Site icon ಕುಮಾರರೈತ

ಆತ್ಮಸಂಗಾತಿಯ ನೆನಪಿನಂಗಳದಲ್ಲಿ ಸಂತ ತೇಜಸ್ವಿ

ಭೌತಿಕ ಬದುಕಿನಿಂದ ವಿಮುಖರಾಗಿ ಅಧ್ಯಾತ್ಮವನ್ನೇ ಧ್ಯಾನಿಸುವವರಷ್ಟೇ ಸಂತರಲ್ಲ…. ಸದಾ ನಾಡಿನ ಒಳಿತು, ಏಳಿಗೆ, ಪರಿಸರ ಸಂರಕ್ಷಣೆಯ ಕಳಕಳಿ, ಓದುಗರನ್ನು ಸರಿದಾರಿಯಲ್ಲಿ ನಡೆಸುವ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಪೂರ್ಣಚಂದ್ರ ತೇಜಸ್ವಿ ಅವರು ಸಹ ಸಂತರು. ಇಂಥ ಸಂತನ ಪತ್ನಿ, ಆತ್ಮಸಂಗಾತಿ ರಾಜೇಶ್ವರಿ ತೇಜಸ್ವಿ ಅವರ ನೆನಪಿನಂಗಳದ ಹಸಿರು ವೃಕ್ಷ ತೇಜಸ್ವಿ. ಚಾರ್ಮಾಡಿಯ ಬೆಟ್ಟಗಳಿಗೆ ಚಾರಣ ಹೋದಾಗಲೆಲ್ಲ ‘ನಿರುತ್ತರ’ಕ್ಕೆ ನಮಿಸಿ ಬರುವುದು ನನ್ನ ರೂಢಿ. ಹೀಗೊಮ್ಮೆ ಹೋದಾಗ ರಾಜೇಶ್ವರಿ ಅವರ ಸಂದರ್ಶನ ಮಾಡಿದ್ದೆ. ಇದು ಐದು ವರ್ಷ ಹಿಂದಿನದು. ಇಂದು ಕಾಡಿನ ಸಂತ ಹುಟ್ಟಿದ ದಿನ… ಈ ಸಲುವಾಗಿ ಈ ಸಂದರ್ಶನ ಮತ್ತೆ ನಿಮ್ಮ ಮುಂದೆ…..


ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲಿ ಕೊಟ್ಟಿಗೆಹಾರದಿಂದ ಚಾರ್ಮಾಡಿ ಘಾಟಿಯಲ್ಲಿ ಚಾರಣ ಹೊರಟಿದ್ದೆವು. ವಾಪ್ಪಸ್ಸು ಮೂಡಿಗೆರೆಗೆ ಬಂದಾಗ ‘ನಿರುತ್ತರ’ಕ್ಕೆ ಭೇಟಿ ಕೊಟ್ಟು ‘ನನ್ನ ತೇಜಸ್ವಿ’ ಪುಸ್ತಕ ತುಂಬ ಚೆನ್ನಾಗಿದೆ ಎಂದು ರಾಜೇಶ್ವರಿ ಅಮ್ಮನಿಗೆ ಹೇಳಿ ಬರೊಣ ಎನಿಸಿತು. ನಗುಮೊಗದಿಂದಲೆ ಎದುರಾದ ರಾಜೇಶ್ವರಿ ತೇಜಸ್ವಿ ಅವರು ಕಾಫಿ ನೀಡಿ ಮಾತನಾಡಿದರು.

ರೈತ: ನಮಸ್ತೆ ಹೇಗಿದ್ದೀರಿ. ತೇಜಸ್ವಿ ಭೌತಿಕವಾಗಿ ಇಲ್ಲದ ‘ನಿರುತ್ತರ’ದ ಬದುಕು ಹೇಗೆ ಸಾಗಿದೆ. ಪುಸ್ತಕಗಳ ಪ್ರಕಾಶನ, ನಿಮ್ಮ ಬರವಣಿಗೆ ಕೃಷಿ, ತೋಟದ ಸಾಗುವಳಿ ಮತ್ತು ಬಂದು ಹೋಗುವ ಅಭಿಮಾನಿಗಳ ದಂಡು. ಜವಾಬ್ದಾರಿ ಜೊತೆಗೆ ಒತ್ತಡವೂ ಹೆಚ್ಚಿದೆ ಅನಿಸುತ್ತಿಲ್ಲವೆ

