Site icon ಕುಮಾರರೈತ

ಸಮುದಾಯದ ತಲ್ಲಣಗಳ ನಡುವೆ

ಬೇರೆಬೇರೆ ಘಟನೆಗಳು, ದುರ್ಘಟನೆಗಳು, ಕಾನೂನುಗಳು, ಸ್ಥಿತ್ಯಂತರಗಳು ಸಾಮಾಜಿಕ ಪರಿಚಲನೆ ಮೇಲೆ ಪರಿಣಾಮಗಳನ್ನು ಬೀರುತ್ತಿರುತ್ತವೆ. ಇವುಗಳ ಬೆಳವಣಿಗೆ ತಕ್ಷಣವೇ ಗೋಚರಿಸಬಹುದು ಅಥವಾ ನಿಧಾನವಾಗಿ ಕಾಣಬಹುದು. ದೆಹಲಿಯ ಬಟ್ಲಾ ಹೌಸ್ ಎನ್ಕೌಂಟರ್ ದುರ್ಘಟನೆಯನ್ನು ಮುಂದಿರಿಸಿಕೊಳ್ಳುವ ಪತ್ರಕರ್ತ ನಿಯಾಜ್ ಫಾರುಕಿ; ತಮ್ಮ “ ಆ್ಯನ್ ಆರ್ಡಿನರಿ ಮ್ಯಾನ್ಸ್ ಗೈಡ್ ಟು ರ್ಯಾಡಿಕಾಲಿಸಂ ಗ್ರೋವಿಂಗ್ ಅಫ್ ಮುಸ್ಲೀಮ್ ಇನ್ ಇಂಡಿಯಾ ಕೃತಿಯಲ್ಲಿ ಬೇರೆಬೇರೆ ಸಂಗತಿಗಳನ್ನು ಮುಂದಿಡುತ್ತಾ, ವಿಶ್ಲೇಷಿಸುತ್ತಾ, ವಿವರಿಸುತ್ತಾ ಹೋಗುತ್ತಾರೆ.
ಈ ಪುಸ್ತಕವನ್ನು ಹಿರಿಯ ಪತ್ರಕರ್ತ ಡಿ. ಉಮಾಪತಿ ಅವರು “ಪದ ಕುಸಿಯೆ ನೆಲವಿಲ್ಲ” ಎಂಬ ಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ. ವ್ಯತಿರಿಕ್ತ ಆಶಯ ಬಿಂಬಿಸದೇ ಮೂಲಕ್ಕೆ ನಿಷ್ಠವಾದ ಶೀರ್ಷಿಕೆ ಕೊಟ್ಟ ಕಾರಣವನ್ನೂ ಆರಂಭದಲ್ಲಿಯೇ ನೀಡಿದ್ದಾರೆ. “ಮುಸಲ್ಮಾನರ ಪರಕೀಯತೆ, ಅವರನ್ನು ಅನ್ಯರನ್ನಾಗಿ ಬಗೆಯುತ್ತಾ ದೂರ ತಳ್ಳಿದ ದುಷ್ಟತನ ಹಾಗೂ ಇದೀಗ ಅವರ ಪೌರತ್ವವನ್ನೇ ಪ್ರಶ್ನಿಸುವ ಅಮಾನವೀಯತೆ ಎಲ್ಲವನ್ನೂ ಪ್ರತಿಬಿಂಬಿಸುತ್ತದೆ ಎಂದು ಭಾವಿಸಿ ಪದ ಕುಸಿಯೆ ನೆಲವಿಲ್ಲ ಎಂಬ ಶೀರ್ಷಿಕೆಯನ್ನು ಈ ಪುಸ್ತಕಕ್ಕೆ ನೀಡಲಾಗಿದೆ”
ಬಹುದೂರದ ಬಿಹಾರದ ಇಂದರ್ವಾಲ್ ಬೈರಾಮ್ ಗ್ರಾಮದಿಂದ 1097ರಲ್ಲಿ ದೆಹಲಿಗೆ ಬಂದಿಳಿಯುವ ಬಾಲಕ ನಿಯಾಝ್ ಫಾರುಕಿ ತನ್ನ ಕುತೂಹಲ “ಆಸ್ಥೆಯ ಕಣ್ಣುಗಳಿಂದ ಸುತ್ತಲಿನ ಬೆಳವಣಿಗೆಗಳನ್ನು ನಿರೂಕಿಸುತ್ತಾ ಹೋಗುತ್ತಾನೆ. ಮುಸ್ಲೀಮರೆ ಅತ್ಯಧಿಕವಾಗಿರುವ ಜಾಮಿಯಾ ನಗರದ ನಿವಾಸಿಯಾದ ಈತ ಯುವಕನಾದ ನಂತರವೂ ಈ ಸ್ವಭಾವದಲ್ಲೇನೂ ಬದಲಾವಣೆಯಾಗುವುದಿಲ್ಲ. ಸೆಪ್ಟೆಂಬರ್ 19, 2008ರಲ್ಲಿ ಜಾಮಿಯಾ ನಗರದ ಕಾಲೋನಿಯಾದ ಬಟ್ಲಾ ಹೌಸ್ ನಲ್ಲಿ ನಡೆದ ಎನ್ ಕೌಂಟರ್ ಆತನನ್ನು ಕಂಗೆಡಿಸುತ್ತದೆ. ಇದು ಬೇರೆಬೇರೆ ಸಂಗತಿಗಳತ್ತಲೂ ತೀವ್ರವಾಗಿ ಯೋಚಿಸುವಂತೆ ಮಾಡುತ್ತದೆ.

