ಮುಂಗಾರು ಮಳೆ ಎಂದರೆ ಮೋಹಕ, ಮನಮೋಹಕ. ಆಗಸದಿಂದ ಹನಿಹನಿಯಾಗಿ ಧರೆಗಿಳಿಯುವ ಮಳೆ ನೋಡುವುದೇ ಮುದ ನೀಡುತ್ತದೆ. ಅದರಲ್ಲಿಯೂ ಪಶ್ಚಿಮಘಟ್ಟಗಳಲ್ಲಿ ಮುಂಗಾರು ನೋಡಿದರೆ ಅದೊಂದು ವೈಭವ ಎನಿಸುತ್ತದೆ. ಪ್ರಕೃತಿಯ ವಿಸ್ಮಯ ಬೆರಗು ಉಂಟು ಮಾಡುತ್ತದೆ.
ರಾಜ್ಯದ ಪಶ್ಚಿಮಘಟ್ಟಗಳಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಿವೆ. ಮುಂಗಾರು ಮಾರುತಗಳು ಅವುಗಳನ್ನು ಮುತ್ತಿಕ್ಕುವುದನ್ನು ನೋಡಿದಾಗ ಆನಂದವಾಗುತ್ತದೆ. ಚಾರ್ಮಾಡಿ ಘಾಟ್ ಕಣಿವೆಗಳ ಪ್ರದೇಶ. ಸಾವಿರಾರು ಅಡಿ ಆಳದ ಕಮರಿಗಳಿವೆ. ಇವುಗಳ ಅಂಚಿನಲ್ಲಿ ಸಾಗುವಾಗ ಎದೆ ಜಲ್ಲೆನುತ್ತದೆ. ಮಳೆಗಾಲದಲ್ಲಿ ಇಲ್ಲಿ ಸಂಚರಿಸುವುದು ಸಾಹಸದ ಸಂಗತಿಯೇ ಸರಿ. ಮುಂಗಾರು ಮಾರುತಗಳು ಇಲ್ಲಿ ಧಿಡೀರನ್ನೇ ನೂರಾರು ಜಲಕನ್ಯೆಯರನ್ನು ಭುವಿಗಿಳಿಸಿ ಸಾಗುತ್ತವೆ
ಚಾರ್ಮಾಡಿ. ನೋಡಿದವರಿಗೆ ಈ ಹೆಸರೇ ರೋಮಾಂಚನಗೊಳಿಸುತ್ತದೆ. ಚಿಕ್ಕಮಗಳೂರು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಘಾಟಿ ಪ್ರದೇಶ ಹರಡಿಕೊಂಡಿದೆ. ಅಗಾಧ ಎತ್ತರದ ಬೆಟ್ಟದ ಪಾದದಲ್ಲಿ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಲೇ ಈ ಬೆಟ್ಟಸಾಲಿಗೆ ಚಾರ್ಮಾಡಿ ಎಂಬ ಹೆಸರು ಬಂದಿದೆ. ಇಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ರಸ್ತೆ ಹಾದು ಹೋಗಿದೆ.
ಕೊಟ್ಟಿಗೆಹಾರ. ಇದೊಂದು ಪುಟ್ಟಹಳ್ಳಿ. ಇಲ್ಲಿ ಕೂಡುದಾರಿಗಳಿವೆ. ಒಂದು ದಾರಿ ಹೊರನಾಡು, ಕಳಸ, ಕೊಪ್ಪ, ಇನ್ನೊಂದು ದಾರಿ ಮೂಡಿಗೆರೆ, ಚಿಕ್ಕಮಗಳೂರು ಮತ್ತೊಂದು ದಾರಿ ಚಾರ್ಮಾಡಿ ಮುಖಾಂತರ ಉಜಿರೆ, ಮಂಗಳೂರಿನತ್ತ ಕರೆದುಕೊಂಡು ಹೋಗುತ್ತವೆ. ಕೊಟ್ಟಿಗೆಹಾರದಿಂದಲೇ ಚಾರ್ಮಾಡಿ ಘಾಟಿ ಆರಂಭಗೊಳ್ಳುತ್ತದೆ. ಇಲ್ಲಿಯೇ ಬಹುತೇಕ ಪಯಣಿಗರು ತುಸು ವಿಶ್ರಾಂತಿ ಪಡೆಯುತ್ತಾರೆ. ಊಟ-ಉಪಹಾರ-ಕಾಫಿ ಸೇವಿಸುತ್ತಾರೆ. ಚಾಲಕರುಗಳಂತೂ ಚಹಾ/ಕಾಫಿ ಸೇವಿಸಿಯೇ ಮುಂದೆ ಸಾಗುತ್ತಾರೆ.
