Site icon ಕುಮಾರರೈತ

ಬೆಂಕಿಯಲ್ಲಿ ಅರಳುವ ಹೂವುಗಳು

ಭಾರತ-ಪಾಕಿಸ್ತಾನ ವಿಭಜನೆ ಸಂದರ್ಭ ರಕ್ತದ ಕೋಡಿಯೇ ಅರಿದಿದೆ. ಏನಾಗುತ್ತಿದೆ ಎನ್ನುವಷ್ಟರಲ್ಲಿ ಅಮಾಯಕರ ಕಗ್ಗೊಲೆಗಳಾಗಿವೆ. ಹರಡಿದ ವದಂತಿಗಳು, ಪರಸ್ಪರಲ್ಲಿ ಮೂಡಿದ ಅಪನಂಬಿಕೆಗಳು, ಅಮಾಯಕರ ನಡುವೆ ಕುತ್ಸಿತ, ಕುಟಿಲ ಮನಸುಗಳು ಇವುಗಳಿಗೆಲ್ಲ ಕಾರಣ. ಇಂಥ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ಹೆಣೆದ ಕೃತಿ ಖುಷ್ವಂತ್ ಸಿಂಗ್ ಹೆಣೆದ ಕೃತಿ ಟ್ರೈನ್ ಟು ಪಾಕಿಸ್ತಾನ”

ಕಾದಂಬರಿಯೊಂದನ್ನು ರಂಗರೂಪಕ್ಕೆ ಅಳವಡಿಸುವುದು, ಅದನ್ನು ಯಶಸ್ವಿಯಾಗಿ ಪ್ರದರ್ಶನ ಮಾಡುವುದು ಸರಳ ಮಾತಲ್ಲ. ಇದಕ್ಕೆ ಮೂಲಕೃತಿ ಅನುವು ಮಾಡಿಕೊಂಡುವಂತಿರಬೇಕು. ಅದರಲ್ಲಿಯೂ ಅನುವಾದಿತ ಕೃತಿಗಳ ಸಂದರ್ಭದಲ್ಲಿ ರಂಗಕ್ಕೆ ಹೊಂದುವಂತಹ ಅನುರೂಪತೆ ಒಳಗೊಂಡ ಕೃತಿಗಳು ಅಪರೂಪ. ವೈದ್ಯರೂ ಆಗಿರುವ ಸಾಹಿತಿ ಡಾ.ಎಂ.ಬಿ. ರಾಮಮೂರ್ತಿ ಕನ್ನಡಕ್ಕೆ ಅನುವಾದಿಸಿರುವ ಮೂಲಕೃತಿಯ ಹೆಸರನ್ನೇ ಹೊಂದಿರುವ ಟ್ರೈನ್ ಟು ಪಾಕಿಸ್ತಾನ ಇಂಥ ಅನನ್ಯತೆಯನ್ನು ಒಳಗೊಂಡಿದೆ. ಸಾಹಿತಿ ಚಿದಾನಂದ ಸಾಲಿ ಈ ಕೃತಿಯನ್ನು ರಂಗರೂಪಕ್ಕೆ ತಂದಿದ್ದಾರೆ.

ನಟ-ನಿರ್ದೇಶಕ ಶಂಕರ್ ನಾಗ್ ಅವರ ಸ್ಮರಣಾರ್ಥ ಸಾತ್ವಿಕ ರಂಗಪಯಣ ತಂಡಗಳವರು ಮೇ 27ರಿಂದ 30ರ ತನಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಂಗೋತ್ಸವ ನಡೆಸಿದರು. ಮೂಲಕೃತಿ, ಅನುವಾದಿತ ಕೃತಿ ಓದಿದ್ದರಿಂದ ಅದು ರಂಗರೂಪಕ್ಕೆ ಹೇಗೆ ಬಂದಿರಬಹುದು ಎಂಬ ಕುತೂಹಲವಿತ್ತು. ನಾಟಕ ನೋಡಿದಾಗ ಅದು ಕೃತಿಯ ಆಶಯದ ಸಮರ್ಥ ಅಭಿವ್ಯಕ್ತಿಯಾಗಿತ್ತು.

