Site icon ಕುಮಾರರೈತ

ದುಬಾರಿ ಬೈಕು ಈಗ ಕೈಗೆಟಕುವ ಬೆಲೆಯಲ್ಲಿ !

ಹಾರ್ಲೇ ಡೇವಿಡ್ ಸನ್, ಅಮೆರಿಕಾ ಮೂಲದ ದೈತ್ಯ ಬೈಕ್. ಮೂಲ ಕಂಪನಿ ಹೆಸರೂ ಇದೆ. ಬಹುತೇಕ ಬೈಕರ್ಸ್ ಬಯಕೆ ; ಈ ಬೈಕ್ ಅನ್ನು ರೈಡ್ ಮಾಡಬೇಕೆಂಬುದೇ ಆಗಿದೆ. ತಯಾರಿಕಾ ನೈಪುಣ್ಯತೆ, ವೇಗ, ಸಮತೋಲನ ಇದರ ಆಕರ್ಷಣೆ. ಇದೀಗ ಭಾರತದಲ್ಲಿ ಲಭ್ಯವಾಗಲು ದಿನಗಣನೆ ಆರಂಭ !

ಹಿಂದೆಯೂ ಈ ಕಂಪನಿ ದೈತ್ಯ ಬೈಕ್ ಗಳು ಭಾರತದಲ್ಲಿ ಲಭ್ಯವಿದ್ದವು. 975 ಸಿಸಿ ನೈಟ್ ಸ್ಟರ್ ಬೈಕಿಗೆ ಇಲ್ಲಿ ರೂ. 17. 49 ಲಕ್ಷದ ಆರಂಭಿಕ ಡೀಲರ್ ಶಿಪ್ ಬೆಲೆ ಇದೆ. ಆದರೆ ಇಲ್ಲಿ 500 ಸಿಸಿ ಬೈಕ್ ಗಳಿಗಿಂತ ಹೆಚ್ಚಿನ ಸಿಸಿ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ಜೊತೆಗೆ ವಿದೇಶದಿಂದ ತರುವ ಬೈಕ್ ಗಳಿಗೆ ಆಮದು ಸುಂಕವೂ ದುಬಾರಿ. ಇದರಿಂದ ಎಲ್ಲರಿಗೂ ಹಾರ್ಲೇ ಡೇವಿಡ್ ಸನ್ ಬೈಕ್ ಗಳು ಎಟುಕುತ್ತಿರಲಿಲ್ಲ. ಕೊರೊನಾ ಸಂದರ್ಭದಲ್ಲಿ ಈ ಬೈಕ್ ತಯಾರಿಕಾ ಸಂಸ್ಥೆ ಇಲ್ಲಿ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಈಗ ಹೀರೋ ಮೋಟೋಕಾರ್ಪ್ ಸಹಯೋಗದಲ್ಲಿ ಹಾರ್ಲೇ ಡೇವಿಡ್ ಸನ್ ತನ್ನ ಕಾರ್ಯಾಚರಣೆ ಆರಂಭಿಸಿದೆ. ಈ ಬೈಕ್ ಗಳೀಗ ವಿದೇಶದಿಂದ ಆಮದಾಗುವುದಿಲ್ಲ. ಬದಲಾಗಿ ಇಲ್ಲಿಯೇ ತಯಾರಾಗುತ್ತವೆ. ಹೀರೋ ಮೋಟೋಕಾರ್ಪ್ ಮಾಲಿಕತ್ವದ ನೀಮ್ರಾನಾ ಘಟಕದಲ್ಲಿ ಜಂಟಿ ಕಂಪನಿಯ ಒಂಟಿ ಬೈಕ್ ತಯಾರಾಗುತ್ತದೆ !