ನಿಯಾಝ್ ಫಾರುಕಿ, ಧಾರ್ಮಿಕ ಶ್ರದ್ಧೆಯುಳ್ಳ, ಸೂಫಿ ಪ್ರಭಾವ ದಟ್ಟವಾಗಿರುವ ಕುಟುಂಬದಿಂದ ಬಂದವರು. ಕೃತಿಯ ಆರಂಭದಲ್ಲಿಯೇ ತನ್ನ ಮನೆಯ ಪರಿಸ್ಥಿತಿ, ಸದಸ್ಯರ ಗುಣಗಳು ವಿಶೇಷವಾಗಿ ಅಜ್ಜ ಉಂಟು ಮಾಡಿದ ಪ್ರಭಾವದ ಬಗ್ಗೆ ಹೇಳುತ್ತಾರೆ. ಗ್ರಾಮದ ಭಿನ್ನ ಧಾರ್ಮಿಕ ಸಮುದಾಯಗಳಲ್ಲಿದ್ದ ಅನ್ಯೋನ್ಯತೆ ಬಗ್ಗೆ ವಿವರಿಸುತ್ತಾರೆ.. 1980ರ ದಶಕದ ಉತ್ತರಾರ್ಧದಲ್ಲ್ಲಿ ಜನಿಸಿರುವ ಇವರು ಬಾಲಕನಾಗಿದ್ದಾಗ ಕಂಡ ಆಚರಣೆಗಳು ವಿರಳವಾಗುವುದು, ಮುಸ್ಲೀಮ್ ಧಾರ್ಮಿಕ ದೃಷ್ಟಿಕೋನಗಳಲ್ಲಿ ಉಂಟಾಗುತ್ತಿರುವ ಬದಲಾವಣೆಗಳ ಬಗ್ಗೆಯೂ ತಿಳಿಸುತ್ತಾರೆ.
ಘೆಟ್ಟೋಕರಣ ( ಒಂದೇ ಪ್ರದೇಶದಲ್ಲಿ ನಿರ್ದಿಷ್ಟ ಧಾರ್ಮಿಕ ಸಮುದಾಯದವರು ಸಾಂದ್ರತೆಗೊಳ್ಳುತ್ತಾ ಹೋಗುವುದು) ತೀವ್ರವಾಗುತ್ತಿದೆ ಎಂದು ಹೇಳುವ ನಿಯಾಜ್ ಅದಕ್ಕಿರುವ ಕಾರಣಗಳನ್ನು ಮುಂದಿಡುತ್ತಾ ಹೋಗುತ್ತಾರೆ. ಜಾಮಿಯಾ ನಗರದಲ್ಲಿ ಮುಸ್ಲೀಮರೇ ಹೆಚ್ಚಾಗಿರುವ ಕಾರಣಗಳನ್ನೂ ತಿಳಿಸುತ್ತಾರೆ. ಭೂತ ಅಂದರೆ ಆಗಿ ಹೋದ ಘಟನೆಗಳು, ವರ್ತಮಾನದ ಸಂಗತಿಗಳು, ಭವಿಷ್ಯದ ಅನಿಶ್ಚತತೆಗಳ ನಡುವೆ ಮುಸ್ಲೀಮ್ ಸಮುದಾಯ ಹೊಯ್ದಾಡುತ್ತಿರುವ ಬಗ್ಗೆ ಕೃತಿ ವಿವೇಚಿಸುತ್ತದೆ.