ರಂಗದ ಮೇಲೆ ಕೃತಿಯೊಂದನ್ನು ತರುವಾಗ ಅನೇಕ ಸವಾಲುಗಳಿರುತ್ತವೆ. ಅದರಲ್ಲಿಯೂ ಸೂಕ್ಷ್ಮವೂ, ಸಂಕೀರ್ಣವೂ ಆದ ಟ್ರೈನ್ ಟು ಪಾಕಿಸ್ತಾನ ಕೃತಿಯ ಸಂದರ್ಭದಲ್ಲಿ ಸವಾಲುಗಳು ಸಹಜವಾಗಿಯೇ ಎದುರಾಗುತ್ತವೆ. ಇವುಗಳನ್ನು ಅರ್ಥೈಸಿಕೊಂಡ ನಿರ್ದೇಶಕ ಎಸ್. ಪ್ರಶಾಂತ್ ರಂಗರೂಪವನ್ನು ಯಶಸ್ವಿಗೊಳಿಸುವಲ್ಲಿ ಗೆದ್ದಿದ್ದಾರೆ. ಅಭಿನಯ ತರಂಗ ತಂಡದ ಸದಸ್ಯರು ಇಲ್ಲಿಯ ಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸಿದ್ದಾರೆ.

ನಾಟಕ ಶುರುವಾಗುವುದೇ ಮನೋಮಾಜ್ರಾ ಹಳ್ಳಿಯ ಶ್ರೀಮಂತನ ಕಗ್ಗೊಲೆ ಮೂಲಕ. ಇಲ್ಲಿಂದ ಬೆಳವಣಿಗೆಯಾಗುವ ಪ್ರತಿ ಘಟನೆಗಳು ಒಂದಕ್ಕೊಂದು ತಳಕು ಹಾಕಿಕೊಳ್ಳುತ್ತವೆ. ಸಣ್ಣಪುಟ್ಟ ಕಳ್ಳತನಗಳನ್ನು ಮಾಡುತ್ತಿದ್ದು ಪ್ರೇಮಪರವಶನಾದ ನಂತರ ಪರಿವರ್ತನೆಯಾದ ಜಗತ್ಸಿಂಗ್ ಮೇಲೆ ಕೊಲೆ ಆರೋಪ ಸುತ್ತಿಕೊಳ್ಳುತ್ತದೆ. ಗ್ರಾಮೋದ್ದಾರದ ಕಾರಣ ಇಟ್ಟುಕೊಂಡು ಬಂದ ಬಂದ ಯುವಕ ಇಕ್ಬಾಲ್ ಸಿಂಗ್ ನನ್ನು ವಿನಾಃ ಕಾರಣ ಬಂಧಿಸಲಾಗುತ್ತದೆ.

ಇವೆಲ್ಲದರ ನಡುವೆ ದಂಡಾಧಿಕಾರಿ ಹುಕುಮ್ ಚಂದ್ ಸಂದರ್ಭಕ್ಕೆ ತಕ್ಕ ತನ್ನದೇ ಸಮರ್ಥನೆಯ ದಾಳಗಳನ್ನು ಉರುಳಿಸುತ್ತಾ ಸಾಗುತ್ತಾನೆ. ಈ ನಡುವೆ ಭಾರತ=ಪಾಕಿಸ್ತಾನದ ಗಡಿಯಂಚಿನ ಪ್ರದೇಶಗಳಲ್ಲಿ ಕೋಮುದಳ್ಳುರಿ ಹತ್ತಿಕೊಳ್ಳುತ್ತದೆ. ಹಿಂದೂ, ಮುಸ್ಲೀಮ್, ಸಿಖ್ಖರು ಭಾವೈಕ್ಯತೆ ಇದ್ದ ಹಳ್ಳಿಯನ್ನು ಅದು ಬಿಡುವುದಿಲ್ಲ. ಎರಡೂ ಕಡೆಯಿಂದಲೂ ಬರುವ ಟ್ರೈನುಗಳು ಕೊಲೆಗೀಡಾದವರ ಶವವಾಹಕ ಡಬ್ಬಿಗಳಾಗಿರುತ್ತವೆ.

