Site icon ಕುಮಾರರೈತ

ಜನಾರ್ದನ ರೆಡ್ಡಿ, ಶ್ರೀಕೃಷ್ಣದೇವರಾಯರ ಪುನರ್ಜನ್ಮವೆ….?

ರಾಜ್ಯದ ಹಲವೆಡೆ ಬರದ ಛಾಯೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ಹಂಪಿ ಉತ್ಸವ ರದ್ದುಪಡಿಸಿತ್ತು. ಆದರೆ ಇದನ್ನು ನಿಲ್ಲಿಸಬಾರದೆಂದು ಒತ್ತಾಯ ಬಂದ ಹಿನ್ನೆಲೆಯಲ್ಲಿ ಒಂದು ದಿನವಷ್ಟೆ ನಡೆಸಲು ತೀರ್ಮಾನಿಸಿತು. ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ “ಮೂರುದಿನ ಹಂಪಿ ಉತ್ಸವ ನಡೆಯಲೇಬೇಕು. ಸರ್ಕಾರದ ಬಳಿ ದುಡ್ಡಿಲ್ಲದಿದ್ದರೆ ನಾನೇ ಕೊಡುತ್ತೇನೆ” ಎಂದು ಗುಡುಗಿದ್ದಾರೆ. ಏಕೆ ಇವರಿಗೆ ಉತ್ಸವ ಮೂರುದಿನ ನಡೆಯಬೇಕು ಎಂಬ ಪ್ರಶ್ನೆ ನಿಮಗೆ ಎದುರಾಗಿರಬಹುದು. ಈ ಹಿನ್ನೆಲೆಯಲ್ಲಿ 8 ವರ್ಷದ ಹಿಂದೆ ಬರೆದಿದ್ದ ಲೇಖನವನ್ನು ಮರುಪೋಸ್ಟ್ ಮಾಡುತ್ತಿದ್ದೇನೆ … 
ಶೀರ್ಷಿಕೆ ನೋಡಿ ಇದೇನಪ್ಪ ವಿಚಿತ್ರ ಎಂದುಕೊಳ್ಳುತ್ತೀರಿ. ಎಲ್ಲಿಯ ಗಾಲಿ ಜನಾರ್ದನ ರೆಡ್ಡಿ-ಎಲ್ಲಿಯ ವಿಜಯನಗರದ ಶ್ರೀಕೃಷ್ದೇವರಾಯ, ಎಲ್ಲಿಂದ ಎಲ್ಲಿಗೋ ಸಂಬಂಧ ಕಲ್ಪಿಸುತ್ತಿದ್ದಾನೆ ಎಂದುಕೊಳ್ಳುವಿರಿ ಎಂಬ ಅರಿವು ನನಗಿದೆ. ಖಂಡಿತ ಇದು ನನ್ನ ಕಲ್ಪನೆಯಲ್ಲ. ಮತ್ಯಾರದು ಎಂದು ಮರು ಪ್ರಶ್ನೆ ಹಾಕುತ್ತೀರಿ…! ಇದಕ್ಕೆ ಉತ್ತರ ನಿಮ್ಮ ಮುಂದಿದೆ….

ಸಿ.ಬಿ.ಐ. ಅಧಿಕಾರಿಗಳು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ ಭಾರಿ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿದರು. ಚಿನ್ನದ ಸಿಂಹಾಸನ, ಬೆಲ್ಟು, ಪೆನ್ನುಗಳು, ಚಿನ್ನದ ಅಂಗಿ, ತಟ್ಟೆಗಳು-ಚಮಚಗಳು, ಸಂಪೂರ್ಣ ಚಿನ್ನದಿಂದಲೇ ಮಾಡಿದ ತಿರುಪತಿ ತಿಮ್ಮಪ್ಪ-ಲಕ್ಷ್ಮಿ-ಪದ್ಮಾವತಿಯರ ವಿಗ್ರಹಗಳು, ಪೂಜಾ ಸಾಮಗ್ರಿಗಳು, ಅಸಂಖ್ಯಾತ ಅಭರಣಗಳು-ವಜ್ರ-ವೈಢೂರ್ಯಗಳು. ಅಬ್ಬಾ ಎನಿಸುವಂಥ ವಿವರಗಳು. ಆದರೆ ನೆನಪಿಡಿ. ಈ ಅದಿರು ವ್ಯಾಪಾರಿ ಕಟ್ಟಿದ ಸಂಪತ್ತಿನ ಸಾಮ್ರಾಜ್ಯದಲ್ಲಿ ಇದು ಅತ್ಯಲ್ಪ. ‘ತಾನು 50.000 ಕೋಟಿ ರುಪಾಯಿ ಗಳಿಸಿದ್ದೇನೆ’ ಬೆಳಗಾವಿ ವಿಧಾನ ಸಭಾ ಅಧಿವೇಶನದ ಸಂದರ್ಭದಲ್ಲಿ ರೆಡ್ಡಿ ಮಾತಿದು ! ಮುಖ್ಯವಾಗಿ ಇಲ್ಲಿ ಗಮನ ಸೆಳೆಯುವುದು ಚಿನ್ನದ ಸಿಂಹಾಸನ-ಬೆಲ್ಟು-ಅಂಗಿ. ಎಷ್ಟೆ ಹಣವಿದ್ದರೂ ಇಂಥ ಖಯಾಲಿ ಇರುವುದೇ ಎನಿಸದಿರದು. ಯಾಕೀಗೆ ಎನ್ನವುದಕ್ಕೂ ಉತ್ತರಗಳಿವೆ.