ಚಹಾ/ಕಾಫಿ ಸೇವನೆ ಚೇತೋಹಾರಿ. ಜೊತೆಗೆ ಮನಸ್ಸನ್ನು ಎಚ್ಚರ ಸ್ಥಿತಿಯಲ್ಲಿಡುವ ಗುಣ ಇವುಗಳಿಗಿದೆ. ಆದ್ದರಿಂದಲೇ ಘಾಟಿ ಧಾರಿಯಲ್ಲಿ ಸಾಗುವ ಮುನ್ನ ಚಾಲಕರು ಈ ಪೇಯಗಳನ್ನು ಕಡ್ಡಾಯವಾಗಿ ಸೇವಿಸುತ್ತಾರೆ. ಮುಂದೆ ಸಾಗಿದಂತೆಲ್ಲ ಹಠಾತ್ತನೇ ಎದುರಾಗುವ ತಿರುವುಗಳು. ವಾಹನದ ಸ್ಟಿಯರಿಂಗ್ ಅನ್ನು ಒಂದು ಸುತ್ತು ತಿರುಗಿಸಬೇಕಾದ ಸ್ಥಿತಿ. ರಸ್ತೆ ತಿರುವಿನಲ್ಲಿ ಧುತ್ತನೆ ಎದುರಾಗುವ ವಾಹನಗಳು. ಬಹು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಇಲ್ಲದಿದ್ದರೆ ವಾಹನಗಳು ಡಿಕ್ಕಿಯಾಗುವ ಸಾಧ್ಯತೆ ಅಪಾರ.
ವಾಹನದ ಕಿಟಕಿಯಿಂದ ಕಣ್ಣು ಹಾಯಿಸಿದರೆ ಎದೆ ಜಲ್ಲೆನುತ್ತದೆ. ತಳವೇ ಕಾಣದ ಕಮರಿಗಳು ಕಾಣುತ್ತವೆ. ವಾಹನ ಅದರ ಅಂಚಿನಲ್ಲೇ ಸಾಗುವಾಗ ಜೀವ ಬಿಗಿ ಹಿಡಿದು ಸಾಗುತ್ತಿದ್ದೇವೆ ಎಂಬಂತೆ ಭಾಸವಾಗುತ್ತದೆ. ಎದುರಿನಿಂದ ಬಂದ ವಾಹನಕ್ಕೆ ದಾರಿ ಬಿಟ್ಟುಕೊಡುವಾಗ ವಾಹನಗಳು ರಸ್ತೆ ಅಂಚಿಗೆ ಸರಿಯಲೇಬೇಕು. ಪ್ರಪಾತದಂಚಿಗೆ ವಾಹನಗಳ ಟೈರು ಒಂದೆರಡು ಇಂಚಿನ ಅಂತರ ಉಳಿಸಿಕೊಂಡಿರುತ್ತವೆ ಅಷ್ಟೆ. ಅದನ್ನು ನೋಡಿದಾಗ ಎದೆ ಬಡಿತ ಜೋರಾಗುತ್ತದೆ.
ಕೊಟ್ಟಿಗೆಹಾರದಿಂದ ನಾಲ್ಕೈದು ಕಿಲೋಮೀಟರ್ ಮುಂದೆ ಸಾಗಿದರೆ ಬಲಕ್ಕೆ ದೇಗುಲವೊಂದು ಕಾಣುತ್ತದೆ. ಇದು ಅಣ್ಣಪ್ಪಸ್ವಾಮಿ ದೇವಾಲಯ. ಅಣ್ಣಪ್ಪ ಎಂದರೆ ಗಣಪ. ಇಲ್ಲಿ ಹಾದು ಹೋಗುವ ಪ್ರತಿಯೊಂದು ವಾಹನಗಳು ಇಲ್ಲಿ ತುಸು ಹೊತ್ತು ನಿಲ್ಲಿಸುತ್ತವೆ. ಪಯಣಿಗರೆಲ್ಲರೂ ವಿಘ್ನನಿವಾರಕ ಗಣಪನಿಗೆ ಭಕ್ತಿಯಿಂದ ನಮಿಸುತ್ತಾರೆ. ಚಾಲಕರು ಅಪಘಾತಗಳು ಸಂಭವಿಸದಿರಲಿ ಎಂದು ಕೇಳಿಕೊಳ್ಳುತ್ತಾರೆ.
