ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಸನಿಹದಲ್ಲಿ ಮೀಸಲು ಅರಣ್ಯವಿದೆ. ಇದು 1, 500 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿದೆ. ಇಲ್ಲಿನ ಸುಮಾರು 250 ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ 26,000 ಕ್ಕೂ ಹೆಚ್ಚು ಗಂಧದ ಮರಗಳಿವೆ. ಇವುಗಳನ್ನು ಕಾಡುಗಳ್ಳರಿಂದ ರಕ್ಷಿಸುವುದು ಅಷ್ಟು ಸುಲಭವಲ್ಲ. ಹಗಲಿರುಳು ಕಾವಲು ಕಾಯಬೇಕಾಗುತ್ತದೆ.
ಈ ಕಾರ್ಯಕ್ಕೆ ಅರಣ್ಯ ಇಲಾಖೆಯು ಮಾನವ ಸಿಬ್ಬಂದಿ ಜೊತೆಗೆ ತರಬೇತಾದ ನಾಯಿಗಳನ್ನು ಬಳಸಿಕೊಳ್ಳುತ್ತಿದೆ. ಇದರಿಂದ ಶ್ರೀಗಂಧ ಮರಗಳ ಕಳವು ಮತ್ತು ಕಳ್ಳ ಸಾಗಣೆ ಗಮನಾರ್ಹವಾಗಿ ತಗ್ಗಿದೆ. ಅರಣ್ಯಾಧಿಕಾರಿಗಳ ಪ್ರಕಾರ ಹಿಂದೆ ಒಂದು ವರ್ಷಕ್ಕೆ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣ ನಡೆಯುತ್ತಿದ್ದವು. ನಾಯಿ ಕಾವಲು ಬಳಿಕ ಅವುಗಳ ಸಂಖ‍್ಯೆ ಒಂದು ವರ್ಷಕ್ಕೆ 1 ಅಥವಾ 2 ಪ್ರಕರಣಗಳಿಗೆ ಇಳಿದಿದೆ.
ಇದನ್ನೂ ಓದಿ:ಬೇಲಿಯೇ ಎದ್ದು ಹೊಲ ಮೇಯ್ದರೆ ?
ಇದೊಂದು ಹೇಳಿಕೆಯಿಂದಲೇ ಅಮೂಲ್ಯ ಸಸ್ಯ , ವನ್ಯಪ್ರಾಣಿಗಳ ಸಂಪತ್ತು ಹೊಂದಿರುವ ಕಾಡುಗಳನ್ನು ಅತೀ ದಕ್ಷತೆಯಿಂದ ಕಾಯಲು ನಾಯಿಗಳು ಬಹು ಪ್ರಯೋಜನಕಾರಿ ಎನ್ನುವುದು ತಿಳಿಯುತ್ತದೆ. ತರಬೇತಾದ ನಾಯಿಗಳು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದರೆ ಇವು ಅರಣ್ಯ ಸಿಬ್ಬಂದಿಗೆ ನೆರವು ನೀಡುತ್ತಿವೆಯೋ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರಧಾನ ಪಾತ್ರ ವಹಿಸುತ್ತವೆ.
ಕಾಡು ಕಾಯಲು ನಾಯಿ ನೆರವು ಸಾಮಾನ್ಯ
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡು ಕಾಯಲು ತರಬೇತಾದ ನಾಯಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ವಿದೇಶಗಳಲ್ಲಿ ಕಾಯಲು ಮಾತ್ರವಲ್ಲದೇ ವನ್ಯ ಸಂಪತ್ತು ವರ್ಧನೆ ಕಾರ್ಯಕ್ಕೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಇದಕ್ಕೆ ಕಾರಣ ನಾಯಿಗಳಿಗಿರುವ ಅಸಾಧಾರಣ ಇಂದ್ರೀಯ ಸಾಮರ್ಥ್ಯ. ಈ ರೀತಿಯ ಸಾಮರ್ಥ್ಯ ಇರುವ ಮತ್ತೊಂದು ಜೀವಿ ಎಂದರೆ ಡಾಲ್ಫಿನ್ ! ಈಗಾಗಲೇ ಇವುಗಳನ್ನು ಸಾಗರದ ಕಾವಲಿಗೆ ಬಹು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ. ಈ ವಿಚಾರದಲ್ಲಿ ಭಾರತ ಹಿಂದಿದೆ.
