ಕಳೆದೆರಡು ದಶಕಗಳಿಂದ ರಾಜ್ಯದ ಎಲ್ಲೆಡೆ ಪರಭಾಷಾ ಚಿತ್ರಗಳು ವಿಜೃಂಭಿಸುತ್ತಿವೆ. ಇಲ್ಲೆಲ್ಲಾ ಇಷ್ಟೊಂದು ಸಂಖ್ಯೆಯಲ್ಲಿ ಪರಭಾಷಿಕರಿದ್ದಾರೆಯೇ.. ಖಂಡಿತ ಇಲ್ಲ. ಬಹುಸಂಖ್ಯಾತ ಕನ್ನಡಿಗರೆ ಈ ಸಿನಿಮಾಗಳ ವೀಕ್ಷಕರು. ಇಂಥ ಪರಿಸ್ಥಿತಿಯ ಹೊಣೆ ಹೊರಬೇಕಾಗಿರುವುದು ಡಬ್ಬಿಂಗ್ ವಿರೋಧಿಸುತ್ತಲೇ ಬಂದ ಕನ್ನಡ ಚಿತ್ರರಂಗ. ಡಬ್ಬಿಂಗ್ ಅವಕಾಶ ಇದ್ದರೆ ಕನ್ನಡಿಗ ಪರರಾಜ್ಯಗಳ ಚಲನಚಿತ್ರಗಳನ್ನು ನೋಡುತ್ತಿದ್ದರೆ ಹೊರತು ಪರಭಾಷೆಯ ಚಿತ್ರಗಳನ್ನಲ್ಲ. ಗೊಂದಲವಾಯಿತೆ… ಒಮ್ಮೆ ಈ ಲೇಖನ ಓದಿ…

 

ರಾಜ್ಯದಲ್ಲಿ ಡಬ್ಬಿಂಗ್ ನಿಷೇಧವಾಗಿ ಸುಮಾರು ನಾಲ್ಕುವರೆ ದಶಕ ಕಳೆದಿದೆ. ಇದನ್ನು ಮಾಡಿದ್ದು ಭಾರತ ಸರ್ಕಾರವೇ… ಇಲ್ಲ.. ಕರ್ನಾಟಕ ಸರ್ಕಾರವೇ ಇಲ್ಲ.. ನ್ಯಾಯಾಲಯಗಳೇ… ಇಲ್ಲ. ಅನಧಿಕೃತವಾದ ಇಂಥ ನಿಷೇಧ ಹೇರಿದ್ದು ಕನ್ನಡ ಚಿತ್ರರಂಗ. ಇದರಿಂದ ಕನ್ನಡ ಚಿತ್ರರಂಗಕ್ಕೆ ನಷ್ಟವಾಗದಿದ್ದರೂ ಕನ್ನಡಕ್ಕೆ ನಷ್ಟವಾಗಿದೆ.

ಪರಭಾಷೆ ನುಡಿಗಳನ್ನು ಕೇಳುತ್ತಾ ಬೆಳೆದವರು…

ಕರ್ನಾಟಕದ ಮೂಲೆಮೂಲೆಯಲ್ಲಿಯೂ ರಜನೀಕಾಂತ್, ಕಮಲಹಾಸನ್, ಚಿರಂಜೀವಿ, ನಾಗಾರ್ಜುನ, ಮಮ್ಮುಟ್ಟಿ, ಮೋಹನ್ ಲಾಲ್, ಅಮಿತಾಬ್, ಶಾರೂಕ್, ಸಲ್ಮಾನ್, ಅಮೀರ್ ಅಭಿಮಾನಿಗಳಿದ್ದಾರೆ. ಈ ಕಲಾವಿದರುಗಳು ನೀಡಿದ, ನೀಡುತ್ತಿರುವ ಸಿನಿಮಾಗಳನ್ನು ನೋಡುತ್ತಲೇ ಬೆಳೆದವರು ಅಸಂಖ್ಯ. ಇವರೆಲ್ಲ ಪರಭಾಷೆಗಳನ್ನು ಕೇಳುತ್ತಲೇ ಬೆಳೆದಿದ್ದಾರೆ. ಇದರಿಂದ ಇವರಲ್ಲಿ ಬಹುಸಂಖ್ಯಾತರು ಮಾತನಾಡುವಾಗ ತಾಯ್ನುಡಿಯೊಂದಿಗೆ ಹೇರಳವಾಗಿ ಪರಭಾಷೆಗಳ ಪದಗಳು, ವಾಕ್ಯಗಳು ನುಸುಳುತ್ತವೆ. ಇಂಥ ಬೆಳವಣಿಗೆಗೆ ಕಾರಣವಾಗಿದ್ದು ಡಬ್ಬಿಂಗ್ ನಿಷೇಧ ಮಾಡಿದ ಕನ್ನಡ ಚಿತ್ರರಂಗವೇ ತಾನೆ..?