ಬಳ್ಳಾರಿಯಲ್ಲಿದ್ದಾಗ ನಾನು ಗಮನಿಸಿದ ಅಂಶಗಳಲ್ಲಿ ಅಂದಿನ ಸಚಿವ ಜಿ. ಜನಾರ್ದನ ರೆಡ್ಡಿ ಸುತ್ತಲೂ ಇದ್ದವರು ಅವರನ್ನು ಹೊಗಳುತ್ತಿದ್ದ ಪರಿ. ಇವುಗಳಲ್ಲಿ ಅಭಿನವ ಶ್ರೀಕೃಷ್ಣದೇವರಾಯ, ಶ್ರೀಕೃಷ್ಣದೇವರಾಯರ ಅಪರವತಾರ ಎನ್ನುವುದೆಲ್ಲ ಆಶ್ಚರ್ಯ ಉಂಟು ಮಾಡಿತ್ತು. ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರ ಪದಗ್ರಹಣ ಸಮಾರಂಭ. ಅಂದು ಮಾತನಾಡಿದ ಜಿಲ್ಲೆಯ ಶಾಸಕರೊಬ್ಬರು ಜನಾರ್ದನ ರೆಡ್ಡಿ ಅವರು ಶ್ರೀಕೃಷ್ಣದೇವರಾಯರ ಪುನರ್ಜನ್ಮ ಎಂದರು. ಇದನ್ನು ಕೇಳಿದಾಗ ಹೊಗಳಿಕೆಗೂ ಒಂದು ಇತಿಮಿತಿ ಬೇಡವೇ ಎನಿಸಿತು. ಯಾಕಿಂಥ ಮಾತುಗಳನ್ನು ಪದೇಪದೇ ಹೇಳಲಾಗುತ್ತಿದೆ. ಇದರ ಹಿನ್ನೆಲೆ ಎನಿರಬಹುದು ಎಂಬ ಕುತೂಹಲವೂ ಮೂಡಿತು

ಜನ್ಮಾಂತರ ರಹಸ್ಯ:
ಈ ಕುರಿತ ಮಾಹಿತಿ ಕೆದಕತೊಡಗಿದೆ. ಆಗ ತಿಳಿದುಬಂದ ವಿವರ ತುಂಬ ಕುತೂಹಲಕಾರಿಯಾಗಿತ್ತು. ‘ಆಂಧ್ರದ ಜ್ಯೋತಿಷಿಯೊಬ್ಬರು ಜನಾರ್ದನ ರೆಡ್ಡಿ ಅವರ ಜನ್ಮಾಂತರ ರಹಸ್ಯ ಹೇಳಿದ್ದಾರೆ. ಇದರ ಜೊತೆಗೆ ಭವಿಷ್ಯವನ್ನು ತಿಳಿಸಿದ್ದಾರಂತೆ’. ‘ನೀವು ವಿಜಯನಗರದ ಪ್ರಬಲ ದೊರೆ ಶ್ರೀಕೃಷ್ಣದೇವರಾಯರ ಅಂಶ. ಈ ಜನ್ಮದಲ್ಲಿಯೂ ರಾಜ್ಯದ ಅಧಿಪತಿಯಾಗುವ ಯೋಗವಿದೆ. ಇದು ಕರ್ನಾಟಕದಲ್ಲಿಯಾದರೂ ಆಗಬಹುದು ಅಥವಾ ಆಂಧ್ರದಲ್ಲಿಯಾದರೂ ಆಗಬಹುದು. ಇಂಥ ಯೋಗಾಯೋಗ ಇರುವುದು ನಿಮಗೊಬ್ಬರಿಗೆ ಮಾತ್ರ’ ಇದು ಜ್ಯೋತಿಷಿ ಹೇಳಿದ ಮಾತಂತೆ. ವಿಶೇಷ ಪೂಜೆ-ಪುನಸ್ಕಾರಗಳನ್ನು ಮಾಡಲು ಸೂಚಿಸಿದರಂತೆ. ಎಂಬ ಮಾಹಿತಿ ದೊರಕಿತು. ಈ ಮಾತಿನ ಬೆಳಕಿನ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ವರ್ತನೆ ಹಿಂದಿರುವ ಆಲೋಚನಾ ಧಾಟಿಯೂ ನಿಚ್ಚಳವಾಗತೊಡಗಿತು…!