ಇದನ್ನೂ ಓದಿ:ಮಾಹಿತಿದಾರರ ಮಾಹಿತಿಯನ್ನು ಬಹಿರಂಗಪಡಿಸುವುದು ನೈತಿಕತೆಯೇ
ಕಾಡು ಸಂರಕ್ಷಣೆಗೆ ಕಾಡುಗಳ್ಳರು ಹೇಗೆ ಅಪಾಯಕಾರಿಯೋ ಕೆಲವು ಬಗೆಯ ಕೀಟಗಳು ಸಹ ಅಪಾಯಕಾರಿ. ಸರಳವಾಗಿ ಹೇಳಬೇಕೆಂದರೆ ಕೆಲವು ವರ್ಷಗಳ ಹಿಂದೆ ಕರ್ನಾಟಕದ ಕಬ್ಬು ಬೆಳೆಗೆ ಬಿಳಿ ಉಣ್ಣೆ ಕೀಟಗಳು ಅಪಾಯಕಾರಿಯಾಗಿ ಪರಿಣಮಿಸಿದ್ದವು. ನೋಡುನೋಡುತ್ತಿದ್ದಂತೆ ಕಬ್ಬು ಬೆಳೆಯ ಪ್ರದೇಶವನ್ನಲ್ಲ ಆಕ್ರಮಿಸಿದ್ದವು. ಇದನ್ನು ನಿಯಂತ್ರಣಕ್ಕೆ ತರಲು ಕೃಷಿಕರು, ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳು ಪಟ್ಟ ಶ್ರಮ ಅಪಾರ. ಆರಂಭದಲ್ಲಿಯೇ ಅವುಗಳನ್ನು ಗುರುತಿಸಿದ್ದರೆ ನಿಯಂತ್ರಣ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳಲು ಸಾಧ್ಯವಿತ್ತು.
ಕಾಡಿನ ಸಸ್ಯಗಳನ್ನು ಅಪಾರವಾಗಿ ಬಾಧಿಸುವ ಕೀಟಗಳಿವೆ. ಉದಾಹರಣೆಗೆ ಸ್ಪ್ರೂಸ್ ಮತ್ತು ಪೈನ್ ಕಾಡುಗಳಲ್ಲಿ ಮಚ್ಚೆಯುಳ್ಳ ಲ್ಯಾಂಟರ್ನ್‌ಫ್ಲೈ ಅಥವಾ ಹೆಟೆರೊಬಾ ಸಿಡಿಯನ್‌ನಂತಹ ಶಿಲೀಂಧ್ರ ರೋಗಕಾರಕಗಳಂತಹ ಆಕ್ರಮಣಕಾರಿ ಕೀಟಗಳು. ಇವುಗಳ ಮೊಟ್ಟೆಯ ದ್ರವ್ಯರಾಶಿಗಳನ್ನು ತರಬೇತಾದ ನಾಯಿಗಳು ನಿಖರವಾಗಿ ಪತ್ತೆ ಹಚ್ಚುತ್ತವೆ.
ಇದನ್ನೂ ಓದಿ:ಹುಲಿಕಾಡಿನಲ್ಲಿ ಸಿನೆಮಾ ಶೂಟಿಂಗ್ ! ಅನುಮತಿ ಕೊಟ್ಟವರು ಯಾರು ?
ಅವುಗಳು ಎಲ್ಲೋ ಒಂದು ಮೂಲೆಯಲ್ಲಿ ತಮ್ಮ ಸಂತತಿ ವೃದ್ದಿಸಿಕೊಳ್ಳುತ್ತಿರುತ್ತವೆ. ಇಂಥವುಗಳನ್ನು ಮನುಷ್ಯರು ಪತ್ತೆ ಹಚ್ಚುವುದು ತುಸು ಕಷ್ಟ. ಆದರೆ ತರಬೇತಾದ ನಾಯಿಗಳು ಅಪಾಯಕಾರಿ ಕೀಟಗಳನ್ನು ಬಹು ಸುಲಭವಾಗಿ ಪತ್ತೆ ಹಚ್ಚಿ ತಮ್ಮದೇ ರೀತಿಯಲ್ಲಿ ಮಾಹಿತಿ ನೀಡುತ್ತವೆ. ಇದರಿಂದ ಕಾಡು ಸಂರಕ್ಷಿಸುವುದು ಸುಲಭವಾಗುತ್ತದೆ. ಕಾಡಿನ ಬೆಂಕಿ ಬಗ್ಗೆ ಸುಳಿವು, ವನ್ಯಪ್ರಾಣಿಗಳ ಕಳ್ಳಬೇಟೆ ತಪ್ಪಿಸುವುದು, ಕಾಡುಗಳ್ಳರು, ಬೇಟೆಗಾರರ ಬಂಧನ ಹೀಗೆ ಹಲವು ಹತ್ತು ಬಗೆಯಲ್ಲಿ ನೆರವು ನೀಡುತ್ತವೆ.