ರಾಜೇಶ್ವರಿ ತೇಜಸ್ವಿ: ‘ನಿರುತ್ತರ’ದ ಬದುಕಿನ ಬಗ್ಗೆ ಹೇಳುವುದಾದರೆ ತೇಜಸ್ವಿ ಇದ್ದಾಗ ಹೇಗೆ ಬದುಕುತ್ತಿದ್ದೆವೊ ಹಾಗೆ ಬದುಕುತ್ತಿದ್ದೇವೆ ಅಂತ ಒಂದು ಥರಕ್ಕೆ ಹೇಳಬಹುದು. ತೋಟ ನೋಡಿಕೊಳ್ಳುವ ಕೆಲಸ ಇದ್ದೇ ಇರುತ್ತೆ. ಅವರು ಹೋದ ಮೇಲೆ ‘ನನ್ನ ತೇಜಸ್ವಿ’ ನೆನಪುಗಳನ್ನು ದಾಖಲಿಸಲೇಬೇಕೆಂಬ ಸ್ವಯಂ ಹಠ ಹಿಡಿದು ಬರೆದೆ.ಆದರೆ ಅವರ ಕೆಲಸಗಳು ಸಾಕಷ್ಟು ಇವೆ. ಅವರು ಬರೆದ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಗುತ್ತಲೆ ಇದೆ. ಅವರು ಬರೆದು ಪ್ರಕಟವಾಗದೆ ಉಳಿದಿದ್ದ ಪಾಕ ಕ್ರಾಂತಿ, ವಿಮರ್ಶೆ-ಗಿಮರ್ಶೆ ಇವುಗಳ ಕರಡು ನೋಡುವ ಕೆಲಸ ನನ್ನದೇ ಆಗಿತ್ತು. ಇದಲ್ಲದೆ ‘ಮಾಯೆಯ ಮುಖಗಳು’ ಪ್ರಕಟಣಾ ಕೆಲಸವೂ ಆಗಿದೆ.

ರೈತ: ತೇಜಸ್ವಿ ಅವರಿಗೆ ಛಾಯಾಗ್ರಹಣದ ಆಸಕ್ತಿ ಅಪರಿಮಿತ… ಈ ಬಗ್ಗೆಯೂ ಹೇಳಿ….

ರಾಜೇಶ್ವರಿ ತೇಜಸ್ವಿ: ಪೂರ್ಣಚಂದ್ರ ತೇಜಸ್ವಿ ಅವರು ತೋಟ ಮಾಡಲೆಂದು ಚಿತ್ರಕೂಟಕ್ಕೆ ಬಂದ ಮೇಲೆ ಛಾಯಾಗ್ರಹಣದಲ್ಲಿ ಮತ್ತಷ್ಟೂ ಗಂಭೀರವಾಗಿ ತೊಡಗಿಸಿಕೊಂಡರು. ಅವರು ತೆಗೆದ ಚಿತ್ರಗಳು ತುಷಾರ, ತರಂಗ, ಮಯೂರ, ಪ್ರಜಾವಾಣಿ ಮತ್ತಿತರ ಪತ್ರಿಕೆಗಳಲ್ಲಿ ಪ್ರಕಟ ಆಗಿವೆ. ಅವರು ಪತ್ರಿಕೆಗಳಿಗೆ ಚಿತ್ರಗಳನ್ನು ಕಳಿಸುವುದರ ಜೊತೆಗೆ ಅವುಗಳಿಗೆ ಸಂಬಂಧಿಸಿ ಟಿಪ್ಪಣಿಗಳನ್ನೂ ಮಾಡಿ ಕಳಿಸುತ್ತಿದ್ದರು. ಅವುಗಳನ್ನೆಲ್ಲ ಸಂಗ್ರಹಿಸಿ ‘ಮಾಯೆಯ ಮುಖಗಳು’ ಪುಸ್ತಕ ಮಾಡಿದೆವು.