ಆಂಧ್ರ ಹಿನ್ನೆಲೆ:
ಚೆಂಗಾರೆಡ್ಡಿ ಮತ್ತಿವರ ಪತ್ನಿ ರುಕ್ಮಿಣಿ ಅವರು ಆಂಧ್ರದ ಶ್ರೀಕಾಳಹಸ್ತಿ ಸಮೀಪದ ಹಳ್ಳಿಯೊಂದರಿಂದ ವಲಸೆ ಬಂದವರು. ಅಂದಿನ ಬಳ್ಳಾರಿ ಪಟ್ಟಣದಲ್ಲಿ ಚೆಂಗಾರೆಡ್ಡಿ ಪೊಲೀಸ್ ಕಾನ್ ಸ್ಟೇಬಲ್ ಆಗಿದ್ದವರು. ಇವರ ಕಿರಿಯ ಮಗ ಜನಾರ್ದನ ರೆಡ್ಡಿ. 1999ರ ಬಳ್ಳಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು ಮತ್ತು 2004ರಲ್ಲಿ ಅದಿರಿಗೆ ದೊರೆತ ತಾರಕ ಬೆಲೆ ಇವರನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಮೇಲೇಳುವಂತೆ ಮಾಡಿತು. ಇವರ ಕೌಟುಂಬಿಕ ಮತ್ತು ವ್ಯವಹಾರಿಕ ಸಂಬಂಧಗಳು ಚಾಚಿಕೊಂಡಿರುವುದು ಕೂಡ ಆಂಧ್ರದಲ್ಲಿಯೆ.ಭಾಷಾಬಳಕೆ ವಿಚಾರದಲ್ಲಿ ಹೇಳುವುದಾದರೆ ಪತ್ರಿಕಾಗೋಷ್ಠಿ ಸಂದರ್ಭಗಳಲ್ಲಿ ಕೆಲ ನಿಮಿಷ ಅಷ್ಟೆ ಕನ್ನಡ ಕೇಳುತ್ತದೆ. ಉಳಿದಂತೆ ಎಲ್ಲವೂ ತೆಲುಗುಮಯ !

ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ಹೆಸರು:
ಇದು ಜನಾರ್ದನ ರೆಡ್ಡಿ ಅವರ ಆಕಾಂಕ್ಷೆ. ಇವರು ಇಚ್ಛೆಪಟ್ಟ ವಿಷಯಕ್ಕೆ ಅನುಮತಿ ನಿರಾಕರಿಸುವ ಸ್ಥಿತಿಯಲ್ಲಿ ಸಚಿವ ಸಂಪುಟ ಇರಲಿಲ್ಲ. ಹಂಪಿ ರಥಬೀದಿಯಲ್ಲಿ ಭವ್ಯವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ 2008 ಸಾಲಿನ ಪ್ರವಾಸೋದ್ಯಮ ದಿನಾಚರಣೆ ಆಯೋಜಿತವಾಗಿತ್ತು. ಅಂದಿನ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮುಖ್ಯ ಅತಿಥಿ. ಇವರು ಮಾತನಾಡುತ್ತಾ ‘ಪ್ರವಾಸೋದ್ಯಮ ಮತ್ತು ಬಳ್ಳಾರಿ ಉಸ್ತುವಾರಿ ಸಚಿವರು ಆಗಿರುವ ಜನಾರ್ದನ ರೆಡ್ಡಿ ಅವರು ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ಹೆಸರಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರಕಾರದ ಮಟ್ಟದಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭೀಷೇಕ ಮಹೋತ್ಸವ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟಿಸಲಾಗುವುದು’ ಎಂದರು. ನನಗೆ ಆ ಕ್ಷಣ ಅನಿಸಿದ್ದು ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯರ ಹೆಸರನ್ನಿಡುವ ಅಗತ್ಯವೇನಿದೆ ಎಂದು. ಅಂದು ರಾತ್ರಿ ಬಳ್ಳಾರಿ ಕಛೇರಿಗೆ ವಾಪ್ಪಸಾದ ತಕ್ಷಣ ಮಾಡಿದ ಕೆಲಸವೇನೆಂದರೆ ಲಿಂಬಾವಳಿ ಅವರ ಹೇಳಿಕೆ ಇದ್ದ ಭಾಗ ಸೇರಿಸಿ ಈ ಹೆಸರು ಸೂಕ್ತವೇ ಎಂದು. ಮಾರನೇ ದಿನ ‘ಸುವರ್ಣ ನ್ಯೂಸ್ ನಲ್ಲಿ ಈ ವರದಿ ಪ್ರಸಾರವಾಯಿತು. ಬೆಂಗಳೂರಿನ ಸ್ಟುಡಿಯೋದಿಂದ ಪೋನೋ ತೆಗೆದುಕೊಂಡರು. ಇಂಥ ನಿರ್ಧಾರ ಏಕೆ ಸೂಕ್ತವಲ್ಲ ಎಂಬುದನ್ನು ವಿವರಿಸಿದೆ.

