ರಜನೀಕಾಂತ್ ಅಭಿನಯದ ಕಬಾಲಿ  ಹಾಗೆಯೇ “ಕಾಲಾ” ಕೂಡ ರಾಜಕೀಯ ಆಯಾಮದ ಸಿನೆಮಾ. ಅತ್ತ ತೀರಾ ವಾಚ್ಯವೂ ಆಗದೇ ಇತ್ತ ತೀರಾ ಸಂಕೇತಾತ್ಮಕವೂ ಆಗದೇ ಸ್ಪಷ್ಟ ಸಂದೇಶವನ್ನು ಸಾರಲು ಪ್ರಯತ್ನಿಸಿರುವ ಚಿತ್ರ. ಈ ಕಾರಣಕ್ಕಾಗಿಯೂ ಸದ್ಯದ ಭಾರತೀಯ ರಾಜಕೀಯ ಸಂದರ್ಭದಲ್ಲಿ ಇದು ತನ್ನದೇ ಮಹತ್ವವನ್ನು ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ರಾಷ್ಟ್ರೀಯತೆ ಹೆಸರಿನಡಿಯಲ್ಲಿ ದಕ್ಷಿಣ ಭಾರತೀಯರ ಮೇಲೆ ಉತ್ತರದವರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂಬ ಭಾವನೆ ಇದೆ. ಅದರಲ್ಲಿಯೂ ತಮಿಳುನಾಡಿನಲ್ಲಿ ಇದು ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿಯೇ ಅಲ್ಲಿ ಹಿಂದಿ ಹೇರಿಕೆಗೆ ವಿರೋಧವಿದೆ. ಕೇಂದ್ರ ಸರ್ಕಾರ ಏನೇ ತಿಪ್ಪರಲಾಗ ಹಾಕಿದರೂ ಅಲ್ಲಿ ಹಿಂದಿಯನ್ನು ಹೇರಲು ಸಾಧ್ಯವಾಗಿಲ್ಲ.

“ಕಾಲಾ” ಸಿನೆಮಾದಲ್ಲಿ ಮುಂಬೈ, ಅಲ್ಲಿನ ಧಾರವಿ ಎಲ್ಲವೂ ಸಾಂಕೇತಿಕ. ಆ ಮಹಾನಗರವನ್ನು ಆರ್ಥಿಕವಾಗಿ ಆಳುತ್ತಿರುವವರು ಉತ್ತರದವರು. ಇಂಥ ನಗರದಲ್ಲಿ ಬದುಕು ಕಟ್ಟಿಕೊಳ್ಳಲು ಬೇರೆಬೇರೆ ರಾಜ್ಯಗಳಿಂದ ಜನ ವಲಸೆ ಹೋಗಿದ್ದಾರೆ. ಅದರಲ್ಲಿಯೂ ತಮಿಳುನಾಡಿನಿಂದ ಅಲ್ಲಿಗೆ ಹೋದವರ ಸಂಖ್ಯೆ ಬಹಳ. ಶ್ರಮಿಕ ವರ್ಗದ ಕೆಲಸಗಳಲ್ಲಿ ತೊಡಗಿಸಿಕೊಂಡ ತಮಿಳರಿಗೆ ಅಲ್ಲಿನ ಧಾರವಿ ಆಶ್ರಯ ನೀಡಿದೆ. ಏಷಿಯಾದ ಬಹುದೊಡ್ಡ ಸ್ಲಮ್ ಎಂದೂ ಈ ಪ್ರದೇಶವನ್ನು ಕರೆಯಲಾಗುತ್ತದೆ.

ಹೊರರಾಜ್ಯದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆಲಸಿದ ಪ್ರದೇಶದಲ್ಲಿ ಬೇರೆಬೇರೆ ಸಮಸ್ಯೆಗಳು ಉಂಟಾದಾಗ ಅವರಿಗೆ ನಾಯಕನೊಬ್ಬ ಉದಯಿಸಿರುತ್ತಾನೆ. ದಶಕಗಳ ಹಿಂದೆ ವರದನಾಯಗನ್ ಮೂಡಿದ ಹಾಗೆ. ಕಾಲಾ ಸಿನೆಮಾದ ನಾಯಕ ಕರಿಕಾಲನ್ ಕೂಡ ಕೊಂಚ ಇದೇ ಮಾದರಿಯ ವ್ಯಕ್ತಿ. ಆದರೆ ಈತನಿಗೆ ವರದನಾಯಗನ್ ಗೆ ಇರದ ರಾಜಕೀಯ ಆಯಾಮಗಳು ಇವೆ. ಈತನ ರಾಜಕೀಯ ಪ್ರಜ್ಞೆ ಅಪಾರ. ಮುಂಬರುವ ಸಾಮಾಜಿಕ, ಆರ್ಥಿಕ ಅಪಾಯಗಳನ್ನು ಗ್ರಹಿಸುವ ಶಕ್ತಿ ಈತನಿಗಿದೆ. ಆದ್ದರಿಂದಲೇ ಈತ ಅನಭಿಷಿಕ್ತ ದೊರೆಯಾಗಿರುವ ಧಾರವಿಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಹಿಡಿತ ಸಾಧಿಸಲು ಯತ್ನಿಸುತ್ತಲೇ ಇರುತ್ತವೆ.

