ಬೆಂಗಳೂರು ನಗರದೊಳಗೆ ಚಿರತೆಗಳು ಬಂದಿವೆ ಎಂದು ಹುಯ್ಲಿಡಲಾಗುತ್ತಿದೆ. ಅರೇ ಬಂದಿದ್ದು ಯಾರು, ಹೋಗಿದ್ದು ಯಾರು ?

ಕೇವಲ 30 ವರ್ಷದ ಹಿಂದೆ ಬೆಂಗಳೂರು ಹೇಗಿತ್ತು ? ಈಗ ಹೇಗಿದೆ. ಬೆಂಗಳೂರು ಬೆಳವಣಿಗೆ ಬನ್ನೇರುಘಟ್ಟ ಅರಣ್ಯವನ್ನು ಚುಂಬಿಸಿದೆ. ಇದರ ಚುಂಬನವೆಂದರೆ ಮೃತ್ಯು ಚುಂಬನ.‌ಇಲ್ಲಿದ್ದ, ಅಳಿದುಳಿದ ವನ್ಯಪ್ರಾಣಿಗಳ ಚಲನವಲನದ ಮೇಲೆ ಯಾವ ರೀತಿಯ ದುಷ್ಪರಿಣಾಮಗಳು ಆಗಿವೆ ಎಂದು ಸರ್ಕಾರ ಮತ್ತು ನಾವು ಯೋಚಿಸಿದ್ದೇವೆಯೇ ?

ಕೇವಲ 20 ವರ್ಷದ ಹಿಂದೆ ತುರಹಳ್ಳಿ ಅರಣ್ಯ ಪ್ರದೇಶ ಹೇಗಿತ್ತು ? ಇಂದು ಹೇಗಿದೆ ? ಅದರ ಸುತ್ತ ನಗರ ಬೆಳೆದಿದೆ. ಬೆಳೆಯುತ್ತಲೇ ಇದೆ. ಕಾರಿಡಾರ್ ಗಳು‌ ನಿರ್ಮಾಣವಾಗಿವೆ. ಈ ರಸ್ತೆ ನಿರ್ಮಾಣದ ನಂತರ ಲೆಕ್ಕವಿಲ್ಲದಷ್ಟು ಚಿರತೆಗಳು ವೇಗದಿಂದ ಹಾದು ಹೋಗುವ ವಾಹನಗಳಿಗೆ ಜೀವ ಕೊಟ್ಟಿವೆ. ಈಗ ಅಳಿದುಳಿದಿರುವ ಅವುಗಳನ್ನೇ ನಗರದೊಳಗೆ ಬಂದಿವೆ ಎಂದರೆ ? ದೂರಿದರೆ ಹೇಗೆ ?

ಅಸಲಿಗೆ ಚಿರತೆಗಳು‌ ದಟ್ಟ ಅರಣ್ಯದಲ್ಲಿ‌ ಮಾತ್ರವೇ ಇರುವುದಿಲ್ಲ. ಕುರುಚಲು ಕಾಡು, ಕಲ್ಲುಗುಡ್ಡುಗಳ ಪೊಟರೆಗಳಲ್ಲೂ ಇರುತ್ತವೆ. ಇಡೀ ಬೆಂಗಳೂರು ‌ ಗ್ರಾನೈಟ್ ತಳಹದಿ ಮತ್ತು ಗುಡ್ಡಗಳ‌ ಮೇಲೆ ನೆಲೆ ನಿಂತಿದೆ.

ಬೆಂಗಳೂರು ಸುತ್ತಲೂ‌ ಇಂಥ‌ ಗುಡ್ಡಗಳನ್ನು ಕಾಣಬಹುದು.‌ಅಲ್ಲಿ ಚಿರತೆ, ನರಿ, ಮೊಲ, ವೈವಿಧ್ಯ‌ ಹಾವುಗಳು‌ ಇತ್ಯಾದಿ ಇರುತ್ತವೆ. ಇಂದು ಮೊಲಗಳೆಲ್ಲಿವೆ ? ಜಿಂಕೆಗಳು ಎಲ್ಲಿವೆ ? ತುರಹಳ್ಳಿಯಲ್ಲಿ ಇರುವ ಅಳಿದುಳಿದ ಜಿಂಕೆಗಳು ಬೇಲಿಯ ಮರೆಯಲ್ಲಿ ಅಡಗಿವೆ. ಈಗ ಅವುಗಳನ್ನೂ ನಗರದ ಬೀದಿ‌ನಾಯಿಗಳು ಕಿತ್ತು ತಿನ್ನುತ್ತಿವೆ.‌

ಹೆಸರಘಟ್ಟದಲ್ಲಿದ್ದ ವಿಶಾಲ ಹುಲ್ಲುಗಾವಲಿನಲ್ಲಿ‌ ಮೊದಲಿಗೆ ಸರ್ಕಾರಿ ಯೋಜನೆಗಳು ಅಡ್ಡಿಯಿಟ್ಟವು. ಅವುಗಳಿಂದ ಅಲ್ಲಿಯ ಪರಿಸರಕ್ಕೆ ಅಂಥ ಧಕ್ಕೆಯೇನೂ ಆಗಲಿಲ್ಲ.‌ ದೇವರಾಜ ಅರಸರು‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು‌ ಸುತ್ತ ಹಸಿರು ಬೆಲ್ಟ್ ನಿಯಮ ತರಲಾಯಿತು. ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿಯೂ ಈ‌ ನಿಯಮ ಬಲಪಡಿಸಲಾಯಿತು. ನಂತರ ಏನಾಯಿತು ?

ಹಸಿರು ವಲಯವನ್ನೂ‌ ದಾಟಿ ಬೆಂಗಳೂರು ಬೆಳವಣಿಗೆಗೆ ಅವಕಾಶ ನೀಡಲಾಯಿತು. ಇಂದು ಹೆಸರುಘಟ್ಟದ ಸುತ್ತಲೂ‌ ನಗರ ಬೆಳೆದಿದೆ. ಅಲ್ಲಿದ್ದ ಹೆಬ್ಬಕ್ಕಿ ಸೇರಿದಂತೆ ಅಪರೂಪದ ಹಕ್ಕಿಗಳು ಎಲ್ಲಿ ಹೋದವು ?

ಹೀಗೆ ಆದ ಅನಾಹುತಗಳ ಪಟ್ಟಿ ಹೇಳುತ್ತಾ ಹೋದರೆ ಅವುಗಳಿಗೆ ಕೊನೆಯಿಲ್ಲ. ಬೆಂಗಳೂರು‌ ಸುತ್ತಮುತ್ತಲೂ ಇದ್ದ ಅಮೂಲ್ಯ ಪರಿಸರವನ್ನು ಹಾಳು ಮಾಡಿ ಈಗ ಚಿರತೆಗಳು ನಗರದೊಳಗೆ ಬಂದಿವೆ ಎಂದು‌ ಹುಯ್ಲು ಎಬ್ಬಿಸಲಾಗುತ್ತಿದೆ. ಚಿರತೆಗಳು ತಮ್ಮ ಅಳಲನ್ನು ಯಾರ ಬಳಿ ಹೇಳಿಕೊಳ್ಳಬೇಕು ? ಅಸಲಿಗೆ ತಪ್ಪು ಮಾರದು ?

ಚಿರತೆ ಚಿತ್ರದ ಛಾಯಾಗ್ರಹಕರು: ಶಿವಕುಮಾರ್ ಚಿಕ್ಕಮಗಳೂರು

Similar Posts

Leave a Reply

Your email address will not be published. Required fields are marked *