Site icon ಕುಮಾರರೈತ

ನಾಂದಿ ; ಉಪದೇಶವಿಲ್ಲದ ಆದರ್ಶ ಕೃತಿ

ಆದರ್ಶದ ಬಗ್ಗೆ ಹೇಳ ಹೊರಡುವ ಹೆಚ್ಚಿನ ಕಥೆ – ಕಾದಂಬರಿ-ನಾಟಕ- ಸಿನೆಮಾಗಳಲ್ಲಿ ಉಪದೇಶವೇ ರಾರಾಜಿಸಿರುತ್ತದೆ. ಮಂತ್ರಕ್ಕಿಂತ ಉಗುಳೇ ಜಾಸ್ತಿಯಾದ ಹಾಗೆ. ಆದರೆ 1964ರಲ್ಲಿ ತೆರೆಕಂಡ ಕನ್ನಡ ಚಿತ್ರ “ನಾಂದಿ” ಇವುಗಳಿಗಿಂತ ವಿಭಿನ್ನ. ಎನ್. ಲಕ್ಷ್ಮೀನಾರಾಯನ್ ಕಥೆ – ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿರುವ ಇದು ಕಥೆಯಿಂದಷ್ಟೇ ಅಲ್ಲ; ತಾಂತ್ರಿಕವಾಗಿಯೂ ಉನ್ನತಮಟ್ಟದಾಗಿದೆ.
ಸರ್ಕಾರಿ ಪ್ರೌಢಶಾಲೆಯ ತರಗತಿಯಲ್ಲಿ ಹುಡುಗುರು ತಂಟೆಕೋರತನ ಮಾಡುತ್ತಿರುವ ದೃಶ್ಯದಿಂದಲೇ ಸಿನೆಮಾ ಆರಂಭವಾಗುತ್ತದೆ. ಉಪಾಧ್ಯಾಯರಿದ್ದರೂ – ಇಲ್ಲದಿದ್ದರೂ ಗಲಾಟೆ ಎಬ್ಬಿಸುವ ವಿದ್ಯಾರ್ಥಿಗಳ ತುಂಟಾಟ – ಗಲಾಟೆಗಳನ್ನು ತಾಳಲಾಗದೇ ಬಂದ ಅಧ್ಯಾಪಕರನೇಕರು ವರ್ಗ ಮಾಡಿಸಿಕೊಂಡು ಹೋಗಿದ್ದನ್ನು ಸ್ವತಃ ಮುಖ್ಯೋಫಾದ್ಯಾಯರೇ ಹೇಳುತ್ತಾರೆ. ಇಲ್ಲಿಗೆ ವರ್ಗವಾಗಿ ಬರುವ ಮೂರ್ತಿ ಕ್ಲಾಸ್ ಮುಗಿಯುವುದರೊಳಗೆ ಹಾಜರಿದ್ದವರ ಪಾಲಿನ ಕಿಂದರಿಜೋಗಿಯಾಗುತ್ತಾನೆ. ಇಷ್ಟರಿಂದಲೇ ಈತನ ವ್ಯಕ್ತಿತ್ವದ ಹೆಚ್ಚಿನಾಂಶ ವೀಕ್ಷಕರಿಗೆ ತಿಳಿದು ಬಿಡುತ್ತದೆ.
ತರಗತಿ ಮುಗಿಸಿಕೊಂಡು ಹೊರಡುತ್ತಾನೆ. ಮನೆ ಬಾಗಿಲು ಮುಚ್ಚಿರುತ್ತದೆ. “ ನಿರ್ಮಲ, ನಿರ್ಮಲ, ನಿಮ್ಮೂ ಎಂದು ಪ್ರೀತಿಯಿಂದ ಕರೆದವನಿಗೆ ಕ್ಷಣದಲ್ಲಿಯೇ ನಾಚಿಕೆಯಾಗುತ್ತದೆ. ಸುತ್ತಮುತ್ತ ಯಾರಾದರೂ ಇದ್ದಾರೆಯೇ ನೋಡುತ್ತಾನೆ. ಏಕೆಂದರೆ ಆಗ ಹೆಂಡತಿಗೆ ಲೇ, ಇವಳೇ ಇದೇ ಸಂಬೋಧನೆ. ಹಸರಿಡಿದು ಕರೆಯುವುದೇ ಅಪರೂಪವಾದ ಪಿತೃಪ್ರಧಾನ ಸಮಾಜದ ಪರಿಚಯವೂ ಆಗುತ್ತದೆ.