ಇಂಥ ಸಂದರ್ಭದಲ್ಲಿ ಸದಾ ಸ್ವಚ್ಚತಾ ಅಭಿಯಾನದ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರದ ಹರಿದಾದ ಎಂದು ಕರೆಯಲ್ಪಡುವ ಬಹು ಪ್ರಭಾವಿ ಸಚಿವನೊಬ್ಬ ಧಾರವಿಯ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ನಡೆಸುತ್ತಾನೆ. ಸ್ವಚ್ಚ ಭಾರತ್ ಬಗ್ಗೆ ಹೇಳುತ್ತಲೇ ಇರುವ ಈ ಪಾತ್ರ ಪ್ರಸ್ತುತ ಕೇಂದ್ರದಲ್ಲಿ ಪ್ರಧಾನ ಸ್ಥಾನದಲ್ಲಿರುವ ವ್ಯಕ್ತಿಯನ್ನು ನೆನಪಿಸುತ್ತದೆ. ಆದರೆ ಈತನ ಪ್ರಯತ್ನಗಳಿಗೆ ತೊಡರುಗಾಲು ಹಾಕಿ ನಿಂತವನು “ಕಾಲಾ”

ಕಾಲಾ ಇಲ್ಲಿ ಸದಾ ಕಪ್ಪುಬಟ್ಟೆ ಧರಿಸಿರುವ ಪಾತ್ರ. ವ್ಯಕ್ತಿಯೂ ಸಹ ಕಪ್ಪೇ…. ಈ ಪಾತ್ರ ದ್ರಾವಿಡರಾದ ದಕ್ಷಿಣ ಭಾರತೀಯರನ್ನು ಪ್ರತಿನಿಧಿಸುತ್ತದೆ.  ಕಪ್ಪಾಗಿರುವವರನ್ನು ಉತ್ತರದಲ್ಲಿ ಕಾಲಾ ಎಂದೇ ಕರೆಯುತ್ತಾರೆ. ಕಾಲಾ ಎಂದರೆ ಶಿವ, ಯಮ ಎಂಬರ್ಥಗಳೂ ಇವೆ. ಕಾಲಾ ಎಂಬ ಹೆಸರು ಇಲ್ಲಿ ಬಹು ಸಾಂಕೇತಿಕ. ದ್ರಾವಿಡ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ ಅವಿಭಜಿತ ಆಂಧ್ರಪ್ರದೇಶವನ್ನು ಈತ ಸಾಂಕೇತಿಕವಾಗಿ ಪ್ರತಿನಿಧಿಸುತ್ತೇನೆ. ಇನ್ನೊಂದು ಆಯಾಮದಲ್ಲಿ ರಾಷ್ಟ್ರೀಯತೆ ಹೆಸರಿನಲ್ಲಿ ಉತ್ತರದವರು ನಡೆಸುವ ದಬ್ಬಾಳಿಕೆಗೆ ಪ್ರತಿಭಟನೆಯ ರೂಪದಲ್ಲಿಯೂ ಕಪ್ಪು ಕರಿಕಾಲನ್ ತನ್ನ ಕಪ್ಪು ಉಡುಪಿನಲ್ಲಿ ಇದ್ದಾನೆ.

ಇಲ್ಲಿ ಬರುವ ಮುಸ್ಲೀಮ್ ಮಹಿಳೆ ಜರೀನಾ ಕೂಡ ಮುಸ್ಲೀಮರ ಸಾಂಕೇತಿಕ ಪ್ರತಿನಿಧಿ. ಹರಿದಾದನನ್ನು ಕಾಣಲು ಬಂದವರು ಆತನ ಕಾಲುಗಳನ್ನು ಸ್ಪರ್ಶಿಸಿ ನಮಸ್ಕರಿಸುವುದು ಅಲಿಖಿತ ನಿಯಮವಾಗಿರುತ್ತದೆ. ಅಂದರೆ ಶರಣಾಗತಿ. ಆದರೆ ಈ ರೀತಿ ಶರಣಾಗತಿ ತೋರದಿರುವ ದಿಟ್ಟತನವನ್ನು ಜರೀನಾ ತೋರುತ್ತಾಳೆ. ತಾನು ಪ್ರತಿನಿಧಿಸುತ್ತಿರುವ ಸಮಾಜದ ಸ್ವಾಭಿಮಾನದ ಸಂಕೇತವಾಗಿಯೂ ಕಾಣುತ್ತಾಳೆ.