ವ್ಯಕ್ತಿಯೊಬ್ಬರು ದೇವರಿಗೆ ಅರ್ಚನೆ ಮಾಡಿದ ಕುಂಕುಮ ಇರುವ ಮಂಗಳಾರತಿ ತಟ್ಟೆ ತೆಗೆದುಕೊಂಡು ಬಂದು ಚಾಲಕರಿಗೆ ನೀಡುತ್ತಾರೆ. ಅವರು ಅದನ್ನು ಕೈಗೆ ತೆಗೆದುಕೊಂಡು ಭಕ್ತಿಯಿಂದ ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ನಂತರ ತಟ್ಟೆಯನ್ನು ಪಯಣಿಗರತ್ತ ವರ್ಗಾಯಿಸುತ್ತಾರೆ. ಹಲವರು ಹಣೆಗೆ ಕುಂಕುಮ ಇಟ್ಟುಕೊಂಡು ತಟ್ಟೆಗೆ ದಕ್ಷಿಣೆ ಹಾಕುತ್ತಾರೆ, ಮತ್ತೆ ಆ ತಟ್ಟೆ ಪೂಜಾರಿ ಕೈಗೆ ದಾಟುತ್ತದೆ. ಯಾರೂ ಕೆಳಗಿಳಿದಿಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ನಿರ್ವಾಹಕರು ಮುಂದೆ ಸಾಗುವಂತೆ ಚಾಲಕರಿಗೆ ಸೂಚಿಸುತ್ತಾರೆ.
ಅಣ್ಣಪ್ಪಸ್ವಾಮಿ ದೇಗುಲದ ನಂತರದ ಹಾದಿ ಮತ್ತಷ್ಟು ಕಠಿಣ. ನುರಿತ ಚಾಲಕರುಗಳಷ್ಟೆ ಇಲ್ಲಿ ವಾಹನ ಚಲಾಯಿಸಲು ಸಾಧ್ಯ. ಚಾಲನೆಯನ್ನು ಅರೆಬರೆ ಕಲಿತರವರು ಇಲ್ಲಿ ಸ್ಟಿಯರಿಂಗ್ ಹಿಡಿಯಲೇಬಾರದು. ಏಕೆಂದರೆ ಅದು ಅಪಘಾತಗಳ ತಾಣವೂ ಹೌದು. ಚಾಲಕ ತುಸು ನಿಯಂತ್ರಣ ಕಳೆದುಕೊಂಡರೂ ವಾಹನ ಪ್ರಪಾತದತ್ತ ಸಾಗುತ್ತದೆ.
ಬಸ್ಸುಗಳು, ಲಾರಿಗಳ ಚಾಲಕರಂತೂ ಬಹು ಚಾಕಚಾಕ್ಯತೆಯಿಂದ ಇಲ್ಲಿ ವಾಹನ ಚಲಾಯಿಸಬೇಕು. ಎಷ್ಟೋ ವಾಹನಗಳು ಘಾಟಿ ಏರಲು ಪ್ರಯಾಸಪಡುತ್ತವೆ. ತಕ್ಷಣವೇ ಹಿಂದೆ ಸರಿದುಬಿಡುತ್ತವೆ. ಅದಂತೂ ಬಹು ಅಪಾಯಕಾರಿ. ಆದ್ದರಿಂದಲೇ ಘಾಟಿ ಇಳಿಯುವ ಮತ್ತು ಹತ್ತುವ ಮುನ್ನ ವಾಹನದ ಬ್ರೇಕ್ ಅನ್ನು ಎರಡೆರಡು ಬಾರಿ ಪರೀಕ್ಷಿಸಿಕೊಳ್ಳುತ್ತಾರೆ.
ಕಡಿದಾದ ಘಾಟಿ ಹಾದಿಯುದ್ದಕ್ಕೂ ಬೆಟ್ಟದಂಚಿನಲ್ಲಿ ನೂರಾರು ಜಲಪಾತಗಳು ಕಾಣಸಿಗುತ್ತವೆ. ಆದರೆ ಬಹುತೇಕರು ವಾಹನದಲ್ಲಿ ಆತಂಕದಿಂದ ಸಾಗುವುದರಿಂದ ಅವುಗಳ ಸೌಂದರ್ಯ ಸವಿಯಲು ಸಾಧ್ಯವಾಗುವುದಿಲ್ಲ. ಈ ಜಲಕನ್ಯೆಯರ ಸುಂದರ ನರ್ತನವನ್ನು ನೋಡಬೇಕಾದರೆ ವಾಹನದಿಂದ ಕೆಳಗಿಳಿಯಲೇಬೇಕು.