ಬಾಗಿಲು ತೆರೆಯುತ್ತದೆ. ಪರಸ್ಪರನ್ನು ನೋಡುತ್ತಿದ್ದ ಹಾಗೆ ಇಬ್ಬರ ಮೊಗಗಳು ಅರಳುತ್ತವೆ. ನಿರ್ಮಲ ಹೊಸ್ತಿಲೊಳಗೆ ನಿಂತಿದ್ದಾಳೆ. ಮೂರ್ತಿ ಒಳಪ್ರವೇಶಿಸುತ್ತಾನೆ. ಗಂಡ ತುಸು ತಡವಾಗಿ ಬಂದಿರುವುದಕ್ಕೆ ಹುಸಿ ಮುನಿಸು ಪ್ರದರ್ಶಿಸುತ್ತಾಳೆ.
ನಿರ್ಮಲ: “ಬೇಗ ಬರ್ತೀನಿ ಅಂತ ಹೇಳಿ ಇಷ್ಟು ಬೇಗ ಬಂದು ಬಿಟ್ರಲ್ಲ”
ಮೂರ್ತಿ: “ಅದು ನನ್ ತಪ್ಪಲ್ಲ ನಿಮ್ಮೂ, ಎಲ್ಲ ಈ ಸೈಕಲ್ ದೆಸೆಯಿಂದ”
ನಿರ್ಮಲ: “ ಏಕೆ, ಪಂಕ್ಚರ್ ಆಯ್ತೇನು ”
ಮೂರ್ತಿ: “ಇಲ್ಲ, ಎಲ್ಲ ನನ್ನ ಶಿಷ್ಯರ ಕೈವಾಡ”
ನಿರ್ಮಲ: “ಒಳ್ಳೆಯ ಶಿಷ್ಯರೇ ಸಿಕ್ಕಿದ್ದಾರೆ, ಗೋಳು ಹುಯ್ಕೊಳೋಕೆ ಆರಂಭ ಮಾಡಿಬಿಟ್ರೆನೊ”
ಮೂರ್ತಿ: “ಹೊಸದ್ರಲ್ಲಿ ಎಲ್ಲ ಹುಡುಗ್ರು ಹಾಗೆ, ಎರಡು ದಿನ ಕಳೆದ್ರೆ ತಾವಾಗೇ ದಾರಿಗೆ ಬರ್ತಾರೆ”
ನಿರ್ಮಲ: “ ಪಾಪ, ತುಂಬ ಸುಸ್ತಾಗಿದ್ದೀರಿ, ತಗೊಳ್ಳಿ” (ಕಾಫಿ ಕೊಡುತ್ತಾಳೆ)
ಮೂರ್ತಿ: “ಹೇಗಿದೆ ಈ ಮನೆ, ಅಕ್ಕಪಕ್ಕ ಎಲ್ಲ.ಹೇಗೆ”
ಇಲ್ಲಿಯ ತನಕ ಒಂದೇ ಶಾಟ್, ಫ್ರೇಮ್ ಕೂಡ ಬದಲಾಗೋದಿಲ್ಲ. ಕಲಾವಿದರಷ್ಟೇ ಮಾತನಾಡುತ್ತಾ ಮೂವ್ ಆಗುತ್ತಿರುತ್ತಾರೆ. ಆದರೆ ಇದ್ದಲ್ಲೇ ಕ್ಯಾಮೆರಾ ತಿರುಗುತ್ತದೆಯೇ ಹೊರತು ಸ್ಥಳ ಬದಲಾವಣೆಯಾಗುವುದಿಲ್ಲ.. ಎಲ್ಲ ಮಿಡ್ ಲಾಗ್ ಶಾಟ್. ಬಹುತೇಕ ದೃಶ್ಯಗಳೂ ಹೀಗೆ ಇವೆ. ಆದರೆ ಅವುಗಳ ಪರಿಣಾಮ ಗಾಢವಾಗಿದೆಯೇ ಹೊರತು ಕುಗ್ಗುವುದಿಲ್ಲ.