ಈ ವಿಷಯವನ್ನು ಅಲ್ಲಿಗೆ ಬಿಡಲಿಲ್ಲ. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಎ. ಮುರಿಗೆಪ್ಪ, ಪರಿಚಿತ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಬೈಟ್ ಗಳನ್ನು ತೆಗೆದುಕೊಂಡು ವಿಶೇಷ ವರದಿಗಳನ್ನು ಕಳಿಸತೊಡಗಿದೆ. ಇವರೆಲ್ಲ ಶ್ರೀಕೃಷ್ಣದೇವರಾಯ ಹೆಸರಿಡುವುದಕ್ಕೆ ತಮ್ಮ ತಾತ್ವಿಕ ವಿರೋಧ ವ್ಯಕ್ತಪಡಿಸಿದರು. ಬೆಂಗಳೂರಿನ ಸ್ಟುಡಿಯೋದಿಂದ ಸಹ ನೇರ ಪ್ರಸಾರದ ಸಂದರ್ಭದಲ್ಲಿ ಎಂ.ಎಂ.ಕಲ್ಬುರ್ಗಿ ಮತ್ತು ಕನ್ನಡ ಸಾಹಿತಿಗಳ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಯಿತು. ಇವರು ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ಹೆಸರಿಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಕಲ್ಬುರ್ಗಿ ಅವರು ಏಕೆ ಈ ಹೆಸರು ಇಡಬಾರದು ಎನ್ನುವುದಕ್ಕೆ ಸುದೀರ್ಘ ಕಾರಣಗಳನ್ನು ನೀಡಿದರು. ‘ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಎಂದೆಂದಿಗೂ ಕನ್ನಡಪರ ಇರಲಿಲ್ಲ. ದೇಶಭಾಷೆಗಳಲ್ಲೇ ತೆಲುಗು ಅತ್ಯಂತ ಸುಂದರ ಭಾಷೆ ಎಂದೂ ಹೇಳಿದ್ದಾನೆ ಜೊತೆಗೆ ಈ ಭಾಷೆಯ ಬೆಳವಣಿಗೆಗೆ ಅಪಾರ ಪ್ರೋತ್ಸಾಹ ನೀಡಿದ್ದಾನೆ. ಆತನ ಆಸ್ಥಾನದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ತೆಲುಗು ಕವಿಗಳಿದ್ದರು. ಇಂಥ ರಾಜರಿಂದಲೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಯಿತು’ ಎಂದರು. ಈ ಎಲ್ಲ ಅಭಿಪ್ರಾಯಗಳು ಸರಕಾರದ ಮೇಲೆ ಒತ್ತಡ ತಂದಿದ್ದರಿಂದಾಗಿ ವಿ.ವಿ. ಹೆಸರು ಬದಲಾವಣೆ ಆಗಲಿಲ್ಲ. ಆ ಸಂದರ್ಭದಲ್ಲಿ ಹೊಸಪೇಟೆಗೆ ಬಂದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಅವರು ‘ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀಕೃಷ್ಣದೇವರಾಯ ಹೆಸರಿಡುವ ನಿರ್ಧಾರ ಕೈ ಬಿಡಲಾಗಿದೆ’ ಎಂದರು.

ಹೊಸ ವಿಶ್ವವಿದ್ಯಾಲಯವೇ ಬಂತು:
ಶೈಕ್ಷಣಿಕ ಕೊರತೆಗಳನ್ನು ನಿವಾರಿಸುವ ಸಲುವಾಗಿ ವಿಶ್ವವಿದ್ಯಾಲಯಗಳ ಸ್ಥಾಪನೆಯಾಗುವುದನ್ನು ಕೇಳಿದ್ದೇವೆ. ನೋಡಿದ್ದೇವೆ. ಆದರೆ ಹೆಸರೊಂದರ ಕಾರಣಕ್ಕಾಗಿಯೆ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ ಕೇಳಿದ್ದೀರಾ..! ಇದು ಕೂಡ ನಡೆದುಹೋಯಿತು. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಗೆ ಅನ್ವಯಿಸುವಂತೆ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಲು ಮತ್ತು ಅದಕ್ಕೆ ‘ಶ್ರೀಕೃಷ್ಣದೇವರಾಯ’ ಹೆಸರಿಡಲು ಸಚಿವ ಸಂಪುಟ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಲು ಜನಾರ್ದನ ರೆಡ್ಡಿ ಯಶಸ್ವಿಯಾದರು. ಕೇವಲ ತೊಂಭತ್ತು ಕಿಲೋಮೀಟರ್ ದೂರವಿರುವ ಅನಂತಪುರ ಜಿಲ್ಲೆಯಲ್ಲಿ ಈಗಾಗಲೇ ಶ್ರೀಕೃಷ್ಣದೇವರಾಯ ಹೆಸರಿನ ವಿಶ್ವವಿದ್ಯಾಲಯವಿದೆ. ಹೀಗಿರುವಾಗ ಕರ್ನಾಟಕದಲ್ಲಿ ಇದೇ ಹೆಸರಿನ ವಿಶ್ವವಿದ್ಯಾಲಯದ ಅವಶ್ಯಕತೆ ಏನು. ಅದರ ತಾತ್ವಿಕ ಜರೂರತ್ತೇನು. ಬಳ್ಳಾರಿಯಲ್ಲಿ ಈಗಾಗಲೇ ಕನ್ನಡ ವಿಶ್ವವಿದ್ಯಾಲಯ ಇರುವಾಗ ಮತ್ತೊಂದು ವಿಶ್ವವಿದ್ಯಾಲಯ ಸ್ಥಾಪಿಸಬೇಕೆ… ಇದರಿಂದಾಗುವ ಪ್ರಯೋಜನಗಳೇನು..ಎಂದೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಯೋಚಿಸಲಿಲ್ಲ. ಜನಾರ್ದನ ರೆಡ್ಡಿ ನಿರ್ಧಾರಕ್ಕೆ ಸೊಲ್ಲೆತ್ತುವ ಧೈರ್ಯ ತಮಗಿಲ್ಲವೆಂಬುದನ್ನು ಅವರು ತೋರ್ಪಡಿಸಿದರು.