ರಾಯಲ್ ಎನ್ ಫೀಲ್ಡಿಗೆ ದೊಡ್ಡ ಸವಾಲು
ಭಾರತದಲ್ಲಿ ಮಾರಾಟವಾಗುವ 350 ಸಿಸಿ ಯಿಂದ 500 ಸಿಸಿ ಬೈಕ್ ಗಳಲ್ಲಿ ಶೇಕಡ 70 ರಷ್ಟು ರಾಯಲ್ ಎನ್ ಫೀಲ್ಡ್ ಕಂಪನಿಗಳದ್ದೇ ಆಗಿವೆ. ಈ ಕಂಪನಿಯನ್ನು ಸರಿಟಗಟ್ಟಲು ಇನ್ನೂ ಯಾವುದೇ ಕಂಪನಿಗಳಿಂದಲೂ ಸಾಧ್ಯವಾಗಿಲ್ಲ. ಆದ್ದರಿಂದಲೇ ಇತರ ಕೆಲವು ಕಂಪನಿಗಳು 350 ಸಿಸಿ ಯಿಂದ 500 ಸಿಸಿ ಬೈಕ್ ಮಾರುಕಟ್ಟೆಯನ್ನು ದೊಡ್ಡದಾಗಿ ಆಕ್ರಮಿಸಿಕೊಳ್ಳಲು ಸತತವಾಗಿ ಯತ್ನಿಸುತ್ತಿವೆ.

ಈ ಹಿನ್ನೆಲೆಯಲ್ಲಿಯೇ ಹಾರ್ಲೇ ಡೇವಿಡ್ ಸನ್ ಮತ್ತು ಹೀರೋ ಮೋಟೋಕಾರ್ಪ್ 400 ಸಿಸಿ ಬೈಕ್ ಅನ್ನು ಇಲ್ಲಿನ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇಲ್ಲಿ ಗಮನಿಸಬೇಕಾದ್ದು ಮಾರುಕಟ್ಟೆಯಲ್ಲಿ ಎಕ್ಸ್ ಶೋ ರೂಮಿನಲ್ಲಿ ಇರುವ 350 ಸಿಸಿ ಬೈಕ್ ಬೆಲೆಗಿಂತಲೂ ಹಾರ್ಲೇ ಡೇವಿಡ್ ಸನ್ X440 ಬೆಲೆ ಕಡಿಮೆ ಇದೆ. ಇದರಲ್ಲಿಯೂ ಮೂರು ವೈವಿಧ್ಯ ಶ್ರೇಣಿಯನ್ನು ಪರಿಚಯಿಸುತ್ತಿವೆ.

ವರ್ಷದಿಂದ ವರ್ಷಕ್ಕೆ 350 ಸಿಸಿ ಯಿಂದ 500 ಸಿಸಿ ಬೈಕ್ ಗಳ ಮಾರಾಟ ಹೆಚ್ಚುತ್ತಿದೆ. ಭಾರತೀಯ ಯುವಜನತೆಯಲ್ಲಿ ಹೆಚ್ಚುತ್ತಿರುವ ಬೈಕ್ ಪ್ರವಾಸದ ಹವ್ಯಾಸವೂ ಇದಕ್ಕೆ ಕಾರಣ. ಜೊತೆಗೆ ಕಡಿಮೆ ಡೌನ್ ಪೇಮೆಂಟ್, ಸುಲಭ ಕಂತುಗಳ ಪಾವತಿಯೂ ಮತ್ತೊಂದು ಆಕರ್ಷಣೆ. ಬಹುತೇಕ ಬ್ಯಾಂಕ್ ಗಳು ಬೈಕ್ ಖರೀದಿಗೆ ಸಾಲ ಕೊಡುತ್ತಿವೆ. ಈ ಎಲ್ಲ ಕಾರಣಗಳಿಂದ 350 ಸಿಸಿ ಯಿಂದ 500 ಸಿಸಿ ಬೈಕ್ ಗಳ ಮಾರಾಟ 2024ರ ಆರ್ಥಿಕ ವರ್ಷದಲ್ಲಿ ಶೇಕಡ 15 ರಷ್ಟು ಹೆಚ್ಚಳ ಕಾಣುತ್ತದೆ ಎಂದು ಅಂದಾಜಿಸಲಾಗಿದೆ.

