Site icon ಕುಮಾರರೈತ

ಹೆಣ್ಣಾನೆಗೂ ಸಂಗಾತಿ ಬಗ್ಗೆ ರಮ್ಯ ಕನಸು;ನಿರೀಕ್ಷೆ

ಮೇಲುಕಾಮನಹಳ್ಳಿ ತಲುಪುತ್ತಿದ್ದಂತೆ ಕಾಡಿನಲ್ಲಿ ಕಾರಿನ ವೇಗ ತಗ್ಗಿತು. ಬೆಂಕಿಯಿಂದ ಬಸವಳಿದಿದ್ದ ಕಾಡು ಚೇತರಿಸಿಕೊಳ್ಳತೊಡಗಿದ್ದು ಮೇಲ್ನೋಟಕ್ಕೆ ಕಾಣುತ್ತಿತ್ತು. ಆದರೆ ಸುಟ್ಟುಗಾಯಗಳ ಚಹರೆ ಬೇಗ ಮರೆಯಾಗುವುದಿಲ್ಲ. ಇದರಿಂದ ಕಾಡು ಕೊರಗುತ್ತಿದೆಯೇನೊ ಎಂದು ಭಾಸವಾಗುತ್ತಿತ್ತು. ನಿರಂತರವಾಗಿ ಬಿದ್ದ ಮಳೆ, ವೈದ್ಯರಂತೆ ಕೆಲಸ ಮಾಡುತ್ತಿತ್ತು. ಹಲವೆಡೆ ಹಸಿರು ಮುಕ್ಕಳಿಸುತ್ತಿತ್ತು. ಜಿಂಕೆಗಳು ಹುಲ್ಲಿನಲ್ಲಿ ಭಯದಿಂದಲೇ ಬಾಯಾಡಿಸುತ್ತಿವೇನೊ ಅನಿಸತೊಡಗಿತು. ಬಹುಶಃ ಅದು ಕೆಲವೊಮ್ಮೆ ಅತೀ ಎನಿಸುವ ನನ್ನ ಸೂಕ್ಷ್ಮ ಸಂವೇದನೆಯಿಂದಲೂ ಉಂಟಾದ ಭಾವನೆಯಿರಬಹುದು.