ಸಮೂಹ ಮಾಧ್ಯಮಗಳು ಅದರಲ್ಲಿಯೂ ನ್ಯೂಸ್ ಚಾನೆಲ್ ಗಳು ಸ್ಪಷ್ಟ ಗ್ರಹಿಕೆ ಇ;ಲ್ಲದೇ ನೀಡುವ ವರದಿಗಳಿಂದ ಹೇಗೆ ಗೊಂದಲ ಸೃಷ್ಟಿಯಾಗುತ್ತದೆ. ತಪ್ಪು ಜನಾಭಿಪ್ರಾಯಕ್ಕೆ ಕಾರಣವಾಗುತ್ತದೆ ಎಂಬುದನ್ನು ಮುಲಾಜಿಲ್ಲದೇ ಹೇಳಲಾಗಿದೆ.
ಮತ್ತೆಮತ್ತೆ ಜಾಮಿಯಾ ನಗರದ ಬಟ್ಲಾ ಹೌಸ್ ನಲ್ಲಿ ಜರುಗಿಸದ ಎನ್ ಕೌಂಟರ್, ಅದು ಉಂಟು ಮಾಡಿದ ದೀರ್ಘಕಾಲಿನ ಪರಿಣಾಮಗಳು, ಆತಂಕಗೊಂಡವರು ಅಲ್ಲಿಂದ ಹಿಮ್ಮುಖ ವಲಸೆ ಆರಂಭಿಸಿದ ಬಗ್ಗೆ ಹೇಳಲಾಗಿದೆ. ಎನ್ ಕೌಂಟರ್ ನಡೆದ ಸ್ಥಳದ ಸನಿಹದಲ್ಲಿಯೇ ವಾಸಿಸುತ್ತಿದ್ದ ಲೇಖಕರು ಕೃತಿಯುದ್ದಕ್ಕೂ ಸ್ಥಳೀಯರು ಹೇಳುತ್ತಾರೆ- ತಿಳಿಸುತ್ತಾರೆ- ಅಭಿಪ್ರಾಯಡುತ್ತಾರೆ ಎಂಥಲೇ ಹೇಳುತ್ತಾ ಹೋಗುತ್ತಾರೆಯೇ ವಿನಃ ಎಲ್ಲವನ್ನೂ ಕ್ರೋಢೀಕರಿಸಿ ತಮ್ಮ ಸ್ವಂತ ಅಭಿಪ್ರಾಯ ಏನೆಂದು ತಿಳಿಸುವುದಿಲ್ಲ. ಪೊಲೀಸರು ನಡೆಸಿದ ಎನ್ ಕೌಂಟರ್ ಬಗ್ಗೆ ಖಚಿತವಾಗಿ ಏನೂ ಹೇಳುವುದಿಲ್ಲ. ಪತ್ರಕರ್ತರಾಗಿ ವೃತ್ತಿಜೀವನ ಆರಂಭಿಸಿದ ಮೇಲೆ ಬರೆದ ಕೃತಿಯಲ್ಲಿ ಇಂಥ ಒಂದು ಸ್ಪಷ್ಟತೆ ಇರಬೇಕಿತ್ತು.
ಬಟ್ಲಾ ಎನ್ ಕೌಂಟರ್ ನಡೆಯುವುದಕ್ಕೂ ಕೇವಲ ಕೆಲವೇ ದಿನಗಳ ಹಿಂದೆ ದೆಹಲಿಯಲ್ಲಿ ಜರುಗಿದ ಸರಣಿ ಸ್ಫೋಟಗಳಿಂದ 30ಕ್ಕೂ ಅಧಿಕ ಮಂದಿ ಮೃತರಾಗಿರುತ್ತಾರೆ. ಇದು ಮಹಾನಗರದಾದ್ಯಂತ ಭಾರಿ ತಲ್ಲಣವನ್ನೇ ಉಂಟು ಮಾಡುತ್ತಿರುತ್ತದೆ. ಎಲ್ಲ ಧಾರ್ಮಿಕ ಸಮುದಾಯಗಳವರು ಸಹಜವಾಗಿಯೇ ತತ್ತರಿಸಿರುತ್ತಾರೆ. ಇಂಥದೊಂದು ಭೀಕರ ಘಟನೆ ಬೆನ್ನ ಹಿಂದೆಯೇ ಪೊಲೀಸ್ ತನಿಖೆ ಆರಂಭವಾಗಿರುತ್ತದೆ. ಈ ಆಯಾಮಗಳ ಬಗ್ಗೆ ಪತ್ರಕರ್ತ ನಿಯಾಝ್ ವಿಶ್ಲೇಷಿಸುವುದಿಲ್ಲ.
