ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ, ಅದರ ನಾಲ್ಕುಮರಿ ಒಟ್ಟು ಐದು ಹುಲಿಗಳ ಕಗ್ಗೊಲೆ ಸಾಧಾರಣ ವಿಷಯವಲ್ಲ. ಇದರಿಂದ ರಾಷ್ಟ್ರೀಯ, ಅಂತರಾಷ್ಟ್ರೀಯ ವಲಯಗಳಲ್ಲಿ ಕರ್ನಾಟಕದ ಅರಣ್ಯ ಇಲಾಖೆ ವಿಶೇಷವಾಗಿ ಕರ್ನಾಟಕ ಸರ್ಕಾರ ತೀವ್ರ  ಮುಜುಗರಕ್ಕೀಡಾಗಿದೆ. ಇದಲ್ಲದೇ ಕಳೆದ ಐದೂವರೆ ವರ್ಷಗಳಲ್ಲಿ ೮೨ ಹುಲಿಗಳು ಸಾವನ್ನಪ್ಪಿವೆ. ಇದರ ಬಗ್ಗೆ ವರದಿ ನೀಡುವಂತೆ ಕಾಡು, ಕಾಡು ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಕೇಳಿದ್ದಾರೆ. ವರದಿ ಬಂದ ನಂತರ ಎಷ್ಟು ಸಹಜ, ಎಷ್ಟು ಅಸಹಜ ಎನ್ನುವುದು ಗೊತ್ತಾಗುತ್ತದೆ.

ಬಹುಮುಖ್ಯವಾಗಿ ಎಂ.ಎಂ. ಹೀಲ್ಸ್‌ ಕಾಡಿನಲ್ಲಾದ ದುರ್ಘಟನೆ ಪರಿಸರಾಸಕ್ತರ ಗಮನವನ್ನು ಸೆಳೆದಿದೆ. ಜೂನ್‌ ೨೯ರಂದು ನಾನು, ಗೆಳಯರಾದ ಸಿದ್ದಪ್ಪ ಮಳವಳ್ಳಿ ಅವರು ಈ ವನ್ಯಧಾಮದ ವ್ಯಾಪ್ತಿಯಲ್ಲಿ ಬರುವ ಹನೂರು, ರಾಮಾಪುರ, ದಿನ್ನಳ್ಳಿ, ಕೊಪ್ಪ, ಮೀಣ್ಯಂ, ಮಾರಳ್ಳಿ,  ಹೂಗ್ಯಂನಲ್ಲಿ ಓಡಾಡಿದೆವು. ಆಗ ಕಂಡ ದೃಶ್ಯಗಳು ಆಘಾತಕಾರಿಯಾಗಿದ್ದವು.

ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ಮತ್ತು ಕರ್ನಾಟಕದ ಮಲೆ ಮಹದೇಶ್ವರ ವನ್ಯಜೀವಿಧಾಮ ಎರಡೂ ಅಕ್ಕಪಕ್ಕದಲ್ಲಿವೆ. ಕಾಡುಪ್ರಾಣಿಗಳು ಈ ಎರಡೂ ವಲಯದಲ್ಲಿಯೂ ಸಂಚರಿಸುತ್ತವೆ. ಆದರೆ ತಮಿಳುನಾಡು ಅರಣ್ಯದಲ್ಲಿ ಅವುಗಳಿಗೆ ಇರುವ ಸಂರಕ್ಷಣೆ ಕರ್ನಾಟಕದ ಕಾಡಿನಲ್ಲಿ ಇಲ್ಲ.

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕಗ್ಗೊಲೆಯಾದ ಹುಲಿಯ ಕಳೇಬರ

ಇದಕ್ಕೆ ಬಹುಮುಖ್ಯ ನಿದರ್ಶನ ಸಾವಿರಾರು ಸಂಖ್ಯೆಯಲ್ಲಿ ದನಗಳು, ಮೇಕೆಗಳು, ನಾಡ ಎಮ್ಮೆಗಳು ಕರ್ನಾಟಕದ ಅರಣ್ಯದೊಳಗೆ ಮೇಯುತ್ತವೆ. ಎಮ್ಮೆಗಳಂತೂ ಅರಣ್ಯದೊಳಗೆ ಇದ್ದೂ ಇದ್ದೂ ಸ್ವಭಾವವನ್ನೇ ಬದಲಿಸಿಕೊಂಡಿವೆ. ಯಾರಾದರೂ ಅವುಗಳ ಎದುರಿಗೆ ಹೋದರೆ ತೀವಿಯಲು ಬರುತ್ತವೆ. ಇಲ್ಲಿ ಮೇಯುವ ಎಲ್ಲ ಬಗೆಯ ಜಾನುವಾರುಗಳಲ್ಲಿ ಶೇಕಡ ೦೫ರಷ್ಟು ಕರ್ನಾಟಕದವುಗಳಲ್ಲ. ಶೇಕಡ ೯೫ರಷ್ಟು ಜಾನುವಾರುಗಳು ನೆರೆಯ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುತ್ತವೆ.