ಬಂಡೀಪುರ ಅರಣ್ಯ ಸಂರಕ್ಷಕರ ಕಚೇರಿ ದಾಟುತ್ತಿದ್ದಂತೆಯೇ ಎಡಕ್ಕೆ ತಿರುವಿಕೊಂಡೆವು. ಅದು ಮಂಗಲದ ಹಾದಿ. ಕಾಡಿನ ಸೆರಗಿನೊಳಗೆ ಹುದುಗಿರುವ ಗ್ರಾಮ. ಅರಣ್ಯಕ್ಕೆ ತಾಗಿಕೊಂಡಂತೆ ಕೃಷಿಭೂಮಿ ಇದೆ. ಇಲ್ಲಿ ವ್ಯವಸಾಯ ಮಾಡುವುದು ಸವಾಲಿನ ಕೆಲಸ. ಕೆಲವರು ಸೋಲಾರ್ ಬೇಲಿ ಹಾಕಿಕೊಂಡು ಕೃಷಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಲೇ ಮಹಾದೇಶ್ವರನ ಮೇಲೆ ಭಾರ ಹಾಕಿ ಮಳೆಯಾಶ್ರಿತ ಬೆಳೆ ಬೆಳೆಯುತ್ತಾರೆ. ಕೆಲವೆಡೆ ಆಗಷ್ಟೆ ಉತ್ತಿದ್ದ ಚಿಕ್ಕಚಿಕ್ಕ ಹೊಲಗಳು. ಅದೇ ಹಾದಿಯಲ್ಲಿಯೇ ಪುಟ್ಟ ಹೊಲ ಹೊಂದಿರುವ ಸೂರಿ “ಇಲ್ಲಿಯೇ ಕಾರ್ ನಿಲ್ಲಿಸಿ; ನಡೆದು ಹೋಗೋಣ” ಎಂದರು.
ನಾನು, ನನ್ನ ತಮ್ಮ ಸಿದ್ದರಾಜು, ಸೂರಿಯನ್ನು ಹಿಂಬಾಲಿಸತೊಡಗಿದೆವು. ಮುಂದೆ ಸಾಗುತ್ತಿದ್ದಂತೆ ಕಾಡು ನಂತರ ಹೊಲ ನಂತರ ಕಾಡು ಹೀಗೆ. ಇಂಥ ಹಾದಿಯಲ್ಲಿ ಮನುಷ್ಯ ಮಾತನಾಡದೇ ಸುಮ್ಮನೆ ನಡೆಯಬೇಕು. ಆಗ ಕಾಡಿನ ಮಾತು ಕೇಳಿಸತೊಡಗುತ್ತದೆ. ಮಾತನಾಡದೇ ಮುಂದೆ ಹೋಗುತ್ತಿದ್ದ ಸೂರಿ ಗುಡ್ಡ ಏರತೊಡಗಿದರು. ಬೃಹತ್ ಪೊದೆಗಳು, ಮರಗಳ ನಡುವೆ ಸಾಗತೊಡಗಿದೆವು. ಮುಂದೆ ಇದ್ದ ಗೌಜಲ ಹಕ್ಕಿಗಳು ಪುರ್ರನೆ ಹಾರತೊಡಗಿದೆವು. ಒಂದೆರಡು ಕಾಡುಕೋಳಿಗಳು ತಲೆಯ ಮೇಲೆ ಹಾರಿ ಹೋದವು. ಅವುಗಳದ್ದು ಲಾಂಗ್ ಜಂಪೊ, ಹಾರಾಟವೊ ಒಂಥರಾ ಗೊಂದಲ. ತುದಿ ಏರಿ ನಿಂತೊಡನೆ ಆಯಾಸವೆಲ್ಲ ಮಾಯ.
ತಣ್ಣನೆ ಬೀಸುವ ತಂಗಾಳಿ. ಹಲವಾರು ಮೈಲಿ ದೂರದವರೆಗೂ ಹಬ್ಬಿದ ಮಲೆ, ಕಾಡಿನ ರಾಜ ಗರ್ಜಿಸಿದ ಸದ್ದು. ಮೈಮೇಲಿನ ರೋಮಗಳು ಮುಳ್ಳಿನಂತೆ ನಿಮಿರಿ ನಿಂತವು. ಅಲ್ಲಿರುವ ತನಕವೂ ಆ ರೋಮಾಂಚನ ಹಾಗೇ ಇತ್ತು. ಅದಕ್ಕೆ ಕಾರಣ ತುಸು ದೂರದಲ್ಲಿ ಕಂಡ ಕಾಡಾನೆಗಳ ಹಿಂಡು. ತನ್ಮಯತೆಯಿಂದ ಅವು ಹಸಿರರಾಶಿ ಮೇಯತೊಡಗಿದ್ದವು. ತದೇಕಚಿತ್ತದಿಂದ ನೋಡತೊಡಗಿದೆವು.