ಡಬ್ಬಿಂಗ್ ಮಾಡಲು ಅವಕಾಶ ಇದ್ದರೆ…

ಕನ್ನಡದ ಸವಿ ನಿರಂತರವಾಗಿ ಕೇಳುತ್ತಿತ್ತು. ಕನ್ನಡಿಗರು ಪರಭಾಷೆಯ ಚಿತ್ರಗಳನ್ನು ಕನ್ನಡದಲ್ಲಿಯೇ ನೋಡಲು, ಕೇಳಲು, ಚಿತ್ರಗಳ ಅರ್ಥವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗುತ್ತಿತ್ತು. ನಿರಂತರವಾಗಿ ಕನ್ನಡ ಮಾತು ಕಿವಿಗೆ ಬೀಳಲು ಅವಕಾಶವಾಗುತ್ತಿತ್ತು. ಪರರಾಜ್ಯಗಳ ಚಿತ್ರಗಳನ್ನು ನೋಡಿದರು ಪರಭಾಷೆಯ ಮೋಹ ಬೆಳೆಯುತ್ತಲೇ ಇರಲಿಲ್ಲ.

ಪರಭಾಷಿಕರು ಕನ್ನಡ ಕಲಿಯಲು ಅಡ್ಡಿ…

ಕೇಬಲ್ ಬಂದ ನಂತರವೇ ಟಿವಿಯಲ್ಲಿ ಪರಭಾಷೆ ಚಿತ್ರಗಳನ್ನು ನೋಡಲು ಸಾಧ್ಯವಾಗಿದ್ದು. ಅದಕ್ಕೂ ಮೊದಲು ಸಿನಿಮಾ ಮಂದಿರಗಳಿಗೆ ಹೋಗಬೇಕಿತ್ತು. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಹಿಂದಿ, ತಮಿಳು, ತೆಲುಗು, ಮಲೆಯಾಳ ಭಾಷಿಕರಿದ್ದಾರೆ. ಆದರೆ ಆಯಾ ಭಾಷೆಯನ್ನಷ್ಟೆ ತೆಗೆದುಕೊಂಡರೆ ಇವರು ಅಲ್ಪಸಂಖ್ಯಾತರು. ಇಷ್ಟು ಕಡಿಮೆ ಜನಗಳಿಗಾಗಿ ಮೂಲಭಾಷೆಯಲ್ಲಿಯೇ ಚಿತ್ರಗಳನ್ನು ಪ್ರದರ್ಶಿಸುವ ಧೈರ್ಯವನ್ನು (ಆರ್ಥಿಕ ದೃಷ್ಟಿಯಿಂದ) ಹಂಚಿಕೆದಾರರು, ಪ್ರದರ್ಶಕರು ಮಾಡುತ್ತಿರಲಿಲ್ಲ. ಕನ್ನಡಕ್ಕೆ ಡಬ್ ಆದ ಪ್ರತಿಗಳನ್ನು ತಂದು ಪ್ರದರ್ಶಿಸುತ್ತಿದ್ದರು. ಇದರಿಂದ ಪರಭಾಷಿಕರು ಅನಿರ್ವಾಯವಾಗಿ ಕನ್ನಡಕ್ಕೆ ಡಬ್ ಆದ ಚಿತ್ರಗಳನ್ನೇ ನೋಡುತ್ತಿದ್ದರು. ಅವರ ಮಕ್ಕಳು ಕನ್ನಡದ ಸೊಗಸು, ಇಂಪನ್ನು ಹೃದಯದ ತುಂಬ ತುಂಬಿಕೊಂಡೆ ಬೆಳೆಯುತ್ತಿದ್ದರು. ತಾವು ವಾಸಿಸುವ ಪರಿಸರದಲ್ಲಿ ಸಹಜವಾಗಿ ಅಪ್ಪಟ ಕನ್ನಡ ಮಾತನಾಡುತ್ತಿದ್ದರು. ಆಗ ಇವರನ್ನು ಕನ್ನಡದಲ್ಲಿಯೇ ಮಾತನಾಡಿ, ವ್ಯವಹರಿಸಿ ಎಂದು ಹೇಳಬೇಕಿರಲಿಲ್ಲ. ಆದರಿಂದು ಇದಕ್ಕೆ ಒತ್ತಾಯ ಮಾಡಬೇಕಾದ ಸ್ಥಿತಿ ಇದೆ. ಇದಕ್ಕೆ ಕಾರಣ ಯಾರು.. ಡಬ್ಬಿಂಗ್ ನಿಷೇಧ ಮಾಡಿದ ಕನ್ನಡ ಚಿತ್ರರಂಗ.