ಅರೇ ಆ ಜಾನುವಾರುಗಳೇಕೆ ಕರ್ನಾಟಕದ ಅರಣ್ಯದೊಳಗೆ ಬರಬೇಕು, ತಮಿಳುನಾಡಿನಲ್ಲಿಯೇ ಸತ್ಯಮಂಗಲ ಕಾಡಿದೆಯಲ್ಲ ಎಂಬ ಪ್ರಶ್ನೆ ನಿಮಗೆ ಎದುರಾಗಬಹುದು ! ಈ ಪ್ರಶ್ನೆಗೆ ಉತ್ತರವೇನೆಂದರೆ ತಮಿಳುನಾಡು ಅರಣ್ಯ ಇಲಾಖೆ ಈ ಜಾನುವಾರುಗಳು ಅಲ್ಲಿನ ಕಾಡುಗಳ ಒಳಗೆ ಬರಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಅಪ್ಪಿತಪ್ಪಿ ಕಾಡೊಳಗೆ ಪ್ರವೇಶವಾದರೆ ಜಾನುವಾರು ಮಾಲೀಕನ ಮೇಲೆ ಮೊಕದ್ದಮೆ ಹೂಡುವಿಕೆ, ಶಿಕ್ಷೆ, ದಂಡ ಕಟ್ಟಿಟ್ಟದ್ದು. ಅಲ್ಲಿನ ಸ್ಥಳೀಯ ರಾಜಕಾರಣಿಗಳು ಸಹ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಆದ್ದರಿಂದಲೇ ತಮಿಳುನಾಡಿನ ಸತ್ಯಮಂಗಲದ ಕಾಡು, ಕರ್ನಾಟಕದ ಮಲೆ ಮಹದೇಶ್ವರ ವನ್ಯಜೀವಿಧಾಮದ ಕಾಡಿಗಿಂತಲೂ ಸಮೃದ್ಧವಾಗಿದೆ.

ಸತ್ಯಮಂಗಲ ಕಾಡನ್ನು ಹುಲಿ ಸಂರಕ್ಷಿತಾರಣ್ಯ ಎಂದು ಘೋಷಿಸಿರುವುದರಿಂದ ಅಲ್ಲಿಗೆ ನಾಡಿನ ಜಾನುವಾರುಗಳಿಗೆ ಪ್ರವೇಶ ನೀಡುತ್ತಿಲ್ಲ ಎಂದು ನೀವು ಊಹಿಸಿದ್ದರೆ ಅದು ತಪ್ಪು. ತಮಿಳುನಾಡಿನಲ್ಲಿ ಹುಲಿ ಸಂರಕ್ಷಿತ ಪ್ರದೇಶವಿರಲಿ, ಅಭಯಾರಣ್ಯವಿರಲಿ, ವನ್ಯಜೀವಿಧಾಮವಿರಲಿ ಅಥವಾ ಸಾಧಾರಣ ಕಾಡಿರಲಿ ಯಾವುದೇ ಬಗೆಯ ಕಾಡುಗಳ ಒಳಗೂ ಜಾನುವಾರುಗಳಿಗೆ ಪ್ರವೇಶ ನೀಡುವುದಿಲ್ಲ !!

ಮದ್ರಾಸ್ ಹೈಕೋರ್ಟ್‌ನ ತೀರ್ಪುಗಳು ಮತ್ತು ತಮಿಳುನಾಡು ಅರಣ್ಯ ಕಾಯ್ದೆ, 1882 ಮತ್ತು ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಅಡಿಯಲ್ಲಿನ ನಿಬಂಧನೆಗಳ ಪ್ರಕಾರ, ತಮಿಳುನಾಡು ಅರಣ್ಯ ಇಲಾಖೆಯು ಮೀಸಲು ಕಾಡುಗಳು, ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಅಥವಾ ಹುಲಿ ಮೀಸಲು ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಲು ಅನುಮತಿಸುವುದಿಲ್ಲ.