ಇಲ್ಲಿ ನಡೆಯುವ ಎಂ.ಎಲ್.ಎ. ಚುನಾವಣೆಯಲ್ಲಿ ಕಾಲಾ ಬೆಂಬಲಿಸುವ ದಕ್ಷಿಣ ಭಾರತೀಯರೆ ಗೆಲ್ಲುತ್ತಾರೆ. ಇದು ದಕ್ಷಿಣವನ್ನು ತನ್ನ ಕಬ್ಜಾಗೆ ತೆಗೆದುಕೊಳ್ಳಲು ರಾಷ್ಟ್ರೀಯ ಪಕ್ಷವೊಂದು ನಡೆಸುತ್ತಿರುವ ಪ್ರಯತ್ನಳಿಗೆ ಸಡ್ಡು ಹೊಡೆದಂತಿದೆ. ತಮ್ಮೆಲ್ಲ ಹುನ್ನಾರಗಳಿಗೆ ಕಾಲಾ ಮಣಿಯದೇ ಇದ್ದಾಗ ಆತನನ್ನು ಮುಗಿಸುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತವೆ. ಇದಕ್ಕೆಲ್ಲ ಕಾಲಾ ಉತ್ತರ ನೀಡುವ ಬಗೆ ಆಸಕ್ತಿಕರ.

ಪ್ರಸ್ತುತದ ಭಾರತೀಯ ರಾಜಕೀಯ ಬೆಳವಣಿಗೆಗಳನ್ನು ಕಾಲಾ ಸಿನೆಮಾದ ಮೂಲಕ ನಿರ್ದೇಶಕ ಪ. ರಂಜೀತ್ ಕಟ್ಟಿಕೊಡುವ, ಉತ್ತರದಿಂದ ಮುಂಬರುವ ಅಪಾಯಗಳನ್ನು ಮನಗಾಣಿಸಲು ಯತ್ನಿಸಿರುವ ರೀತಿ ಬಹು ಆಸಕ್ತಿಕರ. ಕಮರ್ಶಿಯಲ್ ಆಂಶಗಳನ್ನು ಇರಿಸಿಕೊಂಡು ಸಹ ಗಟ್ಟಿ ರಾಜಕೀಯ ಸಂದೇಶವನ್ನು ಕಟ್ಟಿಕೊಡುವ ಬಗೆಯಂತೂ ಮೆಚ್ಚುಗೆ ಮೂಡಿಸುತ್ತದೆ.

ಈ ಸಿನೆಮಾದ ಎಲ್ಲ ಕ್ಷೇತ್ರಗಳಲ್ಲಿಯೂ ನಿರ್ದೇಶಕ ಪ. ರಂಜೀತ್ ಹಿಡಿತ ಸಾಧಿಸಿರುವುದು ಕಾಣುತ್ತದೆ. ಆದರೆ ಅಲ್ಲಲ್ಲಿ ಎಡವಿರುವುದೂ ಕಾಣುತ್ತದೆ. ಆರಂಭದಲ್ಲಿ ಸ್ಕ್ರಿಪ್ಟ್ ಕೊಂಚ ಜಾಳಾಗಿದೆ. ಇದರಿಂದ ಸಿನೆಮಾ ಏರುಗತಿ ಕಂಡುಕೊಳ್ಳುವುದು ತಡವಾಗುತ್ತದೆ. ಕಲಾ ನಿರ್ದೇಶಕ ರಾಮಲಿಂಗಮ್ ಪರಿಶ್ರಮ ಚಿತ್ರದುದ್ದಕ್ಕೂ ಕಾಣುತ್ತದೆ. ಚೆನ್ನೈನ ಸ್ಟುಡಿಯೋದಲ್ಲಿ ಇವರು ಧಾರವಿ ಮತ್ತು ಅಲ್ಲಿನ ಬೃಹತ್ ಧೋಬಿಘಾಟಿನ ಪ್ರತಿಸೃಷ್ಟಿ ಮಾಡಿದ್ದಾರೆ. ಎಲ್ಲಿಯೂ ಈ ಎಲ್ಲ ಕಲಾ ಸಂಯೋಜನೆ ಕೃತಕ ಎಂದು ಭಾಸವಾಗುವುದಿಲ್ಲ.