ಕೊಟ್ಟಿಗೆಹಾರದಿಂದ 14 ಕಿಲೋಮೀಟರ್ ಮುಂದೆ ವಾಹನದಿಂದ ಇಳಿಯಬೇಕು. ಮತ್ತೆ ಕೊಟ್ಟಿಗೆಹಾರದ ಕಡೆ ತಿರುಗಿ ನಡೆಯಲು ಶುರು ಮಾಡಬೇಕು. ಆಗ ಜಲಕನ್ಯೆಯರು ದರ್ಶನ ನೀಡತೊಡಗುತ್ತಾರೆ. ಇಳಿದು ಒಂದೆರಡು ಹೆಜ್ಜೆ ಸಾಗುವಷ್ಟರಲ್ಲಿ ಒಂದಷ್ಟು ಮಂದಿ ಮುಂಗಾರು ಸೌಂದರ್ಯರಾಧಕರು ಅಲ್ಲಿ ನಿಂತಿರುವುದು ಕಾಣುತ್ತದೆ. ಅವರೆಲ್ಲರೂ ಜಲಕನ್ಯೆಯ ಸೌಂದರ್ಯವನ್ನು ತಮ್ಮ ಕಣ್ಣುಗಳಲ್ಲಿ, ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿರುತ್ತಾರೆ.
ನಾಡಿನ ಉಳಿದೆಡೆ ಕಾಣುವ ಜಲಪಾತಗಳಿಗಿಂತ ಇಲ್ಲಿನ ಜಲಕನ್ಯೆಯರು ಬಲು ಭಿನ್ನ. ಇವರಲ್ಲಿ ಬಹುತೇಕರದು ನಿಧಾನಗತಿ. ಕೆಲವರು ಮಾತ್ರ ಬಹು ರಭಸದಿಂದ ಭುವಿಯತ್ತ ಧುಮ್ಮಿಕ್ಕುತ್ತಾರೆ. ಮೊದಲಿಗೆ ಕಂಡ ಜಲಪಾತದ ಮುಂದೆ ನಿಂತರೆ ಅದು ನಮ್ಮತ್ತಲ್ಲೇ ಧಾವಿಸುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಹಾಲ್ನೋರೆಯಂತೆ ಅದು ಕಾಣುತ್ತದೆ. ನೀರು ಬಂಡೆಗಳ ಮೇಲೆ ನಿಧಾನವಾಗಿ ಉರುಳುತ್ತಾ ಬರುತ್ತಿದೆಯೇನೋ ಎನಿಸುತ್ತದೆ.
ಮೊದಲ ಜಲಕನ್ಯೆಯ ದರ್ಶನ ಮಾಡಿ ಆಕೆಗೆ ನಮಿಸಿ ಮುಂದಡಿಯಿಡುತ್ತಿದಂತೆ ತುಸು ಬಿಡುವು ಕೊಟ್ಟಿದ್ದ ಮುಂಗಾರು ಮಾರುತ ಹನಿಗಳನ್ನು ಸುರಿಸತೊಡಗುತ್ತವೆ. ನೋಡುನೋಡುತ್ತಿದಂತೆ ಹನಿಗಳು ಬಿರುಸಾಗುತ್ತವೆ. ಆ ಮಳೆ ತಡೆಯಲು ಸೂಕ್ತವಾದ ಉಡುಪು ಧರಿಸದಿದದ್ದರೆ ತೊಯ್ದು ತೊಪ್ಪೆಯಾಗುವುದು ಖಚಿತ. ಭಯಬೇಡ. ಈ ಮುಂಗಾರು ಮಾರುತಗಳ ಮಳೆಹನಿಗೆ ಮೈಯೊಡ್ಡಿದ್ದರೆ ಅಪಾಯವೇನೂ ಆಗುವುದಿಲ್ಲ.