ಇದರ ಕೆಲಸ ತುಂಬ ಹಿಡಿಯಿತು. ಚಿತ್ರಗಳ ನೆಗೆಟಿವ್ಸ್ ನನ್ನ ಬಳಿ ಇದ್ದವು. ಅವುಗಳನ್ನು ಪರಿಷ್ಕರಿಸಿ; ಚಿತ್ರ ಸಂಪುಟ ತರಬೇಕಿತ್ತು. ಈ ಕಾರ್ಯದಲ್ಲಿ ತೇಜಸ್ವಿ ಅವರ ಅಭಿಮಾನಿ ಮತ್ತು ಸ್ನೇಹಿತ ವಲಯದ ಕೆ. ಶಿವಾರೆಡ್ಡಿ ಅವರು ಬಹಳ ಸಹಾಯ ಮಾಡಿದರು. ರಾಘವೇಂದ್ರ ಅವರು ಕೂಡ ನೆರವಾದರು. ಇದಲ್ಲದೆ ತೇಜಸ್ವಿ ಅವರು ಬೇರೆಬೇರೆ ಪತ್ರಿಕೆಗಳಿಗೆ ಬರೆದ ವೈಚಾರಿಕ ಲೇಖನಗಳನ್ನೆಲ್ಲ ಒಟ್ಟುಗೂಡಿಸಿ ಹೊಸ ವಿಚಾರಗಳು ಹೆಸರಿನ ಪುಸ್ತಕ ಪ್ರಕಟಿಸಬೇಕೆಂಬ ಯೋಜನೆ ಇದೆ. ಇದು ಸುಮಾರು ಎಂಟುನೂರು ಪುಟಗಳಷ್ಟು ಆಗಿದೆ.

ನನ್ನ ತಾಯಿಯ ಕುರಿತು ಸಹ ಪುಸ್ತಕ ಬರೆಯುತ್ತಿದ್ದೇನೆ. ಜನ ಸಾಮಾನ್ಯರ ಬದುಕು ಕೂಡ ಹೇಗೆ ಆದರ್ಶ, ಮಾದರಿಯಾಗಿ ಇರುತ್ತದೆ ಎಂಬ ವಿವರಗಳು ಇದರಲ್ಲಿರುತ್ತವೆ. ಈಗ ಸುಮಾರು ನೂರು ಪುಟ ಆಗಿದೆ. ಈ ಕಾರ್ಯದಲ್ಲಿಯೂ ಗಮನ ಇರಿಸಿದ್ದೇನೆ. ಇದಲ್ಲದೆ ತೇಜಸ್ವಿ ಇದ್ದ ಸ್ಥಳವನ್ನು ನೋಡಲು ಸಾಕಷ್ಟು ಮಂದಿ ಅಭಿಮಾನಿಗಳು ಬರುತ್ತಿರುತ್ತಾರೆ. ಒಂದೆರಡು ಮಾತು ಆಡಿದರೆ ಅವರಿಗೂ ಸಮಾಧಾನ.

ರೈತ: ‘ನನ್ನ ತೇಜಸ್ವಿ’ ಪುಸ್ತಕ ಸಾಹಿತ್ಯಕ ಮೌಲ್ಯ ಅನನ್ಯ. ನೀವು ಈ ಮುಂಚೆ ಬರೆದಿದ್ದು ನಮ್ಮ ಗಮನಕ್ಕೆ ಬಂದಿಲ್ಲ. ಬರವಣಿಗೆ ಉತ್ತಮವಾಗಿ ಮೂಡಿ ಬಂದಿದೆ. ಇದರ ಬಗ್ಗೆ ಹೇಳಿ

 