ಛಾಯಾಗ್ರಾಹಕ ಜಿ. ಮುರುಳಿ, ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಕೆಲಸ ಅಚ್ಚುಕಟ್ಟು. ಆದರೆ ಇದೇ ಮಾತನ್ನು ಸಂಕಲನಕಾರ ಎ. ಶ್ರೀಕರ್ ಪ್ರಸಾದ್ ಅವರ ಕೆಲಸಕ್ಕೂ ಹೇಳಲಾಗುವುದಿಲ್ಲ. ಸಂಕಲನ ಇನ್ನಷ್ಟು ವೇಗ, ಹರಿತವಾಗಿರಬೇಕಿತ್ತು. ಕೊರಿಯೋಗ್ರಾಫರ್ ಸ್ಯಾಂಡಿ ಅವರ ಕೆಲಸದ ರೀತಿ ದಶಕದ ಹಿಂದಿನ ವಿ ಟಿವಿ, ಎಂ ಟಿವಿ ಆಲ್ಬಮ್ ಮಾದರಿ ಇದೆ. ಈ ನೆರಳಿನಿಂದಾಚೆ ಬಂದು ಕೊರಿಯೊಗ್ರಫಿ ಮಾಡುವ ಸಾಧ್ಯತೆಯನ್ನು ದುಡಿಸಿಕೊಳ್ಳಬಹುದಾಗಿತ್ತು.

ಮಹಿಳಾ ಪಾತ್ರಗಳ ವಿಶೇಷತೆ:

ಇಲ್ಲಿ ಬರುವ ಮಹಿಳಾ ಪಾತ್ರಗಳಾದ ಸೆಲ್ವಿ, ಜರೀನಾ, ಚಾರುಮತಿ ಪಾತ್ರಗಳಂತೂ ಸಿನೆಮಾಗಳ ಏಕತಾನತೆಯ ಮಹಿಳೆಯರ ಮಾದರಿಗಿಂತ ವಿಭಿನ್ನ. ಈ ಪಾತ್ರಗಳ ದಿಟ್ಟತೆಯ, ಪ್ರಬುದ್ಧತೆಯ ಸಂಕೇತಗಳಾಗಿವೆ. ಸೆಲ್ವಿ ಪಾತ್ರ ಮೇಲ್ನೋಟ್ಟಕ್ಕೆ ಟಿಪಿಕಲ್ ತಮಿಳು ಮಹಿಳೆ ಮಾದರಿಯಂತೆ ಕಂಡರೂ ಆಕೆ ಸನ್ನಿವೇಶಗಳನ್ನು ಆರ್ಥೈಸಿಕೊಳ್ಳುವ ರೀತಿ, ಪತಿ ಕರಿಕಾಲನ್ ಅಥವಾ ಕಾಲಾನನ್ನು ಕಾಣುವ ರೀತಿ ಅನನ್ಯ. ಸಿಂಗಲ್ ಮದರ್ ಆಗಿರುವ ಜರೀನಾ ಪಾತ್ರ ಕೂಡ ಪ್ರಬುದ್ಧತೆಯ ಸಂಕೇತ. ಚಾರುಮತಿ ಪಾತ್ರದ ನೇರ-ದಿಟ್ಟ- ಎದೆಗಾರಿಯ ನಡವಳಿಕೆ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಕಾಲಾ ಸಿನೆಮಾವನ್ನು ಇನ್ನಷ್ಟು ಉತ್ತಮವಾಗಿ ಪ್ರೆಸೆಂಟ್ ಮಾಡಲು ಸಾಧ್ಯವಿತ್ತು. ಇಂಥ ಪ್ರಯತ್ನದಲ್ಲಿ ನಿರ್ದೇಶಕ ಪ. ರಂಜೀತ್ ಕೊಂಚ ಎಡವಿದ್ದಾರೆ. ಆದರೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಸೆಲುಲ್ಯಾಯ್ಡ್ ಗೆ ತಂದಿರುವುದು, ಸಿನೆಮಾ ಆಯಾಮದ ಸಾಧ್ಯತೆಗಳೆಲ್ಲವನ್ನೂ ದುಡಿಸಿಕೊಳ್ಳಲು ಪ್ರಯತ್ನಿಸಿರುವುದು ಅರ್ಥವಾಗುತ್ತದೆ.

