ಭಾರತದಲ್ಲಿ ಹುಣಸೇಹಣ್ಣಿನ ಬಳಕೆ ಎಂದಿನಿಂದ ಆರಂಭವಾಗಿರಬಹುದು ? ಇದರ ಬಗ್ಗೆ ನಿರ್ದಿಷ್ಟ – ಖಚಿತ ಉಲ್ಲೇಖಗಳು ಸಿಗುವುದಿಲ್ಲವಾದರೂ ಪ್ರಾಚೀನ ಗ್ರಂಥಗಳಲ್ಲಿ ಇದರ ಉಲ್ಲೇಖವಿದೆ. ಆಯುರ್ವೇದದಲ್ಲಿಯೂ ಇದರ ಮಹತ್ವದ ಬಗ್ಗೆ ತಿಳಿಸಲಾಗಿದೆ. ಆದ್ದರಿಂದ ಕ್ರಿಸ್ತ ಪೂರ್ವದಿಂದ ಅಂದರೆ ಸಾವಿರಾರು ವರ್ಷಗಳಿಂದ ಇದರ ಬಳಕೆಯಿದೆ.
ಹುಣಸೇಹಣ್ಣನ್ನೇ ಪ್ರಧಾನವಾಗಿ ಬಳಸಿ ಮಾಡುವ ಹಲವಾರು ಖಾದ್ಯಗಳಿವೆ. ಸಾರು, ಸಾಂಬಾರ್, ಹುಳಿ, ಚಟ್ನಿ ಇತ್ಯಾದಿಗಳಿಗಂತೂ ಇದು ಬೇಕೇ ಬೇಕು. ಹುಣಸೇಹುಳಿ ಇದ್ದರೆ ಖಾದ್ಯಕ್ಕೊಂದು ವಿಶಿಷ್ಟ ರುಚಿ ಪ್ರಾಪ್ತವಾಗುತ್ತದೆ. ರುಚಿ ಹೆಚ್ಚುತ್ತದೆ ಎಂಬ ಕಾರಣಕ್ಕೆ ಇದನ್ನು ಭಾರತೀಯರು ಸಿಕ್ಕಾಪಟ್ಟೆ ಬಳಕೆ ಮಾಡುವುದಿಲ್ಲ. ಹಿತಮಿತ ಎಂಬುದನ್ನು ಕಂಡು ಕೊಂಡಿದ್ದಾರೆ.
ವೈವಿಧ್ಯ ರುಚಿ
ಹುಣಸೆಹಣ್ಣಿನಲ್ಲಿ ಬೇರೆಬೇರೆ ತಳಿಗಳಿವೆ. ಸಿಹಿ ಹುಣಸೇ, ಸಿಹಿ-ಹುಳಿ ಮಿಶ್ರಿತ ಹುಣಸೇ, ಹುಳಿ ಹುಣಸೆ ಹೀಗೆ. ಈ ಹಣ್ಣನ್ನು ನೆನೆದರೂ ಬಾಯಲ್ಲಿ ನೀರೂರುತ್ತದೆ. ಲಾವಾರಸ ಹೆಚ್ಚಿಸುವ ಜೊತೆಗೆ ಪಚನಶಕ್ತಿಯನ್ನು ವೃದ್ದಿಗೊಳಿಸುವ ಶಕ್ತಿ ಇದಕ್ಕಿದೆ.
ಪೌಷ್ಟಿಕಾಂಶ
ಸಿಹಿ ಹುಳಿ ಮಿಶ್ರಿತ ಹುಣಸೆಹಣ್ಣಿನಲ್ಲಿ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. 100 ಗ್ರಾಮ್ ಹುಣಸೆಹಣ್ಣಿನಲ್ಲಿ 62.5 ಗ್ರಾಮ್ ಶರ್ಕರಪಿಷ್ಠ, 4.2 ಗ್ರಾಮ್ ಸಿ. ಜೀವಸತ್ವ, 2.8 ಗ್ರಾಮ್ ಪ್ರೊಟೀನ್, 5.1 ಗ್ರಾಮ್ ನಾರಿನಾಂಶ, 28 ಮಿಲಿ ಗ್ರಾಮ್ ಸೋಡಿಯಂ, 628 ಮಿಲಿಗ್ರಾಮ್ ಪೊಟ್ಯಾಶಿಯಂ ಇದೆ. ಇದರಲ್ಲಿ ಟಾರ್ಟಾರಿಕ್ ಆಮ್ಲ ಇರುವುದರಿಂದ ಖಾದ್ಯಗಳಿಗೆ ವಿಶೇಷ ರುಚಿ ಪ್ರಾಪ್ತವಾಗುತ್ತದೆ. ಇಷ್ಟೆಲ್ಲ ಉತ್ತಮ ಅಂಶಗಳಿರುವ ಹುಣಸೆಹಣ್ನೀನ ರಸ ಸೇವನೆ, ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಹುಣಸೇ ರಸವನ್ನು ತುಸು ಉಪ್ಪಿನ ಜೊತೆ ಸೇವಿಸಿದಾಗ ಗಂಟಲು ನೋವು ಇದ್ದರೆ ಹುಣಸೇ ರಸಕ್ಕೆ ತುಸು ಲವಣ ಅಂದರೆ ಉಪ್ಪು ಸೇರಿಸಿ ಸೇವಿಸಬೇಕು. ಆಗ ನೋವು ಮಾಯವಾಗುತ್ತದೆ.
