Site icon ಕುಮಾರರೈತ

ವಿಶಿಷ್ಟ ಕಾಣ್ಕೆಗಳ ಬಂಡಾಯಗಾರ ಮಂಟೇಸ್ವಾಮಿ

ವೈದಿಕಶಾಹಿ ವಿರುದ್ಧ ಬೌದ್ಧಿಕ ಹೋರಾಟ ನಡೆಸಿದ ಪ್ರಮುಖರಲ್ಲಿ ಮಂಟೇಸ್ವಾಮಿ ಕೂಡ ಒಬ್ಬರು. ವೈದಿಕಶಾಹಿ ವಿರುದ್ಧವಾಗಿ ಹುಟ್ಟಿಕೊಂಡ ಧಾರ್ಮಿಕ ಚಳವಳಿ ವೀರಶೈವ ಧರ್ಮದಲ್ಲಿಯೂ ತಮಗೆ ಕಂದಾಚಾರ ಅನಿಸಿದ ಸಂಗತಿಗಳನ್ನು ಕಟುವಾಗಿ ಟೀಕಿಸಿದವರು. ಇಂಥ ಬಂಡಾಯಗಾರನ ಕಥಾವಸ್ತುವಿರುವ, ಹೆಚ್.ಎಸ್.ಶಿವಪ್ರಕಾಶ್ ಬರೆದ ‘ಮಂಟೇಸ್ವಾಮಿ ಕಥಾ ಪ್ರಸಂಗ’ವನ್ನು ಬೆಂಗಳೂರಿನ ಜ್ಞಾನಭಾರತಿಯ ಕಲಾಮೈತ್ರಿ ಸಾಂಸ್ಕೃತಿಕ ಪ್ರತಿಷ್ಠಾನದವರು ಕಲಾಗ್ರಾಮದಲ್ಲಿ ಪ್ರದರ್ಶಿಸಿದರು.

ಬಂಡಾಯಗಾರ ಮಂಟೇಸ್ವಾಮಿ ಚಿಂತನೆಗಳನ್ನು ಪ್ರಸ್ತುತ ಪಡಿಸುವ ಪ್ರಯತ್ನವನ್ನು ನಾಟಕ ನಡೆಸುತ್ತದೆ. ಕಲ್ಯಾಣದಲ್ಲಿ ಶರಣ ಚಳವಳಿ ಹುಟ್ಟಿಗೆ, ಅದರ ಬೆಳವಣಿಗೆಗೆ ಕಾರಣವಾದ ಬಸವಣ್ಣ ಅವರಿಗೆ ತಮ್ಮ ವೈಚಾರಿಕ ಆಲೋಚನೆ ದರ್ಶನ ಮಾಡಿಸುತ್ತಾರೆ. ಕರಡಿಗೆ (ಶಿವಲಿಂಗ) ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ ಧರಿಸಿದವರೇ ಶರಣರು ಅನ್ನುವ ಪರಿಕಲ್ಪನೆಯನ್ನು ಲೇವಡಿ ಮಾಡುತ್ತಾರೆ.

ಈ ನಿಟ್ಟಿನಲ್ಲಿ ಜಂಗಮರ ಕೊರಳಿನಲ್ಲಿದ್ದ ಕರಡಿಗೆಗಳನ್ನು ಮಾಯ ಮಾಡಿ, ಹೆಂಡದ ಕುಡಿಕೆಯಲ್ಲಿ ಇದೆ ಹುಡುಕಿ ಎಂದು ಅವರು ಹೇಳುವುದು ಸಾಂಕೇತಿಕ. ವೈದಿಕಶಾಹಿ ವಿರೋಧಿಸುವ ಚಿಂತನೆಯ ರಾಚಪ್ಪಾಜಿ, ಸಿದ್ಧಪ್ಪಾಜಿ ಅವರಂಥ ಶಿಷ್ಯ ಪರಂಪರೆಯನ್ನು ನೀಡಿದ್ದು ಇವರ ದೊಡ್ಡ ಸಾಧನೆ.

ಈ ಅಂಶಗಳು ನಾಟಕದಲ್ಲಿ ಚೆನ್ನಾಗಿ ಮೂಡಿವೆ. ಮಂಟೇಸ್ವಾಮಿ ಹೇಳುವ ಒಂದೊಂದು ಮಾತು ಸಹ ನೋಡುಗರ ಮನಸಿನಲ್ಲಿ ದಾಖಲಾಗುತ್ತಾ ಹೋಗುತ್ತವೆ. ಏಕೆಂದರೆ ಅವು ಅಷ್ಟು ಮೊನಚು, ತೀಷ್ಣ. ನಾಟಕದ ವೈಶಿಷ್ಟವೇನೆಂದರೆ ತನ್ನ ವಿಶಿಷ್ಟ ಚಿಂತನೆಯ ಹೊಳವುಗಳನ್ನು ಪಾತ್ರ ಕಿಂಚಿತ್ತಾಗಿ ಹೇಳಿದರೆ ಅದನ್ನು ಹಾಡುಗಳ ಮೂಲಕ ನೀಲಗಾರರು ವಿಸ್ತರಿಸುತ್ತಾ ಹೋಗುತ್ತಾರೆ. ಆದ್ದರಿಂದ ಇಲ್ಲಿ ಈ ಬಂಡಾಯಗಾರನ ಮಾತುಗಳಿಗೂ ನೀಲಗಾರರ ಪದಗಳಿಗೂ ನಿರಂತರ ತಂತು ಇದೆ.