ಮೊದಲು ಕಣ್ಣಿಗೆ ಬಿದ್ದಿದ್ದು ಮೂರು ಆನೆಗಳು ಅಷ್ಟೆ. ಆದರೆ ಅವು ರಕ್ಷಣಾತ್ಮಕ ಹೆಜ್ಜೆ ಇಡುತ್ತಿವೆ ಎನಿಸಿತು. ಕೆಲವೇ ನಿಮಿಷಗಳಲ್ಲಿ ಅದಕ್ಕೆ ಕಾರಣವೂ ಗೊತ್ತಾಯಿತು. ಮರ, ಪೊದೆಗಳ ಮರೆಯಿಂದ ಮರಿಯಾನೆ ಹೊರಬಂತು. ಹಿರಿಯಾನೆಗಳು ರಚಿಸಿದ್ದ ವ್ಯೂಹವನ್ನು ಅದು ದಾಟಿ ಹೋಗಲು ಸಾಧ್ಯವೇ ಇರಲಿಲ್ಲ. ತಾಯಿಯಾನೆ ಅದರತ್ತ ಕಣ್ಣಿರಿಸಿಯೇ ಎಲೆಗಳನ್ನು ಚಪ್ಪರಿಸುತ್ತಿತ್ತು. ಮರಿಯಾನೆಗೆ ಯಾವುದೇ ಅಪಾಯಗಳೂ ಸಂಭವಿಸದಂತೆ ಅವುಗಳು ವಹಿಸಿದ್ದ ಮುಂಜಾಗ್ರತೆ ಅಪಾರ.
ನಾನು ಕ್ಯಾಮೆರಾದ ವ್ಯೂ ಪೈಂಡರಿನಿಂದ ಕಣ್ಣನೇ ಸರಿಸಿರಲಿಲ್ಲ. ಬಲಗೈ ತೋರು ಬೆರಳು ನಿರಂತರವಾಗಿ ಪೋಟೋ ಕ್ಲಿಕ್ಕಿಸುತ್ತಲೇ ಇತ್ತು. ಆನೆಗಳು ನಿಧಾನವಾಗಿ ಮೂವ್ ಆಗತೊಡಗಿದವು. ಪೋಷಕರು ವಹಿಸಿದ್ದ ಅತೀ ಕಾಳಜಿ ಮರಿಯಾನೆಗೆ ಕಿರಿಕಿರಿ ಎನಿಸಿತೇನೊ. ಮುನ್ನುಗಲು ಯತ್ನಿಸಿತು. ಕೂಡಲೇ ತಾಯಿಯಾನೆ ತನ್ನ ಸೊಂಡಿಲನ್ನು ಮರಿ ಕಾಲಿಗೆ ಹಾಕಿ ನಿಧಾನವಾಗಿ ಹಿಂದಕ್ಕೆಳೆಯಿತು.
ಆನೆಗಳದ್ದು ಮಾತೃ ಪ್ರಧಾನ ವ್ಯವಸ್ಥೆ:
ಕಾಡಿನ ಪ್ರಾಣಿಗಳಲ್ಲಿಯೇ ಆನೆಗಳು ಬಹು ಸೂಕ್ಷ್ಮಸಂವೇದಿಗಳು ಮನುಷ್ಯರಲ್ಲಿರುವಂತೆ ಅವುಗಳಲ್ಲಿಯೂ ಸಾಮಾಜಿಕ ವ್ಯವಸ್ಥೆಯಿದೆ. ತಾಯಿ, ತಂದೆ, ಚಿಕ್ಕಮ್ಮ, ದೊಡ್ಡಮ್ಮ, ಚಿಕ್ಕಪ್ಪ-ದೊಡ್ಡಪ್ಪ ಹೀಗೆ. ಗಮನಾರ್ಹ ಸಂಗತಿಯಂದರೆ ಅವುಗಳದ್ದು ಮಾತೃ ಪ್ರಧಾನ ವ್ಯವಸ್ಥೆ. ಗುಂಪಿನಲ್ಲಿ ಹೆಣ್ಣಾನೆಗಳ ಸಂಖ್ಯೆಯೇ ಹೆಚ್ಚು. ಇದರಲ್ಲಿ ಯಾವುದೇ ಹೆಣ್ಣಾನೆ ಗರ್ಭ ಧರಿಸಿದಾಗ, ಪ್ರಸವಿಸಿದಾಗ ಗುಂಪಿನ ಉಳಿದ ಹೆಣ್ಣಾನೆಗಳು ಮುತುವರ್ಜಿ ವಹಿಸುತ್ತವೆ. ತಾಯಿಗೆ ಹಾಲೂಡಿಸುವ ಕೆಲಸ ಹೊರತುಪಡಿಸಿ ಉಳಿದೆಲ್ಲ ಜವಾಬ್ದಾರಿಗಳನ್ನು ಅವುಗಳೇ ಹೊತ್ತಿರುತ್ತವೆ. ಗಂಡಾನೆಗೆ 13-14 ವರ್ಷ ತುಂಬುತ್ತಿದ್ದಂತೆಯೇ ಗುಂಪಿನಿಂದ ಹೊರಕ್ಕೆ ಕಳಿಸಲಾಗುತ್ತದೆ. ಅದು ತನ್ನಂಥ ಬ್ರಹ್ಮಚಾರಿ ಆನೆಗಳ ಗುಂಪು ಸೇರುತ್ತದೆ. ಇಂಥ ಗುಂಪುಗಳು ಕೆಲವೊಮ್ಮೆ ಬಹು ಅಪಾಯಕಾರಿ.


