ಮೈಸೂರಿನ ಜಯದೇವ ಆಸ್ಪತ್ರೆಯ ಎರಡನೇ ಮಹಡಿಯ ಐಸಿಯು (Intensive care unit) ೪ಗೆ ಕಾಲಿರಿಸಿದಾಗ ನನ್ನ ತಾಯಿಯ ಬೆಡ್ ಪಕ್ಕದಲ್ಲೇ ಇದ್ದ ವ್ಯಕ್ತಿ ನೋವಿನ ಮುಖಭಾವ ಹೊಂದಿದ್ದರೂ ಮುಗುಳ್ನಕ್ಕರು. ಓಡಾಡುವ ಸ್ಥಿತಿಯಲ್ಲಿರಲಿಲ್ಲ. ಪ್ರತಿಯಾಗಿ ನಾನು ಮುಗುಳ್ನಕ್ಕೆ ! ಅವರು ಪಿರಿಯಾಪಟ್ಟಣದವರು. ಅವರಿಗೆ ಒಂದಲ್ಲ ಎರಡಲ್ಲ ಮೂರು ಸ್ಟಂಟ್ ಅಳವಡಿಸಿದ್ದಾರೆ. ಅವರ ಬಲ ಕೈಗೆ ದಪ್ಪನೆಯ ಬ್ಯಾಂಡೇಜ್ ಸುತ್ತಿದ್ದರು. ಕೈ ಮೂಲಕ ಪ್ಲೂಯಿಡ್ ಸರಬರಾಜಾಗುತ್ತಿತ್ತು. ಎದ್ದು ಓಡಾಡುವ ಸ್ಥಿತಿಯಲ್ಲಿ‌ ಇರಲಿಲ್ಲ.

ಹೃದ್ರೋಗಿಗಳನ್ನು ಐಸಿಯುಗೆ ಶಿಫ್ಟ್ ಮಾಡಿದಾಗ ಡಾಕ್ಟರ್ ಹೇಳುವ ತನಕ ಎದ್ದು ಓಡಾಡಬಾರದು. ಅವರು ಐಸಿಯು ಘಟಕದಲ್ಲಿದ್ದ ಸಿಸ್ಟರ್, ಬ್ರದರ್ (ಪುರುಷ ನರ್ಸ್) ಗೆ “ಮಲಮೂತ್ರ ವಿಸರ್ಜನೆ ಒತ್ತಡ ಉಂಟಾಗುತ್ತಿದೆ. ಡೈಪರ್ ಕೊಡಿ” ಎಂದರು. “2 ನಿಮಿಷ ಇರಿ, ಡೈಪರ್ ಹಾಕುವವರು ಬರ್ತಾರೆ”ಎಂಬ ಪ್ರತಿಕ್ರಿಯೆ ಬಂತು. ಎರಡು ನಿಮಿಷವಿರಲಿ 45 ನಿಮಿಷ ಕಳೆದರೂ ಬರಲಿಲ್ಲ ! ಇಷ್ಟರಲ್ಲಿ ಹೃದ್ರೋಗಿ ಸುಮಾರು ಹತ್ತು ಸಲ “ಡೈಪರ್ ಹಾಕಿ ಹಾಕಿ ‘ಎಂದರು.

ನರ್ಸ್ ಎರಡು ಬಾರಿ ಪುರುಷ ಆಯಾಗೆ ಪೋನ್ ಮಾಡಿದ್ದರು. ಐಸಿಯುನಲ್ಲಿದ್ದ ಬ್ರದರ್ ಡೈಪರ್ ಹಾಕುವ ಕೆಲಸ ಮಾಡಬಹುದಿತ್ತು. ತುರ್ತು ಸಮಯದಲ್ಲಿ ಸಹಾಯಕ್ಕೆ ಧಾವಿಸದೇ ಇದ್ದರೆ ನರ್ಸಿಂಗ್ ಕಲಿತು ಪ್ರಯೋಜನವಾದರೂ ಏನು ? ಮುಕ್ಕಾಲು ತಾಸು ಕಳೆದ ನಂತರ ಡೈಪರ್ ಹಾಕುವ ವ್ಯಕ್ತಿ ನಿಧಾನವಾಗಿ ವಾಕ್ ಮಾಡುವವರಂತೆ ಆರಾಮವಾಗಿ ಬಂದರು. ತಡವಾಗಿದ್ದಕ್ಕೆ ಕ್ಷಮಿಸಿ ಎಂದು ಕೇಳುವ ಉಸಾಬರಿಗೆ ಹೋಗಲಿಲ್ಲ.  ಸ್ಕ್ರೀನ್ ಎಳೆದು ಡೈಪರ್ ಬದಲಿಸಿದರು.

