ಎಲ್ಲ ಕಾದಂಬರಿಗಳು ರಂಗರೂಪಕ್ಕೆ ಹೊಂದಲಾರವು. ಅದರಲ್ಲಿಯೂ ಕೆಲವು ಕೃತಿಗಳನ್ನು ನಾಟಕ ಪ್ರಕಾರಕ್ಕೆ ತರುವುದು ಸವಾಲಿನ ಕೆಲಸ. ಇಂಥವುಗಳಲ್ಲಿ ಶಿವರಾಮ ಕಾರಂತ ಅವರ ಬೆಟ್ಟದ ಜೀವವೂ ಒಂದು. ಕೃತಿಯನ್ನು ಓದುವಾಗ ನಮ್ಮ ಮನೋಭಿತ್ತಿಯಲ್ಲಿ ತೆರೆತೆರೆಯಾಗಿ ಹರಿದು ಹೋಗುವ ಚಿತ್ರಗಳನ್ನು ಕಲಾಕೃತಿಗಳಾಗಿ ಮೂಡಿಸುವುದು ಕಷ್ಟ. ಇಂಥ ಕಷ್ಟದ ಕಾರ್ಯವನ್ನು ರಂಗಕರ್ಮಿ, ನಿರ್ದೇಶಕ ಎಸ್.ಆರ್. ರಮೇಶ್ ಕೈಗೆತ್ತಿಕೊಂಡು ಯಶಸ್ವಿಯಾಗಿದ್ದಾರೆ.


ಬೆಟ್ಟದ ಜೀವ ಕಥೆ ಸಾಗುವುದೇ ದಕ್ಷಿಣಕಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿರುವ ಪಶ್ವಿಮಘಟ್ಟದ ನೆತ್ತಿಯ ಮೇಲೆ. ಸುಬ್ರಮಣ್ಯ-ಕುಮಾರ ಪರ್ವತಗಳ ನಡುವೆ ಬರುವ ಬೆಟ್ಟ ಪ್ರದೇಶ. ದಟ್ಟಕಾಡು, ಹುಲಿ-ಚಿರತೆ-ಆನೆಗಳ ಆವಾಸಸ್ಥಾನ. ಇಂಥದೊಂದು ಪರಿಸರದಲ್ಲಿ ಸಾಗುವ ಕಥೆಯಿದು ಎಂದು ಹೇಳುವಲ್ಲಿ ಆರಂಭದಲ್ಲಿಯೇ ನಾಟಕ ಗೆಲ್ಲುತ್ತದೆ. ದೂರದ ಪುತ್ತೂರು ನಿವಾಸಿ ಶಿವರಾಮ (ಕರ್ನಲ್ ಸತೀಶ್. ಬಿ.ಎಸ್.) ಸುಬ್ರಮಣ್ಯದಿಂದ ಕಾಲ್ನಡಿಗೆಯಲ್ಲಿ ಹೊರಟವರು ಪಂಜಕ್ಕೆ ಹೋಗುವ ಬದಲು ಹಾದಿ ತಪ್ಪಿ ಕಾಡಿನ ನಡುವೆ ಕೃಷಿ ಮಾಡುತ್ತಿರುವ ತಾಣ ತಲುಪುತ್ತಾರೆ. ಕಥೆಯ ಮುಖ್ಯಪಾತ್ರಗಳಲ್ಲಿ ಒಂದಾದ ದೇರಣ್ಣ (ಚಿನ್ನಸ್ವಾಮಿ ವಡ್ಡಗೆರೆ) ಅವರನ್ನು ಭೇಟಿಯಾಗುತ್ತಾರೆ. ಅದು ಕಥೆಯ ಕೇಂದ್ರ ಬಿಂದು ಗೋಪಾಲಯ್ಯ ( ಎಂ. ದ್ವಾರಕಾನಾಥ್ ) ಅವರ ಮನೆಗೆ ಕರೆತರುತ್ತದೆ. ಇಲ್ಲಿಂದಾಚೆಗೆ ಕಥೆಯ ಆರೋಹಣಕ್ಕೆ ಮತ್ತಷ್ಟೂ ವೇಗ ದಕ್ಕುತ್ತದೆ.