ಕರ್ನಾಟಕ ಸರಕಾರ ಪ್ರತಿವರ್ಷ ಹಂಪಿಯಲ್ಲಿ ಉತ್ಸವ ನಡೆಸುವ ನಿರ್ಧಾರ ತೆಗೆದುಕೊಳ್ಳಲು ಕಾರಣರಾದವರು ಎಂ.ಪಿ.ಪ್ರಕಾಶ್. ಅವಿಭಜಿತ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ಈ ಸಂಪ್ರದಾಯ ಶುರುವಾಯಿತು. ಕಲೆ-ಸಾಹಿತ್ಯದಲ್ಲಿ ಅಪಾರವಾದ ತಿಳಿವಳಿಕೆ ಹೊಂದಿದ್ದ ಪ್ರಕಾಶ್ ಅವರು ಹಂಪಿ ಉತ್ಸವ ಹೇಗೆ ನಡೆಯಬೇಕೆಂಬುದರ ಯೋಜನೆಯನ್ನು ಖುದ್ದು ರೂಪಿಸಿದವರು. ಆಡಂಬರಕ್ಕೆ ಅವಕಾಶವಿಲ್ಲದೆ ತುಂಬ ಸೊಗಸಾಗಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಈ ಉತ್ಸವದ ಸಾಂಸ್ಕೃತಿಕ ಮೆರುಗು ಕಳೆದು ಹೋಗಿ ಆಡಂಬರವೇ ವಿಜೃಂಭಿಸತೊಡಗಿತು.

ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕೋತ್ಸವ:
ಎಂ.ಪಿ.ಪ್ರಕಾಶ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಹಂಪಿ ಉತ್ಸವದ ಸಂದರ್ಭದಲ್ಲಿ ಗಣ್ಯರ ಮನ ಕಲಕುವ ಸಾವು-ನೋವಿನ ದುರ್ಘಟನೆ ನಡೆದರೆ ಉತ್ಸವ ರದ್ದುಗೊಳಿಸಲು ಆದೇಶಿಸುತ್ತಿದ್ದರು. ಮಾಜಿ ಸಚಿವ ನಜೀರ್ ಸಾಬ್ ಅವರ ಮರಣ, ಹೊಸಪೇಟೆ ತಾಲೂಕು ಪಂಚಾಯತಿ ಅಧ್ಯಕ್ಷರ ಕೊಲೆಯಂಥ ದುರ್ಘಟನೆಗಳ ಸನ್ನಿವೇಶದಲ್ಲಿ ಉತ್ಸವ ರದ್ದಾಗಿದೆ. ಇಂಥ ಸಂದರ್ಭಗಳಲ್ಲಿ ಉತ್ಸವ ಮಾಡಿದರೆ ಅರ್ಥವಿರುವುದಿಲ್ಲ ಎಂಬ ಇರಾದೆ ಅವರದಾಗಿತ್ತು. ಆದರೆ ಇಂಥ ಸಂವೇದನಾಶೀಲತೆ 2009ರಲ್ಲಿ ಕಂಡು ಬರಲಿಲ್ಲ.