ಆದರೆ ನಾವು ನಡೆಯಬೇಕಿರುವುದು 14 ಕಿಲೋಮೀಟರ್ ಆದ್ದರಿಂದ ರೈನ್ ಕೋಟ್, ಜರ್ಕಿನ್ ಧರಿಸಿರುವುದು ಸೂಕ್ತ. ಇವುಗಳು ಮಳೆಯಿಂದ ನೆನೆಯದಂತೆ ಸಂಪೂರ್ಣ ರಕ್ಷಣೆ ನೀಡಲು ಸಾಧ್ಯವಿಲ್ಲದಿದ್ದರೂ ಬೇಗ ಒದ್ದೆಯಾಗುವುದನ್ನು ತಪ್ಪಿಸುತ್ತವೆ. ಆದ್ದರಿಂದ ಮಳೆನಡಿಗೆ ಮಾಡಲು ಮುಂದಾಗುವವರು ಉತ್ತಮ ಗುಣಮಟ್ಟದ ರೈನ್ ಕೋಟ್ ಖರೀದಿಸಿರುವುದು ಸೂಕ್ತ.
ನಡೆಯಲು ಶುರು ಮಾಡಿದಂತೆ ಮುಂದಿನ ಹಾದಿಯೇ ಕಾಣುವುದಿಲ್ಲ. ಇದಕ್ಕೆ ಕಾರಣ ರಸ್ತೆ, ಬೆಟ್ಟಗಳನ್ನು ಆವರಿಸುವ ದಟ್ಟವಾದ ಮಂಜು, ಮೋಡಗಳು. ಆಗ ಬಹು ಎಚ್ಚರಿಕೆಯಿಂದ ಸಾಗಬೇಕು. ತುಸು ಯಾಮಾರಿದರೂ ಸ್ವಾಗತಿಸಲು ಪ್ರಪಾತ ಕಾದಿರುತ್ತದೆ. ಪರಸ್ಪರ ಎದುರು ಬರುತ್ತಿರುವ ವಾಹನಗಳು ಹೆಡ್ ಲೈಟ್ ಗಳನ್ನು ಆನ್ ಮಾಡಿಕೊಂಡೇ ಚಲಿಸುತ್ತಿರುತ್ತವೆ.
ಚಾರ್ಮಾಡಿ ಬೆಟ್ಟ ರಸ್ತೆಯಲ್ಲಿ ನಿಂತರೆ ಸುತ್ತಲಿನ ಗಿರಿಶಿಖರಗಳು ಕಾಣುತ್ತವೆ. ಅವುಗಳನ್ನು ಮೋಡಗಳು ಚುಂಬಿಸಿಕೊಂಡೇ ಸಾಗುತ್ತಿರುತ್ತವೆ. ಅಲ್ಲಿ ದಟ್ಟವಾದ ಕಾಡೂ ಇದೆ. ಅದನ್ನು ಅಷ್ಟೇ ದಟ್ಟವಾದ ಮಂಜು ಆವರಿಸಿಕೊಂಡಿರುವುದು ವಿನೂತನ ಸೌಂದರ್ಯವನ್ನು ಸೃಷ್ಟಿಸಿರುತ್ತದೆ. ಅದನ್ನೂ ನೋಡುತ್ತಾ ಮೈಮರೆಯದೇ ಮುಂದೆ ಸಾಗಿದರೆ ಮತ್ತಷ್ಟೂ ಜಲಕನ್ಯೆಯರು ಸ್ವಾಗತಿಸಲು ಕಾಯುತ್ತಿರುತ್ತಾರೆ.
ಮೊದಲನೇ ಜಲಪಾತಕ್ಕಿಂತ ಎರಡನೇ ಜಲಪಾತ ಮತ್ತಷ್ಟೂ ಎತ್ತರದಿಂದ ಧುಮ್ಮಿಕ್ಕುತ್ತಿರುತ್ತದೆ. ಆದರೆ ಅದರ ಹರವು ಕಡಿಮೆ. ಆದರೆ ರಭಸ ಹೆಚ್ಚು. ಅಲ್ಲಿ ತುಸು ನಿಂತು ಅದರ ವೈಯಾರ ನೋಡಬೇಕು. ನೋಡಿದಷ್ಟೂ ಅದು ಮನಸೂರೆಗೊಳ್ಳುತ್ತದೆ. ಅಲ್ಲಿಯೇ ನಿಂತರೆ ಮುಂದಿರುವ ಜಲಕನ್ಯೆಯರು ಮುನಿಸುಗೊಳ್ಳಬಹುದು. ಅವರ ದರ್ಶನಕ್ಕಾಗಿ ಮುಂದಡಿಯಿಡುವುದು ಸೂಕ್ತ.