ಭಾಷೆ ಮತ್ತಷ್ಟೂ ಅರಳುತ್ತಿತ್ತು…

ಪರಭಾಷೆಯನ್ನು ಸಮರ್ಥವಾಗಿ ಡಬ್ ಮಾಡಬೇಕಾದರೆ ದಿನನಿತ್ಯದಲ್ಲಿ ಬಳಸದ, ಆದರೆ ಅತ್ಯಂತ ಶ್ರೀಮಂತವಾಗಿರುವ ಪದಗಳನ್ನು, ನಾಣ್ಣುಡಿಗಳನ್ನು ಬಳಸಬೇಕಾದ ಸಂದರ್ಭಗಳು ಬರುತ್ತಿದ್ದವು. ಕೆಲವೊಮ್ಮೆ ಹೊಸ ಪದಗಳು ಸೃಜನೆಯಾಗುತ್ತಿದ್ದವು. ಇವೆಲ್ಲದರ ಪರಿಣಾಮ ಕನ್ನಡದ ಭಾಷಾ ಶ್ರೀಮಂತಿಕೆ ಮತ್ತಷ್ಟು, ಮಗದಷ್ಟು ಹೆಚ್ಚುತ್ತಿತ್ತು. ಇದನ್ನು ತಪ್ಪಿಸಿದವರು ಯಾರು… ಡಬ್ಬಿಂಗ್ ನಿಷೇಧಿಸಿದ ಕನ್ನಡ ಚಿತ್ರರಂಗ.

ಜ್ಞಾನ ಹೆಚ್ಚುತ್ತಿತ್ತು…

ಇಂಗ್ಲೀಷ್ ನಲ್ಲಿ ವೈಜ್ಞಾನಿಕವಾದ ಹಿನ್ನೆಲೆಯ ಅನೇಕ ಸಿನಿಮಾಗಳು ಬರುತ್ತಿವೆ. ಅಪಾರ ವೆಚ್ಚವಾಗುವ ಇಂಥ ಚಿತ್ರಗಳನ್ನು ಭಾರತೀಯ ಚಿತ್ರರಂಗದಿಂದ ನಿರೀಕ್ಷಿಸುವುದು ಕಷ್ಟ. ಇಂಥ ಸಿನಿಮಾಗಳು ಡಬ್ ಆಗುತ್ತಲೇ ಇದ್ದರೆ ಶಾಲೆಗೆ ಹೋಗಲು ಸಾಧ್ಯವಾಗದಿದ್ದವರ ಜ್ಞಾನವೂ ಹೆಚ್ಚುತ್ತಿತ್ತು. ಹಲವೊಮ್ಮೆ ಶಾಲಾ-ಕಾಲೇಜುಗಳಲ್ಲಿ ಬೋಧಿಸಿದ ವಿಜ್ಞಾನ ಅರ್ಥವಾಗದಿದ್ದರೂ ವೈಜ್ಞಾನಿಕ ಸಿನಿಮಾಗಳ ಮೂಲಕ ಬಹು ಚೆನ್ನಾಗಿ ಮನದಟ್ಟಾಗುತ್ತಿತ್ತು. ಹಳ್ಳಿಗರು ಸಹ ತಮ್ಮ ಪರಂಪರೆಯ ಜ್ಞಾನದೊಂದಿಗೆ ಹೊರಗಿನಿಂದ ಬಂದ ಜ್ಞಾನ ಶ್ರೀಮಂತಿಕೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಇಂಥ ಅಪೂರ್ವ ಅವಕಾಶ ತಪ್ಪಿಸಿದ್ದು ಯಾರು… ಇದೇ ಕನ್ನಡ ಚಿತ್ರರಂಗ.