ಓರ್ವ ಸಿಬ್ಬಂದಿ ಸಕಾಲದಲ್ಲಿ ಬರಲಿಲ್ಲ ಎಂದರೆ ಅದಕ್ಕೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಆಗಬೇಕು. ಏಕೆಂದರೆ ಮಲಮೂತ್ರ ವಿಸರ್ಜನೆಯ ಒತ್ತಡವನ್ನು ಸಂಪೂರ್ಣವಾಗಿ ಆರೋಗ್ಯವಾಗಿರುವವರೇ ತಡೆಯಲು ಸಾಧ್ಯವಿಲ್ಲ ! ಇನ್ನು ರೋಗಿಗಳು ಹೇಗೆ ತಡೆಯಲು ಸಾಧ್ಯವೇ ? ಒಂದು ವೇಳೆ ಬಟ್ಟೆಗೆ ಮೂಲ ಮೂತ್ರ ವಿಸರ್ಜನೆ ಮಾಡಿಕೊಂಡರೆ ಅವರಿಗೂ ಕಸಿವಿಸಿ ! ಅಕ್ಕಪಕ್ಕದವರಿಗೂ ದುರ್ವಾಸನೆ ಉಂಟಾಗುತ್ತದೆ‌ ಅದರಲ್ಲೂ ಏರ್ ಕಂಡೀಷನರ್ ಇರುವ ಐಸಿಯುನಲ್ಲಿ ವಾಸನೆ ಬೇಗ ಹರಡುತ್ತದೆ. ಹೃದ್ರೋಗಿಗಳು ಮಲಮೂತ್ರ ವಿಸರ್ಜನೆಯ ಒತ್ತಡ ತಡೆಯುವುದು ಸಹ ಅವರ ಆರೋಗ್ಯ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತದೆ.

ವಾರ್ಡಿನಿಂದ ಕ್ಯಾಥ್‌ ಲ್ಯಾಬಿ (ಹೃದ್ರೋಗಗಳಿಗೆ ಸಂಬಂಧಿಸಿದ ಚಿಕಿತ್ಸಾ ವಿಭಾಗ) ಗೆ ಶಿಫ್ಟ್‌ ಮಾಡುವ ಮುನ್ನವೇ ಹೃದ್ರೋಗಿಯು ಮಲಮೂತ್ರ ವಿಸರ್ಜನೆ ಒತ್ತಡ ಇದ್ದರೆ ನಿವಾರಿಸಿಕೊಳ್ಳುವಂತೆ ನರ್ಸಿಂಗ್‌ ಆಫೀಸರ್‌ ಹೇಳಬೇಕು. ಕ್ಯಾಥ್‌ ಲ್ಯಾಬಿಗೆ ಕಳಿಸುವ ಮುನ್ನ ಡೈಪರ್‌ ಹಾಕಿಸಿ ಕಳಿಸಬೇಕು. ಅಲ್ಲಿ ಆಂಜಿಯೋಗ್ರಾಮ್‌ ಅನ್ನು ತೊಡೆ ಮೂಲಕ ಮಾಡಿದ್ದರೆ ಕನಿಷ್ಟ ೨೪ ತಾಸು ಎದ್ದು ಓಡಾಡಬಾರದು. ಸ್ಟಂಟ್‌ ಅಳವಡಿಸಿದ್ದರೆ ಇನ್ನೂ ಹೆಚ್ಚು ಮುತುವರ್ಜಿ ವಹಿಸಿರಬೇಕು.

ಆಯಾ ಹೃದ್ರೋಗಿಯ ಆರೋಗ್ಯ ಸ್ಥಿತಿಗತಿ, ಚೇತರಿಸಿಕೊಳ್ಳುವ ವೇಗ ಗಮನಿಸಿ ಎಷ್ಟು ದಿನ ಐಸಿಯುನಲ್ಲಿ ಇರಿಸಿಕೊಳ್ಳಬೇಕು ಎಂದು ವೈದ್ಯರು ನಿರ್ಧರಿಸುತ್ತಾರೆ. ಇಂಥ ಸಂದರ್ಭದಲ್ಲಿ ಹೃದ್ರೋಗಿ ಡೈಪರ್‌ ನಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡಿದ್ದರೆ ಹೇಳುತ್ತಾರೆ. ಅದನ್ನು ಬದಲಿಸಿ ಕೂಡಲೇ ಬೇರೆಯ ಡೈಪರ್‌ ಹಾಕಬೇಕು. ಪಿರಿಯಾಪಟ್ಟಣದ ಆ ವ್ಯಕ್ತಿಗೆ ಇದ್ಯಾವುದನ್ನೂ ಮಾಡಿದಂತೆ ಕಾಣಲಿಲ್ಲ. ಅವರಿಗೆ ಡೈಪರ್‌ ಹಾಕಿದ್ದರೆ ಮಲಮೂತ್ರ ವಿಸರ್ಜನೆಯನ್ನು ಒತ್ತಡ ಬಂದ ಕೂಡಲೇ ಮಾಡಿರುತ್ತಿದ್ದರು ! ಐಸಿಯುಗೆ ಬಂದ ನಂತರವಾದರೂ ಡೈಪರ್‌ ಧರಿಸಿದ್ದಾರೆಯೇ ಇಲ್ಲವೇ ಕೇಳಬೇಕು. ಬಹುಶಃ ಅಲ್ಲಿನ ನರ್ಸಿಂಗ್‌ ಸಿಬ್ಬಂದಿ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ವರ್ತಿಸಿದ್ದಾರೆ. ಇದರಿಂದಾಗಿಯೇ ಆ ವ್ಯಕ್ತಿ ಆರ್ತನಾದದ ರೀತಿ ತಮ್ಮ ಅಗತ್ಯತೆಯನ್ನು ಪದೇಪದೇ ಹೇಳಿದರು