ದಾಖಲೀಕರಣ ಕಾರ್ಯ
ವಿದೇಶಗಳಲ್ಲಿ ಕಾಡು ಕಾಯಲು ನಿಯೋಜಿತವಾದ ನಾಯಿಗಳು ನೆರವು ನೀಡಿದ ಪ್ರತಿಯೊಂದು ಪ್ರಕರಣವನ್ನೂ ದಾಖಲೀಕರಣ ಮಾಡುತ್ತಾರೆ. ದಕ್ಷ ಅರಣ್ಯ ಸಿಬ್ಬಂದಿಗೆ ಪುರಸ್ಕಾರಗಳನ್ನು ನೀಡುವ ಹಾಗೆ ಅವುಗಳಿಗೂ ನೀಡುತ್ತಾರೆ. ಜಿಂಬಾಬ್ವೆಯಲ್ಲಿ ಶಿಂಗಾ ಎಂಬ ವಿಶೇಷ ಸಂರಕ್ಷಣಾ ನಾಯಿ 4.5 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರದಲ್ಲಿ ಅಡಗಿದ್ದ ಬೇಟೆಗಾರನನ್ನು ಪತ್ತೆಹಚ್ಚಿತು. ಇದರಿಂದ ಸಿಬ್ಬಂದಿ ಆತನನ್ನು ತ್ವರಿತವಾಗಿ ಬಂಧಿಸಲು ಸಾಧ್ಯವಾಯಿತು.
ಕಾಡಿನಲ್ಲಿ ಕಳೆದು ಹೋದವರನ್ನು ಪತ್ತೆ ಹಚ್ಚಲು ಸಹಾಯಕ
ದಟ್ಟವಾದ ಕಾಡಿನ ಒಳಹೊಕ್ಕರೆ ಸ್ಥಳೀಯರ ನೆರವು ಇಲ್ಲದೇ ಮತ್ತೆ ಸುರಕ್ಷಿತವಾಗಿ ಹಿಂದಿರುಗುವುದು ಕಷ್ಟಕರ. ಕುತೂಹಲದ ಕಾರಣದಿಂದಲೂ ಅಥವಾ ಟ್ರೆಕ್ಕಿಂಗ್ ಹೋದಾಗ ಗುಂಪಿನಿಂದ ಆಕಸ್ಮಿಕವಾಗಿ ಬೇರೆಯಾದವರೋ ದಿಕ್ಕು –ದೆಶೆಯಿಲ್ಲದೇ ಅಲೆಯುತ್ತಿರುತ್ತಾರೆ. ಜೊತೆಗೆ ಕೊಂಡೊಯ್ದಿದ್ದ ನೀರು, ಆಹಾರ ಬೇಗನೇ ಮುಗಿದು ಹೋಗಿರುತ್ತದೆ. ವನ್ಯಪ್ರಾಣಿಗಳಿಂದ ಅಪಾಯವಾಗುವ ಸಾಧ್ಯತೆ ಇರುತ್ತದೆ. ಕಾಡಿನಲ್ಲಿ ಮೊಬೈಲ್ ನೆಟ್ವರ್ಕ್ ಸಹ ಸಿಗುವುದಿಲ್ಲ. ಇಂಥ ಸಮಯಗಳಲ್ಲಿ ತರಬೇತಾದ ನಾಯಿಗಳು ತಪ್ಪಿಸಿಕೊಂಡ ವ್ಯಕ್ತಿಗಳ ಜಾಡನ್ನು ಬಹುಬೇಗ ಪತ್ತೆಹಚ್ಚಿ ಅವರನ್ನು ರಕ್ಷಿಸಲು ಸಹಾಯಕವಾಗುತ್ತವೆ.
ಮುಂದಿನ ಭಾಗದಲ್ಲಿ: ನಿರ್ದಿಷ್ಟ ವನ್ಯಪ್ರಾಣಿಗಳ ರಕ್ಷಣೆಯಲ್ಲಿ ನಾಯಿಗಳ ನೆರವು