ರಾಜೇಶ್ವರಿ ತೇಜಸ್ವಿ: ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ, ಸಹವರ್ತಿಯಾಗಿ ಬದುಕಿದ್ದೆ ಬರಹಕ್ಕೆ ದೊಡ್ಡ ಪ್ರೇರಣೆ. ಈ ಬರೆಹ ನನ್ನ ಮನಸಿನ ಅಂತರಾಳದ ಒತ್ತಡವೂ ಹೌದು. ಬರವಣಿಗೆ ಕಾರ್ಯ ಸುಲಭ ಅಲ್ಲ. ಆದರೆ ನನ್ನೊಳಗಿನ ತೇಜಸ್ವಿ ವಿಚಾರಗಳನ್ನು ಪ್ರಕಟಿಸಲೇಬೇಕೆಂಬ ಹಠ. ಪ್ರಕಟವಾಗಿರುವ ಪುಸ್ತಕದ ಗಾತ್ರವನ್ನು ನೋಡಿದಾಗ ನನಗೆ ಒಮ್ಮೊಮ್ಮೆ ಆಶ್ಚರ್ಯ ಆಗುತ್ತೆ. ಇದನ್ನು ಬರೆಯುವಾಗ ಯಾವ ಕೆಲಸಗಳಿಗೂ ಹೆಚ್ಚು ಗಮನ ಕೊಡದೆ ಬರೆದಿದ್ದೇನೆ.ಸದಾ ತೇಜಸ್ವಿ ಧ್ಯಾನ. ಅವರೊಂದಿಗೆ ಕಳೆದ ಕಾಲ ಅಲೆಅಲೆಯೋಪಾದಿ ನೆನಪಿಗೆ ಬರುತ್ತಿದ್ದವು. ಮಧ್ಯರಾತ್ರಿ ಎದ್ದು ಬರೆದ ದಿನಗಳೂ ಸಾಕಷ್ಟು. ಒಳಗೆ ಬರೆಯಲೇಬೇಕೆಂಬ ಒತ್ತಡ ಇದ್ದರೆ ಬರವಣಿಗೆ ಸರಾಗ.

ರೈತ: ‘ನನ್ನ ತೇಜಸ್ವಿ’ ಓದಿದಾಗ ತೇಜಸ್ವಿ ಅವರು ತಮ್ಮಲ್ಲಿ ಮೂಡಿದ ವಿಚಾರಗಳನ್ನು, ಯೋಜನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು ಎಂದು ಗೊತ್ತಾಗುತ್ತೆ. ತೇಜಸ್ವಿ ಅಂದುಕೊಂಡು ಅವರ ಕಾಲಘಟ್ಟದಲ್ಲಿ ಈಡೇರದೆ ಹೋದ ಯೋಜನೆಗಳಿವೆಯೆ ?

ರಾಜೇಶ್ವರಿ ತೇಜಸ್ವಿ: ಕನ್ನಡ ಸಾಫ್ಟ್ ವೇರ್ ಬಗ್ಗೆ ಅವರು ಸದಾ ಯೋಚನೆ ಮಾಡುತ್ತಿದ್ದರು. ಕನ್ನಡಕ್ಕೆ ಅತ್ಯುತ್ತಮ ದರ್ಜೆಯ ತಂತ್ರಾಂಶ ಸಿದ್ಧ ಆಗಬೇಕು. ಎಲ್ಲ ತಂತ್ರಾಂಶಗಳನ್ನು ಒಂದೇ ಕೀಲಿಮಣೆ ಬಳಸಿ ಉಪಯೋಗಿಸುವಂತಾಗಬೇಕು ಎಂದು ಮಾತನಾಡುತ್ತಿದ್ದರು. ಈ ಬಗ್ಗೆ ತಿಳಿದವರೊಂದಿಗೆ ಚರ್ಚಿಸುತ್ತಿದ್ದರು, ಸರ್ಕಾರಕ್ಕೂ ಪತ್ರ ಬರೆಯುತ್ತಿದ್ದರು. ಜೊತೆಗೆ ಸಚಿವರು, ಅಧಿಕಾರಿಗಳೊಂದಿಗೆ ಮಾತನಾಡಿ ಬರುತ್ತಿದ್ದರು. ಆದರೆ ಅವರ ಜೀವಿತಾವಧಿಯಲ್ಲಿ ಅವರು ಕನಸಿದ್ದ ಯೋಜನೆ ಈಡೇರಲಿಲ್ಲ.

