Site icon ಕುಮಾರರೈತ

ಬ್ರಾಹ್ಮಣ ಕುರುಬ ; ಕಥೆಗಳೇ ಆಗಿರುವ ಪ್ರಬಂಧಗಳು !

ಕಥೆಗಳೇ ಬೇರೆ ಪ್ರಬಂಧಗಳೇ ಬೇರೆ. ಏಕೆಂದರೆ ಅವುಗಳನ್ನು ಕಟ್ಟುವ ರೀತಿಯಲ್ಲಿ ಭಿನ್ನತೆಯಿದೆ. “ಬ್ರಾಹ್ಮಣ ಕುರುಬ” ಸಂಕಲನದ  ಬರೆಹಗಳು ಮೌಲ್ಯಯುಕ್ತ ಕಥನಗಳಾಗಿವೆ. ಆದರೆ ಇದನ್ನು ಲೇಖಕ ನರಸಿಂಹಮೂರ್ತಿ ಪ್ಯಾಟಿ ಅವರು ಪ್ರಬಂಧಗಳೆಂದು ಕರೆದುಕೊಂಡಿದ್ದಾರೆ.

ತನ್ನ ಗೆಳೆಯ ಗುರುರಾಜನ ಚೇಷ್ಟೆಗಳನ್ನು ಪ್ಯಾಟಿ ಅವರು ಅನಾವರಣ ಮಾಡುವ ಕ್ರಮ ಎಷ್ಟು ಸೊಗಸಾಗಿದೆ ಎಂದರೆ ಪ್ಯಾರಾದಿಂದ ಪ್ಯಾರಕ್ಕೆ ನಮ್ಮ ಮುಖಭಾವಗಳು ಬದಲಾಗುತ್ತಾ ಹೋಗುತ್ತವೆ. ಒಮ್ಮೆ ಮುಖದ ತುಂಬ ನಗು, ಒಮ್ಮೆ ಸಿಟ್ಟು ಹೀಗೆ… ಹೀಗೇಕೆ ಎಂಬುದನ್ನು ಓದಿಯೇ ತಿಳಿಯಬೇಕು. ಆಗಷ್ಟೆ ಅದರ ಸೊಗಸು ಅರ್ಥವಾಗುತ್ತದೆ. ಈ ಕಾರಣ ನಾನು ಇಲ್ಲಿ ಅವುಗಳ ಹೆಚ್ಚಿನ ವಿವರಗಳ ಚರ್ಚೆಗೆ ಹೋಗುವುದಿಲ್ಲ.

ಈ ಸಂಕಲನದಲ್ಲಿ ಒಟ್ಟು ೧೨ ಅಧ್ಯಾಯಗಳಿವೆ. ಉಡಾಳ ಹುಡುಗನ ನಗೆಚಾಟಿಕೆ, ಬ್ರಾಹ್ಮಣ ಕುರುಬ, ಕಾಶೀಮನ ಗಂಗಾ, ಕಪಿ ಕಥನ, ಗನ್ನು ತಂದ ಫಜೀತಿ, ಏಮು, ವಿಪ್ರ ಸರ್ವೋತ್ತಮ, ಡಿಶ್‌ ಪುರಾಣ, ಸತ್ತವರ ಸಂಕಟ, ನಿಂಬೆಹುಳಿ, ಶೌಚಾಲಯ ಶುದ್ದಿ, ಕುಣಿ ಪ್ರೇಮ

ಪ್ರತಿಯೊಂದು ಅಧ್ಯಾಯವೂ ತನ್ನದೇ ಆದ ವಿಶಿಷ್ಟ ಕಾರಣಗಳಿಗೆ ಪ್ರಾಮುಖ್ಯತೆ ಪಡೆಯುತ್ತವೆ. ಕೃತಿಕಾರ ಪತ್ರಕರ್ತ, ವಾರಾಂತ್ಯ ಕೃಷಿಕ ಆಗಿರುವುದರಿಂದ ವೃತ್ತಿ ಪ್ರವೃತ್ತಿಯ ಅನುಭವಗಳು ಇಲ್ಲಿ ಕಥನಾಕಗಳಾಗಿ ಅರಳಿವೆ. ಇನ್ನೊಂದು ಪ್ರಮುಖ ವಿಷಯವೆಂದರೆ ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವನು ಎಂಬುದನ್ನು ಮುಚ್ಚಿಡದ ಕೃತಿಕಾರ ಅಲ್ಲಿ ಅತಿ ಎನಿಸುವ ಮಡಿ, ಸಂಪ್ರದಾಯ, ಧಾರ್ಮಿಕ ಕಟ್ಟುಕಟ್ಟಲೆಗಳು ಇರುವುದನ್ನು ಪರಿಪರಿಯಾಗಿ ತೆರೆದಿಡುತ್ತಾರೆ. ಇಂಥ ಕಟ್ಟಲೆಗಳ ಬಗ್ಗೆ ತಮಗಿರುವ ಅಸಹನೆಯನ್ನೂ ಅವರು ಮುಚ್ಚಿಟ್ಟಿಲ್ಲ. ವಿಪ್ರ ಸರ್ವೋತ್ತಮ, ಸತ್ತವರ ಸಂಕಟಗಳಲ್ಲಿ ಇದು ಒಡಮೂಡಿದೆ.

ಪಟ್ಟಣ, ನಗರ ಪ್ರದೇಶಗಳವರಿಗೆ ಇಂದಿಗೂ ಕೃಷಿಯೆಂದರೆ ರೋಮ್ಯಾಂಟಿಕ್‌ ಭಾವನೆಗಳವೆ. ನಗರದ ಉದ್ಯೋಗಗಳನ್ನು ಬಿಟ್ಟು ಹಸಿರೊಡಲಿನಲ್ಲಿ ಇದ್ದು ಬಿಡಬೇಕು ಎಂಬ ಭಾವನೆಗಳಿವೆ. ಹೀಗೆ ಇರುವುದು ತಪ್ಪೇನಲ್ಲ, ಆದರೆ ಅಲ್ಲಿನ ವಾಸ್ತವಗಳನ್ನು ಅರಿತು ಇಂಥ ಭಾವನೆ ಉಳಿಸಿಕೊಂಡರೆ ಅರ್ಥವಿರುತ್ತದೆ ಎಂಬುದನ್ನು ಇಲ್ಲಿನ ಕಥನಗಳು ಹೇಳುತ್ತವೆ.

ಇದಕ್ಕೆ ಬ್ರಾಹ್ಮಣ ಕುರುಬ, ಕಾಶೀಮನ ಗಂಗಾ, ಕಪಿ ಕಥನ ಉದಾಹರಣೆ. ಕುರಿ ಸಾಕಿದರೆ ಕೈ ತುಂಬ ಜಣಜಣ ಕಾಂಚಣ ಎಣಿಸಿಬಹುದು ಎಂದು ಅವರಿವರು ಹೇಳುವುದನ್ನು ಕೇಳಿ ಟಗರುಗಳನ್ನೇ ಸಾಕಲು ಹೊರಟ ಎನ್. ಎಂ. ಪ್ಯಾಟಿ ತಾನು ಅನುಭವಿಸಿದ ತೊಂದರೆಗಳನ್ನು ಕಟ್ಟಿಗೆ ಕಟ್ಟುವಂತೆ ವಿವರಿಸುತ್ತಾರೆ. ತಾನು ಅಂದುಕೊಂಡಿದಕ್ಕಿಂತ ವಾಸ್ತವ ಹೇಗೆ ಭಿನ್ನವಾಗಿರಬಹುದು ಎಂಬುದನ್ನು ವಿವರಿಸುತ್ತಾರೆ.

ಕಾಶೀಮನ ಗಂಗಾ ಕಥನದಲ್ಲಿ ಹಸು ಸಾಕಿ ಅನುಭವಿಸಿದ ಫಜೀತಿಗಳನ್ನು ಹೇಳುವ ಕೃತಿಕಾರ ಕಪಿ ಕಥನ:ದಲ್ಲಿ  ಮಂಗಗಳ ದೆಶೆಯಿಂದ ಕೃಷಿಕರು ಅನುಭವಿಸುವ ಕಷ್ಟನಷ್ಟಗಳನ್ನು ಮನಮುಟ್ಟುವ ಹಾಗೆ ವಿವರಿಸಿದ್ದಾರೆ.. ಪ್ರಾಯೋಗಿಕ ಅನುಭವಗಳ ವಿವರ ಹೊಂದಿಲ್ಲದ  ಪ್ರಚಾರಗಳ ಉತ್ತೇಜನದಿಂದ  , ಮಾರುಕಟ್ಟೆ ಬಗ್ಗೆ ಅಧ್ಯಯನ ಮಾಡದೇ ಹೊಸ ಸಾಹಸಕ್ಕೆ ಹೋದರೆ ಎಂಥಾ ನಷ್ಟಕಷ್ಟ ಅನುಭವಿಸಬೇಕಾಗುತ್ತದೆ ಎಂಬುದನ್ನು ಎಮು ಅಧ್ಯಾಯ ಸೊಗಸಾಗಿ ತೆರೆದಿಡುತ್ತದೆ.

ಗನ್ನು ತಂದ ಫಜೀತಿ,, ವಿಪ್ರ ಸರ್ವೋತ್ತಮ ಅಧ್ಯಾಯಗಳು ಪತ್ರಕರ್ತ ವೃತ್ತಿಜೀವನದ ಅನುಭಗಳನ್ನು ಹೊಂದಿದ್ದರೂ ಅವುಗಳನ್ನು  ಸಮಕಾಲೀನ ಸಂಗತಿಗಳ ಒಳನೋಟಗಳ ಜೊತೆಗೆ ಕನೆಕ್ಟ್‌ ಮಾಡಿರುವ ರೀತಿ ಅನನ್ಯ.

ಅನುಭವಗಳನ್ನು ನಿರೂಪಿಸಲು ಆರಂಭಿಸಿರುವ ರೀತಿ, ಅದನ್ನು ಮುಕ್ತಾಯಗೊಳಿಸುವ ಬಗೆಯೂ ಪ್ಯಾಟಿ ಅವರ ಕಥನ ಕಟ್ಟುವ ಸಾಮರ್ಥ್ಯಕ್ಕೆ ಸಾಕ್ಷಿ. ಇಂಥ ಕಥನಗಳನ್ನು ಕಟ್ಟುವುದನ್ನು ಅವರು ಮುಂದುವರಿಸುವ ಅಗತ್ಯವಿದೆ. ಶೌಚಾಲಯ ಶುದ್ದಿ ಅಧ್ಯಾಯವಂತೂ ಪ್ಯಾಟಿ ಅವರ ಕಥನ ಕಟ್ಟುವ ಕ್ರಮ, ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತದೆ.

ಕೃತಿ ಹೆಸರು: ಬ್ರಾಹ್ಮಣ ಕುರುಬ

ಪುಟಗಳು: ೧೦೮

ಬೆಲೆ: ರೂ. ೧೨೦

ಪ್ರಕಾಶಕರು: ಸಂಗಾತ ಪುಸ್ತಕ

Exit mobile version