ಪಂಜಾಬ್ ರಾಜ್ಯದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣ ಕುರಿತಂತೆ ಕ್ರಾಂತಿಕಾರಕ ತೀರ್ಮಾನ ಕೈಗೊಂಡಿದೆ. ನರ್ಸರಿ ಹಂತದಿಂದ ಪಿ.ಎಚ್​ಡಿ ಹಂತದವರೆಗೂ ಅವರಿಗೆ ಉಚಿತವಾಗಿ ಶಿಕ್ಷಣ ಸೌಲಭ್ಯ ನೀಡಲಿದೆ. ರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣುಮಕ್ಕಳಿಗೆ ಶಿಕ್ಷಣ ಗಗನ ಕುಸುಮವೇ ಆಗಿದೆ. ಗಂಡು ಮತ್ತು ಹೆಣ್ಣುಮಕ್ಕಳ ನಡುವೆ ಪೋಷಣೆ, ವಿದ್ಯಾಭ್ಯಾಸದ ವಿಷಯದಲ್ಲಿ ತಾರತಮ್ಯ ಮಾಡುವಂಥ ಪೋಷಕರೂ ಇದ್ದಾರೆ. ಹೆಣ್ಣುಮಕ್ಕಳಿಗೇಕೆ ಓದು ಎಂದು ತಾತ್ಸಾರವಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದರಿಂದ ಇಂಥ ಪ್ರದೇಶಗಳಲ್ಲಿ ಸ್ತ್ರೀ ಸಮಾನತೆ ಎನ್ನುವುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಶಿಕ್ಷಣ ಎನ್ನುವುದು ಬಹುದೊಡ್ಡ ಅಸ್ತ್ರ. ಅವರ ಸಬಲತೆಗೂ ಇದು ಸಹಾಯಕ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಹೆಣ್ಣುಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಯೋಜನೆಗಳನ್ನು ಇಲ್ಲಿನ ಸರ್ಕಾರ ರೂಪಿಸಿದೆ. ಪ್ರಸ್ತುತ ಪಂಜಾಬ್ ಸರ್ಕಾರ ಈ ನಿಟ್ಟಿನಲ್ಲಿ ಬಹುದೊಡ್ಡ ಹೆಜ್ಜೆ ಇರಿಸಿದೆ.

ನರ್ಸರಿಯಿಂದ ಪಿ.ಎಚ್.ಡಿ. ಹಂತದವರೆಗೂ ಉಚಿತವಾಗಿ ಶಿಕ್ಷಣ ಪೂರೈಸುವುದು ಸಾಧಾರಣ ಸಂಗತಿಯಲ್ಲ. ಪದವಿಪೂರ್ವ, ಪದವಿ, ಸ್ನಾತಕೋತ್ತರ, ಸಂಶೋಧನೆ ಹಂತಗಳಲ್ಲಿ ಬೇರೆಬೇರೆ ಶಿಕ್ಷಣ ವಿಷಯಗಳಿರುತ್ತವೆ. ಹಲವು ಶಿಕ್ಷಣ ವಿಷಯಗಳು ದುಬಾರಿಯಾಗಿಯೂ ಇರುತ್ತವೆ. ಈ ಎಲ್ಲ ಹಂತಗಳಲ್ಲಿ ಏನೇ ಖರ್ಚು ಬಂದರೂ ಸ್ತ್ರೀ ಸಬಲೀಕರಣ ದೃಷ್ಟಿಯಿಂದ ಪಂಜಾಬ್ ಸರ್ಕಾರವೇ ಅದನ್ನು ಭರಿಸಲಿದೆ.

ಪಂಜಾಬ್ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಈ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸರ್ಕಾರವೇ ಉಚಿತವಾಗಿ ಪಠ್ಯಪುಸ್ತಕಗಳನ್ನು ನೀಡುತ್ತದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಪಂಜಾಬ್ ರಾಜ್ಯದ 13 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಎಲ್ಲ ಸರ್ಕಾರಿ ಕಾಲೇಜುಗಳಲ್ಲಿ ಈ ವರ್ಷದಿಂದಲೇ ಉಚಿತ ವೈಫೈ ಸೌಲಭ್ಯವನ್ನು ನೀಡಲಾಗುವುದು ಎಂದವರು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಭಾಷೆಯನ್ನು ಕಲಿಸಲಾಗುವುದು. ಮುಂದಿನ ತಿಂಗಳಿನಿಂದಲೇ ಇದಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಗುವುದು. ಇದೇ ಶೈಕ್ಷಣೀಕ ವರ್ಷದಿಂದ ನೂತನ ಸರ್ಕಾರಿ ಕಾಲೇಜುಗಳನ್ನು ಆರಂಭಿಸಲಾಗುವುದು  ಎಂದು ತಿಳಿಸಿದರು. ಪಂಜಾಬ್ ಸರ್ಕಾರ ಆರ್ಥಿಕ ದುಸ್ಥಿತಿ ಎದುರಿಸುತ್ತಿದೆ ಎಂಬ ಮಾತಿನ ನಡುವೆ ಪ್ರಕಟಿಸಿರುವ ಈ ಎಲ್ಲ ತೀರ್ಮಾನಗಳು ಭಾರಿ ಪ್ರಶಂಸೆಗೆ ಪಾತ್ರವಾಗಿವೆ.

ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ಮಹಿಳಾ ಮೀಸಲಾತಿ ಶೇಕಡ 33 ರಷ್ಟು ಇದೆ. ಆದರೆ ಪಂಜಾಬ್ ಸರ್ಕಾರ ಈ ವಿಷಯದಲ್ಲಿಯೂ ಕ್ರಾಂತಿಕಾರಕ ತೀರ್ಮಾನ ಕೈಗೊಂಡಿದೆ. ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರಾಡಳಿತದಡಿ ಬರುವ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಶೇಕಡ 33 ರಿಂದ ಶೇಕಡ 50ಕ್ಕೆ ಈಗಾಗಲೇ ಹೆಚ್ಚಿಸಲಾಗಿದೆ.

Similar Posts

Leave a Reply

Your email address will not be published. Required fields are marked *