ಶೀತ ನಿವಾರಣೆಗೂ ಸಹ ಹುಣಸೆಹಣ್ಣು ಉತ್ತಮ ಮದ್ದು. ಇದಕ್ಕಾಗಿ ಹುಣಸೇಹಣ್ಣಿನ ರಸಕ್ಕೆ ತುಸು ಮೆಣಸು, ಬೆಲ್ಲ, ಉಪ್ಪು ಸೇರಿಸಿ ಕುದಿಸಬೇಕು. ತೀರಾ ಹೆಚ್ಚಾಗಿ ಕುದಿಸಬಾರದು. ಈ ರಸವನ್ನು ತುಸು ಸೇವಿಸಿದರೆ ಶೀತ ಮಾಯ !
ಮಲಬದ್ಧತೆ ನಿವಾರಣೆಗೂ ಹುಣಸೆಹಣ್ಣು ಮದ್ದು. ಈ ಹಣ್ಣಿನಲ್ಲಿ ನಾರಿನಾಂಶ, ಹೆಮಿಸಲ್ಯುಲೋಸ್, ಮ್ಯೂಸಿಲೇಜ್ ಅಂಶಗಳಿವೆ. ಇದು ಪಚನಕ್ರಿಯೆಯನ್ನು ಉತ್ತೇಜಿಸುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ. ಒಂದು ವೇಳೆ ಈ ಮೊದಲೇ ಉಂಟಾಗಿದ್ದರೆ ನಿವಾರಣೆಯಾಗುತ್ತದೆ.
ಹಣಸೆಹಣ್ಣಿನಲ್ಲಿರುವ ಟಾರ್ಟಾರಿಕ್ ಆಮ್ಲ ಪ್ರಯೋಜನಕಾರಿ. ಇದು ದೇಹಕ್ಕೆ ಹಾನಿಕಾರಕವಾದ ಫ್ರಿರಾಡಿಕಲ್ಸ್ ಗಳಿಂದ ರಕ್ಷಣೆ ನೀಡುತ್ತದೆ. ಮಾರಕ ಕ್ಯಾನ್ಸರ್ ಅನ್ನು ನಿಯಂತ್ರಿಸುತ್ತದೆ. ಹುಣಸೆಹಣ್ಣಿನಲ್ಲಿರುವ ಪೊಟ್ಯಾಶಿಯಂ ದೇಹದ ಜೀವಕೋಶ ದ್ರವಗಳ ಜೊತೆ ಸೇರಿ ಹೃದಯ ಬಡಿತ, ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ. ಕೆಂಪುರಕ್ತ ಕಣಗಳನ್ನು ಹೆಚ್ಚಿಸುತ್ತದೆ. ದೇಹದ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ತ್ವಚೆಯ ಹೊಳಪು ಹೆಚ್ಚುತ್ತದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಕಲ್ಪನಾ ವಿವರಿಸುತ್ತಾರೆ.
ಹುಣಸೆಹಣ್ಣನ್ನು ಬಳಸಿ ಸಾಂಬಾರ್, ರಸಮ್, ತೊಕ್ಕು, ಗೊಜ್ಜು ಮಾಡಬೇಕು. ಈ ಹಣ್ಣನ್ನು ಸಂಸ್ಕರಿಸಿ ತಯಾರಿಸಿದ ಪೇಸ್ಟ್ ಹಾಗೂ ಪೌಡರ್‌ಗಳನ್ನು ದಿನನಿತ್ಯ ಅಡುಗೆ ಪದಾರ್ಥಗಳಲ್ಲಿ ಬಳಕೆ ಮಾಡಬೇಕು. ಇದರಿಂದ ಆಹಾರದ ರುಚಿ ಹೆಚ್ಚುವುದರ ಜೊತೆಜೊತೆಗೆ ಆರೋಗ್ಯವು ಸದಾ ಉತ್ತಮವಾಗಿರುತ್ತದೆ.