ನಡೆಯುತ್ತಾ ಹೋದಂತೆ ಅದೆಷ್ಟೂ ಕಿರುಜಲಪಾತಗಳು ಎದುರಾಗುತ್ತವೆ. ಅಷ್ಟರಲ್ಲಾಗಲೇ ನಡೆದು ನಡೆದು ದಣಿವಾಗಿರುತ್ತದೆ. ದೇಹ, ನೀರು ಬಯಸುತ್ತದೆ. ದಯವಿಟ್ಟು ನಿಮ್ಮ ಬ್ಯಾಗಿನಿಂದ ನೀರಿನ ಬಾಟಲು ತೆಗೆಯಬೇಡಿ. ಆ ಕಿರುಜಲಪಾತಗಳ ಮುಂದೆ ನಿಂತು ಬೊಗಸೆಯೊಡ್ಡಿ ನೀರು ಕುಡಿಯಿರಿ. ಅದು ಅಮೃತ ಎಂದರೆ ಅದೇ ಇರಬೇಕು ಎನಿಸುತ್ತದೆ. ಆ ನೀರನ್ನು ಕುಡಿದಷ್ಟೂ ಕುಡಿಯುತ್ತಲೇ ಇರಬೇಕು ಎನಿಸುತ್ತದೆ.
ಈ ಜಲಪಾತಗಳ ನೀರು ಎಷ್ಟು ಸವಿಯೋ ಅಷ್ಟೇ ಔಷಧಯುಕ್ತವೂ ಹೌದು. ಇವುಗಳು ಬೆಟ್ಟದ ನೆತ್ತಿಯಿಂದ ಅನೇಕ ಕಿಲೋಮೀಟರ್ ಗಟ್ಟಲೇ ದೂರ ಕಾಡಿನಲ್ಲಿ ಬಳಕುತ್ತಾ ಹರಿದು ಬರುತ್ತವೆ. ಹಾಗೆ ಬರುವಾಗ ಅಗಾಧ ಗಿಡಮೂಲಿಕೆಗಳ ಮೇಲಿಂದ ಹರಿದು ಬಂದಿರುತ್ತವೆ. ಆದ್ದರಿಂದಲೇ ಅವು ಔಷಧಯುಕ್ತವೂ ಹೌದು. ಈ ನೀರನ್ನು ಕುಡಿದ ಕೂಡಲೇ ಮೈಮನಸುಗಳ ಆಯಾಸ ಕ್ಷಣಾರ್ಧದಲ್ಲಿ ನಿವಾರಣೆಯಾಗುತ್ತದೆ. ಉಲ್ಲಾಸ-ಉತ್ಸಾಹ ಮೂಡುತ್ತದೆ.
ಚಾರ್ಮಾಡಿಯಲ್ಲಿ ಸಾಗಿದರೆ ಅನೇಕ ಬೆಟ್ಟಗಳಿಗೆ ಅದು ರಹದಾರಿ ಒದಗಿಸುತ್ತದೆ. ಅವುಗಳಲ್ಲಿ ಬಹು ಪ್ರಮುಖವಾದ ಬೆಟ್ಟಗಳೆಂದರೆ ಬಾಳೆಕಲ್ಲು ಬೆಟ್ಟ, ಅಮೇಧಿಕಲ್ಲು ಬೆಟ್ಟ, ಜೇನುಕಲ್ಲು ಬೆಟ್ಟ, ಎತ್ತಿನ ಭುಜ ಬೆಟ್ಟ, ದೀಪದಕಲ್ಲು ಬೆಟ್ಟ, ಕೊಡೆಕಲ್ಲು ಬೆಟ್ಟ, ಶಿಶಿಲ ಬೆಟ್ಟ. ಅವುಗಳತ್ತ ಸಾಗಬೇಕಾದರೆ ಭಾರಿ ಸಿದ್ಧತೆಗಳು ಬೇಕು. ಸ್ಥಳೀಯ ಮಾರ್ಗದರ್ಶಕರು ಜೊತೆಗಿರಲೇಬೇಕು. ಇಲ್ಲದಿದ್ದರೆ ದುರ್ಗಮ ಕಾಡು-ಕಣಿವೆಗಳಲ್ಲಿ ಕಳೆದುಹೋಗುವ ಸಾಧ್ಯತೆ ಅಪಾರ
ಚಾರ್ಮಾಡಿ ಹಾದಿ ಅನೇಕ ಸುಂದರ ಬೆಟ್ಟ ಶ್ರೇಣಿಗಳಿಗೆ ರಹದಾರಿ ಒದಗಿಸಿದಂತೆ ಕೆಲವು ಬಹು ಸುಂದರ ಜಲಪಾತಗಳ ದರ್ಶನಕ್ಕೂ ಹಾದಿ ಕಲ್ಪಿಸಿಕೊಡುತ್ತದೆ. ಇಲ್ಲಿರುವ ಪ್ರಮುಖ ಜಲಪಾತಗಳೆಂದರೆ ಅಲೇಖಾನ್ ಜಲಪಾತ, ಕಲ್ಲರ್ಬಿ ಜಲಪಾತ, ಜೇನುಕಲ್ಲು ಜಲಪಾತ, ಬಂಡಾಜೆ ಜಲಪಾತ, ಹಕ್ಕಿಕಲ್ಲು ಜಲಪಾತ, ಆನಡ್ಕ ಜಲಪಾತ ಇದಲ್ಲದೇ ಹೆಸರೇ ಇಲ್ಲದ ಅನೇಕ ಜಲಪಾತಗಳಿವೆ.