ನೀಲಗಾರರು

ಮಂಟೇಸ್ವಾಮಿ ಪರಂಪರೆಯಲ್ಲಿ ನೀಲಗಾರರು ಸಾಕ್ಷಿಪ್ರಜ್ಞೆ. ನಾಟಕದಲ್ಲಿ ಇವರನ್ನೇ ಸೂತ್ರಧಾರರನ್ನಾಗಿ ಮಾಡಲಾಗಿದೆ. ಇವರು ಹೇಳುವ ಹಾಡುಗಳು ನಾಟಕದ ಪಾತ್ರಧಾರಿಗಳು ಹೇಳುವ ಮಾತಿಗಿಂತ ಹೆಚ್ಚು ಅರ್ಥಪೂರ್ಣವೂ, ವಿಸ್ತಾರಾತ್ಮಕವೂ ಆಗಿವೆ. ಮೂಲಭೂತವಾಗಿ ಕಥೆ ಹೇಳುವ ನೀಲಗಾರರು, ಸೂತ್ರಧಾರಲ್ಲಿರುವ ಸಂಯಮ ಇಲ್ಲಿ ಕಾಣಲಿಲ್ಲ. ಇಲ್ಲಿನ ನೀಲಗಾರರ ಪಾತ್ರಧಾರಿಗಳಲ್ಲಿ ಕಾಣುತ್ತಿದ್ದ ಆವೇಶ, ತೀರಾ ಎತ್ತರದ ದನಿಯಲ್ಲಿ ಹಾಡುವಿಕೆ, ಆವೇಶಪೂರ್ಣ ಹೆಜ್ಜೆ ಹಾಕುವಿಕೆ ಅನಗತ್ಯವಾಗಿತ್ತು.

ಪಳಗಬೇಕಾದ ಪಾತ್ರಧಾರಿಗಳು

ಬಹುತೇಕ ಪಾತ್ರಧಾರಿಗಳ ನಟನೆ ಪಕ್ವವಾಗಿತ್ತು. ಆದರೆ ಗುಂಪಿನಲ್ಲಿ ಬರುವ ಕೆಲವು ಪಾತ್ರಧಾರಿಗಳು ಗಂಭೀರ ಸನ್ನಿವೇಶಗಳಲ್ಲಿಯೂ ನಗು ತುಳುಕಿಸುತ್ತಿದ್ದು ಅಭಾಸಪೂರ್ಣವಾಗಿತ್ತು. ಕೆಲವೊಮ್ಮೆ  ಪಾತ್ರಧಾರಿಗಳಿಗೆ ಸಂಭಾಷಣೆಯೇ ಮರೆತು ಹೋಗಿದೆಯೇನೂ ಎನಿಸುತ್ತಿತ್ತು. ಏಕೆಂದರೆ ಎದುರಿಗಿರುವ ಪಾತ್ರದ ಮಾತು ಮುಗಿದ ಕೂಡಲೇ ಹೆಚ್ಚು ಸಮಯದ ಅಂತರ ನೀಡದೇ ಅದರ ಸರಣಿ ಮುಂದುವರೆಸಿಕೊಂಡು ಹೋಗಬೇಕು. ಅಲ್ಲಲ್ಲಿ ಇದು ಕಾಣೆಯಾಗುತ್ತಿತ್ತು. ಇದರತ್ತ ನಿರ್ದೇಶಕರು ಗಮನ ಹರಿಸುವುದು ಸೂಕ್ತ.

ಜೀವ ತುಂಬಿದ ನಟ

ನಾಟಕದ ಪಾತ್ರ, ಸಂಭಾಷಣೆ ಎಷ್ಟೆ ಶಕ್ತಿಯುತವಾಗಿದ್ದರೂ ರಂಗಭೂಮಿಯಲ್ಲಿ ಅವುಗಳಿಗೆ ಜೀವ ನೀಡುವ ಹೊಣೆಗಾರಿಕೆ ಪಾತ್ರಧಾರಿಗಳ ಮೇಲಿರುತ್ತದೆ. ಇಲ್ಲಿ ಮಂಟೇಸ್ವಾಮಿ ಪಾತ್ರ ವಹಿಸಿದ ಸಂಪತ್ ಕುಮಾರ್ ಈ ಹೊಣೆಗಾರಿಕೆ ನಿಭಾಯಿಸಿದರು. ಅವರ ಭಾವಾಭಿನಯ, ಸಂಭಾಷಣೆ ಒಪ್ಪಿಸುವ ರೀತಿ ಗಮನ ಸೆಳೆಯುತ್ತಿತ್ತು.

ನಿರ್ದೇಶನ

ವಿಶೇಷ ರಂಗಸಜ್ಜಿಕೆಗಳಿಲ್ಲದ ನಾಟಕವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವುದು ಸವಾಲಿನ ಕೆಲಸ. ಇದನ್ನು ನಿರ್ದೇಶಕ ಡಾ. ಕೆ. ರಾಮಕೃಷ್ಣಯ್ಯ ಸ್ವೀಕರಿಸಿ ಗೆದ್ದಿದ್ದಾರೆ. ದೃಶ್ಯಗಳನ್ನು ಅವರು ಜೋಡಿಸಿದ ರೀತಿ ಅನನ್ಯ. ಪ್ರತಿಯೊಂದು ಹಂತದಲ್ಲಿಯೂ ನಾಟಕದ ಟೆಂಪೋ ಏರುತ್ತಾ ಹೋಗಿ ತನ್ನ ಆಸಕ್ತಿ ಉಳಿಸಿಕೊಳ್ಳುವಂತೆ ಮಾಡಿದ್ದಾರೆ. ಉಡುಪು, ಪ್ರಸಾಧನ, ಬೆಳಕಿನ ನಿರ್ವಹಣೆ ಸಹ ಉತ್ತಮ.

Exit mobile version