ಗೋಪಾಲಯ್ಯ ಅವರ ಹಿರಿಯರು ಕಟ್ಟಿಸಿದ ಮನೆಯಲ್ಲಿಯೇ ಬಹುತೇಕ ಕಥೆ ಸಾಗುತ್ತದೆ. ಆದರೆ ಎಲ್ಲಿಯೂ ಏಕತಾನತೆ ಎನಿಸುವುದಿಲ್ಲ. ದೊಡ್ಡಮನೆಯಲ್ಲಿ ನಾ ನಿನಗೆ, ನೀ ಎನಗೆ ಎನ್ನುವಂತಿದ್ದ ವೃದ್ಧದಂಪತಿಗಳು ಆಗಂತುಕನನ್ನು ಬರಮಾಡಿಕೊಳ್ಳುವ ಪರಿ ಅಚ್ಚರಿ ಮೂಡಿಸುತ್ತದೆ. ಆ ಆಗಂತುಕ ತನ್ನ ಮಾತು, ನಡವಳಿಕೆಯಿಂದ ಅವರ ಮನಗೆಲ್ಲುತ್ತಿದ್ದಂತೆ ಅವರಿಬ್ಬರು ತಮ್ಮ ಕುಟುಂಬದ ಕಥೆಯ ಸುರುಳಿ ಬಿಚ್ಚುತ್ತಾ ಹೋಗುತ್ತಾರೆ.
ಅದು ದುಃಖದ ಕಥೆ, ಯಾತನೆಯ ಕಥೆ. ಆ ಕಥೆಗಳ ಬೆಳವಣಿಗೆಯೊಂದರಲ್ಲಿ ಶಿವರಾಮು ಸಹ ತನಗೆ ಗೊತ್ತಿಲ್ಲದಂತೆ ಭಾಗಿಯಾಗಿರುತ್ತಾರೆ. ಅದು ಆ ಕಥೆ ಮತ್ತೊಂದು ಮಜಲಿಗೆ ಹೊರಳುವ ಸಾಧ್ಯತೆ ತೋರುತ್ತದೆ. ಸಂಬಂಧಿಯೇನೋ ಅಲ್ಲದ, ಜಾತಸ್ಥನಾದ ನಾರಾಯಣ (ಎಸ್. ಮಾಧವರಾವ್) ಆತನ ಪತ್ನಿ ಲಕ್ಷ್ಮಿ ( ರೋಷ್ಠಿ) ಅವರಿಬ್ಬರ ಮಕ್ಕಳನ್ನು ಗೋಪಾಲಯ್ಯ ಮತ್ತಿವರ ಪತ್ನಿ ಶಂಕರಿ ಔದಾರ್ಯದಿಂದ ಕಾಣುತ್ತಾರೆ. ಆದರೆ ಗೌಡ ಸಮುದಾಯದ ದೇರಣ್ಣ, ಪರಿಶಿಷ್ಟ ಜಾತಿಯ ಬಟ್ಯ ( ಅಧ್ಯಪಕ್ ಹೆಚ್. ಆರ್. ರವಿತೇಜ) ಅವರುಗಳನ್ನು ಅಷ್ಟೇ ವಿಶ್ವಾಸ, ಔದಾರ್ಯದಿಂದ ಕಾಣುವುದು ಆ ಪಾತ್ರಗಳ ಹಿರಿಮೆ ತೋರುತ್ತದೆ.


ಮುಖ್ಯವಾಗಿ ನಾಟಕದಲ್ಲಿ ಎದ್ದು ಕಾಣುವುದು ಸಣ್ಣತನದ ವರ್ತನೆ ತೋರುವ ಪಾತ್ರಗಳೇ ಇಲ್ಲದಿರುವಿಕೆ. ನಗರ ಪ್ರದೇಶದಿಂದ ದೂರ, ಬೆಟ್ಟ-ಕಾನನಗಳ ನಡುವೆ ವಾಸ, ಪರಸ್ಪರ ಅವಲಂಬನೇ ಬದುಕು ಎನ್ನುವ ತಿಳಿವಳಿಕೆ ಅವರಲ್ಲಿ ಇಂಥ ಹಿರಿದಾದ ನಡವಳಿಕೆ ತಂದಿರಬಹುದು.