ಕೆಲವು ಜಲಪಾತಗಳು ರಸ್ತೆ ಅಂಚಿಗೆ ಧುಮ್ಮಿಕ್ಕಿ ಅಂಚಿನಲ್ಲಿಯೇ ಸಾಗುತ್ತವೆ. ಕೆಲವು ಭಾರಿ ಜಲಪಾತಗಳು ಕೆಳಗೆ ಧುಮ್ಮಿಕ್ಕಿದ ನಂತರ ರಸ್ತೆ ದಾಟುತ್ತವೆ. ಇಂಥ ಜಲಪಾತಗಳ ಮೇಲೆ ಸುಗಮ ಸಂಚಾರಕ್ಕಾಗಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಹೀಗೆ ಹಾದು ಹೋಗುವ ಜಲಪಾತಗಳು ಮತ್ತೆ ನೂರಾರು ಅಡಿ ಕೆಳಗೆ ಧಮ್ಮಿಕುತ್ತವೆ. ಅವುಗಳ ಹರಿಯುವಿಕೆಯತ್ತ_ಕಣ್ಣು ಹಾಯಿಸುತ್ತಾ ಸಾಗುವುದು ವಿನೂತನ ಅನುಭವ ನೀಡುತ್ತದೆ.
ರಸ್ತೆ ಅಂಚಿನಿಂದಲೇ ಕೆಲವು ಜಲಪಾತಗಳ ದರ್ಶನ ಆಗುವುದಿಲ್ಲ. ಇದಕ್ಕೆ ಕಾರಣ, ಕಾಡು ಅವುಗಳನ್ನು ಮರೆ ಮಾಡಿರುವುದು. ಅವುಗಳನ್ನು ಕಾಣಲು ರಸ್ತೆಯಿಂದ ಕೆಳಗಿಳಿದು ಕಣಿವೆ ಏರಬೇಕು. ಜಾರುವ ಬಂಡೆಗಳ ಮೇಲೆ ನಡೆಯಬೇಕು. ಮರಗಳ ಮರೆ ದಾಟಿದ ನಂತರ ಧುತ್ತನೆ ಜಲಪಾತ ಎದುರಾಗುತ್ತದೆ. ಮೈಮೇಲೆ ಅವುಗಳ ಮುತ್ತಿನ ಹನಿಗಳು ಸಿಡಿಯತೊಡಗುತ್ತವೆ.
ನೂರಾರು ಅಡಿ ಎತ್ತರದಿಂದ ಕೆಳಗೆ ಧುಮ್ಮಿಕ್ಕುವ ಒಂದೆರಡು ಜಲಪಾತ ವೈಭವವನ್ನು ಕಣ್ತುಂಬಿಸಿಕೊಳ್ಳಬೇಕಾದರೆ ಕಣಿವೆಗೆ ಇಳಿಯಲೇಬೇಕು. ಹೀಗೆ ಇಳಿಯುವುದು ಸುಲಭವಲ್ಲ. ಅದು ಬಹು ಕಡಿದಾದ ಪ್ರಪಾತ. ಅನುಭವ ಇದ್ದರಷ್ಟೆ ಕೆಳಗೆ ಇಳಿಯಬೇಕು. ಇಲ್ಲದಿದ್ದರೆ ಹಾಗೆ ಮುಂದೆ ಸಾಗುವುದು ಉತ್ತಮ. ಮಳೆಗಾಲವಾದ್ದರಿಂದ ಮಣ್ಣು ಕುಸಿಯುವ ಸಾಧ್ಯತೆ ಹೆಚ್ಚು. ಬಹು ಎಚ್ಚರಿಕೆಯಿಂದ ಕೆಳಗಿಳಿದು ಜಲಪಾತದ ಎದುರಿಗೆ ನಿಂತರೆ ಶ್ರಮ ಸಾರ್ಥಕ ಎನಿಸುತ್ತದೆ.