ಕರ್ವಾಲೋ ಥರದ ಮತ್ತೊಂದು ಪುಸ್ತಕ ಬರೆಯಬೇಕೆಂಬ ಯೋಜನೆ ಅವರಿಗಿತ್ತು. 2007 ಏಪ್ರಿಲ್ 5ರ ಹಿಂದಿನ ದಿನ ರಾತ್ರಿ (ಏಪ್ರಿಲ್ 5, 2007 ರಂದು ತೇಜಸ್ವಿ ಅವರು ಭೌತಿಕವಾಗಿ ಅಗಲಿದ ದಿನ) ಅವರು ಮಗಳೊಂದಿಗೆ ಮಾತನಾಡುತ್ತಿದ್ದರು. ‘ಮಾಯಾಲೋಕ-2 ಬರೆಯಲಾರೆ, ಕರ್ವಾಲೋ ಥರದ ಪುಸ್ತಕ ಬರೆಯಬೇಕು ಎಂಬ ಆಸಕ್ತಿ ಇದೆ’ ಎಂದಿದ್ದರು.

ಮಿಲೇನಿಯಂ ಸೀರಿಸ್ ಬಗ್ಗೆ ನಿಮಗೆ ಗೊತ್ತಿದೆ. ಕನ್ನಡ ಓದುಗರಿಗೆ ಹೊಸತೊಂದು ಜಗತ್ತನ್ನು ತೋರುವ ಕಿಟಕಿ ಎಂದು ಓದಿದವರು ಹೇಳುತ್ತಿರುತ್ತಾರೆ. ‘ಮತ್ತೆ ಮಿಲೇನಿಯಂ ಸೀರಿಸ್ ಥರದ ಪುಸ್ತಕಗಳನ್ನು ಬರೆಯಬೇಕು. ಇಂಗ್ಲೀಷಿನಲ್ಲಿರುವ ಜಗತ್ತಿನ ಅತ್ಯುತ್ತಮ ಸಾಹಿತ್ಯವನ್ನು ಕನ್ನಡದ ಮಕ್ಕಳ ಮುಂದೆ ಇಡಬೇಕು’ ಎಂದು ಹೇಳುತ್ತಿದ್ದರು.

ವಿದ್ಯಾರ್ಥಿ ಆಗಿದ ದಿನಗಳಿಂದಲೂ ಅವರಿಗೆ ಓದುವ ಹವ್ಯಾಸ. ಆಗ ದೊರೆತ ಉತ್ತಮ ಪುಸ್ತಕಗಳನ್ನೆಲ್ಲ ಅವರು ಓದುತ್ತಿದ್ದರು. ಒಳ್ಳೆಯ ಪುಸ್ತಕಗಳ ವಿಚಾರಗಳೆಲ್ಲವೂ ಅವರ ನೆನಪಿನಲ್ಲಿ ಇತ್ತು. ಇಂಥ ನೆನಪಿನಿಂದಲೆ ಅವರು ‘ಮಹಾ ಪಲಾಯನ’ ಪುಸ್ತಕ ಬರೆದರು.

ರೈತ: ತೇಜಸ್ವಿ ಅನೇಕ ಕೃತಿಗಳನ್ನು ಬರೆದಿದ್ದಾರೆ. ಅವರು ಬರೆದ ಕೃತಿಗಳ ಬಗ್ಗೆ ಇಂಥದ್ದು ಸಮಾಧಾನ ತಂದಿದೆ; ಇಂಥದ್ದು ತೃಪ್ತಿ ನೀಡಿಲ್ಲ ಎಂದು ನೀವು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಿರಾ

ರಾಜೇಶ್ವರಿ ತೇಜಸ್ವಿ: ‘ಚಿದಂಬರ ರಹಸ್ಯ’ ಬರೆಯುತ್ತಿದ್ದರು. ಎರಡನೇ ಅಧ್ಯಾಯ ಪೂರ್ಣ ಆಗಿತ್ತು. ಅದನ್ನು ಓದಿದ ನಾನು ‘ ಇದು ಚೆನ್ನಾಗಿಲ್ಲ; ನನಗೆ ಹಿಡಿಸಲಿಲ್ಲ’ ಎಂದು ಹೇಳಿದೆ. ಆಗ ಅವರು ಥಟ್ಟನೆ ‘ ಇದನ್ನೆಲ್ಲ ಓದಿ, ನಿನ್ನ ಅಭಿಪ್ರಾಯವನ್ನೆಲ್ಲ ನನ್ನ ಮೇಲೆ ಹೇರಲು ಬರಬೇಡ. ಕಥಾ ಹಂದರದ ಬಗ್ಗೆ ನನ್ನ ಮನಸಿನಲ್ಲಿ ವಿಚಾರಗಳು ಮೂಡಿರುತ್ತವೆ. ನೀನು ಈ ಥರ ಮಾತನಾಡಿದರೆ ಅದರ ಮೇಲೆ ಪ್ರಭಾವ ಉಂಟಾಗುತ್ತೆ’ ಎಂದು ಬಿಟ್ಟರು. ಆಗಿನಿಂದ ನನ್ನ ಅಭಿಪ್ರಾಯಗಳನ್ನು ಅವರ ಮುಂದೆ ಹೇಳಲು ಹೋಗುತ್ತಿರಲಿಲ್ಲ.