ಪಾತ್ರಗಳ ಆಯ್ಕೆ ಮತ್ತು ಅಭಿನಯ: ನಾಟಕವಾಗಲಿ, ಸಿನೆಮಾವಾಗಲಿ ಒಂದಷ್ಟು ಅಂಶ ಗೆಲ್ಲುವುದು ಆಯಾ ಪಾತ್ರಗಳಿಗೆ ಹೊಂದುವ, ಸುಲಭವಾಗಿ ಒಗ್ಗುವ ನಟನಟಿಯರನ್ನು ಆಯ್ಕೆ ಮಾಡಿದಾಗ. ಈ ಹಿನ್ನೆಲೆಯಲ್ಲಿ ನಿರ್ದೇಶಕರು ಆಯಾ ಪಾತ್ರಗಳಿಗೆ ಸೂಕ್ತ ನ್ಯಾಯ ಒದಗಿಸಬಲ್ಲವರನ್ನೇ ಆಯ್ಕೆ ಮಾಡಿದ್ದಾರೆ. ವಿಶೇಷವಾಗಿ ಗೋಪಾಲಯ್ಯ, ಶಂಕರಿ, ದೇರಣ್ಣ ಪಾತ್ರಗಳಲ್ಲಿ ಅಭಿನಯಿಸಿರುವ ಕಲಾವಿದರ ಆಂಗಿಕ ಭಾಷೆಯೂ ಆಯಾ ಪಾತ್ರಗಳಿಗೆ ಸರಿ ಹೊಂದುವಂತಿದೆ.
ಕಥಾವಸ್ತು, ಅಭಿನಯ ಎಷ್ಟು ಮುಖ್ಯವೊ ಇತರ ಅಂಶಗಳೂ ಕೂಡ ಅಷ್ಟೇ ಮುಖ್ಯ. ಇಲ್ಲದಿದ್ದರೆ ಕೊರತೆ ಎದ್ದು ಕಾಣುತ್ತದೆ. ಬೆಟ್ಟದ ಜೀವ ನಾಟಕದಲ್ಲಿ ಇಂಥ ಕೊರತೆಗಳು ಕಾಣದಂತೆ, ನಾಟಕವನ್ನು ಬಾಧಿಸದಂತೆ ನೋಡಿಕೊಂಡಿರುವುದು ಗಮನಾರ್ಹ. ರಂಗಸಜ್ಜಿಕೆ (ಹರ್ಷ ಕಾವಾ, ಮಧು ಡಿ., ಮಂಜುನಾಥ್, ಶ್ರೀಧರ್ ಎನ್.ಎಸ್.) ರಂಗಪರಿಕರ (ಹೆಚ್.ಕೆ. ವಿಶ್ವನಾಥ್), ಮೇಕಪ್ ( ಬಿ.ಎಂ. ರಾಮಚಂದ್ರ) ಬೆಳಕು ( ಕೃಷ್ಣಕುಮಾರ್ ನಾರ್ಣಕಜೆ), ಸಂಗೀತ ನಿರ್ವಹಣೆ ( ಬಿ.ಕೆ, ನರಸಿಂಹನ್) ವಸ್ತ್ರ ವಿನ್ಯಾಸ ಶೈಲೇಶ್ ಕದ್ರಿ) ಈ ಎಲ್ಲ ಕಾರ್ಯಗಳು ಅನುರೂಪ, ಅನನ್ಯ. ಇವೆಲ್ಲವೂ ರಂಗಭೂಮಿಯ ಅವಯವಗಳು. ಇದನ್ನು ಸಮನ್ವಯಗೊಳಿಸಿ, ಪ್ರಸ್ತುತಿ ಪಡಿಸಿರುವ ಕಾರ್ಯ ವಿಶೇಷ ಮೆಚ್ಚುಗೆ ಪಡೆಯುತ್ತದೆ. ಅದರಲ್ಲಿಯೂ ಆಯಾ ಸಂದರ್ಭದ ಭಾವನೆಗಳನ್ನು ಮತ್ತಷ್ಟೂ ಹೃದ್ಯಗೊಳಿಸುವ ನಿಟ್ಟಿನಲ್ಲಿ ಸಂಗೀತ ಬಳಸಿರುವ ರೀತಿ ಗಮನಾರ್ಹ.