ಶಾಟ್ ಕಟ್ ಆಗುತ್ತದೆ. ಮುಂದಿನದರಲ್ಲಿ ದಂಪತಿಗಳಿಬ್ಬರೂ ಪರಿಕರಗಳನ್ನು ಅಚ್ಚುಕಟ್ಟಾಗಿ ಜೋಡಿಸುತ್ತರಿತ್ತಾರೆ. ಅವರು ಪಿಠೋಪಕರಣಗಳನ್ನು ಎತ್ತಿಡುತ್ತಾ – ಮಾತನಾಡುತ್ತಾ ಚಲಿಸುತ್ತಿರುತ್ತಾರೆ. ಈ ಚಟುವಟಿಕೆ ಮುಗಿಯುವವರೆಗೂ ಇದ್ದಲ್ಲಿಂದ ಕ್ಯಾಮೆರಾ ಕದಲುವುದಿಲ್ಲ.
ಇಲ್ಲಿ ಗಮನಿಸಬೇಕಾದ್ದು ಲಾಂಗ್ ಶಾಟ್ ಗಳು. ಚುಟುಕು ಮತ್ತು ಚುರುಕಾದ ಸಂಭಾಷಣೆಗಳು. ಚಿತ್ರದುದ್ದಕ್ಕೂ ಎಲ್ಲಿಯೂ ಉದ್ದುದ್ದನೆಯ ಮಾತುಗಳು ಬರುವುದಿಲ್ಲ. ಎಲ್ಲಿಯೂ ಕೂಡ ಯಾವುದೇ ಪಾತ್ರಗಳು ಉಪದೇಶಗಳನ್ನು ಹೇಳುವುದಿಲ್ಲ. ಹೀಗೆ ಮಾಡುವುದರ ಮೂಲಕ ಪ್ರೇಕ್ಷಕರ ತಲೆಚಿಟ್ಟು ಹಿಡಿಸುವುದಿಲ್ಲ.
ನಿರ್ದೇಶಕ ಎನ್. ಲಕ್ಷ್ಮೀನಾರಾಯಷ್ ಅವರ ಮೇಲೆ ಮಹಾತ್ಮ ಗಾಂಧಿ ಅವರ ವಿಚಾರಧಾರ ಬಹು ಪ್ರಭಾವ ಬೀರಿದೆ ಎಂಬುದು ಚಿತ್ರದುದ್ದಕ್ಕೂ ತಿಳಿಯುತ್ತದೆ. ಮೂರ್ತಿಯ ರೀಡಿಂಗ್ ಟೇಬಲ್ ಮೇಲೆ ಗಾಂಧೀಜಿ ಮೂರ್ತಿಯಿರುತ್ತದೆ. ಆತ ಶಾಲಾ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ನಂದಿಬೆಟ್ಟಕ್ಕೆ ಕರೆದುಕೊಂಡು ಹೋಗುತ್ತಾಣೆ. ಇಲ್ಲಿ ಗಾಂಧಿ ಅವರು 48 ದಿನ ತಂಗಿದ್ದ- ಬೆಂಗಳೂರಿಗೂ ಭೇಟಿಕೊಟ್ಟ ಸಂದರ್ಭಗಳನ್ನು ತಿಳಿಸುತ್ತಾರೆ. ಗಾಂಧಿ ಸ್ಮಾರಕ ಕೊಠಡಿಯಲ್ಲಿ ಅವರ ಪ್ರತಿಮೆಗೆ ಮೂರ್ತಿ ಪುಷ್ಪಾರ್ಚನೆ ಮಾಡುತ್ತಾನೆ. ಈ ನಂತರ ದೇಶಭಕ್ತಿಯ ಹಾಡೇಳುತ್ತಾನೆ.
ಇಲ್ಲಿ ಕಥಾನಾಯಕನ ಹೆಸರು ಕೂಡ ರೂಪಕ. ಆತನದು ಆದರ್ಶ ವಿಚಾರಧಾರೆಗಳಿಂದ ರೂಪುಗೊಂಡ ಮೂರ್ತಿವೆತ್ತ ವ್ಯಕ್ತಿತ್ವ. ನಿರ್ಮಲ ಮತ್ತು ಗಂಗಾ ಎರಡೂ ಪಾತ್ರಗಳ ಹೆಸರೂ ಅವುಗಳ ಗುಣಕ್ಕೆ ಅನ್ವರ್ಥಕ. ಕಲ್ಮಶ-ಅಸೂಯೆ – ಮತ್ಸರವೇ ತಿಳಿಯದ ಮನಸುಗಳವು.