ಒಮ್ಮೊಮ್ಮೆ ಲಹರಿಯಲ್ಲಿದ್ದಾಗ ಅವರಿಗೆ ತೃಪ್ತಿ ತಂದ ಕಥೆಗಳ ಬಗ್ಗೆ ಹೇಳುತ್ತಿದ್ದರು. ‘ಅವನತಿ’, ತುಕ್ಕೋಜಿ ಸಣ್ಣ ಕಥೆಗಳು ಚೆನ್ನಾಗಿವೆ ಎಂದು ನನಗನಿಸುತ್ತದೆ. ಆದರೆ ಏಕೋ ಏನೋ ಕ್ಲಿಕ್ಕಾಗಲಿಲ್ಲ’ ಎನ್ನುತ್ತಿದ್ದರು.

ರೈತ: ತೇಜಸ್ವಿ ಬರೆದ ಕೃತಿಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರತಿಕ್ರಿಯೆ ಬಂದಿದೆ ಎಂದು ನಿಮಗನಿಸುತ್ತದೆ

ರಾಜೇಶ್ವರಿ ತೇಜಸ್ವಿ: ಇಂಥ ಪುಸ್ತಕಕ್ಕೆ ಹೆಚ್ಚು ಪ್ರತಿಕ್ರಿಯೆ ಬಂದಿದೆ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ತೇಜಸ್ವಿ ಬರೆದ ಕೃತಿಗಳನ್ನೆಲ್ಲ ಓದುಗರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ದಾವಣಗರೆಯಿಂದ ವೈದ್ಯರೊಬ್ಬರು ಬಂದಿದ್ದರು. ‘ತಮ್ಮ ಮೇಲೆ ‘ಕರ್ವಾಲೋ’ ಉಂಟು ಮಾಡಿದ ಪ್ರಭಾವ ಅಪಾರ. ಪಿಯುಸಿ ಓದುತ್ತಿದ್ದಾಗ ಪಠ್ಯವಾಗಿತ್ತು. ಓದಿದ ನಂತರ ನನ್ನ ಬದುಕನ್ನು ಪ್ರಭಾವಿತಗೊಳಿಸಿತು’ ಎಂದರು. ಈಚೆಗೆ ನನಗೆ ಒಂದು ಹುಡುಗಿ ಇಮೈಲ್ ಮಾಡಿದ್ದಾಳೆ. ಅವಳು ನ್ಯಾಷನಲ್ ಸ್ಕೂಲ್ ಆಫ್ ಲಾ ನಲ್ಲಿ ಓದುತ್ತಿದ್ದಾಳೆ. ‘ನಾನು 50 ಬಾರಿ ಕರ್ವಾಲೋ ಓದಿದ್ದೇನೆ. ಪ್ರತಿ ಸಾರ್ತಿ ಓದಿದಾಗಲೂ ಹೊಸ ಹೊಸ ವಿಚಾರಗಳು ಹೊಳೆಯುತ್ತವೆ’ ಎಂದಳು.

