸಿದರೆ ಹೆದರಬೇಡಿ. ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ / ಸೈಬರ್ ಪೊಲೀಸ್ ಠಾಣೆ ಸಂಪರ್ಕಿಸಿ. ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ  ಸಂಖ್ಯೆ 1930ಗೆ ತಕ್ಷಣ ಕರೆ ಮಾಡಿ ತಿಳಿಸಿ. ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ  ವೆಬ್‌ಸೈಟ್: www.cybercrime.gov.in ಮುಖಾಂತರವೂ ದೂರು ದಾಖಲಿಸಬಹುದು.

ಕರೆ ದಾಖಲೆಗಳು, ಸಂದೇಶಗಳು, ವಹಿವಾಟು ವಿವರಗಳು ಅಥವಾ ಸ್ಕ್ರೀನ್‌ಶಾಟ್‌ಗಳಂತಹ ವಿವರಗಳನ್ನು ಒದಗಿಸುವ ಮೂಲಕ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿ. ಕೆಲವು ದೂರುಗಳನ್ನು ಅನಾಮಧೇಯವಾಗಿ ಸಲ್ಲಿಸಲು ಸಹ ಲಭ್ಯವಿದೆ.

ಡಿಜಿಟಲ್ ಬಂಧನ ಹಗರಣಗಳಿಗೆ ಸಂಬಂಧಿಸಿದ ಹಣಕಾಸಿನ ವಂಚನೆಗಳು ಸೇರಿದಂತೆ ಸೈಬರ್ ಅಪರಾಧಗಳ ತಕ್ಷಣದ ವರದಿಗಾಗಿ ಟೋಲ್-ಫ್ರೀ ಸಂಖ್ಯೆ ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿ 1930 ಸಂಪರ್ಕಿಸಿದರೆ  ಹೆಚ್ಚಿನ ನಷ್ಟಗಳು ಸಂಭವಿಸದಂತೆ ತಡೆಯಲು ಸಹಾಯಕ.

ಒಂದುವೇಳೆ ಹೆದರಿಕೆಯಿಂದ ಹಣವನ್ನು ವರ್ಗಾಯಿಸಿದ್ದರೆ, ಖಾತೆಯನ್ನು ಸ್ಥಗಿತಗೊಳಿಸಲು ಅಥವಾ ವಹಿವಾಟುಗಳನ್ನು ಹಿಂಪಡೆಯುವಂತೆ ಮಾಡಲು  ತಕ್ಷಣ ನಿಮ್ಮ ಬ್ಯಾಂಕ್  ಅನ್ನು ಸಂಪರ್ಕಿಸಿಸುವುದು ಅಗತ್ಯ. ತನಿಖೆಗಳಿಗೆ ಸಹಾಯ ಮಾಡಲು ಕರೆ ದಾಖಲೆಗಳು, ಸಂದೇಶಗಳು, ಇಮೇಲ್‌ಗಳು ಅಥವಾ ವೀಡಿಯೊ ರೆಕಾರ್ಡಿಂಗ್‌ಗಳು ಸೇರಿದಂತೆ ಎಲ್ಲಾ ಪುರಾವೆಗಳನ್ನು ಸಂರಕ್ಷಿಸಿ.

Similar Posts

Leave a Reply

Your email address will not be published. Required fields are marked *