ಪೀಠೋಪಕರಣಗಳನ್ನು ಜೋಡಿಸಿಡುವಾಗ ಮರದ ಎರಡು ಕುರ್ಚಿಗಳನ್ನು ಅಕ್ಕಪಕ್ಕ ಒರೆಯಾಗಿ ಇಡುವ ಮೂರ್ತಿ, ಅವುಗಳಲ್ಲಿ ಒಂದು ಅತಿಥಿಗೆ, ಇನ್ನೊಂದರಲ್ಲಿ ನಾನು ಕುಳಿತುಕೊಳ್ಳುತ್ತೇನೆ. ಎಂದು ಹೇಳಿ ಅತಿಥಿಗಳ ಕುರ್ಚಿಯಲ್ಲಿ ನಿರ್ಮಲಳನ್ನು ಕೂರಿಸುತ್ತಾನೆ. ನಾಲ್ಕು ಕಾಲುಗಳಲ್ಲಿ ಒಂದು ಮೊಂಡಾಗಿರುವ ಕುರ್ಚಿಯಲ್ಲಿ ತಾನು ಬೀಳದಂತೆ ಸಮತೋಲನದಿಂದ ಕುಳಿತುಕೊಳ್ಳುತ್ತಾನೆ. ಮೊಂಡಾದ ಕಾಲಿನ ಕುರ್ಚಿಯ ಮೂಲಕ ಬಂಧುಬಳಗದ ಆಸರೆಯಿಲ್ಲದೇ ಅವರಿಬ್ಬರೂ ಸಮತೋಲನದಿಂದಲೇ ಬದುಕಬೇಕಾಗಿದೆ ಎಂದು ಸಾಂಕೇತಿಸಲಾಗಿದೆ, ಅತಿಥಿ ಕುರ್ಚಿಯಲ್ಲಿ ನಿರ್ಮಲಳನ್ನು ಕೂರಿಸಿ, ಆಕೆ ತನ್ನ ಪತಿಯ ಬದುಕಿನಲ್ಲಿ ಅಲ್ಪಕಾಲದ ಹೋಗುವ ಅತಿಥಿ ಎಂಬುದನ್ನು ಸೂಚ್ಯವಾಗಿ ಹೇಳಲಾಗಿದೆ.
ನಿರ್ಮಲಳ ಸೀಮಂತವನ್ನು ಸಡಗರದಿಂದಲೇ ಆಚರಿಸಲಾಗುತ್ತದೆ.ಮಹಿಳೆಯರು ಆಕೆಗೆ ಮತ್ತು ಉದರದಲ್ಲಿರುವ, ಇನ್ನೇನು ಕೆಲವೇ ದಿನಗಳಲ್ಲಿ ಸೂರ್ಯನನ್ನು ಕಾಣುವ ಶಿಶುವಿಗೆ ಶುಭಕೋರಿ ಹಾಡೇಳುತ್ತಾರೆ. ಚೊಚ್ಚಲ ಹೆರಿಗೆಯಲ್ಲಿಯೇ ಈಕೆ ಮೃತಳಾಗುತ್ತಾಳೆ. ಇದರಿಂದ ಅಪಾರವಾಗಿ ಪ್ರೀತಿಸುತ್ತಿರುವ ಪತಿಗಾದ ಆಘಾತವನ್ನು, ಇವರಿಬ್ಬರ ಅನ್ಯೋನ್ಯತೆಯ ಪ್ರತೀಕವಾದ ಮಗುವನ್ನು ಜತನದಿಂದ ಸಾಕುವುದನ್ನು ಅತ್ಯಂತ ಪರಿಣಾಮಕಾರಿಯಾಗಿ ತರಲಾಗಿದೆ.