‘ನಿರುತ್ತರ’ಕ್ಕೆ ಬರುತ್ತಿರುವ ಅನೇಕರು ತೇಜಸ್ವಿ ಅವರನ್ನು ಪ್ರತ್ಯಕ್ಷ ನೋಡಿದವರಲ್ಲ. ‘ಅವರ ಕೃತಿಗಳನ್ನು ಓದಿದ್ದೇವೆ. ಅವುಗಳ ವಿಚಾರ ನಮ್ಮನ್ನು ಪ್ರಭಾವಿತಗೊಳಿಸಿದೆ. ನಮ್ಮ ಬದುಕು ಉತ್ತಮವಾಗಿ ರೂಪುಗೊಳ್ಳಲು ಸಹಾಯ ಮಾಡಿದೆ’ ಎನ್ನುತ್ತಿರುತ್ತಾರೆ. ಓರ್ವ ಲೇಖಕರಿಗೆ ಇದಕ್ಕಿಂತ ಗೌರವ ಇನ್ನೇನಿದೆ. ಒಬ್ಬೊಬ್ಬರು ಒಂದೊಂದು ಕೃತಿಗಳನ್ನು ಮೆಚ್ಚಿಕೊಂಡಿರುತ್ತಾರೆ.

ರೈತ: ತೇಜಸ್ವಿ ಅವರು ಕೃತಿ ರಚಿಸುವ ಹಂತದಲ್ಲಿ ಕಾಮೆಂಟ್ ಮಾಡುವುದನ್ನು ಬಿಟ್ಟು ಬಿಟ್ಟೆ ಎಂದಿರಿ. ಕೃತಿ ಪ್ರಕಟ ಆದ ಮೇಲೆ ನಿಮ್ಮ ಅಭಿಪ್ರಾಯ ಹೇಳ್ತಿದ್ರಾ.

ರಾಜೇಶ್ವರಿ ತೇಜಸ್ವಿ: (ನಗು) ಅದಂತೂ ಇದ್ದೇ ಇರುತ್ತಿತ್ತು. ಅವರ ಪೈಟಿಂಗ್ಸ್, ಫೋಟೋಗ್ರಫಿ ಬಗ್ಗೆ ನಿಮಗೆ ಗೊತ್ತಿದೆ. ನನ್ನ ಫೋಟೋಗ್ರಫಿಯ ಮೊದಲ ವಿಮರ್ಶಕಿ ರಾಜೇಶ್ವರಿ’ ಅಂತ ಹೇಳ್ತಾ ಇದ್ರು. ಮೊದಲು ಬ್ಲಾಕ್ ಅಂಡ್ ವೈಟ್ ಪ್ರಿಂಟ್ ಹೇಗೆ ನಡೀತಾ ಇತ್ತು ಅನ್ನುವುದೆಲ್ಲ ‘ಅಣ್ಣನ ನೆನಪು’ ಓದಿದವರಿಗೆ ಗೊತ್ತಿದೆ. ಅದರಲ್ಲಿ ಫೋಟೋ ಪ್ರಿಂಟ್ ಹಾಕುವುದು ಹೇಗೆ ಎಂಬುದನ್ನೆಲ್ಲ ಚೆನ್ನಾಗಿ ಹೇಳಿದ್ದಾರೆ. ಡಾರ್ಕ್ ರೂಮಿನಲ್ಲಿ ನಡೆಯುವ ಫೋಟೋ ಪ್ರಕ್ರಿಯೆಗಳನ್ನೆಲ್ಲ ನನಗೆ ತೋರಿಸಿ ವಿವರಿಸಿದ್ರು.

ಡಿಜಿಟಲ್ ಫೋಟೋಗ್ರಫಿ ಶುರು ಮಾಡಿದ ನಂತರ ಪ್ರಿಂಟ್ ಆದ ಫೋಟೋಗಳನ್ನ ತಂದು ಮೊದಲು ನನಗೆ ತೋರಿಸುತ್ತಿದ್ದರು. ಆಗಾಗ ಪೈಟಿಂಗ್ ಕೂಡ ಮಾಡ್ತಾ ಇದ್ರು. ಅದರ ಬಗ್ಗೆ ನನ್ನ ಅಭಿಪ್ರಾಯ ಹೇಳ್ತಾ ಇದ್ದೆ. ಅವರು ಗ್ರಾಫಿಕ್ಸ್ ಪೈಟಿಂಗ್ ಬಗ್ಗೆ ‘ ಯಾರು ಚಿತ್ರಕಾರರೊ ಅಥವಾ ಚಿತ್ರಕಲೆ ಬಗ್ಗೆ ಗೊತ್ತಿದೆಯೊ ಅವರು ಗ್ರಾಫಿಕ್ಸ್ ಪೈಟಿಂಗ್ ಅನ್ನು ಚೆನ್ನಾಗಿ ಮಾಡಬಲ್ಲರು. ಕಂಫ್ಯೂಟರ್ ಗೊತ್ತಿರುವವರು ಕಮ್ಯಾಂಡ್ ಕೊಡ್ತಾ ಹೋದ್ರೆ ಗ್ರಾಫಿಕ್ ಚಿತ್ರ ಚೆನ್ನಾಗಿ ಬರುತ್ತೆ ಎನ್ನುವುದು ಸುಳ್ಳು’ ಎಂದು ಹೇಳ್ತಾ ಇದ್ರು.