ನಾವಿರುವುದು ಪ್ರಜಾ ಪ್ರಭುತ್ವದ ನೆಲೆಯಲ್ಲಿ. ನಿರಂಕುಶ ಪ್ರಭುಗಳ ಆಡಳಿತ ಬೇಡ ಎಂದೇ ಹೋರಾಟ ಮಾಡಿ ಈ ವ್ಯವಸ್ಥೆ ಒಪ್ಪಿಕೊಳ್ಳಲಾಗಿದೆ. ಹೀಗಿರುವಾಗ ಪ್ರಜೆಗಳ ಧ್ವನಿಗೆ ಬೆಲೆಯೆ ಇಲ್ಲದ ರಾಜರ ಪಟ್ಟಾಭಿಷೇಕೋತ್ಸವಗಳನ್ನು ವೈಭವದಿಂದ ಆಚರಿಸುವುದು ಅರ್ಥಹೀನ. ಪ್ರಜಾ ಪ್ರಭುತ್ವಕ್ಕೆ ಮಾಡುವ ಅವಮಾನ. ಇದನ್ನೆಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲ ಯೋಚಿಸಲಿಲ್ಲ. ಇದಕ್ಕೆ ಮತ್ತದೆ ಕಾರಣ ಜನಾರ್ದನ ರೆಡ್ಡಿ. ಇವರ ಮಾತಿನಂತೆ 27 ಕೋಟಿ ರುಪಾಯಿಗಳನ್ನು ಸರಕಾರ ಬಿಡುಗಡೆ ಮಾಡಿತು. 2009ರ ಜನವರಿ 27ರಿಂದ 30ರವರೆಗೆ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕೋತ್ಸವ ಆಯೋಜಿತವಾಯಿತು. 5 ಕೋಟಿ ವೆಚ್ಚದಲ್ಲಿ ಭವ್ಯ ವೇದಿಕೆ ನಿರ್ಮಾಣವಾಯಿತು. ಒಂದು ವೇಳೆ ವಿಜಯನಗರ ಸಾಮ್ರಾಜ್ಯದ ಅರಸರ ಸಂತತಿಯೇ ಇವತ್ತಿದ್ದರೂ ಇಂಥ ಉತ್ಸವ ಮಾಡುತ್ತಿರಲಿಲ್ಲವೇನೋ..!

ಅತ್ತ ರೋದನ-ಇತ್ತ ನಾದನ:
ಜನವರಿ 26, 2011. ಅಂದು ಬೆಳಿಗ್ಗೆ ಬೇಗನೇ ಹಂಪಿ ತಲುಪಿದ್ದೆ. ಬೆಂಗಳೂರು ಕಚೇರಿಯಿಂದ ಓ.ಬಿ.ವ್ಯಾನ್ ಮತ್ತು ಹೆಚ್ಚುವರಿ ಕ್ಯಾಮರಾಮನ್ ಗಳು, ತಂತ್ರಜ್ಞರು. ಆನ್ ಲೈನ್ ಎಡಿಟರ್ ಗಳು ಬಂದಿದ್ದರು. ಇವರಿಗೆ ವಸತಿ ಏರ್ಪಾಡು ಮಾಡಬೇಕಿತ್ತು. ಮುಂದಿನ ಮೂರು ದಿನ ಹಂಪಿಯಲ್ಲಿಯೆ ಇದ್ದು ವರದಿಗಳನ್ನು ಕಳುಹಿಸಬೇಕಿತ್ತು. ಮರುದಿನದಿಂದ ಆರಂಭವಾಗಲಿದ್ದ ಶ್ರೀಕೃಷ್ಣದೇವರಾಯರ ಉತ್ಸವಕ್ಕೆ ಸಂಬಂಧಿಸಿ ಕರ್ಟನ್ ರೈಸರ್ ವರದಿ ಕಳುಯಿಸಿದ್ದೆ. 26ರಂದು ನಡೆಯುತ್ತಿದ್ದ ಸಿದ್ಧತೆಗಳು, ಗಜಪಡೆ ಸ್ವಾಗತ ಮುಂತಾದ ಘಟನೆಗಳ ವರದಿಗಳನ್ನು ಸಿದ್ದಪಡಿಸಿ ಕಳುಯಿಸಲಾಯಿತು. ಬೆಂಗಳೂರು ಕಚೇರಿಯ ಸೂಚನೆ ಮೇರೆಗೆ ಸಚಿವ ಜನಾರ್ದನ ರೆಡ್ಡಿ ಅವರಿಂದಲೇ ಪ್ರಮೋ ಆಂಕರಿಂಗ್ ಮಾಡಿಸಿದೆ. ರೆಡ್ಡಿ ಎಲ್ಲಿಯೂ ತಡವರಿಸದೇ-ತೊದಲದೇ ಅಭಿನವ ಶ್ರೀಕೃಷ್ಣದೇವರಾಯರ ಗತ್ತಿನಲ್ಲಿಯೆ ಪ್ರಮೋಗೆ ನಿರೂಪಣೆ ಮಾಡಿದರು !