ಕರ್ತವ್ಯಕ್ಕೆ ಹೋದರೆ ನೋಡಿಕೊಳ್ಳುವವರು ದಿಕ್ಕಿಲ್ಲದಂತಾಗುವ ಮಗುವನ್ನು ಪಾಲನೆಗಾಗಿ ಎಂದು ಮೂರ್ತಿ ಮರುಮದುವೆಯಾಗುತ್ತಾನೆ. ನೋಡಲು ಲಕ್ಷಣವಾಗಿರುವ, ಸರ್ಕಾರಿ ಉದ್ಯೋಗದಲ್ಲಿರುವ ಈತ, ಯಾವುದೇ ದೈಹಿಕ ನ್ಯೂನ್ಯತೆಯೂ ಇಲ್ಲದ ಯುವತಿಯನ್ನು ಮದುವೆಯಾಗಲು ಸಾಧ್ಯವಿತ್ತು. ಆದರೆ ಮಗಳು ವಿವಾಹವಾಗದೇ ಉಳಿಯುವಂತಾಗಿದೆ ಎಂದು ಕೊರಗುತ್ತಿರುವ ಆಕೆಯ ಪೋಷಕರ ದುಃಖವನ್ನೂ ನಿವಾರಿಸಿದಂತಾಗುತ್ತದೆ ಎಂದು ಕಿವುಡಿ ಮೂಕಿಯನ್ನು ಮದುವೆಯಾಗುತ್ತಾನೆ. ಇದರ ಹೊರತಾಗಿ ಆಕೆಯ ಬಗ್ಗೆ ಅವನಿಗೆ ಮತ್ಯಾವ ಭಾವನೆಯೂ ಇರುವುದಿಲ್ಲ. ಆಕೆಗೂ ಆಸರೆಯಾಗುತ್ತದೆ. ಮಗುವನ್ನೂ ನೋಡಿಕೊಳ್ಳಲು ಒಬ್ಬರು ದಿಕ್ಕಾಗುತ್ತಾರೆ ಎಂಬ ಆಲೋಚನೆಯಷ್ಟೇ ಇರುತ್ತದೆ.
ದಂಪತಿ ಪ್ರತ್ಯೇಕವಾಗಿಯೇ ಮಲಗುತ್ತಿರುತ್ತಾರೆ. ಕಿವುಡಿ – ಮೂಕಿಯಾದರೇನು, ಆಕೆಗೂ ಸ್ತ್ರೀಸಹಜ ಭಾವನೆಗಳು – ಮನೋಕಾಮನೆಗಳು ಇರುವುದು ಸಹಜವಲ್ಲವೇ. ತನ್ನನ್ನು ಪತಿ, ಸಂಗಾತಿಯಾಗಿ ಪರಿಗಣಿಸುತ್ತಿಲ್ಲ. ತನ್ನ ಭಾವನೆಗಳನ್ನು ಪುರಸ್ಕರಿಸುತ್ತಿಲ್ಲ ಎಂಬ ಭಾವ ದಟ್ಟವಾಗಿರುತ್ತದೆ. ರಾತ್ರಿಯ ವೇಳೆ ಮಗು ಅಳುತ್ತಿರುತ್ತದೆ. ಎಚ್ಚರವಾಗುವ ಮೂರ್ತಿ ಬಂದು ನೋಡಿದರೆ ಆಕೆಯಿಲ್ಲ. ಮನೆಯಿಡೀ ನೋಡುತ್ತಾನೆ. ಆಕೆ ಒರಳುಕಲ್ಲು – ಅದರ ಮೇಲಿರುವ ರುಬ್ಬುಕಲ್ಲಿನ ಮೇಲೆ ಎರಡೂ ಹಸ್ತಗಳನ್ನು ಒಟ್ಟು ತಲೆಯಾನಿಸಿ ಮಲಗಿರುತ್ತಾಳೆ. ಅದನ್ನು ಕಂಡ ಕೂಡಲೇ ಮೂರ್ತಿಗೆ ಎಲ್ಲವೂ ಅರ್ಥವಾಗುತ್ತದೆ. ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪವಾಗುತ್ತದೆ. ಆಕೆಯ ಕೆನ್ನೆಗಳ ಮೇಲೆ ಜಾರಿದ ಕಣ್ಣೀರು ಒರೆಸಿ ಕೈ ಹಿಡಿದು ಕರೆದೊಯ್ಯುತ್ತಾನೆ. ಆಕೆಯ ಮುಖವರಳುತ್ತದೆ.