ಭಾಷೆಯ ವಿಷಯಕ್ಕೆ ಬಂದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯ, ಬೆಳ್ಳಾರೆ, ಪುತ್ತೂರು ಈ ಭಾಗಗಳಲ್ಲಿ ಮಾತನಾಡುವ ಕನ್ನಡ ಶೈಲಿಗೂ ಬಯಲುಸೀಮೆ ಕನ್ನಡ ಶೈಲಿಗೂ ವ್ಯತ್ಯಾಸಗಳಿವೆ. ಇಡೀ ನಾಟಕದಲ್ಲಿ ಮಾನಗೌಡ (ಶೈಲೇಶ್ ಕದ್ರಿ) ಮಾತ್ರ ಸ್ಥಳೀಯ ಭಾಷೆ ತುಳು ಜೊತೆ ಕನ್ನಡ ಮಿಶ್ರಿತ ಮಾತು ಆಡುತ್ತಾರೆ. ಗೋಪಾಲಯ್ಯ ಮತ್ತವರ ಕುಟುಂಬದ ಸದಸ್ಯರೆಲ್ಲರೂ ಹವ್ಯಕರು. ಇವರ ಮಾತೃಭಾಷೆ ಹವ್ಯಕ ಕನ್ನಡ. ಇದರ ಶೈಲಿಯೇ ಬೇರೆ. ದೇರಣ್ಣ ಪಾತ್ರದ ಭಾಷೆಯೂ ತುಳು. ಆದರೆ ಇವರೆಲ್ಲ ಬಯಲುಸೀಮೆ ಶೈಲಿಯಲ್ಲಿ ಮಾತನಾಡುತ್ತಾರೆ. ನಾಟಕ ಬಯಲುಸೀಮೆಯಲ್ಲಿ ನಡೆಯುತ್ತಿರುವುದರಿಂದ ಇದು ಅನಿವಾರ್ಯವೂ ಆಗಿರಬಹುದು. ಆದರೆ ಆಯಾ ಪಾತ್ರಗಳ ಶೈಲಿಯನ್ನು ತುಸುವಾದರೂ ಮಿಶ್ರಣಗೊಳಿಸಿದರೆ ಮತ್ತಷ್ಟೂ ಮೆರುಗು ಬರಬಹುದೇನೊ ಎನಿಸುತ್ತದೆ. ಅಥವಾ ಇದರ ಬದಲು ಎಲ್ಲ ಪಾತ್ರಗಳು ನಾಟಕದ ಪ್ರಸ್ತುತಿ ದೃಷ್ಟಿಯಿಂದ ಬಯಲುಸೀಮೆ ಕನ್ನಡದಲ್ಲಿಯೇ ಮಾತನಾಡುತ್ತವೆ ಎಂದರೂ ತಪ್ಪೇನೂ ಇಲ್ಲ.


ಬಹುಕಾಲ ನೆನಪಿನಲ್ಲಿ ಉಳಿಯುವ ನಾಟಕ, ಬೆಟ್ಟದ ಜೀವ. ನಿಮ್ಮ ಊರುಗಳಲ್ಲಿ ಈ ನಾಟಕ ನಡೆದರೆ ನೋಡಿ. ಪ್ರೇಕ್ಷಕರಾದ ನಾವುಗಳು ಪ್ರೋತ್ಸಾಹಿಸಿದರೆ ಇಂಥ ಸಮರ್ಥ ರಂಗರೂಪಗಳು ಮತ್ತಷ್ಟೂ ನಮ್ಮ ಮುಂದೆ ಬರುತ್ತವೆ. ಇದು ಹವ್ಯಾಸಿ ರಂಗಭೂಮಿಯ ಎಲ್ಲ ಕಾಲಘಟ್ಟಗಳ ಸಶಕ್ತಿಕರಣಕ್ಕೂ ಸಹಾಯವಾಗುತ್ತದೆ.

Similar Posts

Leave a Reply

Your email address will not be published. Required fields are marked *