ಹಾರ್ಲೇ ಡೇವಿಡ್ ಸನ್ X440 ಅತ್ಯಾಧುನಿಕ ವೈಶಿಷ್ಟತೆಗಳನ್ನು ಉಳ್ಳ ಬೈಕ್ ಎಂದು ವರ್ಣಿಸಲಾಗಿದೆ. ಮೂರು ಶ‍್ರೇಣಿಗಳಾದ ಕ್ಲಾಸಿಕ್, ವಿವಿಡ್ ಮತ್ತು ಪಿನಾಕಲ್ ಹೆಚ್ಚು ವ್ಯತ್ಯಾಸವಿಲ್ಲದ ಬೆಲೆ ಹೊಂದಿವೆ. ಕ್ಲಾಸಿಕ್ ಶ್ರೇಣಿ ಬೈಕ್, ಸ್ಪೋಕ್ ವ್ಹೀಲ್ ಗಳು, ಸಿಂಗಲ್ ಟೋನ್ ಬಣ್ಣ, ಬ್ಲ್ಯಾಕ್ ಔಟ್ ಎಂಜಿನ್ ಫಿನ್ ಹೊಂದಿವೆ. ಇದರ ಎಕ್ಸ್ ಶೋ ರೂಂ ಬೆಲೆ ರೂ. 2.29 ಲಕ್ಷ. ವಿವಿಡ್ ಶ‍್ರೇಣಿಯ ಬೈಕ್ ಗಳು ಮಿಶ್ರ ಲೋಹದ ಚಕ್ರಗಳು, ಡ್ಯೂಯಲ್ ಟೋನ್ ವರ್ಣ ಹೊಂದಿವೆ. ಇದರ ಬೆಲೆ ರೂ. 2.49 ಲಕ್ಷ. ಪಿನಾಕಲ್ ಶ್ರೇಣಿ ಮಿಶ್ರ ಲೋಹಗಳು, ಅಧಿಕ ಆಕರ್ಷಕ ಬಣ್ಣದ ಸಂಯೋಜನೆ ಹೊಂದಿದೆ. ಈ ಬೈಕಿನ ಬೆಲೆ ರೂ. 2.69 ಲಕ್ಷ

ಇವೆಲ್ಲದರ ಜೊತೆಗೆ ಹಾರ್ಲೇ ಡೇವಿಡ್ ಸನ್ X440 ನಿಯೋ-ರೆಟ್ರೊ ಸ್ಟೈಲಿಂಗ್, ಬ್ಲೂಟೂತ್ ಸಂಪರ್ಕ, ಕನಿಷ್ಠ ಮೊನೊಪಾಡ್ TFT ತಿರುವು, ಮ್ಯೂಸಿಕ್ ಕಂಟ್ರೋಲ್, ಎರಡು ವಾಲ್ವ್, ಆಯಿಲ್ ಕೂಲರ್ ಜೊತೆಗೆ ಏರ್ ಕೋಲ್ಡ್ ಎಂಜಿನ್ ಹೊಂದಿರುವುದು ಗಮನಾರ್ಹ. ಇದು 18-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ MRF ಜಾಪರ್ ಹೈಕ್ ಟೈರ್ಗಳನ್ನು ಹೊಂದಿದೆ. ಬೈಬ್ರೆ ಡಿಸ್ಕ್ ಬ್ರೇಕ್ಗಳು ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದೆ.

ಇವೆಲ್ಲದರಿಂದ ದೂರದ ಸ್ಥಳಗಳಿಗೆ ಬೈಕ್ ನಲ್ಲಿ ಆರಾಮದಾಯಕ ಪ್ರವಾಸ ಹೋಗಲು ಇಚ್ಛಿಸುವ ಯುವಜನತೆಗೆ, ಮಧ್ಯ ವಯಸ್ಕರಿಗೆ X440 ಹಾರ್ಲೇ ಹೆಚ್ಚು ಪ್ರಿಯವಾಗುತ್ತದೆ ಎಂದು ಆಶಿಸಲಾಗಿದೆ.

Exit mobile version