ಈ ಇಡೀ ಶಾಟ್ ನಲ್ಲಿ ಒಂದೇ ಒಂದು ಪದವಿಲ್ಲ. ಸನ್ನಿವೇಶದ ಭಾವುಕತೆಯನ್ನು ಹಿನ್ನೆಲೆ ಸಂಗೀತ ಕಟ್ಟಿಕೊಡುತ್ತದೆ. ಮಾನವ ಸಹಜ – ವಯೋ ಕಾಮನೆಗಳನ್ನು ಅಭಿವ್ಯಕ್ತಗೊಳಿಸಲು ನಿರ್ದೇಶಕ ಆಯ್ಕೆ ಮಾಡಿಕೊಂಡ ಸಂಕೇತವೂ ಸಶಕ್ತವಾಗಿದೆ. ಸಂಭಾಷಣೆಯಿಲ್ಲದೇ ಎಲ್ಲವನ್ನೂ ಹೇಳುವ ಶಕ್ತಿ ಅದಕ್ಕಿದೆ.
ಮಾತನಾಡುವವರ ತುಟಿ ಚಲನೆ ಅರಿಯುವ ಮೂಲಕ ಕಿವುಡ – ಮೂಕರು ತಾವೂ ಮಾತನಾಡಬಹುದು ಎಂದು ಅರಿಯುವ ಮೂರ್ತಿ ಅದರ ಬಗ್ಗೆ ಅಧ್ಯಯನ ಮಾಡುತ್ತಾನೆ. ಹೆಂಡತಿ, ಮಗು ಇಬ್ಬರೂ ಸ್ವರ ಹೊರಡಿಸುವಂತೆ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾನೆ. ಇದರಿಂದ ಪ್ರಭಾವಿತನಾಗುವ ಆತನ ಸಹೋದ್ಯೋಗಿ ಗೋಪಾಲ ಇಂಥವರಿಗಾಗಿಯೇ ವಿಶೇಷ ಶಾಲೆ ಆರಂಭಿಸೋಣ ಎಂದು ಪ್ರೋತ್ಸಾಹಿಸುತ್ತಾನೆ. ನಂತರ ಈ ಇಬ್ಬರೂ ಒಂದೇ ಒಂದು ಉಪದೇಶ- ಒಣಮಾತಿಲ್ಲದೇ ಸರ್ಕಾರಿ ಉದ್ಯೋಗಗಳಿಗೆ ರಾಜಿನಾಮೆ ನೀಡಿ ಕಾರ್ಯ ಪ್ರವೃತ್ತರಾಗುವುದು ಅತ್ಯಂತ ಪರಿಣಾಮಕಾರಿಯಾಗಿ ಬಂದಿದೆ.
ಗಂಗಾ ತಾಯಿಯಾಗುತ್ತಾಳೆ. ಹೆಣ್ಣುಮಗು. ಮುಂದಿನ ದೃಶ್ಯದಲ್ಲಿ ಐದಾರು ವರ್ಷದ ಮಗು ಆಟವಾಡುತ್ತಿರುತ್ತದೆ. ಮೂರ್ತಿ ಹೆಸರಿಡಿದು ಕರೆಯುತ್ತಾನೆ. ಮಗು ಪ್ರತಿಕ್ರಿಯಿಸುತ್ತದೆ. ಇಷ್ಟರಿಂದಲೇ ಕಿವುಡ – ಮೂಕರಿಗೆ ಜನಿಸುವ ಮಕ್ಕಳು ಹೆತ್ತವರಂತೆ ಆಗಿರುವುದಿಲ್ಲ. ಇಂಥ ದೈಹಿಕ ನ್ಯೂನ್ಯತೆಗಳು ವಂಶಪಾರ್ಯಂಪರ್ಯವಲ್ಲ ಎಂಬುದನ್ನು ನಿರ್ದೇಶಕ ಮನೋಜ್ಞವಾಗಿ ಹೇಳಿದ್ದಾರೆ. ಇದಲ್ಲದೇ ಆರಂಭದ ಟೈಟಲ್ ಕಾರ್ಡಿನಲ್ಲಿಯೂ ಕ್ಲೈಮಾಕ್ಸ್ ದೃಶ್ಯವನ್ನು ಬಳಸಿಕೊಳ್ಳಲಾಗಿರುವುದು “ನಾಂದಿ” ಎಂಬುದಕ್ಕೆ ಮತ್ತಷ್ಟೂ ಅರ್ಥವೀಯುತ್ತದೆ.