ಮಾರ್ಚ್ 2022 ರಲ್ಲಿ, ಮದ್ರಾಸ್ ಹೈಕೋರ್ಟ್ ತಮಿಳುನಾಡಿನ ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಹುಲಿ ಮೀಸಲು ಪ್ರದೇಶಗಳಲ್ಲಿ ಸಾಕುಪ್ರಾಣಿ ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸಿತು, ಇದು ಸರಿಸುಮಾರು 8,101.79 ಚದರ ಕಿ.ಮೀ (ರಾಜ್ಯದ ಒಟ್ಟು ಪ್ರದೇಶದ 6.23% ಮತ್ತು ಅದರ ಅರಣ್ಯ ಪ್ರದೇಶದ 35.42%) ಅನ್ನು ಒಳಗೊಂಡಿದೆ. 2020 ರಲ್ಲಿ ಜಿ. ತಿರುಮುರುಗನ್ ಎಂಬುವರು ಹೂಡಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಗೆ ಪ್ರತಿಕ್ರಿಯೆಯಾಗಿ ಈ ಆದೇಶ ನೀಡಲಾಗಿದೆ. ಆರಂಭದಲ್ಲಿ ಮೇಗಮಲೈ ವನ್ಯಜೀವಿ ಅಭಯಾರಣ್ಯವನ್ನು ಗುರಿಯಾಗಿಸಿಕೊಂಡಿದ್ದರೂ ನಂತರ ಎಲ್ಲಾ ಸಂರಕ್ಷಿತ ಅರಣ್ಯ ಪ್ರದೇಶಗಳಿಗೂ ಪ್ರದೇಶಗಳಿಗೆ ವಿಸ್ತರಿಸಲಾಯಿತು.

ಈ ನಂತರ ನ್ಯಾಯಾಲಯವು ತನ್ನ ಆದೇಶವನ್ನು ಮಾರ್ಪಡಿಸಿತು. ಈ ಸಂರಕ್ಷಿತ ಪ್ರದೇಶಗಳ ಹೊರಗಿನ ಮೀಸಲು ಕಾಡುಗಳಲ್ಲಿ ಜಾನುವಾರುಗಳು ಮೇಯಲು ಅವಕಾಶ ನೀಡಿತು. ಆದರೆ  ಇದಕ್ಕೆ ತಮಿಳುನಾಡು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು.

ತಮಿಳುನಾಡು ಅರಣ್ಯ ಕಾಯ್ದೆ, 1882 ರ ಸೆಕ್ಷನ್ 21, ಅನುಮತಿಯಿಲ್ಲದೆ ಮೀಸಲು ಕಾಡುಗಳಲ್ಲಿ ಅತಿಕ್ರಮಣ ಅಥವಾ ಜಾನುವಾರುಗಳನ್ನು ಮೇಯಿಸುವುದನ್ನು ನಿಷೇಧಿಸುತ್ತದೆ, ಒಂದು ವೇಳೆ ನಿಯಮ ಉಲ್ಲಂಘಿಸಿದರೆ  ಅರಣ್ಯ ಹಾನಿಗೆ ಪರಿಹಾರದ ವಸೂಲು ಜೊತೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾದ ಅಪರಾಧಗಳೆಂದು ವರ್ಗೀಕರಿಸುತ್ತದೆ.

ತಮಿಳುನಾಡು ಅರಣ್ಯ ಇಲಾಖೆಯು ಕೆಲವು ಮೀಸಲು ಅರಣ್ಯ ಪ್ರದೇಶಗಳಲ್ಲಿ ಜಾನುವಾರುಗಳನ್ನು ಮೇಯಿಸಲು ಪರವಾನಗಿಗಳನ್ನು ನೀಡಲು ಅನುಮತಿ ನೀಡುತ್ತದೆ. ಆದರೆ ಇದು ವನ್ಯಜೀವಿಗಳು ಮತ್ತು ಅರಣ್ಯ ಸಂರಕ್ಷಣೆಯ ಹಿತಾಸಕ್ತಿಗಳನ್ನು ಪರಿಗಣಿಸುವ ನಿಯಮಗಳಿಗೆ ಒಳಪಟ್ಟಿರುತ್ತದೆ. ಅಂದರೆ ಅನುಮತಿ ಕೊಡಲೇಬೇಕೆಂಬುದು ಕಡ್ಡಾಯವಲ್ಲ.  ತಮಿಳುನಾಡು ಅರಣ್ಯ ಕಾಯ್ದೆ, 1882 ರ ಸೆಕ್ಷನ್ ಸೆಕ್ಷನ್ 26 ಸರ್ಕಾರಕ್ಕೆ ಜಾನುವಾರು ಮೇಯಿಸುವಿಕೆಯನ್ನು ನಿಯಂತ್ರಿಸಲು ಅಥವಾ ನಿಷೇಧಿಸಲು ಮತ್ತು ಅಂತಹ ಚಟುವಟಿಕೆಗಳಿಗೆ ಶುಲ್ಕ ಅಥವಾ ಷರತ್ತುಗಳನ್ನು ಸೂಚಿಸಲು ಅಧಿಕಾರ ನೀಡುತ್ತದೆ.