ಇದಿಷ್ಟೆ ಅಲ್ಲ; ಜಯದೇವದಲ್ಲಿ ಲಿಫ್ಟ್ ಆಪರೇಟ್ ಮಾಡುವ ಸಿಬ್ಬಂದಿಗಳು, ಬಹುತೇಕ ಸೆಕ್ಯುರಿಟಿ ಗಾರ್ಡ್ ಗಳ ವರ್ತನೆ ಸಹ ವಿಚಿತ್ರ ! ಏನೋ ಉಪಕಾರ ಮಾಡುತ್ತಿದ್ದೇವೆ ಎನ್ನುವ ಧೋರಣೆ ! ಬಂದವರೊಂದಿಗೆ ಹೇಗೆ ಮಾತನಾಡಬೇಕು ಎಂಬ ತಿಳಿವಳಿಕೆ ಇಲ್ಲ ! ಆಸ್ಪತ್ರೆಗಳಿಗೆ ಸೇವಾ ಮನೋಭಾವ ಇರುವವರನ್ನು ನೇಮಿಸಿಕೊಳ್ಳಬೇಕೆ ಹೊರತು ಏನೋ ಒಂದು ಕೆಲಸ‌ ಸಿಕ್ಕಿ ಸಂಬಳ ಬಂದರಾಯಿತು ಎಂಬ ಧೋರಣೆ ಇರುವವರನ್ನು ನೇಮಕ ಮಾಡಿಕೊಳ್ಳಬಾರದು. ಸಿಬ್ಬಂದಿಯ ಈ ವರ್ತನೆಗೆ ಪ್ರಮುಖ ಕಾರಣ ಏನೆಂದರೆ ಸಂಸ್ಥೆಯ ಆಡಳಿತದ ಚುಕ್ಕಾಣಿ ಹಿಡಿದವರ ಅದಕ್ಷತೆ, ಹೆಚ್.ಆರ್. ವಿಭಾಗದ ಉದಾಸೀನ ಮನೋಭಾವ. ಈ ಎಲ್ಲ ನಿರ್ಲಕ್ಷ್ಯ ವರ್ತನೆ ಬದಲಾಗಲೇಬೇಕು

ಕುಮಾರ ರೈತ

ಚಿತ್ರಕೃಪೆ: AI

Similar Posts

2 Comments

  1. ಪಂಚಾಕ್ಷರಿ ಕೆ ಹಿರೇಮಠ ಶಹಪುರ

    ವೈದ್ಯ ನಾರಾಯಣ ಹರಿ ಎನ್ನುವಂತೆ ವೈದ್ಯರು ದೇವರಿದ್ದಂತೆ ವೈದ್ಯರ ಜೊತೆಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಪೂಜಾರಿಗಳಂತೆ ಆದ್ದರಿಂದ ಹೃದಯವಂತಿಕೆ ಮಾನವೀಯತೆ ಸೇವಾ ಮನೋಭಾವನೆ ಆ ಸಿಬ್ಬಂದಿಯಲ್ಲಿ ಇರಲೇಬೇಕು ಅಂಥವರು ಮಾತ್ರ ಆಸ್ಪತ್ರೆಯಲ್ಲಿ ಕೆಲಸ ಮಾಡಬೇಕು ವ್ಯವಹಾರಿಕವಾಗಿ ಮತ್ತು ವೇತನಕ್ಕಾಗಿ ದುಡಿವ ಸಿಬ್ಬಂದಿ, ಬೇರೆ ಡಿಪಾರ್ಟ್ಮೆಂಟ್ ಗಳಲ್ಲಿ ದುಡಿಯೋದು ವಾಸಿ

    1. ನಿಮ್ಮ ಅಭಿಪ್ರಾಯ ಸೂಕ್ತವಾಗಿದೆ

Leave a Reply

Your email address will not be published. Required fields are marked *