ಈ ಚಿತ್ರದಲ್ಲಿ ತಂದಿರುವ ಎಲ್ಲ ಪಾತ್ರಗಳು ಎಲ್ಲ ಬಗೆಯ ವ್ಯಕ್ತಿತ್ವಗಳನ್ನು ಪ್ರತಿನಿಧಿಸುತ್ತವೆ. ಕುಟುಂಬ ಯೋಜನೆ ಅನುಸರಿಸದೇ 13 ಮಕ್ಕಳ ತಂದೆಯಾದ ಶಾಲಾ ಮಾಸ್ತರ್ ಸೀತಾಪತಿ ಬಗ್ಗೆ ನಿರ್ಧೇಶಕರು ವ್ಯಂಗ್ಯವಾಡಿದ್ದಾರೆ. ಇಂಥ ದುಡುಕಿನಿಂದ ಅನುಭವಿಸಬೇಕಾದ ಸಂಕಟ – ಅವಮಾನಗಳನ್ನು ಸೂಕ್ಷ್ಮವಾಗಿ ಹೇಳಿದ್ದಾರೆ.
ಚಿತ್ರದುದ್ದಕ್ಕೂ ಮಿಡ್ ಲಾಂಗ್ ಶಾಟ್ ಗಳೇ ಹೆಚ್ಚು. ಅವಶ್ಯಕತೆಯಿರುವಾಗ, ಪಾತ್ರಗಳಿಗೆ ಭಾವೋದ್ರೇಕವಾದಾಗ ಮುಖಗಳ ಕ್ಲೋಸಪ್ ಶಾಟ್ ಗಳಿಗೆ ಹೋಗಲಾಗಿದೆ. ಸಾಮಾನ್ಯವಾಗಿ ತುಂಬ ಸಮರ್ಥ ಕಲಾವಿದರು ಇದ್ದ ಸಂದರ್ಭದಲ್ಲಿ ಮಾತ್ರ ನಿರ್ದೇಶಕರು ಈ ಕಾರ್ಯ ಮಾಡುತ್ತಾರೆ. ಕ್ಯಾಮೆರಾ ವರ್ಕ್ ಮಾಡಿರುವ ಆರ್.ಎನ್. ಕೃಷ್ಣ ಅವರು ಸಂಯೋಜಿಸಿರುವ ನೆರಳು – ಬೆಳಕಿನ ವಿನ್ಯಾಸ ಬಹು ಪರಿಣಾಮಕಾರಿ..
ಆರ್.ಎನ್. ಜಯಗೋಪಾಲ್ ಬರೆದ “ ಉಡುಗೊರೆಯೊಂದ ತಂದಾ” “ಚಂದ್ರಮುಖಿ ಪ್ರಾಣಸಖಿ ಚದುರೆ ನೀ ಹೇಳೇ” “ ಹಾಡೊಂದ ಹಾಡುವೆ ನೀ ಕೇಳು ಮಗುವೆ” ಈ ಮೂರು ಹಾಡುಗಳು ಇಡೀ ಚಿತ್ರದ ಅಂತಸತ್ವವನ್ನು ಹಿಡಿದುಕೊಡುವಲ್ಲಿ ಯಶಸ್ವಿಯಾಗಿದೆ. ವಿಜಯಭಾಸ್ಕರ್ ಅವರು ನೀಡಿರುವ ಸಂಗೀತ, ದೃಶ್ಯಗಳ ಪರಿಣಾಮನ್ನು ಹೆಚ್ಚಿಸಲು ಸಹಕಾರಿಯಾಗಿದೆ. ತಂಬೂರಿ, ವೀಣೆ, ಸಿತಾರ್ ಮತ್ತು ಸರೋದ್ ಗಳನ್ನು ಹೆಚ್ಚಾಗಿ ಬಳಸಲಾಗಿದೆ. ಇಲ್ಲಿ ಶೃತಿ ಹಿಡಿಯುವ ತಂಬೂರಿಯೂ ಸಂಕೇತವಾಗಿದೆ. ನಿರ್ಮಲ ಬಳಸುತ್ತಿದ್ದ ತಂಬೂರಿಯನ್ನು ಮೀಟುವ ಗಂಗಾ ಅದರ ಸ್ಪರ್ಶದ ಅಲೆಗಳಿಂದ ರೋಮಾಂಚನಗೊಳ್ಳುತ್ತಾಲೆ. ಇದರ ಮೂಲಕ ಸಮರ್ಪಕವಾಗಿ ಶೃತಿ ಹಿಡಿದರೆ ಆಕೆ ಸ್ವರ ಹೊರಡಿಸಬಲ್ಲಳು ಎಂಬುದನ್ನು ಹೇಳಿದ್ದಾರೆ.