ಮಾರುಕಟ್ಟೆ ಸಂಕುಚಿತವಾಗಲು ಕಾರಣವೇನು…

ಜಗತ್ತಿನ ಯಾವುದೇ ಭಾಷೆಯಲ್ಲಿಯೂ ಒಳ್ಳೆಯ, ಕೆಟ್ಟ ಸಿನಿಮಾಗಳು ನಿರ್ಮಾಣವಾಗುತ್ತವೆ. ಇವುಗಳ ಸಂಖ್ಯೆಯಲ್ಲಿ ಏರುಪೇರಾಗಬಹುದು ಅಷ್ಟೆ. ಕನ್ನಡ ಭಾಷೆಯಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳು ಬಂದಿವೆ. ಕನ್ನಡಕ್ಕೆ ಡಬ್ ಆದ ಪರರಾಜ್ಯಗಳ ಚಿತ್ರಗಳನ್ನು ನೋಡುವ ಅಭ್ಯಾಸ ಬೆಳೆಸಿಕೊಂಡಿರುತ್ತಿದ್ದ ರಾಜ್ಯದಲ್ಲಿ ಇರುವ ಪರಭಾಷಿಕರು ಸಹಜವಾಗಿ ಮೂಲ ಕನ್ನಡದ್ದೇ ಆದ ಉತ್ತಮ ಚಿತ್ರಗಳನ್ನೂ ನೋಡುತ್ತಿದ್ದರು. ಇಂಥವುಗಳ ಬಗ್ಗೆ ತಮ್ಮ ಮೂಲರಾಜ್ಯದಲ್ಲಿರುವ ಸಂಬಂಧಿಕರು, ಸ್ನೇಹಿತರಿಗೂ ಹೇಳುತ್ತಿದ್ದರು. ಇದರಿಂದ ಹೊರರಾಜ್ಯಗಳಲ್ಲಿಯೂ ಅಲ್ಲಿಯ ಭಾಷೆಗೆ ಡಬ್ ಆದ ಕನ್ನಡ ಚಿತ್ರಗಳು ಸಾಕಷ್ಟು ಸಂಖ್ಯೆಯಲ್ಲಿ ತೆರೆ ಕಾಣುತ್ತಿದ್ದವು. ಹೊರದೇಶಗಳಲ್ಲಿ ಇರುವ ಪರಭಾಷಿಕರು ಸಹ ಭಾರಿ ಪ್ರಶಂಸೆಗೆ ಒಳಗಾದ ಚಿತ್ರಗಳನ್ನು ತರಿಸಿಕೊಂಡು ನೋಡುತ್ತಿದ್ದರು. ಅಲ್ಲಿನ ಬೆರಳೆಣಿಕೆಯ ಥಿಯೇಟರ್ ಗಳಲ್ಲಿ ಇಲ್ಲಿನ ಚಿತ್ರಗಳು ತೆರೆ ಕಂಡರೆ ಬರುವ ಆದಾಯ ಉತ್ತಮವಾಗಿ ಇರುತ್ತಿತ್ತು. ಇವೆಲ್ಲದರ ಪರಿಣಾಮ ಕನ್ನಡದ ಸಿನಿಮಾಗಳ ಮಾರುಕಟ್ಟೆಯೂ ವಿಸ್ತರಣೆ ಆಗುತ್ತಿತ್ತು. ಇವೆಲ್ಲ ಸಾಧ್ಯತೆಯನ್ನು ನಿರಾಕರಿಸಿದ್ದು ಯಾರು… ಡಬ್ಬಿಂಗ್ ನಿಷೇಧ ಮಾಡಿದ ಕನ್ನಡ ಚಿತ್ರರಂಗದವರು ತಾನೆ..?