ಮನೋಮಾಜ್ರಾದಿಂದ ಪಾಕಿಸ್ತಾನದತ್ತ ಹೊರಟ ರೈಲಿನಲ್ಲಿ ಇದ್ದವರನ್ನು ಕಗ್ಗೊಲೆ ಮಾಡಬೇಕೆನ್ನುವ ಸಂಚೊಂದು ರೂಪುಗೊಳ್ಳುತ್ತದೆ. ಆದರೆ ತನ್ನ ಪ್ರೇಮಿಯೂ ಆ ರೈಲಿನಲ್ಲಿ ಇದ್ದಾಳೆ ಎನ್ನುವುದನ್ನು ಅರಿತ ಜಗತ್ಸಿಂಗ್ ಅಲ್ಲಿದ್ದವರನ್ನೆಲ್ಲ ಕಾಪಾಡಬೇಕೆನ್ನುವ ನಿರ್ಧಾರ ಕೈಗೊಳ್ಳುತ್ತಾನೆ. ಇದು ನಾಟಕದ ಕೊನೆಯ ಹಂತ.

ಈ ಕಾರ್ಯದಲ್ಲಿ ತೊಡಗಿದ್ದಾಗಲೇ ಜಗತ್ಸಿಂಗ್ ಕೊಲೆಯಾಗುತ್ತಾನೆ. ಕಗ್ಗೊಲೆಯಿಂದ ಶುರುವಾದ ನಾಟಕ ಕಗ್ಗೊಲೆಯಿಂದ ಮುಕ್ತಾಯವಾಗುತ್ತದೆ. ಇಲ್ಲಿ ಜಗತ್ಸಿಂಗ್, ಆತನ ಪ್ರೇಯಸಿ, ಹಳ್ಳಿಯ ಮುಗ್ದಜನ ಬೆಂಕಿಯಲ್ಲಿ ಅರಳಿದ ಹೂವುಗಳಾಗುತ್ತಾರೆ. ಜಗತ್ಸಿಂಗ್ ಗೆಳತಿ ನೂರನ್ ಗರ್ಭದಲ್ಲಿ ಜಗತ್ಸಿಂಗ್ ಸದಾಶಯ ಅಂಕುರವಾಗಿರುತ್ತದೆ. ಈ ಮೂಲಕ ಸೌಹಾರ್ದತೆಗೆ ಸಾವಿಲ್ಲ ಎನ್ನುವ ಸಂದೇಶವನ್ನು ಖುಷ್ವಂತ್ ಸಿಂಗ್ ನೀಡಿದ್ದಾರೆ.

ಈ ಎಲ್ಲ ಆಶಯಗಳನ್ನು ನಾಟಕ ಬಹು ಸಮರ್ಥವಾಗಿ ಪ್ರೇಕ್ಷಕರೆಡೆಗೆ ದಾಟಿಸುತ್ತದೆ. ನಾಟಕ ನೋಡಿದ ನಂತರ ಪ್ರೇಕ್ಷಕರಲ್ಲಿ ದಟ್ಟ ವಿಷಾದ, ಮೌನ, ಮಾನವೀಯತೆ ಸಾಯುವುದಿಲ್ಲವೆಂಬ ಭಾವ ನೆಲಸುತ್ತದೆ. ಇಲ್ಲಿನ ಪಾತ್ರಗಳ ಮೂಲಸ್ವರೂಪವೇನು ಎಂದು ಅರ್ಥಮಾಡಿಕೊಂಡಿರುವ ಕಲಾವಿದರು ಅವುಗಳ ಸ್ವಭಾವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಅಭಿನಯಿಸಿರುವುದು, ನಿರ್ದೇಶಕರು ಪಾತ್ರಕ್ಕೆ ಹೊಂದಿಕೊಳ್ಳುವಂಥ ಕಲಾವಿದರನ್ನು ಆಯ್ಕೆ ಮಾಡಿರುವುದು ವಿಶೇಷ. ಆರಂಭದಿಂದ ಅಂತ್ಯದವರೆಗೂ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಇದರ ಟೆಂಪೋ ಕೂಡ ಕೊನೆಯವರೆಗೂ ಉಳಿದುಕೊಂಡಿದೆ.

Exit mobile version