ಈ ಚಿತ್ರದ ಎಲ್ಲ ಕಲಾವಿದರ ಅಭಿನಯವೂ ಚೆಂದ. ಸಂಗೀತ ಅಭ್ಯಾಸ ಮಾಡುವ ಹುಡುಗನಾಗಿ ನಟಿಸಿರುವ ವಾದಿರಾಜ್ ಅವರ ಅಭಿನಯ ಪ್ರೇಕ್ಷಕರ ದುಗುಡುವನ್ನು ನಿವಾರಿಸುತ್ತದೆ. ಹರಿಣಿ, ಕಣ್ಣುಗಳ ಮೂಲಕವೇ ಮಾತನಾಡಿದ್ದಾರೆ. ವಿಶೇಷವಾಗಿ ರಾಜ್ ಕುಮಾರ್ – ಕಲ್ಪನಾ – ಅಭಿನಯ ಅನನ್ಯ. ಇವರಿಬ್ಬರೂ ವಾಕ್ಯಗಳನ್ನು ಉಚ್ಚರಿಸುವ ರೀತಿ, ಆಂಗಿಕ ಅಭಿನಯ, ಕಣ್ಣುಗಳಲ್ಲಿಯೇ ಭಾವಗಳನ್ನು ತುಳುಕಿಸುವ ರೀತಿ ನೋಡುತ್ತಿದ್ದರೆ ನುರಿತ ಸಂಗೀತಗಾರರಿಬ್ಬರ ಜುಗಲ್ನಂದಿಯಂತೆ ತೋರುತ್ತದೆ. ಈ ಧೈರ್ಯದಿಂದಲೇ ಇವರಿಬ್ಬರ ಮುಖಗಳ ಮೇಲೆ ಕ್ಯಾಮೆರಾ ಮತ್ತೆಮತ್ತೆ ಫೋಕಸ್ ಆಗಿದೆ.
ಎನ್. ಲಕ್ಷ್ಮಿನಾರಾಯಣ್ ಅವರು ರಚಿಸಿರುವ ಶಕ್ತಿಶಾಲಿ ಚಿತ್ರಕಥೆ – ಸಮರ್ಥ ನಿರ್ದೇಶನದಿಂದಾಗಿ ಇದು ಕನ್ನಡದಲ್ಲಿಯೇ ಒಂದು ಮೈಲಿಕಲ್ಲಾಗಿರುವ ಸಿನೆಮಾವಾಗಿದೆ. ಇದು ಇವರ ಜಾತ್ಯತೀತ ಮನೋಭಾವಕ್ಕೂ ಸಾಕ್ಷಿ. ಹಿಂದೂ ಸಮಾಜದ ಸಂಪ್ರದಾಯಗಳು – ಆಚರಣೆಗಳನ್ನು ವಿವರಬಾಗಿಯೇ ಹೇಳುತ್ತಾರೆ/ ಕ್ರೈಸ್ತ ಮಿಷಿನರಿಗಳು ನಡೆಸುವ ಕಿವುಡ ಮೂಕರ ಶಾಲೆಯ ಬೋಧನಾ ವಿಧಾನವನ್ನೂ ತುಸು ವಿವರವಾಗಿ ಕಟ್ಟಿದ್ದಾರೆ.
ಇದರ ಮೂಲಕ ಧರ್ಮಗಳ ಬಗ್ಗೆ ತಮಗೆ ಪೂರ್ವಾಗ್ರಹಗಳಿಲ್ಲ. ಒಳ್ಳೆಯದನ್ನು ಗುರುತಿಸುವ ಕಾರ್ಯವಷ್ಟೇ ತಮ್ಮದು ಎಂಬ ಭಾವನೆ ನಿರ್ದೇಶಕರಿಗೆ ಇರುವುದು ಕಾಣುತ್ತದೆ. ಸಹೋದರರಾದ ವಾದಿರಾಜ್ – ಜವಾಹರ್ ಅವರು ಭಾರತೀ ಫಿಲಂಸ್ ಸಂಸ್ಥೆಯಿಂದ ನಿರ್ಮಿಸಿರುವ ಈ ಚಿತ್ರ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಮೆಚ್ಚುಗೆ- ಪುರಸ್ಕಾರಕ್ಕೆ ಪಾತ್ರವಾಗಿದೆ.

Exit mobile version