ಈ ದೃಶ್ಯಗಳನ್ನು ಕಳುಯಿಸಲಾಯಿತು. ಬೆಳಗ್ಗಿನಿಂದ ತಿರುಗಾಡಿ ಸುಸ್ತಾಗಿತ್ತು. ಆಗಲೇ ರಾತ್ರಿ 7.30ರ ಸಮಯ. ಕಾಫಿ ಕುಡಿಯೋಣವೆನ್ನಿಸಿತು. ಬೆಂಗಳೂರಿನಿಂದ ಬಂದಿದ್ದ ವರದಿಗಾರ ಅರುಣ್ ಅವರ ಜೊತೆ ಕಾಫಿ ಕುಡಿಯಲೆಂದು ಹೊರಟೆ. ಪೋನ್ ರಿಂಗಾಯಿತು. ‘ಬಳ್ಳಾರಿ ಗಾಂಧೀನಗರದಲ್ಲಿ ನಿರ್ಮಾಣ ಮುಕ್ತಾಯ ಹಂತದಲ್ಲಿದ್ದ 7 ಅಂತಸ್ತಿನ ಕಟ್ಟಡ ಕುಸಿದಿದೆ. ಅಪಾರ ಸಾವು-ನೋವು ಸಂಭವಿಸಿದೆ’ ಎಂಬ ಮಾಹಿತಿ. ತಡ ಮಾಡುವಂತಿಲ್ಲ. ಬೆಂಗಳೂರು ಕಚೇರಿಗೆ ಬ್ರೇಕಿಂಗ್ ನ್ಯೂಸ್ ನೀಡಿದೆ. ಟಾಟಾ ಸುಮೋದಲ್ಲಿ ಕ್ಯಾಮರಾಮನ್ ಜೊತೆ ಬಳ್ಳಾರಿಯತ್ತ ಧಾವಿಸಿದೆ. ಏಳೆಂಟು ಕಿಲೋಮೀಟರ್ ದೂರ ಹೋಗುವಷ್ಟರಲ್ಲಿ ಪೋನೋ ಕರೆ. ಸ್ಟುಡಿಯೋದಿಂದ ನೇರ ಪ್ರಸಾರದಲ್ಲಿ ಆಂಕರ್ ಕೇಳಿದ ಪ್ರಶ್ನೆಗಳಿಗೆ ಈಗಾಗಲೇ ಸಂಗ್ರಹಿಸಿದಷ್ಟು ಮಾಹಿತಿ ಕೊಟ್ಟೆ. ದುರ್ಘಟನಾ ಸ್ಥಳ ತಲುಪಿದಾಗ ಕಂಡು ಬಂದ ದೃಶ್ಯಗಳು ಹೃದಯ ವಿದ್ರಾವಕ

ಉತ್ಸವ ನಿಲ್ಲಿಸುವುದಿಲ್ಲ !
ಕಟ್ಟಡದ ಒಳಗೆ ನಲವತ್ತಕ್ಕೂ ಹೆಚ್ಚು ಮಂದಿ ಇದ್ದರು. ಪಕ್ಕದಲ್ಲಿದ ಬಾಲಕರ ವಿದ್ಯಾರ್ಥಿ ನಿಲಯದ ಮೇಲೂ ಕಟ್ಟಡ ಉರುಳಿದ್ದರಿಂದ ಅಲ್ಲಿಯೂ ಸಾವು-ನೋವು ಉಂಟಾಗಿತ್ತು. ಅಪಾರ ಸಾವು-ನೋವು ಉಂಟಾಗಿದೆ ಎಂಬುದು ಖಚಿತವಾಗಿತ್ತು. ಸ್ಥಳಕ್ಕೆ ಬಂದಿದ್ದ ಅಂದಿನ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರ ಬೈಟ್ ತೆಗೆದುಕೊಂಡೆ. ಜೊತೆಗೆ ಕುಸಿತವಾಗಿದ್ದ ಕಟ್ಟಡದ ಅಕ್ಕಪಕ್ಕದ ನಿವಾಸಿಗಳ ಬೈಟ್ ಗಳನ್ನು ತೆಗೆದುಕೊಂಡು ವರದಿ ಕಳುಯಿಸಿದೆ. ಅಂದು ರಾತ್ರಿಯೆ ದುರ್ಘಟನೆ ಬಗ್ಗೆ ಸುವರ್ಣ ನ್ಯೂಸ್ ನಲ್ಲಿ ವಿವರವಾದ ವರದಿ ಪ್ರಕಟವಾಯಿತು. ಮರುದಿನ ಆರಂಭವಾಗಬೇಕಿದ್ದ ಉತ್ಸವದ ಕಥೆಯೇನು ಎಂಬ ಬಗ್ಗೆಯೂ ವರದಿ ನೀಡಲೇಬೇಕಿತ್ತು. ಈ ಬಗ್ಗೆ ಉಸ್ತುವಾರಿ ಸಚಿವರು ನಿರ್ಧರಿಸಿದ್ದು ‘ ಉತ್ಸವ ನಿಲ್ಲಿಸುವುದಿಲ್ಲ’ ಇದು ನನಗೆ ಷಾಕ್ ನೀಡಿತು. ಏಕೆಂದರೆ ಒಳಗಿದ್ದವರು ನಲ್ವತ್ತು ಮಂದಿ. ಇವರಲ್ಲಿ ಹೆಚ್ಚಿನವರು ಬದುಕಿರುವ ಬಗ್ಗೆ ಖಾತ್ರಿಯಿರಲಿಲ್ಲ.