ಮತ್ತೆ ಕಣಿವೆ ಏರಿ ರಸ್ತೆಗೆ ಬಂದ ನಂತರ ಹೊಟ್ಟೆ ಚುರುಗುಟ್ಟುತ್ತಿರುತ್ತದೆ. ಬುತ್ತಿ ಕಟ್ಟಿಸಿಕೊಂಡು ಬಂದಿದ್ದರೆ ಅದನ್ನು ಬಿಚ್ಚಿ ನಿಧಾನವಾಗಿ ಸವಿಯಬೇಕು. ದಣಿದ, ಹಸಿದ ದೇಹಕ್ಕೆ ಅದು ಎಂದಿಗಿಂತ ಭಾರಿ ರುಚಿ ಎನಿಸುತ್ತದೆ. ಹೊಟ್ಟೆ ತುಂಬ ಆಹಾರ ಸೇವಿಸಿ ಆ ಜಲಪಾತದ ನೀರನ್ನೇ ಕುಡಿಯಬೇಕು. ದೇಹ-ಮನಸ್ಸಿಗೆ ಮತ್ತಷ್ಟೂ ಶಕ್ತಿ ತುಂಬಿಕೊಳ್ಳುತ್ತದೆ. ಇನ್ನೂ ದೂರ ಇರುವ ಕೊಟ್ಟಿಗೆಹಾರದತ್ತ ನಡೆಯಲು ಹುಮ್ಮಸ್ಸು ಬರುತ್ತದೆ.
ಮತ್ತೆ ನಡೆಯಲು ಶುರು ಮಾಡಿದಂತೆ ಮಳೆರಾಯ ನಮ್ಮತ್ತ ಧಾವಿಸಿ ಬರತೊಡಗುತ್ತಾನೆ. ಅಲ್ಲಿ ಮರಗಳ ಕೆಳಗೆ ನಿಲ್ಲುವುದು ಸೂಕ್ತವಲ್ಲ. ಯಾವಾಗ ಬೇಕಾದರೂ ವಯಸ್ಸಾದ ಮರಗಳು ಗಾಳಿ-ಮಳೆಗೆ ಕೆಳಗೆ ಉರುಳುವ ಸಾಧ್ಯತೆ ಇರುತ್ತದೆ. ಬೆಟ್ಟದ ಅಂಚಿನಲ್ಲಿ ನಿಲ್ಲುವುದು ಕೂಡ ಸೂಕ್ತವಲ್ಲ. ಏಕೆಂದರೆ ಮಣ್ಣು ಕೆಳಗೆ ಜರಿಯಬಹುದು. ಆದ್ದರಿಂದ ನಿಧಾನವಾಗಿ ಮುಂದೆ ಸಾಗುತ್ತಿರಬೇಕು.
ಮುಂಗಾರು ಮಳೆ ನಡಿಗೆ, ಮುಂಗಾರು ಚಾರಣ ಮಾಡುವವರು ಬಹಳ ಎಚ್ಚರಿಕೆಗಳನ್ನು ವಹಿಸಬೇಕು. ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬಾರದು. ಬುದ್ದಿ ಕೊಂಚ ಮಬ್ಬಾದರೂ ಸಾವು ಅಪ್ಪಿಕೊಳ್ಳುವ ಸಾಧ್ಯತೆ ಅತ್ಯಧಿಕ. ಏಕೆಂದರೆ ಅದು ಪ್ರಪಾತಗಳ ಸಾಲು. ಜಲಪಾತಗಳ ಅಂಚಿನಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ ಸಾಹಸವನ್ನೂ ಮಾಡಬೇಡಿ. ಹೀಗೆ ಮಾಡಿ ಸಾವಿನ ದವಡೆಗೆ ತುತ್ತಾದವರ ಸಂಖ್ಯೆಯೂ ಅತ್ಯಧಿಕ. ಎಚ್ಚರಿಕೆಯಿಂದ ಇದ್ದಷ್ಟೂ ಮುಂಗಾರು ಜಲಕನ್ಯೆಯರು ವೈಯಾರದಿಂದ ಭುವಿಗೆ ಇಳಿಯುತ್ತಿರುವುದನ್ನು ಕಣ್ತುಂಬಿಕೊಳ್ಳಬಹುದು.

Similar Posts

Leave a Reply

Your email address will not be published. Required fields are marked *