ಅಭಿನಯ ಅನನ್ಯ:

ನಟ ರಜನೀಕಾಂತ್ ಅವರ ಎಂದಿನ ಜನಪ್ರಿಯ ಮ್ಯಾನರಿಸಂಗಳನ್ನು ನಿಯಂತ್ರಿಸಲು ನಿರ್ದೇಶಕ ಪ. ರಂಜೀತ್ ಪ್ರಯತ್ನಿಸಿದ್ದಾರೆ. ಆದರೆ ಆ ಯತ್ನದಲ್ಲಿ ಅವರು ಪೂರ್ಣ ಯಶಸ್ಸು ಕಂಡಿಲ್ಲವಾದರೂ ಕಾಲಾ ಪಾತ್ರಕ್ಕೆ ನ್ಯಾಯ ಒದಗಿಸುವವಲ್ಲಿ ರಜನಿ ಗೆದ್ದಿದ್ದಾರೆ.  ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ತೊಡಗಿಸಿಕೊಂಡ ಈಶ್ವರಿ ರಾವ್, ಹುಮ ಖುರೇಷಿ, ಅಂಜಲಿ ಪಾಟೀಲ್, ಸಮುತೀರಕಣಿ ಅವರ ಅಭಿನಯ ಉತ್ತಮ. ನಾನಾ ಪಾಟೇಕರ್ ಅವರ ಅಭಿನಯ ಎಂದಿನಂತೆ.

ಕಾಲಾ ಹುಕುಂ ಮಾತ್ರ ಚಲಾವಣೆಯಲ್ಲಿರುವ ಪ್ರದೇಶಕ್ಕೆ ಬಂದ ಹರಿದಾದ ಹಿಂದಿರುಗುವಾಗ ಆತನ ಅನುಮತಿ ಪಡೆಯದೇ ತೆರಳುತ್ತಾನೆ. ಆದರೆ ಅಲ್ಲಿಂದ ಹೊರಗೆ ಬರುವ ಯತ್ನದಲ್ಲಿ ದಿಗ್ಬಂಧಿತನಾಗುತ್ತಾನೆ. ಕಾಲಾ ಅನುಮತಿಯಿಂದಷ್ಟೆ ಆತ ಅಲ್ಲಿಂದ ಹೊರಬರುವುದು ಸಾಧ್ಯವಾಗುತ್ತದೆ. ಇದು ದಕ್ಷಿಣ ಭಾರತದ ರಾಜಕೀಯ ಪರಿಸ್ಥಿತಿ ಹೇಗಿರಬೇಕು ಎಂಬುದನ್ನು ಸಾಂಕೇತಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ವಿಭಿನ್ನ ರೀತಿಯಲ್ಲಿ ರಾಜಕೀಯ ಆಯಾಮದ ಸಿನೆಮಾವೊಂದನ್ನು ಕಟ್ಟಿಕೊಡಲು ನಟ ರಜನಿ, ನಿರ್ದೇಶಕ ಪ. ರಂಜೀತ್ ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ.

=========================

ತಮಿಳು ಸಿನೆಮಾ “ಕಬಾಲಿ” ಕುರಿತು ನಾನು ಬರೆದಿರುವ ವಿಮರ್ಶೆಯನ್ನೂ ಈ ಲಿಂಕ್ ಕ್ಲಿಕ್ಕಿಸುವುದರ ಮೂಲಕ ಓದಬಹುದು

ಕಬಾಲಿ: ಮಲೇಶಿಯಾ ತಮಿಳು ದಲಿತರ ತಲ್ಲಣ

Similar Posts

1 Comment

  1. ಉತ್ತಮ ವಿಶ್ಲೇಷಣೆ ಸರ್.. ನಾವೂ ಈಗ ಸಿನೆಮಾ ನೋಡಲು ಕಾತರಿಸುವಂತಿದೆ ನಿಮ್ಮ ವಿಶ್ಲೇಷಣೆ. ಉತ್ತರದವರ ಹುನ್ಮಾರಗಳನ್ನು ದಕ್ಷಿಣದವರು ತಿರಸ್ಕರಿಸುವ ರೂಪಕದ ದೃಷ್ಟಿಕೋನ ಹೊಂದಿರುವ ಸಿನೆಮಾ ಎಂಬುವುದು ನಿಮ್ಮ ವಿಶ್ಲೇಷಣೆಯಿಂದ ವೇದ್ಯವಾಗ್ತಿದೆ. ಸೋ ಥ್ಯಾಂಕ್ಸ್..

Leave a Reply

Your email address will not be published. Required fields are marked *