ಹಂಪಿಯಲ್ಲಿದ್ದ ಓ.ಬಿ. ವ್ಯಾನ್ ಕಳುಯಿಸುವಂತೆ ಸಂಪಾದಕರನ್ನು ವಿನಂತಿಸಿಕೊಂಡೆ. ರಾತ್ರಿ 3 ಗಂಟೆ ಸುಮಾರಿಗೆ ವ್ಯಾನ್ ಬಂತು. ಮುಂದಿನ ಹತ್ತು ದಿನಗಳ ಕಾಲ ನಡೆದ ಕಟ್ಟಡ ತೆರವು ಕಾರ್ಯಾಚರಣೆ ಘಟ್ಟದಲ್ಲಿ ನಾನು ಆರು ದಿನ ಅಕ್ಷರಶಃ ನಿದ್ದೆ ಮಾಡಿಲ್ಲ. ತುಂಬ ಸುಸ್ತಾದಾಗ ಕಣ್ಣು ಎಳೆಯುತ್ತಿತ್ತು. ಐದತ್ತು ನಿಮಿಷ ತಂತಾನೆ ಬಲವಂತದಿಂದ ರೆಪ್ಪೆ ಮುಚ್ಚಿರುವಾಗಲೇ ಮೊಬೈಲ್ ರಿಂಗಾಗುತ್ತಿತ್ತು.

27ರ ಬೆಳಿಗ್ಗೆಯಿಂದಲೇ ಶವಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಆರಂಭವಾಯಿತು. ಅಗ್ನಿಶಾಮಕ ದಳ-ಬಳ್ಳಾರಿ ಪೊಲೀಸ್ ಪಡೆ-ಪೂನಾದಿಂದ ಬಂದಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸದಸ್ಯರೆಲ್ಲ ಭಾರಿ ಶ್ರಮ ವಹಿಸಿ ಕಾರ್ಯಾಚರಣೆ ಮಾಡಿದರು. ನಾಲ್ಕು ಅಂತಸ್ತು ನೆಲಕಚ್ಚಿ ಇನ್ನುಳಿದ ಮೂರು ಅಂತಸ್ತುಗಳು ದುರ್ಬಲವಾಗಿ ನಿಂತಿದ್ದವು. ಇವುಗಳ ಗೋಡೆಗಳೆಲ್ಲ ಸಂಪೂರ್ಣ ಬಿರುಕು ಬಿಟ್ಟಿದ್ದವು. ಹಲವೆಡೆ ಇವುಗಳು ಜೋತಾಡುತ್ತಿದ್ದವು. ಇಂಥ ಸ್ಥಿತಿಯಲ್ಲಿ ಕಾರ್ಯಾಚರಣೆ ಮಾಡುವವರು ಆಪತ್ತಿನ ಅಂಚಿನಲ್ಲಿಯೇ ಇದ್ದರು. ಅಲ್ಲಿಂದ ವರದಿ ಮಾಡುತ್ತಿದ್ದ ಪತ್ರಕರ್ತರ ಸ್ಥಿತಿಯೂ ಇದೇ ಆಗಿತ್ತು..! ಹೊರ ಬರುತ್ತಿದ್ದ ಶವಗಳ ಗುರುತು ಪತ್ತೆ ಹಚ್ಚಿದೊಡನೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುತ್ತಿತ್ತು. ಆದರೆ ಕೇವಲ 70 ಕಿಲೋಮೀಟರ್ ದೂರದಲ್ಲಿ ನೃತ್ಯ-ಸಂಗೀತ-ಉತ್ಸವದ ನಾದ ಮೊಳಗುತ್ತಿತ್ತು…!

ಇಷ್ಟೆಲ್ಲ ವಿಚಾರ ಏಕೆ ಹೇಳಿದನೆಂದರೆ ಇಂಥ ದುರಂತದ ಸಂದರ್ಭದಲ್ಲಿ ಮತ್ಯಾರೆ ಉಸ್ತುವಾರಿ ಸಚಿವರಾಗಿದ್ದರೂ ಉತ್ಸವ ರದ್ದುಗೊಳಿಸುತ್ತಿದ್ದರು. ಕಣ್ಣಮುಂದೆ ಕಟ್ಟುವ ಹೃದಯ ವಿದ್ರಾವಕ, ದಾರುಣ ದುರ್ಘಟನೆ ಇರುವಾಗ ಉತ್ಸವದ ಸೊಬಗಿಗೆ ಅರ್ಥವಿದೆಯೇ.. ಈ ಪ್ರಶ್ನೆಯನ್ನು ಜನಾರ್ದನ ರೆಡ್ಡಿ ಹಾಕಿಕೊಳ್ಳಲಿಲ್ಲ. ಇದಕ್ಕೆ ಉದಾಹರಣೆ ‘ಮೂರು ದಿನ ಅದ್ದೂರಿಯಿಂದ ನಡೆದ ಶ್ರೀಕೃಷ್ಣದೇವರಾಯರ 500ನೇ ವರ್ಷದ ಪಟ್ಟಾಭಿಷೇಕೋತ್ಸವ’ ! ಈ ಸಂದರ್ಭದಲ್ಲಿ ಅಭಿನವ ಶ್ರೀಕೃಷ್ಣದೇವರಾಯರು ಅಲ್ಲಿಯೆ ಇದ್ದು ಉತ್ಸವ ಕಣ್ತುಂಬಿಕೊಂಡರು !

Exit mobile version