ಸಂಗಾತಿ ಬಗ್ಗೆ ಬಹು ನಿರೀಕ್ಷೆ:
ಹದಿಹರೆಯದ ಹೆಣ್ಣಾನೆಗೆ ತನ್ನ ಸಂಗಾತಿ ಬಗ್ಗೆ ಅಪಾರ ಕನಸುಗಳು, ನಿರೀಕ್ಷೆಗಳು. ಬಂದ ಕೋರಿಕೆಗಳನ್ನೆಲ್ಲ ಅದು ಸ್ವೀಕರಿಸುವುದಿಲ್ಲ. ಅದು ತನ್ನನ್ನು ಸುರಕ್ಷಿತವಾಗಿ ನೋಡಿಕೊಳ್ಳಬಲ್ಲ, ತನ್ನ ಸಂತಾನವನ್ನು ಜತನದಿಂದ ಪೊರೆಯಬಲ್ಲ ಗಂಡಾನೆಯ ನಿರೀಕ್ಷೆಯಲ್ಲಿರುತ್ತದೆ. ಪುಂಡುಪೋಕರಿ ಸ್ವಭಾವದ ಆನೆಗಳನ್ನು ಅದು ಒಪ್ಪುವುದಿಲ್ಲ. ಅದರ ಹೃದಯ ಗೆಲ್ಲುವುದು ವಯಸ್ಕ ಗಂಡಾನೆಗಳಿಗೊಂದು ಸವಾಲು. ಆದರೆ ಎಲ್ಲ ನಿರೀಕ್ಷೆಗಳು ನನಸಾಗಲಾರವೇನೊ ಎಂಬಂತೆ ಕೆಲವೊಮ್ಮೆ ಹೆಣ್ಣಾನೆಯ ಆಸೆ ಕೈಗೂಡದಿರುವುದು ಉಂಟು. ಒರಟು ಸ್ವಭಾವದ ಗಂಡಾನೆ ಒಡ್ಡಿದ ಮಿಲನ ಆಹ್ವಾನಕ್ಕೆ ಅದು ಒಪ್ಪದಿದ್ದ ಸಂದರ್ಭದಲ್ಲಿ ಅಪಾಯಗಳಾಗಬಹುದು ಎನ್ನುತ್ತಾರೆ ವನ್ಯಜೀವಿ ಸಂಸ್ಥೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕಾರ್ತಿಕ್ ಆರ್.
ಆಹ್ವಾನ ಸ್ವೀಕರಿಸದೇ ನಿರಾಕರಿಸಿದ ಹೆಣ್ಣಾನೆಯನ್ನು ಪುಂಡು ಗಂಡಾನೆ ಅಟ್ಟಾಡಿಸಿ, ದಂತಗಳಿಂದ ತಿವಿತಿವಿದು ಭಯ ಮೂಡಿಸುತ್ತದೆ. ಬಲಾತ್ಕಾರದಿಂದ ಕೂಡುತ್ತದೆ. ಹೆಣ್ಣಾನೆ ಪ್ರಾಣಕ್ಕೆ ಸಂಚಕಾರದ ಸಾಧ್ಯತೆಯೂ ಇದೆ. ಆದರೆ ಇಂಥ ಸಂದರ್ಭಗಳು ಬಹುಕಡಿಮೆ. ಬಲಿಷ್ಠ ಗಂಡಾನೆಯೇ ಉಳಿದ ಗಂಡಾನೆಗಳ ಮೇಲೆ ನಿಯಂತ್ರಣ ಸಾಧಿಸಿ ಹೆಣ್ಣಾನೆ ಮನ ಗೆಲ್ಲುತ್ತದೆ.


ವನ್ಯಜೀವಿಗಳನ್ನು ನೋಡುತ್ತಿದ್ದರೆ ಹೊತ್ತು ಸರಿಯವುದೇ ಗೊತ್ತಾಗುವುದಿಲ್ಲ. ಮಳೆ ಬರುವ ಲಕ್ಷಣಗಳೂ ಕಾಣುತ್ತಿದ್ದವು. ಬಂದ ದಾರಿಯಲ್ಲಿಯೇ ಹಿಂದಿರುಗತೊಡಗಿದೆವು. ಹೆಜ್ಜೆ ಬಿರುಸಾಗಿತ್ತು. ಮೈಯೆಲ್ಲ ಕಣ್ಣಾಗಿ ನಡೆಯತೊಡಗಿದೆವು.

Exit mobile version