ಕೌಶಲ್ಯಯುಕ್ತ ಪಡೆ…

ಡಬ್ಬಿಂಗ್ ಚಿತ್ರಗಳಲ್ಲಿಯೂ ಉತ್ತಮವಾಗಿ ಡಬ್ ಆದ, ಕೆಟ್ಟದಾಗಿ ಡಬ್ ಆಗಿರುವ ಎಂಬ ಎರಡು ವಿಧಗಳಿರುತ್ತವೆ. ಚಿತ್ರಕಥೆಯ ಪಾತ್ರ ಕೇಳುವಂಥ ಧ್ವನಿ ಬೇಕಾಗುತ್ತದೆ. ಇದಕ್ಕಾಗಿ ಭಾರಿ ಸಂಖ್ಯೆಯಲ್ಲಿ ಉತ್ತಮ ಕಂಠದಾನ ಕಲಾವಿದರು, ಜೊತೆಗೆ ತಂತ್ರಜ್ಞರು ಅಗತ್ಯ. ಡಬ್ಬಿಂಗ್ ನಿರಂತರವಾಗಿ ಇದ್ದಾಗ ಈ ನಿಟ್ಟಿನಲ್ಲಿ ಒಳ್ಳೆಯ ಪಡೆ ರಚಿತವಾಗುತ್ತದೆ. ಸಾಕಷ್ಟು ಮಂದಿಗೆ ಉದ್ಯೋಗವೂ ದೊರೆಯುತ್ತದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇಂಥ ಸಕಾರಾತ್ಮಕ ಬೆಳವಣಿಗೆ ಆಗಿಲ್ಲ. ಇದಕ್ಕೆ ಕನ್ನಡ ಚಿತ್ರರಂಗದ ಡಬ್ಬಿಂಗ್ ವಿರೋಧಿ ನೀತಿಯೇ ಕಾರಣ ತಾನೇ… ?

ಸ್ಪರ್ಧಾತ್ಮಕತೆ ಹೆಚ್ಚುತ್ತದೆ…

ಡಬ್ಬಿಂಗ್ ಇದ್ದರೆ ಪೈಪೋಟಿ ಹೆಚ್ಚುತ್ತದೆ. ಸೃಜನಾತ್ಮಕವಾಗಿ ಯೋಚಿಸುವ ನಿರ್ಮಾಪಕರು, ನಿರ್ದೇಶಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಹೊಸ ಹೊಸ ಪ್ರಯೋಗಗಳನ್ನು ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಕಲಾವಿದರಿಗೆ ಸವಾಲು ಎನಿಸುವಂಥ ಪಾತ್ರಗಳೂ ಹೆಚ್ಚೆಚ್ಚು ಪ್ರಮಾಣದಲ್ಲಿ ಸೃಷ್ಟಿಯಾಗುತ್ತವೆ. ಗುಣಾತ್ಮಕ ಚಿತ್ರಗಳ ಸಂಖ್ಯೆಯೂ ಏರಿಕೆಯಾಗುತ್ತದೆ. ಆದರೆ ಪೈಪೋಟಿಯನ್ನೆ ನಿರಾಕರಿಸಿರುವ ಕನ್ನಡ ಚಿತ್ರರಂಗ ಇವೆಲ್ಲದರಿಂದ ವಂಚಿತವಾಗಿದೆ. ಇದು ಡಬ್ಬಿಂಗ್ ವಿರೋಧಿ ನೀತಿಯಿಂದಲೇ ತಾನೇ ಆಗಿರುವುದು… ?

ಸರಳವಾಗಿ ಮುಟ್ಟುವ ಮಾಧ್ಯಮ…

ಸಿನಿಮಾ ಸರಳವಾಗಿ, ನೇರವಾಗಿ ಜನರನ್ನು ತಲುಪುತ್ತದೆ. ಮಾತೃಭಾಷೆಯಲ್ಲಿಯೇ ಇದ್ದರೆ ವಿಷಯ ಮತ್ತಷ್ಟು ಆಳವಾಗಿ ಅರಿವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು (ಚರಿತ್ರೆ, ವಿಜ್ಞಾನ ವಿಷಯಗಳಾಧಾರಿತ ಸಿನಿಮಾಗಳು) ಚೆನ್ನಾಗಿ ಎದುರಿಸುವುದು ಸಾಧ್ಯವಾಗುತ್ತದೆ. ಇಂಥ ಸಾಧ್ಯತೆಗಳನ್ನು ತಡೆಗಟ್ಟಿದ್ದು ಯಾರು.. ಇದೇ ಕನ್ನಡ ಚಿತ್ರರಂಗ. ಇಂಥ ನಷ್ಟಗಳ ಪಟ್ಟಿ ಮತ್ತಷ್ಟು ದೊಡ್ಡದು. ಈಗ ಹೇಳಿ.. ಡಬ್ಬಿಂಗ್ ನಿಷೇಧದಿಂದ ಕನ್ನಡಕ್ಕೆ, ಕನ್ನಡಿಗರಿಗೆ ಆಗಿರುವುದು ನಷ್ಟವೋ ಅಥವಾ ಲಾಭವೋ ಎಂದು…?

Similar Posts

Leave a Reply

Your email address will not be published. Required fields are marked *