ತೇಜಸ್ವಿ ವಾಟರ್ ಕಲರ್ ಪೈಟಿಂಗ್ ಸಹ ಮಾಡ್ತಾ ಇದ್ರು. ಆಗ ನಾನು ‘ನೀವು ಈ ಪೈಟಿಂಗ್ ಮಾಡಲು ಆಯ್ಕೆ ಮಾಡಿಕೊಂಡ ಸಬ್ಜೆಕ್ಟ್ ಇಷ್ಟ ಆಗಲಿಲ್ಲ’ ಎಂದು ಒಮ್ಮೆ ಕಾಮೆಂಟ್ ಮಾಡಿದ್ದೆ. ಅವರು ರೇಗಿಕೊಂಡು ‘ನೀನೇನಾದ್ರೂ ಹೇಳ್ಕೊ’ ಎಂದು ತಮ್ಮ ಕೆಲಸ ಮುಂದುವರಿಸುತ್ತಿದ್ರು. ಇದರ ವರ್ಕ್ ಎಲ್ಲ ಕಂಪ್ಲೀಟ್ ಆಗಿ ಚಿತ್ರಕ್ಕೆ ಫ್ರೇಮ್ ಹಾಕಿಸಿದ ಮೇಲೆ ‘ಎಷ್ಟೊಂದು ಚೆನ್ನಾಗಿದೆ’ ಎಂದು ಹೇಳ್ತಾ ಇದ್ದೆ. ಅವರು ನಸುನಕ್ಕು ‘ಆವತ್ತು ಚೆನ್ನಾಗಿಲ್ಲ ಅಂತ ಹೇಳಿದ್ದೆ’. ಈಗ ಚೆನ್ನಾಗಿ ಕಾಣ್ತಿದ್ಯಾ’ ಅನ್ನೋರು…

ರಾಜೇಶ್ವರಿ ಅಮ್ಮನೊಂದಿಗೆ ಮಾತನಾಡಲು ಇನ್ನು ಸಾಕಷ್ಟು ವಿಷಯಗಳಿತ್ತು. ಬೆಳಗ್ಗಿನಿಂದಲೂ ನಿರಂತರವಾಗಿ ಸುರಿಯುತ್ತಿದ್ದ ಮುಂಗಾರು ಮಳೆ ತುಸು ಬಿಡುವು ಕೊಟ್ಟಿತ್ತು. ಪೋಟೋಗಳ ಸಲುವಾಗಿ ವಿನಂತಿಸಿಕೊಂಡು ಹೊರಬಂದೆವು. ಪೂರ್ಣಚಂದ್ರ ತೇಜಸ್ವಿ ಅವರನ್ನು ಗೆಳೆಯನಾಗಿ, ಪ್ರೇಮಿಯಾಗಿ, ಪತಿಯಾಗಿ ರಾಜೇಶ್ವರಿ ಅವರು ಕಂಡಿರುವ ರೀತಿ ಅನನ್ಯ. ಈ ಒಡನಾಟದ ಅಮೂಲ್ಯ ನೆನಪುಗಳನ್ನು ಅವರು ‘ನನ್ನ ತೇಜಸ್ವಿ’ ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ಆಸಕ್ತರು ಓದಲೇಬೇಕಾದ ಪುಸ್ತಕವಿದು….

 

Exit mobile version