ಕಲಕ್ಕಾಡ್-ಮುಂಡಂತುರೈ ಹುಲಿ ಮೀಸಲು ಪ್ರದೇಶದಲ್ಲಿ (ಕೆಎಂಟಿಆರ್) ಜನವರಿ 20, 2025 ರಿಂದ ಜಾನುವಾರು ಸಾಕಣೆ ಮತ್ತು ಮೇಯಿಸುವಿಕೆಯ ಮೇಲೆ ನಿಷೇಧವನ್ನು ಜಾರಿಗೊಳಿಸಲಾಯಿತು, ನಿಯಮ ಉಲ್ಲಂಘಿಸಿದರೆ ಜಾನುವಾರು ವಶಪಡಿಸಿಕೊಳ್ಳುವ ಎಚ್ಚರಿಕೆಗಳನ್ನು ನೀಡಲಾಗಿದೆ.

ಹರಡುವ ರೋಗಗಳು

ನಾಡಿನ ಜಾನುವಾರುಗಳಿಗೆ ಸಾಮಾನ್ಯವಾಗಿ ಕಾಲು ಮತ್ತು ಬಾಯಿ ರೋಗದಂಥ ಸಾಂಕ್ರಾಮಿಕ ರೋಗಗಳಿರುತ್ತವೆ. ಇದಲ್ಲದೇ ತೀವ್ರವಾಗಿ ಬಾಧಿಸುವ ಉಣ್ಣೆ ಸಮಸ್ಯೆಗಳಿರುತ್ತವೆ. ಈ ಜಾನುವಾರುಗಳಿಂದ ಕಾಡಿನ ವನ್ಯಜೀವಿಗಳಿಗೂ ರೋಗ ಹರಡುವ ಸಾಧ್ಯತೆ ಇರುತ್ತದೆ.

ಇದರ ಜೊತೆಗೆ ಇನ್ನೂ ಪ್ರಮುಖವಾದ ಸಮಸ್ಯೆಯೆಂದರೆ ಆನೆ, ಜಿಂಕೆ, ಕಡವೆ, ಮೊಲ ಇತ್ಯಾದಿ ಸಸ್ಯಹಾರಿ ಕಾಡುಪ್ರಾಣಿಗಳಿಗೆ ಮೇವಿನ ಲಭ್ಯತೆಯೂ ಕಡಿಮೆಯಾಗುತ್ತದೆ. ಆಗ ಅವುಗಳು ಕಾಡಂಚಿನ ಹೊಲಗದ್ದೆಗಳತ್ತ ನುಗ್ಗುತ್ತವೆ. ಇದರಿಂದ ಮಾನವ-ವನ್ಯಪ್ರಾಣಿ ಸಂಘರ್ಷ ಉಂಟಾಗುತ್ತದೆ.

ಇದಲದೇ ಕಾಡಿನಲ್ಲಿ ನಿರಂತರವಾಗಿ ಸಂಚರಿಸುವ ದನಗಾಹಿಗಳು ತಮ್ಮ ಆಹಾರ ಬೇಯಿಸಿಕೊಳ್ಳಲು ಸೌದೆ ಒಲೆ ಹೂಡಿದಾಗ ಆಕಸ್ಮಿಕವಾಗಿ ಅದರ ಬೆಂಕಿ ಹರಡುವ ಸಾಧ್ಯತೆಯೂ ಇರುತ್ತದೆ. ಗಾಳಿ ತೀವ್ರವಾಗಿ ಬೀಸುವ ಕಾಲದಲ್ಲಿ ಕಾಡ್ಗಿಚ್ಚನ್ನು ಹತೋಟಿಗೆ ತರಲು ಸಾಧ್ಯವಾಗುವುದಿಲ್ಲ.