90ರ ದಶಕದ ಜಾಗತೀಕರಣ – ಉದಾರಿಕರಣ ಆರ್ಥಿಕ ನಿಲುವುಗಳ ನಂತರ ಗ್ರಾಮೀಣ, ಪಟ್ಟಣ ಪ್ರದೇಶಗಳ ಜನ ಹೊಸ ಉದ್ಯೋಗಾವಕಾಶಗಳನ್ನು ಅರಸಿ ಮಹಾನಗರಗಳತ್ತ ಮುಖ ಮಾಡತೊಡಗಿತು. 2000ನೇ ಇಸ್ವಿ ನಂತರ ಇದು ಮತ್ತಷ್ಟೂ ಹೆಚ್ಚಾಯಿತು.ಮಹಾನಗರಗಳಿಗೆ ಹೋದವರು ಈಗಾಗಲೇ ಅಲ್ಲಿ ಬೀಡುಬಿಟ್ಟ ತಮ್ಮ ಸ್ವಧರ್ಮಿಯರು, ಊರಿನವರು ಇರುವ ಕಡೆಯೇ ವಸತಿ ಅರಸುವುದು ಸಾಮಾನ್ಯ ಸಂಗತಿ. ಇದರಿಂದ ಉಂಟಾಗುವ ಘೆಟ್ಟೋಕರಣ ಎಲ್ಲ ಧಾರ್ಮೀಕ ಸಮುದಾಯಗಳವರಿಂದಲೂ ನಡೆಯುತ್ತದೆ. ಆದರೆ ಇಂಥದ್ದೊಂದು ಕೋನದ ಬಗ್ಗೆಯೂ ಕೃತಿ ವಿಶ್ಲೇಷಣೆ ನಡೆಸದೇ ಇರುವುದು ಕೂಡ ಆಶ್ಚರ್ಯ ಉಂಟು ಮಾಡುತ್ತದೆ.
ವಿಷಯವನ್ನು ನಿರೂಪಿಸಲು ಭಿನ್ನ ತಂತ್ರಗಾರಿಕೆ ಬಳಸಲಾಗಿದೆ. ಹಿಂದು ಮುಂದಾಗಿ – ಮುಂದು ಹಿಂದಾಗಿ ಕೃತಿ ಚಲಿಸುತ್ತದೆ. ಮುಸ್ಲೀಮ್ ಸಮುದಾಯದ ಧಾರ್ಮಿಕ – ಸಾಮಾಜಿಕ ಪರಿಚಲನೆಗಳ ಬಗ್ಗೆಯೇ ಹೇಳುತ್ತಾ ಹೋಗುವಾಗ ದೈನಂದಿನ ಪತ್ರಿಕಾ ಭಾಷೆಯ ಶುಷ್ಕತೆ ಬಳಕೆಯಾಗಿಲ್ಲ. ಇದು ಗಮನಾರ್ಹ. ಅಚ್ಚರಿ ಮೂಡಿಸುವಷ್ಟರ ಮಟ್ಟಿಗೆ ಇದು ಕಾವ್ಯಮಯವಾಗಿದೆ. ಹಲವೊಮ್ಮೆ ವಿಷಾದ ಕಾವ್ಯ ಓದುತ್ತಿರುವುದರ ಅನುಭವವಾಗುತ್ತದೆ. ಕನ್ನಡ ಅನುವಾದ ಸಹ ಮೂಲಕೃತಿಯ ಗೇಯತೆ, ಸೂಕ್ಷ್ಮತೆಯನ್ನು ಉಳಿಸಿಕೊಂಡಿದೆ.

ಈ ಪುಸ್ತಕವನ್ನು ಶಿವಮೊಗ್ಗದ “ಅರ್ಹನಿಶಿ” ಪ್ರಕಟಿಸಿದೆ. ಕೃತಿಗಳಿಗಾಗಿ ಆಸಕ್ತರು ಈ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು: 9449174662

Exit mobile version