ಈ ಎಲ್ಲ ಕಾರಣಗಳಿಂದ ತಮಿಳುನಾಡಿನ ಎಲ್ಲ ಬಗೆಯ ಅರಣ್ಯಗಳಲ್ಲಿ ಜಾನುವಾರುಗಳಿಗೆ ಪ್ರವೇಶವಿಲ್ಲ. ಆದರೆ  ಹುಲಿ ಸಂರಕ್ಷಿತ ಅರಣ್ಯ ಹೊರತು ಪಡಿಸಿ ಸಾಮಾನ್ಯ ಕಾಡುಗಳಲ್ಲಿ ಒಂದೆರಡು ಕಡೆ ಭಫರ್‌ ವಲಯಗಳಲ್ಲಿ ಅಂದರೆ ಕೋರ್‌ ಪ್ರದೇಶಗಳಿಂದ ೧ ಕಿಲೋ ಮೀಟರ್‌ ಅಂತರದಲ್ಲಿ ಹಸುಗಳನ್ನು, ಕುರಿಗಳನ್ನು ಮೇಯಿಸಲು ಮಾತ್ರ ಅನುಮತಿ ನೀಡುತ್ತಾರೆ. ಆದರೆ ಇಲ್ಲಿಯೂ ಯಾವುದೇ ಕಾರಣಕ್ಕೂ ಮೇಕೆಗಳನ್ನು ಮೇಯಿಸಲು ಅವಕಾಶ ನೀಡುವುದಿಲ್ಲ !! ಇನ್ನೊಂದು ಗಮನಾರ್ಹ ಅಂಶ ಎಂದರೆ ಬಫರ್‌ ಜೋನ್‌ ನಲ್ಲಿ ಮೇಯಿಸಲು ಸಹ ದನ, ಕುರಿ ಸಾಕಣೆದಾರರಿಂದ ಅಧಿಕೃತವಾಗಿ ಶುಲ್ಕ ವಸೂಲಿ ಮಾಡಲಾಗುತ್ತದೆ.

ಧರ್ಮಪುರಿ (ಪಿಕ್ಲಿ ಪಂಚಾಯತ್) ಮತ್ತು ವೆಲ್ಲಂಕುಳಿಯಂತಹ ಪ್ರದೇಶಗಳಲ್ಲಿನ ರೈತರು ಮೀಸಲು ಕಾಡುಗಳಲ್ಲಿ ಮೇಯಿಸುವ ಅನುಮತಿಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ.  ಐತಿಹಾಸಿಕ ಪದ್ಧತಿಗಳು ಮತ್ತು ಜೀವನೋಪಾಯಕ್ಕಾಗಿ ಜಾನುವಾರು ಸಾಕಣೆಯ ಮೇಲಿನ ಅವಲಂಬನೆಯನ್ನು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೆರಡು ಕಡೆ ಬಫರ್‌ ಜೋನ್‌ ನಲ್ಲಿ ಮೇಕೆ ಹೊರತು ಪಡಿಸಿ ಅವಕಾಶ ನೀಡಲಾಗಿದೆ.

ಕರ್ನಾಟಕದಲ್ಲಿ ಹುಲಿ ಸಂರಕ್ಷಿತ ಪ್ರದೇಶ ಬಿಟ್ಟು ಉಳಿದ ಎಲ್ಲ ಬಗೆಯ ಕಾಡುಗಳಲ್ಲಿಯೂ ದನಗಳು, ಎಮ್ಮೆಗಳು, ಕುರಿಗಳು, ಮೇಕೆಗಳನ್ನು ನಿರಾತಂಕವಾಗಿ ಮೇಯಿಸಲು ಬಿಡುತ್ತಾರೆ. ಇವುಗಳಿಂದ ಕಾಡಿನ ಪ್ರಾಣಿಗಳಿಗೆ ರೋಗ ಹರಡಬಹುದು ಎಂಬ ಚಿಂತೆಯನ್ನೂ ಮಾಡುವುದಿಲ್ಲ.

ಕರ್ನಾಟಕದಲ್ಲಿ ಅರಣ್ಯ ಇಲಾಖೆಯು ನಾಡಿನ ಜಾನುವಾರುಗಳಿಗೆ ಕಾಡಿನಲ್ಲಿ ಮೇಯಲು ರೀತಿಯ ಅವಕಾಶ ಕೊಟ್ಟಿದ್ದರಿಂದಲೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಅಮೂಲ್ಯ ಜೀವಗಳು ಬಲಿಯಾಗಿವೆ. ಇದು ನಾಚಿಕೆಗೇಡಿನ ಸಂಗತಿ.

Similar Posts

Leave a Reply

